ದೇಶಕಾಲ/ ಚುನಾವಣಾ ಕ್ಷಣ ಮತ್ತು ಕಣದಲ್ಲಿ ಒಂದೆರಡು ಕಿರಣ

ಚುನಾವಣಾ ವ್ಯವಸ್ಥೆಯಲ್ಲಿ, ಆ ಮೂಲಕ ರಾಜಕೀಯ ರಂಗದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಬೇಕು ಎನ್ನುವುದು ಕಾಲು ಶತಮಾನದಿಂದ ಕೇಳಿಬರುತ್ತಿರುವ ಹಕ್ಕೊತ್ತಾಯ. ಮಹಿಳಾ ಮೀಸಲಾತಿ ಮಸೂದೆ ಮಸಣ ಸೇರಿರುವ ಈ ಹೊತ್ತಿನಲ್ಲಿ, ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಅವಕಾಶ ಕೊಡುವುದಾಗಿ ನವೀನ್ ಪಟ್ನಾಯಕ್ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ಮಾಡಿರುವ ಘೋಷಣೆಗಳು ಕಗ್ಗತ್ತಲಲ್ಲಿ ಮೂಡಿದ ಕಿರಣಗಳಂತೆ ಕಾಣುತ್ತಿವೆ.

ರಾಜಕೀಯ, ಆರ್ಥಿಕ ಮತ್ತು ಸಾರ್ವಜನಿಕ ರಂಗಗಳಲ್ಲಿ ಮಹಿಳೆಯರಿಗೂ ಸಂಪೂರ್ಣ ಮತ್ತು ಪರಿಣಾಮಕಾರಿ ಅವಕಾಶ ಕೊಡಬೇಕು, ನೀತಿನಿರ್ಧಾರಗಳನ್ನು ಕೈಗೊಳ್ಳುವ ಎಲ್ಲ ಆಯಾಮಗಳ ನಾಯಕತ್ವದಲ್ಲೂ ಸಮಾನ ಅವಕಾಶಗಳನ್ನು ಕೊಡಬೇಕು ಎಂದು ವಿಶ್ವಸಂಸ್ಥೆ ಒತ್ತಾಯಿಸುತ್ತಿದೆ. ಜಗತ್ತಿನ ಹಲವು ದೇಶಗಳು ಅದಕ್ಕೆ ಗಮನ ಹರಿಸುತ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ನಮ್ಮ ದೇಶದಲ್ಲೂ ಈ ಕುರಿತ ಮಾತು ಮತ್ತು ಮಸೂದೆ ಸಾಕಷ್ಟು ಹಳೆಯವು. ಆದರೆ, ಬಹುಮತ ಇದ್ದರೊಂದು ನೆಪ, ಬಹುಮತ ಇಲ್ಲದಿದ್ದರೊಂದು ನೆಪ – ಒಟ್ಟಿನಲ್ಲಿ ರಾಜಕೀಯದಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಪ್ರಾತಿನಿಧ್ಯ ನೀಡುವ ಉದ್ದೇಶದ ಮಸೂದೆಯನ್ನು ಮುನ್ನೆಲೆಗೆ ತರದೆ ಮರೆಮಾಚಲು ಅಧಿಕಾರ ಹಿಡಿಯುವ ಎಲ್ಲ ರಾಜಕೀಯ ಪಕ್ಷಗಳೂ ಕಸರತ್ತು ನಡೆಸಿವೆ. ಇದು ಎರಡು ದಶಕಗಳ ವ್ಯಥೆಯ ಕಥೆ. ಆದರೆ ಪ್ರಣಾಳಿಕೆ ಮತ್ತು ಪ್ರಚಾರ ಭಾಷಣಗಳಲ್ಲಿ ಈ ಕುರಿತು ಹುಸಿಕಾಳಜಿ ತೋರಲು ಎಲ್ಲರಿಗೂ ಇನ್ನಿಲ್ಲದ ಉತ್ಸಾಹ. ಅಂತೂ ಇಂತೂ ಕುಂತಿ ಮಕ್ಕಳಿಗೆ (ಅಥವಾ ಹೆಣ್ಣುಮಕ್ಕಳಿಗೆ) ರಾಜ್ಯವಿಲ್ಲ (ಅಥವಾ ರಾಜಕೀಯ ಅಧಿಕಾರವಿಲ್ಲ)!

ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಒಳಗೊಳ್ಳುವ ಬಗ್ಗೆ ರಾಜಕೀಯ ಪಕ್ಷಗಳಿಗೆ ಎಷ್ಟು ಗಂಭೀರ ಚಿಂತನೆ ಇದೆ, ಅಸಮಾನತೆಯನ್ನು ಕಡಿಮೆಮಾಡಲು ಎಷ್ಟು ಬದ್ಧತೆ ಇದೆ ಎನ್ನುವುದಕ್ಕೆಲ್ಲ ಚುನಾವಣೆಯ ಸಂದರ್ಭವೂ ಒಂದು ದೊಡ್ಡ ಪರೀಕ್ಷೆ. ಈ ಪರೀಕ್ಷೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ವಿಫಲವಾಗಿರುವುದೇ ಹೆಚ್ಚು. ಇಂಥ ಸನ್ನಿವೇಶದಲ್ಲಿ, ರಾಜಕೀಯದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಮೀಸಲಾತಿ ಮಸೂದೆಯ ಹಂಗಿಲ್ಲದೆ, ಮೊದಲ ಹಂತದಲ್ಲೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆರಿಸುವಾಗಿ ಮಹಿಳೆಯರಿಗೆ ಶೇ. 33 ಪ್ರಾತಿನಿಧ್ಯ ನೀಡುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಾರ್ವಜನಿಕ ಸಭೆಯಲ್ಲಿ ಘೋಷಿಸಿರುವುದು ಪ್ರತಿಕ್ರಿಯೆಗಳ ತರಂಗವನ್ನೇ ಹುಟ್ಟಿಸಿದೆ.

ತಮ್ಮ ತಂದೆ ಬಿಜು ಪಟ್ನಾಯಕ್ ಅವರ ಕ್ಷೇತ್ರವಾಗಿದ್ದ ಕೇಂದ್ರಪಾರದಲ್ಲಿ ನಡೆದ ಲಕ್ಷಾಂತರ ಮಹಿಳೆಯರು ಭಾಗವಹಿಸಿದ್ದ ಸಭೆಯಲ್ಲಿ ಬಿಜು ಜನತಾ ದಳದಿಂದ (ಬಿಜೆಡಿ) ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಪ್ರತೀ ಮೂರನೇ ಅಭ್ಯರ್ಥಿ ಮಹಿಳೆಯಾಗಿರುತ್ತಾಳೆ ಎಂದು ಘೋಷಿಸಿರುವುದು ಸಮಕಾಲೀನ ರಾಜಕಾರಣದ ಹೊಸ ತಿರುವು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. 2014 ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಒದಿಶಾದಲ್ಲಿರುವ 21 ರಲ್ಲಿ 20 ಸ್ಥಾನಗಳನ್ನು ಬಿಜೆಡಿ ಗೆದ್ದುಕೊಂಡಿತ್ತು. ಅವರಲ್ಲಿ ಇಬ್ಬರು ಮಹಿಳೆಯರಿದ್ದರು. ಈಗ ಏಳು ಮಂದಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆಗೆ ಅವಕಾಶ ಪಡೆಯಲಿದ್ದಾರೆ. ಹಿಂದೆ ಬಿಜು ಪಟ್ನಾಯಕ್ ಅವರು ಮುಖ್ಯಮಂತ್ರಿಯಾಗಿದ್ದಾಗ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿಯನ್ನು ಜಾರಿಗೆ ತಂದಿದ್ದರು. ನಂತರ 2012 ರಲ್ಲಿ ಇದು ಶೇ. 50 ಕ್ಕೆ ಹೆಚ್ಚಿತು. ಈಗ ನವೀನ್ ಅವರು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮವನ್ನು “ದೇಶದ ರಾಜಕೀಯ ಪಕ್ಷಗಳ ಪಾಲಿಗೆ ಇದೊಂದು ಚಾರಿತ್ರಿಕ ನಿರ್ಧಾರ” ಎಂದು ಪ್ರಶಂಸೆ ಮಾಡಲಾಗಿದೆ.

ನವೀನ್ ಪಟ್ನಾಯಕ್ ಅವರನ್ನು ಮೀರಿಸುವಂತೆ ಪ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೇ. 40 ರಷ್ಟನ್ನು ಮಹಿಳೆಯರಿಗೆ ಕೊಟ್ಟಿದ್ದಾರೆ. ರಾಜ್ಯದ 42 ಲೋಕಸಭಾ ಸ್ಥಾನಗಳ ಪೈಕಿ 17 ಕಡೆ ಮಹಿಳೆಯರೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಂದ ಸ್ಪರ್ಧಿಸಲಿದ್ದಾರೆ. ಹಾಗೆ ನೋಡಿದರೆ 2014 ರ ಚುನಾವಣೆಯಲ್ಲೇ ಟಿಎಂಸಿ ಶೇ. 35 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕೊಟ್ಟಿತ್ತು. ಆಗ ಹನ್ನೆರಡು ಮಹಿಳಾ ಅಭ್ಯರ್ಥಿಗಳ ಪೈಕಿ ಹನ್ನೊಂದು ಮಂದಿ ಗೆದ್ದಿದ್ದರು. ಮತ್ತೆ ಎರಡು ಉಪಚುನಾವಣೆಗಳಿಗೂ ಮಹಿಳಾ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗಿತ್ತು. “ಬೇರೆ ಪಕ್ಷಗಳು ಇದರ ಬಗ್ಗೆ ಮಾತನಾಡುತ್ತಾ ಇರಲಿ, ತೃಣಮೂಲ ಅದನ್ನು ಜಾರಿಗೆ ತಂದಿದೆ” ಎಂದು ಕೂಗಿ ಹೇಳಿದ ಮಮತಾ, ಈಗ ಶೇ. 34 ಪಾಲನ್ನು ಶೇ. 41 ಕ್ಕೆ ಏರಿಸಿ “ಇದು ನಮಗೆ ಹೆಮ್ಮೆಯ ಗಳಿಗೆ” ಎಂದಿದ್ದಾರೆ.

ಮಸೂದೆಗೆ ಉಸಿರಿಲ್ಲದೇ ಇರುವ ಈ ಸನ್ನಿವೇಶದಲ್ಲಿ ರಾಜಕೀಯ ಪಕ್ಷಗಳ ಈ “ಒಳಗೊಳ್ಳುವ ದೃಢ ನಿರ್ಧಾರ”ಗಳಿಗೆ ಅದೆಷ್ಟು ಮಹತ್ವವಿದೆ ಎಂದು ಹೇಳಬೇಕಿಲ್ಲ. ಹಾಗೆ ನೋಡಿದರೆ ಜಗತ್ತಿನ ಅನೇಕ ದೇಶಗಳಲ್ಲಿ ರಾಜಕೀಯ ಪಕ್ಷಗಳ ಇಂಥ “ಅಫರ್ಮೇಟಿವ್ ಆಕ್ಷನ್” ಗಳೇ ಮಹಿಳೆಯರನ್ನು ರಾಜಕೀಯ ರಂಗದಲ್ಲಿ ಮುನ್ನೆಲೆಗೆ ತಂದಿವೆ ಎನ್ನುವುದು ಗಮನಾರ್ಹ. ನವೀನ್ ಪಟ್ನಾಯಕ್ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ಆಯಾ ಪ್ರಾದೇಶಿಕ ಪಕ್ಷಗಳಲ್ಲಿ ನಿರ್ಣಾಯಕ ಶಕ್ತಿಗಳೂ ರಾಜ್ಯದ ಮುಖ್ಯಮಂತ್ರಿಗಳೂ ಆಗಿರುವುದರಿಂದ ಹೆಚ್ಚು ವಿರೋಧವಿಲ್ಲದೆ ನಿರ್ಧಾರಗಳನ್ನು ಕೈಗೊಂಡರು ಎನ್ನುವುದು ನಿಜ. ಆದರೂ ಮಹಿಳೆಯರಿಗೆ ಹೆಚ್ಚು ಅವಕಾಶ ಕೊಡುವ ಇವರಿಬ್ಬರ ಘೋಷಣೆಗಳು ರಾಷ್ಟ್ರೀಯ ಪಕ್ಷಗಳ ಮೇಲೆ ಪರೋಕ್ಷ ಒತ್ತಡ ಹೇರಿರುವುದಂತೂ ಖಂಡಿತ. ಈಗ ನವೀನ್ ಅವರ ಘೋಷಣೆ ಲೋಕಸಭೆ ಚುನಾವಣೆಗೆ ಮಾತ್ರವೋ ಅಥವಾ ಅದೇ ಕಾಲದಲ್ಲಿ ನಡೆಯುತ್ತಿರುವ ಬಿಹಾರ ವಿಧಾನಸಭೆ ಚುನಾವಣೆಗೂ ಅನ್ವಯಿಸುತ್ತದೋ ಎಂಬ ಪ್ರಶ್ನೆಗಳು, ಟೀಕೆಗಳು ಕೂಡ ಎದ್ದಿವೆ.

ಏನಾದರಾಗಲಿ, ನವೀನ್ ಪಟ್ನಾಯಕ್ ಮತ್ತು ಮಮತಾ ಬ್ಯಾನರ್ಜಿ ಅವರ ಮಹಿಳಾಪರ ಘೋಷಣೆ, ಬಹು ಅಪೇಕ್ಷಣೀಯವಾದ ರಾಜಕೀಯ ಸಮಾನತೆಯ ದಾರಿಯಲ್ಲಿ ಇಟ್ಟ ಒಂದು ಪ್ರಮುಖ ಹೆಜ್ಜೆ ಎಂದೇ ಅರ್ಥೈಸಬೇಕು. ಮಹಿಳೆಗೆ ರಾಜಕೀಯ ಪ್ರಾತಿನಿಧ್ಯ ಕೊಡಲು ಮಸೂದೆ, ಕಾನೂನುಗಳಿಗೇ ಕಾಯಬೇಕಿಲ್ಲ, ಸಮಾನತೆಯ ಸಂವೇದನೆ ಇದ್ದರೂ ಮಾಡಬಹುದು ಎಂಬುದನ್ನೂ ಇದು ತೋರಿಸುತ್ತದೆ. ಮಹಿಳೆಯರಿಗೆ “ಗೆಲ್ಲುವ ಶಕ್ತಿ” ಇದೆಯೇ ಎಂಬ ಅನುಮಾನವನ್ನು ಮುಂದಿಟ್ಟು ಅವರಿಗೆ ಅವಕಾಶ ನಿರಾಕರಿಸುವ ಹುನ್ನಾರವನ್ನು ಬದಿಗಿಟ್ಟ ಅತ್ಯಂತ ಧೈರ್ಯದ ನಿರ್ಧಾರ ಇದಾಗಿದೆ. ಚುನಾವಣೆಯ ಮುನ್ನ ಗ್ಯಾಸ್‍ಒಲೆ, ಮಿಕ್ಸರ್, ಸೀರೆ ಮುಂತಾದ ಬಾಗಿನಗಳನ್ನು ಮಹಿಳೆಯರ ಮಡಿಲಿಗೆ ತುಂಬುವುದರ ಬದಲು, ರಾಜಕೀಯ ವ್ಯವಸ್ಥೆಯಲ್ಲಿ ಮತ್ತು ಆಡಳಿತ ಸರ್ಕಾರಗಳಲ್ಲಿ ಅವರಿಗೆ ಅವಕಾಶ ಕೊಡುವುದೇ ಹೆಚ್ಚಿನ ಉಡುಗೊರೆ-ಬೆಂಬಲ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆ ನೋಡಿದರೆ 2014 ರ ಚುನಾವಣೆಯಲ್ಲಿ ಪುರುಷರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರೇ ಮತಗಟ್ಟೆಗೆ ಬಂದಿದ್ದರು. ಈಗ ಚುನಾವಣೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಸಂಖ್ಯೆ ಅಷ್ಟಿಷ್ಟಾದರೂ ಹೆಚ್ಚುವುದು ಸ್ವಾಗತಾರ್ಹ.

– ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *