FEATUREDದೇಶಕಾಲ

ದೇಶಕಾಲ / ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಆಗ್ರಹ

ಕೇಂದ್ರದಲ್ಲಿ ಬಿಜೆಪಿ ಹೊಸ ಸರ್ಕಾರ ಬಂದಿದೆ. ಅನೇಕ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸುವ ತಯಾರಿ ನಡೆದಿದೆ. ಆದರೆ ಎರಡು ದಶಕಗಳಿಂದ ಮಂಡನೆ ಭರವಸೆಯ ನಾಟಕದ ತೆರೆಮರೆಯಲ್ಲೇ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಇನ್ನಾದರೂ ಸಂಸತ್ತಿನ ಪ್ರಥಮ ಅಧಿವೇಶನದಲ್ಲೇ ಮಂಡಿಸಬೇಕು ಎಂದು ದೇಶದಾದ್ಯಂತ ಪ್ರಜ್ಞಾವಂತ ಪ್ರಜೆಗಳು ಅಪೇಕ್ಷಿಸುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯ ಅಧಿಕಾರಕ್ಕೆ ಒತ್ತಾಯಿಸುವ `ಶಕ್ತಿ’ ಸಂಘಟನೆಯ ನೇತೃತ್ವದಲ್ಲಿ ಕೇಂದ್ರ ಕಾನೂನು ಸಚಿವರಾದ ರವಿಶಂಕರ್ ಪ್ರಸಾದ್ ಅವರಿಗೆ ಒಂದು `ಆಗ್ರಹ ಪತ್ರ’ ವನ್ನು ಬರೆಯಲಾಗಿದೆ.

“ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ನಿಮಗೆ ಅಭಿನಂದನೆಗಳು ಮತ್ತು ಭಾರತದ ಕಾನೂನು ಸಚಿವರಾದ ನಿಮಗೆ ಸ್ವಾಗತ ಕೋರುತ್ತೇವೆ. ಭಾರತದಾದ್ಯಂತ ಇರುವ ನಾವು ಅಂದರೆ, ಈ ಕುರಿತು ಕಾಳಜಿ ಇಟ್ಟುಕೊಂಡಿರುವ ಮಹಿಳೆಯರು ಮತ್ತು ಪುರುಷರು ನಿಮಗೆ ಪತ್ರ ಬರೆಯುತ್ತಿದ್ದೇವೆ. ದೇಶದಲ್ಲಿ ಹೆಚ್ಚು ಮಂದಿ ಮಹಿಳಾ ಸಂಸತ್ ಸದಸ್ಯರು ಮತ್ತು ಶಾಸನ ಸಭೆ ಸದಸ್ಯರು ಇರಬೇಕೆಂದು ಅಪೇಕ್ಷಿಸುವ ಪಕ್ಷಾತೀತ ಪ್ರಜೆಗಳ ಸಮೂಹ ನಮ್ಮದು. ಮಹಿಳೆಯರು ಮತ್ತು ಪುರುಷರು ಇಬ್ಬರೂ ಮುನ್ನಡೆಸು ಬಲಿಷ್ಠ ಭಾರತಕ್ಕೆ ಬದ್ಧವಾಗಿರುವ ಈ ಸಮೂಹದಲ್ಲಿ ಸಮಾಜದ ವಿವಿಧ ವರ್ಗಗಳಿಗೆ ಸೇರಿದ ಸಾಮಾನ್ಯ ಪ್ರಜೆಗಳು, ಇಂಜಿನಿಯರ್‍ಗಳು, ರೈತರು, ಬ್ಯಾಂಕರ್‍ಗಳು, ಶಿಕ್ಷಕರು ಎಲ್ಲ ಇದ್ದಾರೆ.

ಮಹಿಳಾ ಮೀಸಲಾತಿ ಮಸೂದೆಗೆ ಒಂದು ಹೊಸ ಪ್ರಸ್ತಾಪವನ್ನು ರಚಿಸಿ ಅಥವಾ ಹಳೆಯ ಕರಡನ್ನು ನವೀಕರಿಸಿ ಈ ಸಂಸತ್ತಿನ ಪ್ರಥಮ ಅಧಿವೇಶನದಲ್ಲಿ ಚರ್ಚೆಗೆ ಇಡಬೇಕೆಂದು ನಾವು ಮನವಿ ಮಾಡುತ್ತೇವೆ. ನಿಮಗೆ ಗೊತ್ತಿರುವ ಹಾಗೆ, ಆಡಳಿತ ನಡೆಸುತ್ತಿರುವ ನಿಮ್ಮದೇ ಪಕ್ಷವಾದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅದರ ಬಗ್ಗೆ ಮಾತು ಕೊಟ್ಟು ಭರವಸೆ ನೀಡಿದೆ: (ಪುಟ 32, ವಿಷಯ 14.)

`ಮಹಿಳೆಯರಿಗೆ ಮೀಸಲಾತಿ: ಮಹಿಳೆಯರ ಕಲ್ಯಾಣ ಮತ್ತು ಅಭಿವೃದ್ಧಿಗೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ಸರ್ಕಾರದ ಎಲ್ಲ ಸ್ತರಗಳಲ್ಲಿ ನೀಡಲಾಗುತ್ತದೆ. ಮತ್ತು ಸಂವಿಧಾನಕ್ಕೆ ಒಂದು ತಿದ್ದುಪಡಿ ಮಾಡುವ ಮೂಲಕ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ತರಲು ಬಿಜೆಪಿ ಬದ್ಧವಾಗಿದೆ.”

ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು, ಮಹಿಳೆಯರ ನೇತೃತ್ವದ ಭಾರತ ನಿರ್ಮಿಸುವ ಬಗ್ಗೆ ತಮಗಿರುವ ಬದ್ಧತೆಯನ್ನು ಹಲವಾರು ಬಾರಿ ಭಾಷಣಗಳಲ್ಲಿ ಹೇಳಿದ್ದಾರೆ.

ಇನ್ನಿತರ ವಿರೋಧ ಪಕ್ಷಗಳು ಕೂಡ ತಮ್ಮ ಪ್ರಣಾಳಿಕೆಗಳಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ವಚನ ಕೊಟ್ಟಿವೆ. ಇದರಿಂದ ಈ ಕುರಿತು ಎಲ್ಲ ಪಕ್ಷಗಳ ಬೆಂಬಲ ಸಿಗುವುದು ಸ್ಪಷ್ಟವಾಗಿದೆ. ಹಾಗೆ ನೋಡಿದರೆ, ಅನೇಕ ರಾಜ್ಯ ಸರ್ಕಾರಗಳು – ಒದಿಶಾದ ಬಿಜು ಜನತಾ ದಳ, ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷ ಮತ್ತು ಕಾಂಗ್ರೆಸ್ ಆಡಳಿತವಿರುವ ಹಲವು ರಾಜ್ಯ ಸರ್ಕಾರಗಳು ತಮ್ಮ ವಿಧಾನಸಭೆಗಳಲ್ಲಿ ಈ ಕುರಿತು ಗೊತ್ತುವಳಿಗಳನ್ನು ಸ್ವೀಕರಿಸಿವೆ.

ಮೀಸಲಾತಿ ಎನ್ನುವುದು ಈಡೇರದ ಭರವಸೆಯಾಗಿ ಉಳಿದಿದ್ದರೂ, ಯಾವುದೇ ಪಕ್ಷ, ಈ ಕುರಿತು ಭರವಸೆ ಕೊಡುತ್ತಿರುವುದು ಇದೇ ಮೊದಲಲ್ಲ ಎನ್ನುವುದು ಹಿರಿಯ ಸಂಸದೀಯ ಪಟುವಾದ ತಮಗೆ ತಿಳಿದೇ ಇದೆ. ಈ ದೇಶದ ಮಹಿಳೆಯರು ಈ ವಿಚಾರದಲ್ಲಿ ಅಪಾರ ತಾಳ್ಮೆ ಪ್ರದರ್ಶಿಸಿದ್ದಾರೆ ಮತ್ತು ಇದು ನಮ್ಮ ನ್ಯಾಯೋಚಿತವಾದ ಬೇಡಿಕೆ ಎನ್ನುವುದನ್ನು ನೀವೂ ಒಪ್ಪುವಿರಿ.

ಅತ್ಯಂತ ಪ್ರಬಲ ಮತ್ತು ಶಕ್ತಿವಂತ ಸಚಿವರಲ್ಲಿ ಒಬ್ಬರಾದ ತಾವು, ಭಾರತದ ಪ್ರಜಾಪ್ರಭುತ್ವದ ಹಣೆಬರಹವನ್ನು, ಅದರಲ್ಲೂ ಭಾರತದ ಅರ್ಧಭಾಗದ- ಅಂದರೆ ಮಹಿಳೆಯರ ಹಣೆಬರಹವನ್ನು ಬದಲಿಸಬಹುದು. ಈ ಚುನಾವಣೆಯಲ್ಲಿ ಮಹಿಳಾ ಮತದಾರರು ಹಿಂದಿನ ದಿನಗಳಿಗಿಂತ ಹೆಚ್ಚಿಗೆ ಮತಗಟ್ಟೆಗೆ ಬಂದಿದ್ದಾರೆ, ಪುರುಷ ಮತದಾರರಿಗೆ ಸರಿಸಮನಾಗಿ ಮತ ಹಾಕಿದ್ದಾರೆ ಮತ್ತು ನಿಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಹೊಸದಾಗಿ ಚುನಾಯಿತವಾಗಿರುವ ಸರ್ಕಾರವು ಮಹಿಳೆಯರಿಗೆ ಹೆಚ್ಚಿನ ಧ್ವನಿ ನೀಡುವ ಮೂಲಕ ಈ ಬಹುಮತವನ್ನು ಮೆರೆಸಲಿ ಎಂದು ನಾವು ಕೇಳುತ್ತಿದ್ದೇವೆ. ಈ ಮಸೂದೆ ಅನೇಕಾನೇಕ ಹುಸಿ ಆರಂಭಗಳನ್ನು ಕಂಡಿದೆ, ಆದರೆ ನೀವು ಇದನ್ನು ಯಶಸ್ವಿಯಾಗಿ ಅಂಗೀಕಾರದತ್ತ ಕೊಂಡೊಯ್ದು ಇತಿಹಾಸ ನಿರ್ಮಿಸಬಹುದು.

ಕಾನೂನು ಸಚಿವಾಲಯವು ಆಸಕ್ತಿ ವಹಿಸಿ, ಹದಿನೇಳನೇ ಲೋಕಸಭೆಯ ಪ್ರಥಮ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕರಡನ್ನು ರೂಪಿಸಿ ಚರ್ಚೆಗಾಗಿ ಸಂಸತ್ತಿನಲ್ಲಿ ಮಂಡಿಸಬೇಕೆಂದು ನಾವು ಕೇಳುತ್ತಿದ್ದೇವೆ. 250 ಕ್ಕೂ ಹೆಚ್ಚು ಸಂಘಟನೆಗಳು ಮತ್ತು ಗಣ್ಯ ಪ್ರಜೆಗಳ ಸಾಮೂಹಿಕ ಮನವಿಯಾಗಿ ಈ ಪತ್ರವನ್ನು ಸಲ್ಲಿಸುತ್ತಿದ್ದೇವೆ. ಅವರ ಪಟ್ಟಿಯನ್ನೂ ಲಗತ್ತಿಸಲಾಗಿದೆ.

ನೀವು ನಮಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂದು ಕೇಳುತ್ತಿದ್ದೇವೆ. ಧನ್ಯವಾದಗಳು.”

– ಶಕ್ತಿ ಸಂಘಟನೆಯು ರೂಪಿಸಿದ ಈ ಪತ್ರದ ಮೂಲಕ ಹಕ್ಕೊತ್ತಾಯಕ್ಕೆ ದೇಶಾದ್ಯಂತ, ಪ್ರದೇಶ, ಜಾತಿ, ಸಿದ್ಧಾಂತ ಎಲ್ಲವನ್ನೂ ಮೀರಿ ಇದೀಗ 270 ಸಂಘಟನೆಗಳು/ ಗಣ್ಯರು ಕೈಜೋಡಿಸಿದ್ದಾರೆ. ಮೀಸಲಾತಿ ಮಸೂದೆ ಸಂಸತ್ತಿನ ಮೊದಲ ಅಧಿವೇಶನದಲ್ಲೇ ಮಂಡನೆಯಾಗಬೇಕು, ಆ ಮೂಲಕ ಹೆಚ್ಚು ಮಂದಿ ಸಂಸದೆಯರು, ಶಾಸಕಿಯರು ದೇಶದಲ್ಲಿ ಕಾಣಬೇಕು ಎನ್ನುವುದು ಈ ಆಂದೋಲನದ ಆಶಯ. ಭಾರತದ ಪ್ರಥಮ ಗಗನಯಾನಿ ರಾಕೇಶ್ ಶರ್ಮ, ಉದ್ಯಮಿ ಸೈರಸ್ ಗುಜ್ದೆರ್, ಶಕ್ತಿ ಸಂಸ್ಥಾಪಕಿ ತಾರಾ ಕೃಷ್ಣಸ್ವಾಮಿ, ಮಧುಮಿತಾ ಗೋಮತಿನಾಯಗಂ ಮತ್ತು ಅನೇಕ ಗಣ್ಯರು ಇದನ್ನು ಬೆಂಬಲಿಸಿದ್ದಾರೆ. ಹಲವಾರು ಜನಾಂದೋಲನ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ. ಅನೇಕ ಪ್ರಜಾ ಹಕ್ಕುಗಳ ಚಳವಳಿ, ದಲಿತ ಚಳವಳಿ, ಸಾಂಸ್ಕøತಿಕ ಚಳವಳಿಗಳ ಸಂಘಗಳು ಒಕ್ಕೊರಲಿನಿಂದ ಇದನ್ನು ಬೆಂಬಲಿಸಿವೆ.

ಏನೇನೂ ಸಾಲದು: ಹದಿನೇಳನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಸಂಸತ್ ಪ್ರವೇಶಿಸಿದ ಮಹಿಳೆಯರ ಸಂಖ್ಯೆ 78 ಕ್ಕೆ ಏರಿದರೂ (ಈಗ ಶೇ. 14) ಈ ಚುನಾಯಿತ ಸಮೂಹದೊಳಗಿನ ಬಹುತ್ವ, ಜಾತಿಸಮಾನತೆ, ವೈವಿಧ್ಯ ಸಮಾಧಾನಕರವಾಗಿಲ್ಲ. ಅಲ್ಲದೆ, ನೆರೆಹೊರೆಯ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಮಹಿಳಾ ಪ್ರಾತಿನಿಧ್ಯ ಏನೇನೂ ಸಾಲದು. ಈ ಮೀಸಲಾತಿ ಮಸೂದೆ ಈಗಿರುವ ಹಲವಾರು ಕೊರತೆಗಳನ್ನು ನಿವಾರಿಸಲು ಅತ್ಯಗತ್ಯವಾಗಿದೆ.

2008 ರ ಮೇ 6 ರಂದು ಯುಪಿಎ-1 ಸರ್ಕಾರದ ಆಡಳಿತದಲ್ಲಿ ಸಂವಿಧಾನದ 108 ನೇ ತಿದ್ದುಪಡಿ ಮಸೂದೆಯಾಗಿ ಪ್ರಸ್ತಾವಗೊಂಡ ಮಹಿಳಾ ಮೀಸಲಾತಿ ಮಸೂದೆ, 21 ವರ್ಷ ಕಳೆದರೂ ಹಾಗೆಯೇ ಉಳಿದಿದೆ. ಈ ಮಸೂದೆ ಉದ್ದೇಶಿಸಿರುವ ಶೇ. 33 ಮಹಿಳಾ ಮೀಸಲಾತಿ ಸ್ಥಾನಗಳಲ್ಲಿ, ಮೂರನೇ ಒಂದು ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಮೀಸಲಿಡುವುದನ್ನೂ ಹೇಳುತ್ತದೆ. ಆದರೆ 1996 ರ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಶೀಲಿಸಿ ನೀಡಲಾದ ವರದಿಯು `ಇತರ ಹಿಂದುಳಿದ ವರ್ಗಗಳ’ (ಒಬಿಸಿ) ಮಹಿಳೆಯರಿಗೆ ಕೂಡ ಮೀಸಲಾತಿಯನ್ನು ನಿಗದಿ ಮಾಡಬೇಕೆಂದು ಶಿಫಾರಸು ಮಾಡಿದ್ದರೂ ಅದನ್ನು ಸೇರಿಸಿಲ್ಲ. ತಿದ್ದುಪಡಿಯಾದ ಕಾಯ್ದೆಯನ್ನು ಜಾರಿ ಮಾಡಿದ 15 ವರ್ಷಗಳ ತರುವಾಯ ಮೀಸಲಾತಿ ನೀತಿಯನ್ನು ಮುಂದುವರಿಸಲಾಗುವುದಿಲ್ಲ ಎನ್ನಲಾಗಿದೆ.
ಏನೇ ಆದರೂ ನಮ್ಮ ಜಾತಿವ್ಯವಸ್ಥೆಯಲ್ಲಿ ಕೆಳಹಂತದಲ್ಲಿರುವ ಜಾತಿಗಳ ಮಹಿಳೆಯರಿಗೆ, ಅಲ್ಪಸಂಖ್ಯಾತ ವರ್ಗಗಳ ಮಹಿಳೆಯರಿಗೆ ಶೋಷಣೆ, ದೌರ್ಜನ್ಯ, ಅವಕಾಶಗಳ ನಿರಾಕರಣೆ ಎಲ್ಲವೂ ಹೆಚ್ಚು ಎನ್ನುವುದನ್ನು ಗಮನಿಸಿದರೆ, ಈ ಒಳಮೀಸಲಾತಿ ತುಂಬಾ ಅಗತ್ಯವೆನಿಸುತ್ತದೆ.

ನಮ್ಮ ರಾಜಕೀಯ ಸಂಕಥನಗಳಲ್ಲಿ, ಚುನಾವಣಾ ಪ್ರಚಾರಗಳಲ್ಲಿ ಮಹಿಳಾ ಮೀಸಲಾತಿ ವಿಚಾರವು ಮಧ್ಯರಂಗಕ್ಕೆ ಎಂದೂ ಬರುವುದೇ ಇಲ್ಲ. ರಾಜಕಾರಣದ ಮುಖ್ಯವಾಹಿನಿಯಲ್ಲಿ, ಪ್ರಧಾನ ವೇದಿಕೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ಅಭಿವೃದ್ಧಿಯ ಸಂಗತಿಗಳು ಕಣ್ಣಿಗೆ, ಕಿವಿಗೆ ಬೀಳುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯು ಇದಕ್ಕೆಲ್ಲ ಒಂದು ನಿಶ್ಚಿತ ನೆಲೆಯನ್ನು ಕಲ್ಪಿಸಬಹುದು, ಅದರಿಂದ ಸಾರ್ವಜನಿಕ ಸಂವಾದ ಸಾಧ್ಯವಾಗಬಹುದು ಎನ್ನುವ ಆಸೆ ಇದ್ದೇ ಇದೆ.

17 ನೇ ಲೋಕಸಭೆಯ ಪ್ರಥಮ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿ, ಚರ್ಚೆ ನಡೆಯಬೇಕು ಮತ್ತು ಮಸೂದೆ ಅಂಗೀಕೃತವಾಗಿ ಕಾಯ್ದೆ ಜಾರಿಗೆ ಬರಬೇಕು ಎಂದು `ಹಿತೈಷಿಣಿ’ ಕೂಡ ಆಗ್ರಹಿಸುತ್ತದೆ. ಶಕ್ತಿ ಸಂಘಟನೆ ಆರಂಭಿಸಿರುವ ಆಂದೋಲನವನ್ನು ಬೆಂಬಲಿಸುತ್ತದೆ.

-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *