ದ್ರೌಪದಿಯ ಸೀರೆ / ಚುನಾವಣೆ ಕನ್ನಡಿಯಲ್ಲಿ ಪುರುಷ ಚಿಂತನೆ ಪ್ರತಿಬಿಂಬ – ಆರ್. ಪೂರ್ಣಿಮಾ
ಮಹಿಳೆಯರನ್ನು ಯಾವ ನೆಲೆಯಲ್ಲೂ ಸಮಾನವಾಗಿ ಪರಿಗಣಿಸದ, ಅವರಿಗೆ ರಾಜಕೀಯ ಪಕ್ಷಗಳಿಂದ ಅಧಿಕೃತವಾಗಿ ಸ್ಪರ್ಧಿಸಲು ಅವಕಾಶ ನೀಡದ, ರಾಜಕೀಯ ಮೀಸಲಾತಿ ಮಸೂದೆಯನ್ನು ತರಲೊಪ್ಪದ ಪೌರುಷಮಯ ರಾಜಕೀಯ ಗಂಡು ಪ್ರಜ್ಞೆ, ಅವರತ್ತ ಗೇಲಿಯ ಗುಂಡುಗಳನ್ನು ಎಸೆಯುತ್ತಿದೆ. ಈ ಸಾರ್ವಜನಿಕ ಮಹಿಳಾ ನಿಂದನೆಯು ದೇಶ, ಪ್ರದೇಶ, ಪಕ್ಷ, ಜಾತಿ, ಧರ್ಮ ಯಾವುದೇ ವಿನಾಯಿತಿಯಿಲ್ಲದೆ ಪ್ರಾದೇಶಿಕದಿಂದ ಜಾಗತಿಕ ರಾಜಕೀಯ ರಂಗದವರೆಗೆ ವ್ಯಾಪಕವಾಗಿದೆ- `ಗ್ಲೋಕಲ್’ ಆಗಿಬಿಟ್ಟಿದೆ.
ರಾಜಕಾರಣ ಏನಿದ್ದರೂ ನಮ್ಮ ಹಕ್ಕಿನ ಜಹಗೀರು, ಅದರಲ್ಲಿ ಮಹಿಳೆಯರಿಗೆ ಪ್ರವೇಶ ಕೊಡಲೇಬಾರದು ಎಂದು ನಂಬಿರುವ ಪುರುಷ ರಾಜಕಾರಣಿಗಳ `ಆಚಾರವಿಲ್ಲದ ನಾಲಿಗೆ’ ತನ್ನ ನೀಚ ಬುದ್ಧಿಯನ್ನು ಹಲವು ಬಗೆಯಲ್ಲಿ ತೋರಿಸಲು ಚುನಾವಣೆಯೇ ಅತ್ಯಂತ ಪ್ರಶಸ್ತ ಸಮಯವಾಗಿಬಿಟ್ಟಿದೆ. ಚುನಾವಣೆಯಲ್ಲಿ ಆಸಕ್ತಿ ತೋರಿಸುವ, ಅದರಲ್ಲಿ ಪಾಲ್ಗೊಳ್ಳಲು ಮುಂದಾಗುವ, ಸ್ಪರ್ಧಿಸಲು ಬಯಸುವ ಹೆಂಗಸರನ್ನು ಗಂಡಸರು ಅದೆಷ್ಟು ರೀತಿಯಲ್ಲಿ ನಿಂದಿಸುತ್ತಾರೆ, ಲೇವಡಿ ಮಾಡುತ್ತಾರೆ, ಗೇಲಿಯ ಗುಂಡುಗಳನ್ನು ಎಸೆಯುತ್ತಾರೆ ಎನ್ನುವುದನ್ನು ಹಿಂದಿನ ಅನೇಕ ಚುನಾವಣೆಗಳಲ್ಲೂ ನೋಡಿದ್ದೇವೆ, 2019ರ ಇಂದಿನ ಲೋಕಸಭಾ ಚುನಾವಣೆಯಲ್ಲಿ ಅದರ ಇನ್ನೂ ವಿಕಾರ, ವಿಸ್ತಾರ ಆವೃತ್ತಿಯನ್ನು ನೋಡುತ್ತಿದ್ದೇವೆ. ಪ್ರತೀ ಚುನಾವಣೆಯ ನಂತರ ಜನಮಾನಸದಲ್ಲಿ ಉಳಿಯುವ ಕೆಟ್ಟನೆನಪುಗಳಲ್ಲಿ ಖಂಡಿತ ಇವೂ ಇರುತ್ತವೆ. ಈ ಮಹಿಳಾ ವಿರೋಧಿ ಪ್ರಹಾರಗಳಿಂದ ಅಮೆರಿಕದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದ ಹಿಲೆರಿ ಕ್ಲಿಂಟನ್ ಅವರಿಂದ ಹಿಡಿದು ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿರುವ ಸುಮಲತಾವರೆಗೆ ಯಾರೂ ತಪ್ಪಿಸಿಕೊಳ್ಳಲಾಗಿಲ್ಲ. ಈ ಸಾರ್ವಜನಿಕ ಮಹಿಳಾ ನಿಂದನೆಯು ದೇಶ, ಪ್ರದೇಶ, ಪಕ್ಷ, ಜಾತಿ, ಧರ್ಮ ಯಾವುದೇ ವಿನಾಯಿತಿಯಿಲ್ಲದೆ ಪ್ರಾದೇಶಿಕದಿಂದ ಜಾಗತಿಕ ರಾಜಕೀಯ ರಂಗದವರೆಗೆ ವ್ಯಾಪಕವಾಗಿದೆ- `ಗ್ಲೋಕಲ್’ ಆಗಿಬಿಟ್ಟಿದೆ.
ಕರ್ನಾಟಕದ ಚುನಾವಣಾ ರಾಜಕಾರಣವನ್ನು ನೋಡುವುದಾದರೆ, ಯಾವ ನೆಲೆಯಲ್ಲೂ ಮಹಿಳೆಯರನ್ನು ಸಮಾನವಾಗಿ ಪರಿಗಣಿಸಲೊಪ್ಪದ, ಅವರಿಗೆ ರಾಜಕೀಯ ಪಕ್ಷಗಳಿಂದ ಅಧಿಕೃತವಾಗಿ ಸ್ಪರ್ಧಿಸಲು ಅವಕಾಶ ನೀಡದ, ರಾಜಕೀಯ ಮೀಸಲಾತಿ ಮಸೂದೆಯನ್ನು ತರಲೊಪ್ಪದ ಪೌರುಷಮಯ ರಾಜಕೀಯ ಪ್ರಜ್ಞೆ, ಪಕ್ಷೇತರವಾಗಿ ಸ್ಪರ್ಧಿಸಿ ಸವಾಲು ಒಡ್ಡುವ ಮಹಿಳೆಯರನ್ನು ಕನಿಷ್ಠ ಮರ್ಯಾದೆಯಿಂದಲೂ ಕಾಣುವುದಿಲ್ಲ. ಇದಕ್ಕೊಂದು ವಿಕೃತ ನಿದರ್ಶನವಾಗಿ `ಸಕ್ಕರೆನಾಡು’ ಮಂಡ್ಯದ ಅತ್ಯಂತ ಕಹಿಯಾದ ಮಹಿಳಾ ವಿರೋಧಿ ಪ್ರಚಾರ ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ದಾಖಲಾಗುತ್ತ್ತಿದೆ. ಸುಮಲತಾ ಅಂಬರೀಷ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರಿಗೆ ಸಂವಿಧಾನ ನೀಡಿರುವ ಹಕ್ಕು; ಚುನಾವಣಾ ಪ್ರಚಾರದಲ್ಲಿ ಮತ ನೀಡಿ ಎಂದು ಕೇಳುವುದು ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಕರ್ತವ್ಯ; ಮಂಡ್ಯ ಕ್ಷೇತ್ರದಿಂದ ಯಾರನ್ನು ಆರಿಸಬೇಕು ಎನ್ನುವುದು ಮತದಾರರ ಇಚ್ಛೆ. ಆದರೆ ಇವನ್ನೆಲ್ಲ ಮೀರಿ ಒಬ್ಬ ಮಹಿಳಾ ಅಭ್ಯರ್ಥಿಯ ಮೇಲೆ ನಡೆಯುತ್ತಿರುವ ಪ್ರಹಾರ ನಾಗರಿಕ ಸಭ್ಯತೆ, ಸನ್ನಡತೆಯ ಎಲ್ಲೆಗಳನ್ನು ಮೀರಿಬಿಟ್ಟಿದೆ.
“ಗಂಡ ಸತ್ತು ಎರಡು ತಿಂಗಳಾಗಿಲ್ಲ, ಆಗಲೇ ಇವಳಿಗ್ಯಾಕೆ ಚುನಾವಣೆ”, “ಏನಾದರೂ ಅವರ ಮುಖದ ಮೇಲೆ ಗಂಡನನ್ನು ಕಳೆದುಕೊಂಡ ದುಃಖ ಕಾಣುತ್ತಿದೆಯಾ?”, “ನಿಜವಾಗಿ ಇವಳೊಬ್ಬ ಮಾಯಾಂಗನೆ”, “ಮತ ಕೇಳಲು ಬಂದರೆ ಸುಮಲತಾಗೆ ಮಂಗಳಾರತಿ ಮಾಡಿ” ಇತ್ಯಾದಿ ಏನೇನೋ ಕಾರಿಕೊಂಡ ಸಚಿವ ಎಚ್.ಡಿ. ರೇವಣ್ಣ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಂಸದ ಶಿವರಾಮೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರಿಗೆ ಒಟ್ಟಾರೆ ಸ್ತ್ರೀಯರನ್ನು ಕುರಿತು, ವಿರೋಧಿ ಪಾಳೆಯದಲ್ಲಿರುವ ಮಹಿಳಾ ಸ್ಪರ್ಧಿಗಳನ್ನು ಕುರಿತು ಇರುವ ಅಸಹನೆ ಫಿಲ್ಟರ್ ಇಲ್ಲದೆ ಹರಿದಿದೆ. ಇಷ್ಟಾಗಿ ಅವರು ಮತ ಕೇಳುತ್ತಿರುವ ಅಭ್ಯರ್ಥಿಯಾದ ನಿಖಿಲ್ ಅವರ ರಾಜಕೀಯ ಪಕ್ಷವಾದ ಜೆಡಿಎಸ್‍ನ ಚಿಹ್ನೆ ‘ಹೊರೆ ಹೊತ್ತ ಮಹಿಳೆ’ ಎನ್ನುವ ವಿರೋಧಭಾಸದ ಹೊರೆಯನ್ನು ಅವರು ಹೇಗೆ ಕಳಚಿಕೊಳ್ಳುತ್ತಾರೋ? ಅದರ ಜೊತೆಗೆ ತಮ್ಮ ಪಕ್ಷದ ಶಾಸಕ ಅಥವಾ ಸಂಸದ ತೀರಿಕೊಂಡ ಕೂಡಲೇ ಉಪಚುನಾವಣೆಯಲ್ಲಿ ಆತನ ಹೆಂಡತಿಯನ್ನೇ ನಿಲ್ಲಿಸಿ ಅನುಕಂಪದ ಅಲೆಯಲ್ಲಿ ಸ್ಥಾನ ಉಳಿಸಿಕೊಳ್ಳುವ ಕಾರಸ್ಥಾನವನ್ನು ಯಾವ ರಾಜ್ಯದಲ್ಲಿ ಯಾವ ರಾಜಕೀಯ ಪಕ್ಷ ಮಾಡಿಲ್ಲ? ಆಗೆಲ್ಲ ಆಕೆಯ “ಗಂಡನನ್ನು ಕಳೆದುಕೊಂಡ ದುಃಖ” ಇವರಿಗೆ ಬಂಡವಾಳವಾಗುವುದು ಚುನಾವಣಾ ತಂತ್ರವೆನಿಸಿಬಿಡುತ್ತದೆ. ಸುಮಲತಾ ಹೆಸರಿನ ಇನ್ನಷ್ಟು ಮಹಿಳೆಯರನ್ನು ಕಣಕ್ಕೆ ಇಳಿಸಿದ್ದು, ಅವರ ಅಂಥ ಪ್ರಚೋದನೆಗೆ ಆ ಮಹಿಳೆಯರು ಒಪ್ಪಿಕೊಂಡು ಸ್ಪರ್ಧಿಸಿದ್ದು – ಎರಡೂ ನಮ್ಮ ರಾಜಕಾರಣ ತಲುಪಿರುವ ಪಾತಾಳವನ್ನಷ್ಟೇ ತೋರಿಸುತ್ತದೆ.
ಕರ್ನಾಟಕದಲ್ಲೇ “ಅನುಕಂಪದ ಅಲೆ”ಯ ಚುನಾವಣಾ ತಂತ್ರವನ್ನು ಮೀರಿ ಮಹಿಳೆಯ ಸ್ಪರ್ಧೆಗೆ ತಡೆಯೊಡ್ಡಿದ ಇನ್ನೊಂದು ಪ್ರಸಂಗವನ್ನೂ ಪುರುಷಶಾಹಿ ಮನೋಭಾವದ ವಿಕೃತ ಪ್ರದರ್ಶನವೆಂದೇ ನೋಡಬೇಕು. ಚಿಕ್ಕಂದಿನಿಂದ ರಾಜಕಾರಣದ ವಾತಾವರಣದಲ್ಲೇ ಬೆಳೆದು ಪ್ರೌಢತೆಯ ನೆಲೆಗೆ ಬಂದಿದ್ದ ತೇಜಸ್ವಿನಿ ಅನಂತಕುಮಾರ್ ಅವರಿಗೆ ” ಈ ಕ್ಷೇತ್ರದ ಅಭ್ಯರ್ಥಿ ನೀವೇ” ಎಂದು ಮೊದಲು ಆಸೆ ತೋರಿಸಿ ಕೊನೆಗಳಿಗೆಯಲ್ಲಿ ಬಿಜೆಪಿ ಕೈಕೊಟ್ಟಿದೆ. “ಯುವಕರಿಗೆ ಅವಕಾಶ ಕೊಡಬೇಕು” ಎಂದು ಸಮರ್ಥಿಸಿಕೊಳ್ಳುವ ಅವರು ಅವಕಾಶ ಕೊಟ್ಟಿರುವುದಾದರೂ ಯಾರಿಗೆ- “ಅಬ್ಬಾ! ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರುವ ಆ ದುರ್ದಿನ ನೆನೆದು ಬೆಚ್ಚಿಬೀಳುತ್ತೇನೆ” ಎಂಬರ್ಥದ ಮಾತುಗಳನ್ನು ಸಾರ್ವಜನಿಕವಾಗಿ ಘೋಷಿಸಿರುವ ಮಹಿಳಾ ವಿರೋಧಿ ಚಿಂತನೆಯ ಯುವಕನಿಗೆ! ಇದರಿಂದ ಯಾರಿಗೆ ಸಂತೋಷವಾದರೂ ಮಹಿಳೆಯರಿಗೆ ಖಂಡಿತ ಸಂತೋಷವಾಗಲಿಲ್ಲ. ಅಷ್ಟಾಗಿ “ಯುವಶಕ್ತಿಗೆ ಮನ್ನಣೆ ಕೊಡಬೇಕು” ಎಂಬ ಅವರ ತೀರ್ಮಾನವನ್ನೇ ನಂಬುವುದಾದರೆ, ಅನಂತಕುಮಾರ್ ತೇಜಸ್ವಿನಿ ದಂಪತಿಯ ಇಬ್ಬರು ಹೆಣ್ಣುಮಕ್ಕಳಲ್ಲಿ ಯಾರಿಗಾದರೂ ಕೊಡಬಹುದಿತ್ತಲ್ಲ? ಶಾಸಕ ರವಿ ಸುಬ್ರಹ್ಮಣ್ಯ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಅವರಿಗೆ ಅವಕಾಶ ಕೊಡುವುದಾದರೆ, ಅದೇ “ಕುಟುಂಬ ರಾಜಕಾರಣ” ಈ ಹೆಣ್ಣುಮಕ್ಕಳ ಪರವಾಗಿಯೂ ಇರಬಹುದಾಗಿತ್ತಲ್ಲ? ಕುಟುಂಬ ರಾಜಕಾರಣವೂ ಬರೀ ಪುರುಷ ರಾಜಕಾರಣವೇ ಆಗಿರಬೇಕೇನು?
ತೇಜಸ್ವಿನಿಗೆ ಮಾಡಿದ ಅನ್ಯಾಯವನ್ನು “ಡಿಎನ್‍ಎ, ವಂಶವಾಹಿನಿ ಆಧಾರದಲ್ಲಿ ಟಿಕೆಟ್ ಕೊಡಬೇಕು ಎಂದರೆ ಹೇಗೆ?” ಎಂಬಂಥ ಬಿಜೆಪಿ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸಮರ್ಥನೆಯಂತೂ ಹಲವು ರೀತಿಯಲ್ಲಿ ನಗೆಪಾಟಲಿಗೆ ಅರ್ಹವಾದ ಹೇಳಿಕೆ. ಮೊದಲಿಗೆ ಬಿಜೆಪಿ ಇದೇ ಚುನಾವಣೆಯಲ್ಲೇ ಡಿಎನ್‍ಎ ಸಹಿತ ವಂಶೋದ್ಧಾರಕರಿಗೇ ನಮ್ಮ ರಾಜ್ಯದಲ್ಲೂ ಅವಕಾಶ ಕೊಟ್ಟಿದೆ. ಇದರಷ್ಟೇ ಮುಖ್ಯವಾದದ್ದು ಸಂತೋಷ್ ಅವರಿಗೆ “ಡಿಎನ್‍ಎ ವಂಶವಾಹಿನಿ” ಕುರಿತು ಯಾರಾದರೂ ವಿಜ್ಞಾನದ ಪಾಠ ಮಾಡಬೇಕಾದ ತುರ್ತು ಅಗತ್ಯ. ತಾವು ಟಿಕೆಟ್ ನೀಡಿಕೆಯಲ್ಲಿ ಯಾವ ಕಾರಣಕ್ಕೋ ಹಠ ಹಿಡಿದು ಪಕ್ಷಪಾತ ಮಾಡಿರುವುದೇ “ಶಾಸಕನ ಅಣ್ಣನ ಮಗ” ಎಂಬ “ಡಿಎನ್‍ಎ ವಂಶವಾಹಿನಿ” ಸಂಬಂಧಿಗೆ ಎನ್ನುವುದು ಅವರಿಗೆ ಗೊತ್ತಿಲ್ಲವೇ? ಸಂಬಂಧಿಗಳಲ್ಲದ ಗಂಡ- ಹೆಂಡತಿಯ ಡಿಎನ್‍ಎ ಸಂಬಂಧ ಕುರಿತ ಒಂದು ಅದ್ಭುತ ಸಂಶೋಧನೆಯನ್ನು, ಮುಂದಿನ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಇವರ ಪೈಕಿಯೇ ಯಾರಾದರೂ ಮಂಡಿಸಬೇಕಷ್ಟೆ!
ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಎಂಬ ಸಂಕಥನ ಮತ್ತು ಅದಕ್ಕೆ ರಾಜಕೀಯ ಪಕ್ಷಗಳ ಬೆಂಬಲದ ಕಳ್ಳ ಪ್ರಹಸನ ಇನ್ನೇನು ಬೆಳ್ಳಿಹಬ್ಬದತ್ತ ಧಾವಿಸುತ್ತಿದೆ. ದೇಶದಲ್ಲಿ ಒಂದೆರಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಿಟ್ಟರೆ ಮಿಕ್ಕ ಯಾರೂ ಚುನಾವಣೆಯಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ ನೀಡುವ ಬಗ್ಗೆ ಚಕಾರ ಎತ್ತಲಿಲ್ಲ. ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆರಿಸುವಾಗ ಕೂಡ ಇದೇ ಆಗಿದ್ದರೂ ರಾಜ್ಯದಲ್ಲಿ ಒಟ್ಟಾರೆಯಾಗಿ 27 ಮಹಿಳೆಯರು ಮತ್ತು 496 ಪುರುಷರು ಕಣದಲ್ಲಿದ್ದಾರೆ. ಚುನಾವಣೆಯ ನೆಲೆಯಲ್ಲಿ ನೋಡಹೊರಟರೆ, ಒಂದೊಂದು ರಾಜ್ಯದ್ದೂ ಒಂದೊಂದು ಪಕ್ಷದ್ದೂ ಒಂದೊಂದು ಕಥೆ. “ವಯಸ್ಸಾಯಿತು” ಎಂದು ಹಿರಿಯ ಮಹಿಳಾ ರಾಜಕಾರಣಿಗಳನ್ನು ದೂರವಿಟ್ಟ ಪಕ್ಷಗಳು ಯುವತಿಯರಿಗೇನೂ ಕರೆದು ಅವಕಾಶ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿರುವ ಮಹಿಳಾ ಮೀಸಲಾತಿ ಕುರಿತ ಮಾತುಗಳಲ್ಲಿ ಎಷ್ಟನ್ನು ನಂಬಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಇನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿರುವ “ವಿಧಾನಸಭೆ, ಲೋಕಸಭೆ ಮಾತ್ರವಲ್ಲ, ಕೇಂದ್ರ ಸರ್ಕಾರದ ಉದ್ಯೋಗಗಳಲ್ಲೂ ಶೇ. 33 ರಷ್ಟು ಮೀಸಲಾತಿ ಕೊಡುತ್ತೇವೆ” ಎಂಬ ಭರವಸೆಯನ್ನು ಚುನಾವಣಾ ಕಾಲದ ಸುಳ್ಳುಗಳ ಸಂತೆಗೆ ಸರಿಸಬಹುದು.
ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಕೊಡುವ ಮಾತುಗಳು ಚುನಾವಣೆಯಿಂದ ಚುನಾವಣೆಗೆ ಸಾಗಿ ಬರುತ್ತಿವೆ. ಧೈರ್ಯದಿಂದ ಸ್ಪರ್ಧಿಸುವ ಮಹಿಳೆಯರನ್ನು ಅವಮಾನಿಸುವ ಆಜಂ ಖಾನ್ ಅಂಥವರ ನೂರಾರು ಮಾತುಗಳೂ ಹೆಚ್ಚು ಹೆಚ್ಚಾಗಿ ಹರಿದು ಬರುತ್ತಿವೆ. ಮಸೂದೆ ಕೂಡ ಇಲ್ಲದ ಕಾಲದಲ್ಲಿ ಇಷ್ಟು ಅಸೂಯೆ; ಇನ್ನು ಕಾಯಿದೆ ಆಗಿಬಿಟ್ಟರೆ ಏನೇನು ಕಾಯಿಲೆ ಕಾಣಿಸಿಕೊಳ್ಳುತ್ತದೋ ಎಂದು ಭಯವಾಗುತ್ತದೆ. ನವಮಾಧ್ಯಮವಂತೂ ರಾಜಕೀಯ ರಂಗದಲ್ಲಿರುವ ಮಹಿಳೆಯರ ಪಾಲಿಗೆ ಬಹುಪಾಲು ಅವಮಾಧ್ಯಮವೂ ಅವರ ಆಸೆಆಕಾಂಕ್ಷೆಗಳಿಗೆ ಶವಮಾಧ್ಯಮವೂ ಆಗುತ್ತಿದೆ. ಸಮಾಜದಲ್ಲಿ, ಬದುಕಿನಲ್ಲಿ ಎಲ್ಲೆಡೆ ಕಾಣುವ ಮನೋಭಾವವೇ ರಾಜಕೀಯದಲ್ಲೂ ಕಾಣುವುದು ಸಹಜ. ರಾಜಕಾರಣ ಸೇರಿ ಎಲ್ಲ ರಂಗಗಳಲ್ಲೂ ಮಹಿಳೆಯರನ್ನು ಕುರಿತು ಸಮಾನತೆಯ ನೆಲೆಯಲ್ಲಿ ಚಿಂತಿಸುವ ನಾಳೆಗಳಿಗಾಗಿ, ಬದಲಾವಣೆಯ ಬೀಜಗಳನ್ನು ಇಂದು ಮಕ್ಕಳ ಮನದಲ್ಲೇ ಬಿತ್ತಿಬೆಳೆಸುವ ಅವಶ್ಯಕತೆಯಿದೆ.
– ಆರ್. ಪೂರ್ಣಿಮಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.