ದೇಶಕಾಲ/ ನೌಕಾದಳದಲ್ಲೂ ಮಹಿಳೆಯರಿಗೆ ಸೂಕ್ತ ಅವಕಾಶ

ಸೇನೆಯಂತೆ ನೌಕಾದಳದಲ್ಲೂ ಮಹಿಳೆಯರಿಗೆ ಉನ್ನತ ಹುದ್ದೆ -ಶಾಶ್ವತ ನೇಮಕಾತಿ ನೀಡಲೇಬೇಕೆಂಬ ಸುಪ್ರೀಂ ಕೋರ್ಟ್ ನ್ಯಾಯಪೀಠದ ತೀರ್ಪು, ಮಹಿಳಾ ಸಬಲೀಕರಣ ಮತ್ತು ಅವರ ಶೌರ್ಯದ ಅನಾವರಣಕ್ಕೆ ಅದ್ಭುತ ಅವಕಾಶಗಳನ್ನು ಒದಗಿಸಲಿದೆ. ಅವಕಾಶಗಳ ನಿರಾಕರಣದ ಚರಿತ್ರೆಯನ್ನು ಅಳಿಸಲಿದೆ.

ಅಮೆರಿಕ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಮಹಿಳೆಯರು ಸಬ್‍ಮೆರಿನ್‍ಗಳಲ್ಲಿ ಹೋರಾಟಕ್ಕೆ ಇಳಿಯುತ್ತಾರೆ. ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಗಳಲ್ಲಿ ಮಹಿಳೆಯರು ಸಮರನೌಕೆಗಳಲ್ಲಿ ಇದ್ದು ಕದನದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಭಾರತದಲ್ಲಿ, ಸಂವಿಧಾನದ ಸಮಾನತೆಯ ರಕ್ಷಾಕವಚ ಇದ್ದರೂ ಇರುವ ಹಕ್ಕುಗಳನ್ನೂ ಹೋರಾಡಿ ಪಡೆಯಬೇಕಾದ ವಿಪರ್ಯಾಸಕ್ಕೆ ಹಲವು ಉದಾಹರಣೆಗಳುಂಟು. ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಅಧಿಕಾರಸ್ಥ ಸರ್ಕಾರಗಳೇ ಅವರಿಗೆ ದಕ್ಕಬೇಕಾದ್ದನ್ನು ತಡೆಹಿಡಿದಾಗ ಈ ಹೋರಾಟ ಇನ್ನಷ್ಟು ಕಠಿಣವೇ ಆಗಿಬಿಡುತ್ತದೆ. ಆಗ ಅದೇ ಸಂವಿಧಾನ ನೀಡಿದ ಸೌಲಭ್ಯ ಬಳಸಿ ಮಹಿಳೆಯರು ನ್ಯಾಯಾಲಯಕ್ಕೆ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ.

ಅಂಥದೊಂದು ಕಾನೂನು ಹೋರಾಟದಲ್ಲಿ, ಕೇಂದ್ರ ಸರ್ಕಾರದ ಅಂಥ ವಿರೋಧ ಮತ್ತು ತಾರತಮ್ಯವನ್ನು ಹೊಡೆದುಹಾಕಿದ ಸುಪ್ರೀಂ ಕೋರ್ಟ್ ಈಗ ನೌಕಾದಳದ ಎಲ್ಲ ಹುದ್ದೆಗಳಿಗೂ ಮಹಿಳೆಯರಿಗೆ ನಿವೃತ್ತಿವರೆಗಿನ ದೀರ್ಘಕಾಲದ ನೇಮಕಾತಿಗಳನ್ನು ಮಾಡಿಕೊಳ್ಳಲೇಬೇಕೆಂದು ಹೇಳಿದೆ. ಮೊದಲು ನಿರ್ದಿಷ್ಟ ಶಾಖೆಗಳಲ್ಲಿ ಮಾತ್ರ ಇದ್ದ ಈ ಅವಕಾಶವನ್ನು ಎಲ್ಲ ಶಾಖೆಗಳಿಗೂ ವಿಸ್ತರಿಸಲಾಗಿದೆ. ಇದೊಂದು ಐತಿಹಾಸಿಕ ತೀರ್ಪು ಅನ್ನುವುದರಲ್ಲಿ ಅನುಮಾನವೇ ಇಲ್ಲ.

ಈಗ ಒಂದು ತಿಂಗಳ ಹಿಂದೆಯಷ್ಟೇ ಸೇನೆಯಲ್ಲಿ ಮಹಿಳೆಯರಿಗೂ ಕಮಾಂಡ್ ಹುದ್ದೆಗಳು ಮತ್ತು ಶಾಶ್ವತ ನೇಮಕಾತಿಗಳ ಅವಕಾಶ ಇರಬೇಕೆಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಕೊಟ್ಟಿತ್ತು. ಇದೀಗ ಈ ತೀರ್ಪಿನಲ್ಲಿ `ಗಂಡಸರು ಮಾತ್ರ ಕೆಲವು ಕೆಲಸಗಳಿಗೆ ಗಂಡಸರು ಮಾತ್ರ ಸೂಕ್ತ, ಹೆಂಗಸರಲ್ಲ’ ಎಂಬಂಥ ಕಾಲ್ಪನಿಕ ತೀರ್ಮಾನಗಳನ್ನು ಬಿಡಬೇಕು ಎಂದು ಆದೇಶಿಸಿರುವ ನ್ಯಾಯಮೂರ್ತಿಗಳ ಪೀಠ, ಲಿಂಗ ತಾರತಮ್ಯವನ್ನು ಬಿಟ್ಟುಬಿಡಿ ಎಂದು ಹೇಳಿದೆ. ಇದು ಭಾರತೀಯ ಮಹಿಳಾ ಸಂಕುಲಕ್ಕೆ ಒಂದು ಅಸಾಮಾನ್ಯ ಅವಕಾಶವನ್ನು ಕೊಟ್ಟಿದೆ ಎಂದು ಹೇಳಬಹುದು.

ನೌಕಾದಳದಲ್ಲಿ ಮಹಿಳೆಯರಿಗೆ ಉನ್ನತ ದರ್ಜೆಯ ದೀರ್ಘಕಾಲೀನ ಹುದ್ದೆಗಳನ್ನು ಕೊಡದಿರಲು ಕೇಂದ್ರ ಸರ್ಕಾರ ನೂರೊಂದು ಕಾರಣಗಳನ್ನು ಮುಂದಿಟ್ಟಿತ್ತು. ನೌಕಾದಳದ ಕೆಲಸ ಮಹಿಳೆಯರಿಗೆ ಸೂಕ್ತವಲ್ಲ, ಸದಾ ತೇಲುತ್ತಿರುವ ನೌಕೆಯಲ್ಲಿ ಅವರು ಇರುವುದು ಸೂಕ್ತವಲ್ಲ, ರಷ್ಯನ್ ಮಾದರಿಯ ನೌಕೆಗಳಲ್ಲಿ ಟಾಯ್ಲೆಟ್ ಸೌಲಭ್ಯ ಸರಿಯಾಗಿರುವುದಿಲ್ಲ ಇತ್ಯಾದಿಗಳನ್ನು ಅದು ಪಟ್ಟಿ ಮಾಡಿತ್ತು. ಆದರೆ ಮಹಿಳೆಯರಿಗೆ `ಪರ್ಮನೆಂಟ್ ಕಮಿಷನ್’ (ಶಾಶ್ವತ ನೇಮಕಾತಿ) ಕೊಡಲು ಇವನ್ನೆಲ್ಲ ನೆಪ ಹೇಳಬೇಕಾಗಿಲ್ಲ, ನಿಮ್ಮ ಮನೋಧರ್ಮ ಬದಲಾಯಿಸಿಕೊಳ್ಳಿ ಅನ್ನುವಂತೆ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಅಜಯ್ ರಾಸ್ತೊಗಿ ಅವರಿದ್ದ ಪೀಠ ಕಟುಮಾತುಗಳಲ್ಲಿ ಹೇಳಿದೆ.

“ಲಿಂಗ ಸಮಾನತೆಯ ಹೋರಾಟ ಅಂದರೆ ಮನೋಭಾವದ ಹೋರಾಟಗಳನ್ನೂ ಎದುರಿಸುವುದು ಎಂದರ್ಥ. ಕಾನೂನಿನ ಪ್ರಕಾರ ನ್ಯಾಯೋಚಿತವಾಗಿ ದೊರೆಯಬೇಕಾಗಿದ್ದ ಅವಕಾಶಗಳನ್ನು ಮತ್ತು ಉದ್ಯೋಗದ ಸ್ಥಳಗಳಲ್ಲಿ ಸರಿಯಾದ ಮತ್ತು ಸಮಾನವಾದ ಅವಕಾಶಗಳ ಹಕ್ಕನ್ನು ಮಹಿಳೆಯರಿಗೆ ನಿರಾಕರಿಸಿರುವ ಉದಾಹರಣೆಗಳೇ ನಮ್ಮ ಇತಿಹಾಸದಲ್ಲಿ ತುಂಬಿಕೊಂಡಿವೆ. ಸೇನಾಪಡೆಗಳ ವಿಷಯದಲ್ಲಂತೂ ನೀತಿನಿರ್ಧಾರಕರು ಮತ್ತು ಆಡಳಿತಗಾರರು ಇದಕ್ಕೆ ತೀರಾ ನಾಜೂಕಾದ ಕಾರಣಗಳನ್ನು ಮುಂದಿಟ್ಟಿದ್ದಾರೆ. ದೇಹರಚನಾಶಾಸ್ತ್ರ, ತಾಯ್ತನ, ದೈಹಿಕ ಸ್ವರೂಪಗಳಿಂದ ಹಿಡಿದು ಪುರುಷ ಪಾರಮ್ಯದವರೆಗೆ ಈ ಕಾರಣಗಳು ಹರಡಿಕೊಂಡಿವೆ. ಹೀಗೆ ನೂರೊಂದು ಕಾರಣಗಳನ್ನು ಮುಂದಿಟ್ಟರೂ ಕೂಡ, ಉದ್ಯೋಗದಲ್ಲಿ ಸಮಾನ ಅವಕಾಶ ಮತ್ತು ಕಾರ್ಯರಂಗದ ಸಮಾನತೆ ವಿಚಾರದಲ್ಲಿ ಸಂವಿಧಾನವು ಯಾವ ಲಿಂಗದ ವ್ಯಕ್ತಿಗಾದರೂ ನೀಡುವ ಘನತೆಗೆ ಸರಿಸಮವಲ್ಲ” ಎಂಬ ನ್ಯಾಯಪೀಠದ ಮಾತುಗಳು ಮಹಿಳಾ ಸಬಲೀಕರಣಕ್ಕೆ ಇನ್ನಷ್ಟು ಶಕ್ತಿ ತುಂಬುತ್ತವೆ.

ಸೇನೆಯ ಎಲ್ಲ ವಿಭಾಗಗಳಲ್ಲಿ ಪುರುಷರಿಗೆ ಹೆಗಲೆಣೆಯಾಗಿ ಮಹಿಳಾ ಅಧಿಕಾರಿಗಳೂ ದುಡಿದಿದ್ದಾರೆ, ಅವರು ತಮ್ಮ ದಕ್ಷತೆ, ಸಾಮಥ್ರ್ಯ ಮತ್ತು ಕೆಲಸಕಾರ್ಯಗಳ ಆಧಾರದ ಮೇಲೆ “ತಾರತಮ್ಯದ ಚರಿತ್ರೆಗಳನ್ನು” ನೀಗಿಕೊಳ್ಳಲು ಅವರಿಗೆ ಸಮಾನ ಕಾರ್ಯರಂಗವನ್ನು ನಿರ್ಮಿಸಿಕೊಡಬೇಕು ಎಂದೂ ನ್ಯಾಯಾಲಯ ಹೇಳಿದೆ. ಈಗ ನಮ್ಮ ನೌಕಾದಳವು ಇದಕ್ಕೆ ಅನುಗುಣವಾಗಿ ಮಹಿಳಾ ಅಧಿಕಾರಿಗಳಿಗೆ ಅಗತ್ಯವಾದ ತರಬೇತಿ ಮತ್ತು ಮತ್ತು ನೇಮಕಾತಿ ಸೌಲಭ್ಯಗಳನ್ನು ನೀಡಬೇಕಾಗಿದೆ. ಪ್ರಸ್ತುತ 130 ಯುದ್ಧ ನೌಕೆಗಳು, 17 ಸಬ್‍ಮೆರಿನ್‍ಗಳು 235 ವಿಮಾನಗಳು, ಹೆಲಿಕಾಪ್ಟರ್‍ಗಳು ಮತ್ತು ಡ್ರೋನ್‍ಗಳನ್ನು ಹೊಂದಿರುವ ನೌಕಾದಳದಲ್ಲಿರುವ 10 ಸಾವಿರ ಅಧಿಕಾರಿಗಳ ಪೈಕಿ 550 ಮಹಿಳೆಯರಿದ್ದಾರೆ. ಆದರೆ ಅವರಿಗೆ ಸಮುದ್ರಯಾನದ ಕೆಲಸಗಳಿಗಿಂತ ಸಮುದ್ರತೀರದ ಕೆಲಸದ ಜವಾಬ್ದಾರಿಗಳನ್ನೇ ವಹಿಸಲಾಗುತ್ತಿದೆ. ಆದರೆ 2017-18 ರಲ್ಲಿ ಆರು ಮಂದಿ ಧೈರ್ಯಶಾಲಿ ಮಹಿಳಾ ಅಧಿಕಾರಿಗಳು ಕೈಗೊಂಡ ಐಎನ್‍ಎಸ್‍ವಿ ತಾರಿಣಿ ದೋಣಿಯಲ್ಲಿ ವಿಶ್ವ ಪರ್ಯಟನ, ನೌಕಾದಳದ ವಿಮಾನಗಳನ್ನು ಹಾರಿಸುವ ಮಹಿಳಾ ಪೈಲಟ್‍ಗಳ ದಿಟ್ಟತನ ಮುಂತಾದ ಸಾಹಸಗಳು ಇನ್ನಷ್ಟು ಮಹಿಳೆಯರಿಗೆ ಸ್ಫೂರ್ತಿ ನೀಡಲಿವೆ.

  • ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *