ನನ್ನೊಬ್ಬಳಿಂದೇನಾಗಬಹುದು?- ನೇಮಿಚಂದ್ರ
ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ. ‘ನನ್ನೊಬ್ಬನಿಂದ ಏನಾಗುತ್ತೆ? ನನ್ನೊಬ್ಬಳಿಂದ ಜಗತ್ತು ಬದಲಾಗಿಬಿಡುತ್ತದೆಯೇ?’ ಇಂತಹ ಸಿನಿಕತನದಲ್ಲೇ ನಮ್ಮಿಂದಾಗುವುದನ್ನೂ ಮಾಡದೆ ಮಲಗುತ್ತೇವೆ. ಆದರೆ ವಾಸ್ತವ ಬೇರೆಯೇ ಆಗಿರುತ್ತದೆ.
ಐದು ವರ್ಷಗಳ ಹಿಂದಿನ ಮಾತು. ಗೆಳತಿ ರಮ್ಯಾ (ಹೆಸರು ಬದಲಿಸಿದೆ) ಅತ್ಯಂತ ಕೆಟ್ಟ ವಿವಾಹದಿಂದ ಆಗಷ್ಟೇ ಹೊರ ಬಂದಿದ್ದಳು. ಮದುವೆ ಅಷ್ಟು ಕೆಟ್ಟಿದ್ದರೂ, ವಿಚ್ಛೇದನವನ್ನು ಆಕೆ ಬಯಸಿರಲಿಲ್ಲ. ಬಲು ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆಯಿಂದ ಬಂದ ಹುಡುಗಿ ಡೈವೋರ್ಸಿ ಅನಿಸಿಕೊಳ್ಳಲು ಸಿದ್ಧವಿರಲಿಲ್ಲ. ಹತ್ತು ವರ್ಷದ ವಿವಾಹ ಮುರಿದು ಬಿದ್ದಿತ್ತು. ಒಂಬತ್ತು ವರ್ಷದ ಹೆಣ್ಣು ಮಗು. ಗಂಡ ಹಠ ಮಾಡಿ, ಹಿಂಸೆ ನೀಡಿ ವಿಚ್ಛೇದನ ಪಡೆದುಕೊಂಡಿದ್ದ. ರಮ್ಯಾ ನನ್ನೊಡನೆ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಸಂಶೋಧನೆ ಮಾಡಿದ್ದ ಹುಡುಗಿ ಸಾಫ್ಟ್ ವೇರ್ ರಂಗಕ್ಕೆ ಸರಿದು ಕೈತುಂಬಿ ತುಳುಕುವಷ್ಟು ಸಂಬಳ ಬರುವ ಕೆಲಸದಲ್ಲಿದ್ದಳು.
ಅಂದು ಕಾರ್ಖಾನೆಯಲ್ಲಿ ಬಿಡುವಿಲ್ಲದ ಕೆಲಸದ ನಡುವೆ ನಾನಿದ್ದೆ. ಅವರಮ್ಮನಿಂದ ಫೋನ್ ಬಂತು. ‘ರಮ್ಯಾ ಕೆಲಸ ಬಿಟ್ಟಿದ್ದಾಳೆ. ಮಗು ನನ್ನ ಕೈಗೆ ಕೊಟ್ಟು ಆಶ್ರಮಕ್ಕೆ ಹೋಗ್ತೀನಿ ಅಂತಿದ್ದಾಳೆ. …’ ಅಂದರು. ಆ ದಿನ ಹೆಲಿಕಾಪ್ಟರ್ ಟೆಸ್ಟಿಂಗ್ ಏನೋ ನಡೆಯುತ್ತಿದ್ದ ಕಾರಣ, ಕಾರ್ಖಾನೆಯಿಂದ ನಾನು ಬೇಗ ಹೊರಡುವಂತಿರಲಿಲ್ಲ. ಟೆಸ್ಟಿಂಗ್ ಎಲ್ಲ ಮುಗಿದಾಗ ಸಂಜೆ ತಡವಾಗಿತ್ತು. ಬೆಳಗ್ಗೆ ಆರು ಗಂಟೆಗೇ ಮನೆ ಬಿಡುವ ನನಗೆ ತೀರಾ ಆಯಾಸವಾಗಿ ಮನೆ ಸೇರಿದರೆ ಸಾಕು ಎನಿಸುತ್ತಿತ್ತು. ರಮ್ಯಾಳದು ತುಂಬು ಕುಟುಂಬ. ‘ಮನೆಯವರೆಲ್ಲಾ ಅಷ್ಟು ಹೇಳಿರುತ್ತಾರೆ. ನಾನೊಬ್ಬಳು ಹೋಗಿ ಮಾಡುವುದೇನು? ಎಂದು ಮನೆಗೆ ಹೋಗುವ ತವಕದಲ್ಲಿದ್ದೆ. ಆದರೆ ಒಳಗೆಲ್ಲೋ ಗುದ್ದಿದ ಅನುಭವ. ’ನನ್ನೊಬ್ಬಳಿಂದೇನಾಗುತ್ತದೆ’ ಅನ್ನೋದೆಲ್ಲಾ ನನ್ನ ಸೋಮಾರಿತನಕ್ಕೆ ಕೊಟ್ಟ ಸಬೂಬು ಎನಿಸಿ, ಮನೆಗೆ ಹೊರಟ ಹಾದಿ ಬದಲಿಸಿ ಮಲ್ಲೇಶ್ವರಂನಲ್ಲಿ ಇಳಿದೆ. ಪರಿಸ್ಥಿತಿ ನಾನು ಅಂದುಕೊಂಡದ್ದಕ್ಕಿಂತ ಗಂಭೀರವಾಗಿತ್ತು. ನೀಳ ಜಡೆ ಕತ್ತರಿಸಿಕೊಂಡಿದ್ದಳು. ಬಿಳಿ ಬಟ್ಟೆ ಧರಿಸಿದ್ದಳು. ಅವಳ ಕೋಣೆಯಲ್ಲಿ ಮೂರು ಅಡಿ ಎತ್ತರದ ಸ್ವಾಮೀಜಿಯೊಬ್ಬರ ದೊಡ್ಡ ಭಾವಚಿತ್ರ ರಾರಾಜಿಸುತ್ತಿತ್ತು. ’ಆಚಾರ್ಯರ ಕರೆ ಬಂದಿದೆ. ನಾನು ಹೋಗಬೇಕು’ ಏನೇನೋ ಬಡಬಡಿಸಿದಳು. ’ಆಚಾರ್ಯರು ನನ್ನ ಪೂರ್ವ ಜನ್ಮದ ವೃತ್ತಾಂತವನ್ನೆಲ್ಲ ಹೇಳಿದ್ದಾರೆ…… ನನಗೆ ಸದಾ ಪ್ರಶ್ನೆ ಕಾಡುತ್ತಿತ್ತು. ನನಗೇ ಏಕೆ ಹೀಗಾಗಬೇಕಿತ್ತು?’ ಎಂದೇನೋ ಕೊರೆದಳು. ’ಅಂತದ್ದೆಲ್ಲಾ ಹೇಗೆ ನಂಬ್ತೀಯಾ, ಮಾಡೋ ಕರ್ತವ್ಯ ಬಿಟ್ಟು, ಹೆತ್ತ ಮಗು ಭಾರನೆಲ್ಲ ವಯಸ್ಸಾದ ತಾಯಿ ಮೇಲೆ ಹೇರಿ ಹೋಗ್ತಾ ಇದ್ದೀಯಲ್ಲ …’ ತರಾಟೆಗೆ ತೆಗೆದುಕೊಂಡೆ. ‘ಅವರವರ ಹಣೆಯ ಬರಹದೊಡನೆ ಹುಟ್ಟಿ ಬಂದವರು. ಅವರು ಕೇಳಿ ಪಡೆದ ಬದುಕು ಕಾದಿರುತ್ತೆ’ ವೇದಾಂತ ಹೇಳಿದಳು. ತಂದೆಯೊಡನೆ ನಿನ್ನ ಮಗು, ತಾಯಿಯನ್ನೂ ಕಳೆದುಕೊಳ್ಳಬೇಕೆ?’ ಮೂರು ಗಂಟೆಗಳ ಕಾಲ ಎಷ್ಟೆಷ್ಟೋ ಹೇಳಿದೆ, ವಾದಿಸಿದೆ, ಗೋರ್ಕಲ್ಲ ಮೇಲೆ ಮಳೆ ಸುರಿದೆ. ಅವಳನ್ನು ನಿಲ್ಲಿಸಲಾರದ ಅಪ್ಪಟ ಸೋಲಿನಲ್ಲಿ ಮನೆಗೆ ಹೊರಟು ಬಂದೆ. ಮನಸ್ಸಿಗೋ ವಿಪರೀತ ಹಿಂಸೆ.
ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ. ‘ನನ್ನೊಬ್ಬನಿಂದ ಏನಾಗುತ್ತೆ? ನನ್ನೊಬ್ಬಳಿಂದ ಜಗತ್ತು ಬದಲಾಗಿಬಿಡುತ್ತದೆಯೇ?’ ಇಂತಹ ಸಿನಿಕತನದಲ್ಲೇ ನಮ್ಮಿಂದಾಗುವುದನ್ನೂ ಮಾಡದೆ ಮಲಗುತ್ತೇವೆ. ಆದರೆ ವಾಸ್ತವ ಬೇರೆಯೇ ಆಗಿರುತ್ತದೆ.
ಒಬ್ಬ ರೋಸಾ ಪಾರ್ಕ್ ಳಿಂದ ಅಮೆರಿಕದ ಇಡೀ ವರ್ಣಭೇದದ ನಿಯಮಗಳನ್ನು ಮುರಿಯಲು ಸಾಧ್ಯವಾಗಬಲ್ಲುದು. ಅಮೆರಿಕದ ಬಸ್ಸುಗಳಲ್ಲಿ ಕಪ್ಪು ಜನರಿಗೆ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಹಕ್ಕಿರಲಿಲ್ಲ. ಡಿಸೆಂಬರ್ ೧,೧೯೫೫, ದುಡಿದು ದಣಿದ ಕಪ್ಪು ಮಹಿಳೆ ರೋಸಾ ಪಾರ್ಕ್ ಬಸ್ಸಿನೊಳಕ್ಕೆ ಹತ್ತಿದಳು. ಮುಂದಿನ ಸೀಟುಗಳು ಖಾಲಿ ಇದ್ದವು. ಕುಳಿತಳು. ಅನಂತರದ ನಿಲ್ದಾಣದಲ್ಲಿ ಹತ್ತಿದ ಬಿಳಿಯರು. ರೋಸಾಳನ್ನು ಹಿಂದಕ್ಕೆ ಹೋಗುವಂತೆ ಆಜ್ಞಾಪಿಸಿದರು. ರೋಸಾ ಸೀಟಿನಿಂದ ಕದಲಲಿಲ್ಲ. ಆಕೆಯನ್ನು ಬಂಧಿಸಿ ಕರೆದೊಯ್ದರು. ರೋಸಾ ’ಬಸು ಬಾಯ್ಕಾಟ್’ಗೆ ಸ್ಫ್ಹೂರ್ತಿಯಾದಳು. ಕಡೆಗೂ ಅಮೆರಿಕದ ಸುಪ್ರೀಂ ಕೋರ್ಟ್ ಬಸ್ಸಿನಲ್ಲಿಯ ಕರಿಯರ – ಬಿಳಿಯರ ವಿಂಗಡಣೆ, ಶಾಸನಕ್ಕೆ ವಿರುದ್ಧವಾದದ್ದು ಎಂದು ಘೋಷಿಸಬೇಕಾಯಿತು. ಅಮೆರಿಕದ ನಾಗರಿಕ ಹಕ್ಕುಗಳ ಚಳುವಳಿಗೆ ರೋಸಾ ಪ್ರೇರಣೆಯಾದಳು.
ಇವೆಲ್ಲ ಬಹುದೂರದ ಪ್ರೇರಣೆಯೆನಿಸಿದರೆ, ನಮ್ಮ ನೆಲದ ಉದಾಹರಣೆಗಳಿಗೇನೂ ಕಡಿಮೆಯಿಲ್ಲ. ಒಬ್ಬ ಹದಿಮೂರು ವರ್ಷದ ಬಾಲೆ ’ಗಂಗಾ’ಳಿಂದ ಪುಣೆಯ ಕೊಳಚೆ ಪ್ರದೇಶದ ೩೦ ಮಹಿಳೆಯರಿಗೆ ಸಾಕ್ಷರತೆ ಸಿದ್ಧಿಸಬಲ್ಲುದು. ಸಾಲು ಮರ ನೆಡುತ್ತಾ ಹೋದ ತಿಮ್ಮಕ್ಕ, ’ನನ್ನೊಬ್ಬಳಿಂದೇನಾಗುತ್ತದೆ?’ ಎಂದು ಯೋಚಿಸಲಿಲ್ಲ.
ಅಂದ ಹಾಗೆ ಎರಡು ವರ್ಷಗಳ ಹಿಂದೆ ನನಗೊಂದು ಫೋನ್ ಬಂತು. ರಮ್ಯಾ ಬೆಂಗಳೂರಿಗೆ ಬಂದಿದ್ದಳು. ‘ಹಾಲಿಡೆ ಇನ್’ನಲ್ಲಿ ಇಳಿದುಕೊಂಡಿದ್ದಳು. ಬಂದು ಭೇಟಿಯಾಗಲು ಸಾಧ್ಯವೇ?’ ಎಂದು ಕೇಳಿದಳು. ನನ್ನೊಳಗೆ ಎದ್ದ ನೂರು ಪ್ರಶ್ನೆಗಳನ್ನು ತಡೆದುಕೊಂಡು ’ಹಾಲಿಡೆ ಇನ್ ಗೆ ಓಡಿದೆ. ರಮ್ಯಾ ಹೈದರಾಬಾದಿನ ಸಾಫ್ಟ್ ವೇರ್ ಕಂಪೆನಿಯೊಂದಕ್ಕೆ ಸೇರಿದ್ದಳು. ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದಳು. ’ಆಶ್ರಮಕ್ಕೆ ಹೊರಟೆ, ಹೋಗೂ ಬಿಟ್ಟೆ. ಆದರೆ ಸದಾ ಆ ಮಾತು ಗಸ್ತು ಹೊಡೆಯುತ್ತಿತ್ತು. ನಾನು ಮಾಡಿದ್ದೇನೋ ಸರಿಯಿಲ್ಲ ಅನಿಸ್ತಾ ಇತ್ತು. ತಂದೆ ಕಳೆದುಕೊಂಡ ಮಗುವಿಗೆ ತಾಯಿಯಾಗಿ ನಿಲ್ಲದೆ ಹೊರಟುಹೋಗಿದ್ದೆ. ಡೈವೋರ್ಸಿ ಅನ್ನೋ ಹೆಸರು ಹೊತ್ತು ಸಮಾಜ ಎದುರಿಸಲು ಹೆದರಿ ಓಡಿಹೋಗಿದ್ದೆ. ನನ್ನ ತಪ್ಪೇ ಇಲ್ಲದೆ ಆದ ವಿಚ್ಛೇದನದ ಬಗ್ಗೆ ನಾನೇಕೆ ಅಪರಾಧಿ ಪ್ರಜ್ಞೆ ಬೆಲೆಸಿಕೊಂಡು ಮುಖ ಮುಚ್ಚಿಕೊಳ್ಳಬೇಕು ಅನ್ನಿಸ್ತು. ಹಿಂದಿರುಗಿ ಬಂದೆ. ಬರುವುದು ಸುಲಭವಿರಲಿಲ್ಲ. ಆದರೂ ಬಂದೆ. ಸಾಫ್ಟ್ ವೇರ್ ರಂಗ ನನ್ನನ್ನು ಹಿಂದೆ ಬಿಟ್ಟು ಬಲು ಮುಂದೆ ಓಡಿಬಿಟ್ಟಿತ್ತು. ಒಂದಾರು ತಿಂಗಳು ಹೊಸ ಹೊಸ ಕೋರ್ಸುಗಳನ್ನು ಮಾಡಿಕೊಂಡೆ. ಮತ್ತೆ ಕೆಲಸಕ್ಕೆ ಸೇರಿದೆ. ಮೊದಲಿನಷ್ಟು ಏರಿ ನಿಂತ ಸಂಬಳವಲ್ಲ. ಆದರೆ ಏರಬಲ್ಲೆ ಅನ್ನೋ ಭರವಸೆ ಇದೆ….’ ಅವಳು ಹೇಳುತ್ತಿದ್ದಂತೆ ದಿಗ್ಭ್ರಾಂತಳಾಗಿ ಕುಳಿತುಬಿಟ್ಟೆ. ನಿಜವಾಗಿ ನೋಡಿದರೆ, ಮರಳಿ ಬದುಕಿಗೆ ಹಿಂದಿರುಗದ ಈ ಸಾಹಸ, ಅವಳ ನಿರ್ಧಾರವಾಗಿತ್ತು, ಅವಳ ಪ್ರಯತ್ನವಾಗಿತ್ತು. ಆದರೆ ಅಲ್ಲೆಲ್ಲೋ ನಿಮಿತ್ತ ಮಾತ್ರವಾಗಿಯಾದರೂ ಸೋಮಾರಿತನವನ್ನು ದೂಡಿ ಅವಳೊಡನೆ ಮೂರು ಗಂಟೆಗಳು ಗುದ್ದಾಡಿದ ಆ ಸಂಜೆ ನನ್ನದಾಗಿತ್ತು.
’ನನ್ನೊಬ್ಬಳಿಂದೇನಾಗುತ್ತದೆ?’ ಪ್ರಶ್ನೆ ಕೇಳಿ ಬಂದಾಗಲೆಲ್ಲ ನಾನು ಉತ್ತರಿಸುತ್ತೇನೆ – ’ನಿನ್ನೊಬ್ಬಳಿಂದ ಜಗತ್ತು ಬದಲಾಗಬಹುದು. ಅದು ನಿನ್ನ ಮನೆಯಷ್ಟು ಪುಟ್ಟ ಜಗತ್ತಿರಬಹುದು. ನಿನ್ನ ಸ್ನೇಹವೃಂದಕ್ಕೆ ಹಿಗ್ಗಿ ಹಬ್ಬಿದ್ದಾಗಿರಬಹುದು. ಯಾರಿಗೆ ಗೊತ್ತು ಅದರಾಚಿನ ಜಗತ್ತನ್ನೂ ಆವರಿಸಬಹುದು!’
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Madam, Excellent adventure. I wish you all the success.
T.R.Chandrashekhara
ನಿಜ ಪ್ರಯತ್ನದಿಂದ ಎಲ್ಲವೂ ಸಾಧ್ಯ
Dear nemichandra madam, belated birthday wishes to you, very nice write up ..inspiring.. wishing many more such articles
Banu Deshpande
Really inspiring article.Best wishes for the magazine
ಈ ಕಥೆಯನ್ನು ನೀವು ಬರೆದ “ಕಳೆಯ ಬೇಕಿದೆ ನಿನ್ನ ಜೊತೆಯಲ್ಲೊಂದು ಶ್ಯಾಮಲ ಸಂಜೆ” ಎಂಬ ಶೀರ್ಷಿಕೆಯಲ್ಲಡಿಯಲ್ಲಿ ಯಾರ ‘ಸರಿ’ ಗೂ ‘ ಬೆಸ’ವಾಗ ಬಯಸದ ಅಹಲ್ಯೆ ಯು ಕಥೆಯಾಗಿ ಓದಿದ್ದೆ.. ಅದ್ಭುತವಾದ ಬರಹ… ನಿಮ್ಮ ತಾರ್ಕಿಕ ನುಡಿಗಳಿಂದಲಾದರೂ ಬದುಕಿನತ್ತ, ಬದುಕುವತ್ತ ಆಕೆ ಮೊಗ ಮಾಡಬಹುದಿತ್ತಲ್ಲ ಎಂದು ಯಾವಾಗಲೂ ಅನಿಸುತ್ತಿತ್ತು… ಇಂದು ಈ ಬರಹದ ಅಂತ್ಯ ಸಮಾಧಾನ ನೀಡಿತು…
ನಮ್ಮ ಒಂದು ಸಣ್ಣ ಪ್ರಯತ್ನ ಎಷ್ಟೋ ಜನರ ಆಲೋಚನೆಯ ದಿಕ್ಕನ್ನೇ ಬದಲಿಸಬಲ್ಲದು.ನನ್ನೊಬ್ಬಳಿಂದೇನಾಗುತ್ತೆ ಎನ್ನುವ ಹತಾಶೆಗಿಂತ ನನ್ನ ಪ್ರಯತ್ನ ನಾನು ಮಾಡುತ್ತೇನೆ ಎನ್ನುವ ಪಾಸಿಟಿವ್ ಮೂವ್ ಮುಖ್ಯ. ನೇಮಿಚಂದ್ರರ ಅನುಭವ ನನಗೂ ಹಲವಾರು ಬಾರಿ ಆಗಿದೆ.
ಗೋಹರ್ ಕರ್ನಾಟಕಿ ಬಗ್ಗೆ ಮಾಹಿತಿ ಪೂರ್ಣ ಲೇಖನ.
Pingback: ಅಂಕಣ/ ಕಣ್ಣು ಕಾಣದ ನೋಟ/ ಬದಲಾಗ ಬೇಕು ನಾವು – ಸುಶೀಲಾ ಚಿಂತಾಮಣಿ – Hitaishini Magazine
Pingback: ಕಣ್ಣು ಕಾಣದ ನೋಟ/ ಬದಲಾಗ ಬೇಕು ನಾವು – ಸುಶೀಲಾ ಚಿಂತಾಮಣಿ – Hitaishini Magazine