ದ್ರೌಪದಿಯ ಸೀರೆ / ಮುಟ್ಟನ್ನು ಮುತ್ತಿಕೊಂಡಿರುವ ಮೂಢನಂಬಿಕೆ – ಆರ್. ಪೂರ್ಣಿಮಾ

ಜೈವಿಕ ಪುನರುತ್ಪಾದನೆಗೆ ಅತ್ಯಗತ್ಯವಾದ ಹೆಣ್ಣಿನ ಸಹಜ ಋತುಸ್ರಾವದ ಬಗ್ಗೆ ಇರುವ ಕರಾಳ ಮೂಢನಂಬಿಕೆಗಳು ಅನೇಕ ನಾಗರಿಕತೆಗಳಿಗೆ ಸಮಾನವಾಗಿವೆ. ಹೆಣ್ಣಿನ ಆರೋಗ್ಯದ ಬಗ್ಗೆ ಎಲ್ಲೂ ಕಾಣದಿರುವ ಧಾರ್ಮಿಕ- ಸಾಮಾಜಿಕ ಕಾಳಜಿ, ಅವಳ ಮುಟ್ಟಿನ ಬಗ್ಗೆ ಮಾತ್ರ ವಿಪರೀತ ನಿರ್ಬಂಧಗಳನ್ನು ಹೇರುತ್ತದೆ. ಹೆಣ್ಣಿನ ಮುಟ್ಟೂ ಕೂಡ ಅವಳನ್ನು ಹತ್ತಿಕ್ಕುವ ಹತಾರಗಳಲ್ಲಿ ಒಂದಾಗಿದೆ. ಈ ಕುರಿತು ಎಲ್ಲ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಆಂದೋಲನಗಳೇ ನಡೆಯಬೇಕಾಗಿದೆ.

ಹತ್ತರಿಂದ ಐವತ್ತು ವರ್ಷ ವಯೋಮಾನದ ಹುಡುಗಿಯರು- ಮಹಿಳೆಯರು ಪ್ರತೀ ತಿಂಗಳು ಮುಟ್ಟಾಗುವುದರಿಂದ ಅವರಿಗೆ ಕೇರಳದ ಶಬರಿಮಲೆ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವ ವಿಚಾರ ಇತ್ತೀಚಿನ ತಿಂಗಳುಗಳಲ್ಲಿ ಯಾವೆಲ್ಲ ಆಯಾಮಗಳನ್ನು ಪಡೆಯುತ್ತಿವೆ ಎಂಬುದನ್ನು ಎಲ್ಲರೂ ಗಮನಿಸುತ್ತಿದ್ದೇವೆ. ಆಧುನಿಕತೆಯ ಜೊತೆಗೆ ಈ ಕುರಿತ ಮೂಢನಂಬಿಕೆಗಳೂ ಹೆಚ್ಚುತ್ತಿವೆ. ಹಾಗೆ ನೋಡಿದರೆ, ಮನುಕುಲದ ಚರಿತ್ರೆಯ ಆರಂಭದ ದಿನಗಳಲ್ಲಿ ಹೆಣ್ಣಿನ ಮಾಸಿಕ ಋತುಸ್ರಾವ ಅಥವಾ ಮುಟ್ಟಿನ ಬಗ್ಗೆ ಆತಂಕ, ಭಯ ಇರಲಿಲ್ಲ. ನಾಗರಿಕತೆ ಬೆಳೆದಂತೆ, ಧರ್ಮಗಳ ವ್ಯಾಪ್ತಿ ಹರಡಿದಂತೆ, ಲಿಂಗ ಅಸಮಾನತೆ ಹೆಚ್ಚಿದಂತೆ ಮುಟ್ಟನ್ನು ಕುರಿತು ಅನೇಕ ಅತಾರ್ಕಿಕ ಆಲೋಚನೆಗಳು ಹುಟ್ಟಿಕೊಂಡವು; ಅವೈಜ್ಞಾನಿಕ ನಿರ್ಬಂಧಗಳು, ಅಸಂಬದ್ಧ ಕಟ್ಟುನಿಟ್ಟುಗಳು ಮುಟ್ಟನ್ನು ಮುತ್ತಿಕೊಂಡವು.

ಜಗತ್ತಿನ ಉನ್ನತ ಸಂಸ್ಕøತಿ ಮತ್ತು ನಾಗರಿಕತೆಗಳಲ್ಲಿ ಒಂದು ಬಗೆಯಾದರೆ, ನೆಲಮೂಲ ಸಂಸ್ಕøತಿ ಎಂದು ಕರೆಯಲಾಗುವ ದೇಸೀ ಸಮುದಾಯಗಳ ಸಾಂಪ್ರದಾಯಿಕ ಆಚರಣೆಗಳಲ್ಲೂ ಮುಟ್ಟು ಇನ್ನೊಂದು ಬಗೆಯಲ್ಲಿ ಪ್ರಾಧಾನ್ಯ ಪಡೆಯಿತು ಎನ್ನುವ ವಿಚಿತ್ರವೂ ಗಮನಾರ್ಹ. ಹೆಣ್ಣಿಗೆ ಅದೊಂದು ಸಹಜ, ನೈಸರ್ಗಿಕ, ದೈಹಿಕ ಕ್ರಿಯೆ ಎನ್ನುವುದನ್ನು ಒಪ್ಪಲಾರದೆ, ಮುಟ್ಟು ಇಲ್ಲದೆ ಹುಟ್ಟುವುದು ಸಾಧ್ಯವಿಲ್ಲ ಎನ್ನುವುದನ್ನು ನಂಬಲಾರದೆ, `ಅದು ಅವಳ ಮೈಲಿಗೆ, ಅವಳ ದೌರ್ಬಲ್ಯ, ಅವಳ ಕೆಳಮಟ್ಟ’ ಎನ್ನುವ ತೀರ್ಮಾನವೇ ಎಲ್ಲ ಜನಾಂಗಗಳಲ್ಲಿ, ಸಮುದಾಯಗಳಲ್ಲಿ ಬೇರೂರಿದೆ. ಒಟ್ಟಿನಲ್ಲಿ ಹೆಣ್ಣಿನ ಮುಟ್ಟೂ ಕೂಡ ಅವಳನ್ನು ಹತ್ತಿಕ್ಕುವ ಹತಾರಗಳಲ್ಲಿ ಒಂದಾಗಿದೆ ಎನ್ನುವುದು ಬಹಳ ಮುಖ್ಯ.

ಜಗತ್ತಿನ ಎಲ್ಲ ಭಾಗಗಳಲ್ಲಿ, ಮುಟ್ಟಿನ ಹೆಸರಿನಲ್ಲಿ ಮಹಿಳೆಯರನ್ನು ಸುತ್ತಿಕೊಂಡಿರುವ ಮೂಢನಂಬಿಕೆಗಳು, ನಿರ್ಬಂಧಗಳು, ಅಡೆತಡೆಗಳು ಅದೆಷ್ಟು ಅಪಾರ ವೈವಿಧ್ಯ ಮತ್ತು ವೈಚಿತ್ರ್ಯಗಳಲ್ಲಿ ಹರಡಿಕೊಂಡಿವೆ ಎನ್ನುವುದನ್ನು ಅಧ್ಯಯನ ಮಾಡಲು ಹತ್ತಾರು ವಿಶ್ವವಿದ್ಯಾಲಯಗಳ ಸಂಶೋಧನಾ ಯೋಜನೆಗಳೂ ಸಾಕಾಗುವುದಿಲ್ಲ. ಏಷ್ಯಾ ಖಂಡ ಮತ್ತು ಭಾರತ ದೇಶದಲ್ಲಂತೂ ಅದರ ವೈವಿಧ್ಯದ ವಿಸ್ತಾರ ಬಗೆದಷ್ಟೂ ತೆರೆದುಕೊಳ್ಳುತ್ತದೆ. ಧರ್ಮ, ಜಾತಿ, ಅಸಮಾನತೆ, ಪಿತೃ ಪ್ರಧಾನ ವ್ಯವಸ್ಥೆ, ಪುರುಷ ಪಾಳೇಗಾರಿಕೆ ಮುಂತಾದ ಅನೇಕ ವಾಸ್ತವಗಳಿಂದ ಹೆಣ್ಣಿನ ಜೀವನ ಮೊದಲೇ ನೊಂದುಬೆಂದಿದೆ. ಮುಟ್ಟಿನ ವಿಚಾರವನ್ನೂ ಕೈಗೆತ್ತಿಕೊಂಡ ಇವು ಅದನ್ನೂ ಹೆಣ್ಣಿನ ದಮನಕ್ಕೆ ಬಳಸಿಕೊಳ್ಳುವುದು ಕಂಡುಬರುತ್ತದೆ. ಫಲವಂತಿಕೆಗೆ ಗೌರವ, ಯೋನಿಪೂಜೆ, ಮಾತೃ ಆರಾಧನೆಯಂಥ ದೊಡ್ಡ ಹೆಸರುಗಳಲ್ಲಿ ಪೂಜೆಪುನಸ್ಕಾರಗಳು ನಡೆದರೂ ಅದಕ್ಕಾಗಿ ದೇವಾಲಯಗಳನ್ನೇ ನಿರ್ಮಿಸಿದರೂ ದೈನಂದಿನ ಸಾಮಾಜಿಕ ಬದುಕಿನಲ್ಲಿ ಮುಟ್ಟು ಮತ್ತು ಮುಟ್ಟಾಗುವ ಹೆಣ್ಣಿನ ಬಗ್ಗೆ ತೀವ್ರ ತಿರಸ್ಕಾರವೇ ಸ್ಥಾಯಿಯಾಗಿರುತ್ತದೆ. ಈ ತಿರಸ್ಕಾರಕ್ಕೆ `ಸಂಪ್ರದಾಯ’ ಎಂಬ ಮುದ್ರೆ ಇರುತ್ತದೆ, ಹಿರಿಯರಿಂದ ಬಂದ `ಪದ್ಧತಿ’ ಎಂಬ ಹೆಸರು ಇರುತ್ತದೆ, ಅಲ್ಲದೆ ದೇವರು ದೈವದ ಭಯ ಎಂಬ ಕವಚ ಇರುತ್ತದೆ.

ಮುಟ್ಟಾದ ಹೆಣ್ಣನ್ನು ಮುಟ್ಟದಿರುವುದು ಮತ್ತು ಆ ದಿನಗಳಲ್ಲಿ ಅವಳನ್ನು ಮನೆಯಿಂದ ಆಚೆ ದೂಡುವುದು ನಮ್ಮ ದೇಶದ ಬಹುಪಾಲು ಜಾತಿಗಳಲ್ಲಿ ಕಾಣುವ ಒಂದು ಅಮಾನವೀಯ ರೂಢಿ. ಇದು ಸಾಮಾಜಿಕ ಶ್ರೇಣೀಕರಣದಲ್ಲಿ ಗುರುತಿಸುವ ಮೇಲ್ಜಾತಿಗಳಿಂದ ಹಿಡಿದು ಕೆಳಜಾತಿಗಳವರೆಗೆ ಎಲ್ಲೆಡೆ ಸಾಮಾನ್ಯವಾಗಿ ಇರುತ್ತದೆ. ಅನೇಕ ಜಾತಿಗಳಲ್ಲಿ ಹೆಣ್ಣು ಪ್ರತೀ ತಿಂಗಳು ಮುಟ್ಟಾದಾಗ, ಅಡಿಗೆ, ಪೂಜೆ, ಪ್ರಾರ್ಥನೆ, ದೇವಾಲಯ ಪ್ರವೇಶ ಇವುಗಳಿಗೆ ಅವಕಾಶವಿಲ್ಲ, ಮನೆಯ ವಸ್ತುಗಳನ್ನು ಮುಟ್ಟಲೂ ಅವಕಾಶವಿಲ್ಲ. ಗಂಡ, ಮಕ್ಕಳನ್ನೂ ಕೂಡ ಮುಟ್ಟಿಸಿಕೊಳ್ಳಬಾರದು. ಮೂರು ದಿನಗಳ ಸ್ನಾನವಿಲ್ಲದ ಮುಟ್ಟು ಕಳೆದ ನಂತರ, ನಾಲ್ಕನೇ ದಿನದ ನೀರು ಆಗಿದ್ದರೂ ಅವಳ ಮೈಲಿಗೆ ಕಳೆಯದೆ, ಐದನೇ ದಿನದ `ಐನೀರು’ ಆದ ನಂತರವೇ ಅವಳು `ಪರಿಶುದ್ಧ’ಳೆನಿಸಿ, ಅವಳಿಗೆ ಮನೆಯ ಸಾಮಾನ್ಯ ವ್ಯಾವಹಾರಿಕ ಬದುಕಿಗೆ ಪ್ರವೇಶ ದೊರೆಯುತ್ತದೆ. ಸಹಜ ಸಾಮಾನ್ಯವಾದ ಈ ದೈಹಿಕ ಕ್ರಿಯೆಯನ್ನು ಹೀಗೆ ನಿರ್ಬಂಧಿಸಲು ಯಾವ ವೈಜ್ಞಾನಿಕ ಕಾರಣವೂ ಇಲ್ಲ.

ಈ ಮುಟ್ಟದಿರುವಿಕೆ ಹೆಣ್ಣನ್ನು ಆ ದಿನಗಳಲ್ಲಿ ಮನೆಯಿಂದ ಬೇರೆಬೇರೆ ರೀತಿ, ಕ್ರಮ, ಸ್ವರೂಪ, ವಿಧಾನಗಳಲ್ಲಿ ಹೊರಗಿಡುತ್ತದೆ. ಗೊಲ್ಲರ ಹಾಡಿಗಳಲ್ಲಿ ಮುಟ್ಟಾಗಿರುವ ಹೆಣ್ಣು ಮಾತ್ರವಲ್ಲದೆ, ಮಗು ಹೆತ್ತ ಹಸಿಬಾಣಂತಿಯನ್ನೂ ಮೈಲಿಗೆಯ ಹೆಸರಿನಲ್ಲಿ ದೂರವಿಡುತ್ತದೆ. ಹಾಡಿ ಅಥವಾ ಸಮುದಾಯದ ಜನರ ವಸತಿ ಪ್ರದೇಶದಿಂದ ಹೊರಗೆ ಒಂದೆರಡು ಗುಡಿಸಲು ಇದಕ್ಕಾಗಿ ಇರುತ್ತದೆ. ಮುಟ್ಟಾದ ಹೆಣ್ಣು ಅಥವಾ ಹಸಿಬಾಣಂತಿ ಅಲ್ಲಿ ಬಿಸಿಲು ಮಳೆ ಚಳಿ ಗಾಳಿಯಲ್ಲಿ ಉಳಿಯಬೇಕು. ನಿಗದಿತ ದಿನಗಳು ಕಳೆದ ನಂತರವೇ ಅವಳಿಗೆ ಹಾಡಿಯಲ್ಲಿ ಪ್ರವೇಶ. ತಮ್ಮ ದೇವರಾದ ಜುಂಜಪ್ಪನಿಗೆ ಮೈಲಿಗೆಯಾಗಿ ಅವನು ಸಿಟ್ಟಾಗುತ್ತಾನೆ ಎಂಬುದು ಅವರ ನಂಬಿಕೆ. ಜುಂಜಪ್ಪ ಎಂದರೆ ಒಂದರ್ಥದಲ್ಲಿ ಶ್ರೀಕೃಷ್ಣನ ಅವತಾರ. ಹೆಣ್ಣುಮಕ್ಕಳ ಕಷ್ಟವನ್ನು ಶ್ರೀಕೃಷ್ಣನೂ ಅರ್ಥ ಮಾಡಿಕೊಳ್ಳದಿದ್ದರೆ ಏನು ಮಾಡೋಣ?

ಇತ್ತೀಚೆಗೆ ಚಂಡಮಾರುತ ಬಂದಾಗ ತಮಿಳುನಾಡಿನ ತಂಜಾವೂರು ಜಿಲ್ಲೆಯ ಅನೈಕಾಡು ಎಂಬಲ್ಲಿ ಒಂದು ದುರ್ಘಟನೆ ನಡೆಯಿತು. ಮೈನೆರೆದ ಹನ್ನೆರಡರ ಹುಡುಗಿಯನ್ನು ಆ ಜಾತಿಯ ಪದ್ಧತಿಯಂತೆ ಮನೆಯ ಹಿತ್ತಲಿನಲ್ಲಿದ್ದ ಗುಡಿಸಲಿನಂಥ ಶೆಡ್‍ನಲ್ಲಿ ರಾತ್ರಿ ತಾಯಿಯ ಜೊತೆ ಮಲಗಿಸಲಾಗಿತ್ತು. ಚಂಡಮಾರುತ ಬೀಸಿದಾಗ ತೆಂಗಿನ ಮರಗಳು ಬುಡಸಮೇತ ಆ ಮುರುಕಲು ಗುಡಿಸಲಿನ ಮೇಲೆ ಉರುಳಿ ವಿಜಯಾ ಎಂಬ ಆ ಹುಡುಗಿಯ ಜೀವ ತೆಗೆದವು. ಅವಳ ಅಮ್ಮನಿಗೆ ಗಾಯಗಳಾದವು. ಇಂಥ ಪ್ರಕರಣಗಳು ವರದಿಯಾದರೆ ಸುದ್ದಿ, ಇಲ್ಲದಿದ್ದರೆ ಯಾರಿಗೂ ತಿಳಿಯುವುದೇ ಇಲ್ಲ. ತಮಿಳುನಾಡಿನ ಹಲವು ಜಾತಿಗಳಲ್ಲಿ ಈ ಪದ್ಧತಿ ಇದೆ. ಉತ್ತರ ಭಾರತದ ಹಲವು ರಾಜ್ಯಗಳ ಹಳ್ಳಿಗಳಲ್ಲಿ `ಬಶಾಲಿ’ ಅಂದರೆ ಕೊಟ್ಟಿಗೆ ತರಹದ ಗುಡಿಸಲು ಕಾಣುವುದು ಸಾಮಾನ್ಯ. ಮುಟ್ಟಾದವರನ್ನು ಇಂಥ ಕೊಟ್ಟಿಗೆಗೆ ಪ್ರತೀ ತಿಂಗಳು ಅಟ್ಟಲಾಗುತ್ತದೆ.

ಏಷ್ಯಾ ಖಂಡದ ಅನೇಕ ದೇಶಗಳಲ್ಲಿ ಮುಟ್ಟಿನ ಕಟ್ಟುನಿಟ್ಟು ವ್ಯಾಪಕವಾಗಿದೆ. ನೇಪಾಳದಲ್ಲಿ ಅಂಬಾ ಬೊಹರ ಎಂಬ ಮಹಿಳೆ ಮುಟ್ಟಾದಾಗ ತನ್ನ ಎರಡು ಮಕ್ಕಳೊಂದಿಗೆ ಮನೆಯಿಂದ ಆಚೆಯಿದ್ದ `ಚೌಪಡಿ’ ಎಂದು ಕರೆಯಲಾಗುವ ಒಂದು ಕೋಣೆಯಲ್ಲಿ ಮಲಗಿದ್ದಳು. ವಿಪರೀತ ಚಳಿ ತಾಳಲಾರದೆ ಕಿಟಕಿಯೇ ಇಲ್ಲದ ಆ ಪುಟ್ಟ ಕೋಣೆಯಲ್ಲಿ ಒಂದು ಮೂಲೆಯಲ್ಲಿ ಬೆಂಕಿ ಹಾಕಿಕೊಂಡಿದ್ದಳು. ಬೆಳಿಗ್ಗೆ ನೋಡಿದರೆ ತಾಯಿ ಮಕ್ಕಳು ಉಸಿರುಕಟ್ಟಿ ಸತ್ತಿದ್ದರು. ನೇಪಾಳದಲ್ಲಿ ಹೀಗೆ ಮಹಿಳೆಯರನ್ನು ಮುಟ್ಟಾದಾಗ ಹೊರಗೆ ಮಲಗಿಸುವುದನ್ನು ತಡೆಯಲು ಬಿಗಿಯಾದ ಕಾನೂನನ್ನು 2005 ರಲ್ಲೇ ತರಲಾಗಿದೆ. ಅದನ್ನು ಮೀರಿ ಚೌಪಡಿ ಪದ್ಧತಿ ಅನುಸರಿಸಿದರೆ, ಮೂರು ತಿಂಗಳು ಸೆರೆಮನೆವಾಸ ಮತ್ತು ದಂಡ ವಿಧಿಸಲಾಗುತ್ತದೆ. ಹಾಗಿದ್ದರೂ ಈ ಕೆಟ್ಟ ಪದ್ಧತಿ ಅಲ್ಲಿ ಮುಂದುವರೆಯುತ್ತಿದೆ. ಬಾಂಗ್ಲಾ ದೇಶದಲ್ಲಿ ಕೂಡ ಇಂಥ ಪದ್ಧತಿ ಇದ್ದು ಮುಟ್ಟಾದ ಹೆಣ್ಣುಮಕ್ಕಳಿಗೆ ಕಡಿಮೆ ನೀರು ಕೊಡುವುದಲ್ಲದೆ ಹಾಲು, ಹಣ್ಣು, ಮೀನು ಸೇವನೆ ನಿರ್ಬಂಧಿಸಲಾಗುತ್ತದೆ. ಅನೇಕ ದೇಶಗಳಲ್ಲಿ ಹೆಣ್ಣುಮಕ್ಕಳ ಪಾಡು ಇದಕ್ಕಿಂತ ಕೆಟ್ಟದಾಗಿರುತ್ತದೆ. ಮುಟ್ಟಾದ ಹೆಂಗಸರ ರಕ್ತವನ್ನು ನೋಡಿದರೆ ಗಂಡಸರು ಕುರುಡರಾಗುತ್ತಾರೆ ಎಂಬಂಥ ನೂರಾರು ಮೂಢನಂಬಿಕೆಗಳು ಎಲ್ಲ ಸಮುದಾಯಗಳಲ್ಲೂ ಹರಡಿಕೊಂಡಿವೆ.

ಹೊರಗೆ ಗುಡಿಸಲಿನಲ್ಲಿ ಮಲಗಬೇಕಾದ ಹೆಣ್ಣುಮಕ್ಕಳ ಪೌಷ್ಟಿಕತೆ ಮತ್ತು ಸುರಕ್ಷತೆ ಎರಡೂ ಅಪಾಯಕ್ಕೆ ಈಡಾಗುವುದು ಸಹಜ. ಪ್ರವಾಹ, ಬಿರುಗಾಳಿ, ಚಳಿ, ಮಳೆಗೆ ಅವರು ತುತ್ತಾಗಿ ಅವರ ಆರೋಗ್ಯ ಕೆಡುವುದು ಸಹಜ. ಹಾವುಚೇಳುಗಳ ಕಡಿತ, ಕಾಡು ಪ್ರಾಣಿಗಳ ದಾಳಿ ಇದ್ದೇ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ದುಷ್ಟ ಗಂಡಸರ ದೌರ್ಜನ್ಯ, ಅತ್ಯಾಚಾರಕ್ಕೂ ಅವರು ಬಲಿಯಾಗುತ್ತಾರೆ. ಮುಟ್ಟಿನ ಮೈಲಿಗೆಯ ಮೂಢನಂಬಿಕೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸಲು ಸಾಮಾಜಿಕ ಚಳವಳಿಗಳೇ ನಡೆಯಬೇಕಿದೆ. “ಮುಟ್ಟಾದವರ ರಕ್ತ ಅಶುದ್ಧವಲ್ಲ, ನಿಮ್ಮ ಆಲೋಚನೆಗಳು ಅಶುದ್ಧ” ಎಂದು ಸಾರಿದ ದೆಹಲಿಯ ಜಾಮಿಯ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾಲಯದ ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಆಂದೋಲನ ನಡೆಸಿದ್ದರು. ಇಂಥ ಆಂದೋಲನಗಳು ಹಳ್ಳಿಹಳ್ಳಿಗಳಲ್ಲಿ ನಡೆದರೆ, ನಮ್ಮ ಸಮುದಾಯಗಳ ಕಣ್ಣು ಒಂದಿಷ್ಟಾದರೂ ತೆರೆಯಬಹುದು.

 ಆರ್. ಪೂರ್ಣಿಮಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *