Uncategorizedದೇಶಕಾಲ

ದೇಶಕಾಲ/ ಸನ್ನಡತೆಯ ಬಿಡುಗಡೆಯೋ ನ್ಯಾಯದ ವಿಡಂಬನೆಯೋ?- ಡಾ. ಗೀತಾ ಕೃಷ್ಣಮೂರ್ತಿ

ಅತ್ಯಾಚಾರ ಹೆಣ್ಣಿನ ಮೇಲೆ ನಡೆಸಬಹುದಾದ ಅತ್ಯಂತ ಭಯಾನಕ ಹೇಯ ಬರ್ಬರ ಕೃತ್ಯ. ಅಂಥ ಕೃತ್ಯವನ್ನು ಯಾವುದೇ ಕಾರಣಕ್ಕೆ ನಡೆಸಿದ್ದರೂ ಅಂಥ ಕೃತ್ಯವೂ ಅಕ್ಷಮ್ಯ, ಅಂಥ ವ್ಯಕ್ತಿಯೂ ಕ್ಷಮಾರ್ಹನಲ್ಲ. ಆದರೆ ‘ಸನ್ನಡತೆ’ ಎಂಬುದೇ ಅಣಕವಾಗಿರುವ, ಅತ್ಯಾಚಾರದಂಥ ‘ನಡತೆಗೆಟ್ಟ’ ಪ್ರಕರಣದಲ್ಲಿ, ‘ಸನ್ನಡತೆ’ಯ ಆಧಾರದ ಮೇಲೆ ಬಿಲ್ಕಿಸ್ ಬಾನು ಅತ್ಯಾಚಾರದ ಅಪರಾಧಿಗಳನ್ನು ಬಿಡುಗಡೆಮಾಡಿರುವುದು, ನ್ಯಾಯದ ಅಣಕವೆಂದೇ ಹೇಳಬೇಕು. ಯಾವುದೇ ನಿಯಮಗಳನ್ನು ಆಧರಿಸಿ ಬಿಡುಗಡೆ ಮಾಡಿರಲಿ, ಈ ಹೆಜ್ಜೆ, ಸ್ವತಂತ್ರ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ನಾಗರಿಕರಿಗೆ, ಪ್ರಜ್ಞಾವಂತರಿಗೆ ಆಘಾತ ಉಂಟು ಮಾಡಿದೆ.

2002 ರಲ್ಲಿ ಸಾಬರಮತಿ ಎಕ್ಸ್‍ಪ್ರೆಸ್‍ನಲ್ಲಿ ಪ್ರಯಾಣಿಸುತ್ತಿದ್ದ ಕರಸೇವಕರ ಭೀಕರ ಹತ್ಯೆಯ ಬಳಿಕ ಗುಜರಾತ್‍ನಲ್ಲಿ, ಭುಗಿಲೆದ್ದು ವ್ಯಾಪಿಸಿದ ಹಿಂಸಾಚಾರದಲ್ಲಿ ಸೇಡಿನ ರೋಷಕ್ಕೆ ಬಲಿಯಾಗಿ ಅತ್ಯಾಚಾರಕ್ಕೆ ಒಳಗಾದವಳು ಬಿಲ್ಕಿಸ್ ಬಾನು ಎಂಬ ಹೆಣ್ಣುಮಗಳು. ಈಕೆ ಏಳು ತಿಂಗಳ ಗರ್ಭಿಣಿ ಎಂಬುದನ್ನೂ ಕಡೆಗಣಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಲಾಯಿತು. ಆಕೆಯ ಮೂರು ವರ್ಷದ ಮಗುವನ್ನು ಆಕೆಯ ಎದುರಿಗೇ ಮಗುವಿನ ತಲೆಯನ್ನು ಕಲ್ಲಿಗೆ ಜಜ್ಜಿ ಕೊಲ್ಲಲಾಯಿತು. ಜೊತೆಗೆ ಅವಳ ಕುಟುಂಬದವರನ್ನೂ ಸಾಯಿಸಿದರು. ಇಷ್ಟೆಲ್ಲ ಭೀಕರತೆಗಳ ನಡುವೆ ಎದೆಗುಂದದೆ ನ್ಯಾಯಾಲಯದ ಮೆಟ್ಟಿಲೇರಿ. ನ್ಯಾಯದ ಹಾದಿಯಲ್ಲಿನ ಅನೇಕ ಎಡರುತೊಡರುಗಳನ್ನು ದಾಟಿ ನ್ಯಾಯ ದೊರಕಿಸಿಕೊಂಡವಳು ಬಿಲ್ಕಿಸ್ ಬಾನು. ಆಕೆಯ ಮೇಲೆ ಅತ್ಯಾಚಾರವೆಸಗಿದವರಿಗೆ ಶಿಕ್ಷೆಯಾದದ್ದು 2008ರಲ್ಲಿ, ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದವರು ಹನ್ನೊಂದು ಮಂದಿ. ಇತ್ತೀಚೆಗೆ ಈ ಎಲ್ಲರನ್ನು ‘ಸನ್ನಡತೆ’ಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

ಅತ್ಯಾಚಾರ ಹೆಣ್ಣಿನ ಮೇಲೆ ನಡೆಸಬಹುದಾದ ಅತ್ಯಂತ ಭಯಾನಕ ಹೇಯ ಬರ್ಬರ ಕೃತ್ಯ. ಅಂಥ ಕೃತ್ಯವನ್ನು ಯಾವುದೇ ಕಾರಣಕ್ಕೆ ನಡೆಸಿದ್ದರೂ ಅಂಥ ಕೃತ್ಯವೂ ಅಕ್ಷಮ್ಯ, ಅಂಥ ವ್ಯಕ್ತಿಯೂ ಕ್ಷಮಾರ್ಹನಲ್ಲ. ಒಂದು ಹೆಣ್ಣಿನ ಜೀವನವನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೊಸಕಿ ಹಾಕಿ, ಸಾಯುವವರೆಗೂ ಸತ್ತಂತೆ ಬದುಕುವ ಹಾಗೆ ಮಾಡುವ ಈ ಕೃತ್ಯದ ಅಪರಾಧಿಗಳು ಜೀವಿಸಲೂ ಅಯೋಗ್ಯರು. ಅವರಿಗೆ ಮರಣದಂಡನೆಯೊಂದೇ ಸೂಕ್ತವಾದ ಶಿಕ್ಷೆ – ಇದು, 2012 ರಲ್ಲಿ ನಿರ್ಭಯಾ ಪ್ರಕರಣದಲ್ಲಿ ದೇಶಾದ್ಯಂತ ಅನುರಣಿಸಿದ ಆಕ್ರೋಶ.

ಅತ್ಯಾಚಾರ ಒಂದು ಕ್ರಿಮಿನಲ್ ಅಪರಾಧ. ಅದೊಂದು ರಾಜ್ಯದ ವಿರುದ್ಧದ ಅಪರಾಧ. ನಿರ್ಭಯಾ ಪ್ರಕರಣದ ನಂತರದಲ್ಲಿ, ಶಾಸಕಾಂಗ ಮತ್ತು ನ್ಯಾಯಾಂಗಗಳು, ಅತ್ಯಾಚಾರ ಪ್ರಕರಣಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ. ಕಾನೂನಿಗೆ ತಿದ್ದುಪಡಿ ಮಾಡಿ ಕಾನೂನಿನ ಕುಣಿಕೆಯನ್ನು ಬಿಗಿಗೊಳಿಸಿದೆ. ಆದರೂ, ದೇಶದ ವಾರ್ಷಿಕ ಅಪರಾಧ ವರದಿಗಳನ್ನು ಗಮನಿಸಿದರೆ, 2013 ರ ನಂತರದ ಅಂಕಿಅಂಶಗಳು ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದನ್ನು ಸ್ಪಷ್ಟ ಪಡಿಸುತ್ತವೆ. ಇದಕ್ಕೆ, ನಿರ್ಭಯಾ ಪ್ರಕರಣದ ನಂತರದಲ್ಲಿ ಅತ್ಯಾಚಾರ ಪ್ರಕರಣವನ್ನು ದಾಖಲಿಸುವ ಬಗ್ಗೆ ಜನರಲ್ಲಿ ಮೂಡಿದ ಜಾಗೃತಿ ಕಾರಣ ಇರಬಹುದು ಎಂದು ಈ ಏರಿಕೆಯನ್ನು ವಿಶ್ಲೇಷಿಸಲಾಗಿದೆ. ಏರಿಕೆಯ ಅನುಪಾತದಲ್ಲಿ ಪ್ರಕರಣಗಳ ಇತ್ಯರ್ಥವಾಗುತ್ತಿಲ್ಲ. ಇದಕ್ಕೆ ಕಾರಣ, ಅಪರಾಧವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ಸಾಬೀತು ಪಡಿಸುವುದಕ್ಕೆ ಮತ್ತು ಅಪೀಲುಗಳ ಹಂತಗಳನ್ನಯ ಹಾದು ಅಂತಿಮ ತೀರ್ಪು ಬರುವ ಘಟ್ಟವನ್ನು ತಲುಪುವುದಕ್ಕೆ ತೆಗೆದುಕೊಳ್ಳುವ ದೀರ್ಘ ಕಾಲ. ಇದನ್ನು ಸರಿದೂಗಿಸಲು ಅಗತ್ಯವಾದ ಸಂಖ್ಯೆಯಲ್ಲಿ ನ್ಯಾಯಾಲಯಗಳು ಇಲ್ಲದಿರುವುದು.

ಒಂದು ಅತ್ಯಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದರೆ, ಅಪರಾಧ ಸಂದೇಹಕ್ಕೆ ಆಸ್ಪದವಿಲ್ಲದಂತೆ ರುಜುವಾತಾಗಿದೆ ಎಂದೇ ಅರ್ಥ. ಸಾಬೀತು ಪಡಿಸುವಲ್ಲಿ ಒಂದಿಷ್ಟು ಸಂದೇಹ ಉಂಟಾದರೂ ’ಸಂದೇಹದ ಲಾಭ’ ದೊರೆಯುವುದು ಅಪರಾಧಿಗೆ. ಹಾಗಾಗಿಯೇ, ವಿಧಿಸಲಾಗುವ ಶಿಕ್ಷೆಯೂ ಅಷ್ಟೇ ಕಠಿಣ. ಅತ್ಯಾಚಾರ ಅತ್ಯಂತ ಘೋರ ಅಪರಾಧ, ಅದು ಮಾನವತೆಯ ಮೇಲೆ ಎಸಗಿದ ಅಪರಾಧ. ಹಾಗೆಂದೇ ಅದಕ್ಕೆ ಶಿಕ್ಷೆ ಆಜೀವ ಕಾರಾವಾಸ ಇಲ್ಲವೇ ಮರಣದಂಡನೆ. ಅತ್ಯಾಚಾರದಂಥ ಘೋರ ಕೃತ್ಯವನ್ನು ಮಾಡಬಲ್ಲಂಥ ವ್ಯಕ್ತಿ ಸಮಾಜದಲ್ಲಿರುವುದಕ್ಕೆ ಅಯೋಗ್ಯ, ಸಮಾಜಕ್ಕೆ ಕಂಟಕ ಎಂಬುದು ಇದರ ಹಿಂದಿನ ತರ್ಕ. ಜೊತೆಗೆ, ಶಿಕ್ಷೆಯ ಭೀತಿಯನ್ನು ಉಂಟುಮಾಡಿ ಇತರರು ಅಂಥ ಕೃತ್ಯಕ್ಕೆಳಸದಂತೆ ನೀಡುವ ಎಚ್ಚರಿಕೆ. ಸಂದರ್ಭದ ಒತ್ತಡಕ್ಕೆ ಸಿಲುಕಿಯೋ, ಮಾನಸಿಕ ವಿಪ್ಲವಕ್ಕೆ ಒಳಗಾಗಿಯೋ, ಕ್ಷಣಿಕ ಆಕ್ರೋಶದಿಂದಲೋ ಅಪರಾಧವನ್ನೆಸಗಿ ಆನಂತರದಲ್ಲಿ ಪಶ್ಚಾತ್ತಾಪ ಪಡುವ ಅನೇಕ ಉದಾಹರಣೆಗಳಿವೆ. ಅಂಥ ಅಪರಾಧ ಮತ್ತು ಅಪರಾಧಿಗಳಿಗೆ ಸಂಬಂಧಪಟ್ಟಂತೆ ‘ಸನ್ನಡತೆ’ಯ ಆಧಾರದ ಮೇಲೆ ಬಿಡುಗಡೆಯಾದ ಅಪರಾಧಿಗಳ ಸಂಖ್ಯೆ ಸಾಕಷ್ಟಿದೆ ಮತ್ತು ಹೀಗೆ ಬಿಡುಗಡೆ ಮಾಡುವುದು ವಾಡಿಕೆಯ ಕ್ರಮವೂ ಆಗಿದೆ.

ಸಾಕ್ಷೀ ಪ್ರಜ್ಞೆಗೆ ಆಘಾತ

ಆದರೆ ‘ಸನ್ನಡತೆ’ ಎಂಬುದೇ ಅಣಕವಾಗಿರುವ, ಅತ್ಯಾಚಾರದಂಥ ‘ನಡತೆಗೆಟ್ಟ’ ಪ್ರಕರಣದಲ್ಲಿ, ‘ಸನ್ನಡತೆ’ಯ ಆಧಾರದ ಮೇಲೆ ಅತ್ಯಾಚಾರದ ಅಪರಾಧಿಗಳನ್ನು ಬಿಡುಗಡೆಮಾಡಿರುವುದು, ನ್ಯಾಯದ ಅಣಕವೆಂದೇ ಹೇಳಬೇಕು. ಯಾವುದೇ ನಿಯಮಗಳನ್ನು ಆಧರಿಸಿ ಬಿಡುಗಡೆ ಮಾಡಿರಲಿ, ಈ ಹೆಜ್ಜೆ, ಸ್ವತಂತ್ರ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ನಾಗರಿಕರಿಗೆ, ಪ್ರಜ್ಞಾವಂತರಿಗೆ, ದೇಶದ ಸಾಕ್ಷೀ ಪ್ರಜ್ಞೆಗೆ ಆಘಾತ ಉಂಟು ಮಾಡಿದೆ.

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಸಿಬಿಐಗೆ ವಹಿಸಿತು. ಅತ್ಯಾಚಾರದ 19 ಆರೋಪಿಗಳನ್ನು 2004 ರಲ್ಲಿ ಬಂಧಿಸಲಾಯಿತು. ಅವರ ವಿಚಾರಣೆ ಗುಜರಾತ್‍ನ ಅಹಮದಾಬಾದಿನಲ್ಲಿ ಪ್ರಾರಂಭವಾಯಿತು. ಅಹಮದಾಬಾದಿನಲ್ಲೇ ವಿಚಾರಣೆ ನಡೆದರೆ, ಆರೋಪಿಗಳು ತಮ್ಮ ಪ್ರಭಾವವನ್ನು ಬಳಸಿ ಸಿಬಿಐ ಸಂಗ್ರಹಿಸಿದ ಸಾಕ್ಷ್ಯವನ್ನು ನಾಶ ಪಡಿಸಬಹುದು ಎಂದು ಬಾನು ಅಂಜಿಕೆ ವ್ಯಕ್ತ ಪಡಿಸಿದ್ದರಿಂದ, ಸರ್ವೋಚ್ಚ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂಬಯಿಗೆ ಸ್ಥಳಾಂತರಿಸಿತು. 2008 ರ ಜನವರಿ 21 ರಂದು ವಿಶೇಷ ಸಿಬಿಐ ನ್ಯಾಯಾಲಯ, ಗರ್ಭಿಣಿ ಸ್ತ್ರೀಯ ಮೇಲೆ ಅತ್ಯಾಚಾರ, ಹತ್ಯೆ ಹಾಗೂ ಕಾನೂನುಬಾಹಿರ ಸಮಾವೇಶಗಳ ಅಪರಾಧಕ್ಕಾಗಿ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯಗಳು ಇಲ್ಲವೆಂಬ ಕಾರಣಕ್ಕೆ ಏಳು ಮಂದಿಯನ್ನು, ಬಿಡುಗಡೆ ಮಾಡಲಾಯಿತು. ಒಬ್ಬರು, ವಿಚಾರಣಾ ಅವಧಿಯಲ್ಲೇ ಮರಣ ಹೊಂದಿದರು.

ಮುಂಬಯಿ ಉಚ್ಚ ನ್ಯಾಯಾಲಯ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಅಲ್ಲದೆ, ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಏಳು ಆರೋಪಿಗಳ ಬಿಡುಗಡೆ ಆದೇಶವನ್ನೂ ರದ್ದುಗೊಳಿಸಿತು. ಈ ಅಪರಾಧಿಗಳ ಪೈಕಿ ಒಬ್ಬ ಅಪರಾಧಿ, ಅವಧಿಗೆ ಮುನ್ನ ತನ್ನನ್ನು ಬಿಡುಗಡೆ ಮಾಡಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ. ಈ ಮನವಿಯನ್ನು ಪರೀಕ್ಷಿಸುವಂತೆ ನ್ಯಾಯಾಲಯ ಗುಜರಾತ್ ಸರ್ಕಾರಕ್ಕೆ ನಿರ್ದೇಶಿಸಿತು. ಅದರಂತೆ ಗುಜರಾತ್ ಸರ್ಕಾರ ಒಂದು ಸಮಿತಿಯನ್ನು ರಚಿಸಿದ್ದು, ಸಮಿತಿ ಮಾಡಿದ ಸರ್ವಾನುಮತದ ನಿರ್ಣಯದಂತೆ, ಜೀವಾವಧಿ ಕಾರಾವಾಸದ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳನ್ನು ಬಿಡುಗಡೆ ಮಾಡಿತು. ಪರಿಣಾಮವಾಗಿ, ಅಂದಿನಿಂದ ಜೈಲಿನಲ್ಲಿದ್ದ ಈ ಎಲ್ಲ ಅಪರಾಧಿಗಳೂ ಸರ್ಕಾರದ ಕೃಪೆಯಿಂದ ಗೋಧ್ರಾ ಉಪ ಕಾರಾಗೃಹದಿಂದ ಹೊರ ನಡೆದು ಸ್ವಾತಂತ್ರ್ಯೋತ್ಸವದ ದಿನದಂದು ಸ್ವಾತಂತ್ರ್ಯದ ಗಾಳಿ ಸೇವಿಸಿದರು!

ಇಲ್ಲಿ ಜನಾಕ್ರೋಶಕ್ಕೆ ಕಾರಣವಾದದ್ದು, ಇಂಥ ಹೇಯ ಕೃತ್ಯದ ಅಪರಾಧಿಗಳನ್ನು ‘ಸನ್ನಡತೆ’ಯ ಆಧಾರದ ಮೇಲೆ ಬಿಡುಗಡೆ ಮಾಡಿದ್ದು ಎಷ್ಟು ಸರಿ ಎಂಬ ವಿಷಯಕ್ಕೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿಯೇ, ಬಿಡುಗಡೆಯಾದ ಅಪರಾಧಿಗಳಿಗಿಂತ ಕಡಿಮೆ ಹೇಯ ಕೃತ್ಯಕ್ಕಾಗಿ ಬಂಧಿತರಾಗಿ ಶಿಕ್ಷೆ ಅನುಭವಿಸುತ್ತಿರುವವರು ಬಿಡುಗಡೆಯಾಗದೇ ಜೈಲಿನಲ್ಲಿಯೇ ಇದ್ದಾರೆ. ದೇಶ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ. ಬೆಳಿಗ್ಗೆ ಕೆಂಪು ಕೋಟೆಯ ವೇದಿಕೆಯಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಯವರು ತ್ರಿವರ್ಣ ಧ್ವಜವನ್ನು ಹಾರಿಸಿ, ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ‘ನಮ್ಮ ವರ್ತನೆಯಲ್ಲಿ, ನಮ್ಮ ಸಂಸ್ಕøತಿಯಲ್ಲಿ ಮತ್ತು ದಿನ ನಿತ್ಯದ ಜೀವನದಲ್ಲಿ, ಮಹಿಳೆಯರಿಗೆ ಅವಮಾನವನ್ನು ಉಂಟುಮಾಡುವಂಥ ಹಾಗೂ ಅವರ ಘನತೆಗೆ ಕುಂದು ತರುವಂಥ ಪ್ರತಿಯೊಂದನ್ನು ನಾವು ತ್ಯಜಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ನಾವು ಮಾಡಲಾರೆವೇ ಎಂದು ಪ್ರಶ್ನಿಸುವ ಮೂಲಕ ದೇಶದ ಪ್ರತಿ ಪ್ರಜೆಯ ಆತ್ಮ ಸಾಕ್ಷಿಯನ್ನು ತಟ್ಟಿದರು. ಆದರೆ, ವಿಪರ್ಯಾಸವೆಂದರೆ, ಮಹಿಳೆಯ ಘನತೆಗೆ ಕುಂದು ತರುವಂಥ, ಮಹಿಳೆಯ ಮೇಲೆ ಎಸಗಿದ ಅತ್ಯಾಚಾರದಂಥ ಹೇಯ ಅಪರಾಧ ಮಾಡಿದುದಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಈ ಪ್ರಕರಣದ ಅಪರಾಧಿಗಳು ಬಿಡುಗಡೆಯಾದದ್ದು ಅದೇ ದಿನ!

ಇದನ್ನು ಹೇಗೆಂದು ಅರ್ಥೈಸಬೇಕು, ಈ ಕ್ರಮವನ್ನು ಸಮರ್ಥಿಸಿಕೊಳ್ಳುವವರು ನೀಡುವ ಕಾರಣ, ಅವರಿಗೆ ಶಿಕ್ಷೆ ವಿಧಿಸಿದಾಗ ಜಾರಿಯಲ್ಲಿದ್ದುದು ‘1992 ರ ಬಿಡುಗಡೆ ನೀತಿ’ ಮತ್ತು ಅದರ ಪ್ರಕಾರ ಈ ಅಪರಾಧಿಗಳ ಬಿಡುಗಡೆಗೆ ಅವಕಾಶವಿತ್ತು ಎಂಬುದು. ಆದರೆ ಯಾವುದೇ ಕಾನೂನನ್ನು ಅನ್ವಯಿಸುವಾಗ, ಅದನ್ನು ಅಕ್ಷರಶಃ ಪಾಲಿಸಬೇಕೋ ಅಥವಾ ಕಾನೂನಿನ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಅದನ್ನು ಅರ್ಥೈಸಬೇಕೋ ಎಂಬುದನ್ನು ವಿವೇಚನೆ ನಿರ್ಧರಿಸಬೇಕು. ಹಾಗಾಗದೆ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ಅರ್ಥೈಸಿದಾಗ. ಕಾನೂನನ್ನು ಅನ್ವಯಿಸಿ ನೀಡಿದ ತೀರ್ಮಾನ ನ್ಯಾಯ ದೊರಕಿಸುತ್ತದೆ ಎಂದು ಪರಿಭಾವಿಸಬೇಕೋ ಅಥವಾ ಕಾನೂನನ್ನು ಅನ್ವಯಿಸಿ ಏನೇ ತೀರ್ಮಾನ ಕೈಗೊಂಡರೂ, ಅದೇ ನ್ಯಾಯ ಎಂದು ಪರಿಭಾವಿಸಬೇಕೋ ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅಂಥ ಜಿಜ್ಞಾಸೆಯನ್ನುಂಟು ಮಾಡುವ ಯಾವುದೇ ತೀರ್ಪು ನ್ಯಾಯದ ಅಣಕವಾಗಿರುತ್ತದೆ ಎಂದು ಹೇಳದೆ ವಿಧಿಯಿಲ್ಲ.


ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *