ದೇಶಕಾಲ/ ಮಹಿಳೆಯರಿಗೆ ಸೇನೆಯ ನಾಯಕತ್ವ
ಮಹಿಳೆಯರು ಸೇನೆಗೆ ಸೇರುವ ಅವಕಾಶ ಪಡೆದು ಅನೇಕ ವರ್ಷಗಳಾಗಿದ್ದರೂ ಸೇನೆಯ ಮೂರು ಸೇವೆಗಳಲ್ಲಿ ನಾಯಕತ್ವ ವಹಿಸಲು ಅವರಿಗೆ ಸಾಧ್ಯವೇ ಇರಲಿಲ್ಲ. ಲೋಕವನ್ನು ಆವರಿಸಿಕೊಂಡಿರುವ ಲಿಂಗ ತಾರತಮ್ಯದ ಮನೋಭಾವ ಸೇನೆಯ ವಿಚಾರಕ್ಕೂ ಅನ್ವಯವಾಗಿತ್ತು. ಸರ್ಕಾರ ಮತ್ತು ಹಲವು ಸೇನಾ ನಾಯಕರು ಅದನ್ನೇ ಹೇಳುತ್ತಿದ್ದರಿಂದ ಮಹಿಳೆಯರಿಗೆ ಸೇನೆಯಲ್ಲಿ ಕೇವಲ ಅಲ್ಪಕಾಲದ ಉದ್ಯೋಗಕ್ಕೆ ಮಾತ್ರ ಅವಕಾಶವಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪು, ಸಂವಿಧಾನ ಕೊಟ್ಟಿರುವ ಸಮಾನತೆಯ ನೆಲೆಯ ಮೇಲೆ ಮಹಿಳೆಯರಿಗೆ ಪುರುಷರಂತೆಯೇ ಸೇನೆಯ ಹತ್ತು ಶಾಖೆಗಳಲ್ಲಿ ಶಾಶ್ವತ ಉದ್ಯೋಗದ ಅವಕಾಶ ಮತ್ತು ಆಯ್ಕೆಯನ್ನು ಕೊಟ್ಟಿದೆ.
ನಮ್ಮ ದೇಶದ ಚರಿತ್ರೆಯಲ್ಲಿ ಕೆಲವರಾದರೂ ವೀರಮಾತೆಯರು, ಕುದುರೆ ಹತ್ತಿ ಖಡ್ಗ ಹಿಡಿದು ಯುದ್ಧದಲ್ಲಿ ಹೋರಾಡಿದ ದಿಟ್ಟ ರಾಣಿಯರು, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಹೋರಾಟಗಾರ್ತಿಯರು ಇದ್ದೇ ಇದ್ದಾರೆ. ಆದರೆ ಸ್ವತಂತ್ರ ಭಾರತದಲ್ಲಿ ಸೈನ್ಯಕ್ಕೆ ಸೇರಲು ಮಹಿಳೆಯರು ನಾನಾ ಬಗೆಯ ಹೋರಾಟ ಮಾಡಬೇಕಾಯಿತು. ಮಹಿಳೆಯರೆಂದರೆ ಅಬಲೆಯರು, ಅವರನ್ನು ಸೇನೆಗೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಂಪರಾಗತ ಆಲೋಚನೆ ಮತ್ತು ಲಿಂಗ ತಾರತಮ್ಯದ ಪಿತೃಪ್ರಧಾನ ಮನಃಸ್ಥಿತಿಯ ವಿರುದ್ಧ ಹೋರಾಡುವುದೇ ಅವರ ಮೊದಲ ಗುರಿಯಾಗುವುದು ಅನಿವಾರ್ಯವಾಯಿತು. ಕೊನೆಗೆ 1990 ರಿಂದ ದಕ್ಕಿದ ಅವಕಾಶದಲ್ಲಿ ಅವರು `ಅಲ್ಪಕಾಲದ ಉದ್ಯೋಗ’ ಪಡೆದು ತಮ್ಮ ಸಾಮಥ್ರ್ಯವನ್ನು ತೋರುತ್ತಿದ್ದಾರೆ. ಇದುವರೆಗೆ ಸೈನ್ಯದಲ್ಲಿ 1653, ವಾಯುದಳದಲ್ಲಿ 1905 ಮತ್ತು ನೌಕಾದಳದಲ್ಲಿ 490 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಆದರೆ ಒಟ್ಟಾರೆ ಸೈನ್ಯದಲ್ಲಿ ವಿಪರೀತ ಆಕ್ರಮಣ ಪ್ರಧಾನ ವಿಭಾಗಗಳೇ ಇರುವುದರಿಂದ ಅವರಿಗೆ ಅದಕ್ಕೆಲ್ಲ ಪ್ರವೇಶವೇ ಸಾಧ್ಯವಾಗಿರಲಿಲ್ಲ.
ಮಹಿಳೆಯರಿಗೆ ಸೈನ್ಯದಲ್ಲಿ ಶಾಶ್ವತ ಉದ್ಯೋಗದ ಅವಕಾಶ ನೀಡಬೇಕೆಂದು 2000 ದಲ್ಲೇ ದೆಹಲಿ ಹೈಕೋರ್ಟ್ ತೀರ್ಪು ನೀಡಿದ್ದರೂ ಅದಕ್ಕೆ ಆಳುವ ಸರ್ಕಾರಗಳು ಆದ್ಯತೆ ನೀಡಿರಲಿಲ್ಲ. 2011 ರಲ್ಲಿ ಸೈನ್ಯದ ಕಾನೂನು ಮತ್ತು ಶಿಕ್ಷಣ ವಿಭಾಗಗಳಲ್ಲಿ ಮಾತ್ರ ಕೆಲಮಟ್ಟಿಗೆ ಬಡ್ತಿ ಸಾಧ್ಯವಾಗಿತ್ತು. ಪ್ರಧಾನಿಗಳೇ 2018 ರಲ್ಲಿ ಮಹಿಳೆಯರಿಗೆ ಇನ್ನಷ್ಟು ಅವಕಾಶಗಳನ್ನು ನೀಡುವ ತೀರ್ಮಾನವನ್ನು ಪ್ರಕಟಿಸಿದ್ದರು. ಕಳೆದ ವರ್ಷ ಸೈನ್ಯದ ಅನೇಕ ವಿಭಾಗಗಳಲ್ಲಿ ಶಾಶ್ವತ ಉದ್ಯೋಗದ ಅವಕಾಶವನ್ನು ಸರ್ಕಾರ ಪ್ರಕಟಿಸಿತ್ತು. ಆದರೆ, ಯುದ್ಧ, ಹೋರಾಟ, ಆಕ್ರಮಣಗಳಿಂದ ಅವರನ್ನು ಹೊರತು ಪಡಿಸಲಾಗಿತ್ತು. ಆದ್ದರಿಂದ ಇನ್ನಷ್ಟು ಸೂಕ್ತ ಅವಕಾಶಗಳಿಗಾಗಿ ಅವರು ಹಲವಾರು ವರ್ಷಗಳಿಂದ ನಡೆಸುತ್ತಿದ್ದ ಕಾನೂನು ಹೋರಾಟವನ್ನು ಮುಂದುವರೆಸುವುದು ಅನಿವಾರ್ಯವಾಯಿತು. ಈಗ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು, ಮಹಿಳೆಯರಿಗೆ ಎಲ್ಲ ವಿಭಾಗಗಳಲ್ಲಿ ಅವಕಾಶ ನೀಡಲಿದೆ. ನಾಯಕತ್ವದ ಸ್ಥಾನಗಳನ್ನೂ ಕೊಡಬೇಕಾಗಿದೆ.
“ಮಹಿಳೆಯರು ಅಬಲೆಯರು” ಎಂಬ ಸೈನ್ಯದ ಮನೋಭಾವವನ್ನು ತಿರಸ್ಕರಿಸಿರುವ ಈ ತೀರ್ಪು, ಇಂಥ ಮನೋಭಾವ, ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳಿ ಎಂದೂ ಹೇಳಿದೆ. ಮಹಿಳೆಯರು ಸೈನ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದಿರುವ ಸುಪ್ರೀಂ ಕೋರ್ಟ್ ಈಗ ಸೇನೆಯಲ್ಲಿರುವ ಹದಿಮೂರು ದಿಟ್ಟ ಹೋರಾಟಗಾರ್ತಿಯರ ಸಾಧನೆಯನ್ನು ಶ್ಲಾಘಿಸಿದೆ. ಕೋರ್ಟ್ ನೀಡಿರುವವ ಈ ಆದೇಶವನ್ನು ಸೇನೆಯ ವಿಭಾಗಗಳು ಈಗ ಸವಾಲಾಗಿ ಸ್ವೀಕರಿಸಿ ಮಹಿಳೆಯರನ್ನು ಸಿದ್ಧಗೊಳಿಸಬೇಕಿದೆ. ಏಕೆಂದರೆ ಅಂಥ ಶೌರ್ಯ, ಆಕ್ರಮಣಗಳ ಪ್ರದರ್ಶನಕ್ಕೆ ಅಗತ್ಯವಾದ ತರಬೇತಿಯ ಅವಕಾಶವನ್ನೇ ಅವರಿಗೆ ನೀಡಿರಲಿಲ್ಲ. ಮಹಿಳೆಯರಿಗೆ ಶಾಶ್ವತ ಉದ್ಯೋಗ ಮತ್ತು ನಾಯಕತ್ವದ ಅವಕಾಶ ದೊರಕಿರಲಿಲ್ಲ. ಅದಕ್ಕೆ ಸಾಂಸ್ಕøತಿಕ ಸಮಸ್ಯೆಯೂ ಸೇರಿ ನಾನಾ ಕಾರಣಗಳನ್ನು ಹೇಳಲಾಗುತ್ತಿತ್ತು. ಮಹಿಳೆಯರಿಂದ ಆದೇಶ ಪಡೆಯುವುದು ಪುರುಷರಿಗೆ ಇಷ್ಟವಾಗುವುದಿಲ್ಲ ಎಂದು ಉನ್ನತ ಸೇನಾನಾಯಕರೇ ಬಹಿರಂಗವಾಗಿ ಹೇಳಿದ್ದುಂಟು. ಆದರೆ ಈಗ ತೀರ್ಪು ಅವೆಲ್ಲವನ್ನೂ ಬದಿಗಿರಿಸಿ ಮಹಿಳೆಯರಿಗೆ ಹಿರಿಯ ಜವಾಬ್ದಾರಿ ಮತ್ತು ನಾಯಕತ್ವಗಳಿಗೆ ಅವಕಾಶ ಕೊಟ್ಟಿದೆ. ಸೇನೆಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸಮಾನದೃಷ್ಟಿಯಿಂದ ಪರಿಗಣಿಸಬೇಕಾಗಿದೆ. “ಸೈನ್ಯ ನಮ್ಮನ್ನು ಬಿಡಬೇಕು ಎಂದು ಇಷ್ಟಪಟ್ಟಿತ್ತು, ಆದರೆ ನಮಗೆ ಅದನ್ನು ಬಿಡಲು ಇಷ್ಟವಿರಲಿಲ್ಲ” ಎಂಬ ವಾಯುದಳದ ಮಹಿಳಾ ಅಧಿಕಾರಿಯೊಬ್ಬರ ಮಾತು ನಾನಾ ಅರ್ಥಗಳನ್ನು ಹೊರಸೂಸುತ್ತದೆ.
-ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.