ದೇಶಕಾಲ/ ಮಹಿಳೆಯರ ಸಂಕಷ್ಟ ಹೆಚ್ಚಿಸಿದ ಕೊರೊನ

ಬರಗಾಲ, ಪ್ರವಾಹ, ಚಂಡಮಾರುತ, ಸಾಂಕ್ರಾಮಿಕ ರೋಗರುಜಿನ ಹೀಗೆ ಯಾವುದೇ ದುಃಸ್ಥಿತಿ ಬರಲಿ, ಅದರ ನಕಾರಾತ್ಮಕ ಪರಿಣಾಮ ಮಹಿಳೆಯರನ್ನು ಮತ್ತಷ್ಟು ಸಂಕಷ್ಟಗಳಿಗೆ ದೂಡುತ್ತದೆ. ಅವರ ಆತ್ಮಸ್ಥೈರ್ಯ, ದೈಹಿಕ ಆರೋಗ್ಯ, ಮಾನಸಿಕ ಸ್ವಾಸ್ಥ್ಯಗಳನ್ನು ಕಾಪಾಡಲು ಕುಟುಂಬ ಮತ್ತು ಸಮಾಜದಲ್ಲಿ ವಿಶೇಷ ಕ್ರಮಗಳು ಅಗತ್ಯ.

ಕೋವಿಡ್- 19 ವೈರಾಣು ಅಪಾಯ ಜಗತ್ತನ್ನು ಆವರಿಸಿ ಮಾನವ ಜನಾಂಗ ತತ್ತರಿಸುತ್ತಿದೆ. ಪ್ರತಿಯೊಂದು ದೇಶವೂ ಅದನ್ನು ಹಿಮ್ಮೆಟ್ಟಿಸಲು, ಅದರ ಹರಡುವಿಕೆಯನ್ನು ತಡೆಯಲು ತನಗೆ ಸೂಕ್ತವೆನ್ನಿಸಿದ ಕ್ರಮಗಳನ್ನು ನ್ಯಾಯವಾಗಿಯೇ ಪ್ರಕಟಿಸುತ್ತಿದೆ. ಆದರೆ ಕೆಲವೊಂದು ದೇಶಗಳಲ್ಲಿ ವೈರಾಣು ಸೋಂಕಿನ ವಿರುದ್ಧ ಹೂಡಿದ ಸಮರ, ಸಮುದಾಯಗಳಲ್ಲಿ ಬೇರೆ ಬಗೆಯ ಪರಿಣಾಮಗಳನ್ನೂ ಮಾಡುತ್ತಿರುವುದು ಇನ್ನಿಲ್ಲದ ತಲ್ಲಣ ಹುಟ್ಟಿಸುತ್ತಿದೆ. ಅದರಲ್ಲೂ ಕೊರೊನ ಹಾವಳಿಯಿಂದ ಮಹಿಳೆಯರ ಪಾಲಿಗೆ ಹೆಚ್ಚಿದ ಸಮಸ್ಯೆಗಳು, ಇಮ್ಮಡಿಸಿದ ಕಷ್ಟಗಳು ವರ್ಣನೆಗೂ ನಿಲುಕದಂಥವು. ಕುಟುಂಬ ಮತ್ತು ಕೂಲಿಕೆಲಸ ಎರಡು ಕಡೆಯೂ ಅವರಿಗೆ ಹೆಚ್ಚು ಹೊಡೆತಗಳು ಬೀಳುತ್ತಿರುವುದರ ಜೊತೆಗೆ ಹೆಚ್ಚುತ್ತಿರುವ ದೈಹಿಕ, ಮಾನಸಿಕ ತಳಮಳಗಳು ಅವರನ್ನು ಹಿಂಡಿಹಿಪ್ಪೆ ಮಾಡುತ್ತಿವೆ.

ಹೊಸ ವರ್ಷ ಹುಟ್ಟುವುದರೊಂದಿಗೆ ಜಗತ್ತಿನ ಎಲ್ಲೆಡೆ ಹರಡುತ್ತಿದ್ದ ಕೊರೊನ ಸೋಂಕು ನಮ್ಮ ದೇಶದಲ್ಲೂ ಅಪಾಯದ ಮುನ್ಸೂಚನೆಗಳನ್ನು ಸ್ಪಷ್ಟವಾಗಿಯೇ ನೀಡುತ್ತಿತ್ತು. ಜನವರಿ 30 ರ ಹೊತ್ತಿಗೆ ವಿಶ್ವ ಆರೋಗ್ಯ ಸಂಸ್ಥೆಯು “ಕೊರೋನ ವೈರಾಣುವಿನಿಂದ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ” ಉಂಟಾಗಿದೆ ಎಂದು ಘೋಷಿಸಿತು. ಆದರೆ ಈ ಬೆಳವಣಿಗೆಗಳ ಅರಿವಿದ್ದೂ ದೇಶದ ಎಲ್ಲ ರಾಜ್ಯಗಳಲ್ಲಿ ಜಾತ್ರೆಗಳು, ಮೇಳಗಳು, ಬೃಹತ್ ಸರ್ಕಾರಿ ಕಾರ್ಯಕ್ರಮಗಳ ಸಂಭ್ರಮವೇ ತುಂಬಿದ್ದ ಫೆಬ್ರುವರಿ ತಿಂಗಳಿನಲ್ಲಿ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಲಿಲ್ಲ. ಪರಿಸ್ಥಿತಿ ಕೈಮೀರುವಂತೆ ಕಾಣುತ್ತಿದ್ದಾಗ ಮಾರ್ಚ್ 23 ರಂದು ಇದ್ದಕ್ಕಿದ್ದಂತೆ ಇಡೀ ದೇಶವನ್ನೇ ಮಧ್ಯ ರಾತ್ರಿ 12 ಗಂಟೆಯಿಂದ “ಲಾಕ್ ಡೌನ್” ಮಾಡಬೇಕು, ಎಲ್ಲ ಚಟುವಟಿಕೆಗಳನ್ನೂ ನಿಲ್ಲಿಸಬೇಕು, ಎಲ್ಲ ಸಾರಿಗೆ ಸಂಚಾರವನ್ನೂ ಬಂದ್ ಮಾಡಬೇಕು, ಎಲ್ಲ ಪ್ರಜೆಗಳೂ ಮನೆಯಲ್ಲಿರಬೇಕು ಎಂದು ಆದೇಶಿಸಲಾಯಿತು. ಎಲ್ಲವನ್ನೂ ನಿಲ್ಲಿಸಿ “ಲಾಕ್ ಡೌನ್” ಜಾರಿಗೆ ತರಲು ಇಡೀ ದೇಶದ ಪ್ರಜೆಗಳಿಗೆ ಕೊಟ್ಟ ಸಮಯ ಕೇವಲ ನಾಲ್ಕು ಗಂಟೆಗಳು!

ದೇಶದ ಜನರ ಆರೋಗ್ಯವನ್ನು ಕಾಪಾಡಲು, ಕೊರೊನ ಸೋಂಕು ಸರಣಿಯನ್ನು ಕತ್ತರಿಸಲು, ಸೋಂಕಿನಿಂದ ಜನರ ಸಾವನ್ನು ತಪ್ಪಿಸಲು ಇಂಥ ಕಟ್ಟುನಿಟ್ಟು ಕಠಿಣ ಕ್ರಮ ಯಾವ ದೇಶಕ್ಕಾದರೂ ಅನಿವಾರ್ಯ ಎಂಬುದನ್ನು ಯಾರಾದರೂ ಒಪ್ಪುತ್ತಾರೆ. ಆದರೆ ಪೂರ್ವ ಸಿದ್ಧತೆಗಳಿಲ್ಲದೆ, ದೂರದೃಷ್ಟಿಯ ಯೋಜನೆಗಳಿಲ್ಲದೆ ಏಕಾಏಕಿ ಹೇರಿದ ಅನುಶಾಸನ ಇಡೀ ಭಾರತದ ಬಡವರ ದುರವಸ್ಥೆಯನ್ನು ಜಗತ್ತಿಗೆ ತೋರಿಸಿತು. ಒಂದೆರಡು ದಿನಗಳಲ್ಲೇ ದೇಶದ ಹಲವು ರಾಜ್ಯಗಳ ಪ್ರಮುಖ ರಸ್ತೆಗಳಲ್ಲಿ ಹರಿದುಬಂದ ಜನಪ್ರವಾಹ ನೋಡಿ ಎಲ್ಲರೂ ಬೆಚ್ಚಿಬೀಳುವಂತಾಯಿತು. ಹುಟ್ಟಿದೂರಿನಲ್ಲಿ ಹೊಟ್ಟೆಗಿಲ್ಲದೆ, ಎಲ್ಲಿಂದ ಎಲ್ಲಿಗೋ ಬಂದು ಕೂಲಿ ಮಾಡಿ ಜೀವನ ಮಾಡುತ್ತಿದ್ದ ಬಡವರಿಗೆ ಇದ್ದಕ್ಕಿದ್ದಂತೆ ಎರಗಿದ ಸಂಕಷ್ಟಕ್ಕೆ ಬೆದರಿ, ತಮ್ಮ ಮೂಲ ಊರುಗಳಿಗೆ ವಾಪಸಾಗುವುದು ಬಿಟ್ಟು ಬೇರೇನೂ ಉಪಾಯವೇ ಇರಲಿಲ್ಲ. “ಕೊರೊನದಿಂದ ಅಥವಾ ಹಸಿವಿನಿಂದ ಸಾಯುವುದೇ ಆದರೆ ನಮ್ಮ ಊರಿನಲ್ಲೇ ಸಾಯೋಣ” ಎಂಬಂಥ ಅವರ ನಿರ್ಧಾರ, ಸಾಮಾಜಿಕ ಪ್ರಜ್ಞೆಗೆ ಹಾಕಿದ ಸವಾಲೇ ಆಗಿತ್ತು. 1947 ರಲ್ಲಿ ದೇಶ ವಿಭಜನೆಯಲ್ಲಿ ಕಂಡ ಜನಪ್ರವಾಹವನ್ನು ಬಿಟ್ಟರೆ, ಲಕ್ಷಾಂತರ ಜನರು ಸಂಕಷ್ಟಕ್ಕೆ ಒಳಗಾಗಿ, ಇದ್ದ ಕೆಲಸದ ಜಾಗ ಬಿಟ್ಟು, ನೂರಾರು ಮೈಲುಗಳು ನಡೆಯುವುದನ್ನು ಸ್ವಾತಂತ್ರ್ಯ ಬಂದ ನಂತರ ನಮ್ಮ ದೇಶ ನೋಡಿರಲೇ ಇಲ್ಲ. ವಾಹನ ಸಂಚಾರವನ್ನು ನಿಲ್ಲಿಸಿದ್ದರಿಂದ ಖಾಲಿ ರಸ್ತೆಗಳಲ್ಲಿ ನಡೆಯುವುದು ಅವರಿಗೆ ಅನಿವಾರ್ಯವಾಗಿತ್ತು. “ಆದರೆ ಈ ಸಂಕಷ್ಟ ವಲಸೆ ಮಾನವ ನಿರ್ಮಿತ, ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಇದನ್ನು ತಡೆಯಬಹುದಾಗಿತ್ತು” ಎಂದು ಸಮಾಜಶಾಸ್ತ್ರಜ್ಞರು ನಿಟ್ಟುಸಿರು ಬಿಟ್ಟರು.

“ಲಾಕ್ ಡೌನ್” ಆದೇಶದ ಕಾರಣ ಅನೇಕ ರಾಜ್ಯಗಳ ರಸ್ತೆಗಳಲ್ಲಿ ಕಂಡ ಈ ಜನಪ್ರವಾಹದಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿದ್ದದ್ದು ಸಹಜ. ಇಡೀ ಕುಟುಂಬವೇ ಕೆಲಸ ಹುಡುಕಿಕೊಂಡು ಮಹಾನಗರಗಳಿಗೆ ವಲಸೆ ಬಂದಾಗ ಎಲ್ಲಿ ಕೆಲಸವೋ ಅಲ್ಲಿ ಸಂಸಾರ ಹೂಡುವುದಲ್ಲದೆ ಅವರಿಗೆ ಬೇರೆ ಆಯ್ಕೆ ಇರುವುದಿಲ್ಲ. ಹಾಗಾಗಿ ಕುಟುಂಬಗಳು ಇದ್ದಬದ್ದ ಗಂಟುಮೂಟೆ ಹೊತ್ತು ನಡೆದುಕೊಂಡೇ ಊರು ತಲುಪಬೇಕಾಗಿತ್ತು. ಉರಿಬಿಸಿಲಿನಲ್ಲಿ ನಡೆಯುತ್ತಿದ್ದ ಆ ವಲಸೆ ಕಾರ್ಮಿಕ ಕುಟುಂಬಗಳಲ್ಲಿ ಹಣ್ಣುಹಣ್ಣು ಮುದುಕಿಯರಿದ್ದರು, ಆರು ಎಂಟು ತಿಂಗಳ ಬಸುರಿಯರಿದ್ದರು, ತಲೆಗೆ ಬಟ್ಟೆ ಕಟ್ಟಿಕೊಂಡು ಹಸುಗೂಸನ್ನು ಹೊತ್ತ ಬಾಣಂತಿಯರಿದ್ದರು, ನಡೆಯಲಾರದ ಮಕ್ಕಳನ್ನು ಎತ್ತಿಕೊಂಡು ಸುಸ್ತಾಗಿದ್ದ ಅಮ್ಮಂದಿರಿದ್ದರು, ಅಪೌಷ್ಟಿಕತೆಯಿಂದ ನರಳುತ್ತಿದ್ದ ಹುಡುಗಿಯರಿದ್ದರು – ಆ ಜನಪ್ರವಾಹದಲ್ಲಿ ಗಂಡಸರು ಹೆಂಗಸರು ಎಲ್ಲರಿದ್ದರೂ ಇವರ ಸಂಕಟದ ಮುಖಗಳು ಮನಸ್ಸನ್ನು ಕಾಡುವಂತಿದ್ದವು. ಮುಟ್ಟಾದ ಹೆಣ್ಣುಗಳಿಗೆ ಆ ಮಹಾರಸ್ತೆಗಳಲ್ಲಿ ಯಾವ ಸೌಕರ್ಯ ಸಿಗುತ್ತಿತ್ತು, ಬಾಯಾರಿದ ಮಕ್ಕಳಿಗೆ ಎಲ್ಲಿ ನೀರು ಸಿಗುತ್ತಿತ್ತು ಎನ್ನುವುದು ಊಹೆಗೆ ಬಿಟ್ಟದ್ದು. ಇನ್ನು ಸೋಂಕು ತಡೆಯಲು, ವಲಸೆ ತಡೆಯಲು ರಾಜ್ಯದ ಗಡಿಗಳನ್ನು ಮುಚ್ಚಿದಾಗ ಅಲ್ಲಲ್ಲೇ ಕುಸಿದು ಕೂತವರ, ಕ್ವಾರಂಟೈನ್ ವಲಯಕ್ಕೆ ಹೋಗಬೇಕಾದವರ ಪಾಡು ಹೇಳುವುದೇ ಬೇಡ.

ಸೋಂಕು ತುರ್ತುಪರಿಸ್ಥಿತಿಯನ್ನು ಎದುರಿಸಲು ಕೈಗೊಂಡ ಕ್ರಮಗಳೆಲ್ಲ ಅದರ ದೃಷ್ಟಿಯಿಂದ ಅಗತ್ಯವೇ ಆಗಿರಬಹುದು; ಆದರೆ ಆ ಕ್ರಮಗಳ ಪರಿಣಾಮಗಳನ್ನು ಎದುರಿಸಲು ಕೂಡ ಕ್ರಮಗಳು ಅತ್ಯಗತ್ಯ ಎನ್ನುವುದು ಇಲ್ಲಿ ಮರೆತು ಹೋಗಿತ್ತೇ? “ಸಾಮಾಜಿಕ ಅಂತರ” ಕಾಯ್ದುಕೊಳ್ಳುವುದು ಸೋಂಕು ನಿರೋಧಕ್ಕೆ ಅನಿವಾರ್ಯವೇ ಹೌದು. ಆದರೆ ರಸ್ತೆಗಳಲ್ಲಿ ಊರಿಗೆ ನಡೆದು ಹೊರಟ ಲಕ್ಷಾಂತರ ಜನರ ನಡುವೆ, ಇದ್ದಬದ್ದ ವಾಹನಗಳಿಗೆ ಮುಗಿಬಿದ್ದ ಸುಸ್ತಾದವರ ನಡುವೆ, ಊಟವಿಲ್ಲದೆ ಪರದಾಡುತ್ತಿದ್ದ ಹಸಿದವರ ನಡುವೆ “ಸಾಮಾಜಿಕ ಅಂತರ”ದ ಪರಿಕಲ್ಪನೆಯೇ ಗಾಳಿಗೆ ತೂರಿಹೋಯಿತು. ಬಡಜನರಿಗೆ ಊಟ ಮತ್ತು ಸಾರಿಗೆ ವ್ಯವಸ್ಥೆಯನ್ನು ಮುಂದಾಲೋಚನೆಯಿಂದ ಮಾಡದೆ, ಬರೀ “ಲಾಕ್ ಡೌನ್” ಫರ್ಮಾನು ಹೊರಡಿಸುವುದು ಬಡವರಿಗೆ ಕೊರೊನಕ್ಕಿಂತ ಹೆಚ್ಚು ಸಮಸ್ಯೆ ತಂದಿತು. ಇದರಲ್ಲಿ ಹೆಂಗಸರ ಬವಣೆಯಂತೂ ಇನ್ನಷ್ಟು ಹೆಚ್ಚಿತು. ನಂತರ ಆಹಾರ ಒದಗಿಸಲು, ಹೆಚ್ಚು ದವಸಧಾನ್ಯ ಕೊಡಲು ಸರ್ಕಾರ ಕ್ರಮಗಳನ್ನು ಕೈಗೊಂಡರೂ ಬಿಪಿಎಲ್- ರೇಷನ್ ಕಾರ್ಡ್ ಇಲ್ಲದ ಕುಟುಂಬಗಳಿಗೆ ಅವು ಸಿಗುವುದು ಕಷ್ಟವಾಯಿತು.

ಇನ್ನು ಈ ಬಡಕುಟುಂಬಗಳು ಸ್ವಂತ ಊರಿಗೆ ಹೋದ ಮೇಲೆ ಗಂಡಸರಿಗೂ ಕೆಲಸವೇ ಇಲ್ಲದೆ ಸಂಸಾರವನ್ನು ಸಾಕಲು ಆದಾಯವೇ ಇರುವುದಿಲ್ಲ. ಊರಲ್ಲಿ ಕೆಲಸ ಇಲ್ಲದ ಆದಾಯ ಇಲ್ಲದ ಕೆಟ್ಟ ಪರಿಸ್ಥಿತಿಯ ಕಾರಣದಿಂದಲೇ ಬಡ ಕುಟುಂಬಗಳು ಐನೂರು ಆರುನೂರು ಮೈಲುಗಳ ದೂರದ ಮಹಾನಗರಗಳಿಗೆ ಕೆಲಸಕ್ಕಾಗಿ ವಲಸೆ ಬಂದಿರುತ್ತಾರೆ ತಾನೇ? ಈಗ ಮತ್ತೆ ಊರಿನಲ್ಲಿ ಹಸಿವು ನೀಗಿಸಲು ಅವರು ಎದುರಿಸುವ ಕಷ್ಟಗಳು ಮಕ್ಕಳ ತಾಯಂದಿರ ಮನಸ್ಸನ್ನು ಕುದಿಸುವ ಪರಿ ಹೇಳಲು ಸಾಧ್ಯವಿಲ್ಲ. ಬರಗಾಲ, ಪ್ರವಾಹ, ಚಂಡಮಾರುತ, ಸಾಂಕ್ರಾಮಿಕ ರೋಗರುಜಿನ ಹೀಗೆ ಯಾವುದೇ ದುಃಸ್ಥಿತಿ ಬರಲಿ, ಅದರ ನಕಾರಾತ್ಮಕ ಪರಿಣಾಮ ಹೆಂಗಸರನ್ನು ಮತ್ತಷ್ಟು ನರಳಿಸುತ್ತದೆ. ಅಂಥ ಪರಿಸ್ಥಿತಿಯಲ್ಲಿ ನೊಂದು ಸ್ಥೈರ್ಯ ಕಳೆದುಕೊಂಡ ಗಂಡಸರ ಕೋಪತಾಪಗಳನ್ನು ಸಹಿಸಿಕೊಳ್ಳಬೇಕಾದ ನರಕವೂ ಇವರ ಪಾಲಿಗೆ ಇರುತ್ತದೆ.

ಮನೆಯೊಳಗಿನ ಸಂಕಟ : ಸಾಂಕ್ರಾಮಿಕ ರೋಗರುಜಿನದ ಅಪಾಯವೇ ಇರಲಿ ಯುದ್ಧ ಮುಂತಾದ ಬೇರಾವುದೇ ಕಾರಣ ಇರಲಿ ಮನೆಯಿಂದ ಯಾರೂ ಆಚೆ ಹೋಗಲಾರದ ತುರ್ತುಪರಿಸ್ಥಿತಿ ನಿರ್ಮಾಣವಾದಾಗ ಎದುರಾಗುವ ಸಮಸ್ಯೆಗಳಿಗೆ ಹಲವು ಆಯಾಮಗಳು ಇರುತ್ತವೆ. ಬಹುತೇಕ ಮಧ್ಯಮ, ಕೆಳಮಧ್ಯಮ, ಬಡ ಕುಟುಂಬಗಳಲ್ಲಿ ಮನೆಯ ಅಡುಗೆಮನೆ ಕೆಲಸ, ಮನೆಯ ಸ್ವಚ್ಛತೆ ಕೆಲಸ, ಶಾಲೆಯಿಲ್ಲದ ಮಕ್ಕಳನ್ನು ಸಂಭಾಳಿಸುವುದು, ಹಿರಿಯರನ್ನು ನೋಡಿಕೊಳ್ಳುವುದು ಮುಂತಾದ ಹಲವಾರು ಕೆಲಸಗಳ ಜೊತೆ, ಮನೆಮಂದಿ ಎಲ್ಲರೂ ಸೋಂಕಿನಿಂದ ದೂರ ಇರುವಂತೆ ಕಾದುಕೊಳ್ಳುವ ಜವಾಬ್ದಾರಿಯೂ ಈಗ ಸೇರಿಕೊಳ್ಳುತ್ತದೆ. ಮನೆಯ ಗಂಡಸರು ಕೆಲಸವಿಲ್ಲದೆ, ಆದಾಯವಿಲ್ಲದೆ ಅನುಭವಿಸುವ ಮನಃಕ್ಷೋಭೆಯನ್ನು ಹೆಂಗಸರ ಮೇಲೆ ಕಾರಿಕೊಳ್ಳುವುದು, ಹೊಡೆತಬಡಿತ, ಬೈಗುಳ ಸುರಿಯುವುದು ತೀರಾ ಸಾಮಾನ್ಯವೆನ್ನುವಷ್ಟು ನಡೆಯುತ್ತದೆ. ಕುಡಿತಕ್ಕೆ ದಾಸರಾದ ಗಂಡಸರು ಅದು ಸಿಗದೇ ಹೋದಾಗ ಎಲ್ಲ ಸಿಟ್ಟನ್ನೂ ಹೆಂಗಸರ ಮೇಲೆ ತೀರಿಸಿಕೊಳ್ಳುವುದೂ ಸಾಮಾನ್ಯ. ಮನೆಯೊಳಗಿನ ದೌರ್ಜನ್ಯದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಾರ್ಚ್ ತಿಂಗಳಲ್ಲಿ ಅತಿಹೆಚ್ಚು ದೂರು ಬಂದಿರುವುದು ಕೂಡ ಇದನ್ನೇ ಹೇಳುತ್ತದೆ.

ಮನೆಯಲ್ಲಿ ಎಲ್ಲರೂ ಕೆಲಸ ಹಂಚಿಕೊಂಡು ಮಾಡುವ ಮನೋಭಾವ ಇದ್ದಾಗ ಪರವಾಗಿಲ್ಲ. ಆದರೆ ಇದು ಎಲ್ಲ ಕುಟುಂಬಗಳಲ್ಲಿ ಇರುವುದಿಲ್ಲ. ಹೀಗಾಗಿ “ಲಾಕ್ ಡೌನ್” ಅನ್ನುವುದು ಮಹಿಳೆಯರಿಗೆ ಇನ್ನಷ್ಟು ಕೆಲಸದ ಹೊರೆ ಹೊರಿಸುತ್ತದೆ. “ಮನೆಯಿಂದಲೇ ಕೆಲಸ ಮಾಡುವ” ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡ ಇನ್ನೂ ಹೆಚ್ಚು. ಇಂಥ ಕಷ್ಟಕಾಲದಲ್ಲಿ ಹೆಂಗಸರ ಆರೋಗ್ಯ ಕೆಟ್ಟಾಗ, ಸುಸ್ತಾದಾಗ ಅವರಿಗೆ ಕೆಲಸದಿಂದ ಬಿಡುವು ಸಿಗುವುದೂ ಕಡಿಮೆ. ಇದರಿಂದಾಗಿ ಒಳಹೊರಗಿನ ಒತ್ತಡಗಳು ಸೇರಿಕೊಂಡು ಅವರು ಖಿನ್ನತೆಗೆ ಜಾರುವುದು ಸಹಜವೇ ಆಗಿರುತ್ತದೆ. ಆಗ ಅವರಿಗೆ ಸಾಂತ್ವನ ಹೇಳುವ, ಆತ್ಮವಿಶ್ವಾಸ ಕುಗ್ಗದಂತೆ ನೋಡಿಕೊಳ್ಳುವ ಸಹಾಯವಾಣಿ ಅಥವಾ ಆಪ್ತ ಸಮಾಲೋಚನೆ ಸೌಲಭ್ಯ ಎಲ್ಲರಿಗೂ ಸಿಗುವುದೂ ಸುಲಭವಲ್ಲ. ಹೀಗಾಗಿ ದೈಹಿಕ ಮತ್ತು ಮಾನಸಿಕ ದಣಿವಿನಿಂದ ಮಹಿಳೆಯರು ಇನ್ನೂ ಹೈರಾಣಾಗುತ್ತಾರೆ. ಆದ್ದರಿಂದ ಸಂಕಷ್ಟಕ್ಕೊಳಗಾದ ಮಹಿಳೆಗೆ ನೆರವು ನೀಡುವುದನ್ನು ಕೂಡ “ಅಗತ್ಯ ಸೇವೆ”ಗಳ ಪಟ್ಟಿಗೆ ಸೇರಿಸಬೇಕು ಎನ್ನುವ ಸಲಹೆಗಳು ಬಂದಿವೆ. ಏಕೆಂದರೆ ಅವರಿಗೆ ಸಹಾಯವಾಣಿ, ಆಪ್ತ ಸಮಾಲೋಚನೆ, ಆಶ್ರಯತಾಣ ಮತ್ತು ಕಾನೂನು ಸಲಹೆ ನೆರವು ಇವೆಲ್ಲವೂ ಈಗ ಎಂದಿಗಿಂತ ಅಗತ್ಯವಾಗಿವೆ.

ಕೊರೊನ ಸೋಂಕು ದೂರ ಇಡುವುದಕ್ಕೆ “ಲಾಕ್ ಡೌನ್” ಮುಂತಾದ ಕ್ರಮಗಳು ಅಗತ್ಯವಾದರೂ ಅವು ಉದ್ಯೋಗಸ್ಥ ಮಹಿಳೆಯರ ಮೇಲೆ ಮಾಡುವ ಪರಿಣಾಮಗಳು ವಿಭಿನ್ನ ರೀತಿಯವಾಗಿರುತ್ತವೆ. ಆರ್ಥಿಕತೆ ಕುಸಿದು, ಕೈಗಾರಿಕೆ, ಉದ್ಯಮಗಳು ಮುಚ್ಚಿದಾಗ ಮೊದಲು ಉದ್ಯೋಗ ಕಳೆದುಕೊಳ್ಳುವವರು ಹೆಂಗಸರೇ ಆಗಿರುತ್ತಾರೆ. ಅಥವಾ ಕೆಲವೆಡೆ ಸಂಬಳ ಕಡಿತಕ್ಕೆ ಒಪ್ಪಿಕೊಳ್ಳುವುದು ಅವರಿಗೆ ಅನಿವಾರ್ಯವಾಗುತ್ತದೆ. ಇದರಿಂದ ಮನೆಯಲ್ಲಿ ಕಷ್ಟ, ಅಪಮಾನ ಎದುರಿಸುವುದೂ ಜೊತೆಗೂಡುತ್ತದೆ. ಇದು ಜಗತ್ತಿನ ಬಹುಪಾಲು ದೇಶಗಳ ಆರ್ಥಿಕತೆಯಲ್ಲಿ ಕಾಣಬಹುದಾದ ನಕಾರಾತ್ಮಕ ಬೆಳವಣಿಗೆ.

ಕೊರೊನ ಸೋಂಕಿನ ವಿರುದ್ಧ ಹೋರಾಟಕ್ಕೆ ಎಲ್ಲ ಬಗೆಯ ಸರ್ಕಾರಿ, ಖಾಸಗಿ, ಸಾಮಾಜಿಕ ಕ್ರಮಗಳು, “ಲಾಕ್ ಡೌನ್” ನಂಥ ನಿರ್ಧಾರಗಳು ಅನಿವಾರ್ಯ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಆದರೆ ಬಡಜನರು, ಮಹಿಳೆಯರು, ತಳಸಮುದಾಯಕ್ಕೆ ಸೇರಿದವರು, ಮಂಗಳಮುಖಿಯರು, ಅಂಗವಿಕಲರು ಮುಂತಾದ ಜನವರ್ಗಗಳ ಮೇಲೆ ಬೀರುವ ವಿಶಿಷ್ಟ ಪರಿಣಾಮಗಳನ್ನು, ಅವರ ಬದುಕನ್ನು ಅತಂತ್ರ ಮಾಡುವ ದುಃಸ್ಥಿತಿ ಒದಗುವುದನ್ನು ಕಡೆಗಣಿಸಬಾರದು. ಸಾಮಾಜಿಕ ಸಮಾನತೆ, ಕೌಟುಂಬಿಕ ಸಮಾನತೆ ಮತ್ತು ಜನರ ಮಾನಸಿಕ ಆರೋಗ್ಯ ಇವೆಲ್ಲವೂ ಪರೀಕ್ಷೆಗೆ ಒಳಗಾಗುವುದರಿಂದ ಅವುಗಳ ರಕ್ಷಣೆಯ ಬಗ್ಗೆ ಆಲೋಚಿಸುವುದು ಕೂಡ ಸರ್ಕಾರದ ಜವಾಬ್ದಾರಿಯೇ ಆಗಿರುತ್ತದೆ. (ವಿವಿಧ ಮೂಲಗಳಿಂದ ಸಂಗ್ರಹ)

  • ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ದೇಶಕಾಲ/ ಮಹಿಳೆಯರ ಸಂಕಷ್ಟ ಹೆಚ್ಚಿಸಿದ ಕೊರೊನ

  • April 1, 2020 at 5:58 pm
    Permalink

    Thanks for the article

    Reply

Leave a Reply

Your email address will not be published. Required fields are marked *