ದೇಶಕಾಲ/ ಬೇಸಾಯದ ಬೆನ್ನುಮೂಳೆ ಅವಳೇ ಅಲ್ಲವೇ? – ಕೆ.ಎಸ್. ವಿಮಲ


ದೇಹ ಮತ್ತು ಉಸಿರು, ಕೃಷಿ ಮತ್ತು ಮಹಿಳೆ – ದೇಹದೊಳಗೆ ಉಸಿರಿಲ್ಲದೇ ಜೀವ ನಿಲ್ಲದು, ಕೃಷಿಯಲ್ಲಿ ಮಹಿಳೆಯಿಲ್ಲದೇ ಮುಂದೆ ಸಾಗದು ಎಂಬಂತೆ ಕೃಷಿಯ ಅವಿಭಾಜ್ಯ ಅಂಗ ಮಹಿಳೆ. ಗ್ರಾಮೀಣ ಭಾಗದ ದುಡಿಯುವ ಮಹಿಳೆಯರಲ್ಲಿ 85 % ಮಹಿಳೆಯರು ಕೃಷಿಯಲ್ಲಿ ಅದರ 90% ಗೂ ಹೆಚ್ಚು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೇವಲ 13% ಮಹಿಳೆಯರು ಮಾತ್ರ ಭೂಮಿ ಒಡೆತನದಲ್ಲಿ ಪಾಲು ಹೊಂದಿದ್ದಾರೆ ಎನ್ನುತ್ತದೆ ಅಧ್ಯಯನವೊಂದು. ಹೀಗಾಗಿಯೇ ರೈತಾಪಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ರೈತರೆಂದು ಪರಿಗಣಿಸಬೇಕೆಂಬ ಕೂಗೆದ್ದಿದೆ. ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಮತ್ತು ಇತರ ರಾಜ್ಯಗಳಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ಬೃಹತ್ ಪ್ರತಿಭಟನಾ ಪ್ರದರ್ಶನದಲ್ಲಿ ರೈತ ಮಹಿಳೆಯರ ಭಾಗವಹಿಸುವಿಕೆ ಗಮನಾರ್ಹವಾಗಿ ಇರುತ್ತದೆ.

ಮಹಿಳೆಯರನ್ನು ರೈತರೆಂದು ಪರಿಗಣಿಸಲಿ ಎಂದು ನಾವೆದುರು ನೋಡುತ್ತಿದ್ದರೆ ಎಲ್ಲ ಕೃಷಿಕರನ್ನು ಕೃಷಿಯಿಂದ ಹೊರದೂಡಿ, ತಮ್ಮದೇ ಹೊಲದಲ್ಲಿ ಕೂಲಿಕಾರರಾಗಿಯೋ, ಅಥವಾ ನಿರ್ವಸತಿಗರಾಗಿ ನೆರೆಯ,ದೂರದ ಭಾಷೆ ಸಂಸ್ಕøತಿಗಳ ಪರಿಚಯವೇ ಇರದ ನಗರಗಳಿಗೆ ವಲಸಿಗರಾಗಿಯೋ ಹೋಗಿಬಿಡುವ ಒತ್ತಡ ನಿರ್ಮಾಣ ಮಾಡುವಂತಹ ಕ್ರಮವನ್ನು ಕೇಂದ್ರ ಸರಕಾರ ಕೈಗೊಂಡಿದೆ. ಕೃಷಿಯನ್ನೇ ಉಸಿರಾಡುವ, ದೇಶಕ್ಕೆ ಆಹಾರ ನೀಡುವ ಕೃಷಿ ಸಮುದಾಯ ಎದ್ದು ನಿಂತಿದೆ. ಇವು ಕೃಷಿಕರ ಮತ್ತು ಕೃಷಿ ಕ್ಷೇತ್ರದ ಮರಣ ಶಾಸನಗಳು, ಇವನ್ನು ಹಿಂತೆಗೆದುಕೊಳ್ಳಿ ಎನ್ನುತ್ತಿದೆ.

ದೂರದಿಂದ ಆಡಿದ ಮಾತು ಕಿವಿಗೆ ಕೇಳಿಸದಷ್ಟು ಇಂದ್ರಿಯ ತಟಸ್ಥರಿಗೆ ಹತ್ತಿರದಿಂದ ಮುಟ್ಟಿಸಲು ರಾಜಧಾನಿಯತ್ತ ರೈತ ಸಮುದಾಯ ಪಾದ ಬೆಳೆಸಿತು. ಹಾಗೆ ಹೋಗುವಾಗ ಕೃಷಿ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿ ತೊಡಗಿಸಿಕೊಂಡಿರುವ ಮಹಿಳೆಯರು ಸಹಜವಾಗಿಯೇ ಅದರ ಭಾಗ. ಆದರೆ. . . . ಈಗ ಬಂದಿರುವ ಕುತ್ತು ಅವರನ್ನು ಅಲ್ಲಿಂದ ವಿಭಾಗಿಸುವ ಆಪತ್ತು. ಅದೂ ಯಾರಿಂದ. . . ದೇಶದ ಸರ್ವೋಚ್ಛ ನ್ಯಾಯಾಲಯದಿಂದ. ಅದೂ ಯಾವಾಗ. . .. ಇನ್ನೇನು 70ನೇ ಗಣರಾಜ್ಯೋತ್ಸವವನ್ನು ಆಚರಿಸಲು ಕ್ಷಣಗಣನೆಯಾಗುತ್ತಿರುವಾಗ… ಭಲಿರೆ..ಭಲಿರೇ…. ಅನ್ನವಿಕ್ಕಿದವರನ್ನು ಕನ್ನ ಹಾಕಿದವರಂತೆ ಕಾಣುವ ಜನರಿಗೆ ಚಿನ್ನ ಕೊಟ್ಟಂತಲ್ಲವೇ ಈ ಮಾತು.

ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳದಿಂದ ತೆರವುಗೊಳಿಸುವುದನ್ನು ನಾವು ಶ್ಲಾಘಿಸುತ್ತೇವೆ. . . . ಇದು ಸರ್ವೋಚ್ಛ ನ್ಯಾಯಾಲಯ ದೆಹಲಿಯ ಗಡಿಗಳಲ್ಲಿ ಪಂಜಾಬ್ ಹರ್ಯಾಣಾ ರಾಜಸ್ಥಾನ ಬಿಹಾರ ಒರಿಸ್ಸಾ ಕೇರಳ ಕರ್ನಾಟಕ ಮಹರಾಷ್ಟ್ರ ಹೀಗೆ ದಶದಿಕ್ಕುಗಳಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ ರೈತರನ್ನು ಕೃಷಿ ಕಾನೂನುಗಳು ಅವರ ಒಳಿತಾಗಿಯೇ ತಿದ್ದುಪಡಿಗೊಂಡಿವೆ ಎಂದು ಹಸಿ ಹಸಿ ಸುಳ್ಳು ಹೇಳುತ್ತಿರುವ ಸರಕಾರ ಸ್ವಾಗತಿಸಿದ್ದು ಕೊರೆಯುವ ಛಳಿಯಲ್ಲಿ ಜಲ ಫಿರಂಗಿಗಳ ಮೂಲಕ. ಮುಳ್ಳು ತಂತಿ ಮರದ ದಿಮ್ಮಿಗಳ ಬೇಲಿಗಳ ಮೂಲಕ, ಲಾಠಿ ಝಳಪಿಸುವ ಮೂಲಕ. ಜನರ ತೆರಿಗೆಯ ಹಣದಿಂದ, ವಿಶ್ವ ಹಣಕಾಸು ಸಂಸ್ಥೆಗಳಿಂದ ತಂದ ಸಾಲಗಳಿಂದ ನಿರ್ಮಾಣವಾದ ಅಭಿವೃದ್ಧಿಯ ಹುಸಿ ಸಂಕೇತವಾದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಂದಕ ತೋಡುವ ಮೂಲಕ ಮತ್ತು ಗಡಿ ರಕ್ಷಣಾ ಪಡೆಗಳನ್ನು ನಿಯೋಜಿಸಿ ತಡೆ ಒಡ್ಡುವ ಮೂಲಕ.

ಆದರೆ ನಮ್ಮ ಕೃಷಿಕ ಬಂಧುಗಳು ದೇಶದ ಅನ್ನದಾತರು ಪ್ರತಿ ನಿತ್ಯ ಪೃಕೃತಿಯೊಂದಿಗೆ ಇಂತಹ ಹಲವು ಸವಾಲುಗಳ ಜೊತೆ ಸೆಣಸುತ್ತ, ಸಂಬಂಧವನ್ನೇ ಕಟ್ಟಿಕೊಂಡು ಆಹಾರ ಬೆಳೆಯುವವರು. ಜಲ ಫಿರಂಗಿಗಳನ್ನು ಹಠಾತ್ತನೆ ಸುರಿದ ಮಳೆಯಂತೆ, ಮುಳ್ಳು ತಂತಿ, ಕಂದಕಗಳನ್ನು ಭೂ ಕಂಪವಾಗಿ ಭೂಮಿತಾಯಿ ಬಾಯ್ದೆರೆದಂತೆ, ಲಾಠಿ ಬೂಟುಗಳು ಕೃಷಿ ಕಾಲದಲ್ಲಿ ಉಳಿವಾಗ ಬೆಳೆವಾಗ ಹೊರುವಾಗ ಸಹಜವಾಗಿ ಸಿಗುವ ಅಡ್ಡಿ ಆತಂಕಗಳಂತೆ ನಿರಾಳವಾಗಿ ಎದೆಯೊಡ್ಡಿ ನಿಂತೇ ಬಿಟ್ಟರು. ಅದರಲ್ಲಿ ಮಹಿಳೆಯರು ಹಿಂದೆಗೆಯಲಿಲ್ಲ. ಯಾಕೆಂದರೆ ಅವರು ಭಗತ್ ಸಿಂಗ್ ನ ಕುಲದವರು. ರಾಣಿ ಝಾನ್ಸಿಯ ಸಹೋದರಿಯರು. ಕ್ಯಾಫ್ಟನ್ ಲಕ್ಷ್ಮಿ ಸೆಹಗಲ್ ರವರ ಬಂಧುಗಳು. ಅಲ್ಲಿ ನಿಂತ ಸಹೋದರಿಯೊಬ್ಬಳು ಹೇಳುತ್ತಾಳೆ. ಏ ಹಮಾರಾ ಫರ್ಜ್ ಬನತಾ ಹೈ. . .. ಇದು ನಮ್ಮ ಕರ್ತವ್ಯ. ದೇಶದ ಕೃಷಿ ಸ್ವಾವಲಂಬನೆಯನ್ನು ಉಳಿಸುವುದು.

ಕಸಿವಿಸಿ : ಸರಕಾರಕ್ಕೆ ಅದರದ್ದೇ ಆದ ರಾಜಕೀಯ ಹಿತಾಸಕ್ತಿ ಇದೆ. ಅಧಿಕಾರದಲ್ಲಿ ಉಳಿಯಲು ಜನಪರ ನಿಲುವುಗಳಿಗಿಂತ ಉಳ್ಳವರ ಪರ ನಿಲುವು ತಾಳುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವೆಂಬಂತೆ ಆಗಿದೆ. ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಧಾರ್ಮಿಕ, ಸಾಂಸ್ಕøತಿಕ ಚಹರೆಗಳನ್ನು ಮುಂದೆ ಮಾಡುವ ಮತ್ತು ಆ ಮೂಲಕ ನಿಜ ವಾಸ್ತವದಿಂದಾಚೆ ಸೆಳೆಯುವುದು ಮಾಮೂಲು ಎಂಬಂತಾಗಿದೆ. ಆದರೆ ದೇಶದ ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಸರ್ವೋಚ್ಛ ನ್ಯಾಯಾಲಯ ಮಹಿಳೆಯರನ್ನು ಸ್ಥಳದಿಂದ ಆಚೆ ಕಳಿಸುವ ಮಾತಾಡಿದ್ದು ನಮಗೆ ಕಸಿವಿಸಿಯುಂಟು ಮಾಡುತ್ತಿದೆ.

ಅಂದು ಮನು ಹೇಳಿದ. . . ನ ಸ್ತ್ರೀ ಸ್ವಾತಂತ್ರಮರ್ಹಸಿ ಎಂದು. ಇಂದು ಯುವರ್ ಆನರ್ ನೀವು ಹೇಳುತ್ತಿದ್ದೀರಲ್ಲ. ಇಲ್ಲ ಇಲ್ಲ ನಾವಿದನ್ನು ಒಪ್ಪುವುದಿಲ್ಲ. ನಮ್ಮ ದೇಶದ ಸಂವಿಧಾನವನ್ನು ಸಂಭ್ರಮಿಸುತ್ತೇವೆ ನಾವು. ಸಮಾನತೆಯ ದೀಪ ಬೆಳಗಬೇಕು ಈ ನೆಲದಲ್ಲಿ ಸಂವಿಧಾನದ ಆಶಯದಂತೆ ಎಂದು ಹಗಲಿರುಳೂ ಹೋರಾಡುತ್ತಿದ್ದೇವೆ. ಈಗಿರುವ ಸಂವಿಧಾನವೇ ಇನ್ನಷ್ಟು ಬಲಗೊಳ್ಳುವ, ಸಮಾನ ಅವಕಾಶಗಳು ಇನ್ನಷ್ಟು ಸ್ಫುಟವಾಗಿ ದೊರೆಯುವ ದಿನಗಳು ಬರಲೆಂದು ನಾವು ನಿರೀಕ್ಷಿಸುತ್ತಿದ್ದೇವೆ, ಆದರೆ ಕೊಡಬೇಕಾದವರೆ ಇರುವ ಹಕ್ಕುಗಳನ್ನು ಮೊಟಕುಗೊಳಿಸಲು ವಿಸ್ತಾರ ಅಂಗಳವನ್ನು ನಿರ್ಮಿಸಿಬಿಟ್ಟರೆ… ಯುವರ್ ಆನರ್ ಅಲ್ಲೆಲ್ಲೋ ಮನು ಪ್ರಣೀತ ಆಲೋಚನೆಯ ವಾಸನೆ ಬಡಿಯುತ್ತಿದೆ. ನಮಗೆ ಅಂಬೇಡ್ಕರ್, ಜ್ಯೋತಿ ಬಾಪುಲೆ, ಗಾಂಧಿ ಆಗಬೇಕು- ಆದರ್ಶ ಮನುವಲ್ಲ.

ಸ್ವಾಭಿಮಾನಿ, ಸ್ವಾವಲಂಬೀ ಕೃಷಿಗಾಗಿ, ಅನ್ನದಾತರೆಂದರೆ ಕೇವಲ ಪುರುಷರಲ್ಲ, ಹೆಗಲಿಗೆ ಹೆಗಲು ಹೆಜ್ಜೆಗೆ ಹೆಜ್ಜೆ, ಮಹಿಳೆಯಿಲ್ಲದೇ ಕೃಷಿ ಇಲ್ಲ. ಕೃಷಿಯಿಲ್ಲದೇ ಬೆಳೆ ಇಲ್ಲ ಬೆಳೆ ಇಲ್ಲದೆ ಅನ್ನವಿಲ್ಲ. ಇಲ್ಲಗಳ ಸರಮಾಲೆಯನ್ನು ಇರುವಿಕೆಯ ಹೂಗಳಿಂದ ಸಿಂಗರಿಸುತ್ತೇವೆ, ಸಂವಿಧಾನ ನೀಡಿದ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಯುತ್ತಲೇ ಇದೆ. ಮುಂದೆಯೂ ನಡೆಯುತ್ತದೆ. ಹಾಗೆಂದೇ ಜನವರಿ ಹದಿನೆಂಟು ರೈತ ಮಹಿಳೆಯರ ದಿನ!

  • ಕೆ.ಎಸ್. ವಿಮಲ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *