ಧೀಮಂತ ಮಹಿಳೆಯರು/ ಪ್ರೀತಿಲತಾರ ಅಂತಿಮ ಸಂದೇಶ – ಎನ್. ಗಾಯತ್ರಿ
“ನಮ್ಮ ಸೋದರರು ಶಸ್ತ್ರಾಸ್ತ್ರ ಯುದ್ಧದಲ್ಲಿ ತೊಡಗಬಹುದಾದರೆ ಮಹಿಳೆಯರೇಕೆ ಅಂತಹ ಅವಕಾಶದಿಂದ ವಂಚಿತರಾಗಬೇಕು? ಶಸ್ತ್ರ ಹೊಂದಿದ ಭಾರತದ ಮಹಿಳೆಯರು ಎಲ್ಲ ಕಷ್ಟಕೋಟಲೆಗಳನ್ನು ದಾಟಿ ಕ್ರಾಂತಿಕಾರಿ ಹೋರಾಟಗಳಲ್ಲೂ ಭಾಗಿಯಾಗುತ್ತಾರೆ ಎಂಬ ಭರವಸೆ, ನಂಬಿಕೆಗಳನ್ನು ಹೃದಯದಲ್ಲಿಟ್ಟುಕೊಂಡು ನಾನು ಆತ್ಮಾಹುತಿ ಮಾಡಿಕೊಳ್ಳುತ್ತಿದ್ದೇನೆ” ಎಂದು ಘೋಷಿಸಿದ ಪ್ರೀತಿಲತಾ, ಬ್ರಿಟಿಷರೇ ಹೇಳಿದಂತೆ ‘ಭಾರತದ ಜೋನ್ ಆಫ್ ಆರ್ಕ್’
ಸೆಪ್ಟೆಂಬರ್ 24, 1932. ಇಂದಿನ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂಗ್‍ನ ಯೂರೋಪಿಯನ್ ಕ್ಲಬ್‍ನ ಮೇಲೆ ಕ್ರಾಂತಿಕಾರಿಗಳ ಗುಂಪೊಂದು ದಾಳಿ ಮಾಡಿತು. ಆ ಗುಂಪಿನ ನೇತೃತ್ವ ವಹಿಸಿದ್ದವಳೊಬ್ಬಳು ಇಪ್ಪತ್ತೊಂದು ವರ್ಷದ ಯುವತಿ. ಅವಳೇ ಎಂಟುಮಂದಿ ಕ್ರಾಂತಿಕಾರಿ ಯುವಕರ ತಂಡದ ನೇತೃತ್ವ ವಹಿಸಿದ್ದ ಪ್ರೀತಿಲತಾ ವಡ್ಡದಾರ್.
ಅಲ್ಲಿ ಎಲ್ಲರ ಬಳಿಯೂ ಸಾಕಷ್ಟು ಶಸ್ತ್ರಾಸ್ತ್ರಗಳಿದ್ದವು. ಜೊತೆಗೆ ಸ್ವಲ್ಪ ಪೊಟಾಸಿಯಂ ಸಯನೈಡ್ ಕೂಡ. ಅಂದು ಬೆಳಗ್ಗೆ ಹತ್ತು ಗಂಟೆಗೆ ಈ ಗುಂಪು ಕ್ಲಬ್ಬಿನ ಮೇಲೆ ದಾಳಿ ಮಾಡಿತು. ಈ ಕ್ಲಬ್‍ಗೆ ಯೂರೋಪಿಯನ್ನರಿಗೆ ಮಾತ್ರ ಪ್ರವೇಶವಿತ್ತು. ಈ ದಾಳಿಯಿಂದ ವಿಚಲಿತರಾದ ಯೂರೋಪಿಯನ್ನರು, ಗಾಜಿನ ಬಾಟಲ್‍ಗಳನ್ನು, ಕೈಗೆ ಸಿಕ್ಕ ಕುರ್ಚಿ ಮೇಜುಗಳನ್ನು ದಾಳಿಕೋರರತ್ತ ಎಸೆಯತೊಡಗಿದರು. ಈ ಆಪರೇಶನ್‍ನಲ್ಲಿ ಪ್ರೀತಿಲತಾ ವಿಪರೀತ
ಗಾಯಗೊಂಡಳು. ಕೊನೆಗೆ ಬ್ರಿಟಿಷರ ಕೈಗೆ ಸಿಕ್ಕಬಾರದೆಂದು ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು. ಆ ಕೊನೆಯ ಗಳಿಗೆಯಲ್ಲೂ ಅವಳು ಭಾರತದ ಮಹಿಳೆಯರಿಗೆ ಅಂತಿಮ ಸಂದೇಶ ಹೊತ್ತ ಚೀಟಿಯೊಂದನ್ನು ತನ್ನ ಉಡುಪಿನಲ್ಲಿಟ್ಟುಕೊಂಡಿದ್ದಳು. ಈ ಸಂದೇಶದ ಒಕ್ಕಣೆ ಇಲ್ಲಿದೆ:
“ನಾನು ಇಂಡಿಯನ್ ರಿಪಬ್ಲಿಕ್ ಸೇನೆಯ ಚಿತ್ತಗಾಂಗ್ ಶಾಖೆಯ ಸದಸ್ಯೆ. ಬ್ರಿಟಿಷರ ಸಾಮ್ರಾಜ್ಯಶಾಹಿ ಆಳ್ವಿಕೆಯನ್ನು ಬುಡಸಮೇತ ಕಿತ್ತೆಸೆದು ನನ್ನ ತಾಯ್ನಾಡಿನಲ್ಲಿ ಪ್ರಜೆಗಳ ಸರ್ಕಾರವನ್ನು ಸ್ಥಾಪಿಸಲು ನಾನು ಇಚ್ಛೆಪಡುತ್ತೇನೆ. ‘ಚಿತ್ತಗಾಂಗ್’ನ ಹೆಸರೇ ದೇಶಪ್ರೇಮಿ ಭಾರತೀಯ ಯುವಸಮುದಾಯವನ್ನು ಪ್ರಜ್ಞೆಯ ವಿಸ್ತಾರಕ್ಕೆ ಕರೆದೊಯ್ಯುವ ಸ್ಫೂರ್ತಿದಾಯಕ ಹೆಸರಾಗಿದೆ. 1930ರ ಸ್ಮರಣೀಯ ಘಟನೆ ಮತ್ತು ನಂತರದ
ಜಲಾಲಬಾದ್, ಕಲಾರ್ಪೊಲೆ, ಫೇಣಿ, ಚಂದನ್ ನಗರ, ಢಾಕಾ, ಕೊಮಿಲ್ಲಾ ಮತ್ತು ಧಲ್‍ಘಟ್ ಮುಂತಾದೆಡೆಗಳಲ್ಲಿ ನಡೆದ ದಾಳಿಗಳು ಭಾರತದ ಕ್ರಾಂತಿಕಾರಿಗಳಲ್ಲಿ ಹೊಸ ಹುಮ್ಮಸ್ಸು ಮತ್ತು
ನವಚೈತನ್ಯವನ್ನು ತುಂಬಿದೆ. ಇಂದು ಯುರೋಪಿಯನ್ ಕ್ಲಬ್‍ನ ಮೇಲೆ ನಡೆಸಿರುವ ದಾಳಿ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿ ನಡೆಸಿರುವಂತಹುದು. ಬ್ರಿಟಿಷರು ನಮ್ಮ ಸ್ವಾತಂತ್ರ್ಯವನ್ನು
ಬಲವಂತವಾಗಿ ಕಸಿದುಕೊಂಡಿದ್ದಾರೆ. ಭಾರತ ದೇಶದ ಕೋಟ್ಯಾಂತರ ಸ್ತ್ರೀ-ಪುರುಷರ ರಕ್ತವನ್ನು ಹೀರಿ ಈಗ ದೇಶವನ್ನು ಬ್ರಿಟಿಷರು ನೋವಿನ ಕೂಪಕ್ಕೆ ತಳ್ಳಿದ್ದಾರೆ. ನಮ್ಮ ದೇಶದ ರಾಜಕೀಯ ಮತ್ತು ಆರ್ಥಿಕ ವಿನಾಶಕ್ಕೆ ಬ್ರಿಟಿಷರೇ ಸಂಪೂರ್ಣ ಜವಾಬ್ದಾರರು. ನಮ್ಮ ಜನರ ಮತ್ತು ಅವರ ಸ್ವಾತಂತ್ರ್ಯದ ನಡುವೆ ಬ್ರಿಟಿಷರು
ಅಡ್ಡಗೋಡೆಯಾಗಿ ನಿಂತಿದ್ದಾರೆ. ಮನುಷ್ಯ ಜೀವವನ್ನು ಬಲಿ ತೆಗೆದುಕೊಳ್ಳುತ್ತಿರುವುದು ಅನೈತಿಕ ಕೃತ್ಯವೆಂಬುದು ನಮಗೆ ತಿಳಿದಿದ್ದರೂ ನಮ್ಮನ್ನು ತುಳಿಯುತ್ತಿರುವ ಬ್ರಿಟಿಷರ ಮತ್ತು ಅವರ ಸರ್ಕಾರಿ ಅಧಿಕಾರಿಗಳನ್ನು ಸಂಪೂರ್ಣ ನಾಶಮಾಡಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವುದು ನಮಗೆ ಅನಿವಾರ್ಯವಾಗಿದೆ.
ಈ ಶಸ್ತ್ರಾಸ್ತ್ರ ಯುದ್ಧದಲ್ಲಿ ಸೇರಲು ನಮ್ಮ ಗೌರವಾನ್ವಿತ ಮಾಸ್ತರ್-ದಾ ನನಗೆ ಕರೆಯಿತ್ತಾಗ ಅತ್ಯಂತ ಭಾಗ್ಯಶಾಲಿ ನಾನೆಂದುಕೊಂಡೆ; ನನ್ನ ಬಹುದಿನದ ಬಯಕೆ ಈಡೇರಿತೆಂದು ಭಾವಿಸಿದೆ. ಅದರಿಂದಾಗಿ ಈ ಕರೆಗೆ ಮನ್ನಿಸಿ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡೆ. ನಾನು ಈಗ ನನ್ನ ದೇಶದ ಮುಂದೆ ನನ್ನ ಕೃತ್ಯವನ್ನು
ಸಮರ್ಥಿಸಿಕೊಳ್ಳಬೇಕಿದೆ. ಒಬ್ಬ ಮಹಿಳೆ ಇಂತಹ ಹಿಂಸಾಕೃತ್ಯದಲ್ಲಿ ತೊಡಗುವುದಲ್ಲದೆ, ಅಂತಹ ಭಾವನೆಗಳನ್ನು ತನ್ನಲ್ಲಿ ಹೇಗೆ ಬೆಳೆಸಿಕೊಂಡಿದ್ದಾಳೆ, ಎಂಬುದಾಗಿ ನನ್ನ ಬಗ್ಗೆ ನನ್ನ ದೇಶಬಾಂಧವರಲ್ಲಿ
ಹಲವು ಮಂದಿ ಆಶ್ಚರ್ಯಪಟ್ಟಿರಬಹುದು. ಸ್ವಾತಂತ್ರ್ಯ ಹೋರಾಟದಲ್ಲಿನ ಸ್ತ್ರೀ-ಪುರುಷರ ಭಾಗವಹಿಸುವಿಕೆಯ ರೀತಿಯ ಬಗ್ಗೆ , ಅದರಲ್ಲಿರುವ ಬೇಧಭಾವದ ಬಗ್ಗೆ ನನಗೆ ಅಸಮಾಧಾನವಿದೆ. ನಮ್ಮ ಸೋದರರು ಶಸ್ತ್ರಾಸ್ತ್ರ ಯುದ್ಧದಲ್ಲಿ ತೊಡಗಬಹುದಾದರೆ ಮಹಿಳೆಯರೇಕೆ ಅಂತಹ ಅವಕಾಶದಿಂದ ವಂಚಿತರಾಗಬೇಕು? ರಜಪೂತ ಮಹಿಳೆಯರು ಯುದ್ಧಗಳಲ್ಲಿ ಭಾಗವಹಿಸಿ ತಮ್ಮ ಶ್ರೌರ್ಯ ಸಾಹಸಗಳನ್ನು ಮೆರೆಯುತ್ತಿದ್ದರು ಮತ್ತು ತಮ್ಮ ರಾಜ್ಯದ ಸ್ವಾತಂತ್ರ್ಯಕ್ಕಾಗಿ ಶತ್ರುಗಳ ಪ್ರಾಣ ತೆಗೆಯಲು ಹಿಂಜರಿಯುತ್ತಿರಲಿಲ್ಲ. ಹಾಗಿರುವಾಗ ಭಾರತವನ್ನು ವಿದೇಶೀಯರ ದಾಸ್ಯದಿಂದ ಮುಕ್ತಗೊಳಿಸಲು ನಾವು ಮಹಿಳೆಯರು ಈ ವೀರ ಯುದ್ಧದಿಂದ ಹಿಂದೆ ಸರಿಯುವುದು
ಸರಿಯೇ? ಕಾಂಗ್ರೆಸ್‍ನವರು ನಡೆಸುತ್ತಿರುವ ಅಸಹಕಾರ ಚಳುವಳಿಯಲ್ಲಿ ನಮ್ಮ ಸೋದರಿಯರು ಅವರ
ಸೋದರರೊಂದಿಗೆ ಸೇರುವುದು ಸರಿಯೆಂದಾದರೆ ನಾವೂ ನಮ್ಮ ಸೋದರರೊಂದಿಗೆ ಶಸ್ತ್ರಯುದ್ಧಗಳಲ್ಲಿ ಭಾಗಿಯಾದರೆ ತಪ್ಪೇನು?
ಇಂದು ಮಹಿಳೆಯರು ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಬೇಕಿದೆ. ಅವರು ತಮ್ಮ ಸೋದರರೊಂದಿಗೆ
ಜೊತೆ ಜೊತೆಯಾಗಿ ಎಷ್ಟೇ ಕಷ್ಟಸಾಧ್ಯವಾದ ಕಾರ್ಯಗಳಿದ್ದರೂ ತಮ್ಮ ತಾಯ್ನಾಡಿನ ಬಿಡುಗಡೆಗಾಗಿ ಹೊರಾಡುತ್ತಾರೆ. ಈ ವಿಷಯವನ್ನು ಪ್ರಮಾಣೀಕರಿಸಿ ತೋರಿಸಲೆಂದೇ ನಾನು ಇಂದಿನ ಶಸ್ತ್ರದಾಳಿಯ ನೇತೃತ್ವವನ್ನು ವಹಿಸಿಕೊಂಡೆ. ನನ್ನ ದೇಶದ ಸೋದರಿಯರು ಇಂತಹ ಯಾವ ಅಧೈರ್ಯ ಮತ್ತು ಬಲಹೀನತೆಯಿಂದ ನರಳುವುದಿಲ್ಲವೆಂದು ನಾನು ದೃಢವಾಗಿ ನಂಬಿದ್ದೇನೆ. ಶಸ್ತ್ರ ಹೊಂದಿದ ಭಾರತದ
ಮಹಿಳೆಯರು ಎಲ್ಲ ಕಷ್ಟಕೋಟಲೆಗಳನ್ನು ದಾಟಿ ಕ್ರಾಂತಿಕಾರಿ ಹೋರಾಟಗಳಲ್ಲೂ ಭಾಗಿಯಾಗುತ್ತಾರೆ ಎಂಬ ಭರವಸೆ, ನಂಬಿಕೆಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡು ಈ ದಿಕ್ಕಿನಲ್ಲಿ ನಾನು ಆತ್ಮಾಹುತಿ ಮಾಡಿಕೊಳ್ಳುತ್ತಿದ್ದೇನೆ”
ಪ್ರೀತಿಲತಾ 1911ರಲ್ಲಿ ಚಿತ್ತಗಾಂಗ್‍ನಲ್ಲಿ ಜನಿಸಿದರು. ಬಂದರು ಪಟ್ಟಣವಾದ ಚಿತ್ತಗಾಂಗ್ ಈಗ ಬಾಂಗ್ಲಾದೇಶದಲ್ಲಿದೆ. ರಾಷ್ರೀಯತಾವಾದಿಯಾಗಿದ್ದ ಅವರ ತಂದೆ ಅಲ್ಲಿನ ಮುನ್ಸಿಪಾಲಿಟಿಯಲ್ಲಿ
ಗುಮಾಸ್ತರಾಗಿ ಕೆಲಸಮಾಡುತ್ತಿದ್ದರು. ಅಂದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟೊಂದು ಉತ್ತೇಜನವಿಲ್ಲದಿದ್ದರೂ ಪ್ರೀತಿಯ ತಂದೆ ಮಗಳನ್ನು ಹುಡುಗಿಯರಿಗೆಂದೇ ಇದ್ದ ಡಾ. ಕಾಷ್ಟಗಿರ್ ಇಂಗ್ಲಿಷ್ ಹೈಸ್ಕೂಲಿಗೆ ಸೇರಿಸುತ್ತಾರೆ. ಆ ಶಾಲೆಯಲ್ಲಿ ಪ್ರೀತಿಲತಾಗೆ ಕಲ್ಪನಾ ದತ್ ಕೂಡ ಅವರ ಸಹಪಾಠಿ. ಶಾಲೆಯಲ್ಲಿ ಬ್ಯಾಡಮಿಟನ್ ಕೋರ್ಟಿನಲ್ಲಿ ಇಬ್ಬರೂ ಸದಾ ಆಟವಾಡುತ್ತಾ ಬೆಳೆದರೂ ಓದಿನಲ್ಲೂ ಯಾವಾಗಲೂ ಮುಂದು. ಮನೆಯ ಹಿರಿಯ ಮಗಳು. ಚೆನ್ನಾಗಿ ಓದಿ ಕುಟುಂಬಕ್ಕೆ ಆಸರೆಯಾಗಬೇಕೆಂಬ ಆಸೆ. ಜೊತೆಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತೆ ಸ್ವಾತಂತ್ರ್ಯ ಹೋರಾಟಕ್ಕೆ ಹೋರಾಡಬೇಕೆಂಬಾಸೆ. ಸಾಹಿತ್ಯ ವಿದ್ಯಾರ್ಥಿನಿಯಾದ ಪ್ರೀತಿಲತಾಗೆ
ಶರತ್‍ಚಂದ್ರ ಮತ್ತು ಬಂಕಿಂಚಂದ್ರರ ಸ್ತ್ರೀಪಾತ್ರಗಳೆಂದರೆ ಅಚ್ಚುಮೆಚ್ಚು. ಹುತಾತ್ಮ ಖುದಿರಾಂ ಬೋಸ್ ಮತ್ತು ಕನ್ನಯ್ಯ ಲಾಲ್ ಅವರ ತ್ಯಾಗ ಬಲಿದಾನಗಳಿಂದ ಸ್ಫೂರ್ತಿಗೊಂಡು ತನ್ನನ್ನು ಹೋರಾಟಕ್ಕೆ ಸಮರ್ಪಿಸಿಕೊಳ್ಳುವಾಸೆ.
1928ರಲ್ಲಿ ಢಾಕಾಗೆ ಹೋಗಿ ಕಲಾ ವಿಭಾಗದ ಇಂಟರ್ ಮೀಡಿಯೇಟ್ ಕೋರ್ಸಿಗೆಂದು ಸೇರಿಕೊಳ್ಳುತ್ತಾಳೆ. ಜೊತೆಗೆ ಅಲ್ಲಿಯೇ ದೀಪಾಲಿಯೆಂಬ ಯುವ ಸಂಘಟನೆಗೆ ಸೇರ್ಪಡೆ. ದೈಹಿಕ ದಾಢ್ರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅಲ್ಲಿ ಹೆಚ್ಚು ಒತ್ತು. ಅಲ್ಲಿ ಅತ್ಯುತ್ತಮ ಅಂಕ ಗಳಿಸಿ ಪ್ರತಿಭಾವೇತನ ಪಡೆದು ಬಿ.ಎ. ಸೇರಲು ಕಲ್ಕತ್ತೆಯತ್ತ ಪಯಣ. ಕಲ್ಕತ್ತೆಯ ಬೆಥೂನೆ ಕಾಲೇಜಿನಲ್ಲಿ ಓದುತ್ತಿರುವಾಗ , ಅಲ್ಲಿನ ಅಲಿಪುರ್ ಜೈಲಿನಲ್ಲಿ ಗಲ್ಲು ಶಿಕ್ಷೆಯನ್ನು
ಎದುರು ನೋಡುತ್ತಿರುವ ರಾಮಕೃಷ್ಣ ಬಿಸ್ವಾಸ್‍ನೊಂದಿಗೆ ಭೇಟಿ ಮಾಡಿ ಸಂಪರ್ಕವಿಟ್ಟುಕೊಳ್ಳುವ ಜವಾಬ್ದಾರಿಯನ್ನು ಪ್ರೀತಿಲತಾಗೆ ವಹಿಸುತ್ತಾರೆ. ಬಿಸ್ವಾಸ್‍ನ ಸೋದರ ಸಂಬಂಧಿಯೆಂದು ಹೇಳಿಕೊಂಡು
ಪ್ರೀತಿಲತಾ ಪ್ರತಿದಿನ ಸುಮಾರು 40 ನಿಮಿಷಗಳ ಕಾಲ ಅವನನ್ನು ಭೇಟಿ ಮಾಡಿ ಮಾತಾಡಿ ಬರುತ್ತಿರುತ್ತಾಳೆ. ಅವನು ಗಲ್ಲಿಗೇರುವವರೆಗೂ ಇವಳ ಭೇಟಿ ಹೀಗೆ ಮುಂದುವರೆಯುತ್ತದಾದರೂ ಯಾರಿಗೂ ಇವಳ ಬಗ್ಗೆ
ಅನುಮಾನವೇ ಬರುವುದಿಲ್ಲ. ಅವಳ ಕುಟುಂಬದವರಿಗಾಗಲೀ, ಅವಳು ವಾಸಿಸುತ್ತಿದ್ದ ಹುಡುಗಿಯರ ಹಾಸ್ಟೆಲ್ಲಿನ ವಾರ್ಡನ್‍ಗಾಗಲೀ ಇದರ ಸುಳಿವೇ ಸಿಕ್ಕುವುದಿಲ್ಲ. ಇಂತಹ ಶಾಂತ, ಮೆದುಮಾತಿನ, ಪ್ರಚಂಡ ಬುದ್ದಿಮತ್ತೆಯ ವಿದ್ಯಾರ್ಥಿನಿ ನೇಣುಗಂಬವೇರುವ ಕೈದಿಯನ್ನು ದಿನವೂ ಹೋಗಿ ಮಾತಾಡಿಸಿಬರುತ್ತಿದ್ದಳು ಎಂಬ ಸಣ್ಣ ಸುಳಿವೂ ಸಿಗದಂತೆ ಪ್ರೀತಿಲತಾ ತನಗೆ ಒಪ್ಪಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ಅವಳ ಬಿ.ಎ. ಯಶಸ್ವಿಯಾಗಿ ಮುಗಿಸಿದ ನಂತರ ಅವಳೂರಿಗೆ ಹಿಂತಿರುಗಿ, ಅಲ್ಲಿ ಹುಡುಗಿಯರ ಶಾಲೆಯಲ್ಲಿ ಶಿಕ್ಷಕಿಯಾಗಿ
ಸೇರಿಕೊಂಡು ಕುಟುಂಬಕ್ಕೆ ರಕ್ಷಣೆಯಾಗಿ ನಿಲ್ಲುತ್ತಾಳೆ. ಆ ವೇಳೆಗೆ ಅವಳ ತಂದೆ ಅವರ ರಾಜಕೀಯ ಚಟುವಟಿಕೆಗಾಗಿ ಕೆಲಸ ಕಳೆದುಕೊಂಡಿರುತ್ತಾರೆ.
1930ರ ಏಪ್ರಿಲ್ 18ರಿಂದಲೇ ಇಂಡಿಯನ್ ರಿಪಬ್ಲಿಕ್ ಆರ್ಮಿಯ ಚಿತ್ತಗಾಂಗ್ ಶಾಖೆಯು ಸರಣಿ ದಾಳಿಯನ್ನು ಆಯೋಜಿಸಿತ್ತು. ಪೊಲೀಸರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು, ಗುಂಡು ಕೋವಿಗಳನ್ನು ಈ ಕ್ರಾಂತಿಕಾರಿಗಳು ಕಸಿದುಕೊಂಡಿದ್ದರು. ಟೆಲಿಗ್ರಾಫ್ ಮತ್ತು ಟೆಲಿಫೋನ್ ತಂತಿಗಳನ್ನು ನಾಶಮಾಡಿದ್ದರು. ಪ್ರಮುಖ ಜಂಕ್ಷನ್‍ಗಳ ರೈಲ್ವೇ ಹಳಿಗಳನ್ನು ಧ್ವಂಸಗೊಳಿಸಿದ್ದರು. ಬ್ರಿಟಿಷರಿಗೆ ಇರಬಹುದಾದ ಎಲ್ಲಾ ಸಂಪರ್ಕವನ್ನು ನಾಶಗೊಳಿಸಿದ್ದರು.
ಇದರಿಂದ ನಗರದಲ್ಲಿದ್ದ ಯೂರೋಪಿಯನ್ ಪುರುಷರು ಗಾಬರಿಗೊಂಡು ತಮ್ಮ ಕುಟುಂಬಗಳನ್ನು ಅವರ ಊರಿಗೆ ಹಿಂತಿರುಗಿಹೋಗಲು ಹಡಗು ಹತ್ತಿಸಿದರು. ಆದರೂ ಹೊರಗಿನಿಂದ ಸೈನ್ಯ ತರಿಸಿ ಚಿತ್ತಗಾಂಗ್ ಶಸ್ತ್ರಾಸ್ತ್ರ ದಾಳಿಕೋರರ ಸದ್ದಡಗಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿತ್ತು. ಹಲವಾರು ಯುವಕರು ತಮ್ಮ ಪ್ರಾಣ ಕಳೆದುಕೊಂಡರು; ಮತ್ತೆ ಕೆಲವರು ಅಜ್ಞಾತರಾದರು.
ಒಮ್ಮೆ 1932ರ ಜುಲೈನಲ್ಲಿ ಅವಳು ಗೋಪ್ಯವಾಗಿ ಇಂಡಿಯನ್ ರಿಪಬ್ಲಿಕ್ ಆರ್ಮಿಯ ಅಧ್ಯಕ್ಷ ‘ಮಾಸ್ಟರ್ ದಾ’ ಎಂದೇ ಖ್ಯಾತರಾದ ಸೂರ್ಯಸೇನ್‍ರನ್ನು ಭೇಟಿಯಾಗುತ್ತಾಳೆ. ಈ ಭೇಟಿಗಳು ರಾತ್ರಿಯ ವೇಳೆಯಲ್ಲೇ ನಡೆಯುತ್ತಿದ್ದವು ಮತ್ತು ಆಪತ್ತನ್ನು ಸೆಳೆದುಕೊಳ್ಳುವ ಗಳಿಗೆಗಳಾಗಿದ್ದವು. ಅಂತಹ ಒಂದು ಭೇಟಿಯ ಸಂದರ್ಭದಲ್ಲಿ ಆ ಬ್ರಿಟಿಷ್ ಸೈನ್ಯದ ಕ್ಯಾಪ್ಟನ್ ಕ್ಯಾಮೆರಾನ್ , ತನ್ನ ಪೊಲೀಸರೊಂದಿಗೆ ಬಂದು ಅವರಿದ್ದ
ಮನೆಯನ್ನು ಮುತ್ತಿಗೆ ಹಾಕಿದಾಗ ಅವಳ ಇಬ್ಬರು ಸಂಗಾತಿಗಳಾದ ನಿರ್ಮಲ್ ಸೇನ್ ಮತ್ತು ಹತ್ತೊಂಭತ್ತು ವರ್ಷ ವಯಸ್ಸಿನ ಅಪೂರ್ವ ಸೇನ್‍ನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಈ ದೃಶ್ಯದಿಂದ ಅವಳಿಗೆ ಅದೆಂತಹ ಶಾಕ್ ಆಗುತ್ತದೆಂದರೆ, ಅಲ್ಲಿಂದ ನೇರವಾಗಿ ಮನೆಗೆ ಹೋಗಿ ಬದುಕಿನ ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತಾಳೆ.
ಕೆಲಸಬಿಟ್ಟು, ಮನೆಬಿಟ್ಟು ಬಂದು ಕ್ರಾಂತಿಕಾರಿ ಚಟುವಟಿಕೆಯಲ್ಲಿ ಭಾಗವಹಿಸಲು ಮೂರು ತಿಂಗಳುಗಳ ಕಾಲ
ಭೂಗತಳಾಗುತ್ತಾಳೆ. ರಿವಾಲ್ವರ್, ಪಿಸ್ತೂಲು ಮತ್ತು ಬಾಂಬುಗಳನ್ನು ಬಳಸುವ ತರಬೇತಿ ಪಡೆಯುತ್ತಾಳೆ.
ಬ್ರಿಟಿಷ್ ಸರ್ಕಾರ ಅವಳ ತಲೆದಂಡಕ್ಕೆ ಬಹುಮಾನ ಘೋಷಿಸುತ್ತದೆ. ಕಡೆಗೂ ಪ್ರೀತಿಲತಾ 1932ರ ಸೆಪ್ಟೆಂಬರ್ 24ರ ಯುರೋಪಿಯನ್ ಕ್ಲಬ್‍ನ ದಾಳಿಯಲ್ಲಿ ಹುತಾತ್ಮಳಾಗುತ್ತಾಳೆ. ದೇಶವೇ ಅವಳ ತ್ಯಾಗವನ್ನು ಕೊಂಡಾಡುತ್ತದೆ. ಈ ಕ್ರಾಂತಿ ಕನ್ಯೆಯನ್ನು ಕುರಿತು ಬ್ರಿಟಿಷ್ ಪತ್ರಿಕೆಗಳು ‘ಇಂಡಿಯಾದ ಜೋನ್ ಆಫ ಆರ್ಕ್’ ಎಂದು ಮೆರೆಸುತ್ತವೆ. ಆದರೆ ಇಂದಿಗೂ ಚಿತ್ತಗಾಂಗ್‍ನ ಊರಿನಲ್ಲಿ ಪ್ರೀತಿಲತಾ ಮನೆಮಾತಾಗಿದ್ದಾಳೆ; ಅಲ್ಲಿನ ಜನರ ಕಣ್ಮಣಿಯಾಗಿದ್ದಾಳೆ.
-ಎನ್. ಗಾಯತ್ರಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.