ದೇಶಕಾಲ/ ನಮ್ಮ ಮನೆಯಲ್ಲೂ ‘ಅತ್ಯಾಚಾರಿ’ ಇರಬಹುದೇ? -ಅರುಣ್ ಜೋಳದಕೂಡ್ಲಿಗಿ
ಅತ್ಯಾಚಾರದಂತಹ ಕ್ರೌರ್ಯವನ್ನು ಎಸಗಿದ ಗಂಡಿನ ಜಾಗದಲ್ಲಿ ತಮ್ಮ ಮಗನನ್ನೋ, ಗಂಡ, ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅಜ್ಜಂದಿರನ್ನೋ ಕಲ್ಪಿಸಿಕೊಂಡು ವಿಚಲಿತರಾಗುವುದಿಲ್ಲ. ಹಾಗೆ ವಿಚಲಿತರಾಗಿ ತನ್ನ ಮನೆಯ ಗಂಡಸರು ಅತ್ಯಾಚಾರದಂತಹ ಕ್ರೌರ್ಯ ಎಸಗದಂತೆ ಎಚ್ಚರವಹಿಸುವ ವಾತಾವರಣ ಮನೆಗಳಲ್ಲಿ ನಿರ್ಮಾಣವಾಗುವುದಿಲ್ಲ. ಅಂತಹ ಅಪರಾಧಿಗಳು ಹೊರಗಿದ್ದಾರೆ, ಆ ಅಪರಾಧಕ್ಕೆ ಬಲಿಯಾಗುವವರಲ್ಲಿ ನಮ್ಮ ಹೆಣ್ಣುಮಕ್ಕಳು ಇರುತ್ತಾರೆಯೇ ವಿನಃ, ಅಪರಾಧ ಮಾಡುವವರಲ್ಲಿ ನಮ್ಮ ಮನೆಯ ಗಂಡಸರು ಇರುವುದಿಲ್ಲ ಎಂದು ನಂಬಲಾಗುತ್ತದೆ. ಹಾಗಾಗಿ ಇನ್ನಾರದೋ ಮನೆಯಲ್ಲಿ ಬೆಳೆದ ಗಂಡಸರು ಈ ಮನೆಯ ಹೆಣ್ಣುಗಳನ್ನೂ, ಇವರದೇ ಮನೆಯಲ್ಲಿ ಬೆಳೆದ ಗಂಡುಗಳು ಇನ್ನಾರದೋ ಮನೆಯ ಹೆಣ್ಣುಗಳನ್ನು ಅತ್ಯಾಚಾರ ಮಾಡಲು ಹಿಂದೇಟು ಹಾಕುವುದಿಲ್ಲ.
ಹೆಣ್ಣಿನ ಮೇಲೆ ಅತ್ಯಾಚಾರ ಆದಾಗಲೆಲ್ಲಾ ಅತ್ಯಾಚಾರಕ್ಕೆ ಒಳಗಾದ ಹುಡುಗಿ ಮತ್ತು ಅತ್ಯಾಚಾರ ಎಸಗಿದ ಕ್ರೂರಿಗಳ ಜಾತಿ/ಧರ್ಮ/ವರ್ಗದ ಹಿನ್ನೆಲೆಯನ್ನಾಧರಿಸಿ ಕೇರಿ/ಹಟ್ಟಿ/ಓಣಿ/ನಗರ/ಮಹಾನಗರದ ಸ್ಥಳವನ್ನಾಧರಿಸಿ ಸರಕಾರ/ಮಾಧ್ಯಮ/ಜನತೆಯ ಒತ್ತಾಸೆಗಳಲ್ಲಿ ಏರುಪೇರಾಗುತ್ತವೆ. ಮೇಲ್ಜಾತಿ ಹುಡುಗಿ ಕೆಳಜಾತಿ ಹುಡುಗರಾದರೆ ಎನ್ಕೌಂಟರ್ ನಡೆದು ದಿಡೀರ್ ನ್ಯಾಯ ಸಿಗುತ್ತದೆ. ಮೇಲ್ಜಾತಿ ಹುಡುಗ ದಲಿತ ಹುಡುಗಿಯಾದರೆ ಕೇಸು ಗೆದ್ದಲು ತಿನ್ನುತ್ತದೆ. ಅತ್ಯಾಚಾರಿಯದೊಂದು ಧರ್ಮ, ಅತ್ಯಾಚಾರಕ್ಕೊಳಗಾದ ಹುಡುಗಿಯದೊಂದು ಧರ್ಮವಾದರೆ ಆಯಾ ಧಾರ್ಮಿಕ ಮೂಲಭೂತವಾದಿಗಳು ಕೂಗಾಡುತ್ತಾರೆ. ಇಲ್ಲೆಲ್ಲಾ `ಗಂಡಾಳ್ವಿಕೆ’ಯ ಸಮಾಜ
`ಹೆಣ್ಣ’ನ್ನು ತಮಗೆ ಬೇಕಾದಂತೆ ನಿರೂಪಿಸುತ್ತದೆ. ಇದರಲ್ಲಿ ದಮನಕ್ಕೆ ಒಳಗಾಗುವವಳು ಕೇವಲ ಹೆಣ್ಣು.
ಅತ್ಯಾಚಾರದ ಸುದ್ದಿ ಬಂದಾಗಲೆಲ್ಲಾ ಹಲವು ನೆಲೆಯ ವಿಶ್ಲೇಷಣೆಗಳು ನಡೆಯುತ್ತವೆ. ನಾನಿಲ್ಲಿ `ಅತ್ಯಾಚಾರಿ ನಮ್ಮ ಮನೆಯಲ್ಲೂ ಇರಬಹುದೆ? ಅಥವಾ ಪ್ರತಿ ಗಂಡಿನ ಒಳಗೂ ಒಬ್ಬ ಅತ್ಯಾಚಾರಿ ಅಡಗಿ ಕೂತಿರಬಹುದೇ? ಎನ್ನುವ ಪ್ರಶ್ನೆಯನ್ನು ಎದುರುಗೊಂಡು ವಿಶ್ಲೇಷಿಸಿರುವೆ. ಎಲ್ಲಿಯದೋ ಅತ್ಯಾಚಾರದ ಸುದ್ದಿ ಕೇಳಿದಾಗ ತಕ್ಷಣಕ್ಕೆ ನಮ್ಮ ಮನೆಯ ಹೆಣ್ಣುಗಳು ನೆನಪಾಗುತ್ತಾರೆ. ಎಲ್ಲಾ ತಂದೆ ತಾಯಿಗಳು ಸಹಜವಾಗಿ ಅತ್ಯಾಚಾರದ ಕ್ರೌರ್ಯಕ್ಕೆ ಒಳಗಾಗ ಸಂತ್ರಸ್ಥೆಯ ಜಾಗದಲ್ಲಿ ತನ್ನ ಮನೆಯ ಹೆಣ್ಣುಗಳನ್ನು ಕಲ್ಪಿಸಿಕೊಂಡು ಭಯಪಡುತ್ತಾರೆ. ಈ ಆತಂಕದಲ್ಲಿಯೇ ಅವರ ರಕ್ಷಣೆಯ ಬಗ್ಗೆ ಯೋಚಿಸಿ, ಮನೆಯ ಹೆಣ್ಣುಮಕ್ಕಳಿಗೆ ಮತ್ತಷ್ಟು ಕಟ್ಟುಪಾಡುಗಳನ್ನು ಬಿಗಿಗೊಳಿಸುತ್ತಾರೆ. ತಮ್ಮ ಮನೆಯ ಹೆಣ್ಣುಗಳನ್ನು ಅದೆ ಮನೆಯ ಗಂಡು ಹದ್ದಿನ ಕಣ್ಣಿಟ್ಟು ಕಾಯುವ ಹೊಣೆ ಹೊರುತ್ತಾನೆ.
ಆದರೆ ಅತ್ಯಾಚಾರದಂತಹ ಕ್ರೌರ್ಯವನ್ನು ಎಸಗಿದ ಗಂಡಿನ ಜಾಗದಲ್ಲಿ ತಮ್ಮ ಮಗನನ್ನೋ, ಗಂಡ, ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅಜ್ಜಂದಿರನ್ನೋ ಕಲ್ಪಿಸಿಕೊಂಡು ವಿಚಲಿತರಾಗುವುದಿಲ್ಲ. ಹಾಗೆ ವಿಚಲಿತರಾಗಿ ತನ್ನ ಮನೆಯ ಗಂಡಸರು ಅತ್ಯಾಚಾರದಂತಹ ಕ್ರೌರ್ಯ ಎಸಗದಂತೆ ಎಚ್ಚರವಹಿಸುವ ವಾತಾವರಣ ಮನೆಗಳಲ್ಲಿ ನಿರ್ಮಾಣವಾಗುವುದಿಲ್ಲ. ಹೆಣ್ಣನ್ನು ನೋಡುವ ದೃಷ್ಠಿಕೋನದ ಬಗೆಗೆ ತಮ್ಮ ಮನೆಯ ಗಂಡರಸರಲ್ಲಿ ಸೂಕ್ಷ್ಮತೆಯನ್ನೋ, ತಿಳುವಳಿಕೆಯನ್ನೋ ಹೇಳುವುದಿಲ್ಲ. ಇಂತಹ ತಿಳುವಳಿಕೆಯನ್ನು ಯಾರು ಹೇಳಬೇಕು? ಮನೆಯ ಹೆಣ್ಣು ತನ್ನ ಮನೆಯ ಗಂಡಸರನ್ನು ಅಪರಾಧಿಗಳಂತೆ ನೋಡಿ ಬುದ್ಧಿವಾದ ಹೇಳಿ ಬಚಾವಾಗಲು ಈ ದೇಶದಲ್ಲಿ ಸಾಧ್ಯವಿಲ್ಲ. ಅಂತೆಯೇ ಮನೆಯ ತಂದೆ ತನ್ನದೇ ಕುಲದ ಮಗನಿಗೆ ಹೆಣ್ಣಿನ ಬಗೆಗೆ ಸೂಕ್ಷ್ಮಗೊಳಿಸಬೇಕಾದ ತರಬೇತಿಯೂ ನಮ್ಮ ಕುಟುಂಬಗಳಿಗಿಲ್ಲ. ಮನೆಯ ಗಂಡಸರು ಏನು ಮಾಡುತ್ತಾರೆಂದು ಹದ್ದಿನ ಕಣ್ಣಿಟ್ಟು ಕಾಯುವ ಅವಶ್ಯಕತೆ ಇಲ್ಲವೆಂದು ಭಾವಿಸಲಾಗುತ್ತದೆ.
ಈ ಎರಡೂ ಭಿನ್ನತೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ನಾವುಗಳು ನಮ್ಮ ಮನೆಗಳ ಹೆಣ್ಣುಗಳನ್ನು ಸಂತ್ರಸ್ಥೆಯಂತೆ ಭಾವಿಸಿ, ಅದರಿಂದ ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳನ್ನು ಹುಡುಕುತ್ತೇವೆಯೋ ಹೊರತು, ನಮ್ಮ ಮನೆಗಳ ಗಂಡಸರನ್ನು ಅಪರಾಧಿಯ ಸ್ಥಾನದಲ್ಲಿ ಕಲ್ಪಿಸಿ ಅಂತಹ ಅಪರಾಧಗಳು ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸುವುದಿಲ್ಲ. ಅಂದರೆ ಅಪರಾಧವನ್ನು ಮತ್ಯಾರೋ ಮಾಡುತ್ತಾರೆ, ಅಂತಹ ಅಪರಾಧಿಗಳು ಹೊರಗಿದ್ದಾರೆ. ಹಾಗಾಗಿ ಆ ಅಪರಾಧಕ್ಕೆ ಬಲಿಯಾಗುವವರಲ್ಲಿ ನಮ್ಮ ಹೆಣ್ಣುಮಕ್ಕಳು ಇರುತ್ತಾರೆಯೇ ವಿನಃ, ಅಪರಾಧ ಮಾಡುವವರಲ್ಲಿ ನಮ್ಮ ಮನೆಯ ಗಂಡಸರು ಇರುವುದಿಲ್ಲ ಎಂದು ನಂಬಲಾಗುತ್ತದೆ. ಹಾಗಾಗಿ ಇನ್ನಾರದೋ ಮನೆಯಲ್ಲಿ ಬೆಳೆದ ಗಂಡಸರು ಈ ಮನೆಯ ಹೆಣ್ಣುಗಳನ್ನೂ, ಇವರದೇ ಮನೆಯಲ್ಲಿ ಬೆಳೆದ ಗಂಡುಗಳು ಇನ್ನಾರದೋ ಮನೆಯ ಹೆಣ್ಣುಗಳನ್ನು ಅತ್ಯಾಚಾರ ಮಾಡಲು ಹಿಂದೇಟು ಹಾಕುವುದಿಲ್ಲ. ಬಹುಶಃ ಅತ್ಯಾಚಾರಗಳು ಹೆಚ್ಚುತ್ತಿರುವುದಕ್ಕಿರುವ ಕಾರಣಗಳಲ್ಲಿ ಈ ಸಂಗತಿಯೂ ಒಂದು. ಇಂತಹದ್ದೊಂದು ನಂಬಿಕೆ ಹುಟ್ಟಿರುವುದು ಕೂಡ ಗಂಡಾಳ್ವಿಕೆಯ ಕುಟುಂಬ ಅಥವಾ ಸಮಾಜದ ಪರಿಣಾಮ ಎನ್ನುವುದನ್ನು ಗಮನಿಸಬೇಕು.
ಕಾಲ್ಪನಿಕವಲ್ಲ
ಹಾಗಾಗಿಯೇ ಇದೇ ಪ್ರಶ್ನೆಯನ್ನು ಚೂರು ಸಾರ್ವತ್ರಿಕಗೊಳಿಸಿದರೆ ಪ್ರತಿ ಗಂಡಿನ ಒಳಗೂ ಒಬ್ಬ ‘ಅತ್ಯಾಚಾರಿ’ ಅವನಿಗೂ ತಿಳಿಯದ ಹಾಗೆ ಹೊಂಚು ಹಾಕಿ ಕೂತಿರಬಹುದೇ? ಎನ್ನುವ ಪ್ರಶ್ನೆಯೂ ಕಾಡುತ್ತದೆ. ಸಮಯ ಸಂದರ್ಭವನ್ನು ಆಧರಿಸಿ ಗಂಡಸರ ಒಳಗಿನ ‘ಅತ್ಯಾಚಾರಿ’ ಜಾಗೃತವಾಗುವ ಸಾಧ್ಯತೆ ಇದೆ. ಕೆಲವು ಗಂಡಸರು ಪ್ರಜ್ಞಾಪೂರ್ವಕವಾಗಿ ತನ್ನೊಳಗೆ ಅಡಗಿ ಕೂತ ‘ಅತ್ಯಾಚಾರಿ’ ಹಸಿವಿಗಾಗಿ ಬಾಯ್ದೆರೆಯದಂತೆ ದಿಗ್ಭಂಧನ ಹಾಕಿರಬಹುದು. ಆದರೆ ಹೀಗೆ ಎಲ್ಲಾ ಗಂಡಸರ ಒಳಗೂ ಮುಗುಮ್ಮಾಗಿ ಅಡಗಿ ಕೂತ ‘ಅತ್ಯಾಚಾರಿ’ ಯನ್ನು ಕೊಲ್ಲದೆ… ಕೊಂದು ಹೊರಹಾಕದೆ ಅತ್ಯಾಚಾರ ನಿಲ್ಲದು. ಇದು ಹೇಳಿದಷ್ಟು ಸುಲಭಸಾಧ್ಯವೇ ಎನ್ನುವ ಪ್ರಶ್ನೆಯೊಂದು ದೊಡ್ಡದಾಗಿ ಎದುರು ನಿಲ್ಲುತ್ತದೆ.
ನಮ್ಮ ಮನೆಯೊಳಗೂ ಒಬ್ಬ ಅತ್ಯಾಚಾರಿ ಇರಬಹುದೇ? ಎಂದು ಪ್ರಶ್ನಿಸಿದ್ದು ಕೇವಲ ಕಾಲ್ಪನಿಕವಲ್ಲ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್.ಸಿ.ಆರ್.ಬಿ) 2019 ರ ವರದಿ ಪ್ರಕಾರ ಮಹಿಳೆಯರ ಮೇಲಿನ ದೌರ್ಜನ್ಯದ ಅಪರಾಧಗಳು ಶೇ 7 ರಷ್ಟು ಹೆಚ್ಚಾಗಿವೆ. ನಾಲ್ಕು ಲಕ್ಷದಷ್ಟು ಪ್ರಕರಣಗಳು ದಾಖಲಾಗಿವೆ. ಪ್ರತಿದಿನ 88 ಮಹಿಳೆಯರ ದೌರ್ಜನ್ಯ ನಡೆಯುತ್ತಿದೆ. ಶೇ 30.9 ಮನೆಯವರಿಂದಲೇ ದೌಜ್ರ್ಯನ್ಯಗಳಾಗುತ್ತಿವೆ. ಹಾಗಾಗಿ ಅತ್ಯಾಚಾರ ಮಾಡುವ ಆರೋಪಿ ಬೇರೆಲ್ಲೋ ಇದ್ದಾರೆ ಅಂತಹವರು ನಮ್ಮ ಮನೆಯಲ್ಲಿಲ್ಲ, ಪರಿಚಿತರಲಿಲ್ಲ, ಸಂಬಂಧಿಕರಲ್ಲಿಲ್ಲ ಎಂದು ಭಾವಿಸುವಿಕೆಯಿಂದಲೇ ಬಹುಸಂಖ್ಯಾತ ಅತ್ಯಾಚಾರಿಗಳು ಪರಿಚಯದವರೇ ಆಗಿರುವುದು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು.
-ಅರುಣ್ ಜೋಳದಕೂಡ್ಲಿಗಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.