ದೇಶಕಾಲ / ವಿಧಾನಸಭೆ ಚುನಾವಣೆಗಳಲ್ಲಿ ಮಹಿಳಾ ಗೆಲುವಿನ ಪ್ರಮಾಣವೇನು?

ಎರಡು ದಶಕಗಳಿಂದ ತ್ರಿಶಂಕು ಸ್ಥಿತಿಯಲ್ಲಿರುವ ಮಹಿಳಾ ಮೀಸಲಾತಿ ಮಸೂದೆಗೆ ಈ ಬಾರಿ ಸಂಸತ್ತಿನಲ್ಲಿ ಅಂಗೀಕಾರ ದೊರೆಯಲು ಹಕ್ಕೊತ್ತಾಯ ಹೆಚ್ಚಬೇಕಾಗಿದೆ. ಲೋಕಸಭೆಯ ಜೊತೆಗೆ ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೂ ನಡೆದ ಚುನಾವಣೆಗಳಲ್ಲಿ ಮಹಿಳೆಯರಿಗೆ ಸಿಕ್ಕ ಗೆಲುವು ಶೇ. 33 ಕ್ಕೆ ದೂರವೇ ಇದೆ. ಇದು ನಿರಾಶಾದಾಯಕ ಸ್ಥಿತಿ ಎಂದು ಪತ್ರಕರ್ತೆ ಮಂಜಿರಾ ಮಜುಂದಾರ್ ಮಾಡಿರುವ ವಿಶ್ಲೇಷಣೆ ಹೇಳುತ್ತದೆ.

ಮಹಿಳಾ ಮೀಸಲಾತಿ ಮಸೂದೆ – ಅಥವಾ ಸಂವಿಧಾನದ 108ನೇ ತಿದ್ದುಪಡಿ ಮಸೂದೆ – ಸಂಸತ್ತಿನಲ್ಲಿ ಮೊದಲು ಮಂಡನೆಯಾದದ್ದು 1996 ರಲ್ಲಿ. ನಂತರ ಬಂದ ಸರ್ಕಾರಗಳು ಮುಂದಿನ ವರ್ಷಗಳಲ್ಲಿ ಅದನ್ನು ಮತ್ತೆ ಮಂಡನೆ ಮಾಡಿದವು. ಅದರಲ್ಲಿ, 2008 ರಲ್ಲಿ ಮಂಡಿತವಾದ ಮಸೂದೆಯು ತನ್ನ ಹಿಂದಿನ ಅವತಾರಗಳ ಹಾಗೇ ಶೇ. 33 ರಷ್ಟು ಸ್ಥಾನಗಳನ್ನು ಲೋಕಸಭೆಯಲ್ಲಿ (ಅಂದರೆ 543 ರಲ್ಲಿ 180) ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಮೀಸಲಿಡುವುದನ್ನು ಪ್ರತಿಪಾದಿಸಿತು. 2010 ರಲ್ಲಿ ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕೃತವಾಯಿತು. ಅದಾಗಿ ಹತ್ತಿರ ಹತ್ತು ವರ್ಷಗಳೇ ಆಗುತ್ತಿದ್ದರೂ ಲೋಕಸಭೆಯ ವಿಚಾರ ಇನ್ನೂ ಕಾದುನೋಡಬೇಕು.
ಈ ನಡುವೆ, ರಾಷ್ಟ್ರದಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೇಳಿಕೊಳ್ಳುವಷ್ಟೇನೂ ಹೆಚ್ಚಾಗಿಲ್ಲ. 15 ನೇ ಲೋಕಸಭೆಯಲ್ಲಿ (2009 -14) 59 ಮಹಿಳೆಯರು ಆಯ್ಕೆಯಾಗಿದ್ದರಿಂದ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಮಹಿಳೆಯರ ಪ್ರಾತಿನಿಧ್ಯ ಶೇ. 11 ರ ಹತ್ತಿರಕ್ಕೆ (ಶೇ. 10.87) ಬಂದದ್ದೇ ದಾಖಲೆಯೆನಿಸಿತು. 16 ನೇ ಲೋಕಸಭೆಯಲ್ಲಿ (2014 -19) 62 ಮಂದಿ ಮಹಿಳೆಯರು ಆಯ್ಕೆಯಾಗಿ, ಅದು ಶೇ. 11 ರಷ್ಟು (ಶೇ. 11.41) ಹೆಚ್ಚಿತು.
17 ನೇ ಲೋಕಸಭೆಗೆ ಇದೀಗ ನಡೆದ ಚುನಾವಣೆಯಲ್ಲಿ ಏನೋ ಭಾರಿ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿರಲಿಲ್ಲ. ಪ್ರಮುಖ ರಾಷ್ಟ್ರೀಯ ಪಕ್ಷಗಳ ಪೈಕಿ, ಬಿಜೆಪಿ ನಿಲ್ಲಿಸಿದ 374 ಅಭ್ಯರ್ಥಿಗಳಲ್ಲಿ 45 ಮಂದಿ (ಶೇ. 12 ರಷ್ಟು) ಮಾತ್ರ ಮಹಿಳೆಯರಿದ್ದರು. ಕಾಂಗ್ರೆಸ್‍ನ 343 ರಲ್ಲಿ 47 (ಶೇ. 13.7 ರಷ್ಟು ಮಾತ್ರ) ಇದ್ದರು. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 42 ರಲ್ಲಿ 17 (ಶೇ. 40 ಕ್ಕಿಂತ ಸ್ವಲ್ಪ ಹೆಚ್ಚು) ಮತ್ತು ಒದಿಶಾದ ಬಿಜು ಜನತಾ ದಳ (ಬಿಜೆಡಿ) 21 ರಲ್ಲಿ 7 (ಶೇ. 33 ಕ್ಕಿಂತ ಸ್ವಲ್ಪ ಹೆಚ್ಚು) – ಹೀಗೆ ಹೆಚ್ಚು ಮಂದಿ ಮಹಿಳೆಯರನ್ನು ಚುನಾವಣೆಗೆ ನಿಲ್ಲಿಸಿದ್ದವು.
ಈ ವರ್ಷ 62 ರಿಂದ 78 ಕ್ಕೆ ಮಹಿಳಾ ಸಂಸದರ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆ ಕಂಡಿದ್ದರೆ ಅದಕ್ಕೆ ಪ್ರಾದೇಶಿಕ ಪಕ್ಷಗಳೇ ಕಾರಣ ಎಂದು ಹೇಳಬಹುದು. 2019 ರ ಚುನಾವಣೆಯಲ್ಲಿ ಮಹಿಳಾ ಸಂಸದರ ಸಂಖ್ಯೆ ಇದುವರೆಗಿನ ಅತ್ಯಧಿಕ ಎಂದು ಕಂಡರೂ, ಅವರ ಪ್ರಾತಿನಿಧ್ಯದ ಪ್ರಮಾಣ ಮೀಸಲಾತಿ ಮಸೂದೆ ಉದ್ದೇಶಿಸಿದ ಶೇ. 33 ಕ್ಕೆ ಹತ್ತಿರದಲ್ಲೂ ಇಲ್ಲ. ಅದು ಇನ್ನೂ ಕೇವಲ ಶೇ. 14 ರಲ್ಲೇ ನಿಂತಿದೆ.
ಈ ವರ್ಷದ ಲೋಕಸಭೆ ಚುನಾವಣೆಯ ಜೊತೆಜೊತೆಗೇ ವಿಧಾನ ಸಭೆ ಚುನಾವಣೆಯೂ ನಡೆದ ರಾಜ್ಯಗಳಾದ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒದಿಶಾ ಮತ್ತು ಸಿಕ್ಕಿಂಗಳಲ್ಲಿ ಶಾಸಕ ಸ್ಥಾನ ಗೆದ್ದ ಮಹಿಳೆಯರ ಸಂಖ್ಯೆ ಎಷ್ಟು ಎನ್ನುವುದನ್ನು ನೋಡುವುದು ಕುತೂಹಲಕರ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಬೇಕೆಂದು 2018 ರ ನವೆಂಬರ್‍ನಲ್ಲೇ ಒದಿಶಾ ವಿಧಾನಸಭೆ ನಿರ್ಧಾರ ಕೈಗೊಂಡಿತ್ತು. ಲೋಕಸಭೆ ಚುನಾವಣೆಯಲ್ಲಿ 21 ರಲ್ಲಿ 7 ಸ್ಥಾನಗಳಲ್ಲಿ ನವೀನ್ ಪಟ್ನಾಯಕ್ ಮಹಿಳೆಯರಿಗೆ ಅವಕಾಶ ಕೊಟ್ಟಿದ್ದರು. ಈಗ ಬಿಜೆಡಿಯ 12 ಮಂದಿ ಹೊಸ ಸಂಸದರಲ್ಲಿ ಐವರು ಮಹಿಳೆಯರಿದ್ದಾರೆ. ಹಾಗೆಯೇ ಪಶ್ವಿಮ ಬಂಗಾಳದಲ್ಲಿ 22 ಟಿಎಂಸಿ ಸಂಸದರಲ್ಲಿ 9 ಮಂದಿ ಮಹಿಳೆಯರಿದ್ದಾರೆ. ಒದಿಶಾದಲ್ಲಿ ಇತರ ಪಕ್ಷಗಳ ಗೊಣಗಾಟದ ನಡುವೆಯೂ ಅಲ್ಲಿನ ವಿಧಾನ ಸಭೆ ಶೇ. 33 ಮೀಸಲಾತಿ ನೀಡುವ ನಿರ್ಧಾರ ಕೈಗೊಂಡಿದ್ದರೂ ಈಗ ಫಲಿತಾಂಶವನ್ನು ನೋಡಿದರೆ, ರಾಜ್ಯದ 147 ಶಾಸಕರಲ್ಲಿ ಕೇವಲ 12 ಮಂದಿ ಮಹಿಳೆಯರು ಇದ್ದಾರೆ. ಹಾಗೆ ನೋಡಿದರೆ ಇದು ಮೊದಲು ಇದ್ದ ಸಂಖ್ಯೆಗಿಂತಾ ಕಡಿಮೆ.
ಒದಿಶಾದಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಜನರ ಸಂಖ್ಯೆ ಕಡಿಮೆ ಇತ್ತು. ಇದಕ್ಕೆ ಅಲ್ಲಿ ಆದ ಫನಿ ಚಂಡಮಾರುತದ ಹಾವಳಿಯೇ ಮುಖ್ಯಕಾರಣವಾಗಿತ್ತು. 147 ರಲ್ಲಿ ಬಿಜೆಡಿ 110 ಸ್ಥಾನಗಳನ್ನು ಗೆದ್ದರೂ, ಅದರಲ್ಲಿ ಕೇವಲ ಇಬ್ಬರು ಮಾತ್ರ ಆ ಪಕ್ಷದಲ್ಲಿ ಗೆದ್ದಿದ್ದಾರೆ. ಮಹಿಳಾ ಪ್ರಾತಿನಿಧ್ಯ ನಿರೀಕ್ಷೆಗಿಂತ ಕಡಿಮೆಯಾಗಿ, ಈಗ ಅಲ್ಲಿ ಬಿಜೆಡಿಯ ಹತ್ತು ಮಂದಿಯ ಸಂಪÀÅಟದಲ್ಲಿ ತುಕುನಿ ಸಾಹು ಎಂಬ ಒಬ್ಬರೇ ಮಹಿಳಾ ಮಂತ್ರಿ ಇದ್ದಾರೆ.
ಅರುಣಾಚಲ ಪ್ರದೇಶದ 60 ಸ್ಥಾನಗಳ ವಿಧಾನಸಭೆಗೆ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸ್ಪರ್ಧೆ ಇತ್ತು. ಇದರಲ್ಲಿ ಮೂವರು ಮಹಿಳೆಯರು ಆರಿಸಿ ಬಂದಿದ್ದಾರೆ. ಅಲ್ಲಿಂದ ಲೋಕಸಭೆಗಿರುವ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಮಹಿಳೆಯರಿಗೆ ಗೆಲವು ದಕ್ಕಲಿಲ್ಲ. ಸಿಕ್ಕಿಂನಲ್ಲಿ ಲೋಕಸಭೆಗೆ ಮಹಿಳೆ ಆರಿಸಿಬರದಿದ್ದರೂ ವಿಧಾನಸಭೆಗೆ ಒಬ್ಬ ಮಹಿಳೆ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದಿಂದ ಆಯ್ಕೆಯಾಗಿದ್ದಾರೆ.
ಆಂಧ್ರಪ್ರದೇಶದಲ್ಲಿ ಈಗ 17 ನೇ ಲೋಕಸಭೆಗೆ ನಾಲ್ವರು ಮಹಿಳೆಯರು ವೈಎಸ್‍ಆರ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಆದರೆ 195 ಸದಸ್ಯರಿರುವ ವಿಧಾನಸಭೆಗೆ 12 ಮಂದಿ ಮಹಿಳೆಯರು ಮಾತ್ರ ಅದೂ ಅದೇ ಪಕ್ಷದಿಂದಲೇ ಪ್ರವೇಶ ಪಡೆದಿದ್ದಾರೆ.
(ದೇಶದ ಪತ್ರಕರ್ತೆಯರ ಸಂಘಟನೆಯಾದ `ನೆಟ್‍ವರ್ಕ್ ಆಫ್ ವಿಮೆನ್ ಇನ್ ಮೀಡಿಯ, ಇಂಡಿಯ’ ಪ್ರಕಟಿಸುವ `ಜೆಂಡರ್, ಮೀಡಿಯ ಅಂಡ್ ಎಲೆಕ್ಷನ್ ವಾಚ್’ ಬ್ಲಾಗ್‍ನಲ್ಲಿರುವ ಲೇಖನದ ಭಾವಾನುವಾದ.)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *