ದೇಶಕಾಲ / ವಿಶ್ವ ಬ್ಯಾಡ್ಮಿಂಟನ್: ಸಿಂಧು ಚಿನ್ನದ ಸಾಧನೆ
ಸ್ವಿಟ್ಸರ್ಲೆಂಡ್ ದೇಶದಲ್ಲಿ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಸ್ವೀಕರಿಸುವ ಅದ್ಭುತ ಗಳಿಗೆಯಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ಕಣ್ಣುಗಳಲ್ಲಿ ಕಂಡ ಹೊಳಪು ಮತ್ತು ಹನಿಗಳಿಗೆ ಹಲವು ಅರ್ಥಗಳುಂಟು. ಹಿಂದಿನ ವರ್ಷಗಳಲ್ಲಿ ಎರಡು ಕಂಚು ಮತ್ತು ಎರಡು ಬೆಳ್ಳಿ ಪದಕಗಳನ್ನು ಪಡೆದಿದ್ದ ಈ ಆಟಗಾರ್ತಿ ನಂತರ ಚಿನ್ನದ ಪದಕದೆಡೆಗೆ ಇಟ್ಟ ಒಂದೊಂದು ಹೆಜ್ಜೆಯೂ ಛಲಗಾರಿಕೆ ಮತ್ತು ದೃಢನಿಶ್ಚಯಗಳ ಪ್ರತೀಕಗಳಾಗಿದ್ದವು. ಆಗಸ್ಟ್ 25 ರಂದು ನಡೆದ ಪಂದ್ಯಾವಳಿಯ ಫೈನಲ್ಸ್ ನಲ್ಲಿ ಕೆಚ್ಚಿನ ಆಟದಿಂದ ಜಪಾನ್ ದೇಶದ ನೊಜೊಮಿ ಒಕುಹರ ಅವರನ್ನು ಸೋಲಿಸಿದ ಸಿಂಧು, ವಿಶ್ವ ಚಾಂಪಿಯನ್ ಆಗುವ ಸಾಧನೆ ಮಾಡಿದ ಭಾರತದ ಮೊತ್ತಮೊದಲ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿ ಹರುಷದ ಹೊಳೆ ಹರಿಸಿದರು. ಈ ಐತಿಹಾಸಿಕ ದಾಖಲೆ ಬರೆದ ಇಪ್ಪತ್ತನಾಲ್ಕು ವರ್ಷದ ಹೈದರಾಬಾದ್ ಹುಡುಗಿ, “ಇದುವರೆಗೆ ನನ್ನ ಮೇಲೆ ಎಸೆಯುತ್ತಿದ್ದ ಟೀಕೆಯ ಬಾಣಗಳಿಗೆ ನಾನು ಬ್ಯಾಡ್ಮಿಂಟನ್ ರ್ಯಾಕೆಟ್ ಮೂಲಕವೇ ಉತ್ತರ ಕೊಟ್ಟಿದ್ದೇನೆ” ಎಂದಿರುವುದು ಅವರ ಆತ್ಮವಿಶ್ವಾಸವನ್ನು ಹೇಳುತ್ತದೆ. “ಇಂದು ನನ್ನ ಅಮ್ಮನ ಹುಟ್ಟಿದಹಬ್ಬ. ಈ ಗೆಲುವು ಅವರಿಗೆ ಕೊಡುಗೆ” ಎಂದು ಈ ಚಿನ್ನದ ಸಾಧನೆಯನ್ನು ಸಿಂಧು ತಾಯಿಗೆ ಅರ್ಪಿಸಿದ್ದಾರೆ. ಇನ್ನು ಸಿಂಧು ಮುಂದಿನ ಗುರಿ 2020 ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಚಿನ್ನದ ಪದಕ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.