ನಮ್ಮ ಕಥೆ / ಬಡವರಾದರೇನು ನಮ್ಮ ಸಂಖ್ಯೆ ಹೆಚ್ಚು – ಎನ್. ಗಾಯತ್ರಿ

ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲುವ ಮತ್ತು ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವ ಮಹಿಳೆಯರ ಅನೌಪಚಾರಿಕ ದುಡಿಮೆಯ ಅದೃಶ್ಯ ಕೈಗಳ ಶ್ರಮವನ್ನು ಸಂಭ್ರಮಿಸಿ ಸಾರ್ವಜನಿಕ ಲೋಕದಲ್ಲಿ ಅದನ್ನು ಅನಾವರಣಗೊಳಿಸಿದವರು ಡಾ| ಇಳಾ ಭಟ್. ಎಲ್ಲ ಜಾತಿಯ, ವರ್ಗದ, ವ್ಯಾಪಾರಗಳ, ಬುಡಕಟ್ಟಿನ ಮತ್ತು ಧರ್ಮದ ಮಹಿಳೆಯರನ್ನೊಳಗೊಂಡ ‘ಮಹಿಳಾ ಸ್ವಯಂ ಉದ್ಯೋಗಿಗಳ ಸಂಘ’ (ಸೇವಾ)ವನ್ನು ಅಹಮದಾಬಾದ್‍ನಲ್ಲಿ ಸ್ಥಾಪಿಸಿ, ಸ್ವಯಂ ಉದ್ಯೋಗ ಮಾಡುವ ಹೆಣ್ಣು ಮಕ್ಕಳ ಅಸ್ಮಿತೆಯನ್ನು ಎತ್ತಿ ಹಿಡಿದರು. ಅವರ ಬದುಕಿನ ಈ ಸಾಹಸ ಗಾಥೆಯೇ “ವಿ ಆರ್ ಪೂರ್, ಬಟ್ ಸೋ ಮೆನಿ”

1972ರ ಡಿಸೆಂಬಲ್ಲಿ ಗುಜರಾತಿನ ನರಂಘಾಟ್‍ನಲ್ಲಿ ‘ಸೇವಾ’ ಸಂಸ್ಥೆಯ ಸಭೆ ಸೇರಿತ್ತು. ಅದರಲ್ಲಿ ಸಾವಿರಾರು ಸದಸ್ಯರು ಭಾಗವಹಿಸಿದ್ದರು. ಮರು ಬಳಕೆಯ ಬಟ್ಟೆಯ ವ್ಯಾಪಾರಿ ಚಂದಾಬೆನ್ ಎದ್ದು ನಿಂತು ಪ್ರಶ್ನೆಯೊಂದನ್ನು ಕೇಳಿದಳು: “ಬೆಹನ್, ನಾವು ನಮ್ಮದೇ ಆದ ಬ್ಯಾಂಕ್‍ನ್ನು ಏಕೆ ಮಾಡಿಕೊಳ್ಳಬಾರದು?” ಅತ್ಯಂತ ತಾಳ್ಮೆಯಿಂದ ಇಳಾ ಅದಕ್ಕೆ ಉತ್ತರಿಸಿದರು: “ನಮ್ಮ ಬಳಿ ಹಣ ಇಲ್ಲ. ಬ್ಯಾಂಕ್ ಸ್ಥಾಪಿಸಲು ತುಂಬಾ ಹಣ ಬೇಕಾಗುತ್ತದೆ!” ಅದಕ್ಕೆ ಚಂದಾಬೆನ್ ಳದು ಮತ್ತೊಂದು ಪ್ರಶ್ನೆ: “ಸರಿ, ನಾವು ಬಡವರಿರಬಹುದು, ಆದರೇನು ನಮ್ಮ ಸಂಖ್ಯೆ ದೊಡ್ಡದಿದೆಯಲ್ಲವೆ?” ಈ ಪ್ರಶ್ನೆ ಕೇಳಿ ಇಳಾ ಬೆಕ್ಕಸ ಬೆರಗಾದರು. ಪರ್ವತವನ್ನೇ ಕದಲಿಸಬಲ್ಲ ಶಕ್ತಿ ಮತ್ತು ವಿಶ್ವಾಸ ‘ಸೇವಾ’ ಸಂಸ್ಥೆಗಿದೆಯೆಂಬುದನ್ನು ಚಂದಾಬೆನ್‍ಳ ಮಾತುಗಳು ಮನದಟ್ಟುಮಾಡಿದವು. ಚಂದಾಳ ಮಾತುಗಳು ಸಭೆಯಲ್ಲಿದ್ದ ಎಲ್ಲರನ್ನೂ ಯೋಚಿಸುವಂತೆ ಮಾಡಿತು. “ಹೌದಲ್ಲ, ನಮ್ಮದೇ ಒಂದು ಬ್ಯಾಂಕ್ ಏಕಾಗಬಾರದು?” ಎಂದು ಸದಸ್ಯರು ತಮ್ಮ ತಮ್ಮಲ್ಲೇ ಚರ್ಚಿಸತೊಡಗಿದರು. ಸದಸ್ಯರ ಮನಸ್ಸಿನಲ್ಲಿ ಮೂಡಿದ ಕನಸು ಮಾತು-ಚರ್ಚೆಯ ನಂತರ 1972ರಲ್ಲಿ ಸಾಕಾರವಾಯಿತು. ಒಬ್ಬ ಸಾಮಾನ್ಯ ಮಹಿಳಾ ಸದಸ್ಯೆ ಚಂದಾಬೆನ್‍ಳ ನುಡಿಗಳನ್ನೇ ಇಳಾ ಬೆಟ್ ತಮ್ಮ ಆತ್ಮಕಥಾನಕದ ಶೀರ್ಷಿಕೆಯನ್ನು ಮಾಡಿಕೊಂಡಿರುವುದು ಅವರು ಈ ಶ್ರಮಜೀವಿಗಳಿಗೆ ತೋರಿಸುವ ಗೌರವವೂ ಆಗಿದೆ.

ಇದು ಭಾರತದ  ಮಹಿಳಾ ಸ್ವಯಂ ಉದ್ಯೋಗಿಗಳ ಸಂಘ (ಸೇವಾ)ದ ನೇರ ಆತ್ಮಕಥನ. ಈ ಸಂಸ್ಥೆಯ ದೀರ್ಘ ಪಯಣ ಮತ್ತು ಮುನ್ನೋಟವನ್ನು ಈ ಕೃತಿಯಲ್ಲಿ ಆ ಸಂಸ್ಥೆಯ ಸ್ಥಾಪಕಿ ಇಳಾ ಆರ್. ಭಟ್ ಅವರು ಮಾಡಿಕೊಡುತ್ತಾರೆ. ಇದರಲ್ಲಿ ನಮ್ಮ ದೇಶದ ಬಡವರ ಬದುಕಿನ ಪರಿಚಯವಿದೆ. ಮಹಿಳಾ ಸ್ವಯಂ ಉದ್ಯೋಗಿಗಳ ಮತ್ತು ಅವರ ಕಾರ್ಯಕ್ಷೇತ್ರದ ಪರಿಚಯವನ್ನು ಮಾಡಿಕೊಡಲಾಗಿದೆ. ಈ ಪುಸ್ತಕದಲ್ಲಿ ಶ್ರಮದ ಮೂಲಭೂತ ಪರಿಕಲ್ಪನೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಕೆಲಸ ಎಂದರೆ ಏನು? ಕೆಲಸಗಾರ ಎಂದರೆ ಯಾರು? ಅನೌಪಚಾರಿಕ ದುಡಿಮೆಯ ಕ್ಷೇತ್ರದ ಬಗ್ಗೆ ಮತ್ತು ದೇಶದ ಆರ್ಥಿಕತೆಯಲ್ಲಿ ಅದು ವಹಿಸುವ ಪಾತ್ರದ ಬಗ್ಗೆ ವಿಶ್ಲೇಷಣೆಯಿದೆ.

       

 ಇಳಾ ಭಟ್  ಭಾರತದ ಸಂಸತ್ ಸದಸ್ಯೆಯಾಗಿದ್ದರು. ನಂತರ ರಾಷ್ಟ್ರೀಯ ಯೋಜನಾ ಆಯೋಗದ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ. ವಿಶ್ವ ಮಹಿಳಾ ಬ್ಯಾಂಕಿಂಗ್‍ನ ಕಲ್ಪನೆಯನ್ನು ಹುಟ್ಟು ಹಾಕಿ ಅದರ ಮೊದಲ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದಾರೆ. ಮನೆಯಿಂದ ಕೆಲಸ ಮಾಡುವ ಕಾರ್ಮಿಕರ ಅಂತರರಾಷ್ಟ್ರೀಯ ಒಕ್ಕೂಟ (ಹೋಮ್ ನೆಟ್)ದ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದಾರೆ. ಒಂದು ದಶಕಗಳ ಕಾಲ ರಾಕ್ ಫೆಲರ್ ಫೌಂಡೇಶನ್ನಿನ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಳಿವಯಸ್ಸಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿ ಕೂಡ ಕೆಲಸ ಮಾಡಿದ್ದಾರೆ. ಅವರನ್ನು ಅರಸಿ ಬಂದ ಸನ್ಮಾನಗಳು ಹಲವಾರು: ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ, ರೈಟ್ ಲೈವ್ಲಿಹುಡ್ ಪ್ರಶಸ್ತಿ ಮತ್ತು ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಅವರನ್ನು ಅಲಂಕರಿಸಿವೆ.

ಈ ಪುಸ್ತಕವನ್ನು ಬರೆದುದರ ಉದ್ದೇಶವನ್ನು ಕುರಿತು ಹೀಗೆ ಹೇಳುತ್ತಾರೆ: “ಈ ಬರಹದ ಮುಖ್ಯ ಉದ್ದೇಶ ನನ್ನ ಜೀವನದ ಅಮೂಲ್ಯ ಸಮಯವನ್ನು ಈ ಜನರೊಂದಿಗೆ ಕಳೆದಿದ್ದೇನೆ. ಅವರ ಬದುಕಿನಲ್ಲಿ ನಾನು ಕಂಡದ್ದು, ಬಡತನದ ವಿರುದ್ಧದ ಅವರ ಹೋರಾಟದಿಂದ ನಾನು ಕಲಿತದ್ದು. ಅವರ ಮತ್ತು ನನ್ನ ಜೀವನದ ಎಳೆಗಳು ಹೇಗೆ ಒಟ್ಟಿಗೆ ಕೂಡಿಕೊಂಡಿದೆ, ಏಕೆ ಮತ್ತು ಹೇಗೆ ನಾವು ಅವರ ಹೋರಾಟದೊಂದಿಗೆ ಕೈಜೋಡಿಸಿದ್ದೇವೆ, ಅವರಿಗೆ ನಾವೇನು ಮಾಡಿದ್ದೇವೆ, ಮತ್ತು ಈಗಲೂ ಒಟ್ಟಾಗಿ ಏನು ಮಾಡುತ್ತಿದ್ದೇವೆ – ಕನಸುಗಳು, ಕ್ರಿಯೆ, ಹೋರಾಟ, ಯಶಸ್ಸು, ಸೋಲು. ಆ ಮಹಿಳೆಯರು ನನ್ನ ಬದುಕನ್ನು ಪರಿವರ್ತಿಸಿದ್ದಾರೆ. ಅವರೇ ಅದನ್ನು ಜೀವಿಸಿದ್ದಾರೆ. ಸಮೃದ್ಧಗೊಳಿಸಿದ್ದಾರೆ, ನನಗೆ ಬದುಕಿನ ಅರ್ಥವಂತಿಕೆಯನ್ನು ಮನಗಾಣಿಸಿದ್ದಾರೆ. ಎಲ್ಲ ಅರ್ಥದಲ್ಲೂ ನಾನು ಅವರಿಗೆ ಋಣಿಯಾಗಿದ್ದೇನೆ.”

ಅವರು ಈ ಬಡ ಶ್ರಮಿಕ ಹೆಣ್ಣುಮಕ್ಕಳ ಜೀವನದ ಮೂಲಕ ಜಗತ್ತನ್ನು ನೋಡಿದ ಪ್ರಕ್ರಿಯೆಯನ್ನು ಕುರಿತು ಹೇಳುತ್ತಾರೆ. ಓದುಗರನ್ನು ಆ ಹೆಂಗಸರ ಜಗತ್ತಿಗೆ ಕೊಂಡೊಯ್ದು ಅವರ ದಿನ ನಿತ್ಯದ ಬದುಕನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಬಡವರ ಜೀವನದಲ್ಲಿ ಅವರನ್ನು ಹಣಿಸುವ ಶಕ್ತಿಗಳು, ಅವರ ಬಡತನವನ್ನು ಹೆಚ್ಚಿಸುವ ಸ್ಥಿತಿ, ಅವರೆದುರಿಸಬೇಕಾದ ಸವಾಲುಗಳು, ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಇರುವ ಇಂತಹ ಮಹಿಳೆಯರ ವೈವಿಧ್ಯಮಯ ಬದುಕಿನ ಪರಿಚಯ ಮಾಡಿಕೊಡುತ್ತಾರೆ. ಈ ಸ್ವಯಂ ಉದ್ಯೋಗಿಗಳ ಕಾರ್ಮಿಕ ಸಂಘಟನೆ ಹುಟ್ಟಿದ್ದು ಹೇಗೆ, ಆ ಸಂಘಟನೆಯ ತಾತ್ವಿಕ ಮೀಮಾಂಸೆಯೇನು, ಈ ಸಂದರ್ಭದಲ್ಲಿ ನಾವು ಎದುರಿಸಿದ ಹೋರಾಟದ ಸ್ವರೂಪವೇನು ಎನ್ನುವುದನ್ನು ಹೇಳುತ್ತಾರೆ. ಆರ್ಥಿಕ ಅಭಿವೃದ್ಧಿಯಲ್ಲಿ ಈ ಸಹಕಾರಿ ವ್ಯಾಪಾರಿಗಳು ವಹಿಸುವ ಪಾತ್ರವನ್ನು ಎತ್ತಿ ತೋರಿಸಲು ಪ್ರಯತ್ನಿಸಿದ್ದಾರೆ. ಹಾಗೆಯೇ, ದೇಶದ ಆರ್ಥಿಕತೆಯ ಮೇಲೆ ಅವರು ಬೀರುವ ಪರಿಣಾಮವನ್ನೂ ಕುರಿತು ಚರ್ಚಿಸಿದ್ದಾರೆ.

ನಗರದ ಬಡವರ ಮಧ್ಯೆ ಅದರಲ್ಲೂ ಅತ್ಯಂತ ಕಡಿಮೆ ಸಂಪಾದಿಸುವ ಚಿಂದಿ ಆಯುವ ಮಹಿಳಾ ದುಡಿಮೆಗಾರರ ನಡುವೆ ಸೇವಾ ಜನ್ಮತಾಳಿದೆ. ಈ ಮಹಿಳೆಯರ ದುಡಿಮೆಯ ಸ್ಥಿತಿಗತಿಗಳನ್ನು ಬದಲಾಯಿಸುವ ದಿಕ್ಕಿನಲ್ಲಿ ಸೇವಾ ಕೆಲಸಮಾಡಿತು. ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುವ , ಚಿಂದಿಯಿಂದ ಕೌದಿ (ಕ್ವಿಲ್ಟ್) ಹೊಲಿಯುವ ಮಹಿಳೆಯರು, ಪೀಸ್ ರೇಟ್ ಗೆ ಕೆಲಸ ಮಾಡುವವರು , ಚಿಕ್ಕ ದೊಡ್ಡ ವ್ಯಾಪಾರಿಗಳು ಸಂಸ್ಥೆಯಲ್ಲಿದ್ದರು. ಅವರು ಮಾಡಿದ್ದು ಈ ಜನರ ಯೂನಿಯನ್ ಕಟ್ಟುವ ಕೆಲಸ. ಜೊತೆಗೆ, ಈ ರೀತಿಯ ಸ್ವಯಂ ಉದ್ಯೋಗ ಮಾಡುವ ಹೆಣ್ಣು ಮಕ್ಕಳ ಅಸ್ಮಿತೆಯನ್ನು ಸ್ಥಾಪಿಸುವ ಕೆಲಸ ಇದಾಗಿತ್ತು.
ಅವರಿಗೆ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರ ಸುತ್ತಣ ಜಗತ್ತಿನ ಬಗ್ಗೆ ಕಣ್ತೆರೆಸಿದವರು ಅವರ ಕಾಲೇಜಿನ ಸಹಪಾಠಿ ರಮೇಶ್. ಯುವ ಕಾಂಗ್ರೆಸ್‍ನ ಸದಸ್ಯನಾಗಿ ವಿದ್ಯಾರ್ಥಿ ನಾಯಕನಾಗಿದ್ದ ರಮೇಶ್ ಬಡ ಕೂಲಿಕಾರನ ಮಗನಾಗಿದ್ದು ಬಡವರ ಕಷ್ಟಗಳನ್ನು ಸ್ವಾನುಭವದಿಂದ ಕಂಡವರು. ಅವರ ವೈಚಾರಿಕತೆ ಮತ್ತು ಕ್ರಿಯಾಶೀಲತೆ ಇಳಾರಿಗೆ ಅಚ್ಚುಮೆಚ್ಚಾಯಿತು. ಅವರನ್ನೇ ತಮ್ಮ ಬಾಳ ಸಂಗಾತಿಯನ್ನಾಗಿ ಆರಿಸಿಕೊಳ್ಳುತ್ತಾರೆ. ಅವರ ತಂದೆ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯೆನಿಸಿಕೊಂಡಿದ್ದರು. ವಕೀಲಿ ವೃತ್ತಿಯಲ್ಲಿ ಭರಪೂರ ಸಂಪಾದಿಸುತ್ತಿದ್ದರಲ್ಲದೆ, ಕೊನೆಗೆ ನ್ಯಾಯಾಧೀಶರಾಗಿಯೂ ಕಾರ್ಯವಹಿಸಿದವರು. ಅವರ ತಾಯಿ ಆಧುನಿಕ ಮನೋಭಾವದವಳು. ಅವಳ ತಂದೆ ಮಹಾತ್ಮ ಗಾಂಧಿಯವರ ಜೊತೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಇಂಡಿಯಾ ಆಗಷ್ಟೇ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಮಹಾತ್ಮ ಗಾಂಧಿಯವರ ಪ್ರಭಾವ ನಮ್ಮಂತಹ ಯುವಜನರಿಗೆ ಸ್ಪೂರ್ತಿಯಾಗಿ ಬಡವರೊಂದಿಗೆ ದುಡಿಯುವುದಕ್ಕೆ ಉತ್ತೇಜನ ನೀಡಿತ್ತು. ಇಂಡಿಯಾದ ಪ್ರಜಾಪ್ರಭುತ್ವ ಅರಳಲು ಇಂತಹ ಕೆಳಸ್ತರದ ಗ್ರಾಮ ಸ್ವರಾಜ್ಯಗಳನ್ನು ಕಟ್ಟಬೇಕೆಂಬ ಕನಸಿಗೆ ತಳಹದಿಯಾಗಿತ್ತು. ಅಂದು ಎಲ್ಲೆಲ್ಲೂ ಆದರ್ಶದ ರಾಜಕೀಯ ವಾತಾವರಣವಿತ್ತು. ಕ್ರಿಯೆಗೆ ಚಾಲನೆ ನೀಡಲು, ಹುಮ್ಮಸ್ಸು ನೀಡಲು ಅದಕ್ಕೆ ಶಕ್ತಿಯಿತ್ತು. ಸ್ವಾವಲಂಬನೆಯ ಅರ್ಥಶಾಸ್ತ್ರದ ಬಗ್ಗೆ ಗಾಂಧೀಜಿ ಮತ್ತು ಕುಮಾರಪ್ಪ ಅವರು ರಚಿಸಿರುವ ಬರವಣಿಗೆಗಳನ್ನು ಅವರು  ರಮೇಶ್ ರೊಂದಿಗೆ  ಜೊತೆಯಾಗಿ ಓದಿ ಚರ್ಚಿಸುತ್ತಿದ್ದರು.

1955ರಲ್ಲಿ ಅವರು ಕಾನೂನು ವಿಭಾಗದಲ್ಲಿ ಪದವಿಯನ್ನು ಮುಗಿಸಿದ ನಂತರ ಜವಳಿ ಶ್ರಮಿಕ ಸಂಘಟನೆಯ ಕಾನೂನು ವಿಭಾಗದಲ್ಲಿ ಕಿರಿಯ ವಕೀಲರ ಕೆಲಸ ಅವರನ್ನು ಅರಸಿ ಬಂದಿತು. ಅಹಮದಾಬಾದ್‍ನಲ್ಲಿ ಇದನ್ನು ಮಜೂರ್ ಮಹಾಜನ್ (TLA)ಎಂದು ಕರೆಯಲಾಗುತ್ತದೆ. ಈ ಕಾರ್ಮಿಕ ಸಂಘಟನೆಯೇ ಅವರ ನಿಜವಾದ ವಿದ್ಯಾಮಾತೆಯಾಯಿತು. ಈ ಸಂಘಟನೆಯು 1920ರಲ್ಲಿ ಅನಸೂಯಬೆನ್ ಮತ್ತು ಮಹಾತ್ಮಗಾಂಧಿಯವರಿಂದ ಸ್ಥಾಪಿಸಲ್ಪಟ್ಟಿತು. ಭಾರತದ ಕಾರ್ಮಿಕ ಸಂಘಟನೆಯ ಇತಿಹಾಸದಲ್ಲಿ ಟೆಕ್ಸ್‍ಟೈಲ್ ಲೇಬರ್ ಅಸೋಸಿಯೇಷನ್‍ಗೆ ವಿಶಿಷ್ಟ ಸ್ಥಾನವಿದೆ. ಇಂಥ ಚರಿತ್ರಾರ್ಹ ಸಂಸ್ಥೆಯಲ್ಲಿ 1955ರಲ್ಲಿ ಇಳಾ ಭಟ್ ಜ್ಯೂನಿಯರ್ ಲಾಯರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದ್ದು ಅವರ ಬದುಕಿಗೊಂದು ಮಹತ್ವದ ತಿರುವನ್ನು ನೀಡಿತು. ಈ ರಂಗದಲ್ಲಿ ಕೆಲಸ ಮಾಡುತ್ತಿರುವಾಗಲೇ ಅವರು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ, ಚಿಂದಿ ಆಯುವ ಮತ್ತು ಬಡ ಕೃಷಿಕ ಮಹಿಳೆಯರ ಸಮಸ್ಯೆಗಳನ್ನು ಹತ್ತಿರದಿಂದ ಕಂಡದ್ದು. ಆಗ ಅವರ ಕಲ್ಪನೆಯಲ್ಲಿ ಮೂಡಿ ಬಂದದ್ದು ಸ್ವ ಉದ್ಯೋಗಸ್ಥ ಮಹಿಳೆಯರನ್ನು ಸಂಘಟಿಸುವ ಯೋಜನೆ. ಹೀಗಾಗಿ 1972ರ ಏಪ್ರಿಲ್‍ನಲ್ಲಿ ‘ಸೇವಾ’ ನೋಂದಾಯಿತವಾಯಿತು.

ಇದು ಗುಜರಾತಿನ ಮಹಿಳೆಯರ ಕಥೆಯಾದರೂ ವಿಶ್ವದಾದ್ಯಂತ ಮಹಿಳೆಯರ ಸ್ಥಿತಿಗತಿಯೇನೂ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಚಿಕ್ಕ ವ್ಯಾಪಾರಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಈ ಚಿಕ್ಕ ಚಿಕ್ಕ ವ್ಯಾಪಾರಿಗಳು ದೊಡ್ಡ ದೊಡ್ಡ ವ್ಯಾಪಾರಿಗಳಾಗುವುದನ್ನು ಕಲ್ಪಿಸಿಕೊಂಡರು. ಇವರಿಗೆಲ್ಲಾ ಕಿರು ಸಾಲಗಳ ಅಗತ್ಯವಿತ್ತು. ಅದೇ ಮುಂದೆ ಸೇವಾ ಬ್ಯಾಂಕಿನ ಸ್ಥಾಪನೆಗೆ ಕಾರಣವಾಯಿತು. ಈ ಬಡ ಹೆಣ್ಣು ಮಕ್ಕಳ ಅಗತ್ಯಗಳು ಹಲವಾರು. ಔಷದಿ, ಆಸ್ಪತ್ರೆ, ವಿಮೆ- ಹೀಗೆ ಹಲವಾರು.

ನಗರ ಪ್ರದೇಶದ ಬಡವರ ಸಂಖ್ಯೆ ಹೆಚ್ಚಾದಂತೆ ಸೇವಾ ತನ್ನ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿಕೊಂಡಿತು. ಇಂದು ಗ್ರಾಮೀಣ ಮಹಿಳೆಯರ ಚಟುವಟಿಕೆಗಳು ಪಟ್ಟಣದ ಮಹಿಳೆಯರಿಗಿಂತ ಹೆಚ್ಚಿವೆ. ಈ ಗ್ರಾಮೀಣ ಮಹಿಳೆಯರಲ್ಲಿ ನಾನು ಭಾರತದ ಹೃದಯವನ್ನು ಕಂಡೆ. ಈ ಚೇತೋಹಾರಿಯಾದ ಮಹಿಳೆಯರ ತಾಣ ಗುಜರಾತಿನ ಬರಡು ಮರುಭೂಮಿ. ಇವರ ಕಸಬುಗಳು ಅದೆಷ್ಟು ವೈವಿಧ್ಯ! ಮನೆಯಲ್ಲಿ ಕೋತು ಕಸೂತಿ ಮಾಡುವವರು, ಹೊಲ ಗದ್ದೆಗಳಲ್ಲಿ ದುಡಿಯುವ ಬಡಮಹಿಳೆಯರು, ಅಂಟು ಕಿತ್ತು ಮಾರುವವರು, ಉಪ್ಪು ತಯಾರಿಸುವವರು. ಈ ಎಲ್ಲ ಕಸಬುದಾರರಿಗೂ ಸೇವಾ ಸಹಾಯ ಮಾಡಿದೆ. ಅವರುಗಳಿಗೆ ತಮ್ಮದೇ ಆಸ್ತಿಯನ್ನು ಹೆಚ್ಚಿಸಿಕೊಂಡು ತಮ್ಮ ಕಾಲ ಮೇಲೆ ನಿಲ್ಲಲು ಸೇವಾ ಸಹಾಯ ಮಾಡಿದೆ. ಅಲ್ಲದೆ, ಮಾರುಕಟ್ಟೆಯ ಸ್ಪರ್ಧೆಯನ್ನು ಎದುರಿಸಲು, ತಲೆಯ ಮೇಲೊಂದು ಸೂರು, ಆರೋಗ್ಯ ಸೌಕರ್ಯ, ಶಿಶುಪಾಲನೆ, ವಿಮೆ ಮುಂತಾದ ಸೌಕರ್ಯವನ್ನು ಒದಗಿಸಲು ಸೇವಾ ಕೆಲಸ ಮಾಡಿದೆ. ಅರಣ್ಯ ಪ್ರದೇಶದಿಂದ ಹೊರ ದಬ್ಬಲ್ಪಟ್ಟ ಬುಡಕಟ್ಟು ಜನರು ಹೊಸ ಆರ್ಥಿಕ ನೀತಿಯ ವಿರುದ್ಧ ಹೋರಾಟ ನಡೆಸುತ್ತಿರುವಾಗ ಸರ್ಕಾರಗಳು ಅವರಲ್ಲಿ ಬಡತನ ಮತ್ತು ಪರಾವಲಂಬನವನ್ನು ಹುಟ್ಟುಹಾಕುತ್ತಿರುತ್ತವೆ. ಇವೆಲ್ಲವನ್ನೂ ಸೇವಾ ಗಂಭೀರವಾಗಿ ಪರಿಗಣಿಸಿತು.

ಗುಜರಾತ್‍ನಲ್ಲಿ ಆರಂಭವಾದ ಇಳಾ ಭಟ್ ಕಟ್ಟಿದ ‘ಸೇವಾ’ ದೇಶದಲ್ಲಷ್ಟೇ ಅಲ್ಲ, ವಿಶ್ವದ ಅತಿ ದೊಡ್ಡ ಮಹಿಳಾ ಸಂಘಟನೆಗಳಲ್ಲಿ ಒಂದು. ‘ಸೇವಾ’ ಸದಸ್ಯರಾಗಿದ್ದವರು ಗ್ರಾಮೀಣ ಮತ್ತು ನಗರ ಪ್ರದೇಶದ ವಿಭಿನ್ನ ಜಾತಿ, ವರ್ಗ ಮತ್ತು ವೃತ್ತ್ರಿಗೆ ಸೇರಿದ ಮಹಿಳೆಯರು. ಅವರೆಲ್ಲರೂ ಕಡು ಬಡವರು. ದಿನದ ತುತ್ತಿಗೆ ಸಾಕಾಗುವಷ್ಟನ್ನೇ ದುಡಿದು ಬದುಕುತ್ತಿದ್ದವರು. ಸಂಘಟಿತ ವಲಯದ ದುಡಿಯುವ ಮಹಿಳೆಯರಿಗೆ ಸಿಗುವ ಯಾವ ಸೌಕರ್ಯ ಹಾಗೂ ಸೌಲಭ್ಯಗಳೂ ಇವರಿಗೆ ದೊರಕದು. ಅಷ್ಟೇಕೆ ಅವರನ್ನು ಕಾರ್ಮಿಕರೆಂದೂ ಯಾರೂ ಪರಿಗಣಿಸುವುದೂ ಇಲ್ಲ. ಈ ಹೆಂಗಸರಿಗಾಗಿ ಇಳಾ ಭಟ್ ಮೊದಲು ‘ವಿಜಯ್’, ‘ಗೀತಾಂಜಲಿ’ ಮತ್ತು ‘ಸುಜಾತಾ’ ಎಂಬ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಿದರು. ನಂತರ ಇವರೆಲ್ಲಾ ‘ಸೇವಾ’ದ ಸದಸ್ಯರಾದರು. ಇಂದು ಸುಮಾರು 800 ಸಹಕಾರಿ ಸಂಸ್ಥೆಗಳು ‘ಸೇವಾ’ದ ಸದಸ್ಯರಾದರು. ಇಂದು ಎರಡು ಮಿಲಿಯನ್ ಮಹಿಳೆಯರು ಈ ಸಂಘಟನೆಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಕೊನೆಯದಾಗಿ, ಆರ್ಥಿಕ ಸುಧಾರಣೆಯ ಕೇಂದ್ರ ಬಿಂದುವಾಗಿ ಮಹಿಳೆಯರ ಪಾತ್ರವನ್ನು ಕಾಣಬೇಕೆಂಬ ಲೇಖಕಿಯ ವಾದವು ಈ ಪುಸ್ತಕದಲ್ಲಿ ಎದ್ದು ಕಾಣುತ್ತದೆ. ಮಹಿಳೆಯರು ತಮಗೆ ಆಪ್ತವಾದ ಕಾಳಜಿಗಳ ಸುತ್ತ ಒಂದು ಸದೃಢವಾದ ಸಮರ್ಥ ಸಂಘಟನೆಯನ್ನು ಕಟ್ಟಬಲ್ಲರು. ಹಾಗೆಯೇ ಈ ಪ್ರಕ್ರಿಯೆಯಲ್ಲಿ ನಮ್ಮ ಸಮಾಜ ಮತ್ತು ಪರಿಸರವನ್ನು ಆರೋಗ್ಯಪೂರ್ಣವಾಗಿ, ಗೌರವಯುತವಾಗಿ, ಅಹಿಂಸಾತ್ಮಕವಾಗಿ ಮತ್ತು ಧಾರಣಾತ್ಮಕ ನೆಲೆಯಲ್ಲಿ ಸೃಷ್ಟಿಸಿಕೊಳ್ಳಬಲ್ಲರು, ಎಂಬುದನ್ನು ಈ ಕೃತಿ ನಿರೂಪಿಸುತ್ತದೆ.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ನಮ್ಮ ಕಥೆ / ಬಡವರಾದರೇನು ನಮ್ಮ ಸಂಖ್ಯೆ ಹೆಚ್ಚು – ಎನ್. ಗಾಯತ್ರಿ

  • August 13, 2018 at 1:24 am
    Permalink

    ಬಹು ಪರಿಣಾಮಕಾರಿ ಹಾೂಉಪಯುಕ್ತ ೇಖನ

    Reply

Leave a Reply

Your email address will not be published. Required fields are marked *