ದೇಶಕಾಲ / ಮಹಿಳೆ ಮತ್ತು ನೀರು – ಡಾ. ಪುರುಷೋತ್ತಮ ಬಿಳಿಮಲೆ
ನಮ್ಮ ಪ್ರಾಚೀನರು ಮಹಿಳೆ ಮತ್ತು ಪ್ರಕೃತಿಯನ್ನು ಸಮೀಕರಿಸಿದ್ದಾರೆ. ನೀರು ಇಲ್ಲದಿದ್ದರೆ ಅದರ ತಕ್ಷಣದ ಪರಿಣಾಮವಾಗುವುದು ಮಹಿಳೆಯ ಮೇಲೆಯೇ. ಈಗ ಪ್ರಕೃತಿಯ ವಿನಾಶದ ಜೊತೆಗೆ ಮಹಿಳೆಯೂ ನಾಶವಾಗುತ್ತಿದ್ದಾಳೆ. ಭೂಮಿಯನ್ನು ಸಂಪನ್ಮೂಲ ಎಂದು ಭಾವಿಸಿ ಲೂಟಿ ಮಾಡುವವರು, ಪರಿಸರ ಮತ್ತು ಮಹಿಳೆಯನ್ನು ಒಟ್ಟಾಗಿಯೇ ವಿನಾಶದತ್ತ ತಳ್ಳುತ್ತಿದ್ದಾರೆ.
ನೀರಿಗಿಂತ ರಕ್ತ ಅಗ್ಗವಾಗಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಈ ಹೊತ್ತಿನ ಭಾರತ ದೇಶದಲ್ಲಿ 60 ಕೋಟಿ ಜನರಿಗೆ ಕುಡಿಯಲು ನೀರಿಲ್ಲ. ಸುಮಾರು ಎರಡು ಲಕ್ಷ ಜನರು ನೀರಿನ ಕಾರಣದಿಂದಲೇ ಸಾವನ್ನಪ್ಪಿದ್ದಾರೆ. ಶೇ. 70 ಕಷ್ಟು ನೀರು ಮಲಿನಗೊಂಡಿದೆ. ಮಕ್ಕಳಿಗೆ, ಗಂಡನಿಗೆ, ಅತಿಥಿಗಳಿಗೆ ನೀರು ಒದಗಿಸುವ ಮಹಿಳೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದಾಳೆ. ಬಹುತೇಕ ಜಾಗಗಳಲ್ಲಿ ನೆಲದಡಿಯ ನೀರು ಬತ್ತಿಹೋಗಿದೆ. ಒಳ್ಳೆಯ ನೀರು ಒದಗಿಸುವ ವಿಷಯದಲ್ಲಿ ಭಾರತವು ಜಾಗತಿಕ ಸೂಚಿಯಲ್ಲಿ 122 ರಲ್ಲಿ 120 ನೇ ಸ್ಥಾನದಲ್ಲಿದೆ.
ಬೇರೆ ದೇಶಗಳಲ್ಲಿ ಇದೊಂದು ತುರ್ತುಸ್ಥಿತಿ. ನಮ್ಮಲ್ಲಿ…?
ಇಡೀ ಉತ್ತರ ಭಾರತ ಹೊತ್ತಿ ಉರಿಯುತ್ತಿದೆ. ವಾತಾವರಣದ ಉಷ್ಣಾಂಶ 48-49 ಡಿಗ್ರಿ ಇದ್ದು ನೆಲದ ಉಷ್ಣಾಂಶ 53 ಡಿಗ್ರಿ ದಾಟಿದೆ. ಬಿಹಾರದ 150 ಕ್ಕೂ ಹೆಚ್ಚು ಮಕ್ಕಳ ಸಾವಿನಲ್ಲಿ ಹಸಿವು ಮತ್ತು ಬಿಸಿಲು ಸೇರಿಕೊಂಡಿದೆ. ನೀರಿಲ್ಲ, ಇದ್ದ ನೀರು ಕಲುಷಿತವಾಗಿದೆ. ನೀರಿನ ಉಪಯೋಗದ ಬಗ್ಗೆ ಜನರಿಗೆ ತಿಳಿ ಹೇಳುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಈ ಭಯಾನಕ ಸ್ಥಿತಿಯ ಮೊದಲ ಬಲಿಪಶು ಮಹಿಳೆ ಎಂಬುದನ್ನು ಕಣ್ಣಾರೆ ಕಾಣುತ್ತಿದ್ದೇವೆ.
ನಮ್ಮ ಪ್ರಾಚೀನರು ಮಹಿಳೆ ಮತ್ತು ಪ್ರಕೃತಿಯನ್ನು ಸಮೀಕರಿಸಿದ್ದಾರೆ. ನದಿಗಳಿಗೆಲ್ಲ ಹೆಣ್ಣಿನ ಹೆಸರೇ! ಇದು ಕೇವಲ ಒಂದು ಭಾವನಾತ್ಮಕ ವಿಷಯವಲ್ಲ. ಇಂದು ನೀರು ಇಲ್ಲದಿದ್ದರೆ ಅದರ ತಕ್ಷಣದ ಪರಿಣಾಮವಾಗುವುದು ಮಹಿಳೆಯ ಮೇಲೆಯೇ. ಮಕ್ಕಳಿಗೆ ನೀರು ಕುಡಿಸುವ, ಮನೆಮಂದಿಗೆಲ್ಲ ಅಡುಗೆ ಮಾಡಿ ಬಡಿಸುವ, ನೆಂಟರು ಬಂದರೆ ಅವರಿಗೆ ಸ್ನಾನ ಮಾಡಲು ನೀರು ಹೊಂದಿಸುವ ಕೆಲಸ ಅವಳದು. ದೂರದಿಂದ ಎಲ್ಲಿಂದಲೋ ನೀರು ತರುವ ಕೆಲಸವೂ ಅವಳದು. ನೀರು ಹುಡುಕುತ್ತಾ ದೂರದೂರ ಸಾಗುವವಳು ಅವಳು.
ಕೊಳವೆಬಾವಿಯ ಹತ್ತಿರ ನೀರಿಗೆ ಕಾಯುತ್ತ ಕುಳಿತುಕೊಳ್ಳುವವಳು ಅವಳು. ನೀರು ಕುರಿತು ಪ್ರಕಟವಾಗುವ ಎಲ್ಲ ಚಿತ್ರಗಳಲ್ಲಿಯೂ ಮಹಿಳೆಯೇ ಕಾಣಿಸಿಕೊಳ್ಳುತ್ತಿದ್ದಾಳೆ. ಪ್ರಕೃತಿಯ ವಿನಾಶದ ಜೊತೆಗೆ ಮಹಿಳೆಯೂ ನಾಶವಾಗುತ್ತಿದ್ದಾಳೆ. ಭೂಮಿಯನ್ನು ಸಂಪನ್ಮೂಲ ಎಂದು ಭಾವಿಸಿ ಲೂಟಿ ಮಾಡುವವರು, ಪರಿಸರ ಮತ್ತು ಮಹಿಳೆಯನ್ನು ಒಟ್ಟಾಗಿಯೇ ವಿನಾಶದತ್ತ ತಳ್ಳುತ್ತಿದ್ದಾರೆ.
(ಸೌಜನ್ಯ: agricultureindia.in ಅಂತರಜಾಲ ಪತ್ರಿಕೆ)
– ಡಾ. ಪುರುಷೋತ್ತಮ ಬಿಳಿಮಲೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.