ನನ್ನ ಕಥೆ/ ಫ್ಲೇವಿಯಾ ಆತ್ಮಕಥೆ- ಎನ್. ಗಾಯತ್ರಿ

ಕೌಟುಂಬಿಕ ಜೀವನದಲ್ಲಿ ಪತಿಯ ಕ್ರೌರ್ಯದಿಂದ ಬದುಕು ಛಿದ್ರ ಛಿದ್ರಗೊಂಡರೂ ಆ ಕೂಪದಿಂದ ಮೇಲೆದ್ದು ಬಂದು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಂಡ ಮಹಿಳೆಯ ಸಾಹಸಮಯ ಕಥೆಯಿದು. ವೈವಾಹಿಕ ಬದುಕಿನಲ್ಲಿ ಗಂಡನ ಹೊಡೆತ-ಕಿರುಕುಳ ಕೇವಲ ಕೆಳವರ್ಗಕ್ಕೆ, ಅವಿದ್ಯಾವಂತರಿಗೆ ಮಾತ್ರ ಅನ್ವಯಿಸುತ್ತದೆಯೆಂಬ ಸಮಾಜದ ಹುಸಿ ನಂಬಿಕೆಯನ್ನು ¥sóÉ್ಲೀವಿಯಾರವರ ಈ ಆತ್ಮಚರಿತ್ರೆ ಬಯಲುಮಾಡುತ್ತದೆ. ಈ ಕೃತಿಯನ್ನು ಕತೆಗಾರ್ತಿ ನೇಮಿಚಂದ್ರ ಕನ್ನಡಕ್ಕೆ ಅನುವಾದಿಸಿದ್ದಾರೆ.

1967ರ ಡಿಸೆಂಬರ್‍ನಲ್ಲಿ ಟಾಟಾ ಕಂಪೆನಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ನಾಲ್ಕಂಕಿ ಸಂಬಳ ಪಡೆಯುತ್ತಿದ್ದ ಸ್ಫುರದ್ರೂಪಿ ಯುವಕನೊಡನೆ ಫ್ಲೇವಿಯಾರ ಮದುವೆಯಾಗುತ್ತದೆ. ಹಿರಿಯರು ನೋಡಿ ಗೊತ್ತು ಮಾಡಿದ್ದ ಮದುವೆಯಿದು. ಪಾಶ್ಚಾತ್ಯ ಹಾವಭಾವ ಮತ್ತು ಭಾರತೀಯ ಲಜ್ಜೆಯ ಸಂಮಿಶ್ರಣವಾಗಿದ್ದ ಸುಂದರ ರೂಪಿನ ಇಪ್ಪತ್ತರ ತರುಣಿ ಐದು ಹೆಣ್ಣು ಮಕ್ಕಳ ವಿಧವೆಯ ಹಿರಿಯ ಮಗಳು ಫ್ಲೇವಿಯಾರ ಈ ಮದುವೆಯಲ್ಲಿ ವರ ‘ವರದಕ್ಷಿಣೆ ಬೇಡ’ ಎಂದದ್ದು ಇಡೀ ಕುಟುಂಬಕ್ಕೆ ಸಂತೋಷದ ವಿಷಯವಾಗುತ್ತದೆ. ಈ ಕನ್ನಡದ ಹುಡುಗಿ ಮುಂಬೈಯಲ್ಲಿ ಗಂಡನೊಡನೆ ಸಂಸಾರ ಸಾಗಿಸಲು ಹೋಗುತ್ತಾಳೆ.

ಎಲ್ಲರಿಗೂ ಸಂತೋಷ ಕೊಟ್ಟ ಈ ವಧು-ವರರ ಜೋಡಿಯ ಮದುವೆಯ ನಿರೀಕ್ಷೆಗಳು, ವಿಚಾರ ಧಾರೆಗಳು, ಹಿನ್ನೆಲೆಗಳಲ್ಲಿ ಅಪಾರ ವ್ಯತ್ಯಾಸವಿತ್ತು. ಇಬ್ಬರ ನಡುವೆ ಹನ್ನೆರಡು ವರ್ಷಗಳ ಅಂತರವಿತ್ತು. ವರ ಸಣ್ಣ ಹಳ್ಳಿಯಿಂದ ದೊಡ್ಡ ಕುಟುಂಬದಿಂದ ಬಂದವನು. ಹತ್ತು ಮಕ್ಕಳ ದೊಡ್ಡ ಕುಟುಂಬದಲ್ಲಿ ಪಿತೃಪ್ರಧಾನ ಮೌಲ್ಯಗಳದೇ ದರ್ಬಾರು. ಹಿಂಸೆ-ಕ್ರೌರ್ಯ, ತುಳಿತ, ಬಡತನದ ಬದುಕು ಕಂಡವನು. ಬದುಕಿನುದ್ದಕ್ಕೂ ಹೋರಾಡುತ್ತಲೇ, ಹೆಣಗುತ್ತಲೇ ಒರಟಾದವನು. ತನ್ನ ಸ್ವಪ್ರಯತ್ನದಿಂದಲೇ ಯಶಸ್ಸಿನ ಶಿಖರ ಮುಟ್ಟಿದ್ದೇನೆಂಬ ಅಹಂಕಾರ ಜೊತೆಗೆ. ಆದರೆ ಫ್ಲೇವಿಯಾ ಸಣ್ಣ ನಗರದ ಶಾಂತ ಪರಿಸರದಿಂದ ಬಂದವಳು. ತಾಯಿ-ತಂದೆಯರು ವಿದೇಶದಲ್ಲಿದ್ದರಿಂದ ಅವಿವಾಹಿತ ದೊಡ್ಡಮ್ಮನ ಪ್ರೀತಿಯ ಮಹಾಪೂರದಲ್ಲಿ ಬೆಳೆದವಳು. ಬಾಲ್ಯ-ಕಿಶೋರಗಳಲ್ಲೆಲ್ಲಾ ಹೊಂಗನಸನ್ನು ಕಟ್ಟಿಕೊಂಡು ಆತ್ಮವಿಶ್ವಾಸದ ಪ್ರತಿಭಾವಂತ ಹುಡುಗಿಯಾಗಿ ಎಸ್.ಎಸ್.ಸಿ ಪರೀಕ್ಷೆಯವರೆಗೂ ಓದಿದ್ದವಳು. ಮದುವೆಯ ವೇಳೆಗೆ ತನ್ನ ಪ್ರೀತಿಯ ದೊಡ್ಡಮ್ಮನನ್ನು ಮತ್ತು ತಂದೆಯನ್ನು ಕಳೆದುಕೊಂಡಿದ್ದಳು. ಈ ಎರಡೂ ವಿಭಿನ್ನ ವ್ಯಕ್ತಿತ್ವಗಳ ನಡುವಿನ ಸಂಸಾರ ಸಾಮರಸ್ಯವಿಲ್ಲದ, ನೋವಿನ ಗೂಡಾಗಿತ್ತು.

ಫ್ಲೇವಿಯಾಗೆ ಚಿಕ್ಕಂದಿನಿಂದಲೇ ಅಸ್ತಮಾ ತೊಂದರೆಯ ಜೊತೆಗೆ ಮೇಲಿಂದ ಮೇಲೆ ಗರ್ಭ ಧರಿಸಬೇಕಾದ ಅನಿವಾರ್ಯತೆ. ಚಿಕ್ಕ ಪುಟ್ಟ ಕಾರಣಗಳಿಗೆಲ್ಲಾ ಕೈಗೆ ಸಿಕ್ಕಿದ್ದನ್ನು ತೆಗೆದು ಹೊಡೆಯುವ ಗಂಡ, ಕೈಯಲ್ಲಿ ಹಣ ಕಾಸು ಇಲ್ಲದ ಅಭದ್ರ ಸ್ಥಿತಿ ಅವಳ ದೇಹವನ್ನು ಮನಸ್ಸನ್ನು ನುಚ್ಚುನೂರು ಮಾಡಿತು. ನಾಲ್ಕು ವರ್ಷಗಳ ಅಂತರದಲ್ಲಿ ಮೂರು ಮಕ್ಕಳಿಗೆ ಜನ್ಮ ಕೊಟ್ಟದ್ದಲ್ಲದೆ ಗರ್ಭಪಾತಗಳೂ ಸೇರಿ ಅವರ ದೇಹ ಅನಾರೋಗ್ಯದ ಗೂಡಾಗುತ್ತದೆ. ಸಂಪೂರ್ಣ ಅಂತರ್ಮುಖಿಯಾಗಿ ಮಾತಿಲ್ಲದೆ ಮೂಕಳಾದಳು. ಹೃದಯ ಚೂರಾಗಿ ಆತ್ಮವಿಶ್ವಾಸವೇ ಕುಸಿದಿತ್ತು. ಆದರೆ ಅವಳ ಮೇಲಿನ ಹಿಂಸೆ ನಿರಂತರವಾಗಿ ಸಾಗಿತ್ತು. ಮಕ್ಕಳಿಗೂ ಕೂಡ ಅಪ್ಪ ಅಮ್ಮನಿಗೆ ಹೊಡೆಯುವುದು ಹೊರಗಿನವರಿಗೆ ಗೊತ್ತಾಗದಿರಲಿ ಎಂದೇ ಆಸೆ. ಅಂತೂ ಮಕ್ಕಳಿಗಾಗಿ, ಅವರ ಬದುಕಿನ ಒಳಿತಿಗಾಗಿ ಫ್ಲೇವಿಯಾ ತನ್ನ ಮೇಲಾಗುತ್ತಿದ್ದ ಎಲ್ಲಾ ಹಿಂಸೆಯನ್ನು ಸಹಿಸಿಕೊಳ್ಳುತ್ತಾರೆ. ಅನೇಕ ಬಾರಿ ವಿಪರೀತ ಜಗಳವಾದಾಗ ಹೊಡೆತ ಬಡಿತದ ನಂತರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದರೂ, ಮುದ್ದು ಮಕ್ಕಳ ಮುಖ ನೆನಪಿಸಿಕೊಂಡು ಅದೇ ಹಿಂಸೆಯ ಕೂಪಕ್ಕೆ ಹಿಂತಿರುಗುತ್ತಿದ್ದರು.

ಕೊನೆಗೆ, ಇಂತಹ ವಿಷಮಯ ಸಂದರ್ಭದಿಂದ ಹೊರಬರಲು ಫ್ಲೇವಿಯಾ ಸ್ವತಂತ್ರ ಬದುಕಿನ ಅನ್ವೇಷಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಈ ಬಿಡುಗಡೆಯ ಹಾದಿಯಲ್ಲೂ ಅದೆಷ್ಟು ತೊಡರುಗಳು! ‘ಬ್ಯಾಂಕ್ ಆಫ್ ಇಂಡಿಯಾ’ದ ಲಿಖಿತ ಪರೀಕ್ಷೆಯಲ್ಲಿ ಪಾಸಾದರೂ ಗಂಡನ ಅನುಮತಿಯಿಲ್ಲದ್ದರಿಂದ ಸಂದರ್ಶನಕ್ಕೆ ಹೋಗಲಾಗಲಿಲ್ಲ. ಕಾಯಿಲೆ ಬಂದರೂ ದುಡ್ಡಿಲ್ಲದೆ ಔಷಧ ತೆಗೆದುಕೊಳ್ಳಲಾಗದ ದುಃಸ್ಥಿತಿ. ಕೊನೆಗೆ ಪರಿಹಾರಕ್ಕಾಗಿ ಚರ್ಚಿನ ಪಾದ್ರಿಗಳ ಬಾಗಿಲು ತಟ್ಟಿದರೂ ಅಲ್ಲೂ ಏನೂ ಪ್ರಯೋಜನವಾಗಲಿಲ್ಲ. ಮತ್ತೆ ಹೊಡೆತ, ಬಡಿತ. ಈ ಎಲ್ಲದರಾಚೆ ಸಾಯುವ ನಿರ್ಧಾರ ಹಲವು ಬಾರಿ ತೆಗೆದುಕೊಂಡರೂ ಮಕ್ಕಳ ಮುಖ ನೋಡಿ ಮತ್ತೆ ಮತ್ತೆ ಗಂಡನ ಮನೆಗೆ ಹಿಂತಿರುಗುವ ಪ್ರಯತ್ನ. “ಇದು ನನ್ನ ಮನೆ, ನನ್ನ ಆಜ್ಞೆಯಂತೆ ನಡೆಯಬೇಕು. ನಿನಗೆ ವಿಧೇಯಳಾಗಿರುವುದನ್ನು ಕಲಿಸುತ್ತೇನೆ.’ ಎಂದು ಬಡಿಯುತ್ತಾ ಹೋದ ಗಂಡನಿಗೆ ‘ನನ್ನ ದೇಹಾನ ನೀನು ಚಿಂದಿ ಮಾಡಬಲ್ಲೆ, ನನ್ನ ಮನಸ್ಸನ್ನಲ್ಲ’ ಎಂದು ಎದುರುತ್ತರ ನೀಡುತ್ತಾರೆ.

ಹೊಸ ಫ್ಲೇವಿಯಾ ಹುಟ್ಟುವ ಪ್ರಕ್ರಿಯೆ ಈ ಪುಸ್ತಕದಲ್ಲಿ ಅರಳುತ್ತಾ ಹೋಗುತ್ತದೆ. ಗಂಡನಿಂದ ವಿಚ್ಛೇದನ ಬಯಸಿ ‘ಜೀವನಾಂಶ’ಕ್ಕಾಗಿ ದಾವಾ ಹಾಕುತ್ತಾರೆ. ಗಂಡನೂ ಕೂಡ ‘ವೈವಾಹಿಕ ಜೀವನದ ಹಕ್ಕು’ ಬೇಡಿ ಬಾಂಬೆ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡುತ್ತಾನೆ. ನ್ಯಾಯಾಲಯದ ನಿದಾನ ನಡೆ ಎಂದಿಗಾದರೂ ತ್ವರಿತ ಪರಿಹಾರ ನೀಡುವುದೆ? ಈ ಮಧ್ಯೆ ಸ್ವತಂತ್ರಳಾಗುವ ನಿರ್ಧಾರದಿಂದ ಬದುಕು ಹಾಗೆ ಮುಂದುವರೆಸುತ್ತಾರೆ. ಈ ಎಲ್ಲ ಪೆಟ್ಟುಗಳಿಂದ ಗಟ್ಟಿಯಾಗುತ್ತಾ ಹೊರಟ ಫ್ಲೇವಿಯಾ ಕೊನೆಗೆ ಗಂಡನ ಮನೆಯಲ್ಲಿಯೇ ಉಳಿದುಕೊಂಡು ಸ್ವಾವಲಂಬಿಯಾಗಲು ನಿರ್ಧರಿಸುತ್ತಾರೆ. ಮಕ್ಕಳಿಗೆ ಮನೆಪಾಠ ಹೇಳಿ ಸ್ವಲ್ಪ ಹಣ ಸಂಪಾದಿಸುವುದರೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾರೆ. ಇದಕ್ಕೆ ಗಂಡನಿಂದ ಅಡ್ಡಿ ಬಂದರೂ ಲೆಕ್ಕಿಸದೆ ಗಟ್ಟಿಯಾಗುತ್ತಾ ಹೋಗುತ್ತಾರೆ. ಅವರ ಪಾಠಕ್ಕೆ ಬರುವ ಹಲವಾರು ಮಕ್ಕಳ ಹಿನ್ನೆಲೆಯಲ್ಲೂ ತನ್ನ ಕುಟುಂಬದಲ್ಲಿ ಕಂಡಂತಹ ಹಿಂಸೆಯ ವಿವಿಧ ಛಾಯೆಗಳನ್ನು ಗುರುತಿಸುತ್ತಾರೆ.

ಈ ಮಧ್ಯೆ ಚರ್ಚಿನಲ್ಲಿ ‘ಕೈಸ್ಟ್ ದಿ ರಾಡಿಕಲ್’ಎಂಬ ವಿಷಯದ ಬಗ್ಗೆ ಮಾತನಾಡಿದ ಇಪ್ಪತ್ತೈದರ ಯುವತಿಯನ್ನು ಭೇಟಿಯಾಗುತ್ತಾರೆ. ತನ್ನ ಸಮಸ್ಯೆಗಳನ್ನು ಅವಳೊಡನೆ ಮೊದಲ ಬಾರಿ ಪ್ರಸ್ತಾಪಿಸುತ್ತಾರೆ. ಎಲ್ಲವನ್ನೂ ಕೇಳಿಸಿಕೊಂಡ ಆ ಹುಡುಗಿ ಸಿಹಿಯಾಗಿ ಮುಗುಳ್ನಕ್ಕು ಒಂದು ‘ಮಹಿಳಾ ಸಂಘ’ದ ಬಗ್ಗೆ ತಿಳಿಸಿದಳು. 1980ರ ಏಪ್ರಿಲ್‍ನಲ್ಲಿ ಮೊದಲ ಬಾರಿಗೆ ಆ ಮಹಿಳಾ ಸಂಘಕ್ಕೆ ಭೇಟಿಯಿತ್ತ ಫ್ಲೇವಿಯಾ ಮುಂದೆ ಅದರ ಸಕ್ರಿಯ ಸದಸ್ಯರಾಗೆ ಅದರ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾರಂಭಿಸಿದರು. ವಾಶಿ ಬಳಿಯ ತುರ್ಬೆಯಲ್ಲಿ ಒಬ್ಬ ಎಳೆಯ ಹುಡುಗಿಯ ಮೇಲೆ ಮೂವರು ಪೊಲೀಸರು ಸ್ಥಳೀಯ ಗೂಂಡಾಗಳೊಡನೆ ಸೇರಿ ಅತ್ಯಚಾರವೆಸಗಿದ್ದರು. ಲಾಯರುಗಳು ಬಂದು ವಿಚಾರಣೆಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಮಹಿಳಾ ಸಂಘಟನೆಯಿಂದ ಪ್ರತಿಭಟನಾ ಸಭೆಯೊಂದನ್ನು ಏರ್ಪಡಿಸಿದ್ದರು. ಆ ಹುಡುಗಿ ಮತ್ತು ಆಕೆಯ ಕುಟುಂಬ ಕರ್ನಾಟಕದವರಾದ್ದರಿಂದ ಫ್ಲೇವಿಯಾರಿಗೆ ಕನ್ನಡದಲ್ಲಿ ಭಾಷಣ ಮಾಡಲು ಹೇಳಿದರು. ಸ್ವಲ್ಪ ಅಂಜಿಕೆಯಾದರೂ ಮೊಟ್ಟ ಮೊದಲ ಭಾಷಣವಾದರೂ ಆತ್ಮವಿಶ್ವಾಸದಿಂದ ಮಾತನಾಡಿದರು. ಅದು ಬಿಡುಗಡೆಯ ಹಾದಿಯಲ್ಲಿಟ್ಟ ಮೊದಲ ಹೆಜ್ಜೆಯಾಗಿತ್ತು.

ಆ ಮಹಿಳಾ ಸಂಘದ ಮೀಟಿಂಗ್‍ಗಳಲ್ಲಿ ಅನೇಕರನ್ನು ಭೇಟಿಯಾದ ಫ್ಲೇವಿಯಾರ ಅನುಭವದ ಲೋಕ ವಿಸ್ತಾರವಾಯಿತು. ಆಗ ಅವರ ಅನುಭವವನ್ನು ಬರೆಯಲು ನಿರ್ಧರಿಸಿದರು. ಅದಕ್ಕೆ ಎರಡು ಕಾರಣಗಳಿದ್ದವು: ಒಂದು, ನಾನು ಮಹಿಳಾ ಸಂಘಟನೆಗೆ ಏಕೆ ಸೇರಿದೆ ಎಂಬ ಪ್ರಶ್ನೆಗೆ ಉತ್ತರ. ಮತ್ತೊಂದು ಮುಂಬಯಿಯಲ್ಲಿ ಮಹಿಳಾ ಆತ್ಮ ಸುರಕ್ಷಾ ಸಂಘದ ಅಗತ್ಯವನ್ನು ಒತ್ತಿ ಹೇಳುವುದಾಗಿತ್ತು. ಈ ಲೇಖನ ಬರೆದಿದ್ದರಿಂದ ಅವರಿಗೆ ತಾನೂ ಬರೆಯಬಲ್ಲೆ ಎಂಬ ವಿಷಯದ ಬಗ್ಗೆ ಆತ್ಮವಿಶ್ವಾಸ ಹುಟ್ಟಿತು. ಜೊತೆಗೆ ಅವರ ಬೌದ್ಧಿಕ ಸಾಮಥ್ರ್ಯವನ್ನು ಬೇರೆಯವರೂ ಗುರುತಿಸುವಂತಾಗಿ, ಅದರಿಂದ ಅವರಿಗೆ ಆತ್ಮಸ್ಥೈರ್ಯ ಹೆಚ್ಚಾಯಿತು. ಒಂದು ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ಸ್ನೇಹಿತೆ, ಅವರಿಗೊಂದು ಪ್ರಾಜೆಕ್ಟ್ ಕೊಟ್ಟಳು. ಮುಂಬಯಿಯಲ್ಲಿ ಗಂಡನಿಂದ ಹೊಡೆತ ತಿಂದ ಮಹಿಳೆಯರನ್ನು ಸಂದರ್ಶಿಸಿ ಸಂಶೋಧನೆ ನಡೆಸುವುದು. ಜೊತೆಗೇ ಲಾಯರ್‍ಗಳನ್ನು, ಪೊಲೀಸರು, ಅಧಿಕಾರಿಗಳನ್ನು, ಅಭಯಾಶ್ರಮದ ಸಮಾಜ ಸೇವಕರನ್ನು ಮಾತನಾಡಿಸಿ ಸಂಶೋಧನಾ ಪ್ರಬಂಧವನ್ನು ಬರೆಯಬೇಕಿತ್ತು. ಈ ಪ್ರಬಂಧದ ಮುಕ್ತಾಯದ ವೇಳೆಗೆ ‘ಹೆಂಡತಿ ಬಡಿವ ಪರಂಪರೆ’ಯ ಬಗ್ಗೆ ಸಮಾಜದಲ್ಲಿರುವ ಅನೇಕ ತಪ್ಪು ತಿಳುವಳಿಕೆಗಳು ಸ್ಪಷ್ಟವಾಗಿ ಪ್ರಕಟವಾಗಿದ್ದವು. 1989ರ ನವೆಂಬರ್‍ನಲ್ಲಿ ಸಂಘ ನಡೆಸಿದ ರಾಷ್ಟೀಯ ಸಮ್ಮೇಳನದಲ್ಲಿ ‘ಪರ್‍ಸ್ಪೆಕ್ಟೀವ್ಸ್ ಫಾರ್ ದ ಉಮನ್ಸ್ ಲಿಬರೇಷನ್ ಮೂವ್‍ಮೆಂಟ್ ಇನ್ ಇಂಡಿಯಾ’ ಎಂಬ ವಿಷಯದ ಬಗ್ಗೆ ಅವರು ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸುತ್ತಾರೆ.

ಇಲ್ಲಿಂದ ಆರಂಭವಾಯಿತು, ಅವರ ಬದುಕಿನ ಮತ್ತೊಂದು ಮಜಲು.. ಸಂಘಟನೆಯ ಗೆಳತಿಯರು ಬೆಂಬಲ ಕೊಟ್ಟರು. ಅವರಿಗೆ ಮತ್ತು ಹೆಣ್ಣು ಮಕ್ಕಳಿಗೆ ತಾತ್ಕಾಲಿಕ ಆಶ್ರಯ ನೀಡಲು ಮುಂದಾದದ್ದಲ್ಲದೆ, ದೂರು ದಾಖಲಿಸಿ, ಗಂಡನಿಂದ ವಿಚ್ಛೇದನ ಪಡೆಯಲು ನೆರವಾದರು. ಜೊತೆಗೆ ಮಕ್ಕಳ ಕಸ್ಟಡಿ ಪಡೆಯಲು ಮತ್ತು ಜೀವನಾಂಶಕ್ಕೆ ಕಾನೂನಿನ ಕ್ರಮ ಜರುಗಿಸಲು ನೆರವಾದರು. ಗಂಡನ ಅರಿವಿಲ್ಲದೆ ಮನೆಯಲ್ಲಿ ಅವರದಾಗಿದ್ದ ವಸ್ತುಗಳನ್ನು ಮೂಟೆಕಟ್ಟಿ ತಮ್ಮದೇ ಮನೆ ಮಾಡಿಕೊಂಡರು. ಇದೊಂದು ಸುಲಭದ ಕೆಲಸವೇನಾಗಿರಲಿಲ್ಲ. ಇರಲು ಮನೆಯೊಂದನ್ನು ಹುಡುಕಬೇಕಾಗಿತ್ತು. ಡೊಂಬಿವಿಲಿಯಿಂದ ಕುರ್ಲಾದವರೆಗೆ, ದಾಹಿಸಾರ್‍ನಿಂದ ಬಾಂದ್ರದವರೆಗೆ, ವಾಶಿ, ಹೊಸ ಬಾಂಬೆ ಎಲ್ಲೆಡೆ ಹುಡುಕಿದ್ದೇ ಹುಡುಕಿದ್ದು. ಅಂತೂ ದೂರದ ಸಬ್‍ಅರ್ಬ್‍ನಲ್ಲಿ ದೊರೆತ ಪುಟ್ಟ ಮನೆ. ಇಲ್ಲಿದ್ದೇ ಮಾಡಿದ ಅಗಾಧ ಕೆಲಸಗಳು- ಹೈಕೋರ್ಟಿನಲ್ಲಿ ಕೇಸ್ ಹಿಂಬಾಲಿಸುವುದು, ಹೊಟ್ಟೆ ಪಾಡಿಗೆ ದುಡಿಯುವುದು, ಮನೆ ನೋಡಿಕೊಳ್ಳುವುದು, ಮಕ್ಕಳನ್ನು ನೋಡಿಕೊಳ್ಳುವುದು, ನನ್ನ ಕ್ಷೀಣಿಸುತ್ತಿದ್ದ ಆರೋಗ್ಯದ ಸ್ಥಿತಿಯಲ್ಲಿ ಏಕಾಂಗಿಯಾಗಿ ಈ ಎಲ್ಲ ಕೆಲಸಗಳನ್ನು ನಿಭಾಯಿಸುವುದು ನಿಜಕ್ಕೂ ಸವಾಲಿನ ಸಂಗತಿಯಾಗಿತ್ತು. ಮತ್ತೆ ಅದೇ ಸಮಸ್ಯೆ. ಈ ಜಾಗ ಮಕ್ಕಳಿಗೆ ಸರಿಯಾಗಿರಲಿಲ್ಲ. ಮತ್ತೆ ಗಂಡನ ಹಿಂಸೆಯ ಕೂಪಕ್ಕೆ ಹೋಗಿಬಿದ್ದರು.

ಈ ಬಾರಿ ಅವರು ವಿವಾಹವನ್ನು ಪುನರ್‍ವಿಮರ್ಶಿಸಿ ನೋಡಲು ಪ್ರಾರಂಭಿಸಿದರು. ಈ ವಿವಾಹದ ಚೌಕಟ್ಟು ವಿಧಿಸುವ ಸಾಂಪ್ರದಾಯಿಕ ಪಾತ್ರಗಳನ್ನು ಪುನರ್‍ವಿಶ್ಲೇಷಿಸಬೇಕಿತ್ತು. ಹೆಂಡತಿ, ತಾಯಿ ಪಾತ್ರಗಳಾಚೆ ತನ್ನ ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆಯನ್ನು ಮನಗಂಡರು. ಹೈಕೋರ್ಟಿನಲ್ಲಿ ‘ಒಪ್ಪಂದದ ಕರಾರು’ಗಳಿಗೆ ಸಹಿಯಾಯಿತು. “ ನಾನು ಬಡಿಯುವುದಿಲ್ಲ, ಹಿಂಸೆ ಮಾಡುವುದಿಲ್ಲ, ಅಗತ್ಯಕ್ಕೆ ಬೇಕಾದ ಹಣವನ್ನು ಕೊಡುತ್ತೇನೆ, ಅವಳಿಗೆ ಪ್ರತ್ಯೇಕ ಕೋಣೆ ಕೊಡುತ್ತೇನೆ, ಈ ಮದುವೆಯನ್ನು ಉಳಿಸಿಕೊಳ್ಳಬಯಸುತ್ತೇನೆ…” ಮುಂತಾದ ಪ್ರಮಾಣಗಳು, ಆಶ್ವಾಸನೆಗಳು ಮುಂದೆ ಗಾಳಿಯಲ್ಲಿ ತೂರಿದ ಖಾಲಿ ಮಾತುಗಳಾದವು.

ಈಗಾಗಲೇ ತೊಡಗಿಕೊಂಡಿದ್ದ ಸಂಘದ ಚಟುವಟಿಕೆಗಳು ಚಳುವಳಿ ಹಂತದಲ್ಲಿದ್ದವು. ಮಹಿಳೆಯರನ್ನು ಬಾಧಿಸುವ ಮುಖ್ಯ ವಿಚಾರಗಳನ್ನು ಕುರಿತು ಪ್ರತಿಭಟನಾ ಪ್ರದರ್ಶನ, ಮೋರ್ಚಾಗಳು ಧರಣಿಗಳಿದ್ದವು. ಅತ್ಯಾಚಾರ ಕುರಿತ ಕಾನೂನಿಗೆ ಬದಲಾವಣೆ ತರಲು ಒತ್ತಡ ಹೇರುವುದು, ವರದಕ್ಷಿಣೆ ಸಾವಿನ ವಿರುದ್ಧ ಪ್ರತಿಭಟನೆ, ಸಮೂಹ ಮಾಧ್ಯಮಗಳಲ್ಲಿ ಲಿಂಗತಾರತಾಮ್ಯವನ್ನು ಕುರಿತ ಹೋರಾಟಗಳು ನಡೆದಿದ್ದವು.

ಆದರೂ ಈ ಎಲ್ಲ ಚಟುವಟಿಕೆಗಳ ನಡುವೆ ವೈಯಕ್ತಿಕ ಹಂತದಲ್ಲಿ ಪರಸ್ಪರ ಸಹಾಯ, ಸಹಕಾರ, ಬೆಂಬಲ ನೀಡುವ ‘ಮಹಿಳಾ ಕೇಂದ್ರ’ವೊಂದನ್ನು ಸ್ಥಾಪಿಸಬೇಕೆಂಬ ಅಗತ್ಯ ಕಂಡಿತು. ಒಂದು ಕಚೇರಿ, ಒಂದು ವಿಳಾಸ ಮತ್ತು ಔಪಚಾರಿಕ ರಚನೆಯಿರುವ ಮಹಿಳಾ ಕೇಂದ್ರದ ಅಗತ್ಯವನ್ನು ಮನಗಂಡರು. ಸೆಪ್ಟೆಂಬರ್ 1981, ಆರು ಜನ ಮಹಿಳೆಯರು ಜೊತೆಗೂಡಿ ಒಂದು ‘ಮಹಿಳಾ ಕೇಂದ್ರ’ವನ್ನು ಆರಂಭಿಸಿದರು. ಇದರ ಒಬ್ಬ ಸಕ್ರಿಯ ಸದಸ್ಯೆಯೊಬ್ಬಳು ತನ್ನ ಮನೆಯ ಕೋಣೆಯೊಂದನ್ನು ಕೇಂದ್ರದ ಕಚೇರಿಯಾಗಿ ಮಾಡಿಕೊಳ್ಳಲು ಕೊಟ್ಟಳು. 19, ಡಿಸೆಂಬರ್ ಮಹಿಳಾ ಕೇಂದ್ರ ಅಸ್ತಿತ್ವಕ್ಕೆ ಬಂದಿತು. ಹಾಗೆಯೇ ಹಾಳೆ, ಪೆನ್ನು, ಪುಸ್ತಕ, ಮಾಹಿತಿಗಳನ್ನು ಒಬ್ಬೊಬ್ಬರಾಗಿ ಕೊಡುಗೆಯಾಗಿ ಕೊಟ್ಟರು. ಈ ಕೇಂದ್ರ ವಾರದಲ್ಲಿ ಎರಡು ಬಾರಿ ಕಾರ್ಯನಿರ್ವಹಿಸುತ್ತಿತ್ತು. ನೊಂದ ಮಹಿಳೆಯರು ಈ ಕೇಂದ್ರಕ್ಕೆ ಭೇಟಿ ನೀಡಿದಾಗ, ‘ಆಪ್ತ ಸಲಹಾ’ ಸಮಯದಲ್ಲಿ ಅವರು ಮಹಿಳೆಯರಿಗೆ ಹೇಳುತ್ತಿದ್ದರು: ‘ನಿಮ್ಮಲ್ಲಿ ಸಮಸ್ಯೆ ಇದೆ, ನಮ್ಮಲ್ಲಿ ಉತ್ತರವಿದೆ’ ಎಂಬ ಅರ್ಥವಲ್ಲ. ಇಂದಿನ ಸಮಾಜದಲ್ಲಿ, ಒಂದು ಸಮಸ್ಯೆಗೆ ನಿಖರವಾದ ಇಂಥದ್ದೇ ಎಂಬ ಪರಿಪೂರ್ಣ ಪರಿಹಾರವಿಲ್ಲ. ಆದರೆ ಬಹುಶಃ ಜೊತೆಯಾಗಿ ಎಲ್ಲರೂ ಹೊಸ ಸಮಸ್ಯೆಗಳನ್ನು ಎದುರಿಸಲು ಹೊಸ ತಂತ್ರಗಳನ್ನು ಹುಡುಕಬಹುದು, ಹೊಸ ವಿಧಾನಗಳನ್ನು ಕಂಡು ಹಿಡಿಯಬಹುದು.

ಕೇಂದ್ರ ಬೆಳೆದಂತೆ ಕೇಂದ್ರದ ನಿರ್ದೇಶಕಿಯಾಗಿದ್ದ ಫ್ಲೇವಿಯಾರವರಿಗೆ ಹೆಚ್ಚಿನ ಓದಿನ ಅವಶ್ಯಕತೆ ಕಂಡಿತು. ವಿದ್ಯೆ, ಡಿಗ್ರಿಗಳಲ್ಲದ ಬದುಕಿನ ಮಿತಿಯನ್ನು ನೀಗಬೇಕಿತ್ತು. ಆದ್ದರಿಂದ ಎಸ್.ಎನ್.ಡಿ.ಟಿ. ತೆರೆದ ವಿಶ್ವವಿದ್ಯಾಲಯದಲ್ಲಿ ಬಿ.ಎ. ಪರೀಕ್ಷೆಗೆ ಕಟ್ಟುತ್ತಾರೆ. ‘ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗುತ್ತಾರೆ. ಇದೇ ಸಮಯದಲ್ಲಿ ಅವರಿಗೆ ಕೆನಡಾದ ಮಾಂಟ್ರೇಲ್‍ನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ‘ಬಾಂಬೆಯ ಹೆಂಡತಿ ಬಡಿವ ಕೌಟುಂಬಿಕ ಹಿಂಸೆಯ ವಿರುದ್ಧ ನಮ್ಮ ಹೋರಾಟ’ ವಿಷಯವನ್ನು ಕುರಿತು ಪ್ರಬಂಧ ಮಂಡಿಸಲು ಆಹ್ವಾನ ಬರುತ್ತದೆ. ಪಾಶ್ಚಿಮಾತ್ಯ ದೇಶಕ್ಕೆ ಅವರ ಮೊದಲ ಭೇಟಿಯಾಗಿರುತ್ತದೆ. ಈ ಪ್ರವಾಸ ಅವರಲ್ಲಿ ಆತ್ಮವಿಶ್ವಾಸವನ್ನು ಬಡಿದೆಬ್ಬಿಸುತ್ತದೆ.
ಡಿಸೆಂಬರ್ 1983ರ ಕೊನೆಗೆ ಕೋರ್ಟಿನಲ್ಲಿ ತೀರ್ಪು ನೀಡಿದರು. ಹೆಣ್ಣು ಮಕ್ಕಳ ಕಸ್ಟಡಿ ಸಿಕ್ಕುತ್ತದೆ. ಆದರೆ ಜೀವನಾಂಶವಿಲ್ಲ. ಆದರೂ ಅವರು ಇದನ್ನು ಸೋಲೆಂದು ಭಾವಿಸದೆ ಗಳಿಸಿದ ಲಾಭವನ್ನು ಪಟ್ಟಿ ಮಾಡುತ್ತಾರೆ: “ನನಗೆ ಈ ಹೋರಾಟ ‘ಬಿಡುಗಡೆ’ಯಾಗಿತ್ತು. ಭೀತಿ, ಆತಂಕ, ದೈಹಿಕ ಹೊಡೆತಗಳಿಂದ ಬಿಡುಗಡೆಯಾಗಿತ್ತು. ನನ್ನ ಹಗಲು ರಾತ್ರಿಗಳನ್ನು ನಾನು ಯೋಜಿಸುವುದಾಗಿತ್ತು. ಒಂದು ಕೆಲಸವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಾಗಿತ್ತು. ಒಂದು ಸಭೆಯಲ್ಲಿ ಭಾಗವಹಿಸುವ, ರಾತ್ರಿಯ ಆಳದವರೆಗೂ ಶಾಂತವಾಗಿ ಕೆಲಸ ಮಾಡುವ, ಯಾವುದೇ ಕ್ಷಣದಲ್ಲಿ ನನ್ನನ್ನು ಹೊರಗೆ ಎಸೆಯುವ ಭೀತಿಯಿಲ್ಲದ ಮನೆಯಲ್ಲಿ ಬದುಕುವುದಾಗಿತ್ತು. ಶಾಂತ ಪರಿಸರದಲ್ಲಿ ನನ್ನ ಮಕ್ಕಳೊಡನೆ ಸಮಯ ಕಳೆಯುವುದಾಗಿತ್ತು. ಅವರಿಗೆ ಬದುಕಿನ ಹೊಸ ಮೌಲ್ಯವನ್ನು ಕಲಿಸುವುದಾಗಿತ್ತು….  ಅಮೆರಿಕಾದಲ್ಲಿ ಗುಲಾಮಗಿರಿಯನ್ನು ನಿಷೇಧಿಸಿದ ಮೇಲೆ, ಗುಲಾಮರು ಸ್ವತಂತ್ರರಗುವುದನ್ನು ಕಲಿತಂತೆ, ನನಗೆ ನಾನೇ ಸ್ವತಂತ್ರಳಾಗುವುದನ್ನು ಕಲಿಸಿಕೊಳ್ಳಬೇಕಿತ್ತು.”

ಅಂತೂ ಕೊನೆಗೆ ‘ಬಡಿಸಿಕೊಂಡ ಹೆಣ್ಣು’ ಆತ್ಮವಿಶ್ವಾಸದ ಹೆಣ್ಣಾಗಿ ನೆಮ್ಮದಿಯ ನಾಳೆಗಳ ಕನಸು ಕಾಣುವ ಹೊಸ ಭರವಸೆಯ ಹೆಣ್ಣಾಗಿ ಪರಿವರ್ತಿತಳಾದದ್ದು ಈ ಆತ್ಮಚರಿತ್ರೆಯ ಮುಖ್ಯ ವಸ್ತು. ಅವರ ಮಹಿಳಾ ಕೇಂದ್ರ ತಮ್ಮದೇ ಆದ ಸ್ವಂತ ಕಚೇರಿ ಹೊಂದಿತು. ದುಡಿಯಲು ಸಿದ್ಧರಾದ ಸ್ವಯಂ ಸೇವಕರ ಸಂಖ್ಯೆಯೂ ಏರುತ್ತಲೇ ಹೋಯಿತು. ಜನರಿಂದ ಸಹಾಯ ಹರಿದುಬಂದಿತು. ಸ್ವಲ್ಪ ದಿನಗಳ ನಂತರ ಈ ಕೇಂದ್ರದಿಂದ ದೂರ ಸರಿದ ಫ್ಲೇವಿಯಾ ವಕೀಲೆಯಾಗಿ ಮುಂದುವರಿಯುತ್ತಾರೆ. ಅವರಿಗೆ ವಿಚ್ಛೇದನ ನೀಡಲು ಸರ್ಕಾರ ಮತ್ತು ಚರ್ಚ್ ನಿರಾಕರಿಸಿರುತ್ತದೆ. ಆದರೆ ಇದನ್ನು ಫ್ಲೇವಿಯಾ ಮುಂದುವರಿದು ‘ನನಗೆ ಕಾನೂನಿನ ಮೇಜನ್ನು ಹಿಂದುಮುಂದಾಗಿ ತಿರುಗಿಸಲು ಸಾಧ್ಯವಾಗಿಲ್ಲ, ಆದರೆ ಕನಿಷ್ಠ ಮೇಜಿನ ಆ ಬದಿಗೆ ಹೋಗಿ ನಿಂತಿದ್ದೇನೆ.’ ಎನ್ನುತ್ತಾ ಯಶಸ್ವಿ ವಕೀಲೆಯಾಗುತ್ತಾರೆ.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *