ದೇಶಕಾಲ / ಲೋಕಸಭೆ ಪ್ರವೇಶಿಸಿದ ಎಪ್ಪತ್ತೆಂಟು ಮಹಿಳೆಯರು

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನಡೆದ ಚುನಾವಣೆಗಳನ್ನು ಗಮನಿಸಿದರೆ, ಈ ಬಾರಿ ಅತಿಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಲೋಕಸಭೆ ಸ್ಥಾನಗಳನ್ನು ಗೆದ್ದಿದ್ದಾರೆ. 542 ರಲ್ಲಿ 78 ಸ್ಥಾನಗಳನ್ನು ಅವರು ಗೆದ್ದುಕೊಂಡಿದ್ದರೂ ಈಗ ಅವರ ಪ್ರಾತಿನಿಧ್ಯ ಶೇ. 14 ಕ್ಕೆ ಏರಿದ್ದರೂ ಜಾಗತಿಕ ಮಟ್ಟದಲ್ಲಿ ಇದು ಏನೇನೂ ಅಲ್ಲ. ಮಹಿಳಾ ಮೀಸಲಾತಿ ಮಸೂದೆಗೆ ಹೊಸ ಸರ್ಕಾರ ಮರುಜೀವ ಕೊಡಬಹುದೇ ಎಂದು ದೇಶದ ಮಹಿಳಾ ಸಂಕುಲ ಆಸೆಪಡುತ್ತಿದೆ.

ದೇಶದ ಜನಸಂಖ್ಯೆಯಲ್ಲಿ ಮತ್ತು ಮತದಾರರ ಒಟ್ಟುಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿರುವ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಮಾತ್ರ ಹೆಚ್ಚು ಸಿಗುವುದಿಲ್ಲ. ಯಾವ ರಾಜಕೀಯ ಪಕ್ಷವೂ ಮಹಿಳೆಯರಿಗೆ ಸಮಾನ ಅವಕಾಶ ಕೊಡಬೇಕೆಂದು ಯೋಚಿಸುವುದಿಲ್ಲ. ಮಹಿಳೆಯರಿಗೆ `ಗೆಲ್ಲುವ ಸಾಮಥ್ರ್ಯ’ ಇಲ್ಲವೆಂದೇ ಈ ಪೌರುಷಮಯ ರಾಜಕಾರಣ ಭಾವಿಸುತ್ತದೆ. ಅವರ ಸೂಕ್ತ ಪ್ರಾತಿನಿಧ್ಯಕ್ಕೆ ಕಾನೂನಾತ್ಮಕ ಮೀಸಲಾತಿ ಇಲ್ಲದ ಕಾರಣ, ವಿಧಾನಸಭೆ ಮತ್ತು ಲೋಕಸಭೆಗೆ ಸ್ಪರ್ಧಿಸುವ ಮತ್ತು ಗೆಲ್ಲುವ ಮಹಿಳೆಯರ ಸಂಖ್ಯೆ ಬಹಳ ಕಡಿಮೆ.

ಈ ವರ್ಷ ಹದಿನೇಳನೇ ಲೋಕಸಭೆಯ 542 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ದೇಶದಾದ್ಯಂತ ಒಟ್ಟು 8049 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 716 ಮಹಿಳೆಯರಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು. ಈ ಪೈಕಿ ಈ ಬಾರಿ 78 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಅವರ ಪ್ರಾತಿನಿಧ್ಯ ಶೇ. 14 ಕ್ಕೆ ಏರಿದೆ. ಸ್ವತಂತ್ರ ಭಾರತದಲ್ಲಿ 1952 ರಲ್ಲಿ ನಡೆದ ಚುನಾವಣೆಯಿಂದ ಆರಂಭಿಸಿ ನೋಡಿದರೆ, ಇದು ಅತ್ಯಂತ ಹೆಚ್ಚಿನ ಸಂಖ್ಯೆಯ ದಾಖಲೆಯಾಗಿದೆ. ಇರಬಹುದು, ಆದರೆ ಇದು ಸಮಾಧಾನಕರ ಪ್ರಮಾಣ ಅಲ್ಲವೇ ಅಲ್ಲ. ಇದು ಶೇ. 33 ರ ಪ್ರಾತಿನಿಧ್ಯದ ಅವಶ್ಯಕತೆಯನ್ನು ಇನ್ನಷ್ಟು ಮತ್ತಷ್ಟು ಒತ್ತಿ ಹೇಳುತ್ತಿದೆ.

ಹಿಂದಿನ ಎಲ್ಲ ಚುನಾವಣೆಗಳಿಗಿಂತ ಈ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದರು. ಬಹುತೇಕ ರಾಜಕೀಯ ಪಕ್ಷಗಳು ಹಿಂದಿಗಿಂತಲೂ ಸ್ವಲ್ಪ ಹೆಚ್ಚು ಅವಕಾಶ ಕೊಟ್ಟಿರಬಹುದು. ಒದಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ವಿಶೇಷ ಮುತುವರ್ಜಿ ವಹಿಸಿ ಮಸೂದೆ ಕಾನೂನುಗಳ ಹಂಗಿಲ್ಲದೆ ತಾವೇ ತಮ್ಮ ಪಕ್ಷಗಳಿಂದ ಹೆಚ್ಚು ಮಹಿಳೆಯರಿಗೆ ಅವಕಾಶ ಕೊಟ್ಟು ಮಾದರಿ ನಿರ್ಮಿಸಿದ್ದರು. ಒದಿಶಾದಲ್ಲಿ 21 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಲ್ಲ ಪಕ್ಷಗಳ ಮಹಿಳೆಯರ ಪೈಕಿ 6 ಮಂದಿ ಗೆದ್ದಿದ್ದಾರೆ. ಹಾಗೆಯೇ ಪ. ಬಂಗಾಳದ 42 ಸ್ಥಾನಗಳ ಪೈಕಿ 17 ರಲ್ಲಿ ವಿವಿಧ ಪಕ್ಷಗಳ ಮಹಿಳೆಯರು ಸ್ಪರ್ಧಿಸಿದ್ದು ಅವರಲ್ಲಿ 11 ಮಂದಿ ಗೆಲುವು ಸಾಧಿಸಿದ್ದಾರೆ. ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 8 ಮಂದಿ ಮಹಿಳೆಯರು ಗೆದ್ದಿದ್ದಾರೆ. ಗುಜರಾತ್‍ನಿಂದ 6 ಮಹಿಳೆಯರು ಸಂಸತ್ ಪ್ರವೇಶಿಸಿದ್ದಾರೆ. ಒಟ್ಟಾರೆ ಬಿಜೆಪಿಯ 303 ಸಂಸದರಲ್ಲಿ ಈಗ 41 ಮಂದಿ ಮಹಿಳೆಯರಿದ್ದಾರೆ

ಒಟ್ಟಿನಲ್ಲಿ 17 ನೇ ಲೋಕಸಭೆಯಲ್ಲಿ ಈಗ ಮಹಿಳೆಯರ ಸಂಖ್ಯೆ ಶೇ. 14 ತಲುಪಿದ್ದರೂ ರಾಜ್ಯಸಭೆಯ ಒಟ್ಟು 244 ಸ್ಥಾನಗಳಲ್ಲಿ ಕೇವಲ 28 ಮಂದಿ ಮಹಿಳಾ ಸದಸ್ಯರಿದ್ದಾರೆ. ಆದರೆ ವಿಶ್ವದಲ್ಲಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯವನ್ನು ಪರಿಶೀಲಿಸಿದರೆ, 193 ದೇಶಗಳ ಪೈಕಿ ಭಾರತ 149 ನೇ ಸ್ಥಾನದಲ್ಲಿದೆ ಎನ್ನುವುದು ಅದರ ಮಹಿಳಾ ಸಂವೇದನೆಯನ್ನು ಅರ್ಥ ಮಾಡಿಸುತ್ತದೆ. ಜಾಗತಿಕವಾಗಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯ ಶೇ. 24.3 ರ ಮಟ್ಟದಲ್ಲಿದೆ. ಜಗತ್ತಿನ ದೇಶಗಳಲ್ಲಿ ರುವಾಂಡ ಶೇ. 61 ರಷ್ಟು, ದಕ್ಷಿಣ ಆಫ್ರಿಕಾ ಶೇ. 43, ಬ್ರಿಟನ್ ಶೇ. 32, ಅಮೆರಿಕ ಶೇ. 24 ರಷ್ಟು ಮಹಿಳೆಯರನ್ನು ತಮ್ಮ ಸಂಸತ್ತುಗಳಲ್ಲಿ ಹೊಂದಿವೆ.

ಮಹಿಳೆಯರ ದೃಷ್ಟಿಯಿಂದ ನೋಡಿದರೆ, 2019 ರ ಚುನಾವಣೆಯ ಮತ್ತೊಂದು ಅಂಶ ಗಮನ ಸೆಳೆಯುತ್ತದೆ. ಲೋಕಸಭೆ ಪ್ರವೇಶಿಸುವ ಮೊದಲ ಪಕ್ಷೇತರ ಮಹಿಳಾ ಸದಸ್ಯರಾಗಿ ಮಂಡ್ಯ ಕ್ಷೇತ್ರದಿಂದ ಗೆದ್ದ ಸುಮಲತಾ ಅಂಬರೀಷ್ ಇತಿಹಾಸ ನಿರ್ಮಿಸಿದ್ದಾರೆ.

ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *