ದೇಶಕಾಲ/ ಲಾಕ್ ಡೌನ್ ಬಿದ್ದರೂ ಇದ್ದಲ್ಲಿಯೇ ಬದುಕು – ಭಾರತಿ ಹೆಗಡೆ
ಕೋವಿಡ್-19 ಇಂದಾಗಿ ಇದ್ದಕ್ಕಿದ್ದಹಾಗೆ ಸಂಭವಿಸಿದ ಲಾಕ್‍ಡೌನ್‍ನಿಂದಾಗಿ ಸಾಕಷ್ಟು ಕೂಲಿ ಕಾರ್ಮಿಕರು ನಗರ ತೊರೆದರು. ನೂರಾರು ಮೈಲಿ ದೂರ ನಡೆದೇ ಹೋದರು. ಇನ್ನಿಲ್ಲದ ರೀತಿಯ ಬವಣೆಪಟ್ಟರು. ಆದರೆ ಕೆಲಸಕ್ಕಾಗಿ ವಲಸೆ ಹೋಗದೆ ಇದ್ದಲ್ಲಿಯೇ ಬದುಕು ಕಟ್ಟಿಕೊಂಡು ಈ ಲಾಕ್‍ಡೌನ್‍ನ ಪರಿಣಾಮ ಬಾಧಿಸದೆ ಸುಸ್ಥಿರ ಬದುಕು ಕಟ್ಟಿಕೊಂಡವರ ಕುರಿತ ವಿವರ ಇಲ್ಲಿದೆ.
ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಅನೇಕ ಕೂಲಿ ಕಾರ್ಮಿಕರು, ವಲಸೆ ಬಂದ ಕಾರ್ಮಿಕರೆಲ್ಲ ನಗರ ಪ್ರದೇಶಗಳಿಂದ ನೂರಾರು ಮೈಲಿ ದೂರ ನಡೆದೇ ತಮ್ಮ ತಮ್ಮ ಊರುಗಳನ್ನು ತಲುಪಿರುವುದನ್ನು ನೋಡಿದ್ದೇವೆ. ಆದರೆ ವಲಸೆಯೇ ಬೇಡವೆಂದು ಇದ್ದಲ್ಲಿಯೇ ತಮ್ಮ ವೃತ್ತಿಯನ್ನು ಪ್ರಾರಂಭಿಸಿ ಅದರಲ್ಲೇ ಆದಾಯಗಳಿಸುತ್ತಿರುವ ಅನೇಕರು ಇಂದು ತಮ್ಮ ಕೆಲಸವನ್ನು ಬೇರೆಡೆಗೆ ವರ್ಗಾಯಿಸಿಕೊಂಡೂ ಜೀವನಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲದೆ ಬದುಕುತಿದ್ದಾರೆ.
ಇವರೆಲ್ಲ ಸೌರಚಾಲಿತ ಜೀವನೋಪಾಯದ ಯಂತ್ರಗಳಿಂದ ಕೆಲಸಕ್ಕಾಗಿ ನಗರಕ್ಕೆ ವಲಸೆ ಹೋಗದೆ ತಮ್ಮ ನೆಲದಲ್ಲಿಯೇ ಬದುಕನ್ನು ಕಟ್ಟಿಕೊಂಡವರು. ಈ ಪೈಕಿ ಓಡಿಶಾದ ಹೊಲಿಗೆ ಹಳ್ಳಿ, ಮೇಘಾಲಯದ ಶ್ರವಣದೋಷವುಳ್ಳವರಿಗೆ ಕೆಲಸ ಮಾಡುವ ಫೆರಾಂಡೋ ಕೇಂದ್ರ, ಕರ್ನಾಟಕದ ಪ್ರೀತಿ ಜೋಶಿ ಹಾಗು ಕೊಪ್ಪಳದ ಯಲಬುರ್ಗಾ ಜಿಲ್ಲೆಯ ಅನೇಕ ಮಹಿಳೆಯರು ಇಲ್ಲಿ ಮಾದರಿಯಾಗಿ ನಿಲ್ಲುತ್ತಾರೆ.
ಓಡಿಶಾದ ಬಾಲಾಸುರ್ ಜಿಲ್ಲೆಯ ಗೋವರ್ಧನ ಪುರವೆಂಬ ಹಳ್ಳಿಯಿದೆ, ಇಡೀ ಹಳ್ಳಿಗೆ ಹಳ್ಳಿಯೇ ಹೊಲಿಗೆಯನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದೆ. ನೂರಾರು ವರ್ಷಗಳಿಂದ ಇಲ್ಲಿನ ಜನ ಹೊಲಿಗೆಯಿಂದಲೇ ಬದುಕು ಕಟ್ಟಿಕೊಂಡವರು.
ಜೋಗಿ ಸಮುದಾಯವೇ ಹೆಚ್ಚಿರುವ ಈ ಊರಿನಲ್ಲಿ ಇಲ್ಲಿ 180 ಮನೆಗಳಿದ್ದು, ಇವರೆಲ್ಲರೂ ಸಾಂಪ್ರದಾಯಿಕವಾದ ಹೊಲಿಗೆ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದರು. ಕೃಷಿ ಚಟುವಟಿಕೆಗಳಲ್ಲಿ ಕೆಲವರು ತೊಡಗಿಕೊಂಡಿದ್ದರೂ ಮಳೆಯಾಧಾರಿತ ಕೃಷಿಯಾದ್ದರಿಂದ ಅನಿಶ್ಚಿಯದ ಮಳೆಯಿಂದ ಮತ್ತು ನೀರಿನ ಕೊರತೆಯಿಂದಾಗಿ ಅವರು ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಅವರೆಲ್ಲ ಮೊರೆ ಹೋಗಿದ್ದು ಈ ಹೊಲಿಗೆ ವೃತ್ತಿಗೆ. ಹೆಚ್ಚಾಗಿ ಮಹಿಳೆಯರೇ ಈ ವೃತ್ತಿಯನ್ನು ಅವಲಂಬಿಸಿದ್ದರು. ಸಮೀಪದ ಬಾಲಾಸುರ್ ಜಿಲ್ಲೆಯ ಶಾಲಾ ಮಕ್ಕಳ ಸಮವಸ್ತ್ರಗಳು ಮತ್ತು ಮಕ್ಕಳಿಗೆ ರೆಡಿಮೇಡ್ ಉಡುಪುಗಳನ್ನು ಪೂರೈಸುತ್ತಿದ್ದರು. ಉತ್ತಮ ಮಾರುಕಟ್ಟೆಯನ್ನೂ ಹೊಂದಿದ್ದ ಈ ಹಳ್ಳಿಯಲ್ಲಿ ಅನಿಶ್ಚಿತವಾದ ವಿದ್ಯುತ್ ಪೂರೈಕೆ ಮತ್ತು ಪವರ್ ಕಟ್‍ನಿಂದಾಗಿ ಅವರ ಉದ್ಯಮ ಹಿನ್ನಡೆ ಅನುಭವಿಸುತ್ತಿತ್ತು. ಇದರಿಂದ ಸರಿಯಾದ ವೇಳೆಗೆ ಉತ್ಪನ್ನವನ್ನು ಪೂರೈಸಲು ಕಷ್ಟವಾಗುತ್ತಿತ್ತು. ಇಂಥ ಸಂದರ್ಭದಲ್ಲಿ ಅವರಿಗೆ ಸೆಲ್ಕೋ ಫೌಂಡೇಶನ್‍ನ ನೆರವಿನಿಂದ ಸೌರಶಕ್ತಿ ಚಾಲಿತ ಹೊಲಿಗೆಯಂತ್ರವನ್ನು ಪಡೆದರು. ಜಲೇಶ್ವರ್‍ನ ಸಿಂಡಿಕೇಟ್ ಬ್ಯಾಂಕ್ ಈ ಸಮುದಾಯದ 10 ಮನೆಗಳಿಗೆ ಸಾಲ ಸೌಲಭ್ಯ ನೀಡಿತು.
ಈಗ ಲಾಕ್‍ಡೌನ್‍ನಿಂದಾಗಿ ಶಾಲೆಗಳು ಮತ್ತು ಇತರ ಅಂಗಡಿಗಳು ಮುಚ್ಚಿರುವುದರಿಂದ ಅವರ ಕೆಲಸ ಮತ್ತು ಇದರಿಂದ ಬರುವ ಆದಾಯ ಕಡಿಮೆಯಾಗಬೇಕಿತ್ತು, ಆದರೆ ಹಾಗಾಗಲಿಲ್ಲ. ಲಾಕ್‍ಡೌನ್ ಎಂದ ಕೂಡಲೇ ಇವರೆಲ್ಲ ತಮ್ಮ ಕೆಲಸದ ರೀತಿಯನ್ನು ಬದಲಾಯಿಸಿಕೊಂಡರು. ಉಡುಪುಗಳ ಬದಲಾಗಿ ಮಾಸ್ಕ್‍ಗಳನ್ನು ಹೊಲಿಯತೊಡಗಿದರು. ಬಾಲಾಸುರ್‍ನ ಮುಖ್ಯ ಜಿಲ್ಲಾಕಚೇರಿ, ಜಿಲ್ಲಾ ಗ್ರಾಮೀಣಾಭಿವೃದ್ಧೀ ಕಚೇರಿ ಮತ್ತು ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆಗಳಿಗೆ ಮಾಸ್ಕ್‍ಗಳನ್ನು ಹೊಲಿದು ಪೂರೈಕೆ ಮಾಡುತ್ತಿದ್ದಾರೆ.
ಪ್ರತಿದಿವಸ ಅಂದಾಜು 150-200 ಮಾಸ್ಕ್‍ಗಳನ್ನು ಇಲ್ಲಿ ಹೊಲಿಯುತ್ತಿದ್ದಾರೆ. ಒಂದೊಂದು ಮನೆಯಲ್ಲಿ 3-4 ಜನ ಕೆಲಸಮಾಡುತ್ತಲೇ ಇರುತ್ತಾರೆ. ಅವರ ಬಳಿ ಮೊದಲೇ ಈ ಮಾಸ್ಕ್‍ಗಳಿಗೆ ಬೇಕಾದ ಕಚ್ಛಾವಸ್ತುಗಳ ಸಂಗ್ರಹ ಇದ್ದವು. ಹಾಗಾಗಿ ಇವರಿಗೆ ಕಚ್ಛಾವಸ್ತುಗಳ ಸಮಸ್ಯೆಯಾಗಲಿಲ್ಲ. ಜೊತೆಗೆ ಇವರಲ್ಲಿ ಅನೇಕರು ಸೌರಚಾಲಿತ ಹೊಲಿಗೆ ಯಂತ್ರಗಳನ್ನು ಬಳಸುತ್ತಿದ್ದು, ಈಗ ಕರೆಂಟ್ ಹೋಗುತ್ತದೆಂಬ ಭಯ ಅವರಿಗಿಲ್ಲ.”ಮೊದಲಿಗಿಂತಲೂ ಈಗ ಬೇಗನೆ ಹೊಲಿಯಲು ಸಾಧ್ಯ, ಕಡಿಮೆ ಕೆಲಸ, ಹೆಚ್ಚು ಆದಾಯ’ ಎನ್ನುತ್ತಾರೆ ಇಲ್ಲಿನ ಸುನಂದಾ ಮೊಹಾಂತಿ.
ಈಗವರು ದೊಡ್ಡ ಮಟ್ಟದಲ್ಲಿ ಮಾಸ್ಕ್‍ಗಳನ್ನು ತಯಾರಿಸಿ ಸ್ಥಳೀಯರಿಗೆ, ಸಮೀಪದ ಹಳ್ಳಿಗರಿಗೆ, ಆರೋಗ್ಯ ಕೇಂದ್ರಗಳಿಗೆ ಮತ್ತು ಆರೋಗ್ಯ ಇಲಾಖೆಗಳಿಗೆ ಪ್ರತಿದಿವಸ ಪೂರೈಸುತ್ತಿದ್ದು, ತಮಗೆ ಪ್ರತಿದಿವಸ ಕೆಲಸ ಸಿಕ್ಕ ಖುಷಿಯಿದೆ ಎನ್ನುತ್ತಾರೆ ಈ ಹಳ್ಳಿಯ ದಮಯಂತಿ ನಾಥ್, ಝರಾನಾ ಮತ್ ಮುಂತಾದ ಮಹಿಳೆಯರು.
ಕೊಪ್ಪಳದ ರೀ ಯೂಸಬಲ್ ಮಾಸ್ಕ್
ಕೊಪ್ಪಳದ ಯಲಬುರ್ಗಾ ಜಿಲ್ಲೆಯ ಚೆಕ್‍ಪೋಸ್ಟ್‍ಗಳಲ್ಲಿ, ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮರುಬಳಕೆಗೆ ಯೋಗ್ಯವಾಗಿರುವಂಥ ಮಾಸ್ಕ್‍ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಇದೆಲ್ಲ ಹೇಗೆ ಸಾಧ್ಯವಾಯಿತೆಂದರೆ, ಕೊಪ್ಪಳದ ಯಲಬುರ್ಗಾ ಜಿಲ್ಲೆಯಲ್ಲಿ ಒಟ್ಟು 40 ಮಹಿಳೆಯರಿಗೆ ಮಾಸ್ಕ್ ಹೊಲಿಯಲು ನೀಡಲಾಗಿದೆ. ಸೆಲ್ಕೋದ ವ್ಯವಹಾರ ಬಂಧುವಾಗಿದ್ದ ದೊಡ್ಡಬಸಪ್ಪ ಹಕಾರಿ ಮತ್ತು ಸೆಲ್ಕೋ ಸಂಸ್ಥೆಯ ಕೊಪ್ಪಳ ಬ್ರಾಂಚ್ ಮ್ಯಾನೇಜರ್ ಮಂಜುನಾಥ್ ಮತ್ತು ವೆಸ್ತಾಸ್ ವಿಂಡ್ ಟೆಕ್ನಾಲಜಿ ಅವರ ಯೋಚನೆಯಿದು.
ಮಾಸ್ಕ್ ಅನ್ನು 6 ಗಂಟೆಗಳ ಕಾಲ ಮಾತ್ರ ಬಳಸಬೇಕು. ನಂತರ ಅದನ್ನು ಬದಲಾಯಿಸಬೇಕು ಎನ್ನಲಾಗುತ್ತದೆ. ಹೀಗೆ ಬದಲಾಯಿಸುವುದರಿಂದ ಸಾಕಷ್ಟು ಖರ್ಚಾಗುತ್ತದೆಂದು ಬಗೆದು ಈ ಮರುಬಳಕೆಗೆ ಯೋಗ್ಯವಾಗಿರುವಂಥ ಮಾಸ್ಕ್‍ಗಳನ್ನೇಕೆ ತಯಾರಿಸಬಾರದು ಎಂದು ಚಿಂತಿಸಿ ಇಲ್ಲಿನ ಒಟ್ಟು 40 ಮಹಿಳೆಯರಿಗೆ ಈ ಕೆಲಸ ಕೊಟ್ಟಿದ್ದೀವಿ. ಕಾಟನ್ ಬಟ್ಟೆಗಳನ್ನು ನಾವೇ ತಂದು ಅವರಿಗೆ ಒದಗಿಸುತ್ತೇವೆ. ಅದನ್ನು ಹೊಲಿದುಕೊಡುತ್ತಾರೆ. 10 ದಿವಸಗಳೊಳಗಾಗಿ 600 ಮಾಸ್ಕ್‍ಗಳನ್ನು ಹೊಲಿಯುವ ಗುರಿ ನಮ್ಮದು ಎನ್ನುತ್ತಾರೆ ಸೆಕೋ ಸಂಸ್ಥೆಯ ಕೊಪ್ಪಳ ಬ್ರಾಂಚ್‍ನ ಮ್ಯಾನೇಜರ್ ಮಂಜುನಾಥ್.
ಈಗ ಇವರಿಗೆಲ್ಲ ಬೇರೆ ಉದ್ಯೋಗನೂ ಇರಲಿಲ್ಲ. ಇದು ತುಂಬ ಒಣ ಪ್ರದೇಶವಾದ್ದರಿಂದ ಕೃಷಿ ಚಟುವಟಿಕೆಗಳನ್ನು ಮಾಡುವುದೂ ಕಷ್ಟ. ಹಾಗಾಗಿ ಇವರಿಗೂ ಒಂದು ಉದ್ಯೋಗಸಿಕ್ಕಂತಾಗುತ್ತದೆಂದು ಯೋಚಿಸಿದ್ವಿ. ಇದಕ್ಕಾಗಿ ಜಿಲ್ಲಾ ವರಿಷ್ಠಾಧಿಕಾರಿಯವರ ಒಪ್ಪಿಗೆಯನ್ನೂ ಪಡೆದು, ಮುಂದುವರಿದ್ವಿ ಎಂದೂ ಹೇಳುತ್ತಾರೆ.
ಪೊಲೀಸ್ ಚೆಕ್‍ಪೋಸ್ಟ್‍ಗಳಲ್ಲಿ ಎಲ್ಲ ರೀತಿಯ ಜನರೂ ಬರುತ್ತಾರೆ. ಅವರನ್ನೆಲ್ಲ ತಪಾಸಣೆ ಮಾಡುವುದೇ ದೊಡ್ಡ ಕೆಲಸ. ಅಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ, ಪಂಚಾಯತ್ ರಾಜ್ ಇಲಾಖೆ, ಗ್ರಾಮಪಂಚಾಯ್ತಿ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರೆಲ್ಲ ಇರುತ್ತಾರೆ. ಅವರಿಗೆಲ್ಲ ಈ ಮರುಬಳಕೆಗೆ ಯೋಗ್ಯವಾಗಿರುವ ಮಾಸ್ಕ್‍ಗಳನ್ನು ನೀಡಲಾಗಿದೆ. ಈ ಮಾಸ್ಕ್‍ಗಳನ್ನು 12 ಗಂಟೆಗಳ ಕಾಲ ಬಳಸಬಹುದು, ನಂತರ ಇದನ್ನು ತೊಳೆದು ಮತ್ತೆ ಬಳಸಬಹುದು, ಇದು ನಿಜಕ್ಕೂ ಜನರಿಗೆ ಅನುಕೂಲಕರ ಎಂದು ತಾಲೂಕಾ ವೈದ್ಯಾಧಿಕಾರಿಗಳಾದ ಡಾ.ಮೋಹನ್ ರಾಜ್ ಹೇಳಿದ್ದಾರೆ..
ಮಾಸ್ಕ್ ಹೊಲಿಯುತ್ತಿದ್ದ ಉಮಾ ಎನ್ನುವವರ ಪತಿ ಡ್ರೈವರ್ ಆಗಿದ್ದು ಅವರು ಬೇರೆ ಊರಿನಲ್ಲಿದ್ದಾರೆ. ಲಾಕ್‍ಡೌನ್‍ನಿಂದಾಗಿ ಅವರಿಗೆ ಬರಲಾಗುತ್ತಿಲ್ಲ. ಉಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಇರುವ ಉಮಾ ಅವರಿಗೆ ಮೊದಲಿನಿಂದಲೂ ಹೊಲಿಗೆಯೇ ಜೀವನಕ್ಕೆ ಆಧಾರವಾಗಿತ್ತು.
ಆದರೆ ಈ ಲಾಕ್‍ಡೌನ್‍ನಿಂದಾಗಿ ಯಾವುದೇ ರೀತಿಯ ಕೆಲಸ ಇರಲಿಲ್ಲ. ಆದಾಯವೂ ಇರಲಿಲ್ಲ. ಹಾಗಾಗಿ ಈ ಮಾಸ್ಕ್ ಹೊಲಿಯಲು ತೊಡಗಿದೆವು. 9 ಇಂಚು ಅಗಲ, 7 ಇಂಚು ಉದ್ದ ಮತ್ತು ಸೈಡ್‍ಗೆ 4 ಇಂಚು ಬರುವಂತೆ ಹೊಲಿಯುತ್ತೇವೆ’ ಎನ್ನುವ ಉಮಾದೇವಿ ಇಬ್ಬರು ಗಂಡುಮಕ್ಕಳಿದ್ದಾರೆ. ಹೊಲಿಗೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈಗ ಹೊಲಿಗೆ ಹೊಲಿಸಲೂ ಯಾರೂ ಬರುತ್ತಿಲ್ಲ, ಹೊಲಿಗೆ ತರಗತಿ ನಡೆಸುತ್ತಿದ್ದೆ. ಅದಕ್ಕೂ ಯಾರೂ ಬರುತ್ತಿಲ್ಲ. ಈ ಸಮಯದಲ್ಲಿ ಈ ಮಾಸ್ಕ್ ತಯಾರಿಕೆ ನಮ್ಮ ಬದುಕಿಗೆ ಆಧಾರ ಸಿಕ್ಕಂತಾಗಿದೆ ಎನ್ನುತ್ತಾರೆ.
ಈ ಜಿಲ್ಲೆಯ ಕೆಲವು ಮಹಿಳೆಯರು ಸೌರಚಾಲಿತ ಹೊಲಿಗೆಯಂತ್ರಗಳನ್ನಿಟುಕೊಂಡಿದ್ದು ಅವರು ಕೂಡ ಈ ಮಾಸ್ಕ್ ಹೊಲಿಯುವುದರಲ್ಲಿ ತೊಡಗಿಕೊಂಡಿದ್ದಾರೆ. ಈ ಕರೆಂಟ್ ಹೋದ ಸಮಯದಲ್ಲೂ ನಾವು ಮಾಸ್ಕ್ ತಯಾರಿಸಿ ಹಂಚುತ್ತಿದ್ದೇವೆ, ಜೊತೆಗೆ ಸೌರಚಾಲಿತ ಹೊಲಿಗೆ ಯಂತ್ರ ಮತ್ತು ಕಾಟನ್ ಬಟ್ಟೆಯ ಮಾಸ್ಕ್ ಎರಡೂ ಕೆಲಸ ಪರಿಸರಕ್ಕೆ ಪೂರಕವಾಗಿದೆ ಎಂಬುದೇ ನಮಗೆ ಹೆಮ್ಮೆ ಎನ್ನುತ್ತಾರೆ ರತ್ನವ್ವ ಕರಡಿ, ಸುಮಂಗಲಾ ಜಗ್ಗಾಲ್, ಮಲ್ಲಮ್ಮ ಲುಂಬರ್, ಹುಸೇನ್‍ಬೀ ಮುಂತಾದವರು.
ಪ್ರೀತಿ ಜೋಶಿಯ ಲಂಚ್‍ಬಾಕ್ಸ್
ನಿಜಕ್ಕೂ ಈ ಲಾಕ್‍ಡೌನ್‍ನಿಂದಾಗಿ ನಾನು ಮರಳಿ ಮನೆಗೆ ಬಂದಿರುವುದು É ಖುಷಿ ಎನಿಸುತ್ತಿದೆ ಎಂದು ಹೇಳುತ್ತಾರೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಪ್ರೀತಿ ಜೋಶಿ.
ನಿಜ, ಅರ್ಚಕರಾಗಿದ್ದ ಪತಿಯ ಅನಾರೋಗ್ಯದ ಸಮಯದಲ್ಲಿ ಅವರ ಬದುಕಿಗೆ ಆಧಾರವಾಗಿದ್ದು, ಆಹಾರ ತಯಾರಿಕೆ. ಮೊದಮೊದಲು ಲಂಚ್‍ಬಾಕ್ಸ್‍ಗಳನ್ನು ಸಮೀಪದ ಬ್ಯಾಂಕ್ ನೌಕರರಿಗೆ ಕೊಡುತ್ತಿದ್ದರು. ಅದರೊಂದಿಗೆ ಇವರು ಕೊಡುವ ಸಾರು, ಹುಳಿಯ ರುಚಿಗೆ ಮನಸೋತ ಜನ ಸಾರಿನ ಪುಡಿ, ಸಾಂಬಾರು ಪುಡಿ, ಚಟ್ನಿಪುಡಿಗಳನ್ನು ಮಾಡಿಕೊಡಲು ಕೇಳಿದರು. ಅದನ್ನೆಲ್ಲ ಮಾಡಿಕೊಟ್ಟಮೇಲೆ ನಿಧಾನಕ್ಕೆ, ಹಪ್ಪಳ, ಸಂಡಿಗೆ, ರೊಟ್ಟಿ, ವಿವಿಧ ಉಂಡಿಗಳು, ಸಿಹಿತಿಂಡಿಗಳನ್ನೆಲ್ಲ ಮಾಡಿಕೊಡುತ್ತ ಜೋಶಿ ಹೋಂ ಪ್ರಾಡಕ್ಟ್ಸ್ ಪ್ರಾರಂಭಿಸಿಬಿಟ್ಟರು. “ಇದು ಈಗ ಶುರುವಾಗಿ 13-14 ವರ್ಷ ಆಯ್ತು. ಈ ಮೊದಲು ಲಂಚ್‍ಬಾಕ್ಸ್ ಕೊಡ್ತಾ ಇದ್ದೆ. ಜೊತೆಗೆ ಏನಾದ್ರು ತಿಂಡಿ ಮಾಡಿ ಹಾಕ್ತಾ ಇದ್ದೆ. ಜನ ತಾನಾಗೇ ಮನೆ ಹತ್ರ ಬರ್ತಾ ಇದ್ದರು. ಆ ಜನಪ್ರಿಯತೆ ನೋಡಿ ಹೋಂ ಪ್ರಾಡಕ್ಟ್ಸ್ ಅಂತ ದೊಡ್ಡ ಮಟ್ಟದಲ್ಲಿ ಶುರುಮಾಡಿದೆ. ಆದರೆ ಈ ಲಾಕ್‍ಡೌನ್‍ನಿಂದ ಮತ್ತೆ ಮನೆಗೇ ಬಂದು ಒಯ್ಯುವಂತಾಗಿದೆ’ ಎನ್ನುವ ಪ್ರೀತಿ ಜೋಶಿ ಅವರ ಜೀವನಕ್ಕೆ ಆಹಾರವೇ ಆಧಾರ. ಹಳಿಯಾಳದ ಬಸವರಾಜಗಲ್ಲಿಯಲ್ಲಿ ಮೊದಲು ಲಂಚ್‍ಬಾಕ್ಸ್ ಉದ್ಯಮ ಪ್ರಾರಂಭಿಸಿದರು. ಅಲ್ಲೆಲ್ಲ ಜಾಸ್ತಿ ಜೋಳದ ರೊಟ್ಟಿ ಮತ್ತು ಚಪಾತಿಗಳೇ ಹೆಚ್ಚಿರುವುದರಿಂದ ಕೈಯಿಂದ ರೊಟ್ಟಿ ತಯಾರಿಸುವುದು ಕಷ್ಟವಾಗಿ ಸೌರಚಾಲಿತ ರೊಟ್ಟಿಯಂತ್ರವನ್ನು ಕೊಂಡರು. ನಂತರ ಇದಕ್ಕಾಗಿ ಹಿಟ್ಟು ಮಾಡಿಸಲು ಗಿರಣಿಯ ಸಮಸ್ಯೆಯಾಗುತ್ತಿತ್ತು. ಕರೆಂಟ್ ಎಷ್ಟೋ ಸಲ ಕೈ ಕೊಡುವ ಕಾರಣಕ್ಕೆ ಸರಿಯಾದ ಸಮಯದಲ್ಲಿ ಹಿಟ್ಟು ಇವರಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಅವರು ಒಂದು ಸೌರಚಾಲಿತ ಹಿಟ್ಟಿನ ಗಿರಣಿಯನ್ನೂ ಕೊಂಡರು. ಇದರಿಂದ ಅವರಿಗೆ ಕರೆಂಟ್ ಹೋಗುವ ಭಯವಿಲ್ಲದೆ ಉದ್ಯಮ ನಿರಾತಂಕವಾಗಿ ನಡೆಯತೊಡಗಿತು.
ಅನಾರೋಗ್ಯದಿಂದಾಗಿ ಈಗ 3 ವರ್ಷದ ಹಿಂದೆ ಪತಿ ನಿಧನರಾದರು. ಇಬ್ಬರು ಮಕ್ಕಳ ತಾಯಿಯಾದ ಪ್ರೀತಿ ಜೋಶಿ ಬದುಕಿನ ಬಂಡಿಯನ್ನು ಏಕಾಂಗಿಯಾಗಿ ಎಳೆಯುತ್ತಿರುವಾಗಲೇ ಕೋವಿಡ್-19 ನ ಲಾಕ್‍ಡೌನ್‍ನಿಂದಾಗಿ ಎಲ್ಲಿ ತನ್ನ ಉದ್ಯಮಕ್ಕೆ ಧಕ್ಕೆಯಾಗುವುದೋ ಎಂದು ಹೆದರಿದ್ದರು. ಆದರೆ ಈ ಲಾಕ್‍ಡೌನ್ ಸಮಯದಲ್ಲಿ ಕೂಡ ಅವರ ಉದ್ಯಮಕ್ಕೆ ಯಾವುದೇ ಧಕ್ಕೆ ಬಂದಿಲ್ಲ. ಯಾಕೆಂದರೆ ಊರಿನಲ್ಲಿ ಹೋಟೆಲ್‍ಗಳು, ಖಾನಾವಳಿಗಳೆಲ್ಲ ಬಂದ್ ಆಗಿರುವ ಕಾರಣಕ್ಕೆ, ಪೊಲೀಸರು, ಆರೋಗ್ಯ ಇಲಾಖೆಯವರು ಮತ್ತು ಬ್ಯಾಂಕ್‍ನವರೆಲ್ಲ ಇವರ ಮನೆಗೇ ಬಂದು ಊಟ ಒಯ್ಯುತ್ತಿದ್ದಾರೆ. ಇದರಿಂದ ಪ್ರೀತಿ ಜೋಶಿಯವರ ಮನೆ ಊಟಕ್ಕೆ ಬೇಡಿಕೆ ಹೆಚ್ಚಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಪ್ರತಿ ದಿವಸ 25-30 ತಿಂಡಿ ಹೋಗತ್ತೆ, ಮಧ್ಯಾಹ್ನ ಊಟ, ಸಂಜೆ 20-25 ಊಟ ಹೋಗ್ತದೆ. ಜಾಸ್ತಿ ರೊಟ್ಟಿ, ಚಪಾತಿಗಳನ್ನೇ ಒಯ್ತಾರೆ. ಅದಲ್ಲದೆ ಹಿರಿಯರಿರುವ ಮನೆಯಲ್ಲಿ ಹಿರಿಯರಿಗಾಗಿ ಊಟ ಒಯ್ಯುವುದರಿಂದ ನನಗೆ ಯಾವುದೇ ತೊಂದರೆಯಾಗುತ್ತಿಲ್ಲ, ಮೊದಲಿನಂತೆಯೇ ಕೆಲಸವಿದೆ. ಜೊತೆಗೆ ಸೌರಚಾಲಿತ ರೊಟ್ಟಿಯಂತ್ರ ಇಟ್ಟುಕೊಂಡಿರುವುದರಿಂದ ಕರೆಂಟ್ ಇಲ್ಲದಿರುವಾಗಲೂ ನನ್ನ ಉದ್ಯಮಕ್ಕೆ ಯಾವುದೇ ರೀತಿಯ ಭಂಗ ಬಂದಿಲ್ಲ ಎಂದು ನೆಮ್ಮದಿಯಿಂದ ಹೇಳುತ್ತಾರೆ ಪ್ರೀತಿ ಜೋಶಿ.
ಮದುವೆ ಸೀಸನ್‍ನಲ್ಲಿ ಖಡಕ್ ರೊಟ್ಟಿ, ಉಂಡಿಗಳು, ಚಟ್ನಿಪುಡಿಗಳು, ಹಪ್ಪಳ, ಸಂಡಿಗೆ, ಬಾಳಕ ಮೆಣಸಿನಕಾಯಿಗಳಿಗೆ ಆರ್ಡರ್ ಭಾಳ ಬರ್ತಾ ಇದ್ವು, ಈಗ ಅವೆಲ್ಲ ಇಲ್ಲ. ಆದರೆ ಜೀವನಕ್ಕೆ ಯಾವ ರೀತಿಯ ತೊಂದರೆಯೂ ಇಲ್ಲದಂತೆ ಕೆಲಸ ನಡೆಯುತ್ತಾ ಇದೆ ಎನ್ನುತ್ತಾರೆ. ಇನ್ನೊಂದೆಂದರೆ ಮೊದಲಾಗಿದ್ದರೆ ತರಕಾರಿ ತರಲು ಅಂಗಡಿಗೆ ಹೋಗಬೇಕಾಗಿತ್ತು. ಈಗ ಆ ಕಷ್ಟವೂ ಇಲ್ಲ. ಮನೆಮುಂದೆಯೇ ತರಕಾರಿಗಳೂ ಬರುತ್ತಿದೆ. ಹಾಗಾಗಿ ಮತ್ತೂ ಅನುಕೂಲಾಗಿದೆ ಎನ್ನುತ್ತಾರೆ ಪ್ರೀತಿ ಜೋಶಿ.
ಬದುಕನ್ನು ಏಕಾಂಗಿಯಾಗಿ ಎದುರಿಸಬೇಕಾಗಿ ಬಂದಾಗಲೇ ಅವರು ಎಚ್ಚೆತ್ತುಕೊಂಡು ದೇಶಪಾಂಡೇ ಫೌಂಡೇಶನ್‍ನ ರುಡ್‍ಸೆಟ್ ನವರಿಂಧ ಬೇಕರಿ ತರಬೇತಿ ಪಡೆದರು. ನಂತರ ಧರ್ಮಸ್ಥಳ ಗ್ರಾಮೋದ್ಯೋಗ ಸಂಘದವರಿಂದ ಸಾಲಸೌಲಭ್ಯ ಪಡೆದು, ಸೆಲ್ಕೋ ಫೌಂಡೇಶನ್‍ನಿಂದ ಸೌರಚಾಲಿತ ರೊಟ್ಟಿಯಂತ್ರ ಮತ್ತು ಹಿಟ್ಟಿನ ಗಿರಣಿಯನ್ನು ಪಡೆದರು. ಸೌರಚಾಲಿತ ಝೆರಾಕ್ಸ್ ಮಷಿನ್ ಮತ್ತು ಫ್ರಿಜ್ ಕೂಡ ಕೊಂಡಿದ್ದರು. ಆದರೆ ಈ ಲಾಕ್‍ಡೌನ್‍ನಿಂದಾಗಿ ಅವಕ್ಕೆ ಕೆಲಸ ಇಲ್ಲ ಸದ್ಯಕ್ಕೆ, ಆದರೆ ರೊಟ್ಟಿ ಮತ್ತು ಗಿರಣಿಗಳಿಂದಾಗಿ ಈ ಲಾಕ್‍ಡೌನ್‍ನಲ್ಲೂ ನನ್ನ ಉದ್ಯಮಕ್ಕೆ ಯಾವುದೇ ರೀತಿಯ ಧಕ್ಕೆ ಬಂದಿಲ್ಲ ಎನ್ನುತ್ತಾರೆ.
ಮೇಘಾಲಯದ ಫೆರಾಂಡೋ ಸಂಸ್ಥೆಯ ಮಾಸ್ಕ್‍ಗಳು
ಮೇಘಾಲಯದ ಫೆರಾಂಡೋ ಎಂಬ ಸಂಸ್ಥೆ ಶ್ರವಣದೋಷವುಳ್ಳ ಮಕ್ಕಳಿಗಾಗಿ ವೃತ್ತಿಪರ ತರಬೇತಿ ಕೇಂದ್ರವನ್ನು ನಡೆಸುತ್ತಿದೆ. ವಿದ್ಯುತ್‍ನ ಅತೀವ ಸಮಸ್ಯೆ ಇರುವಂಥ ಪ್ರದೇಶವಾದ ಅಲ್ಲಿನ ಜೀವನೋಪಾಯದ ಕೇಂದ್ರಕ್ಕೆ ಸೆಲ್ಕೋ ಸೌರಚಾಲಿತ ಹೊಲಿಗೆ ಯಂತ್ರಗಳನ್ನು ಒದಿಗಿಸಿದೆ. ಈಗ ಈ ಘಟಕವು ಪ್ರತಿದಿವಸ ಮಾಸ್ಕ್ ತಯಾರಿಸಿ ಮೇಘಾಲಯದ ಆರೋಗ್ಯ ಕೇಂದ್ರ ಮತ್ತು ಇನ್ನಿತರ ಸಂಸ್ಥೆಗಳಿಗೆ ಒದಗಿಸುತ್ತಿದೆ.
ಫೆರಾಂಡೋ ಸ್ಪೀಚ್ ಆಂಡ್ ಹಿಯರಿಂಗ್ ಕೇಂದ್ರ, ಮೇಘಾಲಯದ ಪೂರ್ವ ಗ್ಯಾರೋ ಬೆಟ್ಟದ ತಪ್ಪಲಲ್ಲಿರುವ ಉಮ್ನಿವೋ ಹಳ್ಳಿಯಲ್ಲಿದೆ. ಈ ಸಂಸ್ಥೆಯು ಶ್ರವಣದೋಷವುಳ್ಳ ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡುತ್ತಿದೆ. 1-12ನೇ ತರಗತಿಯ ಮಕ್ಕಳಿಗೆ ಇಲ್ಲಿ ಪೂರ್ವಶಿಕ್ಷಣವನ್ನು ಹೇಳಿಕೊಡಲಾಗುತ್ತದೆ. ಜೊತೆಗೆ ಶಾಲೆಬಿಟ್ಟ ವಿದ್ಯಾರ್ಥಿಗಳಿಗೆ ಮತ್ತು ಬಡ ಸಮುದಾಯದವರಿಗಾಗಿ ವೃತ್ತಿಪರ ತರಬೇತಿಗಳನ್ನೂ ನಡೆಸುತ್ತದೆ. ಈ ಮೂಲಕ ಸುಸ್ಥಿರ ಜೀವನಕ್ಕೆ ಆಧಾರವಾಗಿದೆ.
ಅಲ್ಲಿ ವಿದ್ಯುತ್ ಪೂರೈಕೆಯ ವ್ಯತ್ಯಯವಿರುವುದರಿಂದ ಸೆಲ್ಕೋ ಈ ತರಬೇತಿ ಕೇಂದ್ರಕ್ಕೆ ಸೌರಚಾಲಿತ ಹೊಲಿಗೆ ಯಂತ್ರ ಮತ್ತು ಸೌರಚಾಲಿತ ಹಾಲುಕರೆಯುವ ಯಂತ್ರ ಎರಡನ್ನೂ ನೀಡಿತು.
ಈಗ ಕೋವಿಡ್-19ನಿಂದಾಗಿ ಲಾಕ್‍ಡೌನ್ ಆದ ಸಂದರ್ಭದಲ್ಲಿ ಫೆರಾಂಡೋ ಕೇಂದ್ರವು ತಮ್ಮ ಹೊಲಿಗೆ ಯಂತ್ರಗಳನ್ನು ಅಲ್ಲಿನ ಸಮುದಾಯಗಳಿಗೆ ನೀಡಿ, ಮಾಸ್ಕ್ ತಯಾರಿಸುವ ಕೆಲಸ ನೀಡಿತು. ಜಿಲ್ಲಾಡಳಿತವು ಅವರಿಗೆ ಕಚ್ಛಾ ಸಾಮಗ್ರಿಗಳನ್ನು ಒದಗಿಸಿತು. ಈಗ ಅಲ್ಲಿ 18 ಮಹಿಳೆಯರು ಪ್ರತಿದಿವಸ 1500 ಮಾಸ್ಕ್‍ಗಳನ್ನು ತಯಾರಿಸುತ್ತಿದ್ದಾರೆ. ಇದುವರೆಗೆ ಏನಿಲ್ಲವೆಂದರೂ ಅವರು 10 ಸಾವಿರ ಮಾಸ್ಕ್‍ಗಳನ್ನು ತಯಾರಿಸಿದ್ದಾರೆ.
ಬಹುತೇಕ ಕೃಷಿ ಕೂಲಿಕಾರ್ಮಿಕರಾಗಿದ್ದ ಅವರು ಈಗ ಅಲ್ಲಿ ಹೊಲಿಗೆ ಹೊಲಿಯುವುದರಿಂದ ಸಾಕಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. ಈ ಲಾಕ್‍ಡೌನ್ ಸಮಯದಲ್ಲಿ ಕೆಲಸವೇ ಇಲ್ಲದ ಅನೇಕ ಕಾರ್ಮಿಕರ ನಡುವೆ, ಈ ಮಹಿಳೆಯರು ಮೊದಲಿಗಿಂತಲೂ ಆದಾಯವನ್ನು ಗಳಿಸುತ್ತಿದ್ದಾರೆ, ಫೆರಾಂಡೊ ಲೈವ್ಲಿಹುಡ್ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಸ್ಟರ್ ಮೇರ್ಲೀ, “ನಿಜಕ್ಕೂ ಈ ಅವಕಾಶ ನಮ್ಮ ಮಹಿಳೆಯರಿಗೆ ಕೆಲಸವಿಲ್ಲದ ಈ ಸಮಯಕ್ಕೊಂದು ಆಧಾರವಾಗಿದೆ, ಜೊತೆಗೆ ಅವರ ಕುಟುಂಬಕ್ಕೂ ಆದಾಯ ಲಭಿಸಿದಂತಾಗಿದೆ’ ಎನ್ನುತ್ತಾರೆ.
ಈ ಮೊದಲು ಅವರು ಕೃಷಿ ಚಟುವಟಿಕೆಗಳನ್ನು ನೆಚ್ಚಿಕೊಂಡಿದ್ದರು. ಜೊತೆಗೆ ಅವರಿಗೆ ಹೊಲಿಗೆ ಹೊಲಿಯಲು ಸರಿಯಾಗಿ ಬರುತ್ತಿರಲಿಲ್ಲವೆಂಬ ಕಾರಣಕ್ಕಾಗಿ ಅವಕಾಶ ವಂಚಿತರೂ ಆಗಿದ್ದರು. ಆದರೆ ಈಗ ಇಲ್ಲಿ ಕೆಲಸ ಮಾಡಿ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ. ಒಟ್ಟು 18 ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಿದ್ದು, ಈ ಪೈಕಿ ಕಣ್ಣುಕಾಣದ ಒಬ್ಬ ಮಹಿಳೆ ಮತ್ತು ಶ್ರವಣದೋಷವುಳ್ಳ ಮಹಿಳೆಯೂ ಕೆಲಸ ಮಾಡುತ್ತಿದ್ದು, ಮಾಸ್ಕ್ ಹೊಲಿಯುವುದರಿಂದ ಪ್ರತಿ ಮಾಸ್ಕ್‍ಗೆ 7 ರೂ.ಗಳಿಸುವ ಮೂಲಕ ಸುಸ್ಥಿರ ಬದುಕನ್ನು ಕಟ್ಟಿಕೊಂಡಿದ್ದಾರೆ ಎನ್ನುತ್ತಾರೆ ಫೆರಾಂಡೋ ಸಂಸ್ಥೆಯವರು.
ಭಾರತಿ ಹೆಗಡೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.