ದೇಶಕಾಲ / ಲೈಂಗಿಕ ಜೀತಕ್ಕೆ ಬಿದ್ದ ಜೀವಗಳ ಬಿಡುಗಡೆ ಹೇಗೆ? – ರೂಪ ಹಾಸನ

“ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ”ಯಿಂದ ಒಂದೂವರೆ ವರ್ಷವಿಡೀ ಕರ್ನಾಟಕದ ಮೂಲೆ ಮೂಲೆ ಸುತ್ತಿ ಇನ್ನೇನು ಸರ್ಕಾರಕ್ಕೆ ವರದಿ ಕೊಟ್ಟಾಕ್ಷಣ ಅವರ ನೋವಿಗೆ ಪರಿಹಾರ ಸಿಕ್ಕೇ ಬಿಡುತ್ತದೆಂಬ ಆಶ್ವಾಸನೆಯನ್ನು ನೀಡಿ ಬಂದು ಮೂರು ವರ್ಷಗಳೇ ತುಂಬುತ್ತಾ ಬಂದರೂ ಅವರ ಸ್ಥಿತಿಯಲ್ಲಿ ಒಂದಿಂಚೂ ಬದಲಾವಣೆಯಾಗಿಲ್ಲ!

ಕಡುಬಡತನಕ್ಕೆ, ಅನಕ್ಷರಸ್ಥರಾಗಿದ್ದಕ್ಕೆ, ಕೆಲಸ ಸಿಕ್ಕಿಲ್ಲದ್ದಕ್ಕೆ, ಅತ್ಯಾಚಾರಕ್ಕೊಳಗಾಗಿ ಬೀದಿಗೆ ಬಿದ್ದಿದ್ದಕ್ಕೆ, ಎಳೆಯ ವಯಸ್ಸಿಗೇ ಅರಿವಿಲ್ಲದೇ ಮದುವೆ ಮಾಡಿಸಿಕೊಂಡದ್ದಕ್ಕೆ, ಗಂಡ ಸತ್ತು ಕುಟುಂಬದ ಜವಾಬ್ದಾರಿ ಹೊರಬೇಕಾಗಿ ಬಂದಿದ್ದಕ್ಕೆ, ಯಾರೋ ಕದ್ದೊಯ್ದು ಈ ಜಾಲಕ್ಕೆ ನೂಕಿದ್ದಕ್ಕೆ, ಮಾರಾಟಕ್ಕೊಳಗಾಗಿದ್ದಕ್ಕೆ, ಪ್ರೀತಿಯ ಹೆಸರಿನ
ವಂಚನೆಗೆ ಸಿಕ್ಕಿದ್ದಕ್ಕೆ, ಒಳ್ಳೆಯ ಕೆಲಸದ ಆಸೆಗಾಗಿ ಯಾರದೋ ಬಲೆಗೆ ಬಿದ್ದಿದ್ದಕ್ಕೆ, ಹಿರಿಯ ವೇಶ್ಯೆಯರು ಮನವೊಲಿಸಿ ಮೈ ಮಾರಿಕೊಳ್ಳಲು ನೂಕಿದ್ದಕ್ಕೆ, ಕಾಂಡೋಂ ಹಂಚುವ ಜಾಲದ ಕೈಗೆ ಅನಿರೀಕ್ಷಿತವಾಗಿ ಸಿಕ್ಕಿದ್ದಕ್ಕೆ…….

ಹೀಗೆ ನೂರೆಂಟು ದಯನೀಯ ಅನಿವಾರ್ಯ ಕಾರಣಗಳಿಗಾಗಿ ಸಾವಿರಾರು ಎಳೆಯ ಹೆಣ್ಣುಜೀವಗಳು
ತಳಹಂತದ ವೇಶ್ಯಾವಾಟಿಕೆಯ ಬಂಧನದಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲಾಗದೇ ಉಸಿರುಗಟ್ಟಿ ವಿಲವಿಲ ಒದ್ದಾಡುತ್ತಿರುವ ಸಂಕಟಕ್ಕೆ ಕಿವಿಯಾಗಿ ನಾವು ನೊಂದು ಹೋಗಿದ್ದೆವು. “ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ”ಯಿಂದ ಒಂದೂವರೆ ವರ್ಷವಿಡೀ ಕರ್ನಾಟಕದ ಮೂಲೆ ಮೂಲೆ ಸುತ್ತಿ ಇನ್ನೇನು ಸರ್ಕಾರಕ್ಕೆ ವರದಿ ಕೊಟ್ಟಾಕ್ಷಣ ಅವರ ನೋವಿಗೆ ಪರಿಹಾರ ಸಿಕ್ಕೇ ಬಿಡುತ್ತದೆಂಬ ಆಶ್ವಾಸನೆಯನ್ನು ನೀಡಿ ಬಂದು, ಈಗ್ಯೆ
ಮೂರು ವರ್ಷಗಳೇ ತುಂಬುತ್ತಾ ಬಂದರೂ ಅವರ ಸ್ಥಿತಿಯಲ್ಲಿ ಒಂದಿಂಚೂ ಬದಲಾವಣೆಯಾಗಿಲ್ಲ!

ಇವರನ್ನು ಕದ್ದವರು, ಮಾರಾಟ ಮಾಡಿದವರು, ಇವರನ್ನು ಉಪಯೋಗಿಸಿಕೊಂಡು ವೇಶ್ಯಾವಾಟಿಕೆ ನಡೆಸಿದವರು ನೆಮ್ಮದಿಯಾಗಿ ತಮ್ಮ ಕೆಲಸಗಳನ್ನು ಮುಂದುವರೆಸಿದ್ದಾರೆ! ಎಲ್ಲವೂ ಕನ್ನಡಿಯಲ್ಲಿ ಕಾಣುವಷ್ಟು ನಿಚ್ಚಳವಾಗಿ ಗೋಚರಿಸುತ್ತಿದ್ದರೂ ತಪ್ಪಿತಸ್ಥರು ಸಿಕ್ಕಿಬಿದ್ದಿಲ್ಲ. ಬೀಳುವುದೂ ಇಲ್ಲ! ಅವರಿಗೆ ಶಿಕ್ಷೆಯೂ
ಇಲ್ಲ. ಎಲ್ಲವೂ ಯಥಾಸ್ಥಿತಿ ಮುಂದುವರೆಯುತ್ತದೆ!

ಸರ್ಕಾರವೇ ತನ್ನ ಆರೋಗ್ಯ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯ ಮೂಲಕ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಎನ್‍ಜಿಓಗಳ ಸಹಕಾರದೊಂದಿಗೆ ವಿಸ್ತ್ರತಜಾಲವನ್ನು ಹೊಂದಿ, ಸಮುದಾಯ ಆಧಾರಿತ ಸಂಘಟನೆಗಳ ಮೂಲಕ, ಸಹಭಾಗಿ ಲೈಂಗಿಕ ದಮನಿತರ
[ವೇಶ್ಯಾವಾಟಿಕೆಗೆ ನೂಕಲ್ಪಟ್ಟವರ] ಮೂಲಕ, ವೇಶ್ಯಾವಾಟಿಕೆಯಲ್ಲಿ ತೊಡಗಿರುವವರನ್ನು ಹುಡುಕಿ ನೋಂದಣಿ ಮಾಡಿಸಿ, ಅವರಿಗೆ ಕಾಂಡೋಮ್ ವಿತರಣೆ, ಇದಕ್ಕೆ ಸಂಬಂಧಿಸಿದ ಏಡ್ಸ್, ಹೆಚ್‍ಐವಿ, ಇನ್ನಿತರ
ಗುಪ್ತ ರೋಗಗಳ ನಿರ್ವಹಣೆಯ ತರಬೇತಿ ಮತ್ತು ಚಿಕಿತ್ಸೆ ನೀಡುವ ಮೂಲಕ “ಯಥಾಸ್ಥಿತಿ”ಯನ್ನು ಕಾಯ್ದುಕೊಳ್ಳುತ್ತಾ ‘ಸುರಕ್ಷಿತ’ಗೊಳಿಸುತ್ತಿರುವಾಗಿ ಹೇಳಿಕೊಳ್ಳುತ್ತಿವೆ!

ಈ ಎಲ್ಲಾ ವ್ಯವಸ್ಥೆಗಾಗಿಯೇ ಬಜೆಟ್‍ನಲ್ಲಿ ಲಕ್ಷಾಂತರ ರೂಪಾಯಿಗಳ ಹಣವನ್ನೂ ಸರ್ಕಾರಗಳು ಪ್ರತ್ಯೇಕವಾಗಿ ತೆಗೆದಿರಿಸುತ್ತಿವೆ. ಜೊತೆಗೆ ಕೋಟಿಗಟ್ಟಲೆ ವಿದೇಶಿ ಹಣವೂ ಈ ವ್ಯವಸ್ಥೆಗಾಗಿಯೇ ಹರಿದುಬರುತ್ತಿದೆ. ರೋಗಗಳ ನಿಯಂತ್ರಣದ ಹೆಸರಿನಲ್ಲಿ ಸದ್ದಿಲ್ಲದೇ ಬೇಡಿಕೆ ಮತ್ತು ಪೂರೈಕೆಗಳನ್ನೂ ನಿರ್ವಹಿಸಲಾಗುತ್ತಿದೆ! ಆದರೆ ಅದರಡಿ ನಿತ್ಯ ಎಳೆಯ ಜೀವಗಳ ಬದುಕು ನಜ್ಜುಗುಜ್ಜಾಗುತ್ತಿವೆ.

ಕೋಟಿಗಟ್ಟಲೆ ವಿದೇಶಿ ಹಣ

ಕರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿಯಡಿ, ‘ಸುರಕ್ಷಿತ ಲೈಂಗಿಕತೆ’ಯನ್ನು ಜಾರಿಯಲ್ಲಿಡಲು ನೊಂದಾಯಿತರಾದ 96,878 ಲೈಂಗಿಕ ದಮನಿತರಲ್ಲಿ 18 ವರ್ಷಕ್ಕಿಂತಾ ಕಡಿಮೆ ವಯಸ್ಸಿನವರು 459
ಮಂದಿ ಮತ್ತು 12,185 ದಮನಿತರು 18ರಿಂದ24 ವರ್ಷದವರೆಂದು ವರದಿಯಲ್ಲಿ ದಾಖಲಾಗಿದೆ! ಈ 12,185 ದಮನಿತರಲ್ಲಿ ಹೆಚ್ಚಿನವರು ಅಪ್ರಾಪ್ತರೇ ಆಗಿದ್ದಾರೆ. ಏಕೆಂದರೆ ಒಟ್ಟು ದಮನಿತರಲ್ಲಿ 50% ಹೆಣ್ಣುಮಕ್ಕಳು ಸರಾಸರಿ 14-16 ವಯಸ್ಸಿನಲ್ಲೇ ವೇಶ್ಯಾವಾಟಿಕೆಗೆ ನೂಕಲ್ಪಟ್ಟಿರುವುದೂ ವರದಿಯಲ್ಲಿ ದಾಖಲಾಗಿದೆ. ಆದರೂ ಇವರ ವಯಸ್ಸನ್ನು ಅಧ್ಯಯನಕ್ಕೊಳಪಡಿಸುವ ಯಾವ ಕೆಲಸವನ್ನೂ ಆರೋಗ್ಯ ಇಲಾಖೆ ಇದುವರೆಗೆ ಮಾಡಿಲ್ಲವೆಂಬುದೇ ವಿಪರ್ಯಾಸ.

ಹೀಗಾಗಿ ಸರ್ಕಾರದ ‘ಸುರಕ್ಷಿತ ಲೈಂಗಿಕತೆ’ಗಾಗಿನ ಕಾಂಡೊಂ ಹಂಚಿಕೆಯ ಜಾಲದಡಿಯೇ ದಾಖಲಾದ ಸಾವಿರಾರು ಅಪ್ರಾಪ್ತ ವಯಸ್ಸಿನ ಬಾಲೆಯರು, ವೇಶ್ಯಾವಾಟಿಕೆಯಲ್ಲಿ ಅನಿವಾರ್ಯವಾಗಿ ತೊಡಗಿಕೊಂಡಿದ್ದಾರೆ. ಮತ್ತು ನಿತ್ಯ ಹಲವು ಬಾರಿ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ! ಇದೆಲ್ಲವೂ ದಾಖಲಾದವರ ಅಂಕಿ ಸಂಖ್ಯೆಯಷ್ಟೇ! ದಾಖಲಾಗದ ಲಕ್ಷಗಳು ಅದೆಷ್ಟೋ! ಇದರಾಚೆಗೆ ಕಾಂಡೋಂ ವಿತರಣೆಯ ಸಾಂಸ್ಥಿಕ ವ್ಯವಸ್ಥೆಯ
ಮೂಲಕವೇ ಮಹಿಳೆ ಮತ್ತು ಅಪ್ರಾಪ್ತ ಬಾಲೆಯರು ಈ ಮಾರಾಟ ಜಾಲದೊಳಗೆ ಬೀಳುತ್ತಿರುವ ನಿದರ್ಶನಗಳಿವೆ. ‘ಕೆಲಸ ಕೊಡುತ್ತೇವೆ ಬನ್ನಿ’ ಎಂದು ಕಾಂಡೋಂ ಹಂಚಲು ಎನ್‍ಜಿಓ, ಸಿಬಿಓಗಳು,
ಪೀರ್‍ವರ್ಕರ್‍ಗಳು, ಮುಗ್ಧ ಎಳೆಯ ಹೆಣ್ಣುಮಕ್ಕಳನ್ನು ನಿರಂತರವಾಗಿ ಈ ದಂಧೆಯೊಳಗೆ ದಾಖಲು ಮಾಡುವುದೂ
19%ರಷ್ಟು ನಡೆಯುತ್ತಿರುವ ಅತ್ಯಂತ ಆತಂಕಕಾರಿಯಾದ ಅಂಶವೂ ಅಧ್ಯಯನದಿಂದ ಸಾಬೀತಾಗಿದೆ.

ವೇಶ್ಯಾವಾಟಿಕೆ ನಡೆಸಿ ಬದುಕಲು ಸಾಧ್ಯವಿಲ್ಲದ ವಯಸ್ಸಾದ 10%ರಷ್ಟು ಲೈಂಗಿಕ ದಮನಿತರೂ, ಹೊಸ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಯೊಳಗೆ ಕರೆತಂದು ತಾವೇ ಮಧ್ಯಸ್ಥಿಕೆವಹಿಸಿ ಇವರನ್ನಿಟ್ಟುಕೊಂಡು
ವ್ಯವಹಾರ ನಡೆಸುತ್ತಿರುವ ಭೀಕರ ಸತ್ಯವೂ ಅಧ್ಯಯನದ ವೇಳೆ ಹೊರಬಿದ್ದಿದ್ದು ಕ್ರೌರ್ಯದ ಪರಮಾವಧಿಯನ್ನು
ತಲುಪಿರುವ ನಾಗರಿಕ ಸಮಾಜಕ್ಕೆ ಉದಾಹರಣೆಯಂತಿದೆ.

ಈ ವೇಶ್ಯಾವಾಟಿಕೆಯ ಜಾಲದಲ್ಲಿ ಬಿದ್ದಿರುವ 45% ಹೆಣ್ಣುಮಕ್ಕಳು ಬಾಲ್ಯವಿವಾಹವಾದವರು! ಅಪ್ರಾಪ್ತ ಹೆಣ್ಣುಮಕ್ಕಳ ಮದುವೆಯನ್ನುಸಮರ್ಪಕವಾಗಿ ನಿಯಂತ್ರಿಸದ ಸಮಾಜ ಮತ್ತು ಸರ್ಕಾರದ ಆಡಳಿತ
ಯಂತ್ರದ ಗುರುತರ ಲೋಪದಿಂದ ಬಡ ಹೆಣ್ಣುಮಕ್ಕಳು ‘ಅನಿವಾರ್ಯ’ವಾಗಿ ಮೈ ಮಾರಿಕೊಳ್ಳುವ ಸ್ಥಿತಿಗೆ ಬಂದಿರುವುದರ ಜವಾಬ್ದಾರಿಯನ್ನು ಹೊರುವವರ್ಯಾರು? ಸಂಕಟವಾಗುತ್ತದೆ.

ಹೆಣ್ಣುಮಕ್ಕಳ ಕಳ್ಳಸಾಗಣಿಕೆ ಇಂದು ಒಂದು ದೊಡ್ಡ ಮಾಫಿಯಾ ಆಗಿ ಬೆಳೆದಿದ್ದು, ಅದರಲ್ಲಿ ಕರ್ನಾಟಕ ಮೂರನೆಯ ದೊಡ್ಡ ರಾಜ್ಯವೆಂದು ದಾಖಲಾಗಿದೆ. ಆರೋಗ್ಯ ಇಲಾಖೆಯಡಿ ನೊಂದಾಯಿತರಾದ
45.9% ರಷ್ಟು ವೇಶ್ಯಾವಾಟಿಕೆಯ ಜಾಲದಲ್ಲಿ ಬಿದ್ದವರನ್ನು ಕದ್ದೊಯ್ದು ಈ ದಂಧೆಗೆ ನೂಕಲಾಗಿದೆ ಎಂಬ ಅಂಶವೇ ಹೆಣ್ಣುಮಕ್ಕಳಿಗೆ ನಮ್ಮ ರಾಜ್ಯ ಎಷ್ಟು ಅಸುರಕ್ಷಿತವಾಗಿದೆ ಎಂಬುದರ ಸೂಚನೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಕಣ್ಮರೆಯಾದ 16,367 ಬಾಲಕಿಯರಲ್ಲಿ 1499 ಬಾಲಕಿಯರು ಪತ್ತೆಯೇ ಆಗಿಲ್ಲ! ಹಾಗೇ
ಕಾಣೆಯಾದ 38,120 ಮಹಿಳೆಯರಲ್ಲಿ 4199 ಮಹಿಳೆಯರಿನ್ನೂ ಪತ್ತೆಯಾಗಬೇಕಿದೆ! ಇವರು ಪೊಲೀಸ್ ಇಲಾಖೆಯ ‘ಶಾಶ್ವತ ನಾಪತ್ತೆ’ಯೆಂಬ ಕಪ್ಪುಪಟ್ಟಿಯ ಕಡತದಲ್ಲಿ ದಾಖಲಾಗಿ ಧೂಳು ಹಿಡಿಯುತ್ತಾರೆ!

ಇವು ದಾಖಲಾದ ಅಂಕಿಅಂಶಗಳಷ್ಟೇ. ಮರ್ಯಾದೆಗಂಜಿ ದಾಖಲಾಗದವುಗಳ ಸಂಖ್ಯೆ ಇದರ ಮೂರು-
ನಾಲ್ಕು ಪಟ್ಟು ಹೆಚ್ಚಿರುವ ಸಾಧ್ಯತೆಯಿದೆ. ಕಳ್ಳಸಾಗಾಣಿಕೆಯಿಂದ ಪಾರಾಗಿ ಬಂದ 33.5% ಹೆಣ್ಣುಮಕ್ಕಳು ಕೂಡ ಸಾಮಾಜಿಕ ಕಳಂಕ ಹಾಗೂ ಸರ್ಕಾರದ ಅಸಮರ್ಪಕ ಪುನರ್ವಸತಿ ವ್ಯವಸ್ಥೆಯ ಕಾರಣಕ್ಕೆ ಮತ್ತೆ ದಂಧೆಗೇ ಬಿದ್ದಿರುವುದನ್ನೂ ಅಧ್ಯಯನ ವರದಿ ಸ್ಪಷ್ಟಪಡಿಸಿದೆ. ಅತ್ಯಾಚಾರಕ್ಕೊಳಗಾಗಿ ಬೀದಿಗೆ ಬೀಳುವ 30%
ಹೆಣ್ಣುಮಕ್ಕಳೂ ಇದೇ ಕಾರಣಕ್ಕೆ ವೇಶ್ಯಾವಾಟಿಕೆಗೆ ಸಿಲುಕುತ್ತಾರೆಂಬ ಅಂಶ, ನಿಜಕ್ಕೂ ಸರ್ಕಾರಗಳಿಗೆ ಮಾನವಿದ್ದರೆ, ನಾಚಿ ತಲೆ ತಗ್ಗಿಸಬೇಕಾದ ವಿಚಾರ. ಎಲ್ಲೆಡೆ ಮಾನವಹಕ್ಕುಗಳ ಬಗೆಗೆ ಗಂಟಲು
ಹರಿಯುವಂತೆ ಬೊಬ್ಬೆ ಹೊಡೆಯಲಾಗುತ್ತಿದೆ! ‘ಹೆಣ್ಣು’ ‘ಮಕ್ಕಳು’ ಈ ಹಕ್ಕುಗಳ ವ್ಯಾಪ್ತಿಯಲ್ಲಿ ಬರುವುದೇ ಇಲ್ಲವೇ? ಎಂದು ನಾವು ಸಂಕಟದಿಂದ ಗಟ್ಟಿಸಿ ಕೇಳಬೇಕಾಗಿದೆ.

ನಾಪತ್ತೆಯಾದ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಅಡ್ಡಗಳಲ್ಲಿ ಸಿಕ್ಕಿದರೂ ಇದರ ಹಿಂದಿರುವ ವ್ಯವಸ್ಥಿತವಾದ ಅಕ್ರಮ ಹೆಣ್ಣುಮಕ್ಕಳ ಸಾಗಾಣಿಕಾ ಜಾಲವನ್ನು ಭೇದಿಸಲು ಪೊಲೀಸ್ ಇಲಾಖೆಗೆ ಏಕೆ ಸಾಧ್ಯವಾಗುತ್ತಿಲ್ಲ? ಎಲ್ಲವೂ ಗೊತ್ತಿದ್ದೂ ಹೆಣ್ಣುಮಕ್ಕಳನ್ನು ಹುಡುಕುವ, ರಕ್ಷಿಸುವ, ಮತ್ತೆ ಅವರನ್ನು ಯಥಾಸ್ಥಿತಿಯಲ್ಲಿ ಉಳಿಸುವ ಕಣ್ಣಾಮುಚ್ಚೆ ನಾಟಕವನ್ನು ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ಆಡುತ್ತಿದೆ. ಹೆಣ್ಣಿನ ದೇಹವನ್ನು
ವಸ್ತುವನ್ನಾಗಿಸಿಕೊಂಡು ವ್ಯಾಪಾರದ ಆಟವಾಡುತ್ತಿರುವವರಿಗೆ ನಾಪತ್ತೆಯಾದ ಹೆಣ್ಣುಮಕ್ಕಳೇ ಬಂಡವಾಳ ಹೂಡಿಕೆಯಾಗಿ ಬಳಕೆಯಾಗುತ್ತಿದ್ದಾರೆ. ಅವರಿಂದ ಕೋಟಿಗಟ್ಟಲೆ ವಹಿವಾಟು ನಡೆಸಲಾಗುತ್ತಿದೆ. ನಿರ್ಲಜ್ಜ ವ್ಯವಸ್ಥೆಗೆ, ಪ್ರಭುತ್ವಕ್ಕೆಹೃದಯವಿದ್ದರೆ….ಇದು ಮನುಷ್ಯತ್ವದ ಕಟ್ಟಕಡೆಯ ಮಜಲು ಎಂದು ದ್ರವಿಸುವಂತೆ ಹೇಗೆ ಅರ್ಥಮಾಡಿಸುವುದು?

ಕರ್ನಾಟಕ ಸರ್ಕಾರ ನೇಮಿಸಿದ್ದ ಸಮಿತಿಯಿಂದ ನಾವು ಸಲ್ಲಿಸಿದ “ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ವರದಿ-2017” ನಮ್ಮ ವ್ಯವಸ್ಥೆಯ ಇಂತಹ ಮುಚ್ಚಿಟ್ಟ ಭೀಕರ ಕ್ರೌರ್ಯದ ಸಾವಿರಾರು ಮುಖಗಳನ್ನು ಅನಾವರಣಗೊಳಿಸುತ್ತದೆ. ಈ ಹೆಣ್ಣುಮಕ್ಕಳು ದಮನಿತರಲ್ಲಿ ದಮನಿತರು ಎಂಬುದಕ್ಕೆ ವರದಿಯ ಪ್ರತಿ ಪುಟವೂ ಸಾಕ್ಷಿ ನೀಡುತ್ತದೆ! ಒಂದು ಲಕ್ಷದಷ್ಟು ದಾಖಲಾದವರಲ್ಲಿ ಶೇಕಡಾ 72ರಷ್ಟು ಮಂದಿ ಸ್ವತಃ ಈ ದಂಧೆಯಿಂಧ
ಹೊರಬಂದು ಪುನರ್ವಸತಿಗೊಳ್ಳಲು ಬಯಸಿದ್ದಾರೆಂಬುದು ಗಮನಾರ್ಹ. ವಾರ್ಷಿಕ 733 ಕೋಟಿ ರೂಪಾಯಿಗಳನ್ನು ಈ ದಮನಿತರನ್ನು ಹೊರತರಲು ಮೀಸಲಿಡಬೇಕೆಂದು ವರದಿಯಲ್ಲಿ ಒತ್ತಾಯಿಸಲಾಗಿತ್ತು. ಹೀಗಿದ್ದೂ, ಈಗ್ಗೆ ಮೂರು ಬಜೆಟ್‍ಗಳು ಮಂಡನೆಯಾದರೂ ಐದು ಪೈಸೆಯನ್ನೂ ಇವರ ಶ್ರೇಯೋಭಿವೃದ್ಧಿಗಾಗಿ ತೆಗೆದಿರಿಸಿಲ್ಲವೆಂಬುದು ದುರಂತ.

ನಿರ್ಲಕ್ಷ್ಯ ನಿಜಕ್ಕೂ ಅಕ್ಷಮ್ಯ!

ಪಂಚೇಂದ್ರಿಯಗಳನ್ನು ಕಳೆದುಕೊಂಡ ಸರ್ಕಾರ ಜರ್ಜರಿತವಾಗಿ ಬಿಡುಗಡೆಗೆ ಹಾತೊರೆಯುತ್ತಿರುವ ಈ ಹೆಣ್ಣುಮಕ್ಕಳ ಚೀತ್ಕಾರವನ್ನು ಕೊನೆಗೂ ಆಲಿಸಲಿಲ್ಲ. ಲೈಂಗಿಕ ಜೀತದ ನರಕಕ್ಕೆ ಅನಿವಾರ್ಯವಾಗಿ ಬಿದ್ದ ಸಾವಿರಾರು ಅಪ್ರಾಪ್ತ ಬಾಲೆಯರನ್ನಾದರೂ ಹೊರತೆಗೆಯಲು ತಕ್ಷಣವೇ ಕ್ರಮ ಕೈಗೊಳ್ಳಲಾರದಷ್ಟು
ನಿರ್ಲಕ್ಷ್ಯ ನಿಜಕ್ಕೂ ಅಕ್ಷಮ್ಯ!

ಈ ಅಧ್ಯಯನ ಸಮಿತಿಯ ಅಧ್ಯಕ್ಷರಾದ ಅಂದಿನ ಕಾಂಗ್ರೆಸ್ ಸರ್ಕಾರದ ವಿಧಾನ ಪರಿಷತ್ ಸದಸ್ಯರಾಗಿದ್ದ ಜಯಮಾಲಾ ಅವರು ತಮ್ಮದೇ ಸರ್ಕಾರಕ್ಕೆ ಒತ್ತಡ ತಂದು ಈ ದಮನಿತರ ಬಿಡುಗಡೆಗಾಗಿ ಪ್ರಯತ್ನಿಸಲಿಲ್ಲ. ಕೊನೆಗೆ 2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿಯೂ ತಾವೇ ಸರ್ಕಾರಕ್ಕೆ ಸಲ್ಲಿಸಿದ ವರದಿಯ ಆದ್ಯತೆಯ ಅಂಶಗಳ ಅನುಷ್ಠಾನಕ್ಕೂ ಮನಸು ಮಾಡಲಿಲ್ಲ!
ಈ ಬಾಲೆಯರನ್ನೂ ಒಳಗೊಂಡ ದಮನಿತರು ಲೈಂಗಿಕಜೀತದಲ್ಲೇ ಮುಂದುವರೆಯುವಂತೆ ಮಾಡಿರುವ ಈ
ಹೀನಸ್ಥಿತಿಗೆ ಯಾರನ್ನು ಶಿಕ್ಷಿಸೋಣ?

72 ವರ್ಷ ಕಳೆದಿರುವ ಸ್ವತಂತ್ರ ಭಾರತದಲ್ಲಿ ಬಡತನ, ನಿರಕ್ಷರತೆ, ನಿರುದ್ಯೋಗದಂತಹ ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ಮೂಲಮಟ್ಟದಿಂದ ನಿರ್ಮೂಲನೆಗೊಳಿಸಲು ಅಸಮರ್ಥವಾದ ಸರ್ಕಾರಗಳನ್ನೇ? ಹೆಣ್ಣುಮಕ್ಕಳ ರಕ್ಷಣೆ, ಅವರ ಪುನರ್ವಸತಿ, ಯೋಗಕ್ಷೇಮ…. ತಮಗಿದೆಲ್ಲ ಸಂಬಂಧವೇ ಇಲ್ಲದಂತೆ ತಣ್ಣಗಿರುವ ನಿರ್ಲಜ್ಜ ಆಡಳಿತಯಂತ್ರವನ್ನೇ? ತಮ್ಮ ಸುಖಕ್ಕಾಗಿ ಹೆಣ್ಣನ್ನು ಇಂತಹ ಲೈಂಗಿಕಜೀತಕ್ಕಿಳಿಸಿ ಅದರ ‘ಯಥಾಸ್ಥಿತಿ’
ಮುಂದುವರಿಕೆಯಿಂದ ಹೊಟ್ಟೆ ಹೊರೆದುಕೊಳ್ಳಲು ಸಜ್ಜುಗೊಂಡಿರುವ ಬಂಡವಾಳಶಾಹಿ ದರಿದ್ರ ವ್ಯವಸ್ಥೆಯನ್ನೇ? (ಚಿತ್ರ ಕೃಪೆ : ಡಿಎನ್‍ಎ ಪತ್ರಿಕೆ)

  • ರೂಪ ಹಾಸನ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *