ದೇಶಕಾಲ/ ಹೋರಾಟಗಾರ್ತಿ ಇಲಿನಾ ಸೇನ್‍ಗೆ ನುಡಿ ನಮನ – ಎನ್. ಗಾಯತ್ರಿ

ಲೇಖಕಿ, ಅಖಿಲ ಭಾರತ ಮಹಿಳಾ ಅಧ್ಯಯನ ಸಂಸ್ಥೆಯ ಮಾಜಿ ಅಧ್ಯಕ್ಷೆ, ಛತ್ತೀಸ್‍ಗಡ್‍ದ ಕಾರ್ಮಿಕರನ್ನು ಸಂಘಟಿಸಿದ ಕಾರ್ಮಿಕ ನಾಯಕಿ, ಮಾನವ ಹಕ್ಕುಗಳಿಗಾಗಿ ನಿರಂತರ ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಮಹಿಳಾ ನಾಯಕಿ ಇಲಿನಾ ಸೇನ್ ಇದೇ ತಿಂಗಳು 9ರಂದು ಕಲ್ಕತ್ತೆಯಲ್ಲಿ ನಿಧನಹೊಂದಿದ್ದಾರೆ. ಅವರಿಗೆ ಹಿತೈಷಿಣಿಯ ಆದರಪೂರ್ವಕ ನುಡಿನಮನ.

ನಾನು ಮೊದಲಬಾರಿ ಇಲಿನಾ ಸೇನ್‍ರವರನ್ನು ನೋಡಿದ್ದು 2011ರ ಜನವರಿಯಲ್ಲಿ ವಾರ್ಧಾದಲ್ಲಿ, ಅಖಿಲ ಭಾರತ ಮಹಿಳಾ ಅಧ್ಯಯನ ಸಂಸ್ಥೆಯ ಸಮ್ಮೇಳನದಲ್ಲಿ ಭಾಗವಹಿಸಲು ಹೋದಾಗ. ಆಗ ಅವರು ವಾರ್ಧಾದ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಕಾರಣದಿಂದ ಅವರು ಮುಖ್ಯವಾಗಿ ಸಮ್ಮೇಳನದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ವಾರ್ಧಾದಂತಹ ಚಿಕ್ಕ ಪಟ್ಟಣದಲ್ಲಿ IAWSಯ ರಾಷ್ಟೀಯ ಸಮ್ಮೇಳನವೊಂದನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ ಯಶಸ್ಸು ಇಲಿನಾ ಸೇನ್ ಅವರದು. ಈ ಸಮ್ಮೇಳನಕ್ಕೆ ಕೆಲವು ತಿಂಗಳ ಮುಂಚೆಯಷ್ಟೇ ಅವರ ಪತಿ ಮಾನವ ಹಕ್ಕುಗಳ ಹೋರಾಟಗಾರರಾದ ಡಾಕ್ಟರ್ ವಿನಾಯಕ್ ಸೇನ್‍ರವರನ್ನು ಮಾವೋವಾದಿಗಳಿಗೆ ಸಹಾಯ ಮಾಡುತ್ತಿದ್ದರೆಂಬ ಕಾರಣ ಕೊಟ್ಟು ಬಂಧಿಸಲಾಗಿತ್ತು. ರಾಯಪುರದ ಸೆಷನ್ಸ್ ಕೋರ್ಟ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಶಿಕ್ಷಿಸಿತ್ತು. ಅವರಷ್ಟೇ ಅಲ್ಲ, ಮಧ್ಯಭಾರತದ ಇನ್ನೂ ಕೆಲವು ಆದಿವಾಸಿ ಯುವಕರನ್ನೂ ಅನ್ಯಾಯವಾಗಿ ಬಂಧಿಸಲಾಗಿತ್ತು. ಇವೆಲ್ಲವುಗಳ ವಿರುದ್ಧದ ಕಾನೂನು ಸಮರದಲ್ಲಿ ಸದಾ ಬಿಡುವಿಲ್ಲದೆ ಓಡಾಡುತ್ತಿದ್ದರು. ಅವರ ಈ ಹೋರಾಟಕ್ಕೆ ದೇಶದ ಹಲವಾರು ಬುದ್ಧಿಜೀವಿಗಳ ಸಾರ್ವಜನಿಕ ಬೆಂಬಲವಿತ್ತು. ಅಮತ್ರ್ಯಸೇನ್ ಮತ್ತು ನೋಮ್ ಚೋಮ್ಸ್ಕಿಯವರು ಈ ಹೋರಾಟವನ್ನು ಬೆಂಬಲಿಸಿದ್ದರು. ಈ ಎಲ್ಲ ಜಂಜಡಗಳ ನಡುವೆಯೂ ಇಲಿನಾ ವಾರ್ಧಾ ಸಮ್ಮೇಳನವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ್ದು ಮೆಚ್ಚಲೇಬೇಕಾದ ವಿಷಯವಾಗಿತ್ತು. ಈ ಸಮ್ಮೇಳನದಲ್ಲಿ ಕೂಡ ವಿನಾಯಕ್ ಸೇನ್ ಮತ್ತಿತರರನ್ನು ಬಂಧಮುಕ್ತರನ್ನಾಗಿಸಬೇಕೆಂಬ ನಿರ್ಣಯ ತೆಗೆದುಕೊಂಡುದಲ್ಲದೆ, ಸಮ್ಮೇಳನದ ಪ್ರತಿನಿಧಿಗಳು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.

ಈ ಸಮ್ಮೇಳನದ ನಂತರ ಇಲಿನಾ IAWSಯ ಅಧ್ಯಕ್ಷರಾಗಿ ಚುನಾಯಿತರಾದರು. ಅವರು ಅಧ್ಯಕ್ಷರಾಗಿದ್ದಾಗ 2014ರಲ್ಲಿ ಗೌಹಾತಿಯಲ್ಲಿ ನಡೆದ ರಾಷ್ಟೀಯ ಸಮ್ಮೇಳನವನ್ನು ಅಷ್ಟೇ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ್ದರು. ಈ ಸಮ್ಮೇಳನದಲ್ಲಿ ಅವರ ಕಾರ್ಯದಕ್ಷತೆಯನ್ನು ತೀರ ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತು. 2017ರಲ್ಲಿ ಚೆನ್ನೈನಲ್ಲಿ ನಡೆದ ಸಮ್ಮೇಳನದ ವೇಳೆಗಾಗಲೇ ಅವರು ಅನಾರೋಗ್ಯದಿಂದ ಸ್ವಲ್ಪ ಕಳೆಗುಂದಿದ್ದರು. ಕರ್ನಾಟಕದ ಮಹಿಳಾ ದೌರ್ಜನ್ಯ ವೇದಿಕೆಯ ಗೆಳತಿಯರು ಕೊಪ್ಪಳದಲ್ಲಿ ನಡೆಸಿದ ಮಹಿಳಾ ದಿನಾಚರಣೆಗಾಗಿ ಅವರನ್ನು ಆಹ್ವಾನಿಸುವಂತೆ ನನ್ನನ್ನು ಕೇಳಿಕೊಂಡರು. ಆದರೆ ಆ ವೇಳೆಗಾಗಲೇ ಅನಾರೋಗ್ಯ ಅವರನ್ನು ಕಾಡಿದ್ದರಿಂದ ಬರಲಾಗುವುದಿಲ್ಲವೆಂದು ನಿರಾಕರಿಸಿದರು. ಈ ವರ್ಷ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ರಾಷ್ಟೀಯ ಸಮ್ಮೇಳನದಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.


ಇಲಿನಾ ಮೂಲತಃ ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಅವರ “ಇನ್‍ಸೈಡ್ ಚತ್ತೀಸ್‍ಘಡ್: ಎ ಪೊಲಿಟಿಕಲ್ ಮೆಮೈರ್” ಗ್ರಂಥವು ಆತ್ಮಚರಿತ್ರಾತ್ಮಕವಾಗಿ ಅವರ ರಾಜಕೀಯ ಚಟುವಟಿಕೆಗಳನ್ನು ಚಿತ್ರಿಸುವ ಪುಸ್ತಕ. ಅವರು ಛತ್ತೀಸ್‍ಗಡ್‍ನ ಹಲವಾರು ಕಾರ್ಮಿಕ ಸಂಘಟನೆಗಳೊಂದಿಗೆ ಮತ್ತು ಆದಿವಾಸಿ ಸಂಘಟನೆಗಳೊಂದಿಗೆ ಕೆಲಸ ಮಾಡಿದ್ದಾರೆ. ಗಣಿಕಾರ್ಮಿಕರನ್ನು ಸಂಘಟಿಸಿ ಗಣಿಗಳ ಕಾರ್ಪೊರೇಟೀಕರಣದ ವಿರುದ್ಧ ಮತ್ತು ಆದಿವಾಸಿಗಳ ಹಕ್ಕಿಗಾಗಿ ಹೋರಾಡಿದರು. ಚತ್ತೀಸ್‍ಗಡ್‍ನ ವಲಸೆ ಹೆಣ್ಣುಮಕ್ಕಳೊಂದಿಗೆ ಕೆಲಸ ಮಾಡಿ “ ದಿ ಮೈಗ್ರೆಂಟ್ ವಿಮೆನ್ ಆಫ್ ಚತ್ತೀಸ್‍ಗಡ್” ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಮಕ್ಕಳ ವೈದ್ಯರಾದ ಪತಿ ಡಾಕ್ಟರ್ ವಿನಾಯಕ್ ಸೇನ್‍ರ ಜೊತೆಗೂಡಿ ಇಲ್ಲಿ ಜನಾರೋಗ್ಯದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.


ಈ ಸಾಮಾಜಿಕ ಕಾರ್ಯಕರ್ತೆ ನಂತರದ ದಿನಗಳಲ್ಲಿ ಶೈಕ್ಷಣಿಕ ಲೋಕಕ್ಕೆ ಕಾಲಿಟ್ಟು ವಾರ್ಧಾದ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ ಮತ್ತು ಆ ನಂತರ ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ನ ಅಡ್ವಾನ್ಸ್ಡ್ ಸೆಂಟರ್ ಫಾರ್ ವಿಮೆನ್ ಸ್ಟಡೀಸ್‍ನಲ್ಲಿ ಕೆಲಸ ಮಾಡಿದರು. ಅವರ ಮೊದಲ ಪುಸ್ತಕ ‘ಎ ಸ್ಪೇಸ್ ವಿತಿನ್ ದ ಸ್ಟ್ರಗಲ್’ ಸಾರ್ವಜನಿಕ ಚಳುವಳಿಗಳಲ್ಲಿ ಮಹಿಳೆಯ ಪಾತ್ರವನ್ನು ಕುರಿತಾದ್ದು. ಅದೊಂದು ಫೆಮಿನಿಸ್ಟ್ ಕ್ಲಾಸಿಕ್ ಎನ್ನಬಹುದು. ಅವರ ವಿದ್ವತ್‍ಪೂರ್ಣ ಲೇಖನಗಳು ದೇಶದ ಹಲವಾರು ಪ್ರತಿಷ್ಠಿತ ಅಕೆಡಮಿಕ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಆಸಕ್ತಿ ವೈವಿಧ್ಯಮಯವಾದುದು. ಸ್ತ್ರೀವಾದಿ ಸಾಹಿತ್ಯವನ್ನು ಜನಪ್ರಿಯಗೊಳಿಸುವುದರ ಜೊತೆಗೆ ಗೊಂಡರ ಚಿತ್ರಕಲೆಯ ಬಗ್ಗೆ ಬರೆಯುತ್ತಾರೆ; ಅಣ್ವಸ್ತ್ರದ ವಿರೋಧ ಒಂದು ಕಡೆಯಾದರೆ, ಗಣಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಕಾಳಜಿ ಮತ್ತೊಂದು ಕಡೆ. ಫಯಜ್ ಅಹಮದ್ ಫಯಜ್‍ನ ಗಜಲ್‍ಗಳನ್ನು ಇಂಪಾಗಿ ಹಾಡುತ್ತಿದ್ದ ಇಲಿನಾ ಅತ್ಯುತ್ತಮ ವಾಗ್ಮಿಯೂ ಹೌದು.


ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ನರಳುತ್ತಿದ್ದ 69 ವರ್ಷದ ಇಲಿನಾ ಸೇನ್ ಇದೇ ಆಗಸ್ಟ್ 9ರಂದು ರಾತ್ರಿ 7ಗಂಟೆಗೆ ನಿಧನ ಹೊಂದಿದರು. ಪತಿ ಡಾಕ್ಟರ್ ವಿನಾಯಕ್ ಸೇನ್ ಮತ್ತು ಹೆಣ್ಣುಮಕ್ಕಳು ಪ್ರಣ್ಹಿತ ಮತ್ತು ಅಪರಾಜಿತರನ್ನು ಅಗಲಿದ್ದಾರೆ.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *