FEATUREDದೇಶಕಾಲ

ದೇಶಕಾಲ/ ವಿಶ್ವ ಭೂ ದಿನಕ್ಕೆ ಬೆಂಬಲ ನೀಡಿದ ಗೃಹಿಣಿಯರು – ಭಾರತಿ ಹೆಗಡೆ

ಇಂದು ವಿಶ್ವ ಭೂ ದಿನ. 1970 ಏಪ್ರಿಲ್ 22ರಂದು ಮೊದಲ ಭೂ ದಿನ ಪ್ರಾರಂಭವಾಯಿತು. ಅಂದರೆ ಇಂದಿಗೆ ಈ ದಿನ ಪ್ರಾರಂಭವಾಗಿ 50 ವರ್ಷಗಳಾದವು. ಈ ಸಂದರ್ಭದಲ್ಲಿ ಸೆಲ್ಕೋ ಫೌಂಡೇಶನ್ ಏರ್ಪಡಿಸಿದ್ದ ವೆಬಿನಾರ್‍ನಲ್ಲಿ ಮೊದಲ ವಿಶ್ವ ಭೂ ದಿನದ ರಾಷ್ಟ್ರೀಯ ಸಂಯೋಜಕರಾದ ಡೆನಿಸ್ ಹೇಸ್ ಅವರೊಂದಿಗೆ ಸಂವಾದದ ನಡೆಸಲಾಯಿತು. ಈ ಸಂವಾದವನ್ನು ಆಧರಿಸಿ ಬರೆದ ಲೇಖನವಿದು.


ಮಹಿಳೆ ಮತ್ತು ಪರಿಸರ, ಮಹಿಳೆ ಮತ್ತು ಭೂಮಿಗೆ ಸದಾ ಅವಿನಾಭಾವ ಸಂಬಂಧ ಇದ್ದೇ ಇರುತ್ತದೆ. ಭೂಮಿಯ ಪರಿಸರ ಮತ್ತು ಮುಂದಿನ ಪೀಳಿಗೆಯ ರಕ್ಷಣೆಯ ಕುರಿತು ಮಹಿಳೆಗಿರುವ ಕಾಳಜಿ ಅನನ್ಯವಾದದ್ದು. ಅದಕ್ಕೆ ಸಾಕ್ಷಿಯೆಂದರೆ ಮೊದಲ ವಿಶ್ವ ಭೂದಿನದಲ್ಲಿ ಡೆನಿಸ್ ಹೇಸ್‍ನಂಥವರ ಹೋರಾಟಕ್ಕೆ ಅಮೆರಿಕದ ಅಂದಿನ ಗೃಹಿಣಿಯರು ಬೆಂಬಲಕ್ಕೆ ನಿಂತದ್ದು. ಇದನ್ನು ಸ್ವತಃ ಡೆನಿಸ್ ಅವರೇ ಹೇಳುತ್ತಾರೆ.

ಡೆನಿಸ್ ಹೇಸ್


ನಿಜ, 60-70ರ ದಶಕದಲ್ಲಿ ಅಮೆರಿಕದ ಕೈಗಾರಿಕಾ ಕ್ರಾಂತಿಯ ಉಚ್ಛ್ರಾಯದ ಕಾಲದಲ್ಲಿ ಬರಡಾಗುತ್ತಿರುವ ಭೂಮಿಗಾಗಿ, ಮಲಿನವಾಗುತ್ತಿರುವ ಗಾಳಿ ಮತ್ತು ನೀರು, ಅದರಿಂದಲೇ ಮನುಷ್ಯರಿಗೆ ಉಂಟಾಗುತ್ತಿರುವ ಅನಾರೋಗ್ಯವನ್ನು ತಪ್ಪಿಸುವ ಸಲುವಾಗಿ ಅಂದು ಅನೇಕರು ಹೋರಾಡಿದರು. ಆ ಸಂದರ್ಭದಲ್ಲಿ ಈ ಹೋರಾಟವನ್ನು ವಿಶ್ವಕ್ಕೇ ತಲುಪಿಸುವ ಉದ್ದೇಶದಿಂದ ಪರಿಸರ ಹೋರಾಟಗಾರ ಮತ್ತು ಸೌರಶಕ್ತಿಯ ಪ್ರತಿಪಾದಕರಾದ ಡೆನಿಸ್ ಹೇಸ್‍ನಂಥವರು ಬೀದಿಗಳಲ್ಲಿ, ಮಾಲ್‍ಗಳಲ್ಲಿ, ವೇದಿಕೆಗಳ ಮೇಲೆ, ಮೇಲೆಲ್ಲ ಬಾಷಣ ಮಾಡಿದರು, ಕರಪತ್ರ ಹಂಚಿದರು, ದೊಡ್ಡದೊಡ್ಡ ಭಿತ್ತಿಪತ್ರಗಳನ್ನು ಅಂಟಿಸಿದರು. ಆದರೆ ಅವರ ಈ ಕೆಲಸಕ್ಕೆ ಏಕಾಏಕಿ ಅವರಿಗೆ ಸಾರ್ವಜನಿಕರಿಂದ ಬೆಂಬಲ ಸಿಗಲಿಲ್ಲ.


70-80ರ ದಶಕದಲ್ಲಿ ಸೋಷಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಈ ಭೂ ದಿನದ ತತ್ವವನ್ನು ಹೇಗೆ ವಿಶ್ವಕ್ಕೆ ತಲುಪಿಸುವುದಕ್ಕೆ ಸಾಧ್ಯವಾಯಿತು ಎಂದು ಕೇಳಿದ್ದಕ್ಕೆ, ಡೆನಿಸ್ ಅವರ ಉತ್ತರ ಹೀಗಿತ್ತು.  “ಇದಕ್ಕಾಗಿ ಸಂಗ್ರಹಿಸಿದ ಫಂಡ್‍ನ ಶೇ.ಅರ್ಧದಷ್ಟು ಭಾಗವನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಜಾಹೀರಾತಿಗಾಗಿಯೇ ನೀಡಿದ್ದೆವು. ಇಷ್ಟಾದರೂ ಜನ ನಮಗೆ ಬೆಂಬಲ ನೀಡಿರಲಿಲ್ಲ. ಆಗ ಮಕ್ಕಳಿಗೋಸ್ಕರ ಮನೆಯಲ್ಲೇ ಇದ್ದ ಹೌಸ್‍ವೈಫ್‍ಗಳೆಲ್ಲ ಮನೆಯಿಂದಾಚೆ ಬಂದು ನಮ್ಮ ಬೆಂಬಲಕ್ಕೆ ನಿಂತರು. ಧರಣಿ ಮಾಡುವಲ್ಲಿ, ಭಿತ್ತಿಪತ್ರಗಳನ್ನು ಅಂಟಿಸುವಲ್ಲಿ, ಕರಪತ್ರಗಳನ್ನು ಹಂಚುವಲ್ಲಿ, ಭಾಷಣ ಮಾಡುವಲ್ಲಿ ನಮ್ಮೊಂದಿಗೆ ನಿಂತರು. ನಂತರ ರಾಜಕೀಯ ಪಕ್ಷಗಳು, ಶ್ರೀಮಂತರು ಮತ್ತು ಬಡವರು, ರೈತರು, ಉದ್ಯಮಿಗಳು ಮತ್ತು ಕಾರ್ಮಿಕರೆಲ್ಲರ ಬೆಂಬಲ ಲಭಿಸಿತು.
ಈ ಭೂ ದಿನವೆಂಬುದು ಇತರ ದಿನಗಳಂತೆ ಅರ್ಥಕಳೆದುಕೊಳ್ಳದಿರುವುದು ಸಮಾಧಾನಕರ ವಿಷಯ. ಕಾರ್ಮಿಕರ ದಿನ ಒಂದು ದಿನದ ರಜಾದಿನವಾಗಿ ಶಾಪಿಂಗ್ ದಿನವಾಗಿ ಮಾರ್ಪಟ್ಟಿತು, ಮಹಿಳಾ ದಿನ ಶಾಪಿಂಗ್ ದಿನವಾಗಿ, ಫ್ಯಾಷನ್ ಶೋಗಳ ಥರ, ಕೂಪನ್ ಕೊಡುವ ದಿನವಾಗಿ ಮಾರ್ಪಟ್ಟಿತು, ಹಾಗೆ ಅರ್ಥ್ ಡೇ ಇನ್ನೂ ತನ್ನ ಅರ್ಥವನ್ನು ಕಳೆದುಕೊಂಡಿಲ್ಲ ಎಂಬುದೊಂದೇ ಸಮಾಧಾನ. ಹಾಗಾಗುವುದೂ ಬೇಡ’  ಎನ್ನುತಾರೆ ಡೆನಿಸ್ ಹೇಸ್.


1970ರಲ್ಲಿ ನಾವು ನೋಡಿದ ಸಾಮಾಜಿಕ ಮತ್ತು ಸಾಂಸ್ಕøತಿಕ ಹೋರಾಟಗಳು ಈಗ ಮತ್ತೆ ಏರುತ್ತಿವೆ. ಹೊಸಮಾರ್ಗದ ಕುರಿತು ಈಗಲೂ ಜನ ರೊಚ್ಚಿಗೆದ್ದು ಬೀದಿಗೆ ಬರುತ್ತಿದ್ದಾರೆ. ಗ್ರೇತಾ ಥನ್‍ಬರ್ಗ್‍ನಂತಹ ಯುವಜನತೆ ವಾತಾವರಣ ಬದಲಾವಣೆಯ ಕುರಿತು ದಿಟ್ಟವಾಗಿ ಅಭಿಯಾನ ಕೈಗೊಳ್ಳುವಂತಾಗಿದೆ ಎನ್ನುತ್ತಾರೆ ಡೆನಿಸ್.


ನಿಜ. ಅಂದು ಮಹಿಳೆಯರು ಭೂ ದಿನಕ್ಕಾಗಿ ಡೆನಿಸ್ ಹೇಸ್ ನಂಥವರ ಬೆಂಬಲಕ್ಕೆ ನಿಂತದ್ದಷ್ಟೇ ಅಲ್ಲ, ಸಾಕಷ್ಟು ಹೋರಾಟಗಾರ್ತಿಯರು ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧವೂ, ಮಹಿಳಾ ಸ್ವಾತಂತ್ರ್ಯದ ಕುರಿತು ಹೋರಾಟ ನಡೆಸಿದ್ದೂ ವಿಶೇಷವಾಗಿತ್ತು.


ಮಹಿಳೆಯರು ಸ್ವತಂತ್ರ ಮನೋಭಾವವನ್ನು ಹೊಂದಿರದ ಹೊರತು  ಏನನ್ನೂ ಗೆದ್ದಹಾಗಾಗುವುದಿಲ್ಲ ಎಂದಿದ್ದರು ಮಾರ್ಗರೇಟ್ ಮೆಡ್. ಆಗಿನ ಪರಿಸರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಂತಹ ಹೋರಾಟಗಾರ್ತಿ ಮತ್ತು ಮಾನವಶಾಸ್ತ್ರಜ್ಞೆ. ಮೊದಲ ವಿಶ್ವ ಭೂ ದಿನದ ಹೋರಾಟದ ಮುಂಚೂಣಿಯಲ್ಲಿದ್ದಂಥವರು ಇವರು. ಇಂದಿಗೂ ಬಗೆಹರಿಯದ ಈ ಭೂಮಿ ಮತ್ತು ಮನುಷ್ಯನ ಸಂಬಂಧದ ಕುರಿತು ನಾವಿಂದು ಮಾತನಾಡಬೇಕಾಗಿದೆ. ಯಾರು ಈ ಸಂಬಂಧದಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ? ನಾವಾ ಅಥವಾ ಪ್ರಕೃತಿಯಾ? ಯಾವಾಗ ಮಕ್ಕಳು ಪರಿಸರದ ಕುರಿತು ಕಲಿಯಲು ಪ್ರಾರಂಭಿಸಬೇಕು? ಪರಿಸರದ ಕುರಿತಾಗಿ ಅಷ್ಟೊಂದು ಕಾಳಜಿ ಇಲ್ಲದ ಸಮಯದಲ್ಲಿ, ಅಷ್ಟಾಗಿ ಯಾರೂ ಯೋಚಿಸದ ಸಮಯದಲ್ಲಿ ಯಾವರೀತಿಯ ಶಿಕ್ಷಣದ ಅಗತ್ಯವಿತ್ತು ನಮ್ಮ ಮಕ್ಕಳಿಗೆ? ಎಂದು ಕೇಳುತ್ತಾರೆ ಮಿಡ್. ಮಿಡ್ ಕೇಳಿದ ಈ ಪ್ರಶ್ನೆ ಪ್ರತಿ ಮಹಿಳೆಯೂ ಕೇಳಿಕೊಳ್ಳಬೇಕಾಗಿದೆ. ಅಂದರೆ ನಾವು ನಮ್ಮ ಮಕ್ಕಳಿಗೆ ಏನನ್ನುಹೇಳಿಕೊಡುತ್ತಿದ್ದೇವೆ ಎಂಬುದಾಗಿ.


ಹಾಗೆ ನೋಡಿದರೆ ಪರಿಸರಕ್ಕಾಗಿ ಮಹಿಳೆಯರು ಹೋರಾಡಿದ ಉದಾಹರಣೆಗಳು ಬೇಕಾದಷ್ಟಿವೆ.
ಪ್ಯಾರಿಸ್‍ನಲ್ಲಿ ಕಾರು ದಟ್ಟಣೆ ಮತ್ತು ವಾಯುಮಾಲಿನ್ಯವನ್ನು ಕಡಿಮೆ ಗೊಳಿಸುವಲ್ಲಿ ಕ್ರಮಗಳನ್ನು ಕೈಗೊಂಡ ಅಲ್ಲಿನ ಮೇಯರ್ ಅನ್ನೆ ಹಿಡಾಲ್ಗೋ ಅವರ ಕ್ರಮ ಇವತ್ತು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ. ಕೀನ್ಯಾದ ಹಳ್ಳಿಗಳಲ್ಲಿ ಬೆಳೆದ ವಾಂಗಾಯ್ ಮಥಾಯ್, ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯು ಆಹಾರ ಮತ್ತು ನೀರಿನ ಭದ್ರತೆಯ ಮೇಲೆ ಮುಖ್ಯವಾಗಿ ಆಹಾರ ತಯಾರಿಸುವ ಮಹಿಳೆಯರ ಮೇಲೆ ಬೀರುತ್ತಿರುವ ಪರಿಣಾಮವನ್ನು ತೀರ ಹತ್ತಿರದಿಂದ ನೋಡುತ್ತ ಬಂದವರು. ನ್ಯಾಷನಲ್ ಕೌನ್ಸಿಲ್ ಆಫ್ ವುಮನ್ ಆಫ್ ಕೀನ್ಯಾದಲ್ಲಿ ಕೆಲಸ ಮಾಡುತ್ತಿದ್ದ ಅವರು ಸಮುದಾಯ ಆಧಾರಿತ ಗಿಡಗಳನ್ನು ನೆಡಲು ಪ್ರಾರಂಭಿಸಿದರು. ಅದು ಗ್ರೀನ್‍ಬೆಲ್ಟ್ ಚಳವಳಿ ಎಂದು ಆಕಾರ ಪಡೆದುಕೊಂಡು ಇಂದು ಆಫ್ರಿಕಾ ದೇಶಾದ್ಯಂತ 50 ಮಿಲಿಯನ್ ಮರಗಳನ್ನು ಬೆಳೆಯಲು ಕಾರಣವಾಗಿದೆ. ಮಾನವ ಹಕ್ಕುಗಳು ಮತ್ತು ಪರಿಸರಕ್ಕೆ ಒಂದು ಕೊಂಡಿಯಾಗಿ ಇವರು ಗುರುತಿಸಿಕೊಂಡ ಕಾರಣಕ್ಕೆ ಇವರಿಗೆ 2004ರಲ್ಲಿ ನೋಬೆಲ್ ಬಹುಮಾನ ಕೂಡ ದೊರೆತಿದೆ.  
ಅದೇರೀತಿ ಭಾರತದಲ್ಲಿ ಬಯೋಡೈವರ್ಸಿಟಿ ಖ್ಯಾತಿಯ ವಂದನಾಶಿವ, ಸ್ವಚ್ಛನೀರಿಗಾಗಿ ಹೋರಾಡುತ್ತಿರುವ ಕಲ್ಪನಾರಮೇಶ್, ಸಾವಯವ ಕೃಷಿಯನ್ನೇ ಅಳವಡಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಲಲಿತಾ ಮುಕ್ತಿ, ಹಾಗೆಯೇ ಕನ್ನಡದಲ್ಲಿ ಬಂದರೆ ಸುನಂದಾ ಜಯರಾಂ, ನಂದಿನಿ ಜಯರಾಂ ಸಾಲುಮರದ ತಿಮ್ಮಕ್ಕ,  ಇನ್ನೂ ಅನೇಕ ಮಹಿಳೆಯರು ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಆದರೆ ಈ ಭೂಮಿದಿನದಲ್ಲಿ ಗೃಹಿಣಿಯರು, ಮಕ್ಕಳೆನ್ನದೇ ಪ್ರತಿಯೊಬ್ಬರೂ ಯೋಚಿಸಬೇಕಾದ, ಕನಿಷ್ಠಪಕ್ಷ ನಮ್ಮ ಬದುಕಿಗೆ ಹಸಿರು ಮಂತ್ರವನ್ನು ಅಳವಡಿಸಿಕೊಳ್ಳುವ ಕುರಿತು ಯೋಚಿಸಿದರೆ, ಅವರ ಮಕ್ಕಳೂ ಆ ನಿಟ್ಟಿನಲ್ಲಿ ಯೋಚಿಸುವಂತಾಗುತ್ತದೆ.


ಒಟ್ಟಾರೆಯಾಗಿ ಮಹಿಳೆ ಯಾವತ್ತೂ ಪರಿಸರದ ಕುರಿತ ಚಿಂತನೆ ಅವರಲ್ಲಿ ರಕ್ತಗತವಾಗಿ ಬಂದದ್ದು ಎಂಬುದು ನಮ್ಮ ಹಿರಿಯರಿಂದ ವೇದ್ಯವಾಗಿದೆ. ನಗರ ಪ್ರದೇಶದಲ್ಲಿರಲಿ, ಹಳ್ಳಿಗಳಲ್ಲೇ ಇರಲಿ, ಮನೆಯ ಸುತ್ತ ಒಂದಷ್ಟು ತರಕಾರಿ, ಗಿಡಗಳನ್ನು ಬೆಳೆಸುವುದಾಗಿರಬಹುದು, ಎಷ್ಟೇ ಜಾಗದ ಕೊರತೆಯಾದರೂ ಕಡೇಪಕ್ಷ ಒಂದು ತುಳಸಿಗಿಡವನ್ನಾದರೂ ನೆಡುತ್ತೇನೆಂದು ಯೋಚಿಸುತ್ತಾಳೆ ಮಹಿಳೆ. ಆದರೆ ಇಂದಿನ ಈ ವಾತಾವರಣ ಬದಲಾವಣೆಯೆಂಬುದು ಅಗಾಧವಾಗಿ ವ್ಯಾಪಿಸಿರುವ, ಅದು ಸೃಷ್ಟಿಸುತ್ತಿರುವ ಅನಾಹುತಗಳನ್ನು ನೋಡಿದರೆ ನಾವು ಮಾಡುವ ಕೆಲಸ ಏನೇನೂ ಸಾಲದು. ನಮ್ಮ ನಡೆಗೆ ಇನ್ನೂ ವೇಗ ಪಡೆದುಕೊಳ್ಳಬೇಕಾಗಿದೆ.
ಹಾಗಾಗಿ ನಾವೇನು ಮಾಡಬಹುದುದೆಂದರೆ…


ಆದಷ್ಟೂ ಕಡಿಮೆ ಪ್ಲಾಸ್ಟಿಕ್ ಬಳಕೆ, ಆದಷ್ಟೂ ಕಾಟನ್ ಬಟ್ಟೆಯನ್ನೇ ತೊಡುವ ಕುರಿತು ಯೋಚನೆ, ನೀರಿನ ಉಳಿತಾಯ, ಮುಖ್ಯವಾಗಿ ಮನೆಮನೆಗೆ ನೀರಿನ ಬಜೆಟ್ ಮಾಡಿಕೊಳ್ಳುವುದರ ಕುರಿತು ಯೋಚನೆ, ತಮ್ಮ ಮಕ್ಕಳು ಹಠಮಾಡುತ್ತಾರೆಂದರೂ ಅವರಿಗೆ ಬೈಕು, ಕಾರುಗಳಲ್ಲಿ ಓಡಾಡಲು ಬಿಡದೇ ನಡಿಗೆ ಮತ್ತು ಸೈಕಲ್‍ಗಳಲ್ಲೇ ಓಡಾಡುವುದು ನಮ್ಮ ಆರೋಗ್ಯಕ್ಕೂ ಮತ್ತು ಪರಿಸರಕ್ಕೂ ಎಷ್ಟು ಉಪಯುಕ್ತ ಎನ್ನುವುದನ್ನು ಮನವರಿಕೆ ಮಾಡಿಕೊಡುವುದು, ಹೀಗೆ ಒಂದಷ್ಟು ಹಸಿರು ತತ್ವಗಳನ್ನು ನಮಗೆ ನಾವೇ ಅಳವಡಿಸಿಕೊಳ್ಳುವಂತಾದರೆ ಒಳಿತು.

ಭಾರತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *