ದೇಶಕಾಲ/ ಹೋರಾಟಕ್ಕೆ ಮಹಿಳಾ ಸಂಘಟನೆಗಳ ಬೆಂಬಲ – ಶಾರದಾ ಗೋಪಾಲ
ಕೊರೋನ ಆತಂಕ, ಆರ್ಥಿಕತೆಯ ಕುಸಿತ, ನಿರುದ್ಯೋಗದ ಬವಣೆ ಮೊದಲಾದ ಎಲ್ಲ ತಳಮಳಗಳ ನಡುವೆ “ಅನ್ಯಾಯ ಸಹಿಸುವುದು ಬೇಡ, ನಾವೆದ್ದು ನಿಲ್ಲೋಣ” ಎಂಬ ಸಂದೇಶ ಎಲ್ಲರಲ್ಲಿ ಆತ್ಮವಿಶ್ವಾಸ ತುಂಬುತ್ತಿದೆ. ರೈತಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಕಡೆಗಣಿಸುವ ಮಸೂದೆಗಳು, ಕೊರೋನ ಕಾಲವನ್ನು ಸ್ವಂತ ಹಿತಾಸಕ್ತಿಗೆ ಬಳಸಿಕೊಳ್ಳುವ ರಾಜಕಾರಣಿಗಳು, ಕಾರ್ಪೊರೇಟ್ ಕಂಪನಿಗಳ ದುರಾಸೆಗಳು ಎಲ್ಲಕ್ಕೂ ಪ್ರತಿರೋಧ ವ್ಯಕ್ತಪಡಿಸಿ ಎದ್ದು ನಿಲ್ಲುವ ಹಂಬಲ ಎಲ್ಲರಲ್ಲಿ ಮೂಡುತ್ತಿದೆ. ಚಳವಳಿಯನ್ನು ಬೆಂಬಲಿಸಲು ದೇಶದಾದ್ಯಂತ ಮಹಿಳೆಯರು ಎದ್ದು ನಿಂತು ದನಿಯೆತ್ತಿದ್ದಾರೆ.
ಕಾದ ಕಾವಲಿಯ ಮೇಲೆ ನಿಂತಿರುವ ಅನುಭವ ಎಲ್ಲರಿಗೂ. ಪ್ರತಿ ದಿನವೂ ಒಬ್ಬೊಬ್ಬ ಹೋರಾಟಗಾರರ ಬಂಧನ, ಪ್ರತಿನಿತ್ಯವೂ ಹೊಸದೊಂದು ಸುಗ್ರೀವಾಜ್ಞೆ, ಪ್ರತಿ ದಿನವೂ ಒಂದೊಂದು ಹೊಸ ಕಾಯಿದೆ. ಒಂದು ಕಡೆ ಜಗತ್ತನ್ನೆಲ್ಲ ವ್ಯಾಪಿಸಿ ಎಲ್ಲಿ ಮುಟ್ಟಿದರೆ ವೈರಸ್ ನಮ್ಮ ಮೈಮೇಲೇರುತ್ತೋ ಎಂದು ಹೆದರಿಕೆಯಲ್ಲಿ ಜನತೆ. ಯಾರ ಬಳಿ ನಿಂತರೆ ಏನಾಗುವುದೋ, ಬಸ್ ಹತ್ತಿದರೆ ಹೇಗೋ, ಆಟೋ ಬಳಸಿದರೆ ಹೇಗೋ! ಸೋಪು ಸ್ಯಾನಿಟೈಸರ್ಗಳ ಗುಂಗಿನಲ್ಲಿ ಮಧ್ಯಮ ವರ್ಗ ದಿನಗಳೆಯುತ್ತಿದ್ದರೆ ಇನ್ನೆಲ್ಲಿಂದ ಸಾಲ ತರಲಿ ಎಂದು ಹುಡುಕಾಟದಲ್ಲಿ ಕೆಳವರ್ಗ ಮಗ್ನ. ಬಿದ್ದುಹೋಗಿರುವ ಕಸುಬನ್ನು ಎತ್ತಿ ನಿಲ್ಲಿಸುವ ಪ್ರಯತ್ನದಲ್ಲಿ ತಾನೇ ಕುಸಿಕುಸಿದು ಬೀಳುತ್ತಿರುವ ಬೀದಿಬದಿ ವ್ಯಾಪಾರಿ, ಹೊಟೆಲ್, ಲಾಡ್ಜ್ಗಳ ಕೆಲಸಗಾರರು, ಕಟ್ಟಡ ಕಾರ್ಮಿಕರು. ಬೀದಿಗಿಳಿಯಲೇ ಭಯ ಬೀಳುವಂಥ ಜನರ ಪರಿಸ್ಥಿತಿಯನ್ನು ಚೆನ್ನಾಗಿ ಉಪಯೋಗಿಸಿಕೊಂಡು ಸರಕಾರವು ತನಗೆ ಬೇಕಾಗಿದ್ದ, ಎಲ್ಲ ಕಾನೂನುಗಳನ್ನೂ ತಿರುಚಿ ಮುಗಿಸುತ್ತಿದೆ. ಎಲ್ಲರೂ ಹೌಹಾರಿ ನೋಡುವಂಥ ಪರಿಸ್ಥಿತಿ.
ಇಂಥ ಅಯೋಮಯ ಪರಿಸ್ಥಿತಿಯಲ್ಲಿ ಅತ್ತ ದೂರದ ದೆಹಲಿಯಿಂದ ನಾಟಕಕಾರ ಸಫ್ದರ್ ಹಶ್ಮಿಯವರ ಸೋದರಿ ಶಬ್ನಂ ಹಶ್ಮಿಯಿಂದ ಸಂದೇಶ. ‘ಉಸಿರುಗಟ್ಟಿಸುವ ಈ ವಾತಾವರಣದಿಂದ ಮುಕ್ತಿಪಡೆಯಬೇಕೆಂದರೆ ನಾವು ಎದ್ದು ನಿಲ್ಲಲೇಬೇಕು. ಇನ್ನು ಸಾಕೆಂದು ಜೋರಾಗಿ ಕೂಗಲೇಬೇಕು. ನಾವೆದ್ದು ನಿಲ್ಲೋಣ ಬನ್ನಿ’ ಎಂದು. ಕಾಯುತ್ತಿದ್ದವರಂತೆ ಪಟ್ಟೆಂದು ಎದ್ದು ನಿಂತೆವು ಹತ್ತು ಹಲವು ಜನ. ನೋಡು ನೋಡುತ್ತಲೇ ಸಂಖ್ಯೆ ಬೆಳೆಯಿತು ಬೆಳೆಯಿತು, ಇಡೀ ಭಾರತವನ್ನಾಕ್ರಮಿಸಿತು. ಆಸ್ಸಾಮಿನಿಂದ, ಗುಜರಾತಿನವರೆಗೆ. ಕೇರಳದಿಂದ ಕಾಶ್ಮೀರದವರೆಗೆ. ಎಲ್ಲಾ ಹಿನ್ನೆಲೆಯ, ಎಲ್ಲಾ ಭಾಷೆಯ, ಎಲ್ಲಾ ವಿಚಾರಧಾರೆಯ, ಎಲ್ಲ ವಯಸ್ಸಿನ ಮಹಿಳೆಯರು ಗುಂಪಾದರು, ತಮಗೆ ಗೊತ್ತಿದ್ದವರನ್ನೆಲ್ಲ, ಸಖಿಯರನ್ನೆಲ್ಲ ಒಗ್ಗೂಡಿಸಿದರು. ಒಂದೊಂದು ರಾಜ್ಯದವರೂ ಒಂದಾದರು. ಬಹುಶಃ ಒಂದು ತಿಂಗಳಿರಬೇಕು. ತಿಂಗಳೊಳಗಾಗಿ ಅದೆಷ್ಟು ಕೆಲಸಗಳು, ಅದೆಷ್ಟು ಜವಾಬ್ದಾರಿಗಳು. ಇಂದಿನ ವಾಸ್ತವ ಸಂಗತಿಗಳನ್ನು ಬರೆಯುವುದೇನು, ಅವನ್ನು ಕನ್ನಡಕ್ಕೆ ಮಾಡುವುದೇನು, ಹಾಡುಗಳ ರಚನೆಯೇನು, ಹಾಡುಗಾರರು ದನಿಗೊಟ್ಟಿದ್ದೇನು, ಪೋಸ್ಟರ್ ರಚನೆ, ಘೋಷಣೆಗಳ ಮಹಾಪೂರ, ಪತ್ರಿಕಾಗೋಷ್ಠಿಗೆ ತಯಾರಿ, ಮಾತನಾಡುವವರು. . . . ಒಂದೇ ಎರಡೇ? ಚಕ್ ಚಕ್ಕೆಂದು ಒಂದೊಂದನ್ನೂ ಒಂದೊಂದು ಗುಂಪು ಹಂಚಿಕೊಂಡಾಗ ಹೂವಿನ ಹಾರ ಎತ್ತಿದಷ್ಟು ಸುಲಭ ಅಂತಾರಲ್ಲ, ತಿಂಗಳೊಳಗಾಗಿ ಸೆಪ್ಟೆಂಬರ್ ಐದು, ಗೌರಿ ಲಂಕೇಶರ ಹತ್ಯೆಯಾದ ದಿನದಂದು ದೇಶಾದ್ಯಂತ ಮಹಿಳೆಯರು ಎದ್ದು ನಿಂತರು. `ನಾವು ಸಹಿಸೆವು ಈ ಅನ್ಯಾಯವ. ನಾವೆದ್ದು ನಿಲ್ಲುತ್ತೇವೆ, ನಾವು ಮಾತನಾಡುತ್ತೇವೆ. ನಿಲ್ಲಿಸಿ ಈ ಅನ್ಯಾಯಗಳನ್ನು.’ ಒಕ್ಕೊರಲ ದನಿ ಎದ್ದಿತು.
ಪ್ರಭುತ್ವದ ಕಿವಿಕಿವುಡು, ಕಣ್ಣಿಗೆ ಪೊರೆ, ಚರ್ಮ ದಪ್ಪ. ಈಗಂತೂ ನಖಶಿಖಾಂತ ಕಾರ್ಪೊರೇಟರ್ ಗಳ ದಪ್ಪ ಕಂಬಳಿ ಹೊದ್ದಿರುವ ಪ್ರಭುತ್ವಕ್ಕೆ ಕೈಎತ್ತಿ ನಿಂತಿದ್ದೂ ಕಾಣಿಸದು, ಕೂಗಿ ಹೇಳಿದ್ದೂ ಕೇಳಿಸದು. ಕರೋನಾದ ಭಯವನ್ನೂ ಮೀರಿ ಜನರು ಬೀದಿಗಿಳಿದಿದ್ದೂ ಗೊತ್ತಾಗದು. ಎಪಿಎಂಸಿ ಕಾಯಿದೆ, ಭೂಸುಧಾರಣಾ ಕಾಯಿದೆಗಳ ತಿದ್ದುಪಡಿಗಳು, ವಿದ್ಯುತ್ನ್ನು ಖಾಸಗೀಕರಣಗೊಳಿಸುವ ಕಾಯಿದೆ, ಇನ್ನು ಉಳುವವ ಭೂ ಒಡೆಯನಲ್ಲ, ಯಾರು ಬೇಕಾದರೂ ಎಷ್ಟು ಬೇಕಾದರೂ ಭೂಮಿ ಖರೀದಿಸಬಹುದು. ಖರೀದಿಸಿದ ಭೂಮಿಯಲ್ಲಿ ಜನಗಳ ಹೊಟ್ಟೆ ತುಂಬಿಸುವಂಥ ಆಹಾರವನ್ನೇ ಬೆಳೆಯಬೇಕೆಂದೇನಿಲ್ಲ. ಕೃಷಿಯನ್ನೇ ಮಾಡಬೇಕೆಂದೇನಿಲ್ಲ. ರೈತರಿಗೆ ಒಂದು ನಿಗದಿತ ಬೆಳೆಯ ಬೆಂಬಲವನ್ನು ಕೊಟ್ಟು ರೈತರ ಹಿತರಕ್ಷಣೆಗೆ ನಿಲ್ಲಬೇಕಾಗಿದ್ದ ಕೃಷಿ ಹುಟ್ಟುವಳಿ ಮಾರುಕಟ್ಟೆಯ ಹರಾಜು. ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಮಣ್ಣಾಗಿಸಿದ, ಸಂಪೂರ್ಣ ನಗ್ನರಾಗಿಸಿ ಬೀದಿಗೆ ನಿಲ್ಲಿಸುವ ಕಾರ್ಮಿಕ ಕೋಡ್ಗಳು. ಇವೆಲ್ಲವನ್ನೂ ವಿರೋಧಿಸಿ ಸದನ ಪ್ರಾರಂಭವಾದ ದಿನದಿಂದಲೇ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪರ್ಯಾಯ ಅಧಿವೇಶನ ಮತ್ತು ಹೋರಾಟ. ಚಿಕ್ಕಪುಟ್ಟ ಪಟ್ಟಣ, ಹಳ್ಳಿ, ನಗರಗಳಲ್ಲೂ ಚಳುವಳಿಗಳು ನಡೆದೇ ಇವೆ. ಮಹಿಳಾ ಸಂಘಟನೆಗಳೂ ಜೊತೆಗೆ ನಿಲ್ಲೋಣ, ನಾವೂ ಈ ಚಳುವಳಿಯನ್ನು ಬೆಂಬಲಿಸೋಣವೇ?
ನಡೆಯುತ್ತಿರುವ ಚಳುವಳಿಗೆ ಬೆಂಬಲ ಸೂಚಿಸುವ ಮೊದಲು ನಾವೆಲ್ಲರೂ ನೆನಪಿಡಬೇಕಾದ ಮಹತ್ವದ ಅಂಶವೊಂದಿದೆ, ನಾವು ಮಹಿಳೆಯರು ರೈತರಲ್ಲವೇ? ನಾವು ಮಹಿಳೆಯರು ಕಾರ್ಮಿಕರಲ್ಲವೇ? ನಾವು ಹೊರಗಿನಿಂದ ಬೆಂಬಲ ಕೊಡಬೇಕೇ? ನಾವು ಒಳಗಿನವರಲ್ಲವೇ? ಮಹಿಳೆಯರನ್ನೂ ರೈತರನ್ನಾಗಿ ಗುರುತಿಸಿ ಎನ್ನುವ ಕೂಗು ಎದ್ದು ಬಹಳ ದಿನಗಳಾದವು. ಕೃಷಿ ಕಾರ್ಯ ಮಾಡುವವರೆಲ್ಲ ರೈತರೇ, ಹಾಗಾಗಿ ಮಹಿಳೆಯರೂ ರೈತರೇ ಎಂದು ತನ್ನ ನೀತಿಯೊಂದರಲ್ಲಿ ತುದಿಮಾತಿನಲ್ಲಿ ಸರಕಾರ ಹೇಳಿದೆ ನಿಜ. ಆದರೆ ಇಂದು ಕಿಸಾನ್ ಕಾರ್ಡ್ ಕೊಡುವಾಗ ಮಹಿಳೆಯರಿಗೆ ಕೊಡುವುದಿಲ್ಲ. ಕಾರಣ ಭೂಮಿ ಮಹಿಳೆಯರ ಹೆಸರಲ್ಲಿಲ್ಲ. ಭೂಮಿ ಅವರ ಹೆಸರಲ್ಲಿಲ್ಲದ ಕಾರಣ ಅವರು ಯಾವುದೇ ರೀತಿಯ ಅಧಿಕೃತ ಬ್ಯಾಂಕ್ ಸಾಲಕ್ಕೆ ಅನರ್ಹರು. ಅನಧಿಕೃತವಾದ ಅಥವಾ ಯಾವುದೇ ನಿಯಂತ್ರಣವಿಲ್ಲದ, ಅನಧಿಕೃತ ಜಾಗಗಳಲ್ಲಿಯೇ ಸಾಲ ಪಡೆದುಕೊಳ್ಳಬೇಕು. ನಾವು ಮಾಡಿದ ಒಂದು ಸರ್ವೆ ಪ್ರಕಾರ ಲಾಕ್ಡೌನ್ ಸಮಯದಲ್ಲಿ ಒಂದೊಂದು ಕುಟುಂಬವೂ ಬಡ್ಡಿ ಸಾಲಗಾರರ ಕೈಯಲ್ಲಿ ಲಕ್ಷಗಟ್ಟಲೆ ಸಾಲ ಮಾಡಿದೆ. ಇವರ ಸಾಲ ಮನ್ನಾ ಆಗುವಮಾತು ದೂರ ಉಳಿಯಿತು. ಬಡ್ಡಿ ಮರುಪಾವತಿಗೆ ಸಮಯ ಕೊಡಿ ಎನ್ನುವ ಬೇಡಿಕೆಯೂ ಸರಕಾರದ ಕಿವಿಯ ಮೇಲೆ ಬೀಳುತ್ತಿಲ್ಲ.
ಎರಡು ರೀತಿಯ ಹೋರಾಟ : ಕೃಷಿಯ 68% ಕೆಲಸವನ್ನು ಮಹಿಳೆಯರೇ ನಿಭಾಯಿಸುತ್ತಿದ್ದರೂ ಮಹಿಳೆಗೆ ರೈತರೆಂಬ ಗುರುತಿಲ್ಲ. ಭೂಮಿ ಮಹಿಳೆಯ ಹೆಸರಿಗಿಲ್ಲ. ಭೂಮಿಯ ಹೆಸರಲ್ಲಿ ತೆಗೆದುಕೊಳ್ಳುವ ಸಾಲದ ಬಗ್ಗೆ ನಿರ್ಣಯಿಸುವಾಗ ಅವಳನ್ನು ಕೇಳುವುದಿಲ್ಲ. ಇಂದು ರೈತ ಹೋರಾಟವೆಂದರೆ ಕೇವಲ ಪುರುಷರ ಹೋರಾಟವೆಂಬಂತೆ ಬಿಂಬಿಸಲಾಗುತ್ತಿದೆ. ಈ ಹೋರಾಟ ಮಹಿಳೆಗೆ ಎರಡು ರೀತಿಯ ಹೋರಾಟ. ಭೂಮಿಯನ್ನು ಉಳಿಸಿಕೊಳ್ಳುವ ಹೋರಾಟವೂ ಹೌದು, ಸ್ವಂತ ಅಸ್ತಿತ್ವದ ಹೋರಾಟವೂ ಹೌದು. ನಮ್ಮನ್ನು ನಾವು ಸಮಾನ ಆ ಜಾಗದಲ್ಲಿ ನಿಲ್ಲಿಸಿಕೊಂಡು ಹೋರಾಟಕ್ಕಿಳಿಯೋಣ.
ಇನ್ನು ಕಾರ್ಮಿಕರೆಂದರೆ ಯಾರು? ಮಹಿಳೆ ಕಾರ್ಮಿಕಳಲ್ಲವೇ? ಬಸ್ ಡ್ರೈವರ್, ಕಂಡಕ್ಟರ್, ಬೀದಿ ಗುಡಿಸುವ ಪೌರ ಕಾರ್ಮಿಕರು, ಜಲ್ಲಿ ತುಂಬಿಕೊಡುವ ಕಟ್ಟಡ ಕಾರ್ಮಿಕರು, ಮುಸುರೆ ತಿಕ್ಕುವವರು, ಇಸ್ತ್ರಿ ಮಾಡುವವರು, ಬೀದಿ ಬದಿಯ ವ್ಯಾಪಾರಸ್ಥರು ಇವರಲ್ಲಿ ಎಲ್ಲಿ ಮಹಿಳೆಯರಿಲ್ಲ? ಆದರೆ ಸಮಾಜವಿನ್ನೂ ಮಹಿಳೆಯರಿಗೆ ಕಾರ್ಮಿಕರ ಸ್ಥಾನವನ್ನೂ ಕೂಡ ಕೊಟ್ಟಿಲ್ಲ, ಸಮಾನ ವೇತನವನ್ನೂ ಕೊಟ್ಟಿಲ್ಲ. ಮಹಿಳಾ ಕಾರ್ಮಿಕರಿಗೆ ಗರ್ಭ ಧರಿಸುವ ಪ್ರಸಂಗ ಬಂದಾಗ ಸಾಮಾಜಿಕ ಭದ್ರತಾ ವೇತನ ಬೇಕು. ಆದರೆ ಈಗಿನ ಸರಕಾರ ಆ ತಾಯ್ತನ ಭದ್ರತಾ ವೇತನಕ್ಕೂ ಕೊಕ್ಕೆ ಹಾಕಿದೆ ಅಷ್ಟೇ ಅಲ್ಲ, ಕೋವಿಡ್ ಸಮಯದಲ್ಲಿ ಗರ್ಭಿಣಿ ಬಾಣಂತಿಯರಿಗೆ ಒಂದು ಪೈಸೆಯನ್ನೂ ಕೊಡದೆ ಪರಿಸ್ಥಿತಿಯನ್ನು ನಿಭಾಯಿಸಲು ಬಡ್ಡಿ ವ್ಯಾಪಾರಸ್ಥರ ಬಳಿ ಕೈಯೊಡ್ಡುವಂತೆ ಮಾಡಿದೆ. ಇದನ್ನು ವಿರೋಧಿಸಲು ನಾವು ಮಹಿಳಾ ಕಾರ್ಮಿಕರಾಗಿ ಮಹಿಳಾ ಕಾರ್ಮಿಕರೆಂದು ನಮ್ಮನ್ನು ನಾವು ಗುರುತಿಸಿಕೊಂಡು ಇಂದಿನ ಹೋರಾಟಕ್ಕೆ ಬಂಬಲ ಕೊಡಬೇಕಾಗಿದೆ. ಕಾರ್ಮಿಕರು ಕೇವಲ ಅವರಲ್ಲ. ನಾವೂ ಕಾರ್ಮಿಕರು, ಮಹಿಳಾ ಕಾರ್ಮಿಕರು. ನಮಗೆ ಸಮಾನ ವೇತನ ಬೇಕು, ನಮಗೆ ಸಾಮಾಜಿಕ ಭದ್ರತೆ ಬೇಕು.
ನಾವೆದ್ದು ನಿಂತಿದ್ದೇವೆ, ನಾವು ದೇಶದ ಮಹಿಳೆಯರು!
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.