Uncategorizedದೇಶಕಾಲ

ದೇಶಕಾಲ/ ಹೆಣ್ಣುಮಗುವಿನ ದಿನ: ನಮ್ಮೆಲ್ಲರ ಕರ್ತವ್ಯ ನೆನಪಿಸುವ ದಿನ

ಪ್ರತಿವರ್ಷ ಜನವರಿ 24 ರಂದು ‘ರಾಷ್ಟ್ರೀಯ ಹೆಣ್ಣುಮಗುವಿನ ದಿನ’ ಆಚರಿಸಲಾಗುತ್ತದೆ. ಇದು ಬರೀ ಶುಭಾಶಯಗಳಿಗೆ ಸೀಮಿತವಾಗಬಾರದು. ನಿಜಕ್ಕೂ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿ ಹೇಗಿದೆ, ಅಲ್ಲಿರುವ ಕೊರತೆಗಳನ್ನು ನಿವಾರಿಸುವುದು ಹೇಗೆ, ಎಲ್ಲ ರಂಗಗಳಲ್ಲಿ ಅವರಿಗೂ ಅಸ್ಮಿತೆ ತಂದುಕೊಡುವುದು ಅಗತ್ಯವಲ್ಲವೇ ಎಂಬ ಹಲವಾರು ಹೊಣೆ, ಜವಾಬ್ದಾರಿಗಳನ್ನು ಕುರಿತು ಕುಟುಂಬ, ಸಮಾಜ ಮತ್ತು ದೇಶದ ವಿಸ್ತಾರಗಳಲ್ಲಿ ವಿಶೇಷವಾಗಿ ಚಿಂತಿಸುವ ದಿನ ಇದಾಗಬೇಕು.

ಯಾರು ದೇಶಕ್ಕೆ, ಬದುಕಿಗೆ ತಿರುವು ಕೊಟ್ಟರೋ ಅವರನ್ನು ವಿಶೇಷ ದಿನದ ರೂಪದಲ್ಲಿ ನೆನಪಿಸಿಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು, ಯಾವ ಕೆಲಸ, ಕರ್ತವ್ಯ ಇನ್ನೂ ಬಾಕಿ ಉಳಿದಿದೆಯೋ ಅದರ ಬಗ್ಗೆಯೂ ವಿಶೇಷ ದಿನದ ನೆಪದಲ್ಲಿ ಮತ್ತೆ ಗಟ್ಟಿ ಚಿಂತನೆ ನಡೆಸುವುದು. `ರಾಷ್ಟ್ರೀಯ ಹೆಣ್ಣುಮಗುವಿನ ದಿನ’ ಅಂಥದೊಂದು ಅತೀ ಪ್ರಾಮುಖ್ಯದ ಸಂದರ್ಭ. ಏಕೆಂದರೆ ಈ ವಿಚಾರದಲ್ಲಿ ಆಗಬೇಕಾದದ್ದು, ಆಗದೆ ಉಳಿದಿರುವುದು ಅಪಾರ.

1966 ರ ಜನವರಿ 24 ರಂದು ಭಾರತದ ಪ್ರಥಮ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ ಪ್ರಮಾಣವಚನ ಸ್ವೀಕರಿಸಿದರು. ಅದು ರಾಜಕಾರಣದಲ್ಲಿ ಮಹಿಳಾ ಶಕ್ತಿಯ ದ್ಯೋತಕವೂ ರಾಷ್ಟ್ರದ ಮಹಿಳೆಯರ ಪಾಲಿಗೆ ಅವಿಸ್ಮರಣೀಯ ಕ್ಷಣವೂ ಆಗಿತ್ತು. ಮುಂದೆ 2008 ರಲ್ಲಿ ಪ್ರತೀ ವರ್ಷ ಜನವರಿ 24 ರಂದು `ರಾಷ್ಟ್ರೀಯ ಹೆಣ್ಣುಮಗುವಿನ ದಿನ’ ಆಚರಿಸಬೇಕೆಂದು ಘೋಷಣೆಯಾಯಿತು. ಹೆಣ್ಣುಮಗುವಿನ ಶಿಕ್ಷಣ, ಪೌಷ್ಟಿಕತೆ, ಕಾನೂನು ಸುರಕ್ಷತೆ, ಸಮಾನ ಅವಕಾಶ ಮುಂತಾದ ಹಲವಾರು ವಿಚಾರಗಳ ಬಗ್ಗೆ ಚಿಂತನೆ ಮತ್ತು ನಿರ್ದಿಷ್ಟ ಯೋಜನೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಇದು ಪ್ರೇರೇಪಣೆ ನೀಡುವುದೆಂದು ಹೇಳಲಾಯಿತು. ಸರ್ಕಾರಗಳು ಬದಲಾದಂತೆ ಈ ಯೋಜನೆಗಳಿಗೆ ಎಷ್ಟು ಗಮನ ಸಿಕ್ಕಿತು ಎನ್ನುವುದು ಬಹು ಅಂಶಗಳಲ್ಲಿ ಚರ್ಚೆಗೊಳಗಾದ ವಿಚಾರ ಎನ್ನುವುದು ಎಲ್ಲರಿಗೂ ಗೊತ್ತು.

ಮುಂದೆ 2015 ರಲ್ಲಿ `ಬೇಟಿ ಬಚಾವ್, ಬೇಟಿ ಪಡಾವ್’ ಘೋಷಣೆಯೊಂದಿಗೆ ಹೊಸ ಯೋಜನೆ ಜಾರಿಯಾಯಿತು. ಇದನ್ನು ಕುರಿತು ಇತ್ತೀಚೆಗೆ 2021ರ ಡಿಸೆಂಬರ್ 10 ರಂದು ಮಹಿಳಾ ಸಬಲೀಕರಣ ಕುರಿತ ಸಂಸದೀಯ ಸ್ಥಾಯಿ ಸಮಿತಿ ನೀಡಿದ ವರದಿಯೇ ಇದರ ಸೋಲುಗೆಲುವುಗಳನ್ನು ಹೇಳುತ್ತದೆ. ಒಟ್ಟು ಇದಕ್ಕೆ ಅನುದಾನವಾಗಿ ಮೀಸಲಾದ 446.72 ಕೋಟಿ ರೂಪಾಯಿ ಹಣದಲ್ಲಿ ಶೇ. 78 ಕ್ಕೂ ಹೆಚ್ಚು ಹಣ, ಬರೀ ಮಾಧ್ಯಮದಲ್ಲಿ ಪ್ರಚಾರ, ಜಾಹೀರಾತುಗಳಿಗೇ ವೆಚ್ಚವಾಯಿತಂತೆ! ಇನ್ನು ರಾಜ್ಯಗಳಿಗೆ ಎಷ್ಟು ಅನುದಾನ ಸಿಕ್ಕಿತು ಎನ್ನುವುದನ್ನು ಯಾರಾದರೂ ಊಹಿಸಬಹುದು. ಪ್ರತೀ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು ಎಂಬುದೆಲ್ಲ ಬರೀ ಘೋಷಣೆಯಾಗಿಯೇ ಉಳಿದು, ಕಿಶೋರಿಯರೆಲ್ಲ ಶಾಲೆಗೆ ಹೋಗಲಾರದೆ ಮನೆಯಲ್ಲೇ ಉಳಿದರು.

ಮೊದಲು ಹುಟ್ಟುವ ಹಕ್ಕನ್ನಾದರೂ ಪಡೆದಿದ್ದ ಹೆಣ್ಣುಮಗುವನ್ನು, ಆಧುನಿಕ ತಂತ್ರಜ್ಞಾನದ ಸಹಾಯದಿಂದ ತಾಯಿಯ ಹೊಟ್ಟೆಯಲ್ಲೇ ಹೊಸಕಿಹಾಕುವುದು ಇನ್ನೂ ಮುಂದುವರೆದಿದೆ. ಜನಸಂಖ್ಯೆಯಲ್ಲಿ ಗಂಡು ಹೆಣ್ಣು ಅಸಮಾನ ಸಂಖ್ಯೆ ಉಳಿದಿದೆ. ಶಿಕ್ಷಣವೂ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಹುಡುಗಿಯರಿಗೆ ಅವಕಾಶ ವಂಚನೆ ನಿರ್ಭಿಡೆಯಿಂದ ಸಾಗಿದೆ. ಹೆಣ್ಣಿನ ಮೇಲೆ ಕೌಟುಂಬಿಕ ಮತ್ತು ಸಾಮಾಜಿಕ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇನ್ನು ಮಹಿಳಾ ಸಬಲೀಕರಣದ ಪ್ರಮುಖ ಹೆಜ್ಜೆಯಾಗಬಲ್ಲ ರಾಜಕೀಯ ರಂಗದಲ್ಲಿ ಮಹಿಳೆಯರಿಗೆ ಮೀಸಲಾಗಿ ನೀಡುವ ಮಸೂದೆಯ ಮಂಡನೆ ಬೆಳ್ಳಿಹಬ್ಬ ಆಚರಿಸಿಕೊಂಡು ಕಡತದಲ್ಲೇ ಕುಳಿತಿದೆ. ಬೆಳೆಯುತ್ತಿರುವ ಈ ಪಟ್ಟಿಯನ್ನು ರಾಷ್ಟ್ರೀಯ ದಿನಾಚರಣೆಯ ದಿನ ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕಿದೆ.

ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ಕುರಿತ ಸೂಕ್ಷ್ಮ ಸಂವೇದನೆಯನ್ನು ಗಂಡು ಹೆಣ್ಣು ಮಕ್ಕಳಿಬ್ಬರಲ್ಲೂ ಬೆಳೆಸಬೇಕಾದ ಅವಶ್ಯಕತೆಯನ್ನು ಈ ದಿನ ನೆನಪಿಸುತ್ತಿದೆ. ದಿನಾಚರಣೆಗಳೆಲ್ಲ ಯಾಂತ್ರಿಕ, ಸಾಂಕೇತಿಕ ಎಂದು ಗೊಣಗುವುದರ ಬದಲು ಅದರ ಆಶಯಗಳನ್ನು ಸಾಮಾಜಿಕ ಸಂಕಥನಗಳಾಗಿ ಬೆಳೆಸುವುದು ಈ ದಿನದ ಜರೂರತ್ತು ಎಂಬುದನ್ನು ಮರೆಯಲೇ ಬಾರದು.


-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *