Latestದೇಶಕಾಲ

ದೇಶಕಾಲ / ಮುಟ್ಟಿನ ಮೌನ ಮುರಿಯುವ `ಮಾಸಿಕ ಮಹೋತ್ಸವ’

ಹೆಣ್ಣುಮಕ್ಕಳ ಮಾಸಿಕ ಮುಟ್ಟನ್ನು ಕುರಿತು ಯಾರಾದರೂ ಗಟ್ಟಿಯಾಗಿ ಮಾತನಾಡುವುದನ್ನು ಕೇಳಿದ್ದೀರಾ? ಅದೇನಿದ್ದರೂ ಗುಟ್ಟುಗುಟ್ಟಾಗಿ ತಲುಪುವ ಕಿವಿಮಾತು ಇಲ್ಲವೇ ಪಿಸುಮಾತು ಅಷ್ಟೆ. ಆದರೀಗ ಮುಟ್ಟನ್ನು ಕುರಿತ ಎಲ್ಲವನ್ನೂ ರಟ್ಟುಮಾಡುವ, ಹುಡುಗಿಯರು ಮಾತ್ರವಲ್ಲ ಹುಡುಗರೂ ಮುಟ್ಟಿನ ಬಗ್ಗೆ ಗಟ್ಟಿಯಾಗಿ ಮಾತನಾಡುವಂತೆ ಮಾಡುವ ಉದ್ದೇಶದ “ಮಾಸಿಕ ಮಹೋತ್ಸವ” ನಡೆಯುತ್ತಿದೆ. ಮೇ 21 ರಿಂದ 28 ರವರೆಗೆ ಬರೀ ಮುಟ್ಟಿನದೇ ಮಾತು! ಮೇ 28 ರ ದಿನವಂತೂ “ವಿಶ್ವ ಋತುಚಕ್ರ ಆರೋಗ್ಯ ದಿನ” ಆಚರಣೆ ಇದ್ದೇ ಇದೆ.

ನಮ್ಮ ದೇಶದಲ್ಲಿ ಮುಟ್ಟನ್ನು ಕುರಿತು ಇರುವ ನಿಷೇಧಗಳು, ಮೂಢನಂಬಿಕೆಗಳು ಸಾವಿರಾರು. ಪ್ರತೀ ಪ್ರದೇಶದಲ್ಲಿ, ಪ್ರತೀ ಜನಾಂಗದಲ್ಲಿ ಇದರ ಅವಾಂತರ ಹೇಳತೀರದು. ಅವೈಜ್ಞಾನಿಕ ನಂಬಿಕೆಗಳನ್ನು ನಿವಾರಿಸುವ, ನಿಷೇಧಗಳನ್ನು ಪ್ರಶ್ನಿಸುವ, ಮುಟ್ಟನ್ನು ಕುರಿತು ಗಟ್ಟಿಯಾಗಿ, ಬಹಿರಂಗವಾಗಿ, ಸಾರ್ವಜನಿಕವಾಗಿ ಮಾತನಾಡುವ – ಆ ಮೂಲಕ ಜನರಲ್ಲಿ ತಿಳುವಳಿಕೆಯನ್ನು ಹೆಚ್ಚಿಸುವ ಆಶಯ “ಮಾಸಿಕ ಮಹೋತ್ಸವ”ದ ಹಿಂದಿದೆ. ಮಹೋತ್ಸವದ ಅಂಗವಾಗಿ, ಮುಟ್ಟು ಕುರಿತ ಕಾರ್ಯಾಗಾರಗಳು, ಉಪನ್ಯಾಸಗಳು, ಮೆರವಣಿಗೆಗಳು, ಪ್ರದರ್ಶನಗಳು, ನೃತ್ಯಗಳು, ಕಿರುನಾಟಕಗಳು ಮತ್ತು ಇತರ ಚಟುವಟಿಕೆಗಳು ಹಲವು ರಾಜ್ಯಗಳಲ್ಲಿ ನಡೆಯುತ್ತಿವೆ. “ಕಿಕ್ ದ ಟಾಬೂ” (ಆ ನಿಷೇಧವನ್ನು ಒದ್ದು ಕಳಿಸಿ) ಎಂಬ ಹೆಸರಿನ ಫುಟ್‍ಬಾಲ್ ಪಂದ್ಯ ನಡೆಯುತ್ತಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಸಿಕ್ಕಿಂ ರಾಜ್ಯಗಳಲ್ಲಿ “ಮಾಸಿಕ ಮಹೋತ್ಸವ”ದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಅದನ್ನು ದೇಶದಾದ್ಯಂತ ವಿಸ್ತರಿಸುವ ಸದಾಶಯ ಇದೆ. ಬೆಳೆಯುವ ಹೆಣ್ಣು-ಗಂಡು ಮಕ್ಕಳು ಮುಟ್ಟುನ್ನು ಕುರಿತು ಮುಕ್ತವಾಗಿ ಸಂವಾದ ನಡೆಸಿದರೆ, ಮುಂದೆಂದಾದರೂ ಮುಟ್ಟು ಎಲ್ಲ ನಿಷೇಧಗಳಿಂದ ಮುಕ್ತವಾಗಬಹುದು ಎಂಬ ಆಸೆ ಈ ಮಹೋತ್ಸವಕ್ಕಿದೆ. ಮುಟ್ಟನ್ನು ಕುರಿತ ಜಾಗೃತಿ ಪ್ರಚಾರಗಳಿಗಿಂತ ಉತ್ಸವದಲ್ಲಿ ಹೆಂಗಸರೂ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

ಹೆಣ್ಣಾಗಿ ಹುಟ್ಟಿದಮೇಲೆ ಸುಮಾರು 40 – 45 ವರ್ಷಗಳ ಕಾಲ ಪ್ರತೀತಿಂಗಳು ಋತುಸ್ರಾವವನ್ನು ಮತ್ತು ಅದರ ಭೌತಿಕ- ಮಾನಸಿಕ ಪರಿಣಾಮಗಳನ್ನು ತಡೆದುಕೊಳ್ಳಬೇಕು. ಆದರೆ ಮನೆಗಳಲ್ಲಿ, ಶಾಲೆಕಾಲೇಜುಗಳಲ್ಲಿ ಅದರ ಬಗ್ಗೆ ಮಾತನಾಡುವ ಹಾಗಿಲ್ಲ. ಋತುಚಕ್ರದಲ್ಲಿ ಬಳಸುವ ಪ್ಯಾಡ್ ಮೊದಲಾದ ವಸ್ತುಗಳ ಮೇಲೆ ಅತಾರ್ಕಿಕ ತೆರಿಗೆಗಳನ್ನು ಹಾಕುವುದು ಬಿಟ್ಟರೆ, ಸರ್ಕಾರಕ್ಕೆ ಆ ಕುರಿತ ಆರೋಗ್ಯದ ಬಗ್ಗೆ ಏನೇನೂ ಕಾಳಜಿ ಇಲ್ಲ. ಆದರೀಗ ಅನೇಕ ಸರ್ಕಾರೇತರ ಸಂಸ್ಥೆಗಳು, `ಪ್ಯಾಡ್‍ಮ್ಯಾನ್’ ಅರುಣಾಚಲಂ ಮುರುಗನಾಥನ್, ಅಕ್ಷಯ್ ಕುಮಾರ್, ನಿಶಾಂತ್ ಬಂಗೇರ ಮೊದಲಾದ ಪುರುಷರೂ ಈ ಕುರಿತ ಜಾಗೃತಿ ಆಂದೋಲನವನ್ನು ರೂಪಿಸುತ್ತಿದ್ದಾರೆ. ಹಾಗೆಯೇ ಪರಿಸರವನ್ನು ಬಾಧಿಸದ `ಸುಸ್ಥಿರ’ ಪ್ಯಾಡ್‍ಗಳ ಪ್ರಚಾರವೂ ನಡೆಯುತ್ತಿದೆ. ಒಟ್ಟಿನಲ್ಲಿ ಮುಟ್ಟನ್ನು ಕುರಿತು ಇರುವ ಮೌನ ಮುರಿಯುವ “ಮಾಸಿಕ ಮಹೋತ್ಸವ” ಇನ್ನುಮುಂದೆ ಪ್ರತೀ ವರ್ಷ ನಡೆಯಲಿದೆ.

ಭಾರತದಲ್ಲಿ ಕೋಟ್ಯಂತರ ಬಾಲಕಿಯರಿಗೆ ಮುಟ್ಟಿನ ದಿವಸಗಳಲ್ಲಿ ಮೊದಲ ಗೋಳು ಎಂದರೆ ಮನೆಯಲ್ಲಿ ಶೌಚಾಲಯವೇ ಇಲ್ಲದಿರುವುದು. ಮುಟ್ಟಿನ ಕಾರಣಕ್ಕೇ ಶಾಲೆ ಬಿಡುವ ಹೆಣ್ಣುಮಕ್ಕಳ ಸಮಸ್ಯೆಯಂತೂ ಹೇಳುವ ಹಾಗೇ ಇಲ್ಲ. ಇನ್ನು ಮುಟ್ಟಿನ ದಿವಸಗಳ ಸ್ವಚ್ಛತೆ ಕೊರತೆಯಿಂದ ಹಲವು ಬಗೆಯ ಸೋಂಕುಗಳಿಂದ ನರಳುವ ಪಾಡು ಇದ್ದೇ ಇರುತ್ತದೆ. ಆದ್ದರಿಂದ ಶಾಲೆಕಾಲೇಜುಗಳಲ್ಲೇ ಅವರಿಗೆ ಬೇಕಾದ ವಸ್ತುಗಳನ್ನು ಪೂರೈಸುವ, ಅವರಿಗೆ ಖಾಸಗಿ ಸುರಕ್ಷಾ ವಲಯವನ್ನು ಒದಗಿಸುವ ಬಗ್ಗೆಯೂ ಈ ಸಂದರ್ಭದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *