ದೇಶ ಕಾಲ/ ನಮ್ಮ ಮತ ನಮ್ಮ ಆಯ್ಕೆ, ಇರಲಿ ಹೆಣ್ನೋಟಕೆ ಹೆಗ್ಗಳಿಕೆ

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಮಾರ್ಚ್೮ ಮತ್ತು ೯ರಂದು ಮಹಿಳಾ ಚೈತನ್ಯ ದಿನಾಚರಣೆ

ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ಮಹಿಳಾ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಿ 2012ರಲ್ಲಿ ಹುಟ್ಟುಹಾಕಿದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಹಿಂಸೆ, ತಾರತಮ್ಯ ಮುಕ್ತ ಆರೋಗ್ಯಕರ ಸಮಸಮಾಜವನ್ನು ಕಟ್ಟುವ ಆಶಯವನ್ನು ಹೊಂದಿದೆ. ಅನಾದಿ ಕಾಲದಿಂದಲೂ ನಡೆಯುತ್ತಲೇ ಬಂದಿರುವ ಮಹಿಳೆಯರ ಮೇಲಿನ ಹಿಂಸೆ, ಅನ್ಯಾಯ, ಅಸಮಾನತೆಗಳಿಗೆ ಯಾವ ಗಡಿ, ದೇಶ, ಜಾತಿ, ಧರ್ಮ, ಸಂಸ್ಕೃತಿಗಳೂ ಹೊರತಲ್ಲ. ಆದರೆ ಪ್ರತಿಯೊಂದು ಕಾಲಘಟ್ಟದಲ್ಲೂ ಹಿಂಸೆ, ಅನ್ಯಾಯ ಮತ್ತು ಅಸಮಾನತೆಗಳ ವಿರುದ್ಧ ಆತ್ಮವಿಶ್ವಾಸದಿಂದ ಪ್ರತಿರೋಧ ಒಡ್ಡುತ್ತಲೇ ಬಂದಿರುವ ಮಹಿಳೆಯರ ಬದುಕು ಮತ್ತು ಹೋರಾಟ ನಮ್ಮ ಚೈತನ್ಯವಾಗಬೇಕಿದೆ. ಹಾಗಾಗಿ ಒಕ್ಕೂಟವು ಕಳೆದ ಐದಾರು ವರುಷಗಳಿಂದ ಸಾವಿರಾರು ಮಹಿಳೆಯರನ್ನು ಸಂಘಟಿಸಿ, ಮಾರ್ಚ್ ೮ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳಾ ಚೈತನ್ಯದ ದಿನವಾಗಿ ರಾಜ್ಯಮಟ್ಟದಲ್ಲಿ ಆಚರಿಸುತ್ತಾ ಬಂದಿದೆ. ಮಂಗಳೂರಿನಲ್ಲಿ 2013ರಲ್ಲಿ, ಮೈಸೂರಿನಲ್ಲಿ 2014ರಲ್ಲಿ, ಬೆಂಗಳೂರಿನಲ್ಲಿ 2015ರಲ್ಲಿ, ವಿಜಯಪುರದಲ್ಲಿ 2016ರಲ್ಲಿ ಹಾಗೂ ಕೊಪ್ಪಳದಲ್ಲಿ 2017ರಲ್ಲಿ, ಶಿವಮೊಗ್ಗದಲ್ಲಿ 2018ರಲ್ಲಿ ಯಶಸ್ವಿಯಾಗಿ ಆಚರಿಸಿದ ಮಹಿಳಾ ದಿನಾಚರಣೆಗಳು ರಾಜ್ಯದ ಮಹಿಳಾ ಚಳವಳಿಯ ಮೈಲಿಗಲ್ಲಾಗಿವೆ.

ಈ ಬಾರಿ ಸಂಗೀತ-ಸಾಹಿತ್ಯ-ಜಾನಪದ-ಸಮಾಜಸೇವೆ-ಚಳುವಳಿ-ರಾಜಕಾರಣ ಮೊದಲಾಗಿ ಎಲ್ಲ ಕ್ಷೇತ್ರಗಳಲ್ಲೂ ಸಮೃದ್ಧ ಪರಂಪರೆ ಹೊಂದಿರುವ ಧಾರವಾಡ ನೆಲದಲ್ಲಿ ಮಹಿಳಾ ದಿನಾಚರಣೆ ನಡೆಯಲಿದೆ. ಧಾರವಾಡದಲ್ಲಿ ಒಕ್ಕೂಟವು ಈ ಬಾರಿ ‘ನನ್ನ ಮತ ನನ್ನ ಆಯ್ಕೆ/ ಇರಲಿ ಹೆಣ್ನೋಟಕೆ ಹೆಗ್ಗಳಿಕೆ’ ಎಂಬ ಘೋಷವಾಕ್ಯ ಇಟ್ಟುಕೊಂಡು ಮಾರ್ಚ್ 8 ಮತ್ತು 9ರಂದು ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಧಾರವಾಡದ ಪ್ರಗತಿಪರ, ಜನಪರ ಸಂಘಟನೆಗಳೆಲ್ಲವೂ ಸಮಾವೇಶವನ್ನು ಯಶಸ್ವಿಗೊಳಿಸಲು ಕೈ ಜೋಡಿಸಿವೆ.

ನಮ್ಮ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಎರಡು ದಿನದ ಸಮಾವೇಶಕ್ಕಷ್ಟೆ ಸೀಮಿತಗೊಂಡಿಲ್ಲ. ಅದು ಅರಿವು ಮೂಡಿಸುವ, ಸಂಘಟನಾತ್ಮಕವಾಗಿ ಬೆಳೆಯುವ, ಜಾಗೃತಗೊಂಡು ಸಬಲಗೊಳ್ಳುವ ಒಂದು ನಿರಂತರ ಪ್ರಕ್ರಿಯೆಯಾಗಿದೆ. ಕೃಷಿ ಬಿಕ್ಕಟ್ಟು, ಅಸಮಾನ ಕೂಲಿ, ಜಾತಿದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಉದ್ಯೋಗ ಭದ್ರತೆಯಿಲ್ಲದ, ಅಸುರಕ್ಷಿತ ಕೆಲಸದ ವಾತಾವರಣವಿರುವ ಗಾರ್ಮೆಂಟ್ಸ್‌ನಂತಹ ಅಸಂಘಟಿತ ವಲಯದಲ್ಲಿ ದುಡಿಮೆ, ಹೆಣ್ಣಿಗೆ ಆಯ್ಕೆ ಅವಕಾಶ ಹಾಗೂ ಸಬಲೀಕರಣವನ್ನು ನಿರಾಕರಿಸುವ ಬಾಲ್ಯವಿವಾಹ; ಹೆಣ್ಣು ಭೂಮಿಗೆ ಬರುವುದನ್ನೇ ತಡೆಗಟ್ಟುವ ಸ್ತ್ರೀ ಭ್ರೂಣ ಹತ್ಯೆ; ಲೈಂಗಿಕ ದೌರ್ಜನ್ಯ-ತಾಯಿ ಮರಣ-ಶಿಶು ಮರಣ- ವರದಕ್ಷಿಣೆ-ಮುಟ್ಟಿನ ಮೌಢ್ಯ-ಮದ್ಯಪಾನ, ಇವೆಲ್ಲವೂ ಮಹಿಳೆಯರನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳಾಗಿವೆ. ಈ ವಿಷಯಗಳ ಕುರಿತು ಯುವ ಜನಾಂಗ ಮತ್ತು ದಲಿತ ದಮನಿತರೊಂದಿಗೆ ಸಂವಾದಿಸುವ ಆಶಯದೊಂದಿಗೆ ಕಲಾ ತಂಡಗಳ ಸಹಕಾರದೊಂದಿಗೆ ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ’ಅರಿವಿನ ಪಯಣ’ ಅಭಿಯಾನ ಮತ್ತು ಸಾವಿತ್ರಿ ಬಾಯಿ ಫುಲೆ ನೆನಪಿನ ’ಅರಿವಿನ ಅವ್ವನ ದೊಂದಿಯ ಹಿಡಿದು’ ಎಂಬ ಅಭಿಯಾನಗಳನ್ನು ಒಕ್ಕೂಟವು ಆಯೋಜಿಸಿ ನಡೆಸಿಕೊಂಡು ಬರುತ್ತಿದೆ. ಅಭಿಯಾನಗಳ ಭಾಗವಾಗಿ ಕಿರುಪುಸ್ತಿಕೆ, ಕಿರು ನಾಟಕ, ಹಾಡುಗಳ ಮೂಲಕ ಸಾವಿರಾರು ಶಾಲಾಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಅಲ್ಲಿಯ ಹಳ್ಳಿಯ ಕೇರಿಗಳು ಮತ್ತು ನಗರದ ಸ್ಲಂಗಳಲ್ಲಿ ವಾಸಿಸುವ ದಲಿತ ದಮನಿತರನ್ನು ತಲುಪುವ ಪ್ರಯತ್ನವನ್ನು ಒಕ್ಕೂಟವು ಮಾಡುತ್ತಿದೆ. ಫೆಬ್ರುವರಿಯಿಂದ ಮಾರ್ಚ್ 8ರ ತನಕ ಪ್ರತಿ ಶುಕ್ರವಾರ ಧಾರವಾಡ ಜಿಲ್ಲೆಯ ತಾಲೂಕುಗಳಲ್ಲಿ ‘ಕಪ್ಪು ಉಡುಪಿನಲ್ಲಿ ಮಹಿಳೆಯರು’ ಮೌನಜಾಗೃತಿ ಕಾರ‍್ಯಕ್ರಮ ನಡೆಯುತ್ತಿದೆ. ಮಾರ್ಚ್ ೧ರಿಂದ ‘ನಮ್ಮ ಬಸ್ಸು ನಮ್ಮ ಸೀಟು’ ಎಂಬ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬೆಂಬಲಿಸುವ, ಬಸ್ಸಿನಲ್ಲಿ ಮಹಿಳೆಯರ ಸೀಟು ಮಹಿಳೆಯರಿಗಾಗಿಯೇ ಮೀಸಲಿಟ್ಟು ಮಹಿಳಾ ಘನತೆಯನ್ನು, ಹಕ್ಕನ್ನು ಎತ್ತಿ ಹಿಡಿಯುವ ಅಭಿಯಾನ ನಡೆಸಲಾಗುತ್ತಿದೆ.

ಮಹಿಳಾ ದಿನದ ಕಾರ್ಯಕ್ರಮ ವಿವರ:

2019, ಮಾರ್ಚಿ 8ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ‘ಮಹಿಳೆ ಮತ್ತು ರಾಜಕೀಯ ಪ್ರಜ್ಞೆ’ ಕುರಿತು ವಿಚಾರ ಸಂಕಿರಣವಿದೆ. ಜೊತೆಗೆ ‘ಅರಿವಿನೊಂದಿಗೆ ನಮ್ಮ ಪಯಣ’ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ. ದೆಹಲಿಯ ಪತ್ರಕರ್ತೆ, ಸ್ತ್ರೀವಾದಿ ಲೇಖಕಿ, ಹೋರಾಟಗಾರ್ತಿ ಮಣಿಮಾಲಾ ಅವರೊಡನೆ ಧಾರವಾಡದ ಹಿರಿಕಿರಿಯ ಸಂಗಾತಿಗಳು ಇರಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಶಾಂತಲಾ ದಾಮ್ಲೆ, ಸಿರಿ ಗೌರಿ ಬೆಂಗಳೂರು, ಕಾವೇರಿ ಎಚ್. ಎಂ. ಕೊಡಗು, ಸ್ವರ್ಣಾ ಭಟ್, ಡಾ. ಎನ್. ಗಾಯತ್ರಿ ಮೊದಲಾದವರು ಭಾಗವಹಿಸುತ್ತಾರೆ. ಅದೇ ಸ್ಥಳದಲ್ಲಿ ಸಂಜೆ ೪.೩೦ರಿಂದ ‘ಹೆಜ್ಜೆ ಮಾತಾಡು’ ಸಾಂಸ್ಕೃತಿಕ ಹಬ್ಬ ನಡೆಯಲಿದೆ.

ಅಂದು ರಾತ್ರಿ 7 ಗಂಟೆಯಿಂದ ಜ್ಯುಬಿಲಿ ಸರ್ಕಲಿನಲ್ಲಿ ಹಿಂಸೆಯನ್ನು ವಿರೋಧಿಸುತ್ತ, ಒಳಗೊಳ್ಳುವ ಸಂಸ್ಕೃತಿಯನ್ನು ಕಟ್ಟುತ್ತಾ ಒಂದು ತಾಸಿನ ‘ಬೆಳಗೋಣ ಸಾಲು ದೀಪ’ ಮೌನ ಜಾಗೃತಿ ಕಾರ್ಯಕ್ರಮ ’ವಿಮೆನ್ ಇನ್ ಬ್ಲ್ಯಾಕ್’ ಸಂಘಟಿಸಲಾಗಿದೆ. ಧಾರವಾಡದ ಮಾನವಹಕ್ಕು ಹೋರಾಟಗಾರ್ತಿ ಸುರೇಖಾ ದೇವಿ ಅದನ್ನು ಉದ್ಘಾಟಿಸಲಿದ್ದಾರೆ.

ಮಾರ್ಚಿ 9, ಬೆಳಿಗ್ಗೆ 9.30ಕ್ಕೆ ಕಡಪಾ ಮೈದಾನದಲ್ಲಿ ಮಹಾರಾಷ್ಟ್ರದ ಸ್ತ್ರೀವಾದಿ ಚಿಂತಕಿ ಮತ್ತು ಹೋರಾಟಗಾರ್ತಿ ಲತಾ ಪ್ರತಿಭಾ ಮಧುಕರ್ ಮತ್ತು ಮಹಿಳಾ ಹೋರಾಟಗಾರರು, ಚಿಂತಕಿಯರು, ಕಲಾವಿದೆಯರಿಂದ ಜಾಥಾ ಉದ್ಘಾಟನೆ ನಡೆಯಲಿದೆ. ನಗರದ ಮುಖ್ಯಭಾಗಗಳಲ್ಲಿ ಸಂಚರಿಸಿದ ನಂತರ ಸಮಾವೇಶ ನೆರೆದು ಕಾರ್ಮಿಕ ನಾಯಕಿ, ಎಐಟಿಯುಸಿ ಮಹಾಕಾರ್ಯದರ್ಶಿ, ಹೋರಾಟಗಾರ್ತಿ ದೆಹಲಿಯ ಅಮರಜಿತ್ ಕೌರ್ ಅವರಲ್ಲದೆ ಕರ್ನಾಟಕದ ಎಲ್ಲ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಬಂದ ಸಂಗಾತಿಗಳು ಮಾತನಾಡಲಿದ್ದಾರೆ.

ಹಿತೈಷಿಣಿ ಬಳಗ 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *