ನಮ್ಮ ಕಥೆ/ ನಾನು ಅವನಲ್ಲ ಅವಳು….! – ಎನ್. ಗಾಯತ್ರಿ

“ ಸ್ವರ್ಗ ಬೇಕೆಂದೇನೂ ನಾನು ಕೇಳುತ್ತಿಲ್ಲ. ನರಕ ಬೇಡ ಎಂದಷ್ಟೇ ನಾನು ಒದ್ದಾಡುತ್ತಿರುವುದು. ನನ್ನಂತೆಯೇ ಇರುವ ಇತರ ಹಿಜಡಾಗಳಿಗಾಗಿಯೂ”  ಲಿವಿಂಗ್ ಸ್ಮೈಲ್ ವಿದ್ಯಾ ಅವರ ಆತ್ಮಕಥೆಯಲ್ಲಿ ಬರುವ ಈ ಮಾತುಗಳು ಅವರ ಬದುಕಿನ ಕನವರಿಕೆ ಮಾತ್ರ ಆಗಿರದೆ, ಒಟ್ಟು ಹಿಜಡಾ ಸಮುದಾಯದ ಆಶಯವೂ ಆಗಿದೆ.

“ರಾಜಕುಮಾರಿ

ಮುದ್ದು ರೋಜಾಕುಮಾರಿ

ನನ್ನಾಸೆ ಕೈಗೂಡುವುದೇ”

ಎಂದು ರೇಡಿಯೋದಲ್ಲಿ ಬರುತ್ತಿದ್ದ ಹಾಡಿಗೆ ಲಂಗ ಧರಿಸಿಕೊಂಡು ನರ್ತನ ಮಾಡುತ್ತಾ ಗಿರ್ರನೆ ಸುತ್ತುತ್ತಾ ರೂಮಿನೊಳಗೆ ಅಗುಳಿಹಾಕಿಕೊಂಡು ಚಿಕ್ಕಂದಿನಲ್ಲಿ ಆನಂದಿಸುತ್ತಿದ್ದ ಶರವಣನ್ ತನ್ನ ಆಸೆಯನ್ನು ಕೈಗೂಡಿಸಿಕೊಂಡು ವಿದ್ಯಾ ಆದ ಹೃದಯಸ್ಪರ್ಷಿ ಕಥೆ ಇದು. ಸ್ತ್ರೀಯರೂ ಪುರುಷರೂ ತುಂಬಿರುವ ಈ ಜಗತ್ತಿನಲ್ಲಿ ಒಬ್ಬ ಹಿಜಡಾ ಆಗಿ ಬದುಕು ಸಾಗಿಸುತ್ತಿರುವವರು ಎದುರಿಸುತ್ತಿರುವ ಎಲ್ಲ ಕಷ್ಟಗಳನ್ನು ಎದುರಿಸಿದವರು ವಿದ್ಯಾ. ಚಿಕ್ಕಂದಿನಿಂದಲೂ ಓದಿನಲ್ಲಿ ಅತ್ಯಂತ ಚುರುಕಾಗಿದ್ದು ಭಾಷಾಶಾಸ್ತ್ರದಲ್ಲಿ ಎಂ.ಎ., ಪದವಿ ಗಳಿಸಿರುವ ವಿದ್ಯಾ ಅವರಿಗೆ ನಾಟಕ ಮತ್ತು ಸಿನಿಮಾ ಕ್ಷೇತ್ರ ಅಚ್ಚುಮೆಚ್ಚು. ತಮಿಳಿನ ಖ್ಯಾತ ಡೈರೆಕ್ಟರ್ ಮಿಸ್ಕಿನ್ ರೊಂದಿಗೆ ಸಹ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

೧೯೮೨ರ ಮಾರ್ಚ್ ೨೫ರಂದು ತಿರುಚ್ಚಿ ಸಮೀಪದ ಪುತ್ತೂರಿನಲ್ಲಿ  ಶರವಣನ್ ಎಂಬ ನಾಮಧೇಯ ಹೊತ್ತು ವಿದ್ಯಾ ಜನಿಸಿದರು. ತಂದೆಗೆ ನಿರಾಶ್ರಿತ ವಲಸೆಗಾರರ ಶಿಬಿರದಲ್ಲಿ ಕಸಗುಡಿಸುವ ಕೆಲಸ. ಆದರೆ ಮಗ ಚೆನ್ನಾಗಿ ಓದಿ ಕಲೆಕ್ಟರನಾಗಿ ಕುಟುಂಬದ ಮೊಗ ಹೊರಲಿ ಎಂಬ ಆಸೆ. ಅದಕಾಗಿ ತಮ್ಮ ಶಕ್ತಿ ಮೀರಿ ಅವರನ್ನು ದುಡಿದು ಓದಿಸಿದರು. ಮೂರು ಹೆಣ್ಣು ಮಕ್ಕಳ ಜೊತೆಯಲ್ಲಿ ಬೆಳೆದ ಶರವಣನ್ ಚಿಕ್ಕಂದಿನಿಂದಲೂ ಸೋದರಿಯರ ಲಂಗ, ಜಂಪರ್ ಹಾಕಿ ಡಾನ್ಸ್ ಮಾಡುತ್ತಾ ಆನಂದಿಸುತ್ತಾ ಬೆಳೆದವರು. ತಂದೆಯ ಕಣ್ಣುನಿಟ್ಟಿನ ಆರೈಕೆಯಲ್ಲಿ ಸದಾ ಓದುತ್ತಾ ತರಗತಿಯಲ್ಲೂ ಯಾವಾಗಲೂ ಮೊದಲು ಬರುತ್ತಾ ಜಾಣನಂತೆ ಮುಂದಿದ್ದರು. ಆದರೂ ಕೆಲವೊಮ್ಮೆ ಮನೆಯವರ ಕಣ್ತಪ್ಪಿಸಿ ಬೀದಿಯಲ್ಲಿ ಹುಡುಗಿಯರ ಜೊತೆ ಕುಂಟೆಬಿಲ್ಲೆ, ಚೌಕಾಭಾರ, ಅಚ್ಚಿನ ಕಲ್ಲಾಟ ಆಡುತ್ತಾ ಬೆಳೆದರು. ಶಾಲೆಯಲ್ಲೂ ಹುಡುಗರ ಜೊತೆ ಬೆರೆಯುವುದಕ್ಕಿಂತ ಕಣ್ಮಣಿ, ಕವಿತಾ, ಅಮೃತವಲ್ಲಿ, ಇಂದುಮತಿ ಮುಂತಾದ ಗೆಳತಿಯರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಬೆಳೆಯುತ್ತಿದ್ದಂತೆ ಹೆಣ್ತನ ಬೆರೆತ ಮಾತಿನ ಶೈಲಿ, ನಡವಳಿಕೆ, ಹುಡುಗಿಯರೊಂದಿಗೆ ಸೇರಿ ಸುತ್ತಾಡುವುದರಿಂದಾಗಿ ಇತರ ಹುಡುಗರಿಂದ ಅಪಹಾಸ್ಯಕ್ಕೆ ಗುರಿಯಾಗುತ್ತಾ ಕ್ರಮೇಣ ಒಂಟಿಯಾಗ್ಗುತ್ತಾ ಹೋದರು. ಎಷ್ಟೇ ಜಾಗರೂಕತೆಯಿಂದ ಇದ್ದರೂ, ಅವರ ನಿಯಂತ್ರಣವನ್ನು ಮೀರಿ ಮೇಲೇಳುತ್ತಿದ್ದ ಹೆಣ್ತನದ ಭಾವಗಳು ಅವರನ್ನು ತರಗತಿಯಲ್ಲಿ ಮತ್ತು ಹೊರಗಡೆ ತುಂಬ ಹಾಸ್ಯಕ್ಕೀಡುಮಾಡುತ್ತಿತ್ತು. ಓದಿನಲ್ಲಿ ಕ್ರಮೇಣ ಆಸಕ್ತಿ ಕಡಿಮೆಯಾಗತೊಡಗಿತು. ಅದರ ಬೆನ್ನಲ್ಲೇ ಅಪ್ಪನಿಂದ ಹೊಡೆತ, ಬಡಿತಗಳು ಹೆಚ್ಚಾದವು. ವಿಜ್ಞಾನದಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಗಿ ನಂತರ ಸಾಹಿತ್ಯ, ಸಂಗೀತ ಮತ್ತು ನಾಟಕಗಳು ಆ ಜಾಗವನ್ನು ಆಕ್ರಮಿಸಿದವು.

ಬೀದಿಯಲ್ಲಿ, ಸಿಗ್ನಲ್ ಗಳಲ್ಲಿ, ರೈಲಿನಲ್ಲಿ ಹಿಜಡಾಗಳನ್ನು ಕಂಡಾಗ ಅವರ ಅತಿರೇಕದ ವರ್ತನೆ ಏಕೆ ಎಂದು ಬಹುಮಂದಿಗೆ ಅನ್ನಿಸುವುದುಂಟು. ಆದರೆ ಈ ವರ್ತನೆಗೆ ಕಾರಣವನ್ನು ಮತ್ತು ಅಂತಹ ಸ್ಥಿತಿಯ ಅನಿವಾರ್ಯತೆಯನ್ನು ವಿದ್ಯಾ ವಿವರಿಸುವುದು ಹೀಗೆ:

“ನಮ್ಮ ಗುಂಪಿನ ಹಲವರು ನೋಡುವವರ ಎದುರು ತಮಾಷೆಯಾಗಿ ನಡೆದುಕೊಳ್ಳುವುದು, ನಡುಬೀದಿಯಲ್ಲಿ ಎತ್ತರದ ಧ್ವನಿಯಲ್ಲಿ ಮಾತನಾಡಿ ಅಕ್ಕಪಕ್ಕದವರಿಗೆ ಧರ್ಮ ಸಂಕಟವನ್ನುಂಟುಮಾಡುವುದೂ, ಲೈಂಗಿಕ ಉದ್ಯಮದಲ್ಲಿ ತೊಡಗಲು ಆಹ್ವಾನಿಸುವುದು, ಆಭಾಸಕರವಾಗಿ ಮಾತನಾಡಿ ಅಸಹನೀಯವಾಗಿ ವರ್ತಿಸುವುದೂ… ಒಟ್ಟಾಗಿ ಈ ಎಲ್ಲಾ ಚಟುವಟಿಕೆಗಳೂ ತಮ್ಮ ರಕ್ಷಣೆಗಾಗಿ ಮಾಡಿಕೊಳ್ಳುವಂತಹವುಗಳೇ ಎಂದು ನಾನು ಹೇಳಿದರೆ – ದಯವಿಟ್ಟು ನನ್ನನ್ನು ನಂಬಿ! ಇದೇ ಸತ್ಯ. ಇದೇ ವಾಸ್ತವ!”

“ಸ್ವಲ್ಪ ಕೂಡ ರಕ್ಷಣೆಯಿಲ್ಲದ ಈ ಸಮಾಜದಲ್ಲಿ ನಮಗಾಗಿ ಕನಿಷ್ಠ ಮಟ್ಟದ ಭದ್ರತೆಯನ್ನಾದರೂ ರೂಢಿಸಿಕೊಳ್ಳಲು ನಾವು ಹೀಗೆಲ್ಲಾ ಮಾಡಬೇಕಾಗಿದೆ. ದೈಹಿಕವಾಗಿ ಬಲಶಾಲಿಗಳಾದ ಒರಟು ಸ್ವಭಾವದ ಕೆಲವು ಗಂಡಸರು ಅನವಶ್ಯಕವಾಗಿ ನಮ್ಮೊಂದಿಗೆ ಜಗಳಕ್ಕೆ ಬಂದರೆ ಅವರನ್ನು ಎದುರಿಸಿ ನಿಲ್ಲಲು ನಮ್ಮಿಂದ ಸಾಧ್ಯವಿಲ್ಲ. ಅದಕ್ಕಾಗಿ ಅವರಿಗೆ ವಿಧೇಯರಾಗಿ ನಡೆದುಕೊಳ್ಳಲು ನಮ್ಮಿಂದಾಗದು. ಆದ್ದರಿಂದ ಅವರೊಳಗೇ ಒಂದು ಜುಗುಪ್ಸೆಯ ಭಾವನೆ ಉಂಟಾಗುವಂತೆ ಮಾಡಿ ಅವರನ್ನು ದೂರ ಕಳಿಸುವುದಷ್ಟೇ ನಮಗೆ ಗೊತ್ತಿರುವ ಮಾರ್ಗ. ಒಂದು ವೇಳೆ ನಾವೇನಾದರೂ ಈ ಬಗ್ಗೆ ದೂರು ಕೊಟ್ಟರೂ ಯಾವ ಪೊಲೀಸ್ ಸ್ಟೇಷನ್ ನಲ್ಲಿ ತಾನೇ ಅದನ್ನು ದಾಖಲಿಸಿಕೊಂಡು ಕ್ರಮ ಜರುಗಿಸುತ್ತಾರೆ ಹೇಳಿ? ಅವಕಾಶವೇ ಇಲ್ಲ! ಶಾಂತವಾಗಿ, ಸಮಾಧಾನದಿಂದ , ಸ್ವಾಭಿಮಾನದಿಂದ ನಡೆದುಕೊಳ್ಳಲು ನಮಗೂ ಗೊತ್ತು. ನಮ್ಮನ್ನು ಅರ್ಥ ಮಾಡಿಕೊಂಡು ನಡೆದುಕೊಳ್ಳಲು ನಿಮಗೆ ಗೊತ್ತಾ ಎಂಬುದೇ ನಮ್ಮ ಪ್ರಶ್ನೆ.”

ಈ ತೃತೀಯ ಲಿಂಗೀಯರ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ ಮಾಹಿತಿಯಿಲ್ಲದಿರುವ ಕಾರಣದಿಂದಲೂ ಅವರ ಬಗ್ಗೆ ಅನಗತ್ಯ ಕುತೂಹಲ, ಅವರನ್ನು ಕಂಡರೆ ಜುಗುಪ್ಸೆ ಮತ್ತು ಹೀನಾಯವಾಗಿ ಕಾಣುವ ಧೋರಣೆಗಳು ಇರುತ್ತವೆ. ಈ ದೃಷ್ಟಿಯಿಂದ ಈ ಪುಸ್ತಕ ಅಂಥ ಹಲವಾರು ಪ್ರಶ್ನೆಗಳಿಗೆ ಪರಿಹಾರ ಒದಗಿಸುತ್ತದೆ. ಅವರ ಸಮಸ್ಯೆಗಳನ್ನು ಬಿಚ್ಚಿಡುವುದಷ್ಟೇ ಅಲ್ಲ, ಅವರು ಸಮಾಜದಿಂದ ಏನನ್ನು ನಿರೀಕ್ಷಿಸುತ್ತಾರೆ. ಸಾಮಾನ್ಯವಾಗಿ ಹೆಣ್ಣು – ಗಂಡು ಎಂಬ ಎರಡೇ ಪಾತಳಿಯಲ್ಲಿ ಲಿಂಗವನ್ನು ಕಲ್ಪಿಸಿಕೊಳ್ಳುವ ನಮ್ಮ ಸಮಾಜಕ್ಕೆ ಈ ಹೊಸ ಸ್ವರೂಪವನ್ನು ಅರಗಿಸಿಕೊಳ್ಳುವುದು ಕಷ್ಟ. ಮನೆಯಲ್ಲಿ ಹೆತ್ತವರು ಮತ್ತು ಒಡಹುಟ್ಟಿದವರಿಗೇ ಈ ಬದಲಾವಣೆಯನ್ನು ಒಪ್ಪಿಕೊಳ್ಳುವುದು ಒಂದು ಕಡೆ ಕಷ್ಟವಾದರೆ, ಇನ್ನು ಸಮಾಜ, ಸರ್ಕಾರ ಮತ್ತು ಶಾಲಾ ಕಾಲೇಜುಗಳು ಇದನ್ನು ಸಲೀಸಾಗಿ ಮತ್ತು ಆರೋಗ್ಯಪೂರ್ಣವಾಗಿ ಒಪ್ಪಿಕೊಳ್ಳುವಂತೆ ಮಾಡುವುದು ಒಂದು ದೀರ್ಘ ಪ್ರಕ್ರಿಯೆಯೇ ಆಗುತ್ತದೆ. ಹೆಂಗಸರನ್ನೇ ಕನಿಷ್ಠವಾಗಿ ಭಾವಿಸುವ ಈ ಸಾಮಾಜಿಕ ವ್ಯವಸ್ಥೆಯಲ್ಲಿ, ಗಂಡಾಗಿ ಹುಟ್ಟಿದ ಒಬ್ಬ ವ್ಯಕ್ತಿ ಹೆಣ್ಣಾಗಿ ಬದಲಾದರೆ ಗಂಡು ಜಾತಿಗೂ, ಒಟ್ಟು ಗಂಡಸುತನಕ್ಕೂ ನಡೆಯುವ ಅವಮಾನವೆಂದು ಭಾವಿಸುವ ಸಾಮಾನ್ಯವಾದ ಪುರುಷ ಪ್ರಧಾನ ಯೋಚನೆಯೇ, ಹಿಜಡಾಗಳನ್ನು ಹೆಣ್ಣೆಂದು ಒಪ್ಪಿಕೊಳ್ಳಲು ಸಾಧ್ಯವಾಗದುದರ ಮೂಲವಿರಬಹುದು, ಎಂದೆನಿಸುತ್ತದೆ. ಅಷ್ಟೇ ಅಲ್ಲ, ಹೆಣ್ಣಿನ ಮುಖ್ಯ ಕರ್ತವ್ಯವೇ ಸಂತಾನೋತ್ಪತ್ತಿ. ಅದನ್ನು ಸಾಧ್ಯವಾಗಿಸದ ಈ ಹೆಣ್ಣಿನ ಸ್ಥಿತಿಯನ್ನು ಕೀಳಾಗಿ ನೋಡಲು ಕಾರಣವಿರಬಹುದು.

“ನಮ್ಮ ನಿರೀಕ್ಷೆಗಳು ತುಂಬಾ ಚಿಕ್ಕವು. ಎಲ್ಲ ಗಂಡಸರಂತೆ, ಎಲ್ಲ ಹೆಂಗಸರಂತೆ ನಾನೂ ಸಹಜವಾಗಿ ಬದುಕಬೇಕೆಂದು ಬಯಸುವವಳು. ನನ್ನ ಈ ಸ್ಥಿತಿ ಸಹಜವಾದದ್ದು. ಒಬ್ಬ ಗಂಡಸು ಹೇಗೆ ಗಂಡಾಗಿಯೇ ಇರುತ್ತಾನೋ, ಒಬ್ಬ ಹೆಣ್ಣು ಹೇಗೆ ಹೆಣ್ಣಾಗಿಯೇ ಇರುತ್ತಾಳೋ ಅಥವಾ ಒಂದು ನಾಯಿ, ಬೆಕ್ಕು ಹೇಗೆ ನಾಯಾಗಿಯೋ, ಬೆಕ್ಕಾಗಿಯೋ ಇರುತ್ತವೆಯೋ ಹಾಗೆ ಇದೂ ಒಂದು ಪ್ರಾಕೃತಿಕ ಸ್ಥಿತಿ. ಇದು ಇತರರಿಗೆ ಅರ್ಥವಾಗದೆ ಹೋದಾಗಲೇ ನಮಗೆ ಸಮಸ್ಯೆಗಳು ಪ್ರಾರಂಭವಾಗುವುದು.”

ವಿದ್ಯಾ ಅವರಿಗೆ ಮನೆಯವರು ಮತ್ತು ಗುರುಗಳು ಹಾಗೂ ಸ್ನೇಹಿತರು ಲಿಂಗ ಪರಿವರ್ತನೆ ಮಾಡಿಸಿಕೊಳ್ಳಬೇಡವೆಂದು ಎಷ್ಟೇ ಉಪದೇಶಿಸಿದರೂ ಆ ಮಾತಿಗೆ ಕಿವಿಗೊಡದೆ ತಮ್ಮ ಹೃದಯದ ಮಾತು ಕೇಳುತ್ತಾರೆ. ತನ್ನಲ್ಲಿನ ಗಂಡಸುತನದ ಚಿಹ್ನೆಯನ್ನು ಕಳೆದುಕೊಳ್ಳಲು ಭಿಕ್ಷೆಯೆತ್ತಲು ಹಿಂದೆ ನೋಡುವುದಿಲ್ಲ. ಎಂ.ಎ. ಓದಿದ ಭಿಕ್ಷುಕಿಯೆನಿಸಿಕೊಂಡರೂ ತಾನು ಹೆಣ್ಣಾಗುವುದಕ್ಕಾಗಿ ಮಾಡುತ್ತಿರುವ ಅಗ್ನಿ ಪರೀಕ್ಷೆಯೆಂದೇ ಭಾವಿಸುತ್ತಾರೆ. ಒಮ್ಮೆ ಅವರಿಗೆ ಅವರು ಬಯಸಿದ ಹೆಣ್ತನ ದೊರಕಿದ ಮೇಲೆ ಸ್ವಂತ ದುಡಿಮೆಯನ್ನು ಅರಸಿ ಹುಟ್ಟೂರಿಗೆ ಹಿಂತಿರುಗುವುದು ಅವರ ಬದುಕಿನ ಮಹತ್ವದ ಘಟ್ಟ.

ಸುಶಿಕ್ಷಿತರಾದ ವಿದ್ಯಾ ಶರವಣನ್ ಆಗಿದ್ದಾಗಲೂ ಅವರನ್ನು ಮಾನವೀಯವಾಗಿ ನೋಡಿದ ಸ್ನೇಹಿತರ ಒಂದು ದಂಡೇ ಇದೆ. ಹಾಗೆಯೇ ಅವರಿಗೆ ಪಾಠ ಕಲಿಸಿದ ಕೆಲವು ಅಧ್ಯಾಪಕರೂ ಕೂಡ ಅವರ ಬೆಳವಣಿಗೆಗೆ ಪ್ರೋತ್ಸಾಹಿಸಿದ್ದಾರೆ.  ಅವರನ್ನು ಬರಹದ ಲೋಕಕ್ಕೆ ಎಳೆದು ತಂದವರು ಬಾಲಭಾರತಿ. ಅಂತರ್ಜಾಲದಲ್ಲಿ ಅವರದೇ ಆದ ಒಂದು ಬ್ಲಾಗ್ ನಿರ್ಮಿಸಿಕೊಂಡು ಬದುಕಿನ ಕಥೆ, ವ್ಯಥೆ, ಭಾವನೆ ಮತ್ತು ವಿಚಾರಗಳನ್ನು ಹಂಚಿಕೊಂದರು ಅವರ ಸ್ಮೈಲ್ ಪುಟಗಳು (http://livingsmile.blogspot.com) ನಿರ್ಮಾಣಗೊಂಡದ್ದು ಹೀಗೆ.

ವಿದ್ಯಾ ಅವರ ಆತ್ಮ ಕಥಾನಕ “ನಾನು ಅವನಲ್ಲ… ಅವಳು…!” ಎರಡು ಕಾರಣಕ್ಕೆ ಮುಖ್ಯವಾದದ್ದು: ಒಂದು ಅವರ ಬದುಕಿನ ನೋವನ್ನು ಬಯಲು ಮಾಡುತ್ತಲೇ ಹಿಜಡಾಗಳ ದುರವಸ್ಥೆಯನ್ನು ಬಿಚ್ಚಿಡುತ್ತಾ ಅವರ ಸ್ಥಿತಿ ಕಾರಣವಾದ ಸಮಾಜದ ಮನೋಭೂಮಿಕೆಯನ್ನು ತೆರೆದಿಡುತ್ತದೆ. ಎರಡನೆಯದು, ಈಗಾಗಲೇ ಹಿಜಡಾ ಆಗಿರುವವರಿಗೆ ಕೂಡ ವಿದ್ಯಾ ಬದುಕಿನ ಮಾದರಿಯಾಗುವ ಒಂದು ಸ್ಥಿತಿ ಇಲ್ಲಿ ತೆರೆದುಕೊಳ್ಳುತ್ತದೆ. ಹಿಜಡಾಗಳು ಬದುಕಬೇಕೆಂದರೆ ಅವರ ಹೊಟ್ಟೆಪಾಡಿಗೆ ಇರುವ ಮಾರ್ಗಗಳು ಎರಡೇ. ಒಂದು ಭಿಕ್ಷೆ, ಇಲ್ಲವೆ ದೇಹ ಮಾರಿಕೊಳ್ಳುವುದು. ಆರಂಭದ ಕೆಲವು ದಿನಗಳು ವಿದ್ಯಾ ಭಿಕ್ಷೆ ಬೇಡಿದರೂ ಮೈಮಾರಿಕೊಳ್ಳಲಿಲ್ಲ. ಹಾಗೆಯೇ ಉದ್ಯೋಗವನ್ನು ಅರಸಿಕೊಂಡು ಹೋದಾಗಲೂ ಅವರು ಹಿಜಡಾಗಳಿಗಾಗಿ ಕೆಲಸ ಮಾಡುವ ಎನ್.ಜಿ.ಓ ಸೇರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರಿಗೆ ಹಿಜಡಾಗಳೂ ಕೂಡ ಪ್ರಧಾನವಾಹಿನಿಯ ಓದು ಮತ್ತು ಉದ್ಯೋಗಗಳಲ್ಲಿ ಕೆಲಸ ಮಾಡುವಂತಾದಾಗ ಮಾತ್ರ ಅವರ ಸಮಸ್ಯೆಗಳಿಗೆ ಪರಿಹಾರವುಟು ಎಂದು ನಂಬಿದ್ದವರು.

ವಿದ್ಯಾ ತಮ್ಮ ಪುಸ್ತಕದ ಕೊನೆಯ ಭಾಗದಲ್ಲಿ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ಕೊಡುತ್ತಾರೆ:

“ ಹಿಜಡಾಗಳನ್ನು ರೋಗಿಷ್ಠ ಲೈಂಗಿಕ ಕಾರ್ಯಕರ್ತರೆಂದು ಮಾತ್ರ ಭಾವಿಸಿ ರಚನೆಯಾಗಿರುವ ಒಂದು ಸರ್ಕಾರಿ ಆದೇಶವಿದೆ (ಸಂ.೩೭೭). ಇದನ್ನು ತಿದ್ದುಪಡಿ ಮಾಡಿ ಸರಿಯಾದ ಚಿಕಿತ್ಸೆ ಹಾಗೂ ಮಾನಸಿಕ ಪರೀಕ್ಷೆಗಳನ್ನು ನಡೆಸಿ ಆಕೆ ಒಬ್ಬ ಹಿಜಡಾ ಎಂದು ನಿರ್ಧಾರವಾದರೆ ಆಕೆಗೆ ಕಾನೂನುಬದ್ಧವಾಗಿ ಲಿಂಗಬದಲಾವಣೆಯ ಚಿಕಿತ್ಸೆ (ಸೆಕ್ಸ್ ರೀ ಅಸೈನ್ ಮೆಂಟ್ ಸರ್ಜರಿ) ನಡೆಸಲು ಸರ್ಕಾರ ಮುಂದೆ ಬರಬೇಕು. ಸಾಧ್ಯವಾದರೆ ಅವರಿಗಾಗಿ ಮೀಸಲಾತಿಯನ್ನೂ ನೀಡಬೇಕು. ಸ್ವತಂತ್ರ ಸಹಜ ಸರಳ ಬದುಕಿಗೆ ನಾವು ಕೇಳುವ ಸಹಾಯಗಳಿವು.

ಶಾಲಾ ಪಠ್ಯಗಳಲ್ಲೂ ಕೂಡ ಹಿಜಡಾಗಳನ್ನು ಪರಿಚಯಿಸಬಹುದು. ದಾರಿಯಲ್ಲಿ ನಮ್ಮನ್ನು ನೋಡಿ ಹಲ್ಲು ಗಿಂಜುತ್ತಾ, ಅಪಹಾಸ್ಯ ಮಾಡುತ್ತಾ … ಮತ್ತೊಂದು ತಲೆಮಾರು ನಮ್ಮನ್ನು ಅವಮಾನಪಡಿಸುವುದನ್ನು ತಪ್ಪಿಸಲು ಇದು ನೆರವಾಗಬಹುದು. ವಯಸ್ಕರ ಶಿಕ್ಷಣ, ರಾತ್ರಿ ಶಿಕ್ಷಣ, ಮನೆ ಮನೆಗೆ ಶಿಕ್ಷಣ ಇತ್ಯಾದಿ ಪದ್ಧತಿಗಳಿವೆ. ಅವುಗಳಲ್ಲೆಲ್ಲಾ ಕೂಡ ಹಿಜಡಾಗಳ ಬಗ್ಗೆಯೂ ಒಂದು ಪಠ್ಯವನ್ನು ಸೇರಿಸಿ, ಅವರ ಕಷ್ಟಗಳ ಬಗ್ಗೆಯೂ ಗೌರವಿಸಲೂ ಹೇಳಿಕೊಡಬೇಕು. ಸೆನ್ಸಾರ್ ಮಂಡಳಿಯವರು, ಚಲನಚಿತ್ರಗಳಲ್ಲಿ ಹಿಜಡಾಗಳನ್ನು ಹೀಯಾಳಿಸುವ ದೃಶ್ಯಗಳನ್ನು ತಡೆಹಿಡಿಯಬೇಕು.”

ವಿದ್ಯಾ ಅವರ ಆತ್ಮ ಕಥಾನಕ “ನಾನು ಅವನಲ್ಲ… ಅವಳು…!” ವನ್ನು ಕನ್ನಡಕ್ಕೆ ಅನುವಾದಿಸಿರುವ ತಮಿಳ್ ಸೆಲ್ವಿಯವರ ಶ್ರಮ ಸಾರ್ಥಕವಾದುದು. ಹಾಗೆಯೇ ಈ ಪುಸ್ತಕವನ್ನಾಧರಿಸಿ ನಿರ್ಮಾಣಗೊಂಡ ಚಿತ್ರವೂ ಸೇರಿದಂತೆ ಹಿಜಡಾಗಳ ಬಗೆಗಿನ ತಪ್ಪು ಕಲ್ಪನೆಗಳನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ನಡೆದ ಉಪಯುಕ್ತ ಪ್ರಯತ್ನಗಳಾಗಿವೆ.

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *