ದೇಶಕಾಲ/ ವಸ್ತ್ರಸಂಹಿತೆ ಪುರುಷಾಧಿಪತ್ಯದ ಹೇರಿಕೆ,ಕೋಮುವಾದ ಪ್ರೇರಿತ ಅಸಹನೆ- ಸಂಜ್ಯೋತಿ ವಿ.ಕೆ.
ಪುರುಷಾಧಿಪತ್ಯದಲ್ಲಿ ಮತ್ತು ಧಾರ್ಮಿಕ ರಾಜಕಾರಣದಲ್ಲಿ ವಸ್ತ್ರವೂ ಅಸ್ತ್ರವೇ – ಅದರಲ್ಲಿ ಯಾವುದೇ ಅನುಮಾನವಿಲ್ಲ. ಮುಸ್ಲಿಂ ಹೆಣ್ಣುಮಕ್ಕಳ ತಲೆ ಮೇಲಿನ ಹಿಜಾಬ್ ಕುರಿತು ಎದ್ದಿರುವ ವಿವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ವಾಸ್ಥ್ಯವನ್ನು ಕದಡುತ್ತಿದೆ. ಈ ಸಮಸ್ಯೆಯಲ್ಲಿ ನಾವು ನೋಡಬೇಕಿರುವ ಬೇರೆ ಒಂದಷ್ಟು ಆಯಾಮಗಳಿವೆ. ಅದು ಸ್ಪಷ್ಟವಾಗಿ ಕೋಮುವಾದ ಪ್ರೇರಿತ ಅಸಹನೆ. ಒತ್ತಡ ಹೇರುವಿಕೆ ಅಸಂವಿಧಾನಿಕ ಮತ್ತು ಆ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿನ ಸ್ಪಷ್ಟವಾದ ಉಲ್ಲಂಘನೆ. ಹಿಜಾಬ್ ಸಹಿತ ಇನ್ಯಾವುದೇ ರೀತಿಯ ಧಾರ್ಮಿಕ/ ಸಾಂಸ್ಕೃತಿಕ ಹೇರಿಕೆಯ ವಿರುದ್ಧದ ಹೋರಾಟದ ಸ್ವರೂಪ ಬೇರೆಯದೇ ಇದೆ . ಆತಂಕಕಾರಿಯಾದ ಪ್ರಸ್ತುತ ವಿವಾದದ ಉದ್ದೇಶ ಮತ್ತು ಲಾಭ ಎರಡೂ ಇರುವುದು ದುಷ್ಟ ರಾಜಕಾರಣಕ್ಕೆ ಮಾತ್ರ.
ಹಿಜಾಬ್ ಅಥವಾ ಇನ್ಯಾವುದೇ ತರಹದ ಧಾರ್ಮಿಕ/ಸಾಂಸ್ಕೃತಿಕ ವಸ್ತ್ರಸಂಹಿತೆ ಖಂಡಿತವಾಗಿಯೂ ಪುರುಷಾಧಿಪತ್ಯದ ಹೇರಿಕೆಯೇ. ಅದರಲ್ಲಿ ಯಾವುದೇ ಅನುಮಾನವಿಲ್ಲ. “ನಾನು ಸ್ವಇಚ್ಛೆಯಿಂದ ತೊಡುತ್ತೇನೆ” ಎಂದು ಮಹಿಳೆಯರೇ ಹೇಳಿದರೂ ಅದು ಎಷ್ಟು ನಿಜ ಮತ್ತು ಎಷ್ಟರ ಮಟ್ಟಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಹಿಷ್ಕಾರಕ್ಕೊಳಪಡುವ, single out ಆಗುವ, ತಿರಸ್ಕರಿಸಲ್ಪಡುವ ಕಷ್ಟದಿಂದ ಪಾರಾಗಲು ಒಪ್ಪಿದ್ದು ಅನ್ನೋದು ಮತ್ತೊಂದು ದೊಡ್ಡ ಚರ್ಚೆ. ಜೊತೆಗೆ ‘ಪಳಗಿಸ್ಪಡುವುದು’ ಎಂಬುದು ಶತಮಾನಗಳಿಂದಲೂ ನಡೆಯುತ್ತಿರುವ ವಿದ್ಯಮಾನ ಎಂಬುದನ್ನು ಮರೆಯದಿರೋಣ. ಅದಿರಲಿ.
ಆದರೆ ಪ್ರಸ್ತುತ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಆಗುತ್ತಿರುವ ಸಮಸ್ಯೆಯಲ್ಲಿ ನಾವು ನೋಡಬೇಕಿರುವ ಬೇರೆ ಒಂದಷ್ಟು ಆಯಾಮಗಳಿವೆ:
1) ಇಂತಹ ಯಾವುದೇ ಹೇರಿಕೆಯನ್ನು ಮಹಿಳೆಯರ ಪರವಾಗಿ ಅವರ ಹಕ್ಕಿಗಾಗಿ ವಿರೋಧಿಸುವುದು ಬೇರೆ, ಆದರೆ ಅದನ್ನು ಸದ್ಯ ವಿರೋಧಿಸುತ್ತಿರುವವರು ಅಂತಹ ಯಾವುದೇ ಕಾರಣಕ್ಕಾಗಿಯಲ್ಲದೇ, ಹಿಜಾಬನ್ನು ಮುಸ್ಲಿಂ ಧಾರ್ಮಿಕ ಸಂಕೇತವಾಗಿರುವುದಕ್ಕಾಗಿಯೇ ವಿರೋಧಿಸುತ್ತಿದ್ದಾರೆ ಮತ್ತು ಅದು ಸ್ಪಷ್ಟವಾಗಿ ಕೋಮುವಾದ ಪ್ರೇರಿತ ಅಸಹನೆ, ಇಸ್ಲಾಮೋಫೋಬಿಯಾ.
ಹೀಗೆ ಹಿಜಾಬ್ ಅನ್ನು ವಿರೋಧಿಸುತ್ತಿರುವವರೇ ತಮ್ಮದೇ ಧರ್ಮದೊಳಗೆ ಮಹಿಳೆಯರ ಮೇಲೆ ಹೇರಲು ಹವಣಿಸುತ್ತಿರುವ ನಿರ್ಬಂಧಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಹಣೆಗೆ ಕುಂಕುಮವಿಡದ, ಪ್ಯಾಂಟು ತೊಡುವ ಅಥವಾ ಇನ್ಯಾವುದೇ ಆಧುನಿಕ ಉಡುಪು ತೊಡುವ ಹೆಣ್ಣುಗಳನ್ನು ಇವರು ನಡೆಸಿಕೊಳ್ಳುತ್ತಿರುವ ರೀತಿ ತಿಳಿದೇ ಇದೆ.
“ಶಿಕ್ಷಣದ ಅವಕಾಶ ತಪ್ಪಿಸುವ ಒತ್ತಡ ಹೇರಿಯಾದರೂ ನಿಮ್ಮನ್ನು ಹಿಜಾಬು ತೊಡದಿರುವಂತೆ ಮಾಡುತ್ತೇವೆ ಅಥವಾ ಹಾಗಲ್ಲವಾದರೆ ನೀವು ಮನೆಗಳಲ್ಲಿಯೇ ಇರುವಂತೆ ಮಾಡುತ್ತೇವೆ. ಒಟ್ಟಾರೆ (ಬಹುಸಂಖ್ಯಾತರಾದ) ನಮ್ಮ ಆಣತಿಯಂತೆ ನೀವು ಎರಡನೇ ದರ್ಜೆಯ ಪ್ರಜೆಗಳಾಗಿ ನಾವು ಹಾಕುವ ಕಟ್ಟಳೆಗನುಗುಣವಾಗಿ ತಗ್ಗಿ ಬಗ್ಗಿ ಬದುಕಿದರೆ ಮಾತ್ರವೇ ನಿಮಗೆ ಬದುಕುವ ಅವಕಾಶ” ಎಂಬುದು ಈ ನಡೆಯ ಸ್ಪಷ್ಟ ಸಂದೇಶ.
ಇಂತಹ ಒತ್ತಡ ಹೇರುವಿಕೆ ಅಸಂವಿಧಾನಿಕ ಮತ್ತು ಆ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿನ ಸ್ಪಷ್ಟವಾದ ಉಲ್ಲಂಘನೆ. ಹಾಗಾಗಿ without second thought ಪ್ರಜ್ಞಾವಂತರಾದವರೆಲ್ಲರೂ ಇದನ್ನು ಖಡಾಖಂಡಿತವಾಗಿ ವಿರೋಧಿಸಲೇಬೇಕಿದೆ ಮತ್ತು ಪ್ರಾಂಶುಪಾಲರಾದಿಯಾಗಿ, ಅಂತಹ ಒತ್ತಡ ಹೇರುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುವ ಅಗತ್ಯವಿದೆ.
ಹಾಗಾಗಿ “ನಾವು ಸ್ತ್ರೀಪರವಾಗಿ ಯೋಚಿಸುತ್ತಿದ್ದೇವೆ, ಪುರುಷರ ಹೇರಿಕೆಯನ್ನು ವಿರೋಧಿಸುತ್ತೇವೆ” ಎಂದಾದರೆ ಅದನ್ನು ಮಾಡಬಹುದಾದ ದಾರಿ ಬೇರೆಯೇ ಇದೆ ಮತ್ತು ಅದು ಹೆಚ್ಚು ಮಾನವೀಯವಾಗಿಯೂ ಜೀವಪರವಾಗಿಯೂ ಇರಬೇಕಿದೆ ಹೊರತು, ಅದಕ್ಕಾಗಿ ನಾವು ಇಂತಹ ಇಸ್ಲಾಮೋಫೋಬಿಯಾ ನಡೆಗಳನ್ನು ಸಮರ್ಥಿಸುವುದಾದರೆ (ಪ್ರಸ್ತುತ ಸಂದರ್ಭದಲ್ಲಿ ಅದನ್ನು ಕಠಿಣವಾಗಿ ಖಂಡಿಸದಿರುವುದು ಸಮರ್ಥಿಸುವುದಕ್ಕೆ ಸಮನಾದ ನಡೆ) ಅದಕ್ಕಿಂತ ಅಪಾಯಕಾರಿಯಾದ ತಪ್ಪಾದ ನಡೆ ಮತ್ತೊಂದಿಲ್ಲ.
2) “ಇದನ್ನು ವಿರೋಧಿಸುವುದೆಂದರೆ ಹಿಜಾಬ್ ನ ಪರವಾಗಿರುವುದೇ?” ಎಂದರೆ ನನ್ನ ಉತ್ತರ ಖಂಡಿತವಾಗಿಯೂ ಅಲ್ಲ. ಮೊದಲೇ ಹೇಳಿದಂತೆ ಹಿಜಾಬ್ ಸಹಿತ ಇನ್ಯಾವುದೇ ರೀತಿಯ ಧಾರ್ಮಿಕ/ ಸಾಂಸ್ಕೃತಿಕ ಹೇರಿಕೆಯನ್ನು ನಾನು ಸ್ಪಷ್ಟವಾಗಿ ವಿರೋಧಿಸುತ್ತೇನೆ. ಆದರೆ ಅದರ ವಿರುದ್ಧದ ಹೋರಾಟದ ಸ್ವರೂಪ ಬೇರೆಯದೇ ಇದೆ. ಹಾಗೆ ಹೇರಿಕೆಗೆ ಒಳಗಾಗುವವರಿಗೆ ಅದರ ಅರಿವು ಮೂಡಿಸುವುದರೊಂದಿಗೆ ಹೇರಿಕೆ ಮಾಡುವವರೊಡನೆ ಸಂವಾದ ಮಾಡುತ್ತಾ ಇಂತಹವುಗಳನ್ನು ಸರಿಪಡಿಸಿಕೊಳ್ಳಬೇಕಿದೆ, ಮತ್ತೆ ಇವೆಲ್ಲ ರಾತ್ರೋರಾತ್ರಿ ವೀರಾವೇಶದ ಭಾಷಣ ಮಾಡುವುದರಿಂದ ಆಗುವಂತದ್ದಲ್ಲ.
ಇಲ್ಲಿ ಮುಖ್ಯವಾಗಿ ನಾವು ಅರ್ಥ ಮಾಡಿಕೊಳ್ಳಬೇಕಿರುವ ವಿಚಾರವೆಂದರೆ ಮನೆಯ ಒಳಗೆ ಒಂದು ವೇಳೆ ಹಿಜಾಬ್ ಧರಿಸಿದರೆ ಮಾತ್ರವೇ ಶಿಕ್ಷಣ ದೊರಕುವ ಒತ್ತಡಕ್ಕೆ ಒಳಗಾಗಿರಬಹುದಾದ ಹುಡುಗಿಯರಿಗೆ, (ಅದು ಬಹುತೇಕ ಹಾಗೆಯೇ ಇರುತ್ತದೆ ಮತ್ತು ಇತ್ತೀಚೆಗೆ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾದಿಂದ ತಂತಮ್ಮ ಧಾರ್ಮಿಕ Identity ಗಳ ಮೂಲಕ ಒಗ್ಗಟ್ಟಾಗಿರಬೇಕಾದ ಒತ್ತಡಕ್ಕೆ ಮನೆಯವರೂ ಒಳಗಾಗಿರಬಹುದಾದ ಸಾಧ್ಯತೆಯೂ ಅಲ್ಲಗಳೆಯುವಂತದಲ್ಲ.) ಹೊರಗೆ ಈ ಒತ್ತಡವನ್ನೂ ಹೇರುವುದು ಅಕ್ಷಮ್ಯ. ಹೊರಗೆ ಆ ಹುಡುಗಿಯರು ಅನಿವಾರ್ಯವಾಗಿ ಹಿಜಾಬನ್ನು ಸಮರ್ಥಿಸಿಕೊಳ್ಳಲೇ ಬೇಕಿರುತ್ತದೆಂಬುದು ಸಹಜವಾಗಿ ಅರ್ಥವಾಗಬೇಕಿರುವ ವಿಚಾರ. NDTV ಯಲ್ಲಿ ಮಾತಾಡಿದ ವಿದ್ಯಾರ್ಥಿನಿಯ ಮಾತುಗಳುನ್ನು ‘ಅವಳ ಮನಸ್ಥಿತಿ’ ಎಂದಾಗಲಿ, ‘ಸಿಲ್ಲಿ’ ಎಂದಾಗಲಿ ಸರಳೀಕರಿಸುವಷ್ಟು ಆರಾಮವಾಗಿದೆಯೇ ಇವತ್ತಿನ ಪರಿಸ್ಥಿತಿ? ಒಂದು ವೇಳೆ ಅವರು ನಿಜಕ್ಕೂ ಹಾಗೆ ನಂಬಿಕೊಂಡಿದ್ದರೂ ಅಂತಹ ನಂಬಿಕೆಗಳ ಹಿಂದಿನ ಅನಿವಾರ್ಯಗಳನ್ನು, ಒತ್ತಡಗಳನ್ನು ಕಡೆಗಣಿಸಿ ಮಾತಾಡುವದು Comfort Zone ನಲ್ಲಿರುವವರ ignorance ಆಗುತ್ತದಲ್ಲವೇ? ಇಂತಹ ನಡೆಗಳು ಅವರಿಗೆ ಮತ್ತಷ್ಟು ತೊಂದರೆಯನ್ನಷ್ಟೇ ಮಾಡಬಹುದೇ ಹೊರತು ಅವರಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ.
ಇಂತಹ ನಮ್ಮ ನಡೆಗಳು ಮೊದಲೇ ಶೋಷಿತರಾದವರ ಪರ ನಿಂತು ದೈರ್ಯ ತುಂಬುವ ಬದಲು ಆ ಶೋಷಣೆಗೂ ಅವರನ್ನೇ ಹೊಣೆಗಾರರನ್ನಾಗಿಸಿ, ಅವರಿಗೇ ಶಿಕ್ಷೆಯ ಭಾರವನ್ನು ಹೊರಿಸಿದಂತಾಗುತ್ತದಷ್ಟೇ.
3) ಈ ಸಂದರ್ಭದಲ್ಲಿ ಬಹುಸಂಖ್ಯಾತ ಪ್ರಜ್ಞಾವಂತರು ಅನುಮಾನಕ್ಕೆಡೆಯಿಲ್ಲದಂತೆ ಹಿಂದುತ್ವವಾದಿಗಳ ಈ ಅಸಂವಿಧಾನಿಕ ನಡೆಯನ್ನು ಖಂಡಿಸಬೇಕಿದೆ. ಅಂತೆಯೇ “ಮುಸ್ಲಿಂ ಪ್ರಜ್ಞಾವಂತರು ತಮ್ಮ ಮನೆಗಳಲ್ಲಿ ತಮ್ಮ ಮತ ಬಾಂಧವರಲ್ಲಿ ಇಂತಹ ಹೇರಿಕೆಯ ವಿರುದ್ಧ ಅರಿವು ಮೂಡಿಸಿ, ತಮ್ಮದೇ ಮಕ್ಕಳ ಭವಿಷ್ಯಕ್ಕಾಗಿಯಾದರೂ ಇಂತಹ ಹೇರಿಕೆಯನ್ನು ಮನೆ/ ಧಾರ್ಮಿಕ ಕಾರ್ಯಗಳಿಗೆ ಸೀಮಿತಗೊಳಿಸಿಕೊಂಡು ಶಾಲೆ/ಕಾಲೇಜುಗಳಂತ ಜಾಗದಲ್ಲಿ ಕೈಬಿಡುವಂತೆ ಮನವೊಲಿಸಬೇಕು” ಎಂಬ ಮಾತುಗಳೂ ಕೇಳಿಬರುತ್ತಿವೆ.
ವೈಯಕ್ತಿಕವಾಗಿ ಮುಸ್ಲಿಂ ಬಾಂಧವರು ತಂತಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಂತಹ ಹೊಂದಾಣಿಕೆ ಮಾಡಿಕೊಳ್ಳುವುದು ಅವರ ವೈಯಕ್ತಿಕ ಆಯ್ಕೆಯಾದರೆ ಅದು ಅರ್ಥ ಮಾಡಿಕೊಳ್ಳಬಹುದಾದಂತದ್ದು. ಆದರೆ ಬಹುಸಂಖ್ಯಾತರು ಈ ರೀತಿಯ ನಡೆಯನ್ನು ಅವರಿಂದ ಈ ಸಂದರ್ಭದಲ್ಲಿ ನಿರೀಕ್ಷಿಸುವುದರ ಹಿಂದಿನ ತರ್ಕವೇ ನನಗೆ ತಪ್ಪಾಗಿ ತೋರುತ್ತದೆ. ಇದು ಹಿಂದುತ್ವವಾದಿಗಳ ತಪ್ಪಾದ, ಅಸಂವಿಧಾನಿಕವಾದ, ಅಹಂಕಾರದ ರಾಜಕೀಯ ಹೇರಿಕೆಗೆ ಒತ್ತಡಕ್ಕೆ ನೀವು ಮಣಿಯಿರಿ ಎಂದು ನಿರೀಕ್ಷಿಸಿದಂತಲ್ಲವೇ? ಪ್ರಭುತ್ವವೇ ಕೋಮುವಾದಿಗಳ ಪರವಾಗಿ ನಿಂತು, ತಾನೂ ಕೋಮುವಾದ ಹಬ್ಬಿಸುತ್ತಿರುವಾಗ, ನಾವು ಗಟ್ಟಿಯಾಗಿ ಅವರ ಜೊತೆಗೆ ನಿಲ್ಲುವ ಬದಲಿಗೆ ಹೀಗೆ ನಿರೀಕ್ಷಿಸುವುದು ಸಾಂವಿಧಾನಿಕ ಹಕ್ಕುಳ್ಳ ನಾಗರಿಕರಾಗಿ, ಮನುಷ್ಯರಾಗಿ, ನಮ್ಮ ಸೋಲೂ ಕೂಡಾ.

4) ಹೇಗೆ ಬಹುಸಂಖ್ಯಾತ ಪ್ರಜ್ಞಾವಂತರು ಈ ಸಂದರ್ಭದಲ್ಲಿ ಮುಸ್ಲಿಮರಿಂದ ಸುಧಾರಣೆಗೆ ಇದು ತಕ್ಕ ಸಮಯ ಎಂದು ನಿರೀಕ್ಷಿಸುವುದು ತಪ್ಪಾದ ನಡೆಯೋ , ಹಾಗೆಯೇ ಈ ಸಂದರ್ಭವನ್ನು ಹಿಡಿದು, ತಮ್ಮದೇ ಹೆಣ್ಣುಮಕ್ಕಳ ಮೇಲಿನ ಇಂತಹ ಹೇರಿಕೆಗಳ ಸಮರ್ಥನೆಗೆ ನಿಂತ ಮುಸ್ಲಿಂ ಗಂಡಸರ ನಡೆ ಸಹ ಖಂಡನಾರ್ಹ. ಹಿಂದೊಮ್ಮೆ ಬುರ್ಖಾ ವಿಚಾರವಾಗಿ ಚರ್ಚೆಗಳು ನಡೆಯುತ್ತಿದ್ದಾಗಲೂ, ಇತರ ವಿಷಯಗಳಲ್ಲಿ ‘ಪ್ರಗತಿಪರತೆ’ ತೋರುವ ಅನೇಕ ಮುಸ್ಲಿಂ ಗೆಳೆಯರು ಬುರ್ಖಾ ಪರವಾಗಿ ಉದ್ದುದ್ದ ವಾದಗಳ ಮಂಡನೆಗೆ ಇಳಿದಿದ್ದರು. ಈಗ ಕೂಡಾ ಅಂತಹದೇ ಸಮರ್ಥನೆಗಳನ್ನು ಹಿಜಾಬಿನ ಪರವಾಗೂ ಕೊಡುತ್ತಿದ್ದಾರೆ. ಅವರು ಈ ಹಿಂದುತ್ವವಾದಿಗಳ ಅಸಂವಿಧಾನಿಕ ನಡೆಯನ್ನು ಪ್ರಶ್ನಿಸುತ್ತಲೇ, ಇದರೊಡನೆ ಬೆರೆಸದೆಯೇ ತಮ್ಮೊಳಗೇ ಇರುವ ಅಸಮಾನತೆಯ ವಿರುದ್ಧವೂ ತಾವು ಅತ್ಮಾವಲೋಕನ ಮಾಡಿಕೊಳ್ಳವ ಮಾತನಾಡಿದರೆ ಅದು ನಂಬಲರ್ಹವಾದ ನಡೆಯಾಗುತ್ತದೆ.
ಮತ್ತೆ ಇದು ಇಲ್ಲಿಗೆ ನಿಲ್ಲುವುದು ಎಂದು ಕೊಳ್ಳುವುದರಷ್ಟು ಮೂರ್ಖತನ ಮತ್ತೊಂದಿಲ್ಲ. ಮಂಗಳೂರಿನ ಹೋಂ ಸ್ಟೇ ಪ್ರಕರಣದಲ್ಲಿ ತಮ್ಮ ‘ಸಂಸ್ಕೃತಿಯ ವ್ಯಾಖ್ಯಾನ’ಕ್ಕೆ ಹೊಂದುತ್ತಿಲ್ಲ ಎಂದು ಹದಿನೇಳರಿಂದ ಇಪ್ಪತ್ತು ಇಪ್ಪತ್ತೆರಡು ವಯಸ್ಸಿನ ಹಣೆಗೆ ತಿಲಕವಿಟ್ಟ ಪೋಕರಿ ಹುಡುಗರು ಬೇರೆಯವರ ಮನೆಯ ಹೆಣ್ಣು ಮಕ್ಕಳ (ಅವರೆಲ್ಲರು ಹಿಂದೂಗಳು ಮತ್ತು ಉಳ್ಳವರ ಮನೆಯ ಮಕ್ಕಳಾಗಿದ್ದರು) ಬಟ್ಟೆ ಎಳೆದಾಡಿ, ಸಾರ್ವಜನಿಕವಾಗಿ ಅವರನ್ನು ಥಳಿಸುತ್ತಾ ವಿಕೃತವಾಗಿ ಸಂತೋಷಿಸುತ್ತಿದ್ದದ್ದನ್ನು ನಾವು ಮರೆತುಬಿಡಲು ಸಾಧ್ಯವೇ? ಈಗ ನಡೆಯುತ್ತಿರುವ ಹಿಜಾಬ್ ಪ್ರಕರಣದ ಹಿಂದಿರುವವರೂ ಇದೇ ಹಿನ್ನೆಲೆಯವರು. ಯಾವುದೇ ಕಾರಣ ಹಿಡಿದು ಇಂತಹವರನ್ನು ಖಂಡಿಸದಿರುವುದು (ಈ ಸಂದರ್ಭದಲ್ಲಿ ಸಮರ್ಥಿಸುವುದಕ್ಕೆ ಸಮ!) ಆತ್ಮಹತ್ಯಾಕಾರಕವಾದದ್ದು ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗಬೇಕಿದೆ. ಹಿಜಾಬ್ ಅಥವಾ ಬುರ್ಖಾವನ್ನು ವಿರೋಧಿಸುವುದು ಮತ್ತು ಈಗಿನ ಸಂದರ್ಭದಲ್ಲಿ ಈ ಹಿಂದುತ್ವವಾದಿ ಹೇರಿಕೆ ಇವರಡೂ ಅಗತ್ಯವಾಗಿ ಬೆರಸಲೇಬಾರದಂತಹ ಬೇರೆ ಬೇರೆ ವಿಚಾರಗಳು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
5) ಕೊನೆಯದಾಗಿ ಆದರೆ ಮುಖ್ಯವಾಗಿ ಗಮನಿಸಬೇಕಾದ ಅಂಶವೊಂದಿದೆ. ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್ (ಬುರ್ಖಾ ಇತ್ಯಾದಿ) ಬಹುತೇಕ ಕಡ್ಡಾಯ ವಸ್ತ್ರಸಂಹಿತೆ. ಅದನ್ನು ತ್ಯಜಿಸುವುದು ಕೆಲವೊಮ್ಮೆ ತಮ್ಮೊಳಗೇ ತಮ್ಮದೇ ನಂಬಿಕೆ ಆಚರಣೆ ಮತ್ತು ಅಭ್ಯಾಸಗಳೊಡನೆ, ಮತ್ತೆ ಬಹುತೇಕ ಮನೆಯವರೊಡನೆ, ಧಾರ್ಮಿಕ ಮುಖಂಡರೊಡನೆ, ತಮ್ಮ ಸಮಾಜದೊಡನೆ ಹೋರಾಡಿ ಪಡೆದುಕೊಳ್ಳಬೇಕಾದ ಸ್ವಾತಂತ್ರ್ಯ. ಅದು ಸುಲಭವೂ ಅಲ್ಲ, ಆರಾಮದಾಯಕವೂ ಅಲ್ಲ. ಅದಕ್ಕೆ ಸಾಕಷ್ಟು ಸಮಯ, ಮನೋಬಲ ಮತ್ತು ಬೆಂಬಲ, ಅನುಕೂಲಕರ ಪರಿಸರದ ಅಗತ್ಯವಿದೆ. ಆದರೆ ಅವರು ಅದನ್ನು ತೊಟ್ಟುಕೊಳ್ಳುವುದನ್ನು ಸುಮ್ಮನೆ ಸಹಿಸಲು ಸುತ್ತಲಿನವರಿಗೆ ಇಂತಹ ಯಾವುದೇ ತೊಡಕಿಲ್ಲ.
ಗಮನಿಸಿ, ಕೇಸರಿ ಶಾಲು ‘ಹಿಜಾಬ್’ನ ಹಾಗೆ ಒಂದು ಕಡ್ಡಾಯ ವಸ್ತ್ರಸಂಹಿತೆ ಅಲ್ಲ ಬದಲಿಗೆ ಅದು ಒಂದು ಅಸ್ತ್ರವಾಗಿ ಬಳಸಲ್ಪಡುತ್ತಿರುವ ವಸ್ತು. ಅದನ್ನು ಹಾಕಲೇ ಬೇಕಾದ ಅನಿವಾರ್ಯತೆ ಆ ಹುಡುಗರಿಗೆ ಇಲ್ಲ. ಅದನ್ನು ಹಾಕದಿದ್ದರೆ ಕಳೆದುಕೊಳ್ಳುವಂತದ್ದು ಇವರಿಗೆ ಏನೂ ಇಲ್ಲ. ಹಾಗಾಗಿ ಇವೆರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಮನಸ್ಥತಿ ಅಪಾಯಕಾರಿ ಮನಸ್ಥಿತಿ.
ನಾನು ಖಂಡಿತವಾಗಿ ಯಾವುದೇ ರೀತಿಯ ವಸ್ತ್ರಸಂಹಿತೆಯನ್ನು ವಿರೋಧಿಸುತ್ತೇನೆ ಮತ್ತು ಅಂತಹ ವಿರೋಧ ಹುಟ್ಟುವುದು ಅದು ವ್ಯಕ್ತಿಸ್ವಾತಂತ್ರ್ಯಕ್ಕೆ ವಿರುದ್ಧವಾದುದು, ಮನುಷ್ಯ ವಿರೋಧಿಯಾದುದು, ಸಹಜತೆಗೆ ವಿರೋಧಿಯಾದುದು ಎಂಬ ಕಾರಣಕ್ಕೆ.
“ಹಾಗಾದ್ರೆ ಬಿಕಿನಿ ಹಾಕ್ಕೊಂಡು ಓಡಾಡಿ, ಬಟ್ಟೆ ಬಿಚ್ಚಾಕಿ ಅಡ್ಡಾಡಿ” ಇಂತ ಹುಚ್ಚುಚ್ಚು ಮಾತುಗಳನ್ನಾಡಿ ನಿಮ್ಮೊಳಗನ್ನು ಬೆತ್ತಲು ಮಾಡಿಕೊಳ್ಳುವವರು ಕಮೆಂಟಿಸದೆ ದೂರ ಉಳಿಯಿರಿ ಎಂದು ‘ಮರ್ಯಾದಾಪೂರ್ವಕ’ ವಾಗಿ ವಿನಂತಿಸುತ್ತೇನೆ.
ಸ್ವಾತಂತ್ರ್ಯ ಎಂದರೆ ನನ್ನದೇ ವಿವೇಚನೆಯಿಂದ, ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ಒತ್ತಡಗಳಿಲ್ಲದೇ ನಾನೇ ಮಾಡಿಕೊಳ್ಳುವ ಆಯ್ಕೆ ಮತ್ತು ಅಂತಹ ಆಯ್ಕೆಯ ಕಾರಣಕ್ಕೆ ಯಾವುದೇ ಅವಕಾಶದಿಂದ ವಂಚಿತಳಾಗದಿರುವ ಮತ್ತು ಹೀನಾಯಗೊಳ್ಳದಿರುವ ಸ್ಥಿತಿ. ಅಷ್ಟೇ. (ಫೇಸ್‍ಬುಕ್ ಬರಹ)
– ಸಂಜ್ಯೋತಿ ವಿ.ಕೆ.
–
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Samayochitha Lekhana. Dhanyavadagalu.