ದೇಶಕಾಲ/ “ಭಾರತೀಯ ನಾರಿ” ಎಲ್ಲಿದ್ದಾಳೆ?- ಹೇಮಲತಾ ಮಹಿಷಿ
ಅತ್ಯಾಚಾರದ ಆರೋಪಿಗೆ ಜಾಮೀನು ನೀಡುವಾಗ ಕರ್ನಾಟಕದ ನ್ಯಾಯಮೂರ್ತಿಗಳು ದೂರು ನೀಡಿದ ಸಂತ್ರಸ್ತೆಯನ್ನು ಕುರಿತು ಹೇಳಿದ ಮಾತು, ಹಲವಾರು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಯಿತು. ನ್ಯಾಯಮೂರ್ತಿಗಳ ಮಾತನ್ನು ಪ್ರಶ್ನಿಸಿದ್ದೇ ಸರಿಯಿಲ್ಲ ಎಂದೂ ಕೆಲವರು ಹೇಳಿದರು. ಈಗ ಪ್ರಕರಣದ ತೀರ್ಪಿನಿಂದ “ಭಾರತೀಯ ನಾರಿಗೆ ಉಚಿತವಲ್ಲ” ಎಂಬಂಥ ಮಾತುಗಳನ್ನು ತೆಗೆದುಹಾಕಲಾಗಿದೆ. ಆದರೂ ಅಂಥ ಮಾತುಗಳು ಕಳವಳ ಹುಟ್ಟಿಸುತ್ತಿವೆ. ಈ ಕುರಿತು ಹಿರಿಯ ನ್ಯಾಯವಾದಿಯ ಅಭಿಪ್ರಾಯ ಇಲ್ಲಿದೆ.
“ತನ್ನ ಮೇಲೆ ಅತ್ಯಾಚಾರ ನಡೆದ ನಂತರ ನಿದ್ರೆ ಮಾಡಿದೆ ಎನ್ನುವುದು ಭಾರತೀಯ ನಾರಿಗೆ ಅನುಚಿತವಾದುದು” – ಇದು ಬೀದಿಯಲ್ಲಿ ಮಾತನಾಡುತ್ತಾ ಹೋಗುತ್ತಿರುವ ವ್ಯಕ್ತಿಗಳು ತಮ್ಮೊಳಗೆ ಲಘುಧಾಟಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವಲ್ಲ. ಅತ್ಯಾಚಾರದ ಆಪಾದನೆಗೆ ಗುರಿಯಾಗಿರುವ ಪುರುಷನೊಬ್ಬನು ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಹಾಕಿದಾಗ, ಅದರ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳೊಬ್ಬರು ಅರ್ಜಿಯನ್ನು ಪುರಸ್ಕರಿಸಿ ನೀಡಿದ ಆದೇಶ/ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ, ಕೊಟ್ಟ ಕಾರಣಗಳಲ್ಲಿ ಒಂದು. ಇದಕ್ಕೆ ತನ್ನದೇ ಆದ ಮಹತ್ವವಿರುತ್ತದೆ. ಏಕೆಂದರೆ ಇದು ನ್ಯಾಯನಿರ್ಣಯದ ಒಂದು ಭಾಗ, ಅದರ ತಳಹದಿ, ಈ ಅಭಿಪ್ರಾಯವೇ ಮುಂದೆ ಬರುವ ಅನೇಕ ಪ್ರಕರಣಗಳಿಗೆ ಪೂರ್ವ ನಿರ್ಣಯವಾಗಿ ಬಂಧನಕಾರಿಯಾಗುತ್ತದೆ. ಪೂರ್ವ ನಿದರ್ಶನವಾಗಿ ಈ ಅಭಿಪ್ರಾಯವಿರುವ ತೀರ್ಪನ್ನು ಉಲ್ಲೇಖಿಸಲಾಗುತ್ತದೆ.
ಪತ್ರಿಕೆಗಳಲ್ಲಿ ಈ ಸುದ್ದಿ ಹೊರಬೀಳುತ್ತಿದ್ದಂತೆ “ಭಾರತೀಯ ನಾರಿ”ಯ ಈ ಅನುಚಿತ ವರ್ತನೆಯ ನ್ಯಾಯಮೂರ್ತಿಗಳ ನಿರ್ಣಯ ಚಿಂತಕರ, ಅದರಲ್ಲೂ ಮಹಿಳೆಯರ ಕಳವಳಕ್ಕೆ ಕಸಿವಿಸಿಗೆ, ಅಸಮಾಧಾನಕ್ಕೆ ಕಾರಣವಾಯಿತು. ಟೀಕೆಗಳ ಸುರಿಮಳೆಯೇ ಸುರಿಯಿತು. ಮಹಿಳಾ ನ್ಯಾಯವಾದಿಯೊಬ್ಬರು ಇದನ್ನು ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತಂದರು. ಕರ್ನಾಟಕದ ಚಿಂತಕ ರಾಮಚಂದ್ರ ಗುಹಾ ಮತ್ತಿತರರು ಇದನ್ನು ಖಂಡಿಸಿದರು. ಪತ್ರದ ಮೂಲಕ ಕರ್ನಾಟಕದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೂ ತಂದರು. ಇತ್ತೀಚಿನ ಸುದ್ದಿಯಂತೆ, ಕರ್ನಾಟಕ ಉಚ್ಚ ನ್ಯಾಯಾಲಯದ ಅದೇ ನ್ಯಾಯಮೂರ್ತಿಗಳು ಈ ತೀರ್ಪನ್ನು ಪುನರ್ವಿಮರ್ಶಿಸಿ ಈ “ಭಾರತೀಯ ನಾರಿಯ ಅನುಚಿತ ವರ್ತನೆ”ಯ ತಮ್ಮ ಅಭಿಪ್ರಾಯವನ್ನು ತೀರ್ಪಿನಿಂದ ತೆಗೆದು ಹಾಕಿದ್ದಾರೆ. ಅದಕ್ಕೆ ಕೊಟ್ಟ ಕಾರಣ, ಅದು ದೂರಿನ ವಿಚಾರಣೆಯಲ್ಲಿ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು ಎನ್ನುವುದು. ಸದ್ಯಕ್ಕೆ ನೀರು ಹಾಕಿ ಬೆಂಕಿಯನ್ನು ನಂದಿಸಿದರೂ ಅಸಮಾಧಾನದ ಹೊಗೆ ಆಡುತ್ತಲೇ ಇದೆ. ಏಕೆಂದರೆ, ಪದೇಪದೇ ವ್ಯಕ್ತವಾಗುತ್ತಿರುವ ಇಂತಹ ಅಭಿಪ್ರಾಯಗಳು, ಬರುತ್ತಿರುವ ನಿರ್ಣಯಗಳು ಪ್ರಜ್ಞಾವಂತರ, ಮಹಿಳಾವಾದಿಗಳ ಕಳವಳಕ್ಕೆ ಕಾರಣವಾಗುತ್ತಿವೆ. ಇಂತಹ ಅಭಿಪ್ರಾಯಗಳು ನ್ಯಾಯನಿರ್ಣಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಅಲಕ್ಷಿಸುವ ವಿಷಯವಲ್ಲ. ಸಮಾಜದಲ್ಲಿ ಚಿಂತನಾಕ್ರಮದಲ್ಲಿ, ಮನಃಸ್ಥಿತಿಯಲ್ಲಿ ಬದಲಾವಣೆ ಬಯಸುವ ಮಹಿಳಾವಾದಿಗಳಿಗೆ ಇಂತಹ ಅಭಿಪ್ರಾಯಗಳ ಮುಂದುವರಿಕೆ ನೆಮ್ಮದಿ ಕೆಡಿಸುತ್ತಿದೆ. ಇವು ಯಜಮಾನ, ಪಿತೃಪ್ರಧಾನ ಪದ್ಧತಿಯ ಪಳೆಯುಳಿಕೆಗಳಾಗಿ ಕಾಣುತ್ತವೆ. ಈಗ ಅಪ್ರಸ್ತುತ, ಅಪ್ರಚಲಿತವಾದ ಆರ್ಷೇಯ ವಿಷಯಗಳನ್ನು ಉಳಿಸಿಕೊಳ್ಳುವ ಪ್ರಯತ್ನದಂತೆ ಕಾಣುತ್ತವೆ. ಬದಲಾವಣೆಗಾಗಿ ಹೋರಾಡುತ್ತಿರುವವರಿಗೆ ಹಿನ್ನಡೆಯಂತೆ ನಿರಾಶೆ ಉಂಟುಮಾಡುತ್ತಿವೆ.
ಮೇಲೆ ಹೇಳಿದ ನಿರ್ಣಯದಲ್ಲಿನ ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ವಿಮರ್ಶಿಸಿದರೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಮೊದಲನೆಯದಾಗಿ “Rape” ಬದಲಿಗೆ ಅವರು ಉಪಯೋಗಿಸಿದ “Ravish” ಎನ್ನುವ ಇಂಗ್ಲಿಷ್ ಪದವೇ ಪ್ರಶ್ನಾರ್ಹವಾಗಿದೆ. “ತನ್ನನ್ನು Ravish ಮಾಡಿದ ನಂತರ ತಾನು ಆಯಾಸದಿಂದ ನಿದ್ರೆ ಮಾಡಿದೆ” ಎನ್ನುವುದು “ಭಾರತೀಯ ನಾರಿಗೆ ಅನುಚಿತವಾದುದು” ಎಂದರೆ, ಭಾರತೀಯರಲ್ಲದ ನಾರಿಯರಿಗೆ ಉಚಿತವೇ ಎಂಬ ಪ್ರಶ್ನೆ ಏಳುತ್ತದೆ. ಹಾಗೆಯೇ “ಭಾರತೀಯ ನಾರಿ” ಎಂದರೆ ಯಾರು, ಆ ರೀತಿಯ ಒಂದು ಸಮಗ್ರ ಮಹಿಳೆಯರ ಅನನ್ಯತೆ, ಏಕಾತ್ಮಕ ಗುಂಪೊಂದಿದೆಯೇ? ಎಲ್ಲ ಭಾರತೀಯ ನಾರಿಯರಿಗೆ ಸಮಾನವಾಗಿ ಎಲ್ಲ ಕಾಲಕ್ಕೆ ಅನ್ವಯಿಸುವ ನಿಯಮಗಳಿವೆಯೇ, ಇದ್ದರೆ ಅದನ್ನು ರೂಪಿಸಿದವರು, ಒಪ್ಪಿಕೊಂಡಿರುವವರು ಯಾರು? ಅದನ್ನು ಜಾರಿಗೊಳಿಸಲು ಆಧಾರವೇನು? ಭಾರತೀಯ ನಾರಿಯರಿಗೆ ಉಚಿತವಾದುದು ಯಾವುದು, ಅನುಚಿತವಾದುದು ಯಾವುದು ಎಂಬುದನ್ನು ನಿರ್ಧರಿಸುವವರು ಯಾರು? “ಭಾರತೀಯ ನಾರಿ”ಯ ಹಾಗೆ ಭಾರತೀಯ ಪುರುಷ ಹೇಗಿರುತ್ತಾನೆ ಎಂದು ಯಾರು ಹೇಳುತ್ತಾರೆ? ಉಚಿತ/ಅನುಚಿತ Definition ಏನು? ತನ್ನ ಮೇಲೆ ಅತ್ಯಾಚಾರ ನಡೆದ ನಂತರ ಆಯಾಸದಿಂದ ನಿದ್ದೆ ಮಾಡಿದೆ ಎನ್ನುವುದು ಭಾರತೀಯ ನಾರಿಗೆ ಅನುಚಿತವೆ? ಅವಳು ತಕ್ಷಣ ಎದ್ದು ಪೊಲೀಸ್ ಠಾಣೆಗೆ ಓಡಿಹೋಗಿ ದೂರು ಸಲ್ಲಿಸುವುದು ಭಾರತೀಯ ನಾರಿಗೆ ಉಚಿತವಾಗುತ್ತಿತ್ತೇ? ಇಂದಿಗೂ ಅತ್ಯಾಚಾರ ನಡೆದ ಹಲವಾರು ಪ್ರಕರಣಗಳಲ್ಲಿ ದೂರು ನೀಡುವುದು ಮಹಿಳೆಯರಿಗೆ ಸುಲಭದ, ಸರಳವಾದ ವಿಷಯವಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಹಾಗೆ ನೋಡಿದರೆ, ದಶಕಗಳಿಂದಲೂ ಸಿನಿಮಾ ರಂಗದಲ್ಲಿ ಕಿರುಕುಳ ಅನುಭವಿಸುತ್ತಿದ್ದರೂ ಅದನ್ನು ಹೊರಗೆ ಹೇಳಿಕೊಳ್ಳಲು ನಟಿಯರಿಗೆ “ಮೀ ಟೂ” ಚಳವಳಿ ಆರಂಭ ಆಗಬೇಕಾಯಿತು.
ಈ ಪ್ರಕರಣದಲ್ಲಿ ಮಹಿಳೆ ದೂರು ನೀಡುವಲ್ಲಿ ಸ್ವಲ್ಪ ವಿಳಂಬವಿದೆ ಎನ್ನುವುದು ನಿಜ. ಅದಕ್ಕೆ ಅವಳು ಕಾರಣವನ್ನು ಕೊಟ್ಟಿದ್ದಾಳೆ. ನಾನು ಈ ದೂರಿನ ಪ್ರಥಮ ವರ್ತಮಾನದ ವರದಿ (FIR- ಎಫ್ ಐ ಆರ್) ನೋಡಿದೆ. ನನಗೆ ಪತ್ರಿಕಾ ವರದಿ ಓದಿದ ನಂತರ ಒಂದು ಅನುಮಾನವಿತ್ತು. ಯಾವ ಮಹಿಳೆಯೂ ಅತ್ಯಾಚಾರ ನಡೆದ ನಂತರ ನಿದ್ದೆ ಮಾಡಿದೆ, ಅದೂ ಹತ್ತು ದಿನಗಳ ಕಾಲ ಎಂದು ವಿಳಂಬಕ್ಕೆ ಕಾರಣ ಕೊಡುವ ಮೂರ್ಖತೆ ತೋರಲಾರಳೆಂದು ಅನುಮಾನವಿತ್ತು. ಎಫ್. ಐ, ಆರ್. ಓದಿದ ನಂತರ ನನ್ನ ಅನುಮಾನ ಬಗೆಹರಿಯಿತು. ಅದರಲ್ಲಿದ್ದುದು ಅವಳು ರಾತ್ರಿ ಅತ್ಯಾಚಾರ ನಡೆದ ನಂತರ ಸುಸ್ತಾಗಿ ಬೆಳಿಗ್ಗೆಯವರೆಗೆ “ಮಲಗಿ” ಕೊಂಡಿದ್ದಳು. ಇಲ್ಲಿ “ಮಲಗು” ಪದದ ಅರ್ಥದ ಅಪಾರ್ಥ ಆಗಿರುವಂತಿದೆ. “ಮಲಗು” ಎಂದರೆ “ನಿದ್ದೆ” ಯೇ ಆಗಬೇಕಿಲ್ಲ. “Lying down” ಲೈಯಿಂಗ್ ಡೌನ್” ಎಂದೂ ಆಗುತ್ತದೆ. “Lie” ಎಂದರೆ “Rest on something- ಒರಗು” ಎಂದೂ ಅರ್ಥವಿದೆ. ಸಾಮಾನ್ಯವಾಗಿ ಹೇಳುವಾಗ “ಒರಗು” ಬದಲು “ಮಲಗು” ಪದವನ್ನು ಬಳಸಲಾಗುತ್ತದೆ. ಹಾಗಾಗಿ ಪದಗಳನ್ನು ಬಳಸುವಾಗ, ಅರ್ಥಮಾಡಿಕೊಳ್ಳುವಾಗ, ಅನುವಾದ ಮಾಡುವಾಗ, ಅದರಲ್ಲೂ ಕಾನೂನಿಗೆ ಸಂಬಂಧವಾಗಿ ನ್ಯಾಯ ನಿರ್ಣಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಎಫ್.ಐ.ಆರ್. ನೋಡಿದಾಗ ಇನ್ನೂ ಒಂದು ವಿಷಯ ತಿಳಿದುಬರುತ್ತದೆ- ಅತ್ಯಾಚಾರ ನಡೆದಿದೆ ಎಂದು ಹೇಳಲಾದ ನಂತರ ಆರೋಪಿಯು ಆ ಮಹಿಳೆಯ ನಗ್ನಚಿತ್ರವನ್ನು ಅವಳಿಗೆ ಕಳಿಸಿದ್ದ ಎನ್ನುವುದು, ಹಾಗೂ ಅದನ್ನು ಬೇರೆಯವರಿಗೂ ಕಳಿಸುತ್ತೇನೆಂದು, ಪೊಲೀಸರ ಬಳಿ ಹೋಗಿ ದೂರು ಕೊಟ್ಟರೆ ಸಾಯಲು ತಯಾರಿರಬೇಕೆಂದು ಬೆದರಿಸಿದ್ದ ಎನ್ನುವುದು. ಆನಂತರವೇ ಅವಳು ದೂರು ನೀಡಲು ಧೈರ್ಯ ಮಾಡಿದ್ದಳು. ಹಾಗಾಗಿ ಇಲ್ಲಿ ಅವಳು “ನಿದ್ದೆ ಮಾಡಿದ್ದು”, ಅದು “ಭಾರತೀಯ ನಾರಿಗೆ ಅನುಚಿತ” ವಾದುದರ ಪ್ರಶ್ನೆಯೇ ಬರುವುದಿಲ್ಲ. ಆ ಉದ್ಘಾರದ ಅವಶ್ಯಕತೆಯೂ ಇರಲಿಲ್ಲ.
ಇನ್ನೊಂದು ವಿಷಯ. ಅತ್ಯಾಚಾರದ ನಂತರ ಆಯಾಸವಾಗುತ್ತದೆಯೋ ಇಲ್ಲವೋ, ಆಯಾಸದಿಂದ “ಮಲಗು” ತ್ತಾರೆಯೋ ಇಲ್ಲವೋ ಎನ್ನುವುದನ್ನು ಯಾರು ತೀರ್ಮಾನಿಸಬೇಕು? ಆ ಮಹಿಳೆಯೇ ಹೇಳಬೇಕು. ಭಾರತೀಯ ನಾರಿಯರಿಗೆ ಬೇರೆ ಮಾನದಂಡವಿದೆಯೇ? ಅದು ಎಲ್ಲಾ ಭಾರತೀಯ ನಾರಿಯರಿಗೆ ಸಮಾನವಾಗಿ ಅನ್ವಯಿಸುತ್ತದೆಯೇ? ದಿನವಿಡೀ ಮೈಮುರಿದು ಕೆಲಸ ಮಾಡಿದ ಮನುಷ್ಯರಿಗೆ, ಎಷ್ಟೇ ಚಿಂತೆ- ತಾಪತ್ರಯಗಳಿದ್ದರೂ ರಾತ್ರಿ ತಲೆದಿಂಬಿಗೆ ತಲೆ ಇಟ್ಟ ಕೂಡಲೇ, ತಲೆದಿಂಬು- ಹಾಸಿಗೆ ಇಲ್ಲದವನಿಗೂ ಆಯಾಸದಿಂದ ನಿದ್ದೆ ಬರುವುದಿಲ್ಲವೇ, ಮಂಪರು ಬರುವುದಿಲ್ಲವೇ, ಅದೇನು ಅಸಹಜವೇ ಅಥವಾ ನಂಬಲು ಅರ್ಹವಲ್ಲವೇ? ದೂರುದಾರಳು ಮುಂದೆ ತನಿಖೆಯಲ್ಲಿ, ಕೇಸಿನ ವಿಚಾರಣೆಯಲ್ಲಿ ಈ ಸಂದೇಹಗಳನ್ನು ದೂರ ಮಾಡಬೇಕು. ನಿಜವಾಗಿಯೂ “ನಿದ್ದೆ” ಮಾಡಿದ್ದರೆ, ವೈದ್ಯರ ಸಾಕ್ಷ್ಯದ ಮೂಲಕ ಅದು “ಸಾಧ್ಯ” ಎನ್ನುವುದನ್ನು ಸ್ಪಷ್ಟಪಡಿಸಲು ಅವಕಾಶವಿದೆ. ಅದು ಎಲ್ಲಾ ಭಾರತೀಯ ನಾರಿಯರಿಗೆ ಅನ್ವಯಿಸಬೇಕೆಂದೇನೂ ಇಲ್ಲ.

-ಹೇಮಲತಾ ಮಹಿಷಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.