Latestದೇಶಕಾಲ

ಕೇರಳದ ಪ್ರವಾಹವೂ ದೇವಾಲಯ ಪ್ರವೇಶವೂ – ಆರ್. ಪೂರ್ಣಿಮಾ

“ಅನಿಷ್ಟಕ್ಕೆಲ್ಲಾ ಶನೀಶ್ವರನೇ ಗುರಿ” ಎಂಬ ಹಳೆಯ ಕಾಲದ ಒಂದು ಗಾದೆಮಾತನ್ನು ಎಲ್ಲರೂ ಕೇಳಿದ್ದೇವೆ. ಈಗ ಹೊಸ ಕಾಲದಲ್ಲಿ ಇನ್ನೊಂದು ತಗಾದೆಮಾತು ಹೆಚ್ಚಾಗಿ ಕೇಳಿಬರುತ್ತಿದೆ: “ಅನಿಷ್ಟಕ್ಕೆಲ್ಲಾ ಅವಳೇ ಗುರಿ”!

ಜಗತ್ತಿನಲ್ಲಿ ಏನಾದರೂ ಆಪತ್ತು ವಿಪತ್ತು ಸಂಭವಿಸಲಿ ಅದಕ್ಕೆ ಅವಳು ಸಂಪ್ರದಾಯ ಬಿಟ್ಟದ್ದೇ ಕಾರಣ, ನಿಸರ್ಗದಲ್ಲಿ ಏನಾದರೂ ಏರುಪೇರು ಆಗಲಿ ಅದಕ್ಕೆ ಅವಳು ಮುಟ್ಟುಚಟ್ಟು ಬಿಟ್ಟದ್ದೇ ಕಾರಣ, ಸಮಾಜದಲ್ಲಿ ಏನಾದರೂ ಆಗಬಾರದ್ದು ಆಗಲಿ ಅದಕ್ಕೆ ಅವಳು ಹೊಸ್ತಿಲು ದಾಟಿದ್ದೇ ಕಾರಣ… ಯಾವುದಕ್ಕೂ ಕಾರಣ ಹುಡುಕಲು ತಲೆ ಉಪಯೋಗಿಸುವ ಕಷ್ಟ ಪಡಬೇಕಿಲ್ಲ- ಎಲ್ಲದಕ್ಕೂ ಹೆಣ್ಣೇ ಕಾರಣ ಎಂದು ಅವಳ ತಲೆಗೆ ಕಟ್ಟಿಬಿಟ್ಟರಾಯಿತು.

ಅಷ್ಟೇಕೆ ಕುಟುಂಬದೊಳಗೆ ಆಗುವ ಕಷ್ಟನಷ್ಟಗಳಿಗೆ ಮನೆಗೆ ಬಂದ ಸೊಸೆಯ ಕಾಲ್ಗುಣವೇ ಕಾರಣ ಎನ್ನುವುದಂತೂ ಹೆಂಗಸರಲ್ಲೂ ಇದೆ. ಇನ್ನು ಯಾರ ಮನೆಯ ಮಗುವಿಗೆ ಜ್ವರ ಬಂದರೂ ಯಾವಳೋ ಹೆಂಗಸಿನ ಕೆಟ್ಟಕಣ್ಣು ಅದರ ಮೇಲೆ ಬಿದ್ದಿದೆ ಎಂಬ ಆರೋಪ. ನೆರೆಹೊರೆಯೊಳಗೆ ಏನಾದರೂ ಅನಿಷ್ಟದ ಬೆಳವಣಿಗೆ ಆದರೆ ಗಂಡಸರು ಯಾವಳೋ ಒಬ್ಬ ಹೆಂಗಸನ್ನು ಹುಡುಕಿ “ಮಾಟಗಾತಿ” ಎಂದು ಕರೆದು ಅವಳನ್ನು ಸಾಯಹೊಡೆದರೆ ಸಾಕು. ಸಂಕಷ್ಟದಿಂದ ಪಾರಾಗುವ ಶ್ರಮ ಬಿಟ್ಟು ಅದರಿಂದ ಪಲಾಯನ ಮಾಡಲು ಮನುಷ್ಯರು ಬಹಳಷ್ಟು ಸುಲಭದ ದಾರಿಗಳನ್ನು ಕಂಡುಕೊಂಡಿದ್ದಾರೆ. ಕಲಿಗಾಲ ಎಂದು ದೂರುವುದರ ಜೊತೆ ಅವಳನ್ನೂ ದೂರಿದರಾಯಿತು. ಹೆಣ್ಣೆಂದರೆ ಹಾಗೇ ಹಗುರ; ಆದರೆ ಅವಳ ಮೇಲೆ ಎಷ್ಟು ಭಾರ ಬೇಕಾದರೂ ಹೊರಿಸಬಹುದು. ಅನಿಷ್ಟಕ್ಕೆಲ್ಲಾ ಪಾಪಿಷ್ಠೆಯೇ ಕಾರಣ ಅನ್ನುವ ಒಂದು ಮಾತು ಹೇಳಿಬಿಟ್ಟರಾಯಿತು.

ಲೋಕದಲ್ಲಿ ಹಾಗೆ ಹೇಳುವ ಗಂಡಸರು (ಮತ್ತು ಹೆಂಗಸರು) ಎಲ್ಲಾ ಕಡೆ ಇರುವುದರಿಂದ ಇಂಥ ದೂಷಣೆಗಳೂ ಎಲ್ಲಾಕಡೆ ಇರುತ್ತವೆ. ಅಮೆರಿಕದ ನ್ಯೂಯಾರ್ಕ್ ನಗರದ ಅವಳಿ ಗೋಪುರಕ್ಕೆ ಉಗ್ರವಾದಿಗಳು ವಿಮಾನ ಡಿಕ್ಕಿ ಹೊಡೆಸಿ ಕೆಡವಿದರು. ಅಮಾಯಕರಾದ ಸಾವಿರಾರು ಜನರು ಸತ್ತರು. ಭಯೋತ್ಪಾದನೆಯ ಅಂಥ ಪ್ರಮಾಣಕ್ಕೆ, ಅಂಥ ದುರಂತಕ್ಕೆ ಜಗತ್ತು ಬೆಚ್ಚಿ ಬಿದ್ದಿತು. ಅಷ್ಟರಲ್ಲಿ ಅಲ್ಲಿನ ಧಾರ್ಮಿಕ ಸನಾತನಿಗಳು ಇದಕ್ಕೊಂದು ವಿಶ್ಲೇಷಣೆ ಕೊಟ್ಟರು. “ಈಗಿನ ಕಾಲದ ದರಿದ್ರ ಹೆಂಗಸರು ಗರ್ಭಪಾತದ ಹಕ್ಕು ಬೇಕು ಅಂತ ಚಳವಳಿ ಮಾಡುತ್ತಿದ್ದಾರಲ್ಲಾ, ಜಗತ್ತು ಕೆಟ್ಟುಹೋಗದೆ ಇನ್ನೇನಾಗುತ್ತದೆ? ಅದಕ್ಕೇ ಇಂಥ ಆಗಬಾರದ್ದೆಲ್ಲ ಆಗುತ್ತಿದೆ” ಅಂತ ಜನರಿಗೆ ಜ್ಞಾನೋದಯ ಮಾಡಿಸಲು ಯತ್ನಿಸಿದರು. ಕೆಟ್ಟ ಕೆಲಸ ಮಾಡಿದವರ ಬಗ್ಗೆ ಮಾತನಾಡುವುದಕ್ಕಿಂತ ಅದಕ್ಕೆ ಸಂಬಂಧವೇ ಇಲ್ಲದವರನ್ನು ದೂರಿ ಸುಮ್ಮನಾದರು.

ಪ್ರಾಕೃತಿಕ ವಿಕೋಪಗಳ ವಿಚಾರದಲ್ಲಂತೂ ಇಂಥ ಮಾತುಗಳು ಸಲೀಸಾಗಿ ಬಂದೇ ಬರುತ್ತವೆ. ಹೆಂಗಸರು ಕೆಟ್ಟುಹೋಗಿರುವುದರಿಂದ ಲೋಕಕ್ಕೆ ಕೆಟ್ಟದಾಗುತ್ತಿದೆ ಅನ್ನುವ ಮಾತಿನಲ್ಲಿ, ಗಂಡಸರು ಏನು ಮಾಡಿದರೂ ಏನೂ ಆಗುವುದಿಲ್ಲ ಅನ್ನುವುದರ ಪ್ರತಿಧ್ವನಿ ಇದ್ದೇ ಇರುತ್ತದೆ. ಇಂದಿನ ದಿನಗಳಲ್ಲಂತೂ ಪ್ರತಿಯೊಂದು ಬೆಳವಣಿಗೆಯನ್ನೂ ತಮಗೆ ಬೇಕಾದ ಧಾರ್ಮಿಕ ಮತ್ತು ರಾಜಕೀಯ ಆಯಾಮಗಳಲ್ಲಿ ನೋಡುವುದು ಸರ್ವೇಸಾಮಾನ್ಯ. ಅವೆಲ್ಲಕ್ಕೂ ಲಿಂಗತ್ವ ಆಧಾರಿತ ದೃಷ್ಟಿಕೋನವೂ ಇರುತ್ತದೆ. ಇತ್ತೀಚಿನ ಕೇರಳ ಪ್ರವಾಹದ ಆಘಾತಕರ ಸಂದರ್ಭ ಅವೆಲ್ಲಕ್ಕೂ ಧಾರಾಳ ಸಾಕ್ಷ್ಯ ಒದಗಿಸಿತು. ಹಿಂದಿನ ಕಾಲದಲ್ಲಿ ಅರಳಿಕಟ್ಟೆ ಕಾಫಿಕಟ್ಟೆ ಮುಂತಾದುವಕ್ಕೆ ಮುಗಿದುಹೋಗುತ್ತಿದ್ದ ಮಾತುಗಳು ಇಂದಿನ ಸಾಮಾಜಿಕ ಮಾಧ್ಯಮದ ಮೂಲಕ ಜಗಜ್ಜಾಹೀರಾದವು.

ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಸರ್ಕಾರ ಸ್ಥಾಪನೆಯಾದ ನಂತರ ಧಾರ್ಮಿಕ ಮೂಲಭೂತವಾದ ಬಲಗೊಳ್ಳುತ್ತಿದ್ದಂತೆಯೇ ಇತರ ಧರ್ಮಗಳಿಗೆ ಸೇರಿದ ಜನರನ್ನು ತಿವಿಯಲು, ಗೋಮಾಂಸ ನಿಷೇಧವೇ ಭಾರತದ ಜೀವನಧರ್ಮ ಎಂಬಂತೆ ಬಿಂಬಿಸುವ ಪ್ರಯತ್ನ ಎಲ್ಲಕಡೆ ನಿಚ್ಚಳವಾಗಿ ನಡೆಯುತ್ತಿದೆ. ಅಂಥವರ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವಂತೆ ಭಾರತ ಗೋಮಾಂಸ ರಫ್ತು ಮಾಡಬಹುದು ಎನ್ನುವುದು ಬೇರೆ ವಿಚಾರ, ದೇಶದೊಳಗೆ ಯಾರೂ ಗೋಮಾಂಸ ಸೇವನೆ ಮಾಡಕೂಡದು ಎನ್ನುವುದು ಬೇರೆ ವಿಚಾರ. ಆದರೆ ಕೇರಳದ ಸರ್ಕಾರ ಗೋಮಾಂಸ ಸೇವನೆ ನಿಷೇಧದ ಅಪ್ಪಣೆಯನ್ನು ಸೈದ್ಧಾಂತಿಕವಾಗಿಯೂ ಆಲಿಸಲು ಸಾಧ್ಯವಿಲ್ಲ, ಮುಸ್ಲಿಮರು, ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಾಮಾಜಿಕವಾಗಿಯೂ ಪಾಲಿಸಲು ಸಾಧ್ಯವಿಲ್ಲ. “ಗೋಮಾಂಸ ತಿನ್ನುವ ಪಾಪಿಗಳಿಗೆ ಸರಿಯಾಗಿ ಬುದ್ಧಿ ಕಲಿಸಿತು” ಎಂದು ಅನೇಕರು ಭೀಕರ ಪ್ರವಾಹವನ್ನು ಹೊಗಳಿ ಕೊಂಡಾಡಿದರು. ಆದರೆ ಪಾಪ, ಪ್ರವಾಹಕ್ಕೆ ಯಾರು ಏನು ತಿನ್ನುತ್ತಾರೆ ಅನ್ನುವುದು ಗೊತ್ತಾಗದೆ ಗೋಮಾಂಸ ತಿನ್ನದವರೂ ಅದರ ಪ್ರಹಾರಕ್ಕೆ ನೊಂದರು.

ಜನರಿಗೆ ಸಂಕಷ್ಟಗಳು ಒದಗಿದಾಗ ಕೈಲಾದ ನೆರವು ನೀಡುವುದು, ಅದಾಗದಿದ್ದರೆ ಅನುಕಂಪವನ್ನಾದರೂ ಸೂಚಿಸುವುದು ನಾಗರಿಕ ಮನೋಧರ್ಮ.  ಆದರೆ ಅಂಥ ಸಂದರ್ಭದಲ್ಲಿ ತಮ್ಮ ಧಾರ್ಮಿಕ ಮನೋವಿಕಾರಗಳನ್ನು ತೋರಿಸಿಕೊಳ್ಳುವುದು ಅಕ್ಷಮ್ಯವಾದ ನಡವಳಿಕೆ. ಇದು ಕೇರಳದ ವಿಚಾರದಲ್ಲಿ ಢಾಳಾಗಿ ಕಾಣಿಸಿತು. ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ವಿವಾದ ಮತ್ತು ನ್ಯಾಯಾಲಯದಲ್ಲಿರುವ ಪ್ರಕರಣ ಈಗ ಕುದಿವ ಸುದ್ದಿಯಾಗಿದೆ. ಗೋಮಾಂಸ ಸೇವನೆಯ ಹಾಗೆ, ಮಹಿಳೆಯರ ದೇವಾಲಯ ಪ್ರವೇಶ ಪ್ರಯತ್ನವೂ ಪ್ರವಾಹಕ್ಕೆ ಕಾರಣ ಎಂದು ಸಲೀಸಾಗಿ ಜರೆಯಲಾಯಿತು.

ಅಯ್ಯಪ್ಪಸ್ವಾಮಿ ಅಯೋನಿಜ ಮತ್ತು ಬ್ರಹ್ಮಚಾರಿ ಆಗಿರುವುದರಿಂದ ಮುಟ್ಟಾಗುವ ಮಹಿಳೆಯರು ಅವನ ದೇವಾಲಯ ಪ್ರವೇಶಿಸಲು ಸಾಧ್ಯವಿಲ್ಲ. ವಿಚಾರ ಎಷ್ಟೇ ಅತಾರ್ಕಿಕವಾಗಿದ್ದರೂ “ಧಾರ್ಮಿಕ ನಂಬಿಕೆ” ಅಂದುಬಿಟ್ಟರೆ ಸಾಕು ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಅದನ್ನು ಒಪ್ಪದೆ ಪ್ರಶ್ನಿಸಿರುವ ಯುವ ವಕೀಲರ ಸಂಘ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದೆ. ಅದಕ್ಕೇ ಕೇರಳದಲ್ಲಿ ಪ್ರವಾಹ ಭೋರ್ಗರೆಯಿತು ಎಂದು ಹೇಳಲು ಇಷ್ಟು ಸಾಕಾಯಿತು. ಅದ್ಯಾವ್ಯಾವ ಕಾರಣಕ್ಕೋ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿ ಎಂಬ ಮೂವರು ದೇವಿಯರಿಗೂ ಮಗುವನ್ನು ಹೊತ್ತುಹೆತ್ತು ಸಂತೋಷ ಪಡುವ ಅವಕಾಶವನ್ನು ನಮ್ಮ ಪುರಾಣಕರ್ತರು ದಯಪಾಲಿಸಿಲ್ಲ. ಸಾಕುಮಕ್ಕಳ ಸಂಗದಲ್ಲೇ ಅವರು ತೃಪ್ತಿ ಪಡಬೇಕಾಯಿತು. ಹೀಗಾಗಿ ತಾಯಿಗೆ ಮುಟ್ಟು ನಿಂತು ಹುಟ್ಟದವನು ಹೆಣ್ಣಿನಿಂದ ದೂರ ಇರುತ್ತಾನೆ ಎಂದು ಪುರೋಹಿತ ವರ್ಗವೇ ತೀರ್ಮಾನಿಸಿತು. ಇದನ್ನು ಪ್ರಶ್ನಿಸಿದ್ದಕ್ಕೇ ಪ್ರಳಯ ಎನ್ನುವ ಟೀಕೆ ಹರಡಿಹರಡುತ್ತ ಆಕ್ರೋಶದ ಮಟ್ಟಕ್ಕೆ ಹೋಯಿತು.

“ಮೊದಲು ವಿಧಾನ ಸಭೆ ಅಧಿವೇಶನ ಕರೆದು `ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಇಲ್ಲ’ ಎನ್ನುವ ನಿರ್ಣಯ ಬೇಗ ಕೈಗೊಳ್ಳಿ. ಪ್ರವಾಹ ತಂತಾನೇ ಇಳಿಯುತ್ತದೆ” ಎಂದು `ಹಿಂದು ಮಕ್ಕಳ್ ಕಚ್ಚಿ’ ಎಂಬ ಗುಂಪು ಕೇರಳ ಸರ್ಕಾರಕ್ಕೆ ಉಪದೇಶ ಕೊಟ್ಟಿತು. ಇಷ್ಟರ ಮೇಲೆ “ಶಬರಿಮಲೆಯ ಈಗಿನ ದುಸ್ಥಿತಿಗೂ ನ್ಯಾಯಾಲಯದ ಪ್ರಕರಣಕ್ಕೂ ಏನಾದರೂ ಸಂಬಂಧ ಇದೆಯೇ ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಷ್ಟಪಡಬಹುದು. ಸೂಜಿಮೊನೆಯಷ್ಟು ಸಂಬಂಧ ಇದ್ದುಬಿಟ್ಟರೂ ಅಯ್ಯಪ್ಪನ ವಿರುದ್ಧ ತೀರ್ಪು ಬರುವುದು ಜನತೆಗೆ ಇಷ್ಟ ಆಗುವುದಿಲ್ಲ” ಎಂಬರ್ಥದ ಮಾತುಗಳಲ್ಲಿ ನ್ಯಾಯಮೂರ್ತಿಗಳಿಗೇ ಪರೋಕ್ಷ ಸಲಹೆ ಮತ್ತು ಎಚ್ಚರಿಕೆ ಕೊಡುವ ಟ್ವೀಟ್ ರಾರಾಜಿಸಿತು. ಆ ಅಸಹ್ಯಕರ ಮಾತು ಹೇಳಿದ್ದು ಅರ್ಥಶಾಸ್ತ್ರಜ್ಞ ಎಂದು ಕರೆಸಿಕೊಳ್ಳುವ ಎಸ್. ಗುರುಮೂರ್ತಿ ಎಂಬ ಅನರ್ಥಶಾಸ್ತ್ರಜ್ಞ.

ಹೆಣ್ಣುಮಕ್ಕಳ ದೇವಾಲಯ ಪ್ರವೇಶದ ವಿವಾದವೇ ಪ್ರವಾಹಕ್ಕೆ ಕಾರಣ ಎನ್ನುವಂತೆಲ್ಲ ಯೋಚಿಸುವ ಈತ, ನರೇಂದ್ರ ಮೋದಿ ಅವರಿಗೆ ಅವರ ಗುಜರಾತ್ ಕಾಲದಿಂದಲೂ ಆರ್ಥಿಕ ವಿಚಾರಗಳಲ್ಲಿ ಸಲಹೆಗಾರ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಇವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. “ಆಹಾ! ಕೇರಳದ ಪ್ರವಾಹಕ್ಕೂ ಮಹಿಳೆಯರ ದೇವಾಲಯ ಪ್ರವೇಶ ವಿವಾದಕ್ಕೂ ಸಂಬಂಧ ಇದೆಯಂತೆ. ಹಾಗಾದರೆ ಈತ ರಿಸರ್ವ್ ಬ್ಯಾಂಕ್‍ಗೆ ನೇಮಕಗೊಂಡದ್ದಕ್ಕೂ ಮರುದಿನವೇ ರೂಪಾಯಿ ಮೌಲ್ಯ ಇನ್ನಷ್ಟು ಕುಸಿದಿದ್ದಕ್ಕೂ ಸಂಬಂಧ ಇರಲೇಬೇಕು. ದೇವರು ಇವನ ನೇಮಕ ಇಷ್ಟಪಡದೆ ರೂಪಾಯಿ ಬೆಲೆ ಇಳಿಸಿರಬೇಕು” ಎಂದೆಲ್ಲ ಜನರು ಸಾಮಾಜಿಕ ಮಾಧ್ಯಮದಲ್ಲೇ ಇವರನ್ನು ಆಡಿಕೊಂಡರು ಎಂದು ನೆನಪಿಸಿಕೊಂಡರೆ ಸಾಕು.

ಧಾರ್ಮಿಕ-ರಾಜಕೀಯ ಮೂಲಭೂತವಾದ ಹೆಚ್ಚುತ್ತಿದ್ದ ಹಾಗೆ ಮಹಿಳೆಯ ಮೂಲಭೂತ ಹಕ್ಕುಗಳನ್ನೂ ಕಸಿದುಕೊಳ್ಳುವ ಪ್ರಯತ್ನ ಎಲ್ಲ ಹಂತಗಳಲ್ಲೂ ಹೆಚ್ಚುತ್ತದೆ ಎನ್ನುವುದು ಆತಂಕವನ್ನೂ ಹೆಚ್ಚಿಸುತ್ತದೆ. ಮೂಲಭೂತವಾದಿ ಚಿಂತನೆಗಳ ಪ್ರವಾಹದಲ್ಲಿ ಮಹಿಳೆಯ ಸಂವಿಧಾನದತ್ತ ಸ್ಥಾನಮಾನ ಕೊಚ್ಚಿಹೋಗುವುದನ್ನು ತಡೆಯಬೇಕು.

ಆರ್. ಪೂರ್ಣಿಮಾ

 

 

 

 

 

 

 

 

 

 

 

 

 

 

 

 

 

 

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *