ನಮ್ಮ ಕಥೆ / ಅಡ್ಡಗೋಡೆಗಳನ್ನೊಡೆದ ಹೋರಾಟಗಾರ್ತಿಯರು – ಎನ್. ಗಾಯತ್ರಿ

ತಮ್ಮ ಬದುಕಿನುದ್ದಕ್ಕೂ ಎದುರಾದ ಶೋಷಣಾತ್ಮಕ ಯಥಾಸ್ಥಿತಿಗೆ ಸವಾಲೆಸೆದು ಭಾರತದಲ್ಲಿ ಒಂದು ಮಹಿಳಾ ವಿಮೋಚನೆಯ ಆಂದೋಲನವನ್ನು ಕಟ್ಟಲು ಶ್ರಮಿಸಿದ ಹನ್ನೆರಡು ಹೋರಾಟಗಾರ್ತಿಯರನ್ನು ಕುರಿತ ಪುಸ್ತಕವಿದು. ಇವು ಅಸಾಮಾನ್ಯ ಬದುಕುಗಳ ಅಸಾಮಾನ್ಯ ಕಥೆಗಳು.

 

ಮಹಿಳಾ ಚರಿತ್ರೆಯನ್ನು ಮತ್ತು ಚಳುವಳಿಯನ್ನು ದಾಖಲಿಸಬೇಕೆಂಬ ಮಹದಾಶಯದಿಂದ ರಚಿತವಾದ ಪುಸ್ತಕ ಇದು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರೂ ಪುರುಷರೊಂದಿಗೆ ಬೀದಿಗಿಳಿದು ಹೋರಾಟ ನಡೆಸಿದರು ಎಂಬುದು ಕೇವಲ ಚರಿತ್ರೆಯ ಸುದ್ದಿಯಾಗದೆ, ಅದರೆಲ್ಲ ವಿವರಗಳು ದಾಖಲೆಯಾಗಬೇಕು ಮತ್ತು ಇದರ ಜೊತೆಗೆ ಈ ಕ್ರಿಯಾಶೀಲ ಮಹಿಳೆಯರು ಸ್ವಾತಂತ್ರ್ಯಾನಂತರದ ದಿನಗಳಲ್ಲಿ ನಡೆಸಿದ ಚಟುವಟಿಕೆಗಳು ಮತ್ತು ಕಟ್ಟಿದ ಚಳುವಳಿಗಳು ಚರಿತ್ರೆಯ ಭಾಗವಾಗಬೇಕು, ಎಂಬ ಉದ್ದೇಶದಿಂದ ಹಿರಿಯ ಪತ್ರಕರ್ತೆ ಪಾರ್ವತಿ ಮೆನನ್ ರವರು ಈ ಹೋರಾಟಗಾರ್ತಿಯರನ್ನು ಸಂದರ್ಶಿಸಿ ಅವರ ಅನುಭವಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಪುಸ್ತಕದಲ್ಲಿ ಚಿತ್ರಿತವಾಗಿರುವ ಅಹಲ್ಯಾ ರಾಂಗ್ಣೇಕರ್, ಇಳಾ ಭಟ್ಟಾಚಾರ್ಯ, ಕನಕ್ ಮುಖರ್ಜಿ, ಲಕ್ಷ್ಮಿ ಸೆಹಗಲ್, ಮಲ್ಲು ಸ್ವರಾಜ್ಯಂ, ಮಂಗಳೇಶ್ವರಿ ದೇಬ್ ಬರ್ಮಾ, ಮಂಜರಿ ಗುಪ್ತಾ, ಮೋಟೂರು ಉದಯಂ, ಪಂಕಜ ಆಚಾರ್ಯ, ಪಾಪ್ಪ ಉಮಾನಾಥ್, ಸುಶೀಲಾ ಗೋಪಾಲನ್ ಮತ್ತು ವಿಮಲಾ ರಣದಿವೆ – ಈ ಹನ್ನೆರಡು ಮಂದಿ ಧೀರ ಮಹಿಳೆಯರು ಭಾರತವು ಬ್ರಿಟೀಷರ ಆಳ್ವಿಕೆಯ ದಬ್ಬಾಳಿಕೆಯಲ್ಲಿ ನಲುಗುತ್ತಿದ್ದಾಗ ಅದರ ವಿರುದ್ಧ ಹೋರಾಡಲೆಂದೇ ಹೋರಾಟದ ಬದುಕಿಗೆ ಧುಮುಕಿದವರು. ಇವರೆಲ್ಲಾ ವೈವಿಧ್ಯಮಯ ಪ್ರದೇಶ ಮತ್ತು ಹಿನ್ನೆಲೆಯಲ್ಲಿ ಹುಟ್ಟಿ ಬಂದಿರುವರಾದರೂ ಅವರಲ್ಲಿ ಹಲವಾರು ಸಮಾನ ಅಂಶಗಳನ್ನು ಗುರುತಿಸಬಹುದಾಗಿದೆ. ಹಾಗೆಯೇ ಅವರ ವಿಶಿಷ್ಟ ಪ್ರತಿಭೆಗಳೂ ಬೆರಗನ್ನು ಹುಟ್ಟಿಸುತ್ತವೆ.

ಇಲ್ಲಿರುವ ಮಹಿಳೆಯರೆಲ್ಲಾ ರಾಜಕೀಯಕ್ಕೆ ಪ್ರವೇಶ ಮಾಡಿದ್ದು ಭಾರತವು ಬ್ರಿಟೀಶರ ಆಳ್ವಿಕೆಯಲ್ಲಿದ್ದಾಗ. ಅದೂ ಅವರೆಲ್ಲಾ ತಮ್ಮ ಎಳೆಯ ವಯಸ್ಸಿನಲ್ಲೇ. ವಿಮಲ್ ರಣದಿವೆ, ಅಹಲ್ಯಾ ರಂಗ್ಣೇಕರ್, ಕನಕ್ ಮುಖರ್ಜಿ,ಸುಶೀಲಾ ಗೋಪಾಲನ್, ಪಾಪ್ಪ ಉಮಾನಾಥ್ ಮುಂತಾದವರೆಲ್ಲಾ ಚಿಕ್ಕ ವಯಸ್ಸಿನಲ್ಲೇ ಹೋರಾಟದ ಕಣಕ್ಕೆ ಧುಮುಕಿ ಸೆರೆಮನೆವಾಸದ ರುಚಿಯನ್ನು ಕಂಡವರು.   ಇವರಲ್ಲಿ ಬಹಳ ಮಂದಿಗೆ ಅವರ ರಾಜಕೀಯ ಪಯಣದಲ್ಲಿ ಕಾಂಗ್ರೆಸ್ಸೇ ಮೊದಲ ನಿಲ್ದಾಣ. ಗಾಂಧೀಜಿ ನೇತೃತ್ವದ ಚಳುವಳಿಗಳಾದ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಮುಂತಾದವುಗಳಿಂದ ಆಕರ್ಷಿತರಾಗಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಗಾಂಧಿ ಚಳುವಳಿಯಲ್ಲಿ ತೊಡಗಿಕೊಂಡಿದ್ದಾಗಲೂ ಈ ಮಹಿಳೆಯರು ಬಡವರು ಮತ್ತು ಕಾರ್ಮಿಕರ ಸಮಸ್ಯೆಗಳಿಗಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಗಾಂಧಿಯವರ ಮೃದು ಧೋರಣೆ ಮತ್ತು ಕಾಂಗ್ರೆಸ್ಸಿನ ನೀತಿಯಿಂದ ಭ್ರಮನಿರಸನವಾದಾಗ ಅವರಲ್ಲಿನ ತರ್ಕವಿವೇಚನೆಯಿಂದಾಗಿ ಕಮ್ಯೂನಿಸ್ಟ್ ಪಕ್ಷಗಳತ್ತ ಮುಖ ಮಾಡಿದವರು.

ಇವರ ನಡುವೆ ಅದೆಂತಹ ಕಲಾವಿದೆಯು ಹೊರಹೊಮ್ಮಿದ್ದಾರೆ, ಎಂದರೆ ಅಚ್ಚರಿಯಾಗದೇ ಇರದು. ವಿಮಲಾ ರಣದಿವೆಯವರು ಸುಂದರಿಯಾಗಿದ್ದು ನುರಿತ ಹವ್ಯಾಸಿ ನಟಿಯಾಗಿ ಹೆಸರು ಮಾಡಿದ್ದರು. ಅವರು ಸುಮಾರು ಆರು ಚಲನ ಚಿತ್ರಗಳಲ್ಲಿ ನಟಿಸಿದ್ದರು. ಜ್ಯೋತ್ಸ್ನಾ ಭೋಲೆಯವರ ’ಆಶೀರ್ವಾದ’ ನಾಟಕದಲ್ಲಿ ಅಭಿನಯಿಸಿದ್ದ ವಿಮಲಾ ಅವರ ಅಭಿನಯವನ್ನು ನೋಡಲೆಂದೇ ಮುಂಬೈನ ಅಪೆರಾ ಹೌಸ್ ನಲ್ಲಿ ಜನ ಕಿಕ್ಕಿರಿದಿದ್ದರು. ಶ್ರೇಷ್ಠ ಕಲಾವಿದೆಯಾಗಿದ್ದ ಮೋಟೂರು ಉದಯಂ ಆಂಧ್ರದ ಜಾನಪದ ಕಲಾಜಗತ್ತಿನ ದಂತಕಥೆಯಾಗಿದ್ದ ನಾಸರ್ ರವರಲ್ಲಿ ’ಬುರ್ರಾ ಕಥಾ”ದಲ್ಲಿ ತರಬೇತಿ ಪಡೆದಿದ್ದರು. ಅವರು ಕಟ್ಟಿ, ಬೆಳೆಸಿದ ಸಾಂಸ್ಕೃತಿಕ ಕಲಾ ತಂಡಗಳಿಂದ ಜನರಿಗೆ ಸಾಮಾಜಿಕ, ರಾಜಕೀಯ ಜಾಗೃತಿ ಉಂಟುಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಹಲ್ಯಾ ರಂಗ್ಣೇಕರ್ ಕೂಡ ಅತ್ಯುತ್ತಮ ನಟಿ ಮತ್ತು ಶಾಸ್ತ್ರೀಯ ಸಂಗೀತದ ಹಾಡುಗಾರ್ತಿಯಾಗಿದ್ದರು. ಆಂಧ್ರದ ಮಲ್ಲು ಸ್ವರಾಜ್ಯಂ ’ಉಯ್ಯಲ” ಜೋಗುಳ ಪದವನ್ನು ವೈಚಾರಿಕಗೊಳಿಸಿ ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಜಮೀನ್ದಾರಿ ವಿರೋಧಿ ಹೋರಾಟಗಳಿಗೆ ಸ್ವರಾಜ್ಯಂರವರ ಉಯ್ಯಲು ರಚನೆಗಳು ಅತ್ಯಂತ ಪ್ರಬಲ ಅಭಿವ್ಯಕ್ತಿ ಮಾಧ್ಯಮವಾಯಿತು.

ಇಲ್ಲಿನ ಕಥೆಗಳ ನಾಯಕಿಯರೆಲ್ಲ ಅವರ ಕಾಲದಲ್ಲಿದ್ದ ’ಕುಟುಂಬವಷ್ಟೇ ಹೆಣ್ಣಿನ ಜಗತ್ತು’ ಎಂಬ ಮಿಥ್ಯೆಯನ್ನು ಭೇದಿಸಿದವರು. ’ಮಹಿಳಾ ಪ್ರಶ್ನೆ’ಗೆ ವಿಶೇಷ ಅರ್ಥವ್ಯಾಪ್ತಿಯನ್ನು ಒದಗಿಸಿದವರು. ಕುಟುಂಬದ ಮತ್ತು ಸಾಮಾಜಿಕ ಸಂಪ್ರದಾಯಗಳನ್ನು, ಇಷ್ಟಾನಿಷ್ಟಗಳ ಅಡ್ಡಗೋಡೆಗಳನ್ನು ಮುರಿದು ಮಹಿಳೆಯರು ಹಿಂದೆಂದೂ ಸಾಧಿಸದಂತಹ ರಾಜಕೀಯ ಮತ್ತು ಸಾಮಾಜಿಕ ಉನ್ನತಿಯನ್ನು ಸಾಧಿಸಿದರು. ಸಾರ್ವಜನಿಕ ರಂಗದಲ್ಲಿ ಮಹಿಳೆಯರು ಭಾಗವಹಿಸುವುದು ಎಂದರೆ ಅವರನ್ನು ಮನೆಮುರುಕರು ಎಂದೇ ಭಾವಿಸುತ್ತಿದ್ದಂತಹ ಕಾಲದಲ್ಲಿ ಮನೆಯ ಜನರ ಪ್ರೀತಿ, ಅಭಿಮಾನ ಗಳಿಸಿಕೊಂಡು ಅವರ ಸಹಕಾರದಿಂದಲೇ ಸಮಾಜಮುಖಿಯಾಗಿ ಸಾರ್ವಜನಿಕ ಬದುಕಿಗೆ ಅರ್ಥವಂತಿಕೆ ತುಂಬಿದವರು.

ಇಲ್ಲಿನ ಎಲ್ಲ ನಾಯಕಿಯರು ಹೋರಾಟದ ಕಣದಲ್ಲಿದ್ದ ಸಂಗಾತಿಗಳನ್ನೇ ಮದುವೆಯಾಗಿರುವುದು ಒಂದು ವಿಶೇಷ. ಅದರಿಂದ ಅವರಿಗೆ ಅರ್ಥಪೂರ್ಣವಾಗಿ ಹೋರಾಟದಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಯಿತೆಂಬುದರಲ್ಲಿ ಎರಡು ಮಾತಿಲ್ಲ. ಆದರೂ ಇವರೆಲ್ಲರೂ ತಮ್ಮ ಬದುಕಿನ ಯೌವ್ವನಾವಸ್ಥೆಯಲ್ಲಿದ್ದಾಗಲೇ ಸೆರೆಮನೆವಾಸ, ಅಜ್ಞಾತವಾಸ  ಮತ್ತು ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬೇಕಾದ್ದರಿಂದ ಒಂಟಿತನದ ಕಷ್ಟವನ್ನೂ ಎದುರಿಸಬೇಕಾಗಿತ್ತು. ಈ ಹೋರಾಟಗಾರ್ತಿಯರಿಗೆ ಬೆಂಬಲವಾಗಿ ನಿಂತವವರು, ಸ್ಪೂರ್ತಿದಾಯಕರಾದವರು ಅವರ ತಂದೆ, ಸೋದರ, ಮುಂತಾದ ಪುರುಷ ಸಂಬಂಧಿಗಳೇ ಆಗಿದ್ದರು, ಎಂಬುದು ಕುತೂಹಲಕಾರಿ ಅಂಶ. ಈ ಎಲ್ಲ ಪುರುಷರ ಅಕ್ಕರೆ, ಬೆಂಬಲವಿದ್ದೂ ತಮ್ಮ ಶೋಷಣೆಗೆ ಕಾರಣವಾದ ಪಿತೃಪ್ರಧಾನ ಮೌಲ್ಯಗಳನ್ನು ಈ ಧೀರ ಮಹಿಳೆಯರು ಗುರುತಿಸಿ ಅದರ ವಿರುದ್ಧ ಹೋರಾಡಿದ್ದು ಅವರ ವೈಚಾರಿಕ ನಿಖರತೆಗೆ ಸ್ಪಷ್ಟ ನಿದರ್ಶನ.

ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ಆರಂಭವಾಗಿದ್ದ ರಾಜ್ಯಮಟ್ಟದ ಹಲವಾರು ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಇವರು ಅವನ್ನೆಲ್ಲಾ  ಒಟ್ಟಾಗಿ ತಂದು ರಾಷ್ಟ್ರೀಯ ವೇದಿಕೆಯೊಂದನ್ನು ನಿರ್ಮಿಸುವುದರಲ್ಲಿ ಯಶಸ್ವಿಯಾದರು. ಸುಮಾರು ಇದರಲ್ಲಿರುವ ಎಲ್ಲಾ ನಾಯಕಿಯರು ೧೯೮೧ರಲ್ಲಿ ಚೆನ್ನೈನಲ್ಲಿ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ಯ ಸ್ಥಾಪಕ ಸದಸ್ಯೆಯರಾದರು. ಭಾರತದಲ್ಲಿ ಸರ್ಕಾರದ ಮಹಿಳಾ ವಿರೋಧಿ ನೀತಿಯನ್ನು ವಿರೋಧಿಸಲು ಒಂದು ಸದೃಢವಾದ ರಾಷ್ಟ್ರೀಯ ಮಹಿಳಾ ಸಂಘಟನೆಯೊಂದನ್ನು ರೂಪಿಸುವಲ್ಲಿ ಯಶಸ್ವಿಯಾದರು.

ಈ ಪುಸ್ತಕದಲ್ಲಿನ ಕಥೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ಈ ಎಲ್ಲ ಮಹಿಳೆಯರ ಬದುಕಿನಲ್ಲಿ ಕಂಡುಬರುವ ಸಾಮಾನ್ಯ ಎಳೆ, ಅವರೆಲ್ಲರ ಪ್ರಜ್ಞೆಯಲ್ಲಿ ಖಾಸಗಿ ಮತ್ತು ರಾಜಕೀಯ ಎನ್ನುವ ಪ್ರತ್ಯೇಕ ಅನುಭವ ವಲಯಗಳೇ  ಕಾಣದೇ ಇರುವುದು. ಇದು ಇವರಿಗಷ್ಟೇ ಅಲ್ಲ, ಇವರ ವಿಸ್ತರಿಸಿದ ಕುಟುಂಬಗಳಿಗೂ ಕೂಡ. ಈ ಅವಧಿಯಲ್ಲಿ ಈ ಹೋರಾಟಗಾರ್ತಿಯರು ಸೆರೆಮನೆಯಲ್ಲಿದ್ದಾಗ ಅವರ ಮಕ್ಕಳನ್ನು ಅವರ ಕುಟುಂಬದ ಇತರರು ಅಥವಾ ಸ್ನೇಹಿತರೋ ನೋಡಿಕೊಂಡು ತಮ್ಮ ಜವಾಬ್ದಾರಿಯನ್ನು ಮೆರೆದು ಇವರ ಚಟುವಟಿಕೆಗಳಿಗೆ ಒಂದು ಗೌರವವನ್ನು ತಂದುಕೊಟ್ಟಿದ್ದಾರೆ.

ಅಹಲ್ಯಾ ರಾಂಗ್ಣೇಕರ್, ತ್ರಿಪುರಾದಿಂದ ಇಳಾ ಭಟ್ಟಾಚಾರ್ಯ, ಕಲ್ಕತ್ತೆಯಿಂದ ಕನಕ್ ಮುಖರ್ಜಿ, ತೆಲಂಗಾಣದ ಗೆರಿಲ್ಲಾ ಹೋರಾಟಗಾರ್ತಿ ಮಲ್ಲು ಸ್ವರಾಜ್ಯಂ, ತ್ರಿಪುರಾದ ಮಂಗಳೇಶ್ವರಿ ದೇವ್ ಬರ್ಮಾ, ಪಾಪಾ ಉಮಾನಾಥ ಮತ್ತು ಸುಶೀಲಾ ಗೋಪಾಲನ್, ಮುಂತಾದವರು ರಾಜಕೀಯವಾಗಿಯೂ ಅಧಿಕಾರದ ನೆಲೆಯಲ್ಲಿ ಚುನಾವಣೆಗಳಲ್ಲಿ ಗೆದ್ದು ಬಂದವರು. ಕಾರ್ಪೊರೇಟ್ ಚುನಾವಣೆಗಳಿಂದ ಹಿಡಿದು ಶಾಸನ ಸಭೆ ಮತ್ತು ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಗೆದ್ದು ಬಂದ ನಾಯಕಿಯರಿವರು.

ನಮ್ಮ ದೇಶದ ಚರಿತ್ರೆಯಲ್ಲಿ ಅಮರಾಂಕಿತವಾಗಿರುವ ಹಲವಾರು ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳಲ್ಲೂ ಈ ಮಹಿಳೆಯರು ಭಾಗವಹಿಸಿದ್ದು ಇವು ಚರಿತ್ರೆಯ ಪುಟಗಳಲ್ಲಿ ದಾಖಲಾಗಿಲ್ಲದಿರಬಹುದು. ಈ ಪುಸ್ತಕ ಅಂತಹ ಕೆಲವು ಅಂಶಗಳನ್ನು ಪ್ರಕಟಪಡಿಸುತ್ತದೆ. ೧೯೪೬ರಲ್ಲಿ ಮುಂಬೈಯಲ್ಲಿ ರಾಯಲ್ ಇಂಡಿಯನ್ ನೇವಿಯ ನೌಕಾ ಸೈನಿಕರು ನಡೆಸಿದ ದಂಗೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರ ತಿರುವನ್ನು ನೀಡಿತು. ಆಗ ೨೪ರ ಹರೆಯದ ಅಹಲ್ಯಾ ರಾಂಗ್ಣೇಕರ್ ಮುಂಬೈ ಕಾರ್ಮಿಕ ಸಂಘಟನೆಗಳು ಈ ದಂಗೆಗೆ ಬೆಂಬಲ ಸೂಚಿಸಿ ಮುಷ್ಕರ ನಡೆಸುತ್ತಿದ್ದಾಗ, ತಾವೂ ಅದನ್ನು ಬೆಂಬಲಿಸಿ, ಮುಷ್ಕರನಿರತರಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಮುಂದಾದರು. ಇಪ್ಪತ್ತು ಮಹಿಳೆಯರ ಅವರ ತಂಡವು ಗೇಟ್ ವೇ ಆಫ್ ಇಂಡಿಯಾ ಬಳಿಯ ಹಡಗುಗಳ ತಂಗುದಾಣಕ್ಕೆ ದೊಡ್ಡ ದೊಡ್ಡ ಡಬ್ಬಾಗಳಲ್ಲಿ ಅಡಿಗೆಯನ್ನು ಹೊತ್ತುಕೊಂಡು ಒಯ್ದು ಸೈನಿಕರಿಗೆ ಕೊಟ್ಟು ಬರುತ್ತಿದ್ದರು.

೧೯೪೮ರಿಂದ ೧೯೫೧ರ ಅಕ್ಟೋಬರ್ ವರೆಗೆ ಮೂರು ವರ್ಷಗಳ ಕಾಲ ಗೋದಾವರಿ ಅರಣ್ಯ ಪ್ರದೇಶದಲ್ಲಿ ಗೆರಿಲ್ಲಾ ಪಡೆಯ ಕಮ್ಯಾಂಡರ್ ಆಗಿ ಕೆಲಸ ಮಾಡಿದ ತೆಲಂಗಾಣದ ಮಲ್ಲು ಸ್ವರಾಜ್ಯಂ ಅತ್ಯಂತ ಕಷ್ಟದ ಜೀವನವನ್ನು ಸವೆಸಿದವರು. ಮಹಿಳೆಯೊಬ್ಬಳು ಕಮ್ಯಾಂಡರ್ ಆಗಬೇಕಾದರೆ ಅವರು ಪುರುಷನಷ್ಟೇ ಈಜು, ಓಟ, ಗುರಿಯಿಟ್ಟು ಗುಂಡು ಹಾರಿಸುವುದರಲ್ಲೆಲ್ಲಾ ಸಮರ್ಥಳು ಎಂಬುದನ್ನು ಸಾಬೀತುಪಡಿಸಿ ಧೈರ್ಯ, ಸಾಹಸವನ್ನು ಮೆರೆಯಬೇಕಿತ್ತು. ಇವೆಲ್ಲವನ್ನು ಸಮರ್ಥವಾಗಿ ನಿಭಾಯಿಸಿದ ಸ್ವರಾಜ್ಯಂ ಗೆರಿಲ್ಲಾ ಹೋರಾಟಗಾರರಿಗೆ ತಕ್ಕುದಾದ , ಜವಾಬ್ದಾರಿಯುತವಾದ ಸ್ಥಾನವನ್ನಲಂಕರಿಸಿ ದಳವೊಂದರ ಕಮ್ಯಾಂಡರ್ ಆಗಿ ಕಾರ್ಯನಿರ್ವಹಿಸಿದರು.

ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಧಾರೆಗಳಲ್ಲಿ ಸುಭಾಷ್ ಚಂದ್ರ ಬೋಸರ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯು ನಡೆಸಿದ ಬ್ರಿಟಿಷರ ವಿರುದ್ಧ ಸೆಣೆಸಿದ ಹೋರಾಟಕ್ಕೆ ಪ್ರಮುಖ ಸ್ಥಾನವಿದೆ. ೧೯೪೩ರ ಜುಲೈ ೫ರಂದು ವೈದ್ಯೆಯಾದ ಲಕ್ಷ್ಮಿ ಸ್ವಾಮಿನಾಥನ್ ಸಿಂಗಪುರದಲ್ಲಿ ಸುಭಾಷ್ ಚಂದ್ರರನ್ನು ಭೇಟಿಯಾಗಿ ಅವರು ನಡೆಸುತ್ತಿದ್ದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಬೇಕೆಂದು ಕೇಳಿಕೊಳ್ಳುತ್ತಾರೆ. ಸುಭಾಷರು ತಾವು ಯೋಜಿಸಿದ್ದ ರಾಣಿ ಝಾಂಸಿ ರೆಜಿಮೆಂಟಿಗೆ ಲಕ್ಷ್ಮಿಯವರು ಕ್ಯಾಪ್ಟನ್ ಆಗಲು ಆಹ್ವಾನ ನೀಡುತ್ತಾರೆ. ಈ ಆಹ್ವಾನವನ್ನು ಸ್ವೀಕರಿಸಿದ ಲಕ್ಷ್ಮಿ, ಮುಂದೆ ತಮ್ಮ ಶೌರ್ಯ, ಸಾಹಸವನ್ನು ಮೆರೆದು ಕ್ಯಾಪ್ಟನ್ ಲಕ್ಷ್ಮಿಯೆಂದೇ ಖ್ಯಾತರಾಗುತ್ತಾರೆ.

ತ್ರಿಪುರಾದ ಈಶಾನ್ಯ ರಾಜ್ಯದ ಗುಡ್ಡಗಾಡು ಪ್ರದೇಶದ ಅನೇಕ ಹಳ್ಳಿಗಳಲ್ಲಿ ಹೊರಗಿನ ಸಂಪರ್ಕವೂ ಇಲ್ಲದೆ, ಶಿಕ್ಷಣದ ಅವಕಾಶವೂ ಇಲ್ಲದೆ ಅಲ್ಲಿನ ಜನರು ಗಾಢಾಂಧಕಾರದಲ್ಲಿ ಮುಳುಗಿದ್ದರು. ಅಂತಹ ಅಜ್ಞಾನದ ಕಾಡಿನಲ್ಲಿ ಶಿಕ್ಷಣದ ಬೆಳಕು ಹಚ್ಚಿದ ಎಳೆಯ ಬಾಲೆ ಮಂಗಲೇಶ್ವರಿ ಬರ್ಮಾ. ಹನ್ನೊಂದು ವರ್ಷದ ಬಾಲಕಿ ಮಂಗಲೇಶ್ವರಿ ತನ್ನ ಹಳ್ಳಿಗೆ ಮೊದಲು ಶಾಲೆಯನ್ನು ತಂದುದಲ್ಲದೆ, ತಾನೇ ಅಲ್ಲಿ ಶಿಕ್ಷಕಿಯಾದುದು ಒಂದು ರೋಮಾಂಚಕಾರಿ ಕತೆಯೇ ಸರಿ.  ಬಂಗಾಲದ ಆತ್ಮರಕ್ಷಾ ಸಮಿತಿಯ ಸದಸ್ಯೆಯಾಗಿ ಹೋರಾಟ ಮಾಡಿದ ಪಂಕಜ್ ಆಚಾರ್ಯ ಮತ್ತು ಕೇರಳದ ಪುನ್ನಪ್ರವಯಲಾರ್ ಹೋರಾಟದೊಂದಿಗೆ ಕೈಜೋಡಿಸಿದ ಸುಶೀಲಾ ಗೋಪಾಲನ್ – ಎಲ್ಲರೂ ಭಾರತದ ಚರಿತ್ರೆಯ ಪುಟಗಳಲ್ಲಿ ಕಂಗೊಳಿಸಬೇಕಾದವರು.

೧೯೩೦ರ ದಶಕದ ಮಧ್ಯಭಾಗದಿಂದ ಬಹಳಷ್ಟು ಮಹಿಳೆಯರು ಕಾಂಗ್ರೆಸ್ ನೀಡಿದ ಹಲವಾರು ಚಳುವಳಿಗಳ ಕರೆಗೆ ಓಗೊಟ್ಟು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದದ್ದು ಒಂದು ಚಾರಿತ್ರಿಕ ಸತ್ಯವೇ, ಆದರೂ ಇವರಲ್ಲಿ ಕೆಲವೇ ಮಂದಿ ಮಾತ್ರ ರಾಜಕೀಯ ಭಾಗವಹಿಸುವಿಕೆಯ ಕಷ್ಟಗಳನ್ನು ತಡೆದುಕೊಳ್ಳಬಲ್ಲ ದಾರ್ಢ್ಯತೆ ಹೊಂದಿದ್ದು, ನಂತರದ ದೇಶದಲ್ಲಿ ನಡೆದ ಹಲವಾರು ಸಾಮಾಜಿಕ, ರಾಜಕೀಯ ಕ್ರಾಂತಿಕಾರಕ ಚಳುವಳಿಗಳಲ್ಲಿ ಭಾಗವಹಿಸಿದರು. ಹಾಗೆಯೇ ಪೂರ್ಣಾವಧಿ ರಾಜಕೀಯ ಕಾರ್ಯಕರ್ತರಾಗಿ, ರಾಜಕೀಯ ಚಳುವಳಿಯ ನಾಯಕರಾಗಿ ಮುಂದುವರೆದರು. ಭಾರತದ ಸ್ವಾತಂತ್ರ್ಯ ಗಳಿಸಿದ ನಂತರವೂ ಅಧಿಕಾರದ ಆಸೆಗಾಗಿ ಪರಿತಪಿಸದೆ ಮಹಿಳೆಯರ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಈ ಧೀರ ಮಹಿಳೆಯರು ಕಟ್ಟಿಕೊಟ್ಟಿರುವ ಪರಂಪರೆಯು ಭಾರತದ ಮಹಿಳಾ ಚಳುವಳಿಯಲ್ಲಿ ಮಾಸದ ಹೆಜ್ಜೆ ಗುರುತುಗಳಾಗಿವೆ.

ಎನ್. ಗಾಯತ್ರಿ

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *