ದೇಶಕಾಲ/ ಒಲಿಂಪಿಕ್ಸ್ – ಹುಡುಗಿಯರು ಅವಕಾಶ ಪಡೆಯುವುದೇ ಮೊದಲ ಗೆಲುವು!

ಹಲವಾರು ಹುಡುಗಿಯರು ಅನೇಕ ಸಾಮಾಜಿಕ ನಿರ್ಬಂಧಗಳನ್ನು ದಿಟ್ಟತನದಿಂದ ಎದುರಿಸಿ ಒಲಿಂಪಿಕ್ಸ್ ತಂಡಕ್ಕೆ ಸೇರಲು, ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಕಾಲಿಡಲು ಅವಕಾಶ ಮತ್ತು ಅರ್ಹತೆ ಪಡೆಯುತ್ತಾರೆ ಎನ್ನುವುದೇ ಅವರ ಮೊದಲ ಗೆಲುವು; ಅವರು ಕ್ರೀಡಾ ಪದಕ ಪಡೆಯದಿದ್ದರೂ ಅದಕ್ಕೆ ಸಾಮಾಜಿಕ ಸಾಧನೆಯ ಮೆರುಗು; ಮುಂದೆ ಅವರು ಕಂಚು, ಬೆಳ್ಳಿ ಪದಕ ಪಡೆದರೂ ಅದಕ್ಕೆ ಚಿನ್ನದ ಹೊಳಪು; ಚಿನ್ನದ ಪದಕ ಪಡೆದರಂತೂ ಅದು ನಮ್ಮ ಸಾಮಾಜಿಕ ವ್ಯವಸ್ಥೆಯ ಜೊತೆಗೆ ಗುದ್ದಾಡಿ ಗೆದ್ದ ಯುದ್ಧ!

ಜಗತ್ತನ್ನು ನರಳಿಸುತ್ತಿರುವ ಕೊರೋನಕ್ಕೆ ಸವಾಲು ಹಾಕುವಂತೆ ಜಪಾನ್ ದೇಶದ ಟೋಕಿಯೋ ನಗರದಲ್ಲಿ ನಡೆದ ಒಲಿಂಪಿಕ್ಸ್ 2020 ಮುಗಿಯಿತು. ಹಲವಾರು ಸತ್ಯಗಳು, ಸಂಗತಿಗಳನ್ನು ತೆರೆದಿಟ್ಟ ಈ ಕ್ರೀಡೋತ್ಸವದಲ್ಲಿ, ಭಾರತದ ಪಾಲಿಗೆ ನೂರು ವರ್ಷಗಳಲ್ಲಿ ಆಗದೇ ಇದ್ದುದರಲ್ಲಿ ಸ್ವಲ್ಪವಾದರೂ ಸಿಕ್ಕಿತು. ಆದರೆ ಆಗಬೇಕಾಗಿರುವುದು ಇನ್ನೂ ಎಷ್ಟೊಂದಿದೆ ಎಂಬುದು ಮತ್ತೆ ಅರಿವಾಯಿತು. ಈ ನಡುವೆ ಒಲಿಂಪಿಕ್ಸ್ ನಲ್ಲಿ ನಮ್ಮ ಹುಡುಗಿಯರ ಸಾಧನೆ ಮತ್ತು ಅದಕ್ಕಾಗಿ ಅವರು ಪಟ್ಟ ಶ್ರಮ, ಸಾಮಾಜಿಕ ದೃಷ್ಟಿಯಿಂದಲೂ ಬಹಳ ಮುಖ್ಯ ಎನ್ನುವುದು ಮತ್ತೆ ಮನನವಾಯಿತು. ಹಾಗಾಗಿ ಹುಡುಗಿಯರು ಪಡೆದ ಕಂಚಿನ ಪದಕಕ್ಕೂ ಚಿನ್ನದ ಹೊಳಪು ಬಂದಿತು!

ಕ್ರೀಡೆಗೆ ಬೇಕಾದ ಶ್ರಮ, ತರಬೇತಿ, ಪರಿಶ್ರಮ, ಛಲ ಇವೆಲ್ಲ ಹುಡುಗ ಹುಡುಗಿಯರಿಗೆ ಒಂದೇ ಆಗಿದ್ದರೂ ಭಾರತದಲ್ಲಿ ಕ್ರೀಡೆ ಎನ್ನುವುದು ಹುಡುಗಿಯರ ಪಾಲಿಗೆ ಆಯ್ಕೆ, ಆದ್ಯತೆ, ಅವಕಾಶ ಆಗುವುದು ಬಹಳ ಕಡಿಮೆ. “ಹುಡುಗರ ಹಾಗೆ ಆಟ ಆಡಲು ಯಾಕೆ ಹೋಗಬೇಕು? ಹುಡುಗರ ಹಾಗೆ ಚಡ್ಡಿ ಹಾಕಿಕೊಂಡು ಆಡುವುದು ಯಾಕೆ? ಹುಡುಗಿಯರು ಮನೆಗೆಲಸ ಮಾಡಿಕೊಂಡಿದ್ದರೆ ಸಾಲದೇ? ಹೀಗೆ ಊರೂರು ಸುತ್ತುತ್ತಿದ್ದರೆ ಈ ಹುಡುಗಿಯರನ್ನು ಯಾರು ಮದುವೆಯಾಗುತ್ತಾರೆ?” – ಇತ್ಯಾದಿ ಕಾಡುವ ನೂರೆಂಟು ಪ್ರಶ್ನೆಗಳ ರುಬ್ಬುವಿಕೆಯ ನಡುವೆ ಸಮಾಧಾನವಾಗಿ ಆಟದ ಮೇಲೆ ಗಮನ ಕೇಂದ್ರೀಕರಿಸುವುದು ಸರಳವಲ್ಲ.

ಕುಟುಂಬದಲ್ಲಿ ಬಡತನ, ಸಿರಿತನ ಯಾವುದೇ ಇರಲಿ, ಜಾತಿ ಧರ್ಮ ಯಾವುದಾದರೂ ಆಗಲಿ, ಹುಡುಗಿಯರ ಪಾಲಿಗೆ ಕ್ರೀಡಾಪಟು ಆಗುವುದೆಂದರೆ ಅದು ಅವರ ಜನ್ಮಕ್ಕೇ ಎಸೆದ ಸವಾಲು. ಮೀರಾಬಾಯಿ ಚಾನು ಕಾಡುಗಳನ್ನು ಸುತ್ತಿ ಸೌದೆ ಹೊರೆಗಳನ್ನು ಎತ್ತುತ್ತ ಪ್ರೇರಣೆ ಪಡೆದಿದ್ದಕ್ಕೆ ವಿಸ್ತಾರವಾದ ಸಾಮಾಜಿಕ ವ್ಯಾಖ್ಯಾನ ಕೊಡಬಹುದು. ಗಂಡು ಹೆಣ್ಣು ಇಬ್ಬರಿಗೂ ಸಮಾನ ಕ್ರೀಡಾ ಸಾಧನೆ ಮತ್ತು ಶ್ರಮ ಅಗತ್ಯವಾದರೂ, ನಮ್ಮ ಹುಡುಗಿಯರ ಕ್ರೀಡಾ ಸಾಧನೆಯ ಹಿಂದೆ ಸಾಮಾಜಿಕ ನಿರ್ಬಂಧಗಳನ್ನು ಗೆದ್ದ ಶ್ರಮವೂ ಇದ್ದೇ ಇರುತ್ತದೆ.

ಕ್ರೀಡೆಗಳಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳ ಸಾಧನೆ ಪ್ರಶಂಸಾರ್ಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಂಗಾರದಂಥ ಎಸೆತದ ಮೂಲಕ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರ ಸಾಧನೆ ಅಪ್ರತಿಮ. ಹಾಗೆಯೇ ಪುರುಷರ ಹಾಕಿ ತಂಡ ಗೆದ್ದ ಕಂಚಿನ ಪದಕಕ್ಕೆ ಬಂಗಾರದ ಹೊಳಪ ಇದ್ದೇ ಇದೆ. ರವಿಕುಮಾರ್ ದಹಿಯಾ ಕುಸ್ತಿಯಲ್ಲಿ ಪಡೆದ ಬೆಳ್ಳಿ ಪದಕಕ್ಕೆ, ಬಜರಂಗ್ ಪೂನಿಯ ಕುಸ್ತಿಯಲ್ಲಿ ಪಡೆದ ಕಂಚಿನ ಪದಕಕ್ಕೆ ಸಾಧನೆಯ ಸಿಂಗಾರದ ಅಂಚು ಇದ್ದೇ ಇದೆ.

ಆದರೆ ಮಹಿಳೆಯರ ಸಾಧನೆಗೆ ಸಾಮಾಜಿಕ ಸವಾಲುಗಳನ್ನು ಎದುರಿಸಿ ಮುನ್ನುಗಿದ ಅದ್ಭುತ ಗೆಲುವಿನ ಚೌಕಟ್ಟು ಇರುತ್ತದೆ. ಹೀಗಾಗಿ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ನಲ್ಲಿ ಪಡೆದ ಬೆಳ್ಳಿ ಪದಕ, ಪಿ.ವಿ. ಸಿಂಧು ಬ್ಯಾಡ್ಮಿಂಟನ್ ನಲ್ಲಿ ಪಡೆದ ಕಂಚಿನ ಪದಕ, ಲವ್ಲಿನಾ ಬೋಗೋಹೈನ್ ಬಾಕ್ಸಿಂಗ್ ನಲ್ಲಿ ಪಡೆದ ಕಂಚಿನ ಪದಕಗಳಿಗೆ, ಅವರಿಗೂ ಹಿಂದೆ ಸೈನಾ ನೆಹ್ವಾಲ್ ಮೊದಲಾದವರು ಪಡೆದ ಪದಕಗಳಿಗೆ, ಹೆಚ್ಚಿನ ಮಿರಿಮಿರಿ ಮಿಂಚು, ಮಿನುಗು ಇದೆ. ಒಟ್ಟಿನಲ್ಲಿ ಇದು ಇನ್ನಷ್ಟು ಹೆಣ್ಣುಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ತಳೆಯಲು ಪ್ರೇರಣೆ ನೀಡುತ್ತದೆ.

ಮಹಿಳೆಯರ ತಂಡ ಒಲಿಂಪಿಕ್ಸ್ ಹಾಕಿಯಲ್ಲಿ ನಾಲ್ಕನೇ ಸ್ಥಾನ ಪಡೆದರೂ ಅದರ ಆಟಗಾರ್ತಿಯರಲ್ಲಿ ಒಬ್ಬೊಬ್ಬರ ಜೀವನ ಸಾಧನೆಯೂ ಅನುಪಮವಾದದ್ದು. ಆದರೆ ಆಟಗಾರ್ತಿ ವಂದನಾ ಕಟಾರಿಯ ಅನುಭವಿಸಿದ ಜಾತಿ ಅವಹೇಳನ, ಅತ್ಯಂತ ಖಂಡನಾರ್ಹ. ಇಪ್ಪತ್ತೊಂದನೇ ಶತಮಾನದಲ್ಲಿ ದೇಶ ಎಷ್ಟೊಂದು ವಿಚಾರಗಳಲ್ಲಿ ಮುಂದುವರೆದರೂ ಜಾತಿ ವ್ಯವಸ್ಥೆಯ ಕೊಳೆತ ಬೇರುಗಳು ಇನ್ನೂ ಜೀವಂತವಾಗಿರುವುದು ಮತ್ತು ಜಾತಿ ಶ್ರೇಣೀಕರಣದ ಎಲ್ಲ ಅಸಹ್ಯಗಳನ್ನು ಹೆಣ್ಣುಮಕ್ಕಳು ಇನ್ನಷ್ಟು ಅನುಭವಿಸ ಬೇಕಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೇ ಅಪಮಾನಕರ.

ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ದೇಶಕಾಲ/ ಒಲಿಂಪಿಕ್ಸ್ – ಹುಡುಗಿಯರು ಅವಕಾಶ ಪಡೆಯುವುದೇ ಮೊದಲ ಗೆಲುವು!

  • August 22, 2021 at 7:30 am
    Permalink

    Namma sarkara holasu rajakeeyadlle mulugiruttade. Heegagi deshadalli kreedege yelli gamana koduttade.

    Reply

Leave a Reply

Your email address will not be published. Required fields are marked *