ಧೀಮಂತ ಮಹಿಳೆಯರು / `ಕಾಂಗ್ರೆಸ್ ರೇಡಿಯೋ’ ನಡೆಸಿದ ಉಷಾ ಮೆಹ್ತ – ಆರ್. ಪೂರ್ಣಿಮಾ

ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರು ನಮ್ಮ ಸಮಾಜ ಹೇರುತ್ತಿದ್ದ ಇತಿಮಿತಿಗಳನ್ನು ಮೀರಿ ಭಾಗವಹಿಸಿದ್ದು ನಿಜಕ್ಕೂ ಚರಿತ್ರಾರ್ಹ ಬೆಳವಣಿಗೆ. ಚಳವಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅವರು ನೀಡಿದ ಸಹಕಾರ ಮತ್ತು ಅವರು ಮಾಡಿದ ತ್ಯಾಗಕ್ಕೆ, ಮುಂಚೂಣಿಯ ನಾಯಕರ ತ್ಯಾಗ, ಬಲಿದಾನಗಳಿಗಿರುವ ರಾಜಕೀಯ ಆಯಾಮಕ್ಕಿಂತ ವಿಭಿನ್ನವಾದ ಅದ್ಭುತ ಸಾಮಾಜಿಕ ಆಯಾಮವೂ ಇದೆ. ಇಂಥ ಮಹಿಳೆಯರಲ್ಲಿ ಉಷಾ ಮೆಹ್ತ ಅವರ ಕೊಡುಗೆ ಚಿರಸ್ಮರಣೀಯ. ಕಾಂಗ್ರೆಸ್ ರೇಡಿಯೋದಲ್ಲಿ ಪ್ರಸಾರವಾದ ಅವರ ಗಟ್ಟಿಧ್ವನಿ ಮಹಿಳೆಯರ ಜಾಗೃತಿಗೆ ನೀಡಿದ ಧೈರ್ಯದ ಕರೆಯೂ ಆಗಿತ್ತು.

ಮಹಿಳೆಯರ ಕೊಡುಗೆಯನ್ನು ಗುರುತಿಸದ, ದಾಖಲಿಸದ ಯಾವ ಇತಿಹಾಸವೂ ಸಂಪೂರ್ಣ ಎನಿಸುವುದಿಲ್ಲ. ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲೂ ಬರೆಯಬೇಕಾದ ಮಹಿಳಾ ಸಾಧಕಿಯರ ಪುಟಗಳು ಇನ್ನೂ ಎಷ್ಟೋ ಬಾಕಿ ಇವೆ. ಧೈರ್ಯದಿಂದ ಬಹಿರಂಗವಾಗಿ ಪಾಲ್ಗೊಳ್ಳುವಿಕೆ, ಸಾರ್ವಜನಿಕ ಟೀಕೆಗೆ ಹೆದರದ ದಿಟ್ಟತನ, ಸಂಸಾರದ ತ್ಯಾಗ, ಸೆರೆಮನೆವಾಸ, ಬೇರೊಂದು ಊರಿಗೆ ಪಲಾಯನ, ತೆರೆಮರೆಯಲ್ಲಿ ಹೋರಾಟ, ಮನೆಯಲ್ಲಿ ಪುರುಷರು ಇಲ್ಲದಿದ್ದಾಗ ಕುಟುಂಬ ನಿರ್ವಹಣೆ, ಅಪ್ಪ ಗಂಡ ಮಕ್ಕಳಿಂದ ದೂರವಾದ ಅಥವಾ ಅವರನ್ನು ಕಳೆದುಕೊಂಡ ದುಃಖ, ಇದ್ದಬದ್ದ ಚಿನ್ನಬೆಳ್ಳಿಯ ಸಮರ್ಪಣೆ, ಆಸೆಗಳನ್ನು ಬಿಟ್ಟು ಖಾದಿ ಬಳಕೆಯ ಸರಳ ಜೀವನ, ಚಳವಳಿಕಾರರಿಗೆ ನಾನಾ ರೀತಿಯ ಬೆಂಬಲ ಹೀಗೆ ಹೋರಾಟದಲ್ಲಿ ಅವರ ಭಾಗವಹಿಸುವಿಕೆಗೆ ಹಲವು ಹನ್ನೊಂದು ಮುಖಗಳಿವೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅವರು ನೀಡಿದ ಸಹಕಾರ ಮತ್ತು ಅವರು ಮಾಡಿದ ತ್ಯಾಗಕ್ಕೆ ಮುಂಚೂಣಿಯ ನಾಯಕರ ತ್ಯಾಗ, ಬಲಿದಾನಗಳಿಗಿರುವ ರಾಜಕೀಯ ಆಯಾಮಕ್ಕಿಂತ ವಿಭಿನ್ನವಾದ ಅದ್ಭುತ ಸಾಮಾಜಿಕ ಆಯಾಮವೂ ಇದೆ. ಮತ್ತೆ ಮತ್ತೆ ಹೇಳುವುದಾದರೆ ಹಿಸ್ಟರಿ' ಯೊಳಗೆ ಇರುವ ಅಂಥಹರ್ ಸ್ಟೋರಿ’ ಗಳ ಹುಡುಕಾಟ ಮತ್ತು ಗೌರವ ಸಮರ್ಪಣೆ ನಡೆಯಲೇ ಬೇಕಾದ ಕೆಲಸ.

ರಾಣಿ ಚೆನ್ನಮ್ಮ, ಝಾನ್ಸಿಯ ರಾಣಿ ಲಕ್ಷೀಬಾಯಿ, ಭೀಮಾಬಾಯಿ ಹೋಳ್ಕರ್, ಅವಧ್ ಪ್ರಾಂತ್ಯದÀ ಬೇಗಂ ಹಜರತ್ ಮಹಲ್, ರಾಣಿ ಜಿಂದನ್ ಕೌರ್, ರಾಣಿ ಅವಂತಿಬಾಯಿ, ರಾಣಿ ಜಲಕರಿಬಾಯಿ, ರಾಣಿ ತಾಸೆಬಾಯಿ, ಬೈಜಾಬಾಯಿ, ಉಡಾದೇವಿ, ತಪಸ್ವಿನಿ ಮಹಾರಾಣಿ, ರಾಣಿ ವೇಲು ನಾಚಿಯಾರ್, ತಿರುವಾಂಕೂರಿನ ರಾಣಿ ಗೌರಿ ಪಾರ್ವತಿಬಾಯಿ ಮೊದಲಾದ ಅನೇಕ ದಿಟ್ಟ ಮಹಿಳೆಯರು ಬ್ರಿಟಿಷರ ವಿರುದ್ಧ ಹಲವು ರೀತಿ, ಹಲವು ಮಾರ್ಗಗಳಲ್ಲಿ ಹೋರಾಡಿದರು. ಇದನ್ನು “ಕೇವಲ ಅವರ ಸಂಸ್ಥಾನ ಮತ್ತು ಸಂಪತ್ತಿನ ರಕ್ಷಣೆಗಾಗಿ ನಡೆಸಿದ ಹೋರಾಟವಷ್ಟೆ” ಎಂದು ಸರಳೀಕರಿಸಬಾರದು. `ರಾಷ್ಟ್ರ’ ದ ಕಲ್ಪನೆಯೇ ಇಲ್ಲದ ಕಾಲದಲ್ಲಿ ಪರಕೀಯ ದೌರ್ಜನ್ಯದ ವಿರುದ್ಧ ನಡೆಸುವ ಹೋರಾಟಕ್ಕೆ ದೇಶಕಾಲದ ಮಹತ್ವ ತಾನಾಗಿಯೇ ಪ್ರಾಪ್ತವಾಗುತ್ತದೆ ಎನ್ನುವುದನ್ನು ಮರೆಯಕೂಡದು.

ದಕ್ಷಿಣ ಆಫ್ರಿಕಾದಿಂದ ಗಾಂಧೀಜಿಯವರು ಭಾರತಕ್ಕೆ ಮರಳಿದ ನಂತರ ಸ್ವಾತಂತ್ರ್ಯದ ಆಕಾಂಕ್ಷೆಗೆ ಚಳವಳಿಯ ಸ್ವರೂಪ ಬೆಳೆಯುತ್ತಿದ್ದ ಹಾಗೆ ಅನೇಕ ಮಹಿಳೆಯರು ಅವರಿಂದ ಪ್ರಭಾವಿತರಾಗಿ ಅದರಲ್ಲಿ ಪಾಲ್ಗೊಳ್ಳಲು ಮನಸ್ಸು ಮಾಡಿದರು. ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಆರಂಭವಾದ ಈ ಪಾಲ್ಗೊಳ್ಳುವಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಹೋಯಿತು. ಕಸ್ತೂರಬಾ, ಸರೋಜಿನಿ ನಾಯ್ಡು, ವಿಜಯಲಕ್ಷ್ಮಿ ಪಂಡಿತ್, ಆನಿ ಬೆಸೆಂಟ್, ಮೇಡಂ ಕಾಮಾ ಅವರಂಥ ಖ್ಯಾತರಲ್ಲದೆ, ಅಪಾರ ಸಂಖ್ಯೆಯ ಮಹಿಳೆಯರು ಅಸಹಕಾರ ಚಳವಳಿ, ಭಾರತ ಬಿಟ್ಟು ತೊಲಗಿ ಆಂದೋಲನ, ಉಪ್ಪಿನ ಸತ್ಯಾಗ್ರಹ ಎಲ್ಲದರಲ್ಲೂ ಭಾಗವಹಿಸಿ ಕಷ್ಟನಷ್ಟ, ಸೆರೆಮನೆವಾಸ ಎಲ್ಲವನ್ನೂ ಅನುಭವಿಸಿದ್ದಾರೆ. ಅಂಥವರ ಪೈಕಿ ಉಷಾ ಮೆಹ್ತ ಅವರ ಕೊಡುಗೆ ಬಹಳ ವಿಶಿಷ್ಟವೂ ವಿನೂತನವೂ ಆಗಿದೆ. ಏಕೆಂದರೆ ಬಾನುಲಿಯಲ್ಲಿ ಮೂಡಿಬಂದ ಮೊದಲ ಕಾಂಗ್ರೆಸ್ ದನಿ ಅವರದೇ ಎನ್ನುವ ಚರಿತ್ರಾರ್ಹ ದಾಖಲೆ!

ಉಷಾ ಬೆನ್ ಹುಟ್ಟಿದ್ದು (1920 ಮಾರ್ಚ್ 25) ಗುಜರಾತ್ ರಾಜ್ಯದ ಸೂರತ್ ಬಳಿಯ ಸಾರಸ್ ಎಂಬಲ್ಲಿ. ಅಹಮದಾಬಾದ್‍ನಲ್ಲಿ ಗಾಂಧೀಜಿ ಅವರನ್ನು ನೋಡಿದಾಗ ಉಷಾ ಇನ್ನೂ ಐದರ ಬಾಲೆ. ಅವರಿಂದ ಆಕರ್ಷಿತಳಾಗಿ ನಂತರ ಒಂದು ದಿನ ಮೆರವಣಿಗೆಯಲ್ಲಿ ನಡೆಯುತ್ತ “ಸೈಮನ್ ಗೋ ಬ್ಯಾಕ್” ಎಂದು ಕೂಗಿದಾಗ ಅವಳಿಗೆ ಎಂಟೇ ವರ್ಷ. ಪ್ರಭಾತ ಫೇರಿ, ಮದ್ಯದಂಗಡಿಗಳ ಮುಂದೆ ಪಿಕೆಟಿಂಗ್ ಎಲ್ಲದರಲ್ಲೂ ಇರುವಷ್ಟು ಬಾಲ್ಯದಲ್ಲಿ ಉತ್ಸಾಹ ತುಂಬಿತ್ತು. ಉಷಾ ಅವರ ಮುಂದಿನ ಜೀವನವೆಲ್ಲ ಗಾಂಧೀ ಪ್ರಭಾವದ ನೆರಳಿನಲ್ಲೇ ಬೆಳೆಯಿತು, ದೇಶಪ್ರೇಮದಲ್ಲೇ ಅರಳಿತು. ಉಷಾ ಅವರ ತಂದೆ ಬ್ರಿಟಿಷ್ ಆಡಳಿತದಲ್ಲಿ ನ್ಯಾಯಾಧೀಶರಾಗಿದ್ದರಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಮಕ್ಕಳು ಪಾಲ್ಗೊಳ್ಳುವ ದೇಶಪ್ರೇಮ ಸಹಿಸುವುದು ಕಷ್ಟವಾಗಿತ್ತು. 1930 ರಲ್ಲಿ ತಂದೆ ನಿವೃತ್ತರಾಗಿ, ಕುಟುಂಬ ಮುಂಬೈಗೆ ಬಂದು ನೆಲೆಸಿದಾಗ ಮಕ್ಕಳಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶವಾಯಿತು.

ಶಾಲಾ ಕಾಲೇಜು ವಿದ್ಯಾರ್ಥಿದೆಸೆಯಲ್ಲೇ ಚಳವಳಿಯ ಸಂದೇಶಗಳ ಪ್ರಸಾರದಲ್ಲಿ ಓಡಾಡುತ್ತಿದ್ದ ಉಷಾ, ತತ್ವಶಾಸ್ತ್ರದಲ್ಲಿ ಪದವಿ ಪಡೆದರು. ಮುಂದೆ ಕಾನೂನು ಶಿಕ್ಷಣದ ಆಸೆ ಇತ್ತು. ಅಷ್ಟರಲ್ಲಿ ಅಂದರೆ 1942 ರಲ್ಲಿ ಗಾಂಧೀಜಿ ನೀಡಿದ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಕರೆ ಮತ್ತು ಆಂದೋಲನ ಇಪ್ಪತ್ತೆರಡರ ತರುಣಿಯನ್ನು ಬಹುವಾಗಿ ಸೆಳೆಯಿತು. “ಕ್ವಿಟ್ ಇಂಡಿಯಾ” ಚಳವಳಿಯಲ್ಲಿ ಪೂರ್ಣವಾಗಿ ತೊಡಗಿಕೊಂಡರು.

ಉಷಾ ಅವರ ತಾರುಣ್ಯವೆಲ್ಲ ಅಸೀಮ ದೇಶಪ್ರೇಮ ಮತ್ತು ರೋಮಾಂಚಕಾರಿ ಸಾಹಸಗಳಿಂದ ತುಂಬಿವೆ. 1942 ರ ಆಗಸ್ಟ್ 9 ರಂದು “ಕ್ವಿಟ್ ಇಂಡಿಯಾ” ಚಳವಳಿ ಆರಂಭ ಎಂದು ಗಾಂಧೀಜಿ ಸಾರಿದ್ದರು. ಅಂದು ಮುಂಬೈನ ಗೋವಳಿಯ ಕೆರೆ ಮೈದಾನದಲ್ಲಿ ಬೃಹತ್ ಸಭೆ ಮತ್ತು ಭಾರತದ ಧ್ವಜಾರೋಹಣ ಕಾರ್ಯಕ್ರಮ ಇತ್ತು. ಆದರೆ ಬ್ರಿಟಿಷರು ಒಂದು ವಾರಕ್ಕೆ ಮೊದಲೇ ಗಾಂಧೀಜಿ ಸೇರಿದಂತೆ ಎಲ್ಲ ನಾಯಕರನ್ನು ಬಂಧಿಸಿ ಸೆರೆಮನೆಗೆ ದೂಕಿದರು. ಆದರೆ ಸಾವಿರಾರು ಯುವಜನರು ಛಲ ಬಿಡದೆ ಅಂದು ಮೈದಾನದಲ್ಲಿ ಸೇರಿದರು. ದಿಟ್ಟೆ ಉಷಾ ಸೇರಿ ಹಲವು ಯುವಕ ಯುವತಿಯರು ಭಾರತದ ಧ್ವಜವನ್ನು ಧೈರ್ಯದಿಂದ ಹಾರಿಸಿದರು. (ನಂತರ ಆ ಮೈದಾನಕ್ಕೆ “ಆಗಸ್ಟ್ ಕ್ರಾಂತಿ ಮೈದಾನ” ಎಂದು ಹೆಸರಿಡಲಾಯಿತು.)

“ಕ್ವಿಟ್ ಇಂಡಿಯಾ” ಚಳವಳಿ ಆರಂಭವಾದ ಕೆಲವೇ ದಿನಗಳಲ್ಲಿ, ಅಂದರೆ ಆಗಸ್ಟ್ 14 ರಂದು “ಕಾಂಗ್ರೆಸ್ ರೇಡಿಯೋ” ಆರಂಭವಾಗಿದ್ದು ಒಂದು ಐತಿಹಾಸಿಕ ಘಟನೆ ಎಂದು ಹೇಳಬಹುದು. “ಇದು ಕಾಂಗ್ರೆಸ್ ರೇಡಿಯೋ. 42.34 ಮೀಟರ್ ಗಳಲ್ಲಿ ಭಾರತದ ಎಲ್ಲೋ ಒಂದು ಕಡೆಯಿಂದ ಇದನ್ನು ನೀವು ಕೇಳುತ್ತಿದ್ದೀರಿ” ಎಂಬ ಘೋಷಣೆಯನ್ನು ಅದರಲ್ಲಿ ಮೊದಲು ಮಾಡಿದ್ದು ಉಷಾ ಮೆಹ್ತ. ರೇಡಿಯೋ ಆರಂಭಿಸಿ ಅದರ ಮೂಲಕ ದೇಶದ ಜನರಿಗೆ ತಲುಪಿಸಬೇಕಾದ ಸಂದೇಶಗಳನ್ನು ಪ್ರಸಾರ ಮಾಡಬಹುದು ಎಂಬ ಸೂಚನೆಯನ್ನು ಕೊಟ್ಟದ್ದು ರಾಮಮನೋಹರ ಲೋಹಿಯಾ. ಈ ಯೋಜನೆಯೊಂದಿಗೆ ರೇಡಿಯೋ ತಂತ್ರಜ್ಞಾನ ಬಲ್ಲ ಉತ್ಸಾಹಿ ಯುವಕರು ಇದ್ದರು. ಮುಂಬೈನಿಂದ ಚಿಕಾಗೋ ರೇಡಿಯೋ ನಡೆಸುತ್ತಿದ್ದ ನಾನಕ್ ಮೋಟ್ವಾನಿ ಇದಕ್ಕೆ ಬೇಕಾದ ಉಪಕರಣಗಳನ್ನು ಕೊಟ್ಟರು. ಅಚ್ಯುತರಾವ್ ಪಟವರ್ಧನ್, ಪುರುಷೋತ್ತಮ ತ್ರಿಕಮದಾಸ್ ರೇಡಿಯೋಗೆ ಬೆಂಬಲ ನೀಡಿದರು. ವಿಕ್ರಮಭಾಯಿ ಝವೇರಿ, ಚಂದ್ರಕಾಂತ ಝವೇರಿ, ಬಾಬುಭಾಯಿ ಥಕ್ಕರ್ ಅವರೆಲ್ಲ ಉಷಾ ಜೊತೆಗೆ ರೇಡಿಯೋ ತಂಡದಲ್ಲಿದ್ದರು. ಗಾಂಧೀಜಿ ಮತ್ತು ಇತರ ನಾಯಕರ ಸಂದೇಶಗಳನ್ನು ಕಾಂಗ್ರೆಸ್ ರೇಡಿಯೋ ದೇಶಕ್ಕೆ ಪ್ರಸಾರ ಮಾಡಿತು. ದೇಶಭಕ್ತಿ ಗೀತೆಗಳನ್ನು ಜನರಿಗೆ ಕೇಳಿಸಿತು. ತಂತ್ರಜ್ಞಾನದ ಈ ಅದ್ಭುತ ಬೆಳವಣಿಗೆಯ ಪ್ರಯೋಜನಕ್ಕೆ ಗಾಂಧೀಜಿಯವರೇ ಬಹಳ ವಿಸ್ಮಿತರಾಗಿದ್ದರು.

ಕಾಂಗ್ರೆಸ್ ರೇಡಿಯೋ ಚಳವಳಿಗೆ ಇನ್ನಿಲ್ಲದ ಬಲ ತುಂಬಿತು. ಸ್ವಂತ ಟ್ರಾನ್ಸ್‍ಮಿಟರ್, ಧ್ವನಿಮುದ್ರಣ ಕೇಂದ್ರ, ಪ್ರಸಾರ ಕೇಂದ್ರ ಎಲ್ಲವನ್ನೂ ಹೊಂದಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಹಲವು ವ್ಯಾಪಾರಿಗಳು ಹಣಸಹಾಯ ನೀಡಿದರು. ಚಳವಳಿಯ ಸುದ್ದಿ, ಭಾಷಣಗಳು, ಚಳವಳಿಕಾರರಿಗೆ ಸೂಚನೆಗಳು ಇವೆಲ್ಲವನ್ನೂ ಪ್ರಸಾರ ಮಾಡಲಾಗುತ್ತಿತ್ತು. ಸಂವಹನ ಸಾಧ್ಯವಾಗಿ ಚಳವಳಿ ಬಿರುಸುಗೊಂಡಿತು. ವಿವಿಧ ಸ್ಥಳಗಳ ನಡುವೆ, ಮುಖಂಡರ ನಡುವೆ ಹೊಂದಾಣಿಕೆ ಸಾಧ್ಯವಾಯಿತು. ಬ್ರಿಟಿಷ್ ಅಧಿಕಾರಿಗಳಿಗೆ ಸುಳಿವು ಸಿಗದಂತೆ, ರೇಡಿಯೋ ಉಪಕರಣಗಳನ್ನು ಹೊತ್ತುಕೊಂಡು ಪ್ರತಿದಿನ ಸ್ಥಳ ಬದಲಾಯಿಸಲಾಗುತ್ತಿತ್ತು ಎಂದರೆ ಈ ತಂಡದ ಬದ್ಧತೆಯನ್ನು ತಿಳಿಯಬಹುದು. ಆದರೆ ಸುಮಾರು ಮೂರು ತಿಂಗಳ ನಂತರ ಪೊಲೀಸ್ ಅಧಿಕಾರಿಗಳು ರೇಡಿಯೋ ಮೂಲವನ್ನು ಕಂಡುಹಿಡಿದರು. ತಂಡದಲ್ಲೇ ಇದ್ದ ಒಬ್ಬ ಅದನ್ನು ಬ್ರಿಟಿಷ್ ಪೊಲೀಸರಿಗೆ ತಿಳಿಸಿ ಚಳವಳಿಗೆ ದ್ರೋಹ ಮಾಡಿದ್ದ.

ಬ್ರಿಟಿಷ್ ಸರ್ಕಾರ ಸುದ್ದಿ ಪ್ರಸಾರವನ್ನು ದ್ವೇಷಿಸುತ್ತಿದ್ದರಿಂದ, ರೇಡಿಯೋ ರೂಪಿಸಿದ ಉಷಾ ಸೇರಿ ಎಲ್ಲರೂ ಬಂಧನಕ್ಕೆ ಒಳಗಾದರು. ಸೆರೆಮನೆಯಲ್ಲಿ ಆರು ತಿಂಗಳು ಅವರ ವಿಚಾರಣೆ ನಡೆಯಿತು. ರೇಡಿಯೋ ಬಗ್ಗೆ ಎಲ್ಲ ಹೇಳಿದರೆ ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶ ನೀಡುವುದಾಗಿ ಆಮಿಷವನ್ನೂ ಒಡ್ಡಲಾಯಿತು. ಆದರೆ ಗಟ್ಟಿಮನದ ಉಷಾ ಯಾವುದಕ್ಕೂ ಜಗ್ಗಲಿಲ್ಲ. ಮುಂದೆ ಈ ಕುರಿತು ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲೂ ಅವರು ನಿರಾಕರಿಸಿದರು. ನಂತರ ಅವರಿಗೆ ನಾಲ್ಕು ವರ್ಷಗಳ ಶಿಕ್ಷ್ಷೆ ವಿಧಿಸಿ ಪುಣೆಯ ಯರವಾಡ ಸೆರೆಮನೆಗೆ ಕಳಿಸಲಾಯಿತು. ಸೆರೆಮನೆಯಲ್ಲಿ ಅವರ ಆರೋಗ್ಯ ಕೆಟ್ಟಾಗ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಪೊಲೀಸರು ಬಿಗಿಕಾವಲು ಹಾಕಿದ್ದರು. 1946 ರಲ್ಲಿ ಬಿಡುಗಡೆ ಆಯಿತು. ಪ್ರಬಲರಾದ ಬ್ರಿಟಿಷರ ದಬ್ಬಾಳಿಕೆಯನ್ನು ಎದುರಿಸಿ, ಯಾವ ಹೆದರಿಕೆಯೂ ಇಲ್ಲದೆ, ಹೊಸ ತಂತ್ರಜ್ಞಾನವನ್ನು ಕಲಿತು, ಹೊಸ ರೀತಿಯಲ್ಲಿ ಚಳವಳಿಗೆ ಬಲ ತುಂಬಿದ ಈ ಹೆಣ್ಣುಮಗಳ ಸಾಹಸ ಎಂದಿಗೂ ಪ್ರಶಂಸನೀಯ.

ಇಂಥ ದಿಟ್ಟ ಹೆಣ್ಣಮಗಳು ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ ದೆಹಲಿಗೆ ಹೋಗಲಾಗದೆ ಮುಂಬೈನ ಮನೆಯಲ್ಲಿ ಕಾಯಿಲೆಯಿಂದ ಹಾಸಿಗೆ ಹಿಡಿದು ಮಲಗಿದ್ದು ಖೇದಕರ. ಸ್ವತಂತ್ರ ಭಾರತದಲ್ಲಿ ಅವರು ಗಾಂಧಿವಾದಿಯಾಗಿಯೇ ಉಳಿದು ಶಿಕ್ಷಣ ಮುಂದುವರೆಸಿದರು. ಬಾಂಬೆ ವಿಶ್ವವಿದ್ಯಾಲಯದಿಂದ ಪಿಎಚ್.ಡಿಯನ್ನೂ ಪಡೆದರು. ರಾಜ್ಯಶಾಸ್ತ್ರವನ್ನು ಬೋಧಿಸುವ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದರು. ನಿವೃತ್ತಿ ನಂತರ ಎರಡು ದಶಕಗಳಿಗೂ ಹೆಚ್ಚು ಕಾಲ ಕ್ರಿಯಾಶೀಲರಾಗಿದ್ದ ಅವರು ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ, ಭಾರತೀಯ ವಿದ್ಯಾ ಭವನ ಮುಂತಾದ ಹಲವು ಸಂಸ್ಥೆಗಳಲ್ಲಿ ದುಡಿದರು. 1998 ರಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತದ ರಾಜಕಾರಣ ನೀತಿನಿಯಮಗಳಿಲ್ಲದೆ ಕ್ರಮೇಣ ಕೊಳೆತು ಹೋದದ್ದನ್ನು ಕಂಡು ದುಃಖಿಸುತ್ತಿದ್ದ ಉಷಾ ಮೆಹ್ತ, “ಇದು ನಮ್ಮ ಕನಸಿನ ಭಾರತ ಆಗಿರಲಿಲ್ಲ” ಎಂದು ವಿಷಾದಿಸಿದರು. ತಮ್ಮಂಥವರ ತ್ಯಾಗ, ಬಲಿದಾನಗಳ ಫಲವಾದ ಸ್ವಾತಂತ್ರ್ಯ, ಸರ್ವರ ಏಳಿಗೆಯನ್ನು ಬಯಸುತ್ತಿಲ್ಲ ಎಂದು ಬಹಳ ಮರುಗಿದರು. “ಕ್ವಿಟ್ ಇಂಡಿಯಾ” ಚಳವಳಿಯ ನೆನಪಿನಲ್ಲಿ ಪ್ರತಿವರ್ಷ ಆಗಸ್ಟ್ 9 ರಂದು “ಆಗಸ್ಟ್ ಕ್ರಾಂತಿ ಮೈದಾನ” ದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಅವರು 2000 ದ ವರ್ಷದಲ್ಲಿ ತೀವ್ರ ಅನಾರೋಗ್ಯದಲ್ಲೂ ಭಾಗವಹಿಸಿದರು. ಎರಡು ದಿನಗಳ ನಂತರ ಅಂದರೆ ಆಗಸ್ಟ್ 11 ರಂದು (2000) ನಿಧನರಾದರು. ಆ ಕಾಲಘಟ್ಟದಲ್ಲಿ ಮಹಿಳೆಗೆ ಇದ್ದ ಇತಿಮಿತಿಗಳನ್ನು ಮೀರಿ ಸಾರ್ವಜನಿಕ, ಸಾಮಾಜಿಕ ಜೀವನದಲ್ಲಿ ಸಾಧನೆ ಮಾಡಿದ ಮತ್ತು ತತ್ವಕ್ಕಾಗಿ ಬದುಕಿ ಬಾಳಿದ ಉಷಾ ಮೆಹ್ತ ಎಂದಿಗೂ ಚಿರಸ್ಮರಣೀಯರು. (ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ)

  • ಆರ್. ಪೂರ್ಣಿಮಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *