ದೇಶಕಾಲ/ ಪ್ರತಿಭಟನೆಗಳಲ್ಲಿ ಎದ್ದು ಕಾಣುವ ಮಹಿಳೆಯರ ಆಕ್ರೋಶ
ದೇಶದ ಯಾವುದೇ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿನಿಯರು, ಯುವತಿಯರ ಸಂಖ್ಯೆ ಮತ್ತು ಆಕ್ರೋಶ ಎದ್ದು ಕಾಣುತ್ತಿದೆ. ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಬದ್ಧತೆ ಮತ್ತು ದೃಢತೆ ಯಿಂದ ಇಂಥ ಪ್ರಮಾಣದಲ್ಲಿ ಬೀದಿಗಿಳಿದಿರುವ ಅವರ ಮನಸ್ಸಿನಲ್ಲಿ ಸ್ಪಷ್ಟ ಗೊತ್ತುಗುರಿಯೂ ಇದೆ. ಸಮಕಾಲೀನ ಬೆಳವಣಿಗೆಗಳ ಅರಿವು ಮತ್ತು ತಂತ್ರಜ್ಞಾನದ ನೆರವು ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತಿದೆ.
ಅತೃಪ್ತಿ, ಅಸಮ್ಮತಿಗಳೇ ತುಂಬಿದ್ದ ಈ ಚಳಿಗಾಲದಲ್ಲಿ ನಡೆದ ಪ್ರತಿಯೊಂದು ಮೆರವಣಿಗೆ, ಪ್ರತಿಯೊಂದು ಪ್ರದರ್ಶನ, ಪ್ರತಿಯೊಂದು ಪ್ರತಿಭಟನೆಗಳಲ್ಲಿ ಮುಂಚೂಣಿ ಸಾಲುಗಳಲ್ಲಿ ಇದ್ದವರು ಯುವತಿಯರು – ಜೆಎನ್‍ಯು, ಜಾಮಿಯ, ಆಲಿಘರ್, ಜಾಧವ್‍ಪುರ ಎಲ್ಲ ಕಡೆಯೂ ಹೆಚ್ಚು ಕಂಡದ್ದು ಹೆಣ್ಣುಮಕ್ಕಳೇ!
ಹೀಗೆ ಬದ್ಧತೆ ಮತ್ತು ದೃಢತೆಯಿಂದ ರಾಜಕೀಯ ಪ್ರತಿಭಟನಾ ಚಳವಳಿಗಳಲ್ಲಿ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಭಾಗವಹಿಸಿದ್ದನ್ನು ಸ್ವಾತಂತ್ರ್ಯ ಬಂದ ನಂತರ ನಮ್ಮ ದೇಶವು ಕಂಡಿರಲೇ ಇಲ್ಲ. ಪ್ರತಿಭಟಿಸುತ್ತಿದ್ದ, ಕೂಗುತ್ತಿದ್ದ, ಉತ್ಸಾಹ ತುಂಬಿ ತುಳುಕುತ್ತಿದ್ದ ಈ ಹೆಣ್ಣುಮಕ್ಕಳು ಯಾರು? ಅವರು ಬರೀ ದೇಶದ ಲಿಬರಲ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರೇ? ಅಥವಾ ವಿರೋಧ ಪಕ್ಷಗಳಿಂದ ಪ್ರೇರಿತರಾದವರೇ? ಅವರು ಇವುಗಳಲ್ಲಿ ಪಾಲ್ಗೊಳ್ಳುತ್ತಿರುವುದು ಅಕಸ್ಮಾತ್ತಾಗಿಯೇ, ಇದೊಂದು ಆಕಸ್ಮಿಕವೇ ಅಥವಾ ಈ ಪ್ರತಿರೋಧದಲ್ಲಿ ಒಂದು ಕ್ರಮ ಇದೆಯೇ?
ಇದು ಆಕಸ್ಮಿಕವೂ ಅಲ್ಲ, ಯಾರೋ ಹಚ್ಚಿಕೊಟ್ಟದ್ದೂ ಅಲ್ಲ. ಇದೊಂದು ಸ್ಪಷ್ಟವಾದ ಮತ್ತು ಆಗಲೇ ಬೇಕೆಂದು ಕೈಗೊಂಡ ನಿರ್ಧಾರ. ಭಾರತದಾದ್ಯಂತ ವಿಶ್ವವಿದ್ಯಾಲಯಗಳ ಆವರಣಗಳಲ್ಲಿರುವ ವಿದ್ಯಾರ್ಥಿನಿಯರು ಹೊರಬಂದು ಹೇಳುತ್ತಿರುವುದು ಇಷ್ಟೇ – ರಾಜಕಾರಣದ ಭವಿಷ್ಯ ಬದಲಾಗುತ್ತಿದೆ; 21 ನೇ ಶತಮಾನದ ರಾಜಕಾರಣ ಬರೀ ಪುರುಷಪ್ರಾಧಾನ್ಯದ ಕೂಗಾಟಗಳಿಂದ ನಡೆಯುವುದಿಲ್ಲ; ರಾಜಕಾರಣವನ್ನು ಎಚ್ಚರಿಕೆಯಿಂದ ನಿರ್ವಹಿಸುವ ಸಮಯ ಬಂದಿದೆ ಮತ್ತು ಅತ್ಯಾಚಾರಿಗಳ ಜೀವ ತೆಗೆಯುವ ಕೂಗಿಗಿಂತ ಭಿನ್ನವಾಗಿ ಲಿಂಗಸಮಾನತೆಯ ಸಂಕಥನಗಳ ಬಗ್ಗೆ ಗಮನ ಹರಿಸುವ ಕಾಲ ಬಂದಿದೆ.
ಲಿಂಗ ಸಮಾನತೆ ಎನ್ನುವುದು ಭಿಕ್ಷೆಯಲ್ಲ ಎಂದು ಹೇಳುತ್ತಿರುವ ಗಟ್ಟಿದನಿಯ ಹುಡುಗಿಯರು, ರಾಜಕಾರಣದ ರೀತಿನೀತಿ, ತರ್ಕಗಳನ್ನೇ ಜಾಲಾಡೋಣ ಎನ್ನುತ್ತಿದ್ದಾರೆ. ಇದು ಮುಖ್ಯ ಕಾರಣವಾದರೂ ಗಲಾಟೆ ತುಂಬಿದ ಬೀದಿ ರಾಜಕೀಯಕ್ಕೆ ಧುಮುಕಲು ಮಹಿಳೆಯರು ಮನಸ್ಸು ಮಾಡಿರುವುದಕ್ಕೆ ಇನ್ನೂ ಎಷ್ಟೋ ಸೂಕ್ಷ್ಮ ಕಾರಣಗಳಿವೆ.
ಮೊದಲಿಗೆ ಪೌರತ್ವ ತಿದ್ದುಪಡೆ ಕಾಯಿದೆ (ಸಿಎಎ) ಗಂಡಸರಿಗಿಂತ ಹೆಚ್ಚಾಗಿ ಹೆಂಗಸರ ಬದುಕಿಗೆ ಬೆದರಿಕೆ ಒಡ್ಡುತ್ತಿದೆ. ಅಸ್ಸಾಂನ ಶಿಬಿರಗಳ ವರದಿಗಳು ಅವರಿಗೆ ನೈಜ ಸಂಗತಿಗಳನ್ನು ತಿಳಿಸುತ್ತಿವೆ. ಇದು ಬರೀ ಅಲ್ಪಸಂಖ್ಯಾತ ವರ್ಗವಷ್ಟೇ ಅಲ್ಲ, ಎಲ್ಲ ಸಮುದಾಯಗಳ ಮಹಿಳೆಯರಲ್ಲಿ ಭೀತಿ ಹುಟ್ಟಿಸಿದೆ. ಏಕೆಂದರೆ ಮತದಾನದ ಹಕ್ಕು ಅವರ ಪಾಲಿನ ದೊಡ್ಡ ಶಕ್ತಿ, ಅದನ್ನು ಕಳೆದುಕೊಳ್ಳುವ ಭಯ ಅವರನ್ನು ಅಲುಗಾಡಿಸಿದೆ.
ಉನ್ನತ ಶಿಕ್ಷಣ ಪಡೆಯುತ್ತಿರುವ ಯುವತಿಯರಿಗಂತೂ ಅದು ಬಹಳ ಮುಖ್ಯವಾದ ಪ್ರಶ್ನೆ. ಅವರ ದನಿಗೆ ಗಟ್ಟಿಬಲ ಕೊಟ್ಟಿರುವುದು ಅದೇ ಎನ್ನುವುದು ಅವರಿಗೆ ಗೊತ್ತು. ಆದ್ದರಿಂದ ಲಿಂಗ ಸಮಾನತೆ ಉಳಿಸಿಕೊಳ್ಳಬೇಕಾದರೆ ಇಂಥ ಕಾಯಿದೆಗಳನ್ನು ವಿರೋಧಿಸಬೇಕು ಎನ್ನುವುದು ಅವರಿಗೆ ತಿಳಿದಿದೆ. ಎರಡನೆಯದಾಗಿ, ನಮ್ಮ ದೇಶದಲ್ಲಿ ವಿಭಿನ್ನ ಸಾಮಾಜಿಕ- ಆರ್ಥಿಕ ವಲಯಗಳ ಮಹಿಳೆಯರ ಪಾಲಿಗೆ ಸರಿಯಾದ ದಾಖಲೆಗಳು ಇರುವುದೆಷ್ಟು ಕಷ್ಟ ಎನ್ನುವ ಭಯವೂ ಕಾಡುತ್ತಿದೆ.
ನಮ್ಮ ದೇಶದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಪಾಲಿನ ಹೆರಿಗೆ ಮತ್ತು ನಂತರದ ಸೌಲಭ್ಯಗಳು ಸೂಲಗಿತ್ತಿಯರು, ಮಿಡ್‍ವೈಫ್‍ಗಳನ್ನು ಅವಲಂಬಿಸಿರುವುದರಿಂದ ಜನನ ಪ್ರಮಾಣ ಪತ್ರದ ವಿಷಯ ಬಹಳ ಕಷ್ಟಕರವಾಗಿದೆ. ಇನ್ನು ಮದುವೆ ನೋಂದಣೀಕರಣವಂತೂ ಆಯ್ಕೆಯ ವಿಚಾರವಾಗಿಯೇ ಉಳಿದಿದೆ. ಮಹಿಳೆಯರ ಹೆಸರಿನಲ್ಲಿ ಆಸ್ತಿಯಂತೂ ಇರುವುದಿಲ್ಲ. ಅವರು ಹೆಚ್ಚುಪಾಲು ತಂದೆಯ ಅಥವಾ ಗಂಡನ ನೆರಳಿನಲ್ಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಸಿಎಎ ಮತ್ತು ಎನ್‍ಆರ್‍ಸಿ ಜಾರಿಯಾಗುವುದು ಬಹುಪಾಲು ಜಾತಿ, ವರ್ಗ ಮತ್ತು ಸಮುದಾಯಗಳ ಮಹಿಳೆಯರಿಗೆ ವಿಪರೀತ ಭಯವನ್ನೇ ಹುಟ್ಟಿಸುತ್ತಿದೆ.
ಗ್ರಾಮೀಣ ಮಹಿಳೆಯರ ಸಾಕ್ಷರತೆ ಹೆಚ್ಚುತ್ತಿರುವ ಮತ್ತು ನಗರ ಮಹಿಳೆಯರಿಗೆ ಹೊರ ಜಗತ್ತಿನ ಸಂಪರ್ಕ ಹೆಚ್ಚುತ್ತಿರುವ ಕಾರಣಗಳಿಂದ, ಈ ಕಾಯದೆ ತಮಗೆ ತಂದೊಡ್ಡಲಿರುವ ಅಪಾಯಗಳು ಅವರಿಗೆ ಗೋಚರಿಸುವುದು ಸುಲಭ. ಪ್ರತಿಭಟನೆಗಳಲ್ಲಿ ಪಾಲ್ಗೊಂಡ ಯುವತಿಯರಲ್ಲಿ ತಮ್ಮ ಕುಟುಂಬಗಳಲ್ಲಿ ಶಿಕ್ಷಣ ಪಡೆದ ಮತ್ತು ಉನ್ನತ ಶಿಕ್ಷಣ ಪಡೆದ ಮೊದಲ ಪೀಳಿಗೆಯವರೇ ಆಗಿರಬಹುದು. ಆದ್ದರಿಂದ ತಮ್ಮ ಆಸೆಆಕಾಂಕ್ಷೆಗಳನ್ನು ಕಳೆದು ಕೊಳ್ಳುವ ಸಾಧ್ಯತೆಯನ್ನೆ ಅವರು ಒಪ್ಪಲಾಗದೆ ಅವರು ಈ ಪ್ರತಿರೋಧದಲ್ಲಿ ಭಾಗವಹಿಸುತ್ತಿದ್ದಾರೆ.
ಮುಖ್ಯವಾಗಿ ಮಹಿಳೆಯರ ಸಾಕ್ಷರತೆಯೇ ಅವರು ಇದರಲ್ಲಿ ಹೆಚ್ಚಾಗಿ ಗಮನ ಹರಿಸುವಂತೆ ಮಾಡಿದೆ. ಉನ್ನತ ಶಿಕ್ಷಣದಲ್ಲಿ ಹೆಚ್ಚುತ್ತಿರುವ ಹೆಣ್ಣುಮಕ್ಕಳ ಪ್ರಮಾಣದಿಂದಾಗಿ ಅವರ ಪ್ರಯಾಣ, ಸಂಚಾರ, ಹಾಸ್ಟೆಲ್ ವಾಸ್ತವ್ಯದ ಅವಕಾಶಗಳೂ ಹೆಚ್ಚುತ್ತಿವೆ. ಅವರು ಹೆಚ್ಚು ಸ್ವತಂತ್ರರಾಗಿ ತಮ್ಮ ಜೀವನದ ನಿರ್ಧಾರಗಳನ್ನು ತಾವೇ ಕೈಗೊಳ್ಳುವಂತಾಗಿದೆ. ಇದು ಅವರಿಗೆ ಪ್ರಭುತ್ವವನ್ನು ಪ್ರಶ್ನಿಸುವ, ವಿರೋಧಿಸುವ, ಪ್ರತಿಭಟಿಸುವ ಧೈರ್ಯವನ್ನು ಕೊಡುತ್ತಿದೆ.
ಈ ಶಕ್ತಿಸಾಮಥ್ರ್ಯವನ್ನು ತಂತ್ರಜ್ಞಾನ ಇನ್ನಷ್ಟು ಬಲಪಡಿಸುತ್ತಿದೆ. ಕಿರಿಯ ಪೀಳಿಗೆಯ ಮಹಿಳೆಯರು ಸುಲಭವಾಗಿ ಜಗತ್ತಿನ ಜೊತೆ ಸಂಪರ್ಕ ಸಾಧಿಸಿಕೊಳ್ಳುವಂತಾಗಿದೆ. ನವ ಮಾಧ್ಯಮದಲ್ಲಿ ಅವರು ತೋರುವ ಉತ್ಸಾಹದಿಂದ ರೂಪಗೊಳ್ಳುವ ಒಗ್ಗಟ್ಟು ಅವರಿಗೆ ಸಾರ್ವಜನಿಕ ರಂಗದಲ್ಲಿ ಇನ್ನಷ್ಟು ದನಿ ತುಂಬುತ್ತಿದೆ. ವಿದ್ಯಾರ್ಥಿಗಳೇ ನೇತೃತ್ವ ವಹಿಸಿರುವ ರಾಜಕಾರಣದ ಸಂಘಟನೆಗೆ ಆ ವಲಯದ ಡಿಜಿಟಲೀಕರಣ ತಂತ್ರಜ್ಞಾನ ಬಹಳ ಮುಖ್ಯ. (ದಿ ವೈರ್. ಇನ್ ಅಂತರಜಾಲ ಪತ್ರಿಕೆಯ ಸಂಗ್ಬಿದಾ ಲಾಹಿರಿ ಅವರ ಲೇಖನದ ಸಂಗ್ರಹಾನುವಾದ)
- ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.