ದೇಶಕಾಲ/ ಮಾಜಿ ಮತ್ತು ಹಾಲಿ ಸಭಾಪತಿಗಳ ಅಸೂಕ್ಷ್ಮತೆ – ಅಕ್ಷತಾ ಹುಂಚದಕಟ್ಟೆ

ಲಿಂಗ ಸೂಕ್ಷ್ಮತೆ ಎನ್ನುವುದು ನಮ್ಮಸಮಾಜದಲ್ಲಿ ಬೇರು ಬಿಟ್ಟಿಲ್ಲ, ಇನ್ನು ಕಾಂಡ ಕೊಂಬೆ, ಹೆರೆ ಎಲ್ಲ ನಂತರದ ಮಾತಾಯಿತು ಎಂಬುದಕ್ಕೆ ಇತ್ತೀಚೆಗೆ ಮುಗಿದ ವಿಧಾನಸಭಾ ಅಧಿವೇಶನದಲ್ಲಿ ನಡೆದ ಮಾಜಿ ಸಭಾಪತಿ ಮತ್ತು ಹಾಲಿ ಸಭಾಪತಿಗಳ ಮಾತುಕತೆ ಸಾಕ್ಷಿಯಾಗಿದೆ. ಇದು ನಿಜಕ್ಕೂ ಒಪ್ಪಲಾಗದ ನಡವಳಿಕೆ.

ಸದನದಲ್ಲಿ ಶಾಸಕರ ಗಟ್ಟಿಮಾತು, ಗಲಾಟೆಗಳಿಗೆ ಸಂಬಂಧಿಸಿದಂತೆ “ರೇಪ್ ಅನಿವಾರ್ಯವಾದರೆ ಮಲಗಿ ಆನಂದಿಸಿ ” ಎಂಬ ಮಾತನ್ನು ಮಾಜಿ ಸಭಾಪತಿ ರಮೇಶ್ ಕುಮಾರ್ ಸದನದಲ್ಲಿ ನಾಚಿಗೆಗೆಟ್ಟು ಆಡಿದರೆ ಹಾಲಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಆನಂದತುಂದಿಲರಾಗಿ ಅದನ್ನು ಹೌದು ಹೌದು ಹಾಗೆ ಮಾಡುವೆ ಎಂದು ಒಪ್ಪಿಗೆಯ ಠಸ್ಸೆ ಒತ್ತುತ್ತಾರೆ… ಅದೂ ಸದನದಲ್ಲಿ. ಇಬ್ಬರಿಗೂ ತಾವು ಹೀನಾಯವಾದ, ವಿಕೃತ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದೇವೆ ಎಂಬ ಅಂಶ ಲವಲೇಶವೂ ಬಾಧಿಸುವುದಿಲ್ಲ ಎಂದರೆ ಅದಕ್ಕೆ ಏನು ಹೇಳಬೇಕು!!

ಅತ್ಯಾಚಾರ ಹೆಣ್ಣುಮಕ್ಕಳ ಮೇಲಾಗುವ ಅತಿ ಹೀನಾಯ ಕೃತ್ಯ. ಗಂಡಸರು ಅದರ ಬಗೆಗೆ ಜೋಕ್ ಕೂಡಾ ಮಾಡಬಲ್ಲರು, ಏಕೆಂದರೆ ಅವರಿಗೆ ಅದರ ಅನುಭವ ಇರಲಿ, ಅದರ ಭಯಾನಕತೆಯ ಕಲ್ಪನೆ ಕೂಡಾ ಇರುವುದಿಲ್ಲ. ಆದ್ದರಿಂದಲೇ ಅವರು ಸರಳವಾಗಿ ಮತ್ತು ಸುಂದರವಾಗಿ ಅದನ್ನು ಅನುಭವಿಸಿ ಎಂದು ಜೋಕ್ ಕಟ್ಟಿ ನಗಬಲ್ಲರು, ಇಂತದೊಂದು ಕ್ಲೀಷೆಯ ಗಾದೆಯನ್ನು ಕಟ್ಟಬಲ್ಲರು. ಅದನ್ನು ಸದನವೆಂಬುದು ಸಾರ್ವಜನಿಕ ಸ್ಥಳ ಎಂದು ನೋಡದೇ ಆಡಿ ನಗಬಲ್ಲರು. ತಾವು ಕುಳಿತ ಘನವಾದ ಸ್ಥಾನಕ್ಕೆ ಇಂತಹ ಮಾತು ಯಾವುದೇ ರೀತಿಯಲ್ಲೂ ಸಮಂಜಸ ಅಲ್ಲ ಎಂಬುದರ ಅರಿವಿದ್ದರೂ, ಅಂಥದನ್ನು ಆಡಬಲ್ಲರು, ಆಡಿ ಅರಗಿಸಿಕೊಂಡು ಏನೂ ಆಗಿಲ್ಲ ಎಂಬಂತೆ ಆಡುತ್ತಲೇ ಹೋಗಬಲ್ಲರು.

ಏಕೆಂದರೆ ಇಲ್ಲಿ ಅತ್ಯಾಚಾರ ಎಂಬುದು ಹೆಣ್ಣಿನ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಮಾಡುವ ಪರಿಣಾಮಗಳ ಘೋರತೆಯ ಅರಿವು ಗಂಡಸರಿಗಿಲ್ಲ. ಜೊತೆಗೆ ಇವತ್ತಿಗೂ ಗಂಡಸ್ತನ ಎಂಬುದು ಇಲ್ಲಿ ಹೆಚ್ಚುಗಾರಿಕೆಯಾಗಿಯೇ ಬಿಂಬಿತವಾಗಿದೆ. ಆದ್ದರಿಂದ ಗಂಡಸ್ತನದ ಶಕ್ತಿ ಪ್ರದರ್ಶನದಲ್ಲಿ ಅತ್ಯಾಚಾರದಂತಹ ವಿಕೃತ ಕ್ರಿಯೆಗಳು ಕೂಡಾ ಅವರಲ್ಲಿ ನಾಚಿಕೆ, ತಳಮಳ ಹುಟ್ಟಿಸುವುದೇ ಇಲ್ಲ…

ಇತ್ತೀಚೆಗೆ ನಡೆದ ಚಲನಚಿತ್ರೋತ್ಸವವೊಂದರಲ್ಲಿ ನಾನೊಂದು ಸಿನಿಮಾ ನೋಡಿದೆ; ಟುನೀಷಿಯ ದೇಶದ ಅರೇಬಿಕ್ ಭಾಷೆಯ ‘ಬ್ಯೂಟಿ ಅಂಡ್ ದಿ ಡಾಗ್ಸ್’ ಎಂಬ ಹೆಸರಿನ ಚಲನಚಿತ್ರವದು. ಅದರ ನಿರ್ದೇಶಕಿ ಕೌಥರ್ ಬೆನ್ ಹನಿಯ ಎಂಬ ಹೆಣ್ಣುಮಗಳು. ಅತ್ಯಾಚಾರಕ್ಕೀಡಾದ ಹೆಣ್ಣುಮಗಳು ತನ್ನ ಮೇಲಾದ ಹೇಯಕೃತ್ಯಕ್ಕೆ ಕಾರಣರಾದ ಆರೋಪಿಗಳ ಮೇಲೆ ಅಪರಾಧ ಪ್ರಕರಣ ದಾಖಲಿಸಲು ಹೊರಟಾಗ ವ್ಯವಸ್ಥೆ ಅವಳ ಮೇಲೆ ಹಲ್ಲೆ ಮಾಡುತ್ತದೆ, ಅವಮಾನ ಮಾಡುತ್ತದೆ, ಹಗೆತನ ಸಾಧಿಸುತ್ತದೆ. ಹೀಗೆ ಮತ್ತೆಮತ್ತೆ ಅತ್ಯಾಚಾರ ಎಸಗುತ್ತದೆ.

ಈ ಸಿನಿಮಾ ನೋಡಿದ ಅಲ್ಲಿದ್ದ ಎಲ್ಲ ಪ್ರೇಕ್ಷಕರ ಕಣ್ಣಲ್ಲಿ ನೀರಿತ್ತು. ಮತ್ತು ಎಲ್ಲರೂ ಹೇಳಿದ್ದು ದೇಶ, ಕಾಲ ಎಲ್ಲವನ್ನು ಮೀರಿ ಎಲ್ಲೆಡೆಯು ಅತ್ಯಾಚಾರಕ್ಕೊಳಗಾದ ಮತ್ತು ಅದನ್ನು ಪ್ರತಿರೋಧಿಸಲು ಹೊರಡುವ ಹೆಣ್ಣಿನ ಸ್ಥಿತಿ ಹೀಗೆ ಇರುತ್ತದೆ. ಅದಕ್ಕೆ ಕಾರಣ ಲಿಂಗ ಸೂಕ್ಷ್ಮತೆಯಂತ ವಿಷಯಗಳ ಕುರಿತು ಅಜ್ಞಾನ, ಅನಾದರ ಮತ್ತು ಗಂಡಸ್ತನದಂತ ವಿಷಯಗಳ ಕುರಿತು ಇಲ್ಲಿರುವ ಅತಿರೇಕದ ಕಲ್ಪನೆಗಳು.

ಅದಕ್ಕೆ ‘ಒಮ್ಮೆ ಒಡಲುಗೊಂಡು ನೋಡ’ ಎಂಬ ದೇವರದಾಸಿಮಯ್ಯನ ಸಾಲನ್ನು ಉಲ್ಲೇಖಿಸಿ ಮಾನ್ಯ ಸಭಾಪತಿಗಳು ಮತ್ತು ಮಾಜಿ ಸಭಾಪತಿಗಳಲ್ಲಿ ಸವಿನಯ ವಿನಂತಿ- ಅವರುಗಳು ಒಮ್ಮೆ ಸ್ವತಃ ಹೆಣ್ಣಿನ ಒಡಲುಗೊಂಡು ಹೆಣ್ತನವನ್ನು ಅನುಭವಿಸಲಿ ನಂತರ ಅತ್ಯಾಚಾರವನ್ನು ಆನಂದವಾಗಿ ಮಾರ್ಪಡಿಸಿಕೊಂಡು ಅನುಭವಿಸುವ ಕ್ರಿಯೆಯ ಬಗೆಗೆ ಮಾತನ್ನಾಡಲಿ…. ಏಕೆಂದರೆ ಹೆಣ್ಣಿನ ಒಡಲು ಮತ್ತು ಮನಸು ಅವರಿಗೆ ಹೇಳಿಕೊಡುವ ಆನಂದದ ಪಾಠಗಳೇ ಬೇರೆ ಇರುತ್ತವೆ. ಅವು ಲಿಂಗಸೂಕ್ಷ್ಮತೆಯಿಂದ ಖಂಡಿತಾ ಕೂಡಿರುತ್ತವೆ…

(ಮೂಲ: ಫೇಸ್‍ಬುಕ್ ಬರಹ)

  • ಅಕ್ಷತಾ ಹುಂಚದಕಟ್ಟೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *