Uncategorizedದೇಶಕಾಲ

ದೇಶಕಾಲ / ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ಮಹಿಳೆಯರು – ತಿರು ಶ್ರೀಧರ

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಂದಿಯ ನೆನಪಾಗುತ್ತದೆ. ಸಾಮ್ರಾಜ್ಯಶಾಹಿ ಆಡಳಿತವನ್ನು ಕಿತ್ತೊಗೆಯಲು ನಮ್ಮ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಹಿಳೆಯರು ಪ್ರತ್ಯಕ್ಷವಾಗಿ ಪಾಲ್ಗೊಂಡಿದ್ದರು. ಅಂಥ ಹನ್ನೆರಡು ಮಂದಿ ಧೀಮಂತೆಯರ ಸ್ಮರಣೆ ಇಲ್ಲಿದೆ.

ರಾಣಿ ಲಕ್ಷ್ಮೀಬಾಯಿ

ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ ಭಾರತದ ಸ್ವಾತಂತ್ರ್ಯ ಹೋರಾಟದ ಹೆಸರುಗಳಲ್ಲಿ ಪ್ರಮುಖವಾದದ್ದು. 1857ರ ಸಿಪಾಯಿದಂಗೆ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಝಾನ್ಸಿಯ ಆಳ್ವಿಕೆಯನ್ನು ಬ್ರಿಟಿಷರು ಲಕ್ಷ್ಮಿಬಾಯಿಗೆ ವಹಿಸಿದ್ದರು. 1858ರ ಮಾರ್ಚ್ 25ರಂದು ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ಬಗ್ಗೆ ಇದ್ದ ನಿಲುವು ಬದಲಾಯಿಸಲು ಕಾರಣವಾಯಿತು. ಸುಮಾರು 2 ವಾರಗಳ ಉಗ್ರ ಹೋರಾಟ ನಡೆಸಿ, ದಂಗೆಕೋರ ತಾತ್ಯಾಟೋಪಿ ಮುಖಂಡನಾಗಿ ಯುದ್ಧ ಮಾಡಿ ಝಾನ್ಸಿ ಸ್ವತಂತ್ರವಾಗಲು ಸಹಕರಿಸಿದ್ದ. ಹೀಗೆ ದಿಟ್ಟತನದಿಂದ ಹೋರಾಡಿದ್ದ ಝಾನ್ಸಿ ಲಕ್ಷ್ಮೀಬಾಯಿ 1858, ಜೂನ್ 18ರಂದು ಸಾವನ್ನಪ್ಪಿದ್ದರು. ರಾಣಿಯ ತಂದೆ ಮೊರೋಪಂತ್ ತಂಬೆ ಅವರನ್ನು ಝಾನ್ಸಿಯ ಸೋಲಿನ ನಂತರ ಸೆರೆಹಿಡಿದು, ಗಲ್ಲಿಗೇರಿಸಿದ್ದರು.

ಬೇಗಂ ಹಝರತ್ ಮಹಲ್

1857ರ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಬೇಗಂ ಹಝರತ್ ಬೇಗಂ ಮಹಲ್ ಅವರ ಹೋರಾಟ ಪ್ರಮುಖವಾಗಿತ್ತು. ಈಕೆ ನವಾಬ್ ವಾಜಿದ್ ಅಲಿ ಷಾ ಅವರ 2ನೇ ಪತ್ನಿ.ಕೋಲ್ಕತಾದಿಂದ ಷಾನನ್ನು ಗಡಿಪಾರು ಮಾಡಲಾಗಿತ್ತು. ಬಳಿಕ ಹಝರತ್ ಬೇಗಂ ಅವಾಧ್ ಆಡಳಿತ ನೋಡಿಕೊಳ್ಳುವುದರ ಜೊತೆಗೆ ಲಕ್ನೋವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಳು. ತದನಂತರ ಲಕ್ನೋ ಹಾಗೂ ಔಧ್ ಅನ್ನು ಬ್ರಿಟಿಷರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಹಝರತ್ ಳನ್ನು ಬಲವಂತದಿಂದ ಅಧಿಕಾರದಿಂದ ಕೆಳಗಿಳಿಸಿದ್ದರು. ಕೊನೆಗೆ ಈಕೆ ನೇಪಾಳದಲ್ಲಿ ಆಶ್ರಯ ಪಡೆದು, 1879ರಲ್ಲಿ ಕಾಠ್ಮುಂಡುವಿನಲ್ಲಿ ಸಾವನ್ನಪ್ಪಿದ್ದರು.

ಕಿತ್ತೂರು ರಾಣಿ ಚೆನ್ನಮ್ಮ

ಸ್ವಾತಂತ್ಯಕ್ಕಾಗಿ ಬ್ರಿಟಿಷರ ಬೃಹತ್ ಸೈನ್ಯದ ವಿರುದ್ಧ ಸೆಟೆದು ನಿಂತು ಹೋರಾಟ ನಡೆಸಿದ್ದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಆಕೆಯ ಧೈರ್ಯ, ಸಾಹಸ, ಕೆಚ್ಚು ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕ. ದಿಟ್ಟ ಹೋರಾಟದ ನಂತರ 1824ರ ಡಿಸೆಂಬರ್ 5ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಹಾಗೂ ಜಾನಕಿಬಾಯಿಯರ ಜೊತೆ ಕೈದಿಯಾದರು. ಡಿಸೆಂಬರ್ 12ರಂದು ಚೆನ್ನಮ್ಮ ಹಾಗೂ ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಯಿತು. ಅಲ್ಲಿ 4 ವರ್ಷ ಸೆರೆಮನೆವಾಸ ಅನುಭವಿಸಿ 1829ರ ಫೆಬ್ರುವರಿ 2ರಂದು ನಿಧನರಾದರು.

ಮೇಡಂ ಭಿಕಾಜಿ ಕಾಮಾ

ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಧ್ರುವತಾರೆಯಾಗಿರುವ ಮಹಿಳೆಯರಲ್ಲಿ ಮೇಡಂ ಭಿಕಾಜಿ ಕಾಮಾ ಒಬ್ಬರು. ಓ ಮಹನೀಯರೇ ಏಳಿ, ಈ ಧ್ವಜಕ್ಕೆ ವಂದಿಸಿ. ಈ ಧ್ವಜದ ಪ್ರತಿನಿಧಿಯಾಗಿ ಪ್ರಾರ್ಥಿಸುತ್ತೇನೆ. ಓ ವಿಶ್ವದೆಲ್ಲ ಸ್ವತಂತ್ರ್ಯರಾಧಕರೇ ಈ ಧ್ವಜದೊಡನೆ ಸಹಕರಿಸಿ, ಹೀಗೆಂದು ಜರ್ಮನಿಯ ಸ್ಟುವರ್ಟ್ ನಲ್ಲಿ 1907ರಲ್ಲಿ ನಡೆದಿದ್ದ ಸಮಾಜವಾದಿ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಭಾರತದ ಧ್ವಜಾರೋಹಣ ಮಾಡಿದವರು ಈಕೆ. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕಾಮಾ ಅವರು 1935ರಲ್ಲಿ ಬಾಂಬೆಗೆ ಆಗಮಿಸಿದರು. 1936ರ ಆಗಸ್ಟ್ 13ರಂದು ಪಾರ್ಸಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾದರು.

ಸರೋಜಿನಿ ನಾಯ್ಡು

ಉರ್ದು, ತೆಲುಗು, ಇಂಗ್ಲಿಷ್, ಬೆಂಗಾಲಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಸರೋಜಿನಿ ನಾಯ್ಡು ಭಾರತದ ಕೋಗಿಲೆ ಎಂದು ಹೆಸರು ಪಡೆದಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಉತ್ತರಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. 1949ರ ಮಾರ್ಚ್ 2ರಂದು ನಿಧನರಾದರು.

ಆ್ಯನಿ ಬೆಸೆಂಟ್

ಮಹಿಳೆಯರ ಹಕ್ಕುಗಳು, ಸ್ವಾತಂತ್ರ್ಯ ಹೋರಾಟ, ಜನನ ನಿಯಂತ್ರಣ, ಫ್ಯಾಬಿಯನ್ ಸಮಾಜವಾದ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ದಿಟ್ಟೆ ಆ್ಯನಿ ಬೆಸೆಂಟ್. ಹೋಮ್ ರೂಲ್ ಚಳವಳಿಯಲ್ಲಿ ಭಾಗವಹಿಸಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 1933ರಲ್ಲಿ ಆ್ಯನಿ ಬೆಸೆಂಟ್ ನಿಧನರಾದರು.

ಮಾತಂಗಿನಿ ಹಜ್ರಾ

ಪಶ್ಚಿಮಬಂಗಾಳದ ಮಿಡ್ನಾಪುರ ಜಿಲ್ಲೆಯ ಮಾತಂಗಿನಿ ಸ್ವಾತಂತ್ರ್ಯ ಹೋರಾಟದ ದಿಟ್ಟ ಮಹಿಳೆ. ಕ್ವಿಟ್ ಇಂಡಿಯಾ ಹಾಗೂ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಇವರನ್ನು ಮಹಿಳಾ ಗಾಂಧಿ ಎಂದೇ ಕರೆಯುತ್ತಿದ್ದರು. ತನ್ನ 73ನೇ ವಯಸ್ಸಿನಲ್ಲೂ 1942ರ ಸೆಪ್ಟೆಂಬರ್ 29ರಂದು ತಮ್ಲುಕ್ ಪೊಲೀಸ್ ಠಾಣೆ ವಶಪಡಿಸಿಕೊಳ್ಳಲು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದಾಗಲೇ ಗುಂಡೇಟು ಬಿತ್ತು. ಆದರೂ ವಂದೇ ಮಾತರಂ ಎಂದು ಕೂಗುತ್ತಾ ಹೋರಾಟಗಾರರನ್ನು ಹುರಿದುಂಬಿಸಿ ಪ್ರಾಣ ತ್ಯಾಗ ಮಾಡಿದ ಧೀರ ಮಹಿಳೆ ಮಾತಂಗಿನಿ.

ಕಮಲಾದೇವಿ ಚಟ್ಟೋಪಾಧ್ಯಾಯ

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ವಹಿಸಿದ ಶ್ರಮ ಅಪಾರವಾದದ್ದು. ಮಹಾತ್ಮಾಗಾಧಿ ಅವರ ಸ್ವಾಂತಂತ್ರ್ಯ ಹೋರಾಟದಿಂದ ಪ್ರೆರೇಪಿತರಾಗಿ 1923ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಯರವಾಡಾ, ಬೆಳಗಾಂವಿ ಮತ್ತು ವೆಲ್ಲೂರುಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದರು. ಅನಂತರವೂ ಅನೇಕ ಸಾರಿ ಸೆರೆಮನೆ ಶಿಕ್ಷೆಗೆ ಗುರಿಯಾದರು. ನಿರಂತರ ಜನಪರ ಹೋರಾಟ, ಜನಸೇವೆ, ಮತ್ತು ಸಾಮಾನ್ಯ ಜನರ ಬದುಕಿನ ಅಭ್ಯುದಯಗಳಿಗೆ ಶ್ರಮಿಸಿದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ತಮ್ಮ 85ನೇ ವಯಸ್ಸಿನಲ್ಲಿ 1988 ವರ್ಷದ ಅಕ್ಟೋಬರ್ 29 ರಂದು ನಿಧನರಾದರು.

ಸುಚೇತಾ ಕೃಪಾಲಾನಿ

ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರು ಸುಚೇತಾ ಕೃಪಾಲಾನಿ. ಈಕೆ ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಉತ್ತರಪ್ರದೇಶದ ಮುಖ್ಯಮಂತ್ರಿಗಳಾಗಿ 1963ರಿಂದ 67ರವರೆಗೆ ಕಾರ್ಯನಿರ್ವಹಿಸಿದ್ದರು. ಗಾಂಧಿ ಅನುಯಾಯಿಯಾಗಿದ್ದ ಕೃಪಾಲಾನಿ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದರು. 1971ರಲ್ಲಿ ರಾಜಕೀಯದಿಂದ ದೂರ ಸರಿದ ಇವರು 1974ರಲ್ಲಿ ನಿಧನರಾದರು.

ಅರುಣಾ ಅಸಾಫ್ ಅಲಿ

ಅರುಣಾ ಅಸಾಫ್ ಅಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ದಿಟ್ಟ ಮಹಿಳೆ. 1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಮುಂಬೈಯ ಗೌವಾಲಿಯಾ ಟ್ಯಾಂಕ್ ಮೈದಾನದಲ್ಲಿ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸಿದ್ದರು. ಸ್ವಾತಂತ್ರ್ಯ ನಂತರ ರಾಜಕೀಯ ಪ್ರವೇಶಿಸಿ 1958ರಲ್ಲಿ ದೆಹಲಿಯ ಮೊದಲ ಮೇಯರ್ ಆಗಿ ಕರ್ತವ್ಯ ನಿರ್ವಹಿಸಿದರು. 1960ರಲ್ಲಿ ಮೀಡಿಯಾ ಪಬ್ಲಿಷಿಂಗ್ ಹೌಸ್ ಅನ್ನು ಆರಂಭಿಸಿದರು. ಭಾರತ ರತ್ನ ಪುರಸ್ಕಾರ ಪಡೆದಿದ್ದ ಅರುಣಾ ಗಂಗೂಲಿ 1996ರ ಜುಲೈ 29ರಂದು ನಿಧನರಾದರು.

ದುರ್ಗಾಬಾಯಿ ದೇಶ್ ಮುಖ್

ದುರ್ಗಾಬಾಯಿ ದೇಶಮುಖ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. 12ನೇ ವಯಸ್ಸಿನಲ್ಲಿಯೇ ಇಂಗ್ಲಿಷ್ ಭಾಷೆ ಕಲಿಕೆಯ ವಿರುದ್ಧ ಸೆಟೆದು ವಿದ್ಯಾಭ್ಯಾಸ ಮೊಟಕುಗೊಳಿಸಿ ಹೊರಬಂದರು. ಬಳಿಕ ರಾಜಮಂಡ್ರಿಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಬಾಲಿಕಾ ಹಿಂದಿ ಪಾಠಶಾಲೆ ಆರಂಭಿಸಿದರು. ಮಹಾತ್ಮಗಾಂಧಿಯವರ ಅನುಯಾಯಿಯಾಗಿದ್ದ ದೇಶಮುಖ್, ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಬಾರಿ ಜೈಲುವಾಸ ಅನುಭವಿಸಿದ್ದರು. ಈಕೆ ಯಾವತ್ತೂ ಚಿನ್ನಾಭರಣ ಧರಿಸಿರಲಿಲ್ಲ. 1981ರಲ್ಲಿ ದೇಶ್ ಮುಖ್ ಶ್ರೀಕಾಕುಳಂ ಜಿಲ್ಲೆಯ ನರಸಣ್ಣಾಪೇಟೆಯಲ್ಲಿ ನಿಧನರಾದರು.

ಲಕ್ಷ್ಮೀ ಸೆಹಗಲ್

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೊತೆ ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿದವರು ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್. ಲಕ್ಷ್ಮೀ ಅವರು ವೈದ್ಯಕೀಯ ಪದವಿ ಪಡೆದವರಾಗಿದ್ದರೂ ದೇಶ ಸೇವೆಗೆ ನಿಂತರು. ಭಾರತ ರಾಷ್ಟ್ರೀಯ ಸೇನೆಯ ಮಹಿಳಾ ವಿಭಾಗದಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದ ಲಕ್ಷ್ಮೀ ಅವರು, ರಾಣಿ ಜಾನ್ಸಿ ರೆಜಿಮೆಂಟಿನ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಲಕ್ಹ್ಮೀ ಸೆಹಗಲ್ ಅವರು 2012 ವರ್ಷದ ಜುಲೈ 23ರಂದು ತಮ್ಮ 97ನೇ ವಯಸ್ಸಿನಲ್ಲಿ ನಿಧನರಾದರು. (Courtesy: www.sallapa.com)

ತಿರು ಶ್ರೀಧರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ದೇಶಕಾಲ / ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ಮಹಿಳೆಯರು – ತಿರು ಶ್ರೀಧರ

  • Vasundhara k m

    ಒಳ್ಳೆಯ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು..🌸😊

    Reply

Leave a Reply

Your email address will not be published. Required fields are marked *