ದೇಶಕಾಲ/ ದೆಹಲಿ ದಾದಾಗಳ ಧಿಮಾಕು ಇಳಿಸಿದ ದೀದಿ – ಆರ್. ಪೂರ್ಣಿಮಾ

ಪಶ್ಚಿಮ ಬಂಗಾಳ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಅಣ್ತಮ್ಮಂದಿರಿಗೆ ದೀದಿ ಕಲಿಸಿದ ಪಾಠಗಳು ಒಂದೆರಡಲ್ಲ! ಬಾಯಲ್ಲಿ ರಾಮ ಮಂತ್ರವನ್ನು ಪಠಿಸುತ್ತಿದ್ದರೂ ಚುನಾವಣೆಯಲ್ಲಿ ರಾಕ್ಷಸ ತಂತ್ರಗಳನ್ನು ರೂಪಿಸುತ್ತಿದ್ದವರ ಮೇಲೆ ಈ ದುರ್ಗೆ ಮಾಡಿದ ಪ್ರಹಾರಗಳು ಅಂತಿಂಥವಲ್ಲ! ಪ್ರಚಾರದ ನಡುವೆ ಕಾಲು ಮುರಿದುಕೊಂಡದ್ದನ್ನೇ ಬಳಸಿಕೊಂಡ ಈ ನಾಯಕಿ, ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡೇ ಎದುರಾಳಿಗಳ ಓಟಕ್ಕೆ ಅಡ್ಡಗಾಲು ಹಾಕಿ ಬೀಳಿಸಿದ್ದು, ತನ್ನ ಓಟಿನ ಓಟವನ್ನು ಹೆಚ್ಚಿಸಿಕೊಂಡದ್ದು ಸುಮ್ಮನೆ ಅಲ್ಲ! ತಾನು ಎಡಕ್ಕೂ ಹೊಡೆದು ಉರುಳಿಸಬಲ್ಲೆ, ಬಲಕ್ಕೂ ಬಡಿದು ಬಳಲಿಸಬಲ್ಲೆ ಎಂಬುದನ್ನು ಹಲವು ಪಕ್ಷಗಳನ್ನು ಹಾದು ಬಂದಿರುವ ಮಮತಾ ತೋರಿಸಿದ ರೀತಿ, ಈಗ ದೇಶರಾಜಕಾರಣದ ಮೂರನೇ ರಂಗದ ಮೂರನೇ ಪ್ರಯತ್ನಕ್ಕೆ ಮತ್ತೆ ಜೀವ ಕೊಟ್ಟುಬಿಟ್ಟಿದೆ!

ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಒಂದು ಅಗತ್ಯ ಕ್ರಿಯೆಯಷ್ಟೆ. ಆದರೆ ಭಾರತ ದೇಶದ ರಾಜಕಾರಣದ ಜೀವನ್ಮರಣದ ಪ್ರಶ್ನೆಯೇನೋ ಅನ್ನುವಷ್ಟು ಯುದ್ಧೋನ್ಮಾದದಿಂದ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಮತ್ತು ಅದರ ಫಲಿತಾಂಶ, ಮೂಲೆಮೂಲೆಗಳಲ್ಲಿ ಅಪ್ಪಳಿಸಿದ ಕೊರೋನ ಎರಡನೇ ಅಲೆಯ ಸಂಕಷ್ಟಗಳ ನಡುವೆಯೂ ದೇಶದ ಗಮನವನ್ನು ಆವರಿಸಿತ್ತು. ಏಕೆಂದರೆ ಎಲ್ಲೂ ಬಹುತ್ವವನ್ನು ಒಪ್ಪದ ಭಾರತೀಯ ಜನತಾ ಪಕ್ಷ, ಆಡಳಿತದಲ್ಲಿ ತನ್ನ “ಏಕ ದೇಶ ಏಕ ಪಕ್ಷ” ದ ಚಿಂತನೆಯನ್ನು ಗಟ್ಟಿಮಾಡಿಕೊಳ್ಳಲು ಈ ರಾಜ್ಯದ ಅಧಿಕಾರವನ್ನು ಗಳಿಸುವುದೇ ದಿಕ್ಸೂಚಿ ಎಂದು ಭಾವಿಸಿಬಿಟ್ಟಿತ್ತು. ಆದ್ದರಿಂದಲೇ ಚುನಾವಣೆಗೆ ತನ್ನ ಮತ್ತು ತಾನು ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದ ಸಕಲ ಶಕ್ತಿಗಳನ್ನೂ ಇದಕ್ಕೆ ಬಳಸಿಕೊಳ್ಳಲು ಕಾರ್ಯತಂತ್ರ ರೂಪಿಸಿತ್ತು.

ಸಾಮಾನ್ಯವಾಗಿ ಪಶ್ವಿಮ ಬಂಗಾಳದಲ್ಲಿ ನಡೆಯುವ ಎಲ್ಲ ಚುನಾವಣೆಗಳೂ ಅವುಗಳ ಫಲಿತಾಂಶಗಳೂ ವಿಶಿಷ್ಟ ಕಾರಣಗಳಿಗೆ ಮುಖ್ಯವೆನಿಸುತ್ತವೆ; ಈ ಚುನಾವಣೆ ಮತ್ತು ಅದರ ಫಲಿತಾಂಶ ಹೊರಹೊಮ್ಮಿಸಿದ ಸಂದೇಶಗಳಂತೂ ರಾಜಕಾರಣಕ್ಕೆ ಇನ್ನಿಲ್ಲದಂತೆ ಮುಖ್ಯವೆನಿಸಿ ಹೊಸ ವ್ಯಾಖ್ಯಾನಗಳಿಗೆ ಅವಕಾಶ ಒದಗಿಸಿವೆ. ಮೊದಲನೆಯದಾಗಿ, ಈ ಚುನಾವಣೆ ಎಂಥ ಹಿಂಸಾತ್ಮಕ ಮತಸಮರವನ್ನೂ ಎದುರಿಸಬಲ್ಲ ಮಹಿಳಾಶಕ್ತಿಯ ರಾಜಕೀಯ ಆಯಾಮವನ್ನು ತೆರೆದಿಟ್ಟಿದೆ. ಎರಡನೆಯದಾಗಿ, ಬಿಜೆಪಿ ಏನೇ ಹೇಳಿಕೊಂಡರೂ ಏಕಪಕ್ಷದ ರಾಜಕಾರಣವನ್ನು ಜನ ಒಪ್ಪುವುದಿಲ್ಲ, ಪ್ರಾದೇಶಿಕ ಪಕ್ಷಗಳು ಇಂದಿಗೂ ಪ್ರಭಾವ ಉಳಿಸಿಕೊಂಡಿವೆ ಎನ್ನುವ ಮಹತ್ವದ ಅಂಶ ಮತ್ತೆ ಪಶ್ಚಿಮ ಬಂಗಾಳ ಮತ್ತು ಇನ್ನೆರಡು ರಾಜ್ಯಗಳಲ್ಲಿ ಸಾಬೀತಾಗಿದೆ. ಮೂರನೆಯದಾಗಿ, ಬಂಗಾಳಿ ಸಂಸ್ಕøತಿ, ಉಪರಾಷ್ಟ್ರೀಯತೆ ಇವುಗಳು ಹಿಂದಿ ಮತ್ತು ಏಕರೂಪಿ ಹಿಂದುತ್ವವನ್ನು ಪ್ರಶ್ನಿಸಲು ಇನ್ನೂ ಶಕ್ತವಾಗಿವೆ. ಇತ್ತ ದಕ್ಷಿಣದಲ್ಲಿ ದ್ರಾವಿಡ ಸಂಸ್ಕøತಿಯ ಪ್ರೇಮ ಎಂದಿನಂತೆ ಹಿಂದಿ ಮತ್ತು ಹಿಂದುತ್ವವನ್ನು ತಿರಸ್ಕರಿಸಿ ತನ್ನ ಜೀವಂತಿಕೆಯನ್ನು ಸಾಬೀತು ಮಾಡಿದೆ. ನಾಲ್ಕನೆಯದಾಗಿ, ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಕಳೆಯೂ ಇಲ್ಲ ರಾಜಕಾರಣ ಮಾಡುವ ಕಲೆಯೂ ಇಲ್ಲ ಎನ್ನುವುದು ಇನ್ನೊಮ್ಮೆ ಸ್ಪಷ್ಟವಾಗಿ, ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗಕ್ಕೆ ಮರುಜೀವ ಕೊಡುವ ಪಕ್ಷಗಳು ಮಮತಾ ಬ್ಯಾನರ್ಜಿಯ ಮುಂದಾಳತ್ವಕ್ಕೆ ಆಸೆಗಣ್ಣಿನಿಂದ ನೋಡುತ್ತಿವೆ. ಇವೆಲ್ಲವೂ 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಸಿದ್ಧತೆಗಳ ವ್ಯಾಕರಣವನ್ನು ಖಂಡಿತ ಬದಲಾಯಿಸಲಿವೆ.

ಅಸ್ತ್ರ – ಪ್ರತ್ಯಸ್ತ್ರ

ಪಶ್ಚಿಮ ಬಂಗಾಳದ ವಿಧಾನಸಭೆಗೆ ಎಂಟು ಹಂತಗಳಲ್ಲಿ ನಡೆದ ಚುನಾವಣೆ ಸಮಕಾಲೀನ ರಾಜಕಾರಣಕ್ಕೆ ಹಿಡಿದ ಕನ್ನಡಿಯಂತಿತ್ತು ಎಂದರೆ ತಪ್ಪೇನೂ ಇಲ್ಲ; ಚುನಾವಣೆಯಲ್ಲಿ ಏನೇನು ಇರಬಾರದೋ ಅವೆಲ್ಲವೂ ಅಲ್ಲಿ ಹೇರಳವಾಗಿ ಇತ್ತು! ಈ ಚುನಾವಣೆ ನಕಾರಾತ್ಮಕ ವಿಚಾರಗಳಿಂದಲೇ ತುಂಬಿ ಹೋಗಿತ್ತು. ದೆಹಲಿ ದರ್ಬಾರು, ಕೇಂದ್ರ ಸರ್ಕಾರದ ಅತಿ ಉಸ್ತುವಾರಿ, ಪ್ರಧಾನ ಮಂತ್ರಿ, ಗೃಹ ಸಚಿವ ಮತ್ತು ಇನ್ನಿತರ ಸಚಿವರ ವಿಪರೀತ ಆಸಕ್ತಿ, ಲೆಕ್ಕವಿಲ್ಲದೆ ಹರಿದ ಹಣಕಾಸಿನ ಹೊಳೆ, ಚುನಾವಣಾ ಆಯೋಗದ ಬಗ್ಗೆಯೇ ಮೂಡಿದ ಅನುಮಾನ, ಕೇಂದ್ರ ರಕ್ಷಣಾ ಪಡೆಗಳ ಹೆಚ್ಚಿನ ನಿಯೋಜನೆ, ಭಾರತೀಯ ಜನತಾ ಪಕ್ಷದ ಗೆಲುವಿನ ಹಪಾಹಪಿ, ಅದಕ್ಕಾಗಿ ಎದುರಾಳಿ ಪಕ್ಷದ ಹೆಚ್ಚಿನ ಪ್ರಮುಖರನ್ನು ಸೆಳೆಯುವ ತಂತ್ರ, ಚುನಾವಣಾ ಪ್ರಚಾರದಲ್ಲಿ ಎಂದಿನಂತೆ ಎಲುಬಿಲ್ಲದ ನಾಲಗೆಯ ಹೂಂಕಾರ, ಎಂದಿನಂತೆ ಜಾತಿ ಧರ್ಮಗಳ ಹೀನ ಬಳಕೆ, ಮಹಿಳೆಯರ ಮೇಲೆ ಕೀಳುಮಟ್ಟದ ಮಾತಿನ ಪ್ರಹಾರ- ಹೀಗೆ ಅನಪೇಕ್ಷಿತವಾದ ಎಲ್ಲವೂ ಅಲ್ಲಿ ತುಂಬಿ ತುಳುಕುತ್ತಿತ್ತು.

ನಮ್ಮ ಸಂಸ್ಕøತಿಯಲ್ಲಿ ಬೇರುಬಿಟ್ಟಿರುವ ಪುರುಷ ಪ್ರಾಧಾನ್ಯ ಚುನಾವಣೆಯಿಂದ ಚುನಾವಣೆಗೆ ಅಸಹ್ಯಕರವಾಗಿ ಪ್ರದರ್ಶಿತಗೊಂಡು ಈ ಬಾರಿಯಂತೂ ಘನತೆ ಗಾಂಭೀರ್ಯಗಳು ಪಾತಾಳ ಸೇರಿದವು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ “ದೀದೀ… ಓ… ದೀದೀ” ಎಂದು ಈ ಲೇಡಿಯನ್ನು ಲೇವಡಿ ಮಾಡಿದರು. “ಬ್ಯಾಂಡೇಜ್ ಹಾಕಿರುವ ಮುರಿದ ಕಾಲು ತೋರಿಸಲು ಮಮತಾ ಬ್ಯಾನರ್ಜಿ `ಬರ್ಮುಡ’ ಚಡ್ಡಿ ಹಾಕಿಕೊಳ್ಳಲಿ” ಎಂದು ಚಡ್ಡಿಯೊಬ್ಬ ಪ್ರಹಾರ ಮಾಡಿದ್ದೂ ಆಯಿತು.

ಆದರೆ ಇವೆಲ್ಲವನ್ನೂ ಅವೇ ಅಸ್ತ್ರ- ಪ್ರತ್ಯಸ್ತ್ರಗಳಿಂದ ಎದುರಿಸಿದ ಮಮತಾ ಅವರ ಮಲ್ಟಿ ಟಾಸ್ಕಿಂಗ್ ಪ್ರಾವೀಣ್ಯ ಬಹಳ ಗಮನಾರ್ಹ. ಎದುರಾಳಿ ಪಕ್ಷದವರು ಎಸೆದ ಬಾಣಗಳಲ್ಲಿ ಕೆಲವು ಇವರ ಕೈಗೆ ಬಂದೊಡನೆ ರಾಜಕೀಯ ಅಸ್ತ್ರಗಳಾದವು; ಇನ್ನು ಹಿಂಸೆಯನ್ನೂ ಪ್ರತ್ಯಸ್ತ್ರವಾಗಿ ಬಳಸಲು ಅವರು ಹಿಂಜರಿದಿಲ್ಲ ಎನ್ನುವುದೂ ಸೇರಿ ಹಲವು ಟೀಕೆಗಳಿಗೆ ಅವರು ಅರ್ಹರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳಲ್ಲಿ ಇದ್ದ, ಕೇಂದ್ರ ಸಚಿವ ಸ್ಥಾನಗಳಲ್ಲೂ ಇದ್ದ ಮಮತಾ ಬ್ಯಾನರ್ಜಿ ಅವರ ರಾಜಕೀಯ ಬದುಕು ವಿವಾದಾತೀತ ಎಂದೇನೂ ಹೇಳಲಾಗುವುದಿಲ್ಲ. 1998 ರಲ್ಲಿ ಲೋಕಸಭೆಯಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರತಿಭಟಿಸಲು ಸಂಸತ್ತಿನ ಬಾವಿಗಿಳಿದ ಸಮಾಜವಾದಿ ಪಕ್ಷದ ಸಂಸದ ದೋಗ್ರ ಪ್ರಸಾದ್ ಸರೋಜ್ ಅವರ ಷರಟಿನ ಕಾಲರ್ ಹಿಡಿದು ಮಮತಾ ಹೊರಗೆಳೆದು ಹಾಕಿದ್ದು ಅವರ ಒರಟು ವರ್ತನೆಗೆ ಒಂದು ಸಣ್ಣ ಉದಾಹರಣೆಯಷ್ಟೆ. ಧಾರ್ಮಿಕ ಮತ್ತು ಸಾಂಸ್ಕøತಿಕ ಅಸ್ಮಿತೆಗಳನ್ನು ಕೂಡ ಸುಲಭವಾಗಿ ರಾಜಕೀಯ ಲಾಭಗಳಿಗೆ ಬಳಸಬಲ್ಲ ಅವರಿಗೆ ನಿಖರವಾದ ರಾಜಕೀಯ ಸಿದ್ಧಾಂತವೇ ಇಲ್ಲ. ಚುನಾವಣೆಯಲ್ಲಿ ಎಡ ಸಿದ್ಧಾಂತದ ರಾಜಕೀಯ ಪಕ್ಷವನ್ನೂ ಸೋಲಿಸಿದ, ಬಲ ಸಿದ್ಧಾಂತದ ರಾಜಕೀಯ ಪಕ್ಷವನ್ನೂ ಸೋಲಿಸಿದ ಏಕೈಕ ರಾಜಕಾರಣಿ ಅವರೊಬ್ಬರೇ ಇರಬೇಕು!

ರಾಜಕೀಯವಾಗಿ ಹಿಡಿತ ಸಾಧಿಸಲು ಮಮತಾ ಬಳಸಿಕೊಂಡ ನಂದಿಗ್ರಾಮವೇ ಅವರನ್ನು ಚುನಾವಣೆಯಲ್ಲಿ ಹೊರದೂಡಿದ್ದು ಮಾತ್ರ ದೊಡ್ಡ ವಿಪರ್ಯಾಸವೇ ಸರಿ. ಇನ್ನು `ಕಟ್ ಮನಿ’ ಆರೋಪ, ಭ್ರಷ್ಟಾಚಾರ, ರಾಜಕೀಯ ಹಿಂಸಾಚಾರ, ಕಾನೂನಿಗೆ ಅವಮಾನ ಮುಂತಾದ ವಿವಾದಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಳಿ ಸರಿಯಾದ ಉತ್ತರಗಳಿಲ್ಲ. ಎರಡು ವರ್ಷಗಳಿಂದ ಬಂಗಾಳದ ಭೂಮಿಯಲ್ಲಿ ತನ್ನ ತತ್ವಗಳನ್ನು ಬಿತ್ತುತ್ತಿದ್ದ ಬಿಜೆಪಿ ಮತ್ತು ಅದರ ವೈಚಾರಿಕ ಸಂಘಟನೆಗಳ ಪ್ರಯತ್ನ ಅದರ ಶಾಸಕರ ಸಂಖ್ಯೆಯನ್ನು ಮೂರರಿಂದ ಎಂಬತ್ತಕ್ಕೆ ಏರಿಸಿದೆ ಎನ್ನುವುದನ್ನು ಕಡೆಗಣಿಸುವಂತೆಯೇ ಇಲ್ಲ. ಆದ್ದರಿಂದ ಹಿಂದಿನ ಎರಡು ಅಧಿಕಾರಾವಧಿಗಳ ಹತ್ತು ವರ್ಷಗಳ ಆಡಳಿತಕ್ಕಿಂತ ಹೆಚ್ಚಿನ ಮತ್ತು ವೈವಿಧ್ಯಮಯ ಸವಾಲುಗಳನ್ನು ಮಮತಾ ಬ್ಯಾನರ್ಜಿ ಎದುರಿಸಲೇಬೇಕು. ಇಷ್ಟೆಲ್ಲ ಇದ್ದರೂ ಯಾರೇನು ಹೇಳಿದರೂ ಪ್ರಸಕ್ತ ಭಾರತದ ಏಕೈಕ ಮಹಿಳಾ ಮುಖ್ಯಮಂತ್ರಿ ಆಗಿ ಮುಂದುವರೆಯುವ ಅವರು ರಾಜಕೀಯದಲ್ಲಿ ಮಹಿಳೆಯರಿಗೆ ಪ್ರೇರಣೆ ಮತ್ತು ದಿಟ್ಟ ಮಾದರಿ ಎನ್ನುವುದಂತೂ ಸುಳ್ಳಲ್ಲ.

-ಆರ್. ಪೂರ್ಣಿಮಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ದೇಶಕಾಲ/ ದೆಹಲಿ ದಾದಾಗಳ ಧಿಮಾಕು ಇಳಿಸಿದ ದೀದಿ – ಆರ್. ಪೂರ್ಣಿಮಾ

  • May 6, 2021 at 2:49 pm
    Permalink

    ಪೂರ್ಣಿಮಾ ಅವರ‌ ಲೇಖನ ಬಹಳ ಚೆನ್ನಾಗಿದೆ. ಧನ್ಯವಾದಗಳು

    Reply

Leave a Reply

Your email address will not be published. Required fields are marked *