ನಮ್ಮ ಕಥೆ/ ಉರುಳುವ ಕಲ್ಲಿನ ನೆನಪಿನ ಸುರುಳಿ – ಎನ್. ಗಾಯತ್ರಿ

ಸಮಕಾಲೀನ ಭಾರತದ ಮಹಿಳಾ ಚಳುವಳಿಯ ಶ್ರೀಮಂತ ಅನುಭವಕ್ಕೆ ಸಾಕ್ಷಿಯಾದ ಮತ್ತು ಪಾತ್ರದಾರಳೂ ಆದ ಡಾ| ವೀಣಾ ಮಜುಂದಾರ್ ಶಿಕ್ಷಕಿ, ಹೋರಾಟಗಾರ್ತಿ, ಸಂಶೋಧಕಿ, ಬುದ್ಧಿಜೀವಿ, ಸಂಸ್ಥೆಗಳನ್ನು ಕಟ್ಟಿದ ದಕ್ಷ ಆಡಳಿತಗಾರ್ತಿ, ಭಾಷಣಗಾರ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಅಪ್ರತಿಮ ಸ್ತ್ರೀವಾದಿಯಾಗಿ ಮಹಿಳೆಯರ ದನಿಯಾಗಿದ್ದವರು. ಅವರ ಆತ್ಮಚರಿತ್ರೆ “ಉರುಳುವ ಕಲ್ಲಿನ ನೆನಪಿನ ಸುರುಳಿ” ಅವರ ಬದುಕಿನ ಶ್ರೀಮಂತ ಅನುಭವದ ಘಟನೆಗಳ ಚಿತ್ರಣವಷ್ಟೇ ಅಲ್ಲದೆ, ಭಾರತದ ಮಹಿಳಾ ಚರಿತ್ರೆಯ ರೋಚಕ ಕಥನವೂ ಆಗಿದೆ. ಅದರ ಒಂದು ಕಿರು ನೋಟ ಇಲ್ಲಿದೆ.

“ನನ್ನ ಪಾಸ್‍ಪೋರ್ಟ್ ನನ್ನನ್ನು ಒಬ್ಬ ಸಮಾಜ ವಿಜ್ಞಾನಿಯೆಂದು ಹೇಳುತ್ತದೆ. ಆದರೆ ಕೆಲವರಿಗೆ ಮಾತ್ರ ನಾನು ಇಂದು ಏನಾಗಿದ್ದೇನೆ, ಎಂಬುದು ಗೊತ್ತು: ಗೊತ್ತಿಲ್ಲದ ಕ್ಷೇತ್ರಗಳಲ್ಲೆಲ್ಲ ನಾನೊಬ್ಬ ಮಹಿಳಾ ಕಾರ್ಯಕರ್ತೆ, ಒಬ್ಬ ಸ್ತ್ರೀವಾದಿ, ತಂಟೆಕೋರಳು ಮತ್ತು ಜೆಂಡರ್ ತಜ್ಞೆ ಎಂದೆನಿಸಿಕೊಂಡಿದ್ದೇನೆ. ಈ ಎಲ್ಲ ವಿವರಣೆಗಳೆಲ್ಲ ಅದೇನೇ ಇರಲಿ, ‘ಭಾರತದ ಮಹಿಳಾ ಚಳುವಳಿಯ ದಾಖಲಾತಿಗಾರ್ತಿ’ ಮತ್ತು ‘ದಕ್ಷಿಣ ಏಷ್ಯಾದ ಮಹಿಳಾ ಅಧ್ಯಯನದ ಅಜ್ಜಿ’ ಎಂದೆನಿಸಿಕೊಳ್ಳಲು ನನಗೆ ಇಷ್ಟ.” – ಭಾರತದ ಮಹಿಳಾ ಚಳುವಳಿಯಲ್ಲಿ ಮಹತ್ವದ ಮೈಲಿಗಲ್ಲುಗಳಿಗೆ ಸಾಕ್ಷಿಯಾದ ಸ್ತ್ರೀವಾದಿ ವೀಣಾ ಮಜುಂದಾರ್ ಅವರು ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ವಿನೂತನ ರೀತಿ ಇದು.

ವೃತ್ತಿಯಿಂದ ಇಂಜಿನಿಯರ್ ಆದ ಪ್ರಕಾಶ್ ಮಜುಂದಾರ್ ದಂಪತಿಗಳಿಗೆ ಜನಿಸಿದ ವೀಣಾ ಅವರಿಗೆ ಮನೆಯಲ್ಲಿ ಅತ್ಯಂತ ಸುಸಂಸ್ಕೃತವಾದ ವಿದ್ಯಾವಂತ ವಾತಾವರಣ. ಹುಟ್ಟಿ ಬೆಳೆದದ್ದು ಅತ್ಯಂತ ವಿಶಾಲವಾದ ಕೂಡು ಕುಟುಂಬದಲ್ಲಿ. ಮನೆಯಲ್ಲಿ ಪ್ರೀತಿ, ವಿಶ್ವಾಸ, ಭದ್ರತೆ, ಸುರಕ್ಷತೆ ಮತ್ತು ತೃಪ್ತಿ – ಎಲ್ಲವೂ ಇತ್ತು. ಮನೆಯ ಎಲ್ಲ ಸದಸ್ಯರಿಗೂ ಸ್ವತಂತ್ರವಾದ ದೃಢವಾದ ಅವರದೇ ಆದ ನಂಬಿಕೆಗಳಿದ್ದವು. ನಾಟಕ, ಸಂಗೀತ, ಕಾವ್ಯ, ಕ್ರೀಡೆ, ಚರಿತ್ರೆ, ರಾಜಕೀಯ –ಎಲ್ಲದರಲ್ಲೂ ಆಸಕ್ತಿಯಿದ್ದ ಈ ಮಂದಿ ಸದಾ ಒಂದಲ್ಲ ಒಂದು ಚರ್ಚೆಯಲ್ಲಿ ಮುಳುಗಿರುತ್ತಿದ್ದರು. ಪ್ರಸಿದ್ಧ ಚರಿತ್ರಕಾರ ಆರ್.ಸಿ. ಮಜುಂದಾರ್ ಇವರ ಚಿಕ್ಕಪ್ಪ. ಇಂತಹವರ ನಡುವಿನ ಚಿಂತನೆ, ಚರ್ಚೆಗಳ ನಡುವೆ ಹುಟ್ಟಿ ಬೆಳೆದವರು ವೀಣಾದಿ. ಶಾಲೆಗೆ ಹೋಗಿಲ್ಲದಿದ್ದರೂ ಮನೆಯಲ್ಲಿಯೇ ಓದಿಕೊಂಡಿದ್ದ ಅವರ ಅಮ್ಮ ಅವರಿಗೆ ಪುಸ್ತಕದ ಪ್ರೀತಿಯನ್ನು ಹಂಚಿದರು. ಮನೆಯ ಖರ್ಚಿಗೆಂದು ಕೊಟ್ಟ ಹಣದ ಉಳಿಕೆಯಲ್ಲಿಯೇ ಮಗಳಿಗೆಂದು ಪುಸ್ತಕಗಳನ್ನು ಓದಲು ತಂದುಕೊಡುತ್ತಿದ್ದರು. ಹಲವು ಭಾಷೆಗಳನ್ನು ಕಲಿತಿದ್ದ ಆಕೆ ಮಗಳಲ್ಲಿ ಓದಿನ ಹಸಿವನ್ನು ಹುಟ್ಟುಹಾಕಿದ್ದರು.

ಇಂಜಿನಿಯರ್ ಆಗಿದ್ದ ತಂದೆ ಬ್ರಿಟನ್ನಿನ ಗ್ಲಾಸ್ಕೋ ವಿಶ್ವ ವಿದ್ಯಾಲಯದಲ್ಲಿ ನೀರಾವರಿ ನಿರ್ವಹಣಾ ಕೋರ್ಸೊಂದನ್ನು ಮಾಡಿಕೊಂಡಿದ್ದರು ಮತ್ತು ಅತ್ಯುತ್ತಮ ವಿನ್ಯಾಸಕಾರರೆಂದೆನಿಸಿಕೊಂಡಿದ್ದರು. ಅವರ ಅತ್ಯಂತ ಪ್ರಿಯವಾದ ವಿಷಯ ದೇಶದಲ್ಲಿ ನದಿಗಳ ನಿರ್ವಹಣೆ. 1910ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಅವರ ತಂಡದಲ್ಲಿದ್ದು ಕಾವೇರಿ ನದಿ ಕಣಿವೆಯ ಪ್ರಾಜೆಕ್ಟ್‍ಗೆ ಕೆಲಸ ಮಾಡಿದ್ದವರು. ಅವರೊಬ್ಬ ಕಟ್ಟಾ ರಾಷ್ಟ್ರೀಯವಾದಿಯಾಗಿದ್ದರು. ಜಪಾನಿ ಸೇನೆ ಭಾರತವನ್ನು ಪ್ರವೇಶಿಸುವುದಕ್ಕೆ ಮುಂಚೆ ಬ್ರಿಟಿಷ್ ಸರ್ಕಾರ ತನ್ನ ಸೈನ್ಯವನ್ನು ಬಳಸಿಕೊಂಡು ನೀರಾವರಿ ಇಲಾಖೆಯ ಸಹಕಾರದಿಂದ ಪೂರ್ವ ಬಂಗಾಲದಲ್ಲಿದ್ದ ಎಲ್ಲ ಅಣೆಕಟ್ಟುಗಳನ್ನು ಮತ್ತು ಸ್ಥಾವರಗಳನ್ನು ಅಗೆದು ಉರುಳಿಸುವ  ಕೆಲಸಮಾಡುವಂತೆ ಅವರ ತಂದೆಗೆ ಆದೇಶವನ್ನು ಕಳುಹಿಸಿತು. ನೀರಾವರಿ ಇಲಾಖೆಯಲ್ಲಿ ಚೀಫ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವೀಣಾ ಅವರ ತಂದೆ ಬ್ರಿಟಿಷ್ ಸರ್ಕಾರದ ಈ ಕ್ರಮವನ್ನು ತಿರಸ್ಕರಿಸಿ ಎರಡು ಸಾಲಿನ ರಾಜಿನಾಮೆ ಕೊಟ್ಟು ಕೆಲಸದಿಂದ ಹೊರಬಂದರು. ಇದರಿಂದ ವಿಚಲಿತರಾದ ಅವರ ಹಿರಿಯ ಅಧಿಕಾರಿಗಳು ಕಾರಣ ಕೇಳಿ ಫೋನ್ ಮಾಡಿದಾಗ ಅವರ ತಂದೆ ಕೊಟ್ಟ ಉತ್ತರ: “ನನ್ನ ಕೆಲಸ ಕಟ್ಟುವುದೇ ಹೊರತು ಉರುಳಿಸುವುದಲ್ಲ.” ಇಂತಹ ತಂದೆಯ ನಡೆನುಡಿಗಳು ವೀಣಾದಿಯವರ ಮನಸ್ಸಿನ ಮೇಲೆ ಅಚ್ಚೊತ್ತಿತ್ತು. ಅವರ ಜೀವನದ ಎಲ್ಲ ಬೌದ್ಧಿಕ ನಿರ್ಧಾರಗಳ ಹಿಂದೆ ತಂದೆಯವರ ವೈಚಾರಿಕತೆ ಮತ್ತು ವಿವೇಚನೆಯ ಪ್ರಭಾವವಿತ್ತು.

ಎರಡನೆಯ ಜಾಗತಿಕ ಸಮರದ ಅತ್ಯಂತ ದಟ್ಟವಾದ ರಾಜಕೀಯ ಪರಿಸರದಲ್ಲಿ ಬೆಳೆದ ವೀಣಾದಿ ಹಲವಾರು ಕ್ಷಿಪ್ರ ರಾಜಕೀಯ ಬದಲಾವಣೆಗಳಿಗೆ ಸಾಕ್ಷಿಯಾದರು. ಐ.ಎನ್.ಎ ವಿಚಾರಣೆ, ಮಹಾತ್ಮ ಗಾಂಧಿಯವರ ಕಲ್ಕತ್ತೆಗೆ ಆಗಮನ, ಕಲ್ಕತ್ತೆಯಲ್ಲಿ ಕಾಂಗ್ರೆಸ್ ಅಧಿವೇಶನ ಮುಂತಾದ ಕಾರ್ಯಕ್ರಮಗಳಲ್ಲಿ ಕಲ್ಕತ್ತಾದ ವಿದ್ಯಾರ್ಥಿ ಸಮುದಾಯಕ್ಕೆ ಹಲವಾರು ರಾಜಕೀಯ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು, ಸ್ವಯಂಸೇವಕರಾಗಿ ಸಮ್ಮೇಳನಗಳಲ್ಲಿ ಭಾಗವಹಿಸುವುದು, ಗುಂಡಿನ ದಾಳಿಯಾದಾಗ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಮಾಡುವುದೇ ಮುಂತಾದ ಕಾರ್ಯಗಳಲ್ಲಿ ವೀಣಾದಿ ತಮ್ಮನ್ನು ತೊಡಗಿಸಿಕೊಂಡರು. ಅಶುತೋಷ್ ಕಾಲೇಜಿನ ಹುಡುಗಿಯರ ಯೂನಿಯನ್ನಿನ ಕಾರ್ಯದರ್ಶಿಯಾಗಿ ವೀಣಾ ಹಲವಾರು ಸಂಘಟನಾ ಜವಾಬ್ದಾರಿಗಳನ್ನು ಹೊತ್ತುಕೊಂಡರು. ಹಿಂದೂ ಕಾನೂನಿನ ಸುಧಾರಣೆಗೆಂದು ಮಾಡಿದ ರಾಮರಾವ್ ಸಮಿತಿಯವರನ್ನು ಬೆಂಬಲಿಸಿ ಸಭೆಗಳನ್ನು ಏರ್ಪಡಿಸಿದರು. 1946ರಲ್ಲಿ ಡಾಲ್‍ಹೌಸಿ ಚೌಕದಲ್ಲಿ ನಡೆದ ಗೋಲಿ ಬಾರ್‍ನಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಮೃತಪಟ್ಟಾಗ ಅದನ್ನು ಪ್ರತಿಭಟಿಸಿದ ಬೃಹತ್ ಪ್ರತಿಭಟನೆಯ ಸಂಘಟನೆಯ ವೀಣಾದಿ ತೊಡಗಿಕೊಂಡಿದ್ದರು. ದೇಶ ಸ್ವತಂತ್ರಗೊಂಡ ನಂತರ ಬಂಗಾಲದ ನೌಖಾಲಿಯಲ್ಲಿ ನಡೆದ ಹಿಂದೂ ಮುಸ್ಲಿಂರ ನಡುವಿನ ಕಗ್ಗೊಲೆಯ ಸಂದರ್ಭದಲ್ಲಿ ಅದರ ಉಪಶಮನಕ್ಕಾಗಿ ಗಾಂಧಿ ಕಲ್ಕತ್ತೆಯಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ- ಈ ಎಲ್ಲ ಘಟನೆಗಳನ್ನು ನೋಡುತ್ತಾ ಬೆಳೆದರು.

ವೀಣಾ ಮಜುಂದಾರ್ ಅಂದಿನ ಪ್ರತಿಷ್ಠಿತ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದವರು. ಹಲವಾರು ರಂಗಗಳಲ್ಲಿ ಕೆಲಸ ಮಾಡಿ ವಿಶಾಲ ಅನುಭವ  ಹೊಂದಿದ್ದರು. ಕಲ್ಕತ್ತೆಯಿಂದ ಆರಂಭವಾದ ಅವರ ಕಲಿಕೆಯ ಹಾದಿ ಬನಾರಸ್, ಪಾಟ್ನಾ, ದೆಹಲಿ, ಸಿಮ್ಲಾ, ಆಕ್ಸ್ ವರ್ಡ್ ವರೆಗೂ ವ್ಯಾಪಿಸಿತ್ತು. ಹೆಚ್ಚಿನ ಓದಿಗೆಂದು  ಆಕ್ಸ್ ವರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದ ವೀಣಾದಿ ಅಲ್ಲಿನ ಶಿಕ್ಷಣ ಶೈಲಿ ಗುಣಮಟ್ಟದಿಂದ ಆಕರ್ಷಿತರಾಗಿದ್ದರು. ಮಹಾತ್ಮ ಗಾಂಧಿಯವರ ಹತ್ಯೆಯಾದಾಗ ಅವರು ಆಕ್ಸ್ ವರ್ಡ್ ನಲ್ಲಿದ್ದರು. ಅಲ್ಲಿನ ಭಾರತೀಯರಿಗೆ ಈ ಸುದ್ದಿಯಿಂದ ಆದ ಆಘಾತ ಮತ್ತು ಅವರು ಗಾಂಧಿಯ ನೆನಪಿಗೆ ನಡೆಸಿದ ಶ್ರದ್ಧಾಂಜಲಿ ಕಾರ್ಯಕ್ರಮದ ವಿವರಣೆ ಹೃದಯಂಗಮವಾಗಿದೆ.

ಮೊದಲಿಗೆ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಕಾಲೇಜು ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ವೀಣಾದಿ ಅಲ್ಲಿಯೂ ತಮ್ಮ ವಿಚಾರಗಳ ಮೂಲಕ ಬಿರುಗಾಳಿಯನ್ನೆಬ್ಬಿಸುತ್ತಾರೆ. ಅಲ್ಲಿನ ಪರೀಕ್ಷಾ ಪದ್ಧತಿಯನ್ನು ಬದಲಿಸುವಷ್ಟು ಪ್ರಭಾವ ಅವರಿಗಿರದಿದ್ದರೂ ಶಿಕ್ಷಣದ ಪಠ್ಯ ಮತ್ತು ಶಿಕ್ಷಣದ ಕ್ರಮವನ್ನು ಬದಲಿಸಲು ಪ್ರಯತ್ನಿಸುತ್ತಾರೆ. ಸಂಶೋಧನೆಯಲ್ಲಿ ಶಿಸ್ತು ಮತ್ತು ಪರಿಣಿತಿಯನ್ನು ಹೆಚ್ಚಿಸುವುದು ಮತ್ತು ವಿವಿಧ ಜ್ಞಾನ ಶಿಸ್ತುಗಳ ನಡುವೆ ಸಂಬಂಧಗಳನ್ನು ಕಲ್ಪಿಸುವುದು ಅವರ ಮುಖ್ಯ ಕಾರ್ಯವಾಗಿತ್ತು. ಅವರು ಕೆಲವು ಸ್ನೇಹಿತರೊಂದಿಗೆ ಸೇರಿಕೊಂಡು “ಶಿಕ್ಷಣಕ್ಕಾಗಿ ಬಿಹಾರ ನಾಗರೀಕರ ಸಮಿತಿ” ಯನ್ನು ರಚಿಸಿಕೊಂಡು ಉಪನ್ಯಾಸಗಳನ್ನು ಏರ್ಪಡಿಸುತ್ತಾ ಶಾಲಾ ಮತ್ತು ಕಾಲೇಜು ಶಿಕ್ಷಣದ ಸುಧಾರಣೆ ಮತ್ತು ಅನುವಾದದ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗುತ್ತಾರೆ. 1950ರ ಕೊನೆಯ ವೇಳೆಗೆ ಬಿಹಾರದ ವಿಶ್ವವಿದ್ಯಾಲಯದ ನಿಯಂತ್ರಣಕ್ಕೆ ಸರ್ಕಾರವು ತರಲು ಹೊರಟಿದ್ದ ಶಿಕ್ಷಣ ಮಸೂದೆಯನ್ನು ಪಾಟ್ನಾ ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು ಪ್ರತಿಭಟಿಸಿ ಒಂದು ದೊಡ್ಡ ಹೋರಾಟವನ್ನು ಸಂಘಟಿಸಿತ್ತು. 1956ರಲ್ಲಿ ಪಾಟ್ನಾ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಹಲವಾರು ಒಳಸುಳಿಗಳನ್ನು ಅವರು ಅರ್ಥಮಾಡಿಕೊಂಡರು.

ಪಾಟ್ನಾ ವಿಶ್ವವಿದ್ಯಾಲಯದಲ್ಲಿದ್ದಾಗ ವಿಶ್ವವಿದ್ಯಾಲಯದ ಧನಸಹಾಯಕ ಆಯೋಗವು ಅವರಿಗೆ ಶಿಕ್ಷಣದ ಅಧಿಕಾರಿಯ ಹುದ್ದೆಗೆ ಆಹ್ವಾನಿಸಿತು. ವಿಶ್ವವಿದ್ಯಾಲಯದಲ್ಲಿದ್ದಾಗ ಶಿಕ್ಷಣ ಸಂಸ್ಥೆಯ ಸಣ್ಣ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದುದು, ಯುಜಿಸಿಯ ಶಿಕ್ಷಣ ಅಧಿಕಾರಿಯಾದಾಗ ಇದೇ ಸಮಸ್ಯೆಗಳನ್ನು ಬೃಹತ್ ಕ್ಯಾನ್‍ವಾಸಿನಲ್ಲಿ ನೋಡುವ ಅವಕಾಶ ಸಿಕ್ಕಿತು. ಕೊಠಾರಿ ಆಯೋಗದ ಜೊತೆ ಕೆಲಸ ಮಾಡಿದ್ದು ವೀಣಾದಿಯವರ ಶಿಕ್ಷಣ ಕ್ಷೇತ್ರದ ಅನುಭವವನ್ನು ಹೆಚ್ಚಿಸಿಕೊಳ್ಳಲು ನೆರವು ನೀಡಿತು. ಪ್ರಜಾಪ್ರಭುತ್ವ ಮತ್ತು ಶಿಕ್ಷಣಕ್ಕಿರುವ ಸಂಬಂಧವನ್ನು ಗಟ್ಟಿಗೊಳಿಸಬೇಕೆಂಬುದರ ಅಗತ್ಯಕ್ಕೆ ಕೊಡಬೇಕಾದ ಮಹತ್ವ ಮನದಟ್ಟಾಯಿತು. ಇಲ್ಲಿ ಕೆಲಸ ಮಾಡುತ್ತಿರುವಾಗಲೇ ಶಿಮ್ಲಾದಲ್ಲಿದ್ದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‍ನಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆಯನ್ನು ಕುರಿತು ಅಧ್ಯಯನ ಮಾಡಲು ಎರಡು ವರ್ಷದ ಫೆಲೋಶಿಪ್ ಸಿಕ್ಕಿತು. ಈ ಅವಧಿಯಲ್ಲಿ ಮಾಡಿದ ಸಂಶೋಧನೆಯ ಎರಡು ಪ್ರಬಂಧಗಳನ್ನು ‘ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆ’ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಅದೇ ವೀಣಾದಿಯವರ ಮೊದಲ ಪ್ರಕಟಿತ ಹೊತ್ತಿಗೆ.

ಶಿಮ್ಲಾದಲ್ಲಿನ್ನೂ ಅಧ್ಯಯನ ಮಾಡುತ್ತಿರುವಾಗಲೇ ಒರಿಸ್ಸಾದ ಬೆಹ್ರಾಮ್‍ಪುರದ ವಿಶ್ವವಿದ್ಯಾಲಯವು ವೀಣಾದಿಗೆ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರ ಹುದ್ದೆಗೆ ಆಹ್ವಾನ ನೀಡಿತು. ಸಿಮ್ಲಾದಿಂದ ವೀಣಾದಿ ಬೆಹ್ರಾಮ್‍ಪುರ್ ವಿಶ್ವವಿದ್ಯಾಲಯಕ್ಕೆ ಬಂದದ್ದು ಅವರಿಗೆ ವ್ಯಕ್ತಿಗತವಾಗಿ ಮತ್ತು ವಿಶ್ವವಿದ್ಯಾಲಯವೆರಡರ ದೃಷ್ಟಿಯಿಂದಲೂ ಮಹತ್ತರವಾದ ಲಾಭವಾಯಿತು. ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಬೆಹ್ರಾಮ್‍ಪುರಕ್ಕೆ ಹೋದಾಗ ಅದೊಂದು ಬೇರೆಯೇ ಆದ ಜಗತ್ತು ಆಗಿತ್ತು. ಅಲ್ಲಿನ ಶಿಕ್ಷಣ ವ್ಯವಸ್ಥೆ ಪೂರಾ ಕುಸಿದಿತ್ತು. ಪರೀಕ್ಷಾ ಪದ್ಧತಿಯೂ ಸಮರ್ಪಕವಾಗಿರಲಿಲ್ಲ. ಸಂಶೋಧನೆಗಳು ತುಂಬಾ ಚಿಂತಾಜನಕವಾಗಿತ್ತು. ಶಿಕ್ಷಣದ ಪಠ್ಯವನ್ನು ಪುನರ್ರಚಿಸಬೇಕಿತ್ತು. ಇಂತಹ ಹಿನ್ನೆಲೆಯಲ್ಲಿ ಯುವ ಸಂಶೋಧಕರಿಗೆ ಸಂಶೋಧನಾ ವಿಧಾನಗಳಲ್ಲಿ ತರಬೇತಿ ನೀಡುವ ಅಗತ್ಯವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅಕೆಡಮಿಕ್ ಕೌನ್ಸಿಲ್‍ನ ಸದಸ್ಯರಿಗೆ ಶಿಕ್ಷಣ ಆಯೋಗದ ಆಶಯಗಳ ಬಗ್ಗೆ ಮನದಟ್ಟು ಮಾಡಿಕೊಡಬೇಕಾದ ಅವಶ್ಯಕತೆಯಿತ್ತು. ಹದಿನಾರು ತಿಂಗಳುಗಳ ಕಾಲ ಈ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ ಅನುಭವ ವೀಣಾದಿಯವರ ತಿಳುವಕೆಯ ಶ್ರೀಮಂತಿಕೆಗೆ ಕಾರಣವಾಯಿತು. ಈ ಮಧ್ಯೆ ಧನಸಹಾಯ ಆಯೋಗದಿಂದ ಮತ್ತೆ ಬರಲು ಒತ್ತಾಯದ ಆಹ್ವಾನ ಬಂದೊಡನೆ ವೀಣಾದಿ ದೆಹಲಿಗೆ ಮರಳಿದರು.

1975ನೇ ವರ್ಷವನ್ನು ಅಂತರರಾಷ್ಟ್ರೀಯ ಮಹಿಳಾ ವರ್ಷವೆಂದು ಘೋಷಿಸಿ, ವಿಶ್ವಸಂಸ್ಥೆ ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಅವರ ದೇಶದಲ್ಲಿನ ಮಹಿಳೆಯರ ಸ್ಥಿತಿಗತಿಗಳನ್ನು ಕುರಿತಂತೆ ವರದಿಯನ್ನು ಸಲ್ಲಿಸುವಂತೆ ಕೇಳಿಕೊಂಡಿತ್ತು. ಆ ಸಂದರ್ಭದಲ್ಲಿ ಮಹಿಳಾ ಪ್ರಧಾನಿಯನ್ನು ಹೊಂದಿದ್ದ ಕೆಲವೇ ರಾಷ್ಟ್ರಗಳಲ್ಲಿ ಭಾರತ ಕೂಡಾ ಒಂದಾಗಿತ್ತು. ಈ ಎಲ್ಲದರ ಹಿನ್ನೆಲೆಯಲ್ಲಿ 1971ರ ಸೆಪ್ಟೆಂಬರ್ 22ರಂದು ಶಿಕ್ಷಣ ಸಚಿವಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆ ಮಂಡಿಸಿದ ನಿರ್ಣಯದ ಪರಿಣಾಮವಾಗಿ ಆಗ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕಿಯಾಗಿದ್ದ ಫುಲರೇಣು ಷಾ ಅವರ ನೇತೃತ್ವದಲ್ಲಿ ಮಹಿಳೆಯರ ಸ್ಥಾನಮಾನದ ಅಧ್ಯಯನಕ್ಕೆಂದು ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯ ಸದಸ್ಯರಾಗಿ ವೀಣಾ ಮಜುಂದಾರ್, ಲೋತಿಕಾ ಸರ್ಕಾರ್, ಶಕುಂತಲಾ ಮಾಸಾನಿ, ಮುಂತಾದವರು ಸದಸ್ಯರಾಗಿದ್ದರು. ಶಕುಂತಲಾ ಮಾಸಾನಿಯವರನ್ನು ಇದರ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಮೊದಲ ಎರಡು ವರ್ಷಗಳು ಈ ಸಮಿತಿಯಿಂದ ಏನೂ ನಿರೀಕ್ಷಿತ ಕಾರ್ಯ ನಡೆಯಲಿಲ್ಲ. ಶಕುಂತಲಾ ಮಾಸಾನಿಯವರ ಕಾರ್ಯಶೈಲಿಯಿಂದ ಬೇಸತ್ತು ಕೆಲವು ಸದಸ್ಯರು ಸಮಿತಿಯಿಂದ ಹೊರಬರಲು ಪ್ರಯತ್ನಿಸಿದರು. ಆಗ ಕೇಂದ್ರದ ವಿದ್ಯಾ ಮಂತ್ರಿಗಳಾಗಿದ್ದ ಪ್ರೊ. ನುರುಲ್ ಹಸನ್ ಮತ್ತು ಐಸಿಎಸ್‍ಎಸ್‍ಆರ್‍ನ ಕಾರ್ಯದರ್ಶಿಗಳಾಗಿದ್ದ ಪ್ರೊ. ನಾಯಕ್ ಇಬ್ಬರೂ ಮಧ್ಯೆ ಪ್ರವೇಶಿಸಿ ಇಡಿ ಸಮಿತಿಯನ್ನು ಪುನರ್ರಚಿಸಿದರು. ಈ ಹೊಸ ಸಮಿತಿಗೆ ವೀಣಾ ಮಜುಂದಾರ್ ಅವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಮಾಡಿದರು. ಈ ಸಮಿತಿಯು 1975ರಲ್ಲಿ ಮೆಕ್ಸಿಕೋನಲ್ಲಿ ನಡೆಯಲಿದ್ದ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಭಾರತ ಸರ್ಕಾರವು ಮಂಡಿಸಲು ಈ ವರದಿಯನ್ನು ಅತ್ಯಂತ ಶ್ರಮವಹಿಸಿ ಸಿದ್ಧಗೊಳಿಸಿತು. ಇಂದಿಗೂ ಭಾರತೀಯ ಹೆಣ್ಣಿನ ವಾಸ್ತವದ ಹಲವಾರು ಸತ್ಯಗಳನ್ನು ಬಿಚ್ಚಿಡುವ ಈ ‘ಸಮಾನತೆಯೆಡೆಗೆ’ ವರದಿ ಸರ್ಕಾರಕ್ಕೆ ಮತ್ತು ಅಧ್ಯಯನಕಾರರಿಗೆ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಮಹತ್ವದ ಮಾರ್ಗದರ್ಶನ ನೀಡುತ್ತದೆ.

ಎಂಭತ್ತರ ದಶಕದಲ್ಲಿ ವರದಕ್ಷಿಣೆ ಸಾವು, ಅತ್ಯಾಚಾರ ವಿರೋಧಿಸಿ ವ್ಯಾಪಕವಾಗಿ ನಡೆಯುತ್ತಿದ್ದ ಎಲ್ಲ ಪ್ರತಿಭಟನಾ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿರುತ್ತಿದ್ದ ವೀಣಾ ಕ್ರಿಯಾಶಾಲಿತ್ವಕ್ಕೆ ಮತ್ತೊಂದು ಹೆಸರಾಗಿದ್ದರು. ತಮ್ಮ ನಡುವೆ ನಡೆಯುತ್ತಿದ್ದ ಯಾವುದೇ ಮಹಿಳಾ ಪರ ಚಟುವಟಿಕೆಗಳಿಗೆ ಉದಾರ ಹಸ್ತ ನೀಡುತ್ತಿದ್ದ ವೀಣಾ ಅವರ ಕಾಲದ ಎಲ್ಲ ಮಹಿಳಾ ಕ್ರಿಯಾ ಚಟುವಟಿಕೆಗಳಿಗೂ ಬೆಂಬಲವಾಗಿ ನಿಂತವರು. ‘ಮಾನುಷಿ’ ಪತ್ರಿಕೆಯ ಆರಂಭದ ದಿನಗಳಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್ ಕಟ್ಟಡದಲ್ಲಿಯೇ ಅದಕ್ಕೆ ಸ್ಥಳ ಒದಗಿಸಿದವರು ವೀಣಾ. ಆರಂಭದ ದಿನಗಳಲ್ಲಿ ಅದರ ಭಾಗವಾಗಿಯೇ ಕೆಲಸ ಮಾಡಿದ ವೀಣಾ, ನಂತರ ಆ ಪತ್ರಿಕೆಯೊಂದಿಗೆ ಹುಟ್ಟಿದ ಅಭಿಪ್ರಾಯ ಬೇಧದಿಂದಾಗಿ ಹೊರನಡೆದರು.

ಇಂಡಿಯನ್ ಕೌನ್ಸಿಲ್ ಫಾರ್ ಸೋಷಿಯಲ್ ರಿಸರ್ಚ್ ಸಂಸ್ಥೆಯು 1977ರಲ್ಲಿ ‘ಮಹಿಳಾ ಅಧ್ಯಯನದ ಸಲಹಾ ಸಮಿತಿ’ ಯನ್ನು ರಚಿಸಿದಾಗ ವೀಣಾ ಅದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಪ್ರಕಟಣೆಯಲ್ಲಿ ‘ಮಹಿಳಾ ಅಧ್ಯಯನ’ದ ಧ್ಯೇಯೋದ್ದೇಶಗಳನ್ನು ಕುರಿತಂತೆ ಹೀಗೆ ಹೇಳಲಾಗಿದೆ. “ದೀರ್ಘ ಕಾಲಾವಧಿಯಲ್ಲಿ ಮಹಿಳೆಯರ ಸ್ಥಾನಮಾನವನ್ನು ಪ್ರಭಾವಿಸುವ ಸಾಮಾಜಿಕ ಮತ್ತು ಆರ್ಥಿಕ ಸಂಸ್ಥೆಗಳ ಪ್ರಮುಖ ಮಾದರಿಗಳನ್ನು ಅನಾವರಣಗೊಳಿಸಲು ಅಗತ್ಯವಾದ ಮಾಹಿತಿಗಳನ್ನು ಶೋಧಿಸುವ ಮತ್ತು ವಿಶ್ಲೇಷಿಸುವ ಕೆಲಸವನ್ನು ಮಹಿಳಾ ಅಧ್ಯಯನ ಮಾಡಬೇಕಿದೆ.” ಎಂಬ ಮೊದಲ ಬಾರಿಗೆ, ಜಗತ್ತಿನಾದ್ಯಂತ ಎಲ್ಲಾ ಸಮಾಜ ವಿಜ್ಞಾನಗಳು ಪುರುಷ ಕೇಂದ್ರಿತವೂ, ಪುರುಷ ಪೂರ್ವಾಗ್ರಹದಿಂದ ಕೂಡಿದವೂ ಆಗಿದ್ದವು ಎಂಬುದನ್ನು ಈ ಸಂದರ್ಭದಲ್ಲಿ ಪ್ರಕಟಿಸಲಾಯಿತು. ಹೀಗಾಗಿ 1982ರಲ್ಲಿ ‘ಅಖಿಲ ಭಾರತ ಮಹಿಳಾ ಅಧ್ಯಯನ ಸಂಘ’ ಮುಂಬೈಯ Sಓಆಖಿ ವಿಶ್ವ ವಿದ್ಯಾಲಯದಲ್ಲಿ ಜನ್ಮತಾಳಲು ಕಾರಣವಾಗುವುದರಲ್ಲಿ ವೀಣಾ ಅವರ ಪಾತ್ರವೂ ಹಿರಿದಾಗಿದೆ. ಮಹಿಳಾ ಪ್ರಶ್ನೆಗೆ ಹೊಸ ಭಾಷ್ಯ ಬರೆದು ‘ಮಹಿಳಾ ಅಧ್ಯಯನ’ವನ್ನು ಅಕೆಡಮಿಕ್ ಶಿಸ್ತಿನಾಚೆಗೂ ವಿಸ್ತರಿಸಿ ಅದಕ್ಕೆ ಕ್ರಿಯಾಶಾಲಿತ್ವದ ರಕ್ತ ತುಂಬಿದರು.

ಸಂವಿಧಾನದ ಆಶಯಗಳಿಗೆ ಭಂಗ ತರುವ ಸರ್ಕಾರದ ಯಾವುದೇ ಪ್ರಯತ್ನವಿರಲಿ, ಅಲ್ಲೆಲ್ಲಾ ವೀಣಾ ಎಚ್ಚರಿಕೆಯ ಘಂಟೆಯಾಗಿ ಮಧ್ಯೆ ಪ್ರವೇಶಿಸುತ್ತಿದ್ದರು. 1988ರ ರಾಷ್ಟ್ರೀಯ ಮುನ್ನೋಟ ಯೋಜನೆಯ ಸಂದರ್ಭದಲ್ಲಾಗಲೀ, 1994ರ ರಾಷ್ಟ್ರೀಯ ಜನಸಂಖ್ಯಾ ನೀತಿಯಲ್ಲಾಗಲೀ , ಹಾಗೆಯೇ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಕುರಿತಂತೆ ಪ್ರಧಾನಿ ಮನಮೋಹನ್ ಸಿಂಗ್‍ರಿಗೆ ಬರೆದ ಬಹಿರಂಗ ಪತ್ರದಲ್ಲಾಗಲೀ ವೀಣಾ ಅವರ ತೀಕ್ಷ್ಣ ವಿವೇಚನೆ ಮತ್ತು ಸಂವಿಧಾನ ನಿಷ್ಠೆಯ ಮನೋಧರ್ಮವನ್ನು ಕಾಣಬಹುದಾಗಿದೆ. ಅಂತರ್ರಾಷ್ಟ್ರೀಯ ನೆಲೆಯಲ್ಲಿಯೂ ಕೂಡ ಅವರು ಇಂತಹುದೇ ಸ್ಪಷ್ಟ ತಿಳುವಳಿಕೆಯನ್ನು ಹೊಂದಿದ್ದರು. ಅವರು ಭಾಗವಹಿಸಿದ ವಿಶ್ವಸಂಸ್ಥೆಯ ಎಲ್ಲಾ ಮಹಿಳಾ ಸಮ್ಮೇಳನಗಳಲ್ಲಿ ಇದೇ ಅಂಶವನ್ನು ಒತ್ತಿ ಹೇಳುತ್ತಾ ಬಂದಿದ್ದಾರೆ. 1970ರಿಂದ 1980ರವಗೆ ಭಾರತ ತುಳಿದ ಅಲಿಪ್ತ ನೀತಿಯ ಬೆಂಬಲವಾಗಿ ನಿಂತವರು.

“ಚರಿತ್ರೆ ನನಗೆ ಯಾವಾಗಲೂ ಅತ್ಯಂತ ಪ್ರಿಯವಾದ ವಿಷಯ. ಬೇರೆ ಚರಿತ್ರೆಯ ಪ್ರಿಯರೂ ಕೂಡ ನನ್ನ ಈ ಆತ್ಮಚರಿತ್ರೆಯನ್ನು ಇಷ್ಟಪಡುತ್ತಾರೆಂದು ಭಾವಿಸುವೆ. ಈ ಪುಸ್ತಕವು ನನ್ನ ಬದುಕಿನ ಹಾದಿಯಲ್ಲಿ ನನ್ನನ್ನು ಪ್ರಭಾವಿಸಿದ ಕಾಲ ಮತ್ತು ಜನರಿಗೆ ಈ ಪುಸ್ತಕವನ್ನು ಅರ್ಪಿಸಲು ಇಷ್ಟಪಡುತ್ತೇನೆ. ನನ್ನನ್ನು ಪ್ರಭಾವಿಸಿದ ನನ್ನ ತಂದೆ, ತಾಯಿಗಳು ಮತ್ತು ಕೆಲವು ಶಿಕ್ಷಕರ ಹೆಸರುಗಳನ್ನು ಮಾತ್ರ ಇಲ್ಲಿ ಹೇಳಿದ್ದೇನೆ. 1970ರ ನಂತರ ಸುಮಾರು 10,000ಕ್ಕೂ ಹೆಚ್ಚು ಮಹಿಳೆಯರು ಭಾರತ ಮರೆತಿರಬಹುದಾದ ಹೆಚ್ಚಿನ ಜನ ನನ್ನ ಗುರುಗಳಾಗಿದ್ದಾರೆ. ಮಹಿಳಾ ಅಧ್ಯಯನ ಮತ್ತು ಮಹಿಳಾ ಚಳುವಳಿಯೆಂಬ ಎರಡು ಹೋರಾಟಗಳ ಮೂಲಕ ಅವರ ಹೋರಾಟಗಳಲ್ಲಿ ನಾನು ಭಾಗಿಯಾಗಿದ್ದೇನೆ” ಎಂದು ವೀಣಾದಿ ಹೇಳುವ ಮೂಲಕ ಅವರ ಜೀವನದ ಮುಖ್ಯಧಾರೆಯನ್ನು ನಮಗೆ ಪರಿಚಯಿಸಿದ್ದರು. ವೀಣಾದಿ ಅದೆಷ್ಟು ವೈವಿಧ್ಯಮಯ ಕ್ಷೇತ್ರಗಳಲ್ಲಿ ಮತ್ತು ಸ್ಥಳಗಳಲ್ಲಿ ಅಧ್ಯಯನ ನಡೆಸಿದ್ದರೋ ಅಷ್ಟೇ ವೈವಿಧ್ಯಮಯ ಕ್ಷೇತ್ರಗಳಲ್ಲಿ ದುಡಿದ್ದಾರೆ. ಇದರ ವೇಗ ಎಷ್ಟೆಂದರೆ ಹದಿನಾಲ್ಕು ವರ್ಷಗಳಲ್ಲಿ ಏಳು ಉದ್ಯೋಗವನ್ನು ಬದಲಾಯಿಸಿದ್ದರು! ಇವರ ಈ ಮನೋವೃತ್ತಿಯನ್ನು ಕಂಡು ಅವರ ಸೋದರಿ ವಾಣಿ ಇವರಿಗೆ “ಉರುಳುವ ಕಲ್ಲು” ಎಂದು ಹೆಸರಿಟ್ಟಿದ್ದರು. ಹಾಗಾಗಿ ಈ ಪುಸ್ತಕ ಉರುಳುವ ಕಲ್ಲಿನ ನೆನಪಿನ ಸುರುಳಿಯಾಗಿದೆ.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ನಮ್ಮ ಕಥೆ/ ಉರುಳುವ ಕಲ್ಲಿನ ನೆನಪಿನ ಸುರುಳಿ – ಎನ್. ಗಾಯತ್ರಿ

  • October 24, 2018 at 11:57 am
    Permalink

    ಉತ್ತಮ ಗುಣಮಟ್ಟದ ಲೇಖನಗಳು ಪ್ರಕಟವಾಗಿವೆ. ಧನ್ಯವಾದಗಳು ಹಿತ್ಯಶಿಣಿ

    ಗಿರಿಜಾ

    Reply

Leave a Reply

Your email address will not be published. Required fields are marked *