ನನ್ನ ನೆನಪಿನಂಗಳದಲ್ಲಿ ಪ್ರೀತಿಲತಾ – ಡಾ. ಎಚ್.ಜಿ. ಜಯಲಕ್ಷ್ಮಿ

ಇಂದು ಮೇ 5, ವಿಶ್ವದ ಶೋಷಿತರ ವಿಮೋಚನೆಗೆ ಕ್ರಾಂತಿಕಾರಿ ದರ್ಶನವನ್ನು ನೀಡಿದ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ. ಹಾಗೆಯೇ ‘ಭಾರತದ ಜೋನ್ ಆಫ್ ಆರ್ಕ್’ ಎಂದು ಕರೆಸಿಕೊಂಡ ಕ್ರಾಂತಿಕನ್ಯೆ ಚಿತ್ತಗಾಂಗ್‍ನ ಪ್ರೀತಿಲತಾ ವದ್ದೇದಾರ್ ಹುಟ್ಟಿದ ದಿನವೂ ಹೌದು. ಈ ದೇಶಪ್ರೇಮಿ ವೀರಮಹಿಳೆಯ ಹುಟ್ಟೂರು ಚಿತ್ತಗಾಂಗ್ ಈಗ ನೆರೆಯ ಬಾಂಗ್ಲಾ ದೇಶದಲ್ಲಿದೆ. ಕೆಲವು ವರ್ಷಗಳ ಹಿಂದೆ ಆ ಊರಿಗೆ ಭೇಟಿ ನೀಡಿದ್ದ ಡಾ. ಎಚ್. ಜಿ. ಜಯಲಕ್ಷ್ಮಿ ಕ್ರಾಂತಿಕನ್ಯೆ ಪ್ರೀತಿಲತಾ ಅವರ ನೆನಪನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

   

1994ರಲ್ಲಿ ಮೊದಲ ಸಲ ಬಾಂಗ್ಲಾ ದೇಶಕ್ಕೆ ಹೋಗಿದ್ದರೂ ಪ್ರೀತಿಲತಾಳ ಹುಟ್ಟೂರಾದ ಚಿತ್ತಗಾಂಗ್‍ಗೆ ಹೋಗಲಾಗಿರಲಿಲ್ಲ. 2012ರಲ್ಲಿ ಪ್ರೀತಿಲತಾಳ ನಾಡಿಗೆ ಹೋಗುವ ಸಂದರ್ಭ ಒದಗಿ ಬಂದಿತ್ತು. ಅದು ಬಾಂಗ್ಲಾ ದೇಶದ ಎಡವಾದಿ ಮಹಿಳಾ ಸಂಘಟನೆಯೊಂದರ ಸಮ್ಮೇಳನ. ನಾವು ಕೆಲವರು ಭಾರತದ ಪ್ರಗತಿಶೀಲ ಮಹಿಳಾ ಚಳುವಳಿಯ ಪರವಾಗಿ ಅದರಲ್ಲಿ ಭಾಗವಹಿಸಲು ಹೊರಟಿದ್ದೆವು. ಮಹಿಳಾ ಹೋರಾಟಕ್ಕೆ ಕಾಲಿರಿಸಿದಂದಿನಿಂದ ಪ್ರೀತಿಲತಾಳ ಹೆಸರನ್ನು ಮತ್ತೆ ಮತ್ತೆ ಕೇಳಿದ್ದೆ. ಆದರೆ ಇಂದಿಗೂ ಬಂಗಾಳ ಹೊರತು ಪಡಿಸಿದರೆ ದೇಶದ ಇತರ ಭಾಗದ ಜನರಿಗೆ ಪ್ರೀತಿಲತಾ ವದೇದ್ದಾರ್ ಅಷ್ಟೊಂದು ಪರಿಚಿತಳಲ್ಲ. ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಇವಳ ಹೆಸರು ಕಾಣಬರುವುದಿಲ್ಲ.
ಹಿಂದೆ ಭಾರತದ ಭಾಗವಾಗಿದ್ದು ನಂತರ ಸ್ವತಂತ್ರ ದೇಶವಾದ ಬಾಂಗ್ಲಾದೇಶಕ್ಕೆ ಹೋದಾಗ ನನ್ನ ದುಃಖ ಮರೆಯಾಗಿ ಆಶ್ಚರ್ಯ, ಆನಂದಗಳು ಉಂಟಾದವು. ಅಲ್ಲಿನ ಜನ ಇಂದಿಗೂ ಪ್ರೀತಿಲತಾಳ ಹೆಸರು ಕೇಳಿದೊಡನೆ ಪುಳಕಿತರಾಗುತ್ತಾರೆ, ಭಾವುಕರಾಗುತ್ತಾರೆ. ಕೆಲವರಂತೂ ಆನಂದಬಾಷ್ಪ ಸುರಿಸುತ್ತಾರೆ. ಪ್ರೀತಿಲತಾಳ ಕುರಿತಾದ ಕನ್ನಡದ ಹಾಡೊಂದನ್ನು ನಾನು ಹಾಡುತ್ತಿದ್ದೆ. ಬಂಗಾಲಿಗಳು ಸಂಗೀತ ಪ್ರೇಮಿಗಳು. ಬಂಗಾಲಿಗಳಲ್ಲದವರೊಬ್ಬರು ಪ್ರೀತಿಲತಾಳ ಬಗ್ಗೆ ಅವರ ಭಾವನೆಗಳಿಗೆ ಪ್ರತಿಸ್ಪಂದಿಸುವಂತೆ ಹಾಡುತ್ತಾರೆ ಎನ್ನುವುದು ಅವರಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತಿತ್ತು. ನಾನು ಅಲ್ಲಿದ್ದ ಒಂದು ವಾರದ ಅವಧಿಯಲ್ಲಿ ಅದೆಷ್ಟು ಸಲ ನನ್ನಿಂದ ಆ ಹಾಡನ್ನು ಹಾಡಿಸಿ ಕೇಳಿಸಿಕೊಂಡರೂ ಅವರಿಗೆ ತೃಪ್ತಿಯಿರಲಿಲ್ಲ. ಅಲ್ಲಿ ನಾವು ಢಾಕಾ, ಚಿತ್ತಗಾಂಗ್ ಹಾಗೂ ಅವುಗಳ ಸುತ್ತಮುತ್ತಲಿನ ಹಲವಾರು ಪ್ರದೇಶಗಳಿಗೆ ಹೋಗಿ ಬಂದೆವು.

ಚಟ್ಟಗ್ರಾಮದ ಅಳಿಯದ ನೆನಪು
ಪ್ರೀತಿಲತಾಳ ಊರಾದ ಚಿತ್ತಗಾಂಗ್ ಅಂದರೆ ಚಟ್ಟಗ್ರಾಮಕ್ಕೆ ಹೋಗಿದ್ದು ಮಾತ್ರ ನನ್ನ ಮನಸ್ಸಿನಲ್ಲಿ ಆಳವಾಗಿ ಉಳಿದುಬಿಟ್ಟಿದೆ. ನನ್ನ ಮನಸ್ಸಿಗೆ ತುಂಬಾ ತೃಪ್ತಿಯನ್ನು ತಂದುಕೊಟ್ಟ ಭೇಟಿ ಅದು. ಬಾಂಗ್ಲಾದೇಶದ ಎರಡನೇ ಅತಿ ದೊಡ್ಡ ನಗರವಾದ ಚಿತ್ತಗಾಂಗ್ ಆ ದೇಶದ ಆಗ್ನೇಯ ಭಾಗದಲ್ಲಿದೆ. ಇದು ಪ್ರಖ್ಯಾತ ಬಂದರು ಪಟ್ಟಣವೂ ಹೌದು. ಬಾಂಗ್ಲಾ ದೇಶದ ಶೇಕಡಾ90ರಷ್ಟು ಆಮದು- ರಫ್ತು ವ್ಯವಹಾರ ಇಲ್ಲಿ ನಡೆಯುತ್ತದೆ. ಹಾಗಾಗಿ ಇದನ್ನು ಬಾಂಗ್ಲಾ ದೇಶದ ವಾಣಿಜ್ಯ ರಾಜಧಾನಿ ಎಂತಲೂ ಕರೆಯುತ್ತಾರೆ. ಢಾಕಾದಿಂದ ಚಿತ್ತಗಾಂಗ್‍ಗೆ ನಾಲ್ಕೂವರೆ ಗಂಟೆಗಳ ಪ್ರಯಾಣ, ಸುಮಾರು 250 ಕಿ ಮಿ ಗಳಷ್ಟು ಅಂತರ.
ನಮ್ಮನ್ನು ಎರಡು ದೊಡ್ಡ ಕಾರುಗಳಲ್ಲಿ ಕರೆದುಕೊಂಡು ಹೋದರು. ದಾರಿಯಲ್ಲಿ ಒಂದೆರೆಡುಕಡೆ ಊಟ, ತಿಂಡಿಗಳಿಗೆ ವ್ಯವಸ್ಥೆ ಮಾಡಿದ್ದರು. ಬಂಗಾಲಿಗಳು ಅತಿಥಿ ಸತ್ಕಾರಕ್ಕೆ ಹೇಳಿ ಮಾಡಿಸಿದವರು. ಅತಿಥಿಗಳಿಗೆ ಎಷ್ಟು ತರಹದ ತಿಂಡಿ, ತಿನಿಸುಗಳನ್ನು ತಿನ್ನಿಸಿದರೂ ಅವರಿಗೆ ತೃಪ್ತಿಯಿಲ್ಲ. ಅದರಲ್ಲೂ ಸಿಹಿ ಪ್ರಿಯರಾದರೆ, ಮೀನು ತಿನ್ನುವವರಾದರೆ ಅವರ ಕಥೆ ಮುಗಿದೇ ಹೋಯಿತು. ತರಹೇವಾರಿ ಸಿಹಿ ತಿಂಡಿಗಳು-ಸಂದೇಶ್, ರಸಗುಲ್ಲಾ, ಚಮ್‍ಚಮ್, ರಾಜಭೋಗ್, ರಸಮಲೈ- ಒಂದೇ ಎರಡೇ, ಒಂದೇ ಹೊತ್ತಿಗೆ ಏಳೆಂಟು ತರಹದ ಸಿಹಿತಿಂಡಿಗಳನ್ನು, ಒಂದೊಂದನ್ನು ಎರಡು ಮೂರು, ಅವರ ಶಕ್ತಿ ಸಾಮಥ್ರ್ಯಕ್ಕನುಗುಣವಾಗಿ ತಿನ್ನುತ್ತಾರೆ. ಇನ್ನು ಮೀನುಗಳ ಬಗ್ಗೆ ಅವರ ವರ್ಣನೆ ಕೇಳಬೇಕು. ಯಾವ ಯಾವ ರೀತಿಯ ಮೀನು ಯಾವ್ಯಾವ ಋತುಗಳಲ್ಲಿ, ಪ್ರದೇಶಗಳಲ್ಲಿ ಚೆನ್ನ, ಅವನ್ನು ಯಾವ ಯಾವ ಮಸಾಲೆ ಹಾಕಿ ಅಡಿಗೆ ಮಾಡಬೇಕು, ಅವುಗಳ ಯಾವ ಯಾವ ಭಾಗ ಚೆನ್ನ ಇವೆಲ್ಲ ಅವರ ಮಧ್ಯೆ ಅತ್ಯಂತ ಸಡಗರ ತರುವ ಚರ್ಚೆಯ ವಿಷಯ. ಇವರ ಮೀನು, ಸಿಹಿಗಳ ದಾಳಿ ಅವಿರತವಾಗಿ ನಡೆಯುತ್ತಿರುತ್ತದೆ !
ಅವರ ಆತಿಥ್ಯದ ಇನ್ನೊಂದು ಭಾಗವೆಂದರೆ ಹಾಡುವುದು ಮತ್ತು ಹಾಡಿಸುವುದು. ಅವರಿಗೆ ಸಂಗೀತದ ಬಗ್ಗೆ ಇರುವ ಅಭಿರುಚಿ ಹಾಗೂ ಆಕರ್ಷಣೆ ಅನನ್ಯವಾದದ್ದು. ಶಾಸ್ತ್ರೀಯ ಸಂಗೀತದ ಮೇರು ಕಲಾವಿದರಾದ ಅಮೀರ್‍ಖಾನ್, ಪನ್ನಾಲಾಲ್‍ಘೋಷ್ ಮತ್ತಿತರರು, ಸಿನಿಮಾ ಸಂಗೀತದ ಎಸ್ ಡಿ ಬರ್ಮನ್, ಸಲೀಲ್‍ಚೌಧುರಿ, ಮನ್ನಾಡೇ ಮುಂತಾದ ಸೃಜನಶೀಲ ಸಂಗೀತಗಾರರನ್ನು ದೇಶಕ್ಕೆ ಕೊಡುಗೆ ಕೊಟ್ಟ ಜನಾಂಗ ಅದು.
ಬಾಂಗ್ಲಾ ದೇಶವು ಯಥೇಚ್ಛವಾಗಿ ಹಸಿರನ್ನು ಹೊಂದಿರುವ, ವಿಪುಲವಾದ ನೀರಿನ ಸಂಪನ್ಮೂಲದಿಂದಾಗಿ ನದಿ, ಕೆರೆ, ಕೊಳ, ತೊರೆಗಳಿಂದ ತುಂಬಿದ್ದು ಆಹ್ಲಾದ ನೀಡುವ ನಾಡು. ಹಾಗಾಗಿ ಪ್ರಯಾಣ ಬಹಳ ಚೇತೋಹಾರಿಯಾಗಿತ್ತು. ಹಾಡು, ನಗು, ಹರಟೆ, ತಿಂಡಿ, ಸೊಗಸಾದ ಪ್ರಾಕೃತಿಕ ನೋಟ ಎಲ್ಲಾ ಸೇರಿ ಢಾಕಾದಿಂದ ಚಿತ್ತಗಾಂಗ್ ತಲುಪಿದ್ದು ಗೊತ್ತಾಗಲೇ ಇಲ್ಲ.


ಗುಡ್ಡಗಾಡು ಪ್ರದೇಶವಾದ ಚಟ್ಟಗ್ರಾಮ ಅನೇಕ ಅಸಾಮಾನ್ಯ ಕ್ರಾಂತಿಕಾರಿಗಳಿಗೆ ಜನ್ಮ ನೀಡಿದ ಸ್ಥಳ. ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರ ಹೋರಾಟ ನಡೆಸಿ ಪ್ರಾಣತ್ಯಾಗ ಮಾಡಿದ ಮೊದಲ ಮಹಿಳೆಯಾದ ಪ್ರೀತಿಲತಾಗೆ ಜನ್ಮ ನೀಡಿದ ಸ್ಥಳವೂ ಹೌದು. ಅಂತಹ ನೆಲದಲ್ಲಿ ನಾನು ಕಾಲಿರಿಸಿದ್ದೇನೆ ಎನ್ನುವುದು ನನ್ನನ್ನ್ನು ಭಾವಪರವಶಳನ್ನಾಗಿಸಿತ್ತು. ಮನಸ್ಸಿನ ತುಂಬಾ ಪ್ರೀತಿಲತಾ ಆವರಿಸಿಕೊಂಡು ಬಿಟ್ಟಿದ್ದಳು. ಬಾಂಗ್ಲಾದೇಶದ ಸಂಗಾತಿಗಳು ನಮ್ಮೆಲ್ಲರನ್ನೂ ಮಾರನೆಯ ದಿನ ಪ್ರೀತಿಲತಾ ಹುತಾತ್ಮಳಾದ ಸ್ಥಳಕ್ಕೆ ಕರೆದೊಯ್ಯುವವರಿದ್ದರು. ಜೊತೆಗೆ ಅವಳು ವ್ಯಾಸಂಗ ಮಾಡಿದ ಶಾಲೆ, ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡಿದ ಶಾಲೆ, ಎಲ್ಲಕ್ಕಿಂತ ಹೆಚ್ಚಾಗಿ ಆಕೆ ತನ್ನ ಸಹ ಯೋಧರೊಂದಿಗೆ ಆಕ್ರಮಣ ಮಾಡಿದ ಯುರೋಪಿಯನ್ ಕ್ಲಬ್‍ಅನ್ನು ನೋಡಿ ಬರುವುದೆಂದು ನಿಗದಿಯಾಗಿತ್ತು.
ಆ ದಿನ ಬೆಳಿಗ್ಗೆ ನನ್ನ ಮನಸ್ಸಿನಲ್ಲಿ ಒಂದುರೀತಿಯ ಸಡಗರ ಇತ್ತು. ಒಂದು ವಿಷಾದದ ಎಳೆಯೂ ಜೊತೆಗೂಡಿಕೊಂಡೇ ಇತ್ತು. ಮೊದಲಿಗೆ ಊರಿನ ಮುಖ್ಯ ಭಾಗದಲ್ಲಿರುವ ಪ್ರೀತಿಲತಾ ಹುತಾತ್ಮಳಾದ ಸ್ಥಳಕ್ಕೆ ಕರೆದೊಯ್ದರು. ನಾನು ಮನಸ್ಸಿನಲ್ಲಿಯೇ ಅದೊಂದು ಭವ್ಯವಾದ ಸ್ಥಳ ಇರಬಹುದು, ಅಲ್ಲಿ ಪ್ರೀತಿಲತಾಳ ದೊಡ್ಡ ಪ್ರತಿಮೆ ಇರಬಹುದು, ಅದರ ಸುತ್ತಲೂ ಒಂದು ಸುಂದರಉದ್ಯಾನ ಇರಬಹುದು. ಹೀಗೆಲ್ಲಾ ಏನೇನೋ ಕಲ್ಪನೆ ಮಾಡಿಕೊಂಡಿದ್ದೆ. ಆ ಸ್ಥಳ ನೋಡಿದರೆ ಬಹಳ ಸಾಧಾರಣವಾಗಿ ಕಾಣುತ್ತಿತ್ತು. ಅಲ್ಲಿ ಒಂದು ಚಿಕ್ಕ ತ್ರಿಕೋನಾಕಾರದ ಉದ್ಯಾನ. ಅದರ ಮಧ್ಯದಲ್ಲಿ ಪ್ರೀತಿಲತಾಳ ಎದೆ ಮಟ್ಟದ ಚಿಕ್ಕ ಪ್ರತಿಮೆ ಇತ್ತುಅಷ್ಟೇ. ನನಗೆ ಸ್ಪಲ್ಪ ನಿರಾಸೆ, ಸ್ಪಲ್ಪ ಸಿಟ್ಟು ಬಂತು. ಜನ ಇಷ್ಟೊಂದು ಪ್ರೀತಿ ಮಾಡುವ ಹುತಾತ್ಮಳನ್ನು ಹೀಗೆ ಕಡೆಗಣಿಸಬಹುದೇ ಎಂದು. ಆದರೆ ನಮ್ಮನ್ನು ಆಳುವ ಸರ್ಕಾರಗಳಿಗೆ ಹೋರಾಟಗಳು ಹಾಗೂ ಹೋರಾಟಗಾರರ ಬಗ್ಗೆ ಇರುವುದು ಭಯ ಮತ್ತು ನಿರ್ಲಕ್ಷ್ಯ ಅಷ್ಟೇ ಅಲ್ಲವೇ ಎಂದು ನನ್ನನ್ನು ನಾನೇ ಸಮಾಧಾನಪಡಿಸಿಕೊಂಡೆ.
ಕೇವಲ 21ವರ್ಷ ಬದುಕಿದ್ದ, ದೇಶ ಕಂಡ ಅಪರೂಪದ ಈ ಕ್ರಾಂತಿಕಾರಿಗೆ ಜೀವನ ಹೇಗೆ ಕಂಡಿರಬೇಕು ಎಂದು ಆಲೋಚಿಸುತ್ತಿದ್ದೆ. ಈಕೆ ಹುಟ್ಟಿದ್ದು 1911ರ ಮೇ 5ರಂದು. ಅಂದರೆ ಬ್ರಿಟಿಷರ ವಿರುದ್ಧ ದೇಶ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ. ಯಾವುದನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿ ಯುಗ ಎನ್ನುತ್ತಾರೋ ಆ ಕಾಲ ಅದು. ಅದಾಗಲೇ 1908ರಲ್ಲಿ ಹದಿಹರೆಯದ ಯುವಕ ಖುದಿರಾಂ ಬೋಸ್ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ನೇಣಿಗೆ ಕೊರಳೊಡ್ಡಿದ್ದ. ಶಾಲಾ-ಕಾಲೇಜುಗಳಿಂದ ಎಳೆಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ಹೊರಬೀಳುತ್ತಿದ್ದರು. ಕಲ್ಕತ್ತಾ ಬ್ರಿಟಿಷ್ ಸರ್ಕಾರದ ರಾಜಧಾನಿಯಾಗಿದ್ದರಿಂದ ಅದರ ವಿರುದ್ಧದ ಹೋರಾಟಗಳೂ ಬಂಗಾಳದಲ್ಲೇ ಹೆಚ್ಚು ಬೆಳೆದು ಬಂದಿದ್ದೂ ನಿಜ. ಜೊತೆಗೆ 1905ರಲ್ಲಿ ಬಂಗಾಳವನ್ನು ವಿಭಜಿಸಿದ್ದು ಬಂಗಾಳಿಗಳನ್ನು ರೊಚ್ಚಿಗೆಬ್ಬಿಸಿತ್ತು. ಇದರ ವಿರುದ್ಧ ಬೆಳೆದ ಹೋರಾಟ ಎಷ್ಟು ಪ್ರಬಲವಾಗಿತ್ತೆಂದರೆ ಬ್ರಿಟಿಷರು 1911ರಲ್ಲಿ ವಿಭಜನೆಯನ್ನು ಕೈಬಿಟ್ಟಿದ್ದು ಮಾತ್ರವಲ್ಲ ತಮ್ಮ ರಾಜಧಾನಿಯನ್ನು ದೆಹಲಿಗೆ ವರ್ಗಾಯಿಸಿಕೊಳ್ಳಬೇಕಾಯಿತು. ಈ ವಾತಾವರಣದಲ್ಲಿ ಬೆಳೆದ ಯಾವುದೇ ಸೂಕ್ಷ್ಮ ಸಂವೇದನಾಶೀಲ ಮನಸ್ಸಿನ ವ್ಯಕ್ತಿಗಳೂ ಹೋರಾಟದ ಆಯಸ್ಕಾಂತ ಶಕ್ತಿಯ ಪ್ರಭಾವದಿಂದ ಹೊರಗುಳಿಯಲು ಸಾಧ್ಯವಿರಲಿಲ್ಲ. ಹೆಣ್ಣುಮಕ್ಕಳಿಗೆ ಶಸ್ತ್ರಾಸ್ತ್ರ ಹೋರಾಟಗಳಿಗೆ ಪ್ರವೇಶ ಕಠಿಣವಿದ್ದಾಗಲೂ ಪ್ರೀತಿಲತಾ, ಕಲ್ಪನಾದತ್ತಾರಂತವರೂ ಹೋರಾಟಕ್ಕೆ ಚಿಕ್ಕ ವಯಸ್ಸಿನಲ್ಲೇ ಆಕರ್ಷಿತರಾದರು. ನಮ್ಮ ಮನೆಗಳಲ್ಲಿರುವ ಈ ವಯಸ್ಸಿನ ಮಕ್ಕಳನ್ನು ನೆನಪಿಸಿಕೊಂಡರೆ ನಮಗೆ ಇವರ ಸಾಹಸದ ಬಗ್ಗೆ ಒಂದು ಅಂದಾಜು ಸಿಗಬಹುದು.
ಶಾಲೆಗಳಿಗೆ ಭೇಟಿ
ಕುಟುಂಬದ ಆರು ಮಕ್ಕಳಲ್ಲಿ ಒಬ್ಬಳಾದ ಪ್ರೀತಿಲತಾ ಅತ್ಯಂತ ಬುದ್ಧಿವಂತ ಹುಡುಗಿ. ತಮ್ಮಿಂದ ಸಾಧ್ಯವಿರುವಷ್ಟು ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ತಂದೆ-ತಾಯಿ ಅವಳನ್ನು ಪ್ರಖ್ಯಾತ ಖಷ್ಟೋಗಿರ್ ಶಾಲೆಗೆ ಸೇರಿಸಿದರು. ಅಲ್ಲಿ ನೇರವಾಗಿ 3ನೇ ಕ್ಲಾಸಿಗೆ ಪ್ರವೇಶ ಪಡೆದ ಈ ಬಾಲೆ ಆಗಲೇ ಸ್ಕಾಲರ್‍ಶಿಪ್ ಪಡೆದುಕೊಂಡಳು. ಮುಂದೆ ಆ ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದಳು.


ಆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗಕ್ಕೆ ತಮ್ಮ ಶಾಲೆಯಲ್ಲಿ ಓದಿ ದೇಶಕ್ಕೆ ಕೀರ್ತಿತಂದ ಹುಡುಗಿಯನ್ನು ನೆನಪಿಸಿಕೊಂಡು ಈಗಲೂ ಬೇರೆ ದೇಶದಿಂದ ಜನ ಬಂದಿದ್ದು ಸಂತೋಷ ತಂದಿತ್ತು. ತಮ್ಮ ಶಾಲೆಯ ವಿದ್ಯಾರ್ಥಿನಿಯ ಬಗ್ಗೆ ಹೆಮ್ಮೆ ಮೂಡಿತ್ತು. ಆ ದಿನಗಳಲ್ಲಿ ಪ್ರೀತಿಲತಾ ಎಷ್ಟು ಚುರುಕಾಗಿದ್ದಿರಬೇಕು, ಎಂದೆಲ್ಲಾ ಊಹಿಸಿಕೊಳ್ಳುತ್ತಾ ಆ ಶಾಲೆಯ ಆವರಣದಲ್ಲೆಲ್ಲಾ ಅಡ್ಡಾಡಿದೆ.
ನಂತರ ಢಾಕಾದ ಈಡನ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ, ಕಲ್ಕತ್ತಾದ ಪ್ರಖ್ಯಾತ ಬೆಥೂನ್ ಕಾಲೇಜಿನಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಶಿಕ್ಷಣ ಪಡೆದುಕೊಂಡು ತವರೂರಿಗೆ ಮರಳಿದ ಬಳಿಕ ಪ್ರೀತಿಲತಾ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡಿದ ನಂದನ್‍ಕಾನನ್ ಎಂಬ ಆಂಗ್ಲ ಶಾಲೆಗೆ ತೆರಳಿದೆವು. ಅಲ್ಲಿಯೂ ಶಿಕ್ಷಕರಾದಿಯಾಗಿ ಪ್ರತಿಯೊಬ್ಬರಲ್ಲೂ ನಮ್ಮನ್ನು ನೋಡಿ ವಿಸ್ಮಯ ಹಾಗೂ ಪ್ರೀತಿಲತಾಳ ಬಗ್ಗೆ ಹೆಮ್ಮೆ ತೋರಿಬರುತ್ತಿತ್ತು.
ಆ ದಿನದ ಕಡೆಯ ಆದರೆ ಅತ್ಯಂತ ಮುಖ್ಯವಾದ ಭಾಗವೆಂದರೆ, ನಾನು ಕಾತರದಿಂದ ಕಾಯುತ್ತಿದ್ದ ಯೂರೋಪಿಯನ್ ಕ್ಲಬ್‍ಗೆ ಭೇಟಿ ನೀಡುವುದು. ನನ್ನ ಮನಸ್ಸು ಆ ದಿಕ್ಕಿನಲ್ಲಿ ಓಡತೊಡಗಿತು ಆದರೆ ಅಲ್ಲಿನ ಸಂಘಟನಾಕಾರರು ಮೊದಲು ಊಟ ಮಾಡಿ ನಂತರ ಹೋಗೋಣವೆಂದರು. ನನಗೆ ಸ್ವಲ್ಪ ಬೇಸರವೇ ಆಯಿತು. ಅತಿಥಿಗಳಾದವರಿಗೆ ಬೇಕೆನಿಸಿದ್ದನ್ನು ಮಾಡುವ ಸ್ವಾತಂತ್ರ್ಯವಿರುವುದಿಲ್ಲವಲ್ಲ! ಹೋಟೆಲಿನಲ್ಲಿ ಕುಳಿತಿದ್ದಂತೆಯೇ ನನ್ನ ಮನಸ್ಸು ಪ್ರೀತಿಲತಾಳ ಬಳಿಗೆ ಹಾರಿ ಹೋಗಿತ್ತು.
ಕ್ರಾಂತಿಕಾರಿಯಾಗಿ ವಿಕಸನ
ತನ್ನ ಶಾಲಾದಿನಗಳಿಂದಲೇ ಪ್ರೀತಿಲತಾ, ಪ್ರಸಿದ್ಧ ಕ್ರಾಂತಿಕಾರಿಯಾದ ಸೂರ್ಯಸೇನ್‍ರ ಬಗ್ಗೆ ಕೇಳಿದ್ದಳು. ಶಿಕ್ಷಕರಾಗಿದ್ದರಿಂದ ಮಾಸ್ಟರ್‍ದಾ ಎಂದೇ ಕರೆಯಲ್ಪಟ್ಟ ಅವರನ್ನು ಖುದ್ದಾಗಿ ಭೇಟಿ ಮಾಡುವ ಸಂದರ್ಭ ತನ್ನ ಪದವಿ ಶಿಕ್ಷಣ ಮುಗಿಸುವವರೆಗೂ ಅವಳಿಗೆ ಬಂದಿರಲಿಲ್ಲ. ಕಲ್ಕತ್ತಾದಲ್ಲಿ ಓದು ಮುಗಿಸಿ ತನ್ನ ಹುಟ್ಟೂರಿನ ನಂದನ್‍ಕಾನನ್ ಎಂಬ ಆಂಗ್ಲ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡಲಾರಂಭಿಸಿದಾಗ ಮಾಸ್ಟರ್‍ದಾರನ್ನು ಸಂಧಿಸುವ ಸುಯೋಗ ಅವಳಿಗೆ ಒದಗಿತು. ಆ ಹೊತ್ತಿಗಾಗಲೇ ಮಾಸ್ಟರ್‍ದಾ ಹದಿಹರೆಯದ ಯುವಕ-ಯುವತಿಯರನ್ನು ತಮ್ಮ ಸಶಸ್ತ್ರ ಪಡೆಗೆ ಸೇರಿಸಿಕೊಳ್ಳುತ್ತಿದ್ದರು. ಪ್ರೀತಿಲತಾ ತನ್ನನ್ನೂ ಸಹ ಆ ಪಡೆಗೆ ಸೇರಿಸಿಕೊಳ್ಳಬೇಕೆಂದು ಆಗ್ರಹಪೂರ್ವಕವಾಗಿ ವಿನಂತಿಸಿಕೊಂಡಳು. ಆರಂಭದಲ್ಲಿ ಮಾಸ್ಟರ್‍ದಾಗೆ ಸ್ವಲ್ಪ ಹಿಂಜರಿಕೆಯಿದ್ದರೂ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಬೇಕೆಂಬ ವಿಷಯದಲ್ಲಿ ಅವಳಿಗಿದ್ದ ಉಕ್ಕಿನ ನಿರ್ಧಾರವನ್ನು ಗುರುತಿಸಿದ ಮೇಲೆ ಅವರ ಆತಂಕಗಳು ದೂರವಾದವು. ಪ್ರೀತಿಲತಾಳನ್ನು ತಮ್ಮ ಭೂಗತ ಗುಂಪಿನ ಮಹಿಳಾ ಸದಸ್ಯಳನ್ನಾಗಿ ಅಂಗೀಕರಿಸಿದರು.
1930ರ ಏಪ್ರಿಲ್ 18ರಂದುಚಿತ್ತಗಾಂಗ್‍ನ ಪೋಲಿಸ್ ಹಾಗೂ ಸಹಾಯಕ ಪಡೆಗಳ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಲು ಮಾಸ್ತರ್ ದಾ ವ್ಯೂಹ ರಚಿಸಿದ್ದರು. ಇದರ ಉದ್ದೇಶ ಚಿತ್ತಗಾಂಗ್‍ನಲ್ಲಿದ್ದ ಎರಡು ಮುಖ್ಯ ಶಸ್ತ್ರಾಗಾರಗಳನ್ನು ವಶಪಡಿಸಿಕೊಂಡು ಟೆಲಿಫೋನ್ ಹಾಗೂ ಟೆಲಿಗ್ರಾಫ್ ಸಂವಹನಗಳನ್ನು ಕಡಿತಗೊಳಿಸುವುದು, ನಂತರ ಯೂರೋಪಿಯನ್ ಅಧಿಕಾರಿಗಳನ್ನು ಹತ್ಯೆಗೈಯ್ಯುವುದು ಆಗಿತ್ತು. ಹಾಗೆ ನೋಡಿದರೆ ಚಿತ್ತಗಾಂಗ್ ಬಂಡಾಯದ ವ್ಯೂಹರಚನೆ ಮಾಡಿದವರಲ್ಲಿ ಪ್ರೀತಿಲತಾ ಸಹ ಒಬ್ಬ ಪ್ರಮುಖ ವ್ಯಕ್ತಿ. ಅವಳು ಬಹಳ ಜಾಣತನದಿಂದ ಹೆಣೆದ ರಣತಂತ್ರಗಳು ಮಾಸ್ಟರ್‍ದಾ ಹಾಗೂ ಅವರ ಸಹಯೋಧರು ಬ್ರಿಟಿಷ್ ಪೊಲೀಸರ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿ, ಚಿತ್ತಗಾಂಗ್‍ಅನ್ನು ಇಡೀ ದೇಶದಿಂದ ಪ್ರತ್ಯೇಕಿಸಲು ಸಹಾಯವಾದವು. ಟೆಲಿಫೋನ್ ಹಾಗೂ ಟೆಲಿಗ್ರಾಫ್ ಸಂಪರ್ಕವನ್ನು ನಿಷ್ಕ್ರಿಯಗೊಳಿಸುವಲ್ಲಿ ಅವರು ಯಶಸ್ವಿಯಾದರು. ರೈಲುಗಳ ಸಂಚಾರಕ್ಕೆ ತಡೆ ಒಡ್ಡಿದರು. ಇಂಡಿಯನ್ ರಿಪಬ್ಲಿಕ್ ಆರ್ಮಿಯ ಹೆಸರಿನಲ್ಲಿ ಈ ದಾಳಿಯನ್ನು ಕಾರ್ಯಗತಗೊಳಿಸುವಲ್ಲಿ 65 ಜನ ಪಾಲ್ಗೊಂಡಿದ್ದರು. ದಾಳಿ ಮುಗಿದಾಗ ಮೇಲೆ ಪೊಲೀಸ್ ಶಸ್ತ್ರಾಗಾರದ ಹೊರಗೆ ನೆರೆದ ಎಲ್ಲಾ ಕ್ರಾಂತಿಕಾರಿಗಳ ಸಮ್ಮುಖದಲ್ಲಿ ಸೂರ್ಯಸೇನ್ ರಾಷ್ಟ್ರದ ಧ್ವಜವನ್ನು ಹಾರಿಸಿ, ಮಿಲಿಟರಿ ಸೆಲ್ಯೂಟ್ ಸಲ್ಲಿಸಿ, ತಾತ್ಕಾಲಿಕ ಕ್ರಾಂತಿಕಾರಿ ಸರ್ಕಾರದ ಸ್ಥಾಪನೆಯನ್ನು ಘೋಷಿಸಿದರು. ನಂತರ ಅವರೆಲ್ಲರೂ ಜಲಾಲಾಬಾದ್ ಗುಡ್ಡಗಳಲ್ಲಿ ತಲೆಮರೆಸಿಕೊಂಡರು.
ಇದರಿಂದ ಕ್ರುದ್ಧರಾದ ಬ್ರಿಟಿಷ್ ಅಧಿಕಾರಿಗಳು ಕ್ರಾಂತಿಕಾರಿಗಳನ್ನು ಬೇಟೆಯಾಡಲು ಶುರು ಮಾಡಿದರು. ಹಾಗೂ 4 ದಿನಗಳ ನಂತರ ಚಿತ್ತಗಾಂಗ್ ಬಳಿಯ ಜಲಾಲ್‍ಬಾದ್ ಬೆಟ್ಟಗಳಲ್ಲಿ ತಲೆಮರೆಸಿಕೊಂಡಿದ್ದ ಕ್ರಾಂತಿಕಾರಿಗಳನ್ನು ಸಹಸ್ರಾರು ಪೊಲೀಸರನ್ನು ಬಳಸಿಕೊಂಡು ಸುತ್ತುವರೆದರು. ಮುಂದೆ ನಡೆದ ಗುಂಡಿನ ಕಾಳಗದಲ್ಲಿ ಹನ್ನೆರಡು ಜನ ಕ್ರಾಂತಿಕಾರಿಗಳು ಬಲಿಯಾದರು. ಮಾಸ್ಟರ್‍ದಾ ಹಾಗೂ ಇನ್ನಿತರರು ತಪ್ಪಿಸಿಕೊಂಡರು.ಈ ಕಾಳಗಕ್ಕೆ ಮದ್ದುಗುಂಡುಗಳನ್ನು ಸರಬರಾಜು ಮಾಡುವ ಹೊಣೆಯನ್ನು ಪ್ರೀತಿಲತಾ ಹೊತ್ತುಕೊಂಡಿದ್ದಳು.


ಯೂರೋಪಿಯನ್ ಕ್ಲಬ್ ಮೇಲೆ ಮತ್ತೆ ದಾಳಿಯನ್ನು ನಡೆಸುವ ಜವಾಬ್ದಾರಿಯನ್ನು ಮಾಸ್ತರ್ ದಾ ಪ್ರೀತಿಲತಾಗೆ ವಹಿಸಿಕೊಟ್ಟರು. 40 ಕ್ರಾಂತಿಕಾರಿಗಳ ಪಡೆಯ ನೇತೃತ್ವ ವಹಿಸಿಕೊಂಡ ಪ್ರೀತಿಲತಾ1932ರ ಸೆಪ್ಟೆಂಬರ್24ರ ರಾತ್ರಿ ಕ್ಲಬ್‍ನ ಮೇಲೆ ಏಕಾಏಕಿ ಆಕ್ರಮಣ ಮಾಡಿದಳು. ನಂತರ ಎಚ್ಚೆತ್ತುಕೊಂಡ ಬ್ರಿಟಿಷ್ ಪೊಲೀಸರು, ತಮ್ಮನ್ನು ಮೂರು ಗುಂಪುಗಳಾಗಿ ಮಾಡಿಕೊಂಡು ಆಕ್ರಮಣ ಎಸಗಿದ ಕ್ರಾಂತಿಕಾರಿಗಳ ಮೇಲೆ ಗುಂಡಿನ ಮಳೆಗರೆಯಲಾರಂಭಿಸಿದರು. ಗುಂಡಿನ ಚಕಮಕಿಯಲ್ಲಿ ಒಬ್ಬ ಕ್ರಾಂತಿಕಾರಿ ಬಲಿಯಾಗಿ ಹನ್ನೊಂದು ಜನ ತೀವ್ರವಾಗಿ ಗಾಯಗೊಂಡರು. ಪ್ರೀತಿಲತಾ ಗುಂಡೇಟು ತಗುಲಿ ತೀವ್ರವಾಗಿ ಗಾಯಗೊಂಡಳು. ಬ್ರಿಟಿಷ್ ಪೊಲೀಸರಿಗೆ ಸಿಕ್ಕಿ ಬೀಳಬಹುದು ಎನ್ನುವ ಮೊದಲೇ ತನ್ನ ಬಳಿ ಯಾವಾಗಲೂ ಇರಿಸಿಕೊಂಡಿದ್ದ ಪೊಟ್ಯಾಷಿಯಂ ಸೈಯನೈಡ್ ಮಾತ್ರೆಯನ್ನು ನುಂಗಿ ವೀರ ಮರಣವನ್ನಪ್ಪಿದಳು. ಜೀವನದುದ್ದಕ್ಕೂ ಯಾವ ಕೆಚ್ಚೆದೆ, ಸಾಹಸವನ್ನು ಮೆರೆದಿದ್ದಳೋ ಸಾವಿನ ಹೊಸ್ತಿಲಲ್ಲೂ ಅದೇ ಧೈರ್ಯವನ್ನು ಮೆರೆದ ಧೀರೆ ಪ್ರೀತಿಲತಾ. ನೋಡು ನೋಡುತ್ತಿದ್ದಂತೆ ಬಂಗಾಳದ ಕುವರಿಯರಿಗೆ ಪ್ರೀತಿಲತಾ ಆದರ್ಶಪ್ರಾಯಳಾಗಿಬಿಟ್ಟಳು.


ಈ ಸಂದರ್ಭದಲ್ಲಿ ಅವಳು ಪ್ರತಿಯೊಂದು ಜವಾಬ್ದಾರಿಯನ್ನು ನಿರ್ವಹಿಸಿದ ರೀತಿ ಒಬ್ಬ ಮಹಿಳಾ ಕ್ರಾಂತಿಕಾರಿ ಏನೆಲ್ಲಾ ಮಾಡಲು ಸಾಧ್ಯ ಎನ್ನುವುದಕ್ಕೆ ಪಥ ಪ್ರದರ್ಶಕವಾಗಿತ್ತು. ಅವಳ ಸಹವರ್ತಿಗಳೆಲ್ಲಾ ಪ್ರೀತಿಲತಾಳ ವ್ಯಕ್ತಿತ್ವ, ಸಾಮಥ್ರ್ಯ, ಛಲಗಳನ್ನು ಕಂಡು ಬೆರಗಾಗಿದ್ದರು. ಮಾಸ್ಟರ್‍ದಾ ಮನಸ್ಸೂ ಸಹ ಧನ್ಯತಾ ಭಾವದಿಂದ ತುಂಬಿ ಬಂದಿರಬೇಕು.
ಎಲ್ಲಿಎಲ್ಲಿ ಪ್ರೀತಿಲತಾ…
ಹೋಟೆಲಿನಲ್ಲಿ ಕುಳಿತಿದ್ದಷ್ಟು ಹೊತ್ತೂ ನನ್ನ ಮನಸ್ಸು ಪ್ರೀತಿಲತಾ ಕ್ರಾಂತಿಕಾರಿಯಾಗಿ ವಿಕಸನ ಹೊಂದಿದ ಕಥೆಯಲ್ಲಿ ಮುಳುಗಿ ಹೋಗಿತ್ತು. ಅಷ್ಟು ಹೊತ್ತಿಗೆ ಸರಿಯಾಗಿ ‘ಬನ್ನಿ ಹೋಗೋಣ’ ಎಂದು ಯಾರೋ ನನ್ನನ್ನು ಹಿಡಿದು ಅಲುಗಿಸುತ್ತಿದ್ದರು. ನಂತರ ಕಾರು ಹತ್ತಿ ಕ್ಲಬ್ ತಲುಪಿದೆವು. ಯೂರೋಪಿಯನ್ ಕ್ಲಬ್ಬನ್ನು ನೋಡುತ್ತಾ ಬಂದಂತೆ ಪ್ರೀತಿಲತಾಳ ಅಸೀಮ ಸಾಹಸ ಕಣ್ಣಿಗೆ ಕಟ್ಟಿದಂತಾಯಿತು.
ಅಂತೂ ಆ ಇಡೀ ದಿನ ಪ್ರೀತಿಲತಾಳ ನೆನಪು ನನ್ನನ್ನು ಕಾಡುತ್ತಿತ್ತು. ಈಗಲೂ ನಮ್ಮ ದೇಶದ ವiಹಿಳೆಯರು ಅಸಮಾನತೆಯನ್ನು, ಅನೇಕ ರೀತಿಯ ಅನ್ಯಾಯಗಳನ್ನು ಎದುರಿಸುತ್ತಿರುವುದನ್ನು ನೋಡುವಾಗ ಪ್ರೀತಿಲತಾಳ ನೆನಪು ಬರುತ್ತದೆ. ನಮ್ಮ ಹುಡುಗಿಯರು ಅವರ ಸಮಸ್ಯೆಗಳನ್ನು ಮಾತ್ರವಲ್ಲ, ದೇಶದ ಸಮಸ್ಯೆಗಳನ್ನೂ ಸಹ ಬಗೆಹರಿಸಲು ಪ್ರೀತಿಲತಾ ಆದರ್ಶವಾಗುತ್ತಾಳೆ.

ಡಾ. ಎಚ್.ಜಿ. ಜಯಲಕ್ಷ್ಮಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *