ನಮ್ಮ ಕಥೆ/ ನಾವೂ ಚರಿತ್ರೆಯನ್ನು ಸೃಷ್ಟಿಸಿದ್ದೇವೆ – ಡಾ. ಎನ್‌.ಗಾಯತ್ರಿ

ಊರ್ಮಿಳಾ ಪವಾರ್ ಹಾಗೂ ಮೀನಾಕ್ಷಿ ಮೂನ್ ಅವರಿಬ್ಬರೂ ಜೊತೆಯಾಗಿ ಸಂಪಾದಿಸಿರುವ ಜುಬಾನ್ ಪ್ರಕಾಶನದ “ವೀ ಆಲ್ಸೋ ಮೇಡ್ ಹಿಸ್ಟರಿ” ಕೃತಿಯು 44 ಕ್ರಿಯಾಶೀಲ ದಲಿತ ಮಹಿಳೆಯರ ಬದುಕಿನ ಸಂಕಥನಗಳನ್ನು ತೆರೆದಿಡುತ್ತದೆ. ಈ ಕೃತಿಯಲ್ಲಿ ಅನಾವರಣಗೊಳ್ಳುವ ದಲಿತ ಮಹಿಳೆಯರ ವೈವಿಧ್ಯಮಯ ಬದುಕು ಡಾ|| ಅಂಬೇಡ್ಕರ್ ಅವರ ವಿಚಾರಗಳು ಮತ್ತು ಚಳುವಳಿಯು ದಲಿತ ಮಹಿಳೆಯರ ಬದುಕನ್ನು ಪ್ರಭಾವಿಸಿರುವ ವಿಶಾಲ ಕ್ಯಾನ್‍ವಾಸನ್ನು ನಮ್ಮ ಮುಂದೆ ತೆರೆದಿಡುತ್ತದೆ. ದಲಿತ ಮಹಿಳೆಯರ ಚರಿತ್ರೆಯನ್ನು ಸಮಗ್ರವಾಗಿ ಕಟ್ಟಿಕೊಡುವ ಈ ಪ್ರಾಮಾಣಿಕ ಪ್ರಯತ್ನ ಭಾರತದ ಮಹಿಳಾ ಚಳುವಳಿಯ ವ್ಯಾಪ್ತಿಯನ್ನು ಹಿಗ್ಗಿಸಿದೆ ಮತ್ತು ಅರ್ಥಪೂರ್ಣ ದಾಖಲೆಯಾಗಿ ಮಹಿಳಾ ಚರಿತ್ರೆಗೆ ಮೌಲಿಕತೆಯನ್ನು ತಂದು ಕೊಟ್ಟಿದೆ. ವಂದನಾ ಸೋನಾಲ್ಕರ್ ಇದನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. 

ಡಾ| ಅಂಬೇಡ್ಕರ್ ಚಳುವಳಿಯಲ್ಲಿ ಮೊದಲಬಾರಿಗೆ ಭಾಗವಹಿಸಿದ ಸುಮಾರು ನಲವತ್ತನಾಲ್ಕು ಮಹಿಳೆಯರ ಆತ್ಮ ನಿವೇದನೆಯ ಕಥೆ ಈ ಪುಸ್ತಕದಲ್ಲಿ ದಾಖಲಾಗಿದೆ. ೧೯೮೯ರಲ್ಲಿ ಮರಾಠಿಯಲ್ಲಿ ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ ಅವರು ಚಳುವಳಿಯಲ್ಲಿದ್ದ ಮಹಿಳೆಯರನ್ನು ಮಾತನಾಡಿಸಿ ಬರೆದ ದಲಿತ ಮಹಿಳಾ ಸಂಕಥನವಿದು. ಇಪ್ಪತ್ತನೆಯ ಶತಮಾನದ ಆರಂಭದ ವರ್ಷಗಳಲ್ಲಿ ದಲಿತ ಚಳುವಳಿಯ ಹಲವಾರು ಹೋರಾಟಗಳಲ್ಲಿ ಭಾಗಿಯಾದ ಹೋರಾಟದ ಮಹಿಳೆಯರ ಕಥೆಗಳು ಇಲ್ಲಿ ದೊರೆಯುತ್ತವೆ.
೧೯೨೦ರಲ್ಲಿ ವಿದೇಶದಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿ ತಾಯ್ನಾಡಿಗೆ ಹಿಂತಿರುಗಿದ ಮೇಲೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಸಮುದಾಯದ ಸೋದರ ಸೋದರಿಯರ ವಿಮೋಚನೆಗೆ ದುಡಿಯುವ ಸಂಕಲ್ಪ ತೊಟ್ಟರು,. ಕೊಂಕಣ ಪ್ರಾಂತ್ಯದ ಥಾಣೆ, ರತ್ನಗಿರಿ, ಕೊಲಾಬಾ ಪ್ರಾಂತ್ಯಗಳಿಂದ ಬಂದ ಅಸ್ಪೃಶ್ಯರು ಮುಂಬೈಯ ಕಾಮಾಟಿಪುರ, ದಗದ್ ಚಾಳ್ ಮುಂತಾದೆಡೆಗಳಲ್ಲಿ ವಾಸವಾಗಿದ್ದರು. ಅಲ್ಲಿ ಮುಸಲ್ಮಾನ ಮತ್ತು ಇಂಗ್ಲಿಷ್ ಶ್ರೀಮಂತರ ಬಳಿ ಚಾಲಕರಾಗಿ, ಬಟ್ಲರ್ ಆಗಿ, ಮೆಕ್ಯಾನಿಕ್ ಗಳಾಗಿ ಮತ್ತು ನಾಯಿ ಕಾಯುವ ಕೆಲಸದಲ್ಲಿ ನಿರತರಾಗಿದ್ದರು. ಈ ಜನರ ನಡುವೆ ಮೊದಲಿಗೆ ಬಾಬಾ ಸಾಹೇಬ್ ತಮ್ಮ ಕೆಲಸ ಆರಂಭಿಸಿದರು. ಇವರ ಹಕ್ಕುಗಳ ಬಗ್ಗೆ ಅವರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಲ್ಲದೆ ಅವರಿಗೊಂದು ಅಸ್ಮಿತೆಯನ್ನು ತಂದುಕೊಟ್ಟರು. ಅಮರಾವತಿ, ಪುಣೆ, ಮಹಾಡ್, ನಾಸಿಕ್ ಮುಂತಾದೆಡೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸತ್ಯಾಗ್ರಹವನ್ನು ಸಂಘಟಿಸಿದರು. ಈ ಹೋರಾಟಗಳಲ್ಲಿ ಅಸ್ಪೃಶ್ಯ ಮಹಿಳೆಯರು ಸ್ವಯಂ ಪ್ರೇರಿತರಾಗಿ ಭಾಗವಹಿಸಿದರು.

ಸವರ್ಣೀಯ ಮಹಿಳೆಯರಾದ ಶ್ರೀಮತಿ ಸಹಸ್ರಬುದ್ಧೆ ಮತ್ತು ಶ್ರೀಮತಿ ಟಿಪ್ನಿಸ್ ರವರು ಜಾತಿಯ ಎಲ್ಲಾ ನಿಯಮಗಳನ್ನು ಬದಿಗಿಟ್ಟು ತಮಗೆ ಸಾಧ್ಯವಾದಷ್ಟು ಅಸ್ಪೃಶ್ಯ ಮಹಿಳೆಯರೊಡನೆ ಕೂಡಿ ಕೆಲಸ ಮಾಡುತ್ತಿದ್ದರು. ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ ಈ ಸವರ್ಣೀಯ ಮಹಿಳೆಯರು ದಲಿತ ಮಹಿಳೆಯರಿಗೆ ಬ್ರಾಹ್ಮಣ ಮಹಿಳೆಯರುಡುವಂತೆ ಸೀರೆ ಉಡುವುದರ ತರಬೇತಿ ಕೊಡುತ್ತಿದ್ದರು. ಹೆಣ್ಣು ಮಕ್ಕಳನ್ನು ದೇವರ ಸೇವೆಗೆಂದು ಬಿಡುವ ಪದ್ಧತಿಯ ವಿರುದ್ಧ ೧೯೦೮ರಲ್ಲೇ ಹೋರಾಟವು ಎಸ್.ಜೆ.ಕಾಂಬ್ಳೆಯವರ ನೇತ್ರುತ್ವದಲ್ಲಿ ನಡೆದಿತ್ತು. ಇದನ್ನು ಕುರಿತು ಮಹಿಳೆಯರ ಭಾಷಣಗಳಲ್ಲಿ ಕೇಳುತ್ತೇವೆ. ಹತ್ತೊಂಭತ್ತನೇ ಶತಮಾನದಲ್ಲಿ ಮಹಾತ್ಮ ಫುಲೆಯವರ ನೇತೃತ್ವದ ಸತ್ಯಶೋಧಕ ಸಮಾಜದ ಹೋರಾಟದ ಪ್ರಭಾವದಿಂದ ಮಹಿಳೆಯರು ಕಡಿಮೆ ಖರ್ಚಿನ ವಿವಾಹವನ್ನು ಬೆಂಬಲಿಸುತ್ತಿದ್ದರು. ಬಾಲ್ಯ ವಿವಾಹ ಮತ್ತು ಅಂತರ್ಜಾತೀಯ ವಿವಾಹಕ್ಕೆ ಬೆಂಬಲ ಇವೆಲ್ಲವನ್ನು ಮಹಿಳೆಯರು ಒಪ್ಪಿಕೊಂಡಿದ್ದರು.

ಬಾಬಾ ಸಾಹೇಬ್ ೧೯೩೫ರಲ್ಲಿ ಬಾಬಾ ಸಾಹೇಬರು ತಮ್ಮ ಧರ್ಮವನ್ನು ಬದಲಿಸುತ್ತೇನೆಂದಾಗ ಹಲವಾರು ಮಂದಿ ಮಹಿಳೆಯರು ಅವರನ್ನು ಬೆಂಬಲಿಸಿದರು. “ನಮಗೆ ಅವಕುಂಠನವನ್ನು ವಿಧಿಸುವಂತಹ ಧರ್ಮ ಬೇಡ” ಎಂದು ಅವರಿಗೆ ತಿಳಿಸಿದರು. ಅಂಬೇಡ್ಕರ್ ಪೂರ್ವ ಕಾಲದಲ್ಲಿ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದಿದ್ದ ಈ ಮಹಿಳೆಯರು ಈಗ ಅವರ ಮಾತುಗಳಿಂದ ಎಚ್ಚೆತ್ತರು. ಅವರೂ ಮಹಿಳೆಯರ ಸಭೆಗಳನ್ನು ಸಂಘಟಿಸುವುದರಲ್ಲಿ ಉತ್ಸಾಹದಿಂದ ತೊಡಗಿಕೊಂಡರು. ಸಮಾವೇಶಗಳನ್ನು ಏರ್ಪಡಿಸಿದರು. ಮಹಿಳಾ ಶಿಕ್ಷಣ, ಮಕ್ಕಳ ಆರೈಕೆ, ಸ್ತ್ರೀ-ಪುರುಷ ಸಮಾನತೆ ಮತ್ತು ಆತ್ಮರಕ್ಷಣೆಯನ್ನು ಕುರಿತು ತಿಳಿಸಲು ಸಭೆಗಳನ್ನು ಏರ್ಪಡಿಸಿದರು.

೧೯೪೨ರಲ್ಲಿ ನಾಗಪುರದಲ್ಲಿ ನಡೆದ ಫೆಡರೇಷನ್ನಿನ ಸಮಾವೇಶದಲ್ಲಿ ಮಹಿಳೆಯರು ತಮ್ಮ ರಾಜಕೀಯ ಹಕ್ಕುಗಳ ಬಗ್ಗೆ ಜಾಗೃತರಾದರು. “ನಾವು ಮನೆಗಳನ್ನು ಬಿಟ್ಟು ಹೋರಾಟಕ್ಕೆ ಇಳಿದದ್ದು ಹಿಂತಿರುಗಿ ನೋಡುವುದಕ್ಕಲ್ಲ, ಬದಲಿಗೆ ಜಯಗಳಿಸುವವರಿಗೆ ಹೋರಾಟ ನಿಲ್ಲಿಸದಿರಲೆಂದು”. ಶುಭ್ರವಾದ ಸೀರೆಯುಟ್ಟು ಮಹಿಳೆಯರು ಸಮತಾ ಸೈನಿಕ್ ದಳ ಸೇರಿ ಧೈರ್ಯದಿಂದ ಮುನ್ನುಗ್ಗಿದರು. ಮೆರವಣಿಗೆ ನಡೆಸಿದರು; ಸಂಘಗಳನ್ನು ಕಟ್ಟಿದರು. ಎಲ್ಲಾ ವೇದಿಕೆಗಳಲ್ಲೂ ಇವರ ಭಾಷಣಗಳು ಮೊಳಗಿದವು. ೧೯೫೬ರ ಧರ್ಮಾಂತರ ಚಳುವಳಿಯಲ್ಲೂ ಈ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

’ಬಹಿಷ್ಕೃತ ಭಾರತ’,”ಜನತಾ’,”ಪ್ರಭುದ್ಧ ಭಾರತ’,”ಜೈ ಭೀಮ್’ ಮುಂತಾದ ಪತ್ರಿಕೆಗಳ ಪುಟ ಪುಟಗಳಲ್ಲೂ ದಲಿತ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ ವಿಫುಲವಾದ ಪುರಾವೆಗಳಿವೆ. ಅವರೆಲ್ಲ ದಲಿತ ಚಳುವಳಿಯ ಇತಿಹಾಸದಲ್ಲಿ “ನಾವೂ ಇದ್ದೇವೆ” ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರೆಲ್ಲ ಜಾತೀಯತೆ, ಅವಮಾನ , ಮೂದಲಿಕೆಗಳಿಂದ ಜರ್ಜರಿತರಾದವರು. ಇವರಲ್ಲಿ ಹಸಿವಿನಿಂದ ಕಂಗೆಟ್ಟವರು ಇರುವಂತೆಯೇ ತಕ್ಕಮಟ್ಟಿಗೆ ಆರ್ಥಿಕವಾಗಿ ಸಬಲರಾದವರೂ ಇದ್ದಾರೆ. ವಿದ್ಯಾವಂತರು ಇರುವಂತೆ ವಿದ್ಯೆಯಿಲ್ಲದವರೂ ಇದ್ದಾರೆ. ವಿಧರ್ಭ ಪ್ರಾಂತ್ಯದ ಮಹಿಳೆಯರಿಗೆ ಸ್ವಲ್ಪ ವಿದ್ಯೆ, ಭೂಮಿ, ಕೃಷಿ ಇರುವುದು ಕಂಡು ಬಂದರೆ, ಮತ್ತೆ ಕೆಲವರಿಗೆ ಅದರಲ್ಲೂ ಕೊಂಕಣ ಪ್ರಾಂತ್ಯದ ಮಹಿಳೆಯರು ದಿನದ ತುತ್ತಿಗೂ ಹೋರಾಡಬೇಕಿತ್ತು. ಅಂಬೇಡ್ಕರ್ ಅವರ ಚಳುವಳಿಯು ವಿದರ್ಭ ಮತ್ತು ಕೊಂಕಣ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅತ್ಯಂತ ಹೆಚ್ಚಿನ ಸಂಖ್ಯೆಯ ಹೋರಾಟಗಾರರನ್ನು ನಾವು ವಿದರ್ಭ ಪ್ರಾಂತ್ಯದಲ್ಲಿ ನೋಡಬಹುದಾಗಿದೆ. ಇದರಲ್ಲಿ ಅರ್ಧದಷ್ಟಾದರೂ ಮಹಿಳೆಯರು ಶಾಲಾ ಶಿಕ್ಷಣ (ಏಳನೆಯ ತರಗತಿ)ವನ್ನು ಮುಗಿಸಿದವರು. ಕೆಲವರು ಶಿಕ್ಷಕಿಯಾಗಿ ಕೆಲಸ ಮಾಡಿದವರು. ಸ್ವತಃ ಶಾಲೆಗಳನ್ನು ತೆರೆದವರು.

ಗಂಡಸರಂತೆ ಕೆಲವು ಮಹಿಳೆಯರು ದೈಹಿಕ ಸಧೃಡತೆಯ ತಯ್ಯಾರಿ ನಡೆಸಿಕೊಂಡವರೂ ಇದ್ದರು. ಜಿಮ್ನಾಷಿಯಂಗೆ ಹೋಗಿ ಸತತವಾಗಿ ವ್ಯಾಯಾಮ ಮಾಡುವವರಿದ್ದರು. ಕೋಲುವರಸೆ, ಕತ್ತಿವರಸೆ, ಮಲ್ಲಯುದ್ಧದಲ್ಲಿ ಪರಿಣಿತರಿದ್ದರು. ಇವರಲ್ಲಿ ಪ್ರಭಾವತಿ ರಾಮ್ ಟೆಕ್ ಳನ್ನು ಮರೆಯುವಂತಿಲ್ಲ. ೧೯೩೫ರಲ್ಲಿ ನಾಗಪುರದ ಸೇವಾಸದನದಲ್ಲಿ ಶಿಕ್ಷಕಿಯಾಗಿದ್ದ ಇವಳು ಹಗಲು ರಾತ್ರಿಯೆನ್ನದೆ ಧೈರ್ಯವಾಗಿ ಓಡಾಡುತ್ತಿದ್ದಳು. ಅವಳ ತಂಗಿಯನ್ನು ಒಬ್ಬ ದೈಹಿಕವಾಗಿ ಹಿಂಸಿಸಲು ಬಂದ ಪುಂಡನೊಬ್ಬನಿಗೆ ಚೆನ್ನಾಗಿ ಚಚ್ಚಿಹಾಕಿದ್ದಳು. ೧೯೪೬ರಲ್ಲಿ ಪೂನಾ ಒಪ್ಪಂದದ ಕಾರಣದಿಂದ ನಾಗಪುರದಲ್ಲಿ ದೊಂಬಿಯಾಗಿದ್ದ ದಿಟ್ಟತನದಿಂದ ಸಭೆಗಳನ್ನು ಸಂಘಟಿಸುತ್ತಾ, ಜನರ ನಡುವೆ ಕೆಲಸ ಮಾಡುವಾಗ ಸದಾ ಸೀರೆಯಲ್ಲಿ ಕತ್ತಿಯೊಂದನ್ನು ಬಚ್ಚಿಟ್ಟುಕೊಂಡು ಮೆಣಸಿನಪುಡಿಯನ್ನು ಜೊತೆಗಿಟ್ಟುಕೊಂಡಿರುತ್ತಿದ್ದಳು.

ಹೋರಾಟದಲ್ಲಿದ್ದ ಬಹಳಷ್ಟು ಮಹಿಳೆಯರು ಕಾರ್ಯಕರ್ತರ ಕುಟುಂಬಗಳಿಂದ ಬಂದವರಾಗಿದ್ದರು. ಚಳುವಳಿಯಲ್ಲಿದ್ದ ತಂದೆ-ತಾಯಿ ಜೊತೆ ಬೆಳೆದವರು ಕೆಲವರಾದರೆ, ಮತ್ತೆ ಕೆಲವರು ಮದುವೆಯಾಗಿ ಚಳುವಳಿಗಾರರ ಮನೆಗೆ ಸೊಸೆಯಾಗಿ ಹೋದ ನಂತರ ಉತ್ಸಾಹದಿಂದ ಚಳುವಳಿಯಲ್ಲಿ ಭಾಗವಹಿಸಿದವರು. ಚಳುವಳಿಗಾರರ ನೆರೆಹೊರೆಯವರಾಗಿ ಉತ್ತೇಜನಗೊಂಡವರು ಕೆಲವರು. ಬಾಬಾ ಸಾಹೇಬರ ಭಾಷಣಗಳು ಮತ್ತು ಚಿಂತನೆಗಳು ಈ ಮಹಿಳೆಯರ ಮೇಲೆ ಬೀರಿದ ಪ್ರಭಾವ ಬೀರಿದ ಪರಿಣಾಮ ಅಪಾರ. ಬಾಬಾ ಹೇಳಿದ “ ಶಿಕ್ಷಣ, ಸಂಘಟನೆ ಮತ್ತು ಹೋರಾಟ” ಎಂಬ ಧ್ಯೇಯವಾಕ್ಯವನ್ನು ಚಾಚೂ ತಪ್ಪದೆ ಅನುಸರಿಸಿದ ಕೆಲವರು ಶಿಕ್ಷಣ ಮುಂದುವರೆಸಿದರು, ಶಿಕ್ಷಕಿಯರಾದರು ಮತ್ತು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಅವರ ಸೋದರಿಯರಿಗೆ ಶಿಕ್ಷಣವನ್ನು ಧಾರೆಯೆರೆದರು. ಕೆಲವರು ಜೈಲಿಗೂ ಹೋದರು. ಪತ್ರಿಕೆಗಳನ್ನು ಹಣಕಾಸಿಲ್ಲದೆ ನಡೆಸಲು ಕಷ್ಟವಾದಾಗ ಈ ಮಹಿಳೆಯರು ತಮ್ಮ ಅತ್ಯಲ್ಪ ಕೂಲಿಯ ಹಣದಲ್ಲೇ ತಂಬಾಕು, ವೀಳ್ಯೆದೆಲೆಯ ಖರ್ಚನ್ನು ಮಿಗಿಸಿ ಹಣವನ್ನು ಕೊಟ್ಟರು. ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜು ಮತ್ತು ಹಾಸ್ಟೆಲ್ ಗಳನ್ನು ತೆರೆಯಲು ತಮ್ಮ ಅಲ್ಪಗಳಿಕೆಯ ಹಣದಲ್ಲೇ ಮಿಗಿಸಿ ಹಣವನ್ನು ಕೊಡುತ್ತಿದ್ದರು. ಮದುವೆ ಮನೆ ಮತ್ತು ಅದ್ಧೂರಿಯ ಸಮಾರಂಭಗಳಿಗೆ ಹೋಗಿ ಅಲ್ಲಿ ವಂತಿಗೆಯನ್ನು ಸಂಗ್ರಹಿಸುತ್ತಿದ್ದರು.

ಜನತಾ ಮತ್ತು ಪ್ರಭುದ್ಧ ಭಾರತ ಪತ್ರಿಕೆಯಲ್ಲಿ ಈ ಮಹಿಳೆಯರು ಕಥೆ, ಕವನಗಳನ್ನು ಮತ್ತು ಲೇಖನಗಳನ್ನು ಬರೆದು ತಮ್ಮ ಸಾಮಾಜಿಕ ಪ್ರಜ್ಞೆಯ ಬೆಳವಣಿಗೆಯನ್ನು ಮತ್ತು ಸೌಂದರ್ಯಾಭಿರುಚಿಯನ್ನು ಅಭಿವ್ಯಕ್ತಿಸಿದರು. ಕೆಲವರು ಹಾಡುಗಳನ್ನು ಬರೆದರು. ಅದನ್ನು ಸಮಾರಂಭಗಳಲ್ಲಿ ಹಾಡಿದರು.

೧೯೫೬ರಲ್ಲಿ ಸುಮಾರು ಐದರಿಂದ ಆರು ಮಹಿಳೆಯರು ಅಂಬೇಡ್ಕರ್ ಚಿಂತನೆಯನ್ನು ಪ್ರಸಾರ ಮಾಡಲೆಂದೇ ಶಾಲೆಗಳನ್ನು, ಹಾಸ್ಟೆಲ್ ಗಳನ್ನು ಮತ್ತು ಹುಡುಗಿಯರಿಗಾಗಿ ಅನಾಥಾಲಯಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರ್ಯವನ್ನು ಕೈಗೊಂಡರು. ಜಾನೋಜಿ ಖಂಡ್ರೆ ಅಕೋಲಾದಲ್ಲಿ ಆರಂಭಿಸಿದ್ದ ಹಾಸ್ಟೆಲ್ಲನ್ನು ಅವನ ಮೊಮ್ಮಗಳು ಕಲಾವತಿ ಖಂಡ್ರೆ ಈಗಲೂ ನಡೆಸಿಕೊಂಡು ಬರುತ್ತಿದ್ದಾಳೆ. ತಾರಾ ಬಾಯಿ ಮೇಷ್ರಾಮ್ ನಾಗಪುರದಲ್ಲಿ ಹುಡುಗಿಯರ ಶಾಲೆಯನ್ನು ಈಗಲೂ ನಡೆಸುತ್ತಿದ್ದಾಳೆ. ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಶಾಸಕರಾಗಿದ್ದ ಆರ್.ಎಸ್.ಗವಾಯಿಯವರ ಪತ್ನಿ ಕಮಲಾ ತಾಯಿ ಗವಾಯಿ ಭೂಹೀನರ ಸತ್ಯಾಗ್ರದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದರು. ಅವಳು ’ರಿಪಬ್ಲಿಕನ್ ಸಂದೇಶ್’ ಎಂಬ ಪತ್ರಿಕೆಯನ್ನು ಆರಂಭಿಸಿದ್ದಳು. ಯಾವತ್ಮಲ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ವತ್ಸಲಾ ಬಾನ್ಸೋದೆ ಅನಾಥ ಮತ್ತು ಕಳೆದು ಹೋದ ಮಕ್ಕಳಿಗಾಗಿ ಅನಾಥಾಲಯವನ್ನು ನಡೆಸುತ್ತಿದ್ದಳು. ಆದರ್ಶ ಶಿಕ್ಷಕಿಯಾದ ಅವಳು ಸಭೆ, ಮೆರವಣಿಗೆಗಳನ್ನು ಸಂಘಟಿಸುವುದರಲ್ಲೂ ನುರಿತವಳು. ಅವಳ ಮಕ್ಕಳೂ ಕೂಡ ಅಂಬೇಡ್ಕರ್ ಚಳುವಳಿಗೆ ಹಲವಾರು ರೀತಿಯಲ್ಲಿ ದುಡಿಯುತ್ತಿದ್ದಾರೆ. ಚಳುವಳಿಯಲ್ಲಿ ಭಾಗವಹಿಸುವುದಕ್ಕೆಂದೇ ಕೆಲವು ಮಹಿಳೆಯರು ಗರ್ಭಧರಿಸದಿರಲು ಗರ್ಭನಿವಾರಕ ಮಾತ್ರೆಗಳನ್ನು ಬಳಸುತ್ತಿದ್ದರು. ಕಂಕಳಲ್ಲಿ , ಬೆನ್ನ ಹಿಂದೆ ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡೇ ಜೈಲಿಗೆ ಹೋದವರಿದ್ದಾರೆ. ಮನೆಗೆಲಸ ಮತ್ತು ಸಾರ್ವಜನಿಕ ಸೇವೆ ಎರಡನ್ನೂ ಒಟ್ಟುಒಟ್ಟಾಗಿ ನಿಭಾಯಿಸಿದ್ದಕ್ಕೆ ಕೆಲವರಿಗೆ ಪ್ರಶಂಸೆ ಸಿಕ್ಕಿದರೆ, ಮತ್ತೆ ಕೆಲವರಿಗೆ ಬೈಗಳು ಮತ್ತು ಏಟುಗಳೂ ದೊರಕಿದವು. ಇವರಲ್ಲಿ ಬಹುಪಾಲು ಮಂದಿ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಮನೆಗೆಲಸ ಮತ್ತು ಮಕ್ಕಳ ಪಾಲನೆ ಮಾಡಿದ ನಂತರವೇ ಇವರಿಗೆ ಹೊರಗೆ ಕಾಲಿಡಲು ಸಾಧ್ಯವಾಗಿದ್ದು.

ಅಂಬೇಡ್ಕರ್ ನೇತೃತ್ವದ ಎಲ್ಲ ಸತ್ಯಾಗ್ರಹ ಮತ್ತು ಚಳುವಳಿಗಳಲ್ಲಿ ದಲಿತ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದುದು ದಲಿತ ಚಳುವಳಿಗೆ ಒಂದು ಹೊಸ ಆಯಾಮ ಮತ್ತು ರೂಪ ಕೊಟ್ಟಿತಲ್ಲದೆ ಅದು ದಲಿತರಿಗೆ ಹೆಮ್ಮೆಯ ಸಂಗತಿಯಾಗಿತ್ತು. ಹೆಣ್ಣನ್ನು ಸಮಾಜದ ಪ್ರಮುಖ ಘಟಕವಾಗಿ ಪರಿಗಣಿಸಿದ ಅಂಬೇಡ್ಕರ್‍ರವರ ವಿಚಾರಗಳಿಂದ ಪ್ರಭಾವಿತರಾದ ದಲಿತ ಮಹಿಳೆಯರು ತಮ್ಮ ಆಚಾರ-ವಿಚಾರಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತಂದುಕೊಂಡುದಲ್ಲದೆ, ಅದನ್ನು ಸಮಾಜದ ಇತರ ಮಹಿಳೆಯರಿಗೂ ತಲುಪಿಸುವಲ್ಲಿ ಸಂಘಟನಾತ್ಮಕವಾಗಿ ದುಡಿದರು. ತಂದೆತಾಯಿಯರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡಬೇಕು, ಎಂಬ ಬಾಬಾ ಸಾಹೇಬರ ವಿಚಾರಗಳನ್ನು ತತ್ವಶಃ ಪಾಲಿಸಿದ್ದಲ್ಲದೆ, ಹಲವಾರು ಮಹಿಳೆಯರು ಶಾಲೆಗಳನ್ನು ತೆರೆದರು ಮತ್ತು ಸ್ವತಃ ಶಿಕ್ಷಕಿಯರಾಗಿ ತಮ್ಮ ವೃತ್ತಿಗೆ ಸಾಮಾಜಿಕ ಬದ್ಧತೆಯ ಕವಚ ತೊಡಿಸಿದರು.

ಅವರು ಸಂಸತ್ತಿನಲ್ಲಿ ಲಿಂಗ ಬೇಧವಿಲ್ಲದ ಭಾರತದ ಸಂವಿಧಾನವನ್ನು ಮಂಡಿಸುವುದರ ಜೊತೆಗೆ ಹೆಣ್ಣಿನ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಅನುವಾಗುವ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡರು. ಅಂಬೇಡ್ಕರ್ ಅವರ ನೇತೃತ್ವದ ಹಲವಾರು ಚಳುವಳಿಗಳಲ್ಲಿ ಮಹಿಳೆಯರು ತುಂಬು ಉತ್ಸಾಹದಿಂದ ಪಾಲ್ಗೊಂಡರಲ್ಲದೆ, ಅವರು ಮಾಡುತ್ತಿದ್ದ ಭಾಷಣಗಳನ್ನು ಕಿವಿಗೊಟ್ಟು ಕೇಳಿ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ಅಸ್ಪೃಶ್ಯರು ಸತ್ತ ದನಗಳ ಮಾಂಸವನ್ನು ತಿನ್ನಬಾರದು. ದಲಿತರಲ್ಲಿ ಶಿಕ್ಷಣದ ಜೊತೆಗೆ ಸ್ವಜ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕೆಂದು ದಲಿತ ಮಹಿಳೆಯರಿಗೆ ಕಿವಿ ಮಾತು ಹೇಳುತ್ತಿದ್ದರು. ದಲಿತ ಮಹಿಳೆಯರು ಸುಶಿಕ್ಷಿತರಾದರೆ ಪುರುಷರಲ್ಲಿ ಇರುವ ಕುಡುಕತನ ಹಾಗೂ ಜೂಜಾಟವನ್ನು ಕೊನೆಗಾಣಿಸಲು ಅನುಕೂಲವಾಗುತ್ತದೆ, ಎಂದೂ ಹೇಳುತ್ತಿದ್ದರು. ಅಂಬೇಡ್ಕರ್ ಚಳುವಳಿಗಳಿಂದ ಪ್ರೇರಿತರಾದ ದಲಿತ ಮಹಿಳೆಯರು ‘ಜಯ ಭೀಮ್’ ಎಂಬ ಘೋಷಣೆಯೊಂದಿಗೆ ಹಳ್ಳಿಗಳಲ್ಲಿ ಸಮಾಜ ಸುಧಾರಣಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು.

ದಲಿತ ಮಹಿಳೆಯರ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ದಲಿತ ಮಹಿಳಾ ಪರಿಷತ್ತು ಪ್ರಮುಖ ಪಾತ್ರವಹಿಸಿತ್ತು. ಪರಿಷತ್ತಿನ ಸಭೆಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಗಂಭೀರ ವಿಷಯಗಳನ್ನು ಚರ್ಚಿಸಲಾಗುತ್ತಿತ್ತು. ಅಂತಹ ಸಭೆಗಳಲ್ಲಿ ಬಾಲ್ಯವಿವಾಹವನ್ನು ಖಂಡಿಸಿದ್ದಲ್ಲದೆ ಅದರ ದುಷ್ಟ ಪರಿಣಾಮಗಳನ್ನು ಕುರಿತು ಚರ್ಚಿಸುತ್ತಿದ್ದರು. ಹೆಣ್ಣಿಗೆ 16 ಮತ್ತು ಗಂಡಿಗೆ 22 ವರ್ಷ ವಯಸ್ಸನ್ನು ವಿವಾಹ ಯೋಗ್ಯ ವಯಸ್ಸಾಗಿ ನಿರ್ಧರಿಸಲಾಗಿತ್ತು. ವಿವಾಹ ಸಂದರ್ಭದಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದನ್ನು ನಿರ್ಧರಿಸಿದ್ದರು. ಸರಳ ವಿವಾಹಕ್ಕೆ ಒತ್ತು ನೀಡಿ ಆ ಸಂದರ್ಭದಲ್ಲಿ ಖರ್ಚು ಮಾಡಬೇಕಾದ ಮೊತ್ತವನ್ನು 16ರೂಗಳಿಗೆ ಮಿತಿಗೊಳಿಸಿದ್ದರು. ಆ ಮೊತ್ತವನ್ನು ಯಾವ ರೀತಿಯಲ್ಲಿ ಖರ್ಚು ಮಾಡಬೇಕೆಂಬುದರ ವಿವರಗಳನ್ನು ನೀಡಿದ್ದರು. ಮಹಾಡ್ ನ ಚೌದಾ ತಲೆ ಕೆರೆಯ ನೀರಿನ ಪ್ರವೇಶ, ಕಾಳಾರಾಂ ದೇವಾಲಯ ಪ್ರವೇಶ, ಮನುಸ್ಮೃತಿ ದಹನ ಕಾರ್ಯಕ್ರಮ- ಈ ಎಲ್ಲ ಕಾರ್ಯಕ್ರಮಗಳಲ್ಲೂ ಮಹಿಳೆಯರು ತುಂಬು ಉತ್ಸಾಹದಿಂದ ಭಾಗವಹಿಸಿದರು.

ದಲಿತ ಮಹಿಳಾ ಪರಿಷತ್ತು 11-8-1946ರಂದು ಪುಣೆ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ ಮಹಿಳೆಯರನ್ನು ಅಭಿನಂದಿಸಲು ಒಂದು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅನೇಕ ಮಹಿಳೆಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ “ಅಸ್ಪೃಶ್ಯ ಸಮಾಜದ ಹೋರಾಟ ಮತ್ತು ಅದರಲ್ಲಿ ಅಸ್ಪೃಶ್ಯ ಮಹಿಳೆಯರ ಪಾತ್ರ” ಎಂಬ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು. ಈ ವಿಚಾರ ಕುರಿತು ಹಲವಾರು ಮಹಿಳೆಯರು ತಮ್ಮ ವಿಚಾರಗಳನ್ನು ಮತ್ತು ಅನುಭಗಳನ್ನು ಕುರಿತು ಹಂಚಿಕೊಂಡರು. ದಲಿತ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದ ಮಹಿಳೆಯರು ತಮ್ಮ ಸೆರೆಮನೆವಾಸದ ಅನುಭವವನ್ನು ಹಂಚಿಕೊಂಡರು. “ಡಾ|| ಬಾಬಾ ಸಾಹೇಬ ಅಂಬೇಡ್ಕರ್‍ರವರು ದಲಿತರ ಹಕ್ಕುಗಳನ್ನು ಪಡೆಯುವಲ್ಲಿ ಕಾಂಗ್ರೆಸ್ ಮತ್ತು ಬ್ರಿಟಿಷ್ ಸರ್ಕಾರದ ವಿರುದ್ಧ ಸಮರವನ್ನು ಸಾರಿದ್ದಾರೆ. ಆ ಸತ್ಯಾಗ್ರದಲ್ಲಿ ನಾವೆಲ್ಲಾ ಭಾಗವಹಿಸಿ ವಿಜಯಿಶಾಲಿಯಾಗೋಣ” ಎಂದು ಕರೆಕೊಟ್ಟರು.

ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1935ರ ಅಕ್ಟೋಬರ್ 13ರಂದು ಮಹಾರಾಷ್ಟ್ರದ ಯೋಲಾ ಸಮ್ಮೇಳನದಲ್ಲಿ “ನಾನು ಹಿಂದುವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ” ಎಂದು ಘೋಷಿಸಿದರು. ಇದಾದ 21 ವರ್ಷಗಳ ತರುವಾಯ ಅಕ್ಟೋಬರ್ 14, 1956ರಂದು ನಾಗಪುರದ ದೀಕ್ಷಾ ಭೂಮಿಯಲ್ಲಿ ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅಂಬೇಡ್ಕರ್ ಅವರು ಕರೆ ನೀಡಿದ್ದ ಧರ್ಮಾಂತರ ಚಳುವಳಿಯಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿದ್ದರು. ಅಂಬೇಡ್ಕರ್ ಅವರ ಕರೆಯ ಮೇರೆಗೆ ಮನೆಯಲ್ಲಿದ್ದ ದೇವರುಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹೋಗಿ ನದಿಯಲ್ಲಿ ಹಾಕಿ ನಾಗಪುರಕ್ಕೆ ಹೋಗಿ ಬೌದ್ಧಧರ್ಮಕ್ಕೆ ಮತಾಂತರಗೊಂಡ ಮಹಿಳೆಯರು ನೂರಾರು ಮಂದಿಯಿದ್ದರು. ಇವರಲ್ಲಿ ಸೋನು ತಾಯಿ ಲಂಜೇವಾರ, ಜಾಗೋಬಾಜಿ ರಾಮ್ ಟೆಕ್ ಮತ್ತು ಫೂಲ್ ಚಂದ್ ಮೇಷ್ರಾಮ್ ಮುಂತಾದವರು ತಮ್ಮ ಮನೆಯಲ್ಲಿದ್ದ ದೇವರ ವಿಗ್ರಹ ಮತ್ತು ಪಟಗಳನ್ನು ನಾಗಪುರದ ನಾಗ ನದಿಯಲ್ಲಿ ತೇಲಿಬಿಟ್ಟು ಮತಾಂತರ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದರು. ಹಲವಾರು ಮಹಿಳೆಯರು ಮತಾಂತರಗೊಂಡುದಲ್ಲದೆ ಬಿಕ್ಷುಣಿಯರಾಗಿ ಪರಿವರ್ತಿತರಾಗಿ, ಬಿಳಿ ವಸ್ತ್ರ ಧರಿಸಿ, ಕೇಶಮುಂಡನ ಮಾಡಿಸಿಕೊಂಡು ಬೌದ್ಧ ಧರ್ಮ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದರು. ನಂದಶೀಲ (ಅಕೋಲದ ದೇವಕಿ ಚಂದ್ರಭಾನ್ ಖಂಡಾರೆ), ಬಿಕ್ಷುಣಿ ಚಂದ್ರಶೀಲಾ (ಚಂದ್ರಭಾಗಾ ಚೌತಮಲ್)ಲಕ್ಷ್ಮಿಭಾಯಿ ಮತ್ತು ವಿತಬಾಯಿ ಪವಾರ್ ಮುಂತಾದವರು ಬುದ್ಧಿಸ್ಟ್ ಕೌನ್ಸಿಲ್‍ಗಳಲ್ಲಿ ಕಾರ್ಯಕರ್ತರಾಗಿ, ನಾಯಕಿಯರಾಗಿ ಕೆಲಸಮಾಡಿದ್ದಲ್ಲದೆ ಬೌದ್ಧ ಸಂಘಗಳನ್ನು ಸ್ಥಾಪಿಸುವುದರಲ್ಲಿ ವಿಶೇಷ ಆಸಕ್ತಿವಹಿಸಿದರು.

ಡಾ. ಎನ್‌.ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *