FEATUREDದೇಶಕಾಲ

ದೇಶಕಾಲ / ಮಹಿಳೆಯರು ಮತಗಟ್ಟೆಗೆ ಹತ್ತಿರ, ಸಂಸತ್ತಿಗೆ ಬಹುದೂರ

ಈ ಚುನಾವಣೆಯಲ್ಲಿ ದೇಶದಾದ್ಯಂತ ಮತಗಟ್ಟೆಗಳ ಮುಂದೆ ನಿಂತ ಮಹಿಳೆಯರು ಒಡ್ಡಿದ ಸಶಕ್ತ ಸವಾಲನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ನಮ್ಮಲ್ಲಿ 1000 ಪುರುಷ ಮತದಾರರಿಗೆ 958 ಮಹಿಳಾ ಮತದಾರರಿದ್ದಾರೆ. ಮಹಿಳೆಯರ ಸಂಖ್ಯೆ ಮತ್ತು ಸಾಮಥ್ರ್ಯಕ್ಕೆ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯಬೇಕಾದರೆ, ಮೀಸಲಾತಿ ಮಸೂದೆಯ ಅಂಗೀಕಾರ ಅನಿವಾರ್ಯ.

ರಾಜಕೀಯ ರಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ಉದ್ದೇಶದ ಮೀಸಲಾತಿ ಮಸೂದೆ ಇನ್ನೂ ರಾಜಕೀಯ ಪಕ್ಷಗಳ `ಚುನಾವಣಾ ಪ್ರಣಾಳಿಕೆ’ ಎಂಬ ಪಂಜರದಲ್ಲೇ ಕುಳಿತಿದೆ. ಮಸೂದೆಯನ್ನು ಕಾನೂನು ಮಾಡುತ್ತೇವೆ ಎಂದು ಕೆಲವರು ಆ ಪಂಜರವನ್ನು ಮತದಾರರಿಗೆ ತೋರಿಸಿದ್ದೂ ಆಯಿತು. ಆದರೆ ಅಭಿವೃದ್ಧಿ, ಮೀಸಲಾತಿ, ಜನೋದ್ಧಾರ ಮುಂತಾದ ಯಾವುವೂ ಚುನಾವಣೆಯಲ್ಲಿ ಮುಖ್ಯ ಸಂಗತಿಗಳಾಗುವುದಿಲ್ಲ ಎನ್ನುವುದಕ್ಕೆ ಈ ಚುನಾವಣೆ ಹಿಂದೆಂದಿಗಿಂತ ದೊಡ್ಡ ಉದಾಹರಣೆಯಾಗಿ ನಡೆದುಹೋಯಿತು.

ಹೇಳಿದ್ದನ್ನೆಲ್ಲಾ ಅಥವಾ ಕೇಳಿದ್ದನ್ನೆಲ್ಲಾ ಕೊಡಲು ಮಹಿಳೆಯರೇನು `ಮತಬ್ಯಾಂಕ್’ ಅಲ್ಲವಲ್ಲ ಎನ್ನುವುದು ಎಲ್ಲ ರಾಜಕೀಯ ಪಕ್ಷಗಳ ದೃಢವಾದ ನಂಬಿಕೆ. ಆದರೆ, ದೇಶದ ಒಟ್ಟು ಮತದಾರರ ಪೈಕಿ ಏರಿದ ಮಹಿಳೆಯರ ಸಂಖ್ಯೆಯ ಪ್ರಮಾಣ ಮತ್ತು ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತ ಆ ಮಹಿಳಾ ಮತದಾರರ ಏರಿದ ಪ್ರಮಾಣ – ಇವೆರಡೂ ರಾಜಕೀಯ ಪಕ್ಷಗಳು ಮೀಸಲಾತಿ ಮಸೂದೆಯತ್ತ ಗಮನ ಕೊಡಲೇಬೇಕೆಂದು ಒತ್ತಾಯಿಸುತ್ತಿವೆ.

ಈ ಚುನಾವಣೆಯಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕೆಂದು ಯಾರೊಬ್ಬರೂ ಯೋಚಿಸಲಿಲ್ಲ. 2019 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 8048 ಅಭ್ಯರ್ಥಿಗಳಲ್ಲಿ ಇದ್ದದ್ದು ಕೇವಲ 711 ಮಹಿಳೆಯರು. ಅಂದರೆ ಕಣದಲ್ಲಿದ್ದ ಅಭ್ಯರ್ಥಿಗಳಲ್ಲಿ ಶೇ. 8.8 ರಷ್ಟು ಮಾತ್ರ ಮಹಿಳೆಯರಿದ್ದರು. ಇದು, 2014 ರ ಚುನಾವಣೆಗಿಂತ ತುಸುವೇ ಅಂದರೆ, ಶೇ. 1.2 ಮಾತ್ರ ಹೆಚ್ಚು ಅಷ್ಟೆ. ದೇಶದ ಮೂರು ರಾಜ್ಯಗಳು ಮತ್ತು ಕೆಲವೊಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳೇ ಇರಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‍ನಂಥ ಬೃಹತ್ ರಾಷ್ಟ್ರೀಯ ಪಕ್ಷಗಳು ಮಹಿಳೆಯರಿಗೆ ಕೊಟ್ಟ ಟಿಕೆಟ್ ಪ್ರಮಾಣ ಶೇ. 12.8 ಮತ್ತು ಶೇ. 12.6 ರಷ್ಟು ಮಾತ್ರ. ಇನ್ನು ಶೇ. 33 ರಷ್ಟು ಮೀಸಲಾತಿ ಎಂಬುದು ಎಷ್ಟು ದೂರದ ಕನಸು!

ಹೆಂಗಸರಿಗೆ ಚುನಾವಣೆ ಗೆಲ್ಲುವ ಸಾಮಥ್ರ್ಯ ಇಲ್ಲ ಎಂದೇ ಎಲ್ಲ ಪಕ್ಷಗಳ ಗಂಡಸರೂ ಮತ್ತೆ ತಮ್ಮ ದಿವ್ಯ ರಾಜಕೀಯ ಜ್ಞಾನ ಪ್ರದರ್ಶಿಸಿ, ತಾವು ಮಾಡಿದ ಅನ್ಯಾಯವನ್ನು ಸಮರ್ಥಿಸಿಕೊಂಡರು. ಹೆದರಿಸಿ, ಬೆದರಿಸಿ ಹೆಂಗಸರನ್ನು ಕೆಟ್ಟ ಮಾತುಗಳಿಂದ ದೂಷಿಸಿ, ಅವರು ಕಣದಿಂದ ದೂರ ಇರುವಂತೆ ನೋಡಿಕೊಂಡರು. ಕೆಲವು ಹಿರಿಯ ಪುರುಷ ರಾಜಕಾರಣಿಗಳಂತೂ ತಾವು `ಸುಮಲತಾ ಸಿಂಡ್ರೋಮ್’ ನಿಂದ ಅದೆಷ್ಟು ಬಳಲುತ್ತಿದ್ದೇವೆ ಎನ್ನುವುದನ್ನು ಚೆನ್ನಾಗಿಯೇ ತೋರಿಸಿಕೊಂಡರು. ಧೈರ್ಯದಿಂದ ಸ್ಪರ್ಧಿಸಿದ ಮಹಿಳೆಯರನ್ನು ಟ್ರೋಲ್‍ಗಳಲ್ಲಿ, ಟ್ವೀಟ್‍ಗಳಲ್ಲಿ ಬಡಿದು ಚಚ್ಚಿದರು.

ಆದರೆ ಈ ಚುನಾವಣೆಯಲ್ಲಿ ದೇಶದಾದ್ಯಂತ ಮತಗಟ್ಟೆಗಳ ಮುಂದೆ ನಿಂತ ಮಹಿಳೆಯರು ಒಡ್ಡಿದ ಸಶಕ್ತ ಸವಾಲನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ, `1000 ಗಂಡಸರಿಗೆ 943 ಹೆಂಗಸರು’ ಎನ್ನುವುದು ನಮ್ಮ ದೇಶದ ಜನಸಂಖ್ಯೆಯ ಲಿಂಗಾನುಪಾತ. ಆದರೆ ನಮ್ಮ ದೇಶದ ಮತದಾರರ ಒಟ್ಟು ಸಂಖ್ಯೆಯಲ್ಲಿರುವ ಲಿಂಗಾನುಪಾತ – 1000 ಪುರುಷ ಮತದಾರರಿಗೆ 958 ಮಹಿಳಾ ಮತದಾರರು. ಸಾಮಾನ್ಯವಾಗಿ ಚುನಾವಣೆಗಳಲ್ಲಿ ಗಂಡಸರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಆದರೆ ಈ ಚುನಾವಣೆ ಅದನ್ನು ಸುಳ್ಳುಮಾಡಿದೆ. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ತಾವೂ ಪರಿಗಣಿಸಬೇಕಾದ ಮತದಾರರು ಎಂಬುದನ್ನು ಇನ್ನಷ್ಟು ಸಾಬೀತು ಮಾಡಿದ್ದಾರೆ. ಆದ್ದರಿಂದ ಸೀರೆ, ಗ್ಯಾಸ್ ಸಿಲಿಂಡರ್, ಮಿಕ್ಸರ್ ಮುಂತಾದ ಆಮಿಷಗಳನ್ನು ಮಹಿಳೆಯರತ್ತ ಎಸೆಯುವುದನ್ನು ಮೀರಿದ ಮರ್ಯಾದೆ ಅವರಿಗೆ ಸಿಗಬೇಕಿದೆ. ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಗಟ್ಟಿ ನಿರ್ಧಾರಕ್ಕೆ ಎಲ್ಲರೂ ಆಗ್ರಹಿಸಬೇಕಿದೆ. (ವಿವಿಧ ಮೂಲಗಳಿಂದ.)
-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *