ದೇಶಕಾಲ/ ಸಮಕಾಲೀನ ಹೋರಾಟಗಳಲ್ಲಿ ಮಹಿಳೆಯರ ಪ್ರಾಧಾನ್ಯ

ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ “ಸಮಕಾಲೀನ ಹೋರಾಟಗಳಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯವನ್ನು ಕುರಿತು ವಿಚಾರ ಗೋಷ್ಠಿ, ಕವನ ವಾಚನ ಮತ್ತು ‘ಆರೆಂಜ್ ಡೇಸ್’ ಎಂಬ ಇರಾನಿ ಚಿತ್ರದ ಪ್ರದರ್ಶನವನ್ನು ಹಮ್ಮಿಕೊಂಡಿತ್ತು.

     ಫೈಜ್ ಅಹಮದ್ ಫೈಜ್ ರವರ ‘ಹಮ್ ದೇಖೇಂಗೆ’ ಕವನವನ್ನು ಡಾ.ಎಚ್.ಜಿ.ಜಯಲಕ್ಷ್ಮಿ ಹಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು.

     “ಪುರುಷರು ಹತ್ಯೆಗೈಯ್ಯಲು ತೊಡಗಿದಾಗ , ಜೀವದ ರಕ್ಷಣೆಗಾಗಿ ನಿಲ್ಲುವುದು ಮಹಿಳೆಯರ ಜವಾಬ್ದಾರಿ. ಪುರುಷರು ಮೌನ ತಳೆದಾಗ ನಮ್ಮ ಅದರ್ಶಗಳ ಪರವಾಗಿ ದನಿಯೆತ್ತುವುದು ನಮ್ಮ ಅಂದರೆ ಮಹಿಳೆಯರ ಕರ್ತವ್ಯ” ಎನ್ನುವ ಮಹಿಳಾದಿನದ ರೂವಾರಿ ಕ್ಲಾರಾ ಜೆಟ್ಕಿನ್ ಳ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಕಾರ್ಯಕ್ರಮದ ಆಶಯವನ್ನು ಹಿತೈಷಿಣಿಯ ಸಂಚಾಲಕಿಯರಲ್ಲೊಬ್ಬರಾದ ಎನ್. ಗಾಯತ್ರಿ ಬಿಚ್ಚಿಟ್ಟರು. ಸಮಕಾಲೀನ ಸಂದರ್ಭದ ಚಳುವಳಿಗಳಲ್ಲಿ ಮಹಿಳೆಯರ ಪ್ರಾಧಾನ್ಯ ಹೆಚ್ಚಿರುವುದಕ್ಕೆ ಕಾರಣ, ಅವರನ್ನು ಚಳುವಳಿಗೆ ಸೆಳೆದ ಶಕ್ತಿಗಳು ಮತ್ತು ಅದರಿಂದ ಮಹಿಳಾ ಚಳುವಳಿಯ ಬದಲಾದ ಸ್ವರೂಪವನ್ನು ಕುರಿತಂತೆ ವಿಶ್ಲೇಷಿಸುವುದು ಈ ವಿಚಾರಗೋಷ್ಠಿಯ ಉದ್ದೇಶ ಎಂಬ ಪ್ರಾರಂಭಿಕ ಮಾತುಗಳನ್ನಾಡಿದರು.

      ಕಾರ್ಯಕ್ರಮದ ಪ್ರಾಯೋಜಕರಲ್ಲಿ ಒಬ್ಬರಾದ ಸುಚಿತ್ರ ಫಿಲಂ ಸೊಸೈಟಿಯ ಅಧ್ಯಕ್ಷರಾದ ಬಿ. ಸುರೇಶ್ ಅವರು “ಹೋರಾಟ, ಪ್ರತಿಭಟನೆಗಳಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಇಂದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯಲ್ಲಿ ಮಹಿಳೆಯರು ಮುಂದಿದ್ದಾರೆ” ಎಂದು ಹೇಳಿದರು.

    ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪ್ರೊ. ರಾಮೇಶ್ವರಿ ವರ್ಮ ಅವರು ಭಾರತದ ಮಹಿಳಾ ಚಳುವಳಿಯ ಮೂರು ಅಲೆಗಳನ್ನು ಪರಿಚಯ ಮಾಡಿಕೊಡುತ್ತಾ ಈಗ ನಡೆಯುತ್ತಿರು ವ ಮಹಿಳಾ ಚಳುವಳಿಯನ್ನು ನಾಲ್ಕನೆಯ ಅಲೆ ಎಂದು ಕರೆದರು. ಈಗ ಹಲವಾರು ಬಾಗ್ ಗಳಲ್ಲಿ ನಡೆಯುತ್ತಿರುವ ಪೌರತ್ವ ಕಾಯಿದೆಯ ತಿದ್ದುಪಡಿ ವಿರೋಧಿ ಹೋರಾಟವು ಹೆಣ್ಣಿನ ಶಕ್ತಿ, ಸಾಮರ್ಥ್ಯವನ್ನು ಪ್ರಕಟಿಸುತ್ತಿರುವುದಲ್ಲದೆ, ‘ರಾಷ್ಟ್ರೀಯತೆ’ಯ ಪರಿಕಲ್ಪನೆಯನ್ನು ಪುನರ್ ವ್ಯಾಖ್ಯಾನ ಮಾಡುತ್ತಿದೆಯೆಂಬುದನ್ನು ಗುರುತಿಸಿದರು.

   ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಸುಧಾ ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ತಾವು ಭಾಗವಹಿಸಿದ ಪೌರತ್ವಕಾಯಿದೆಯ ತಿದ್ದುಪಡಿ ವಿರೋಧಿ ಹೋರಾಟದ ಅನುಭವಗಳನ್ನು ವಿಶ್ಲೇಷಿಸಿದರು.

   ಮತ್ತೊಬ್ಬ ಭಾಷಣಕಾರ್ತಿ ನುಶತ್ ಸಯೀದಾ ರಜ್ವಿಯವರು ಮುಸ್ಲಿಂ ಮಹಿಳೆಯರು ಈ ಹೋರಾಟದಲ್ಲಿ ಭಾಗವಹಿಸುತ್ತಿರುವುದರ ಕಾರಣ ಮತ್ತು ಈ ಚಳುವಳಿಯ ಸ್ವರೂಪವನ್ನು ಕುರಿತು ವಿಶ್ಲೇಷಿಸಿದರು.

    ಶ್ರೀಮತಿ ಎಸ್. ಸತ್ಯಾ ಅವರು ಸಮಕಾಲೀನ ಹೋರಾಟದ ವಿವಿಧ ಬಗೆಗಳನ್ನು ಪರಿಚಯ ಮಾಡಿಕೊಡುತ್ತಾ ನರೇಗಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವ , ಮದ್ಯಪಾನ ವಿರೋಧಿ ಚಳುವಳಿಯಲ್ಲಿರುವ ಮಹಿಳೆಯರ ಮತ್ತು ಪೌರತ್ವಕಾಯಿದೆಯ ತಿದ್ದುಪಡಿ ವಿರೋಧಿ ಹೋರಾಟದ ಮಹಿಳೆಯರ ಸಮಗ್ರ ಪರಿಚಯ ಮಾಡಿಕೊಟ್ಟರು. ಈ ಹೋರಾಟಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ಮುಂದೆ ಸ್ಥಳೀಯ ಪಾಲಿಕೆಯ ಹಂತದಿಂದ ಹಿಡಿದು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರದ ಹಂತದವರೆಗೂ ಸಮಾಜದ ಎಲ್ಲ ಸಮಸ್ಯೆಗಳ ಬಗೆಗೆ ಹೋರಾಡುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ವಿಜಯಾ ಪ್ರಸಕ್ತ ಮಹಿಳಾ ಚಳುವಳಿಯ ಸ್ವರೂಪದ ಬಗ್ಗೆ ತಮಗಿರುವ ಕೆಲವು ಪ್ರಶ್ನೆಗಳನ್ನು ಸಭೆಯ ಮುಂದಿಡುತ್ತಾ ಸಾಮಾಜಿಕ ಹೋರಾಟವೆನ್ನುವುದು ಕೆಲವೇ ಮಂದಿಯ ವೃತ್ತಿಯಾಗಬಾರದು ಮತ್ತು ಹೋರಾಟದ ಫಲ ಉಣ್ಣುವ ಎಲ್ಲರೂ ಹೋರಾಟದಲ್ಲಿ ಭಾಗವಹಿಸಿದರೆ ಸಮಸ್ಯೆಗಳಿಗೆ ಪರಿಹಾರ ಬೇಗ ದೊರೆಯುತ್ತದೆ, ಎಂದು ಅಭಿಪ್ರಾಯಪಟ್ಟರು.

  ಡಾ. ವಸುಂಧರಾ ಭೂಪತಿ, ಭಾರತಿ ಹೆಗಡೆ ಮತ್ತು ಯಶೋಧ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

   ಹಿತೈಷಿಣಿಯ ಸಂಚಾಲಕರಾದ ಆರ್. ಪೂರ್ಣಿಮಾ ವೇದಿಕೆಯಲ್ಲಿದ್ದವರಿಗೆಲ್ಲ ವಂದಿಸಿ ನೆನಪಿನ ಕಾಣಿಕೆಗಳನ್ನು ಕೊಟ್ಟರು.

    ಕಿತ್ತಲೆಹಣ್ಣಿನ ತೋಟದಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಮತ್ತು ಅವರ ಮಹಿಳಾ ಬಾಸ್ ಸುತ್ತ ಹೆಣೆದ ‘ಆರೆಂಜ್ ಡೇಸ್’ – ಇರಾನಿ ಚಿತ್ರದ ಪ್ರದರ್ಶನ ಮಹಿಳಾ ದಿನಾಚರಣೆಗೆ ಅರ್ಥ ತಂದಿತು.

  • ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *