ದೇಶಕಾಲ/ ಕೃಷಿ ಕಾಯ್ದೆ ವಾಪಸ್- ರೈತ ಮಹಿಳೆಯರ ಆಗ್ರಹ
ಅನ್ನ ನೀಡುವ ರೈತರ ಹಕ್ಕುಗಳನ್ನು ನಿರ್ಬಂಧಿಸುವ ಕರಾಳ ಕೃಷಿ ಕಾಯಿದೆಗಳನ್ನು ವಾಪಸು ಪಡೆಯಬೇಕೆಂದು ಒತ್ತಾಯಿಸಲು ಪರ್ಯಾಯ ಸಂಸತ್ ಅಧಿವೇಶನ ನಡೆಸುತ್ತಿರುವ ರೈತ ಸಂಘಟನೆಗಳು ಆಂದೋಲನದ ಹೊಸ ಮಜಲನ್ನು ಮುಟ್ಟಿವೆ. ಇತ್ತೀಚೆಗೆ ರೈತ ಮಹಿಳೆಯರೇ ಸೇರಿ ನಡೆಸಿದ ಸಂಸತ್ ಅಧಿವೇಶನ ಈ ಆಗ್ರಹಕ್ಕೆ ಗಟ್ಟಿ ದನಿ ಸೇರಿಸಿತು. ಅಲ್ಲದೆ ಕೃಷಿಗೆ ತಮ್ಮ ಕೊಡುಗೆಯನ್ನು ಗುರುತಿಸಿ ಅರ್ಹ ಮಾನ್ಯತೆ ಕೊಡಬೇಕೆಂದು ಒತ್ತಾಯಿಸಿತು. ರಾಜಕೀಯ ಪಕ್ಷಗಳೂ ಸೇರಿ ಎಲ್ಲರೂ ಮರೆತಿರುವ ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸುವ ಕಾಯಿದೆ ಜಾರಿಗೆ ರೈತ ಮಹಿಳೆಯರು ಆಗ್ರಹಿಸಿದರು.
sಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಸತ್ತು ನಡೆಸುತ್ತಿದೆ. ಪ್ರತಿದಿನ ಸುಮಾರು 200 ರೈತರು ಪೊಲೀಸ್ ಭದ್ರತೆಯಲ್ಲಿ ಜಂತರ್ ಮಂತರ್ ಕಡೆಗೆ ಬಂದು ಸೇರುತ್ತಾರೆ. ಜು. 26 ರಂದು ರೈತ ಮಹಿಳೆಯರೇ ಸೇರಿ ಪರ್ಯಾಯ ಸಂಸತ್ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಿದರು. ಮೇಧಾ ಪಾಟ್ಕರ್ ಸೇರಿದಂತೆ ಅನೇಕ ಹಿರಿಯ ಹೋರಾಟಗಾರ್ತಿಯರು, ಸಾಮಾಜಿಕ ಕಾರ್ಯಕರ್ತೆಯರು ಈ ಕಿಸಾನ್ ಸಂಸತ್ತಿನಲ್ಲಿ ಭಾಗವಹಿಸಿದ್ದರು.
ಮೇಧಾ ಪಾಟ್ಕರ್ ಮಾತನಾಡಿ, “ಮಹಿಳೆಯರ ಶಕ್ತಿಗೆ ಸರ್ಕಾರ ಹೆದರುತ್ತಿದೆ. ಈ ಜನ ಸಂಸತ್ತು ಪ್ರಜಾಪ್ರಭುತ್ವದಲ್ಲಿ ಬಹಳ ಮಹತ್ವ ಪಡೆದಿದೆ. ಸರ್ಕಾರದಲ್ಲಿ ಮಹಿಳೆಯರಿಗೆ, ದಲಿತರಿಗೆ ಮಾನ್ಯತೆ ಇಲ್ಲ. ಪ್ರತಿಭಟನೆಯನ್ನು ಮಟ್ಟ ಹಾಕಲಾಗುತ್ತಿದೆ. ಇಂಥ ಹೊತ್ತಿನಲ್ಲಿ ಪರ್ಯಾಯ ಶಕ್ತಿಗಳನ್ನು ಬೆಳೆಸುವ ಅಗತ್ಯವಿದೆ. ರೈತ ಆಂದೋಲನದಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿದೆ” ಎಂದು ಹೇಳಿದರು. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ರೈತ ಹೋರಾಟಗಾರರನ್ನು ಗೂಂಡಾಗಳು ಎಂದು ಕರೆದಿದ್ದಾರೆ, ಹಾಗೆ ಹೇಳಿ ರೈತ ಹೋರಾಟದಲ್ಲಿರುವ ಮಹಿಳೆಯರನ್ನೂ ಅವಮಾನಿಸಿದ್ದಾರೆ ಎಂಬ ಆಕ್ಷೇಪ ಅಂದು ವ್ಯಕ್ತವಾಯಿತು.
ಇದುವರೆಗೂ ಐದು ನೂರಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ, ಆದರೆ ಅವರ ಬಲಿದಾನ ವ್ಯರ್ಥವಾಗದು ಎಂದ ಹೋರಾಟಗಾರ್ತಿಯರು, ರೈತರ ನಿಜವಾದ ಸಂಸತ್ತಿಗೆ ಬಂದು ಕೃಷಿ ಕಾಯ್ದೆಗಳ ಬಗ್ಗೆ ಚರ್ಚಿಸಬೇಕು, ಮೂರೂ ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಕಾರ್ಪೊರೇಟ್ ಕಂಪೆನಿಗಳು ಆಹಾರ ಧಾನ್ಯ ಸಂಗ್ರಹಿಸಲು ಅವಕಾಶ ನೀಡುವ ಈ ಕಾಯ್ದೆಗಳು ಜನರಿಗೆ ತೊಂದರೆ ಮಾಡಲಿವೆ, ಆಹಾರ ಭದ್ರತೆ ಒದಗಿಸುವಲ್ಲಿ ಮಹಿಳೆ ನಿರ್ವಹಿಸುವ ಮಹತ್ವದ ಪಾತ್ರವನ್ನೂ ಉಪೇಕ್ಷಿಸಿದೆ ಎಂಬ ಚರ್ಚೆ ಮಹಿಳೆಯರ ಸಂಸತ್ತಿನಲ್ಲಿ ನಡೆಯಿತು.
ಜುಲೈ 26 ಕ್ಕೆ ರೈತ ಆಂದೋಲನವು ಎಂಟು ತಿಂಗಳನ್ನು ಪೂರೈಸಿತು. ರೈತರ ಒಗ್ಗಟ್ಟು ಮತ್ತು ಘನತೆಯ ಸಂಕೇತವಾದ ಈ ಆಂದೋಲನ ದೆಹಲಿಯ ಗಡಿಗಳಲ್ಲಿ ನಡೆಯುತ್ತಿದ್ದು, ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೂ ಮುಂದುವರೆಯಲಿದೆ. ಮಹಿಳಾ ಸಂಸತ್ತಿನಲ್ಲಿ ಎರಡು ಬಹುಮುಖ್ಯ ನಿರ್ಣಯಗಳನ್ನು ಕೈಗೊಳ್ಳಲಾಯಿತು :
1) ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದ್ದರೂ ಮಹಿಳೆಯರಿಗೆ ಸೂಕ್ತ ಮಾನ್ಯತೆ ಮತ್ತು ಸ್ಥಾನಮಾನ ಸಿಗುತ್ತಿಲ್ಲ, ಇದು ಸಿಗುವಂತಾಗಬೇಕು. 2) ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಪ್ರಾತಿನಿಧ್ಯ ಸಿಗಬೇಕು. ಶಾಸನಸಭೆ ಮತ್ತು ಇನ್ನಿತರ ಸಂಸ್ಥೆಗಳಲ್ಲೂ ಪ್ರಾತಿನಿಧ್ಯ ಸಿಗಬೇಕು. ಭಾಗವಹಿಸಿದ್ದ ಎಲ್ಲ ರೈತ ಮಹಿಳೆಯರೂ ಈ ಎರಡು ಹಕ್ಕೊತ್ತಾಯ ನಿರ್ಣಯಗಳನ್ನು ಅನುಮೋದಿಸಿದರು. (ಮಾಹಿತಿ : `ಅನ್ನದ ಋಣ’ ಅಂತರಜಾಲ ಪತ್ರಿಕೆ)
.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.