Uncategorizedದೇಶಕಾಲ

ದೇಶಕಾಲ/ ಎನ್‍ಡಿಎ ಪರೀಕ್ಷೆ- ಮಹಿಳೆಯರಿಗೆ ಈ ವರ್ಷವೇ ಅವಕಾಶ

ಭಾರತೀಯ ಸೈನ್ಯದ ಎಲ್ಲ ವಿಭಾಗಗಳಲ್ಲಿ ಶಾಶ್ವತ ನೇಮಕಾತಿಯ ಅವಕಾಶ ಪಡೆಯಲು ಉತ್ಸಾಹಿ ಯುವತಿಯರು ನಡೆಸಿದ ಪ್ರಯತ್ನ ಅವಿಸ್ಮರಣೀಯ. ಅಲ್ಪಾವಧಿ ನೇಮಕಾತಿಗಿಂತ ತಮಗೆ ಪೂರ್ಣಾವಧಿ ನೇಮಕಾತಿ ಅವಕಾಶ ನೀಡಬೇಕೆಂದು ಆಗ್ರಹಿಸುತ್ತಿದ್ದ ಅವರಿಗೆ ನ್ಯಾಯಾಂಗದ ಬೆಂಬಲ ಇನ್ನಿಲ್ಲದ ಬಲ ನೀಡಿತು. ಇದೀಗ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪ್ರವೇಶ ಪಡೆಯಲು ಅವರು ನಡೆಸಿದ ಕಾನೂನು ಹೋರಾಟವನ್ನು ಕೂಡ ಸುಪ್ರೀಂ ಕೋರ್ಟ್ ಬೆಂಬಲಿಸಿ ಅಕಾಡೆಮಿಗೆ ಈ ವರ್ಷದಿಂದಲೇ ಅವರಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಬೇಕೆಂದು ಆದೇಶಿಸಿದೆ. ಮುಂದಿನ ವರ್ಷದಿಂದ ನೋಡೋಣ ಎಂದು ಹೇಳುತ್ತಿದ್ದ ರಕ್ಷಣಾ ಸಚಿವಾಲಯದ ವಾದವನ್ನು ಒಪ್ಪದ ನ್ಯಾಯಪೀಠ, ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚುವುದು ಬೇಡ ಎಂದು ಹೇಳಿರುವುದು ಗಮನಾರ್ಹ.

ಸಂವಿಧಾನವು ಪುರುಷ ಮತ್ತು ಮಹಿಳೆಗೆ ಸಮಾನತೆ, ಸಮಾನ ಸ್ಥಾನಮಾನ ಕೊಟ್ಟಿದ್ದರೂ ನ್ಯಾಯಾಂಗ ಇದನ್ನು ಎತ್ತಿ ಹಿಡಿದರೂ – ಸಮಾನ ಅವಕಾಶಗಳು ಮಾತ್ರ ಶಾಸಕಾಂಗ ಮತ್ತು ಸರ್ಕಾರಗಳು ಕೊಟ್ಟರೆ ಮಾತ್ರ ಮತ್ತು ಕೊಟ್ಟಾಗ ಮಾತ್ರ ಸಿಗುತ್ತವೆ. ಸೇನಾ ವಲಯದಲ್ಲಿ ಮಹಿಳೆಯರಿಗೆ ಪ್ರವೇಶ, ಅವಕಾಶ ನೀಡುವ ವಿಚಾರ ಇದಕ್ಕೊಂದು ದೊಡ್ಡ ಉದಾಹರಣೆ. ಮಹಿಳೆಯರಿಗೆ ಸೇನೆಯ ಎಲ್ಲ ವಿಭಾಗಗಳಲ್ಲಿ ಶಾಶ್ವತ ನೇಮಕಾತಿ ನೀಡಬೇಕೆಂದು ಮಹತ್ವದ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‍ಡಿಎ) ಪ್ರವೇಶ ಪರೀಕ್ಷೆ ಬರೆಯಲು ಈ ವರ್ಷವೇ ಅವಕಾಶ ನೀಡುವ ಮೂಲಕ ಅದಕ್ಕೆ ದಾರಿ ಮಾಡಬೇಕು ಎಂದು ಹೇಳಿರುವುದು ಸೇನೆ ಸೇರುವ ಆಶಯ ಹೊತ್ತವರಿಗೆ ಹೊಸ ಬೆಳಕು ತೋರಿದೆ.

ಸೇನೆಯ ಮೂರೂ ವಿಭಾಗಗಳಲ್ಲಿ ಯಾವುದಕ್ಕಾದರೂ ಪ್ರವೇಶ ಪಡೆಯಲು ಎನ್‍ಡಿಎ ಪರೀಕ್ಷೆಯನ್ನು ಹಾದು ಬರುವುದು ಕಡ್ಡಾಯ. ಎನ್‍ಡಿಎ – 1 ಮತ್ತು ಎನ್‍ಡಿಎ – 2 ಎಂಬ ಎರಡು ಹಂತಗಳಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತದೆ.

ಮಹಿಳೆಯರು ಸೈನ್ಯ ಸೇರಿ, ಹೆಚ್ಚು ಕಾಲ ಸೇವೆ ಸಲ್ಲಿಸಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿತ್ತು. ಆದರೆ `ಎನ್‍ಡಿಎನಲ್ಲಿ ಮಹಿಳೆಯರಿಗೆ ಸೂಕ್ತವಾದ ಮೂಲಸೌಕರ್ಯಗಳ ವ್ಯವಸ್ಥೆಗಳನ್ನು ಕಲ್ಪಿಸಬೇಕು, ಅದಕ್ಕೆ ಆರು ತಿಂಗಳಾದರೂ ಕಾಲಾವಕಾಶ ಬೇಕು, ಆದ್ದರಿಂದ 2022 ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಪರೀಕ್ಷೆಗೆ ಅವರು ಹಾಜರಾಗಲಿ’ ಎಂದು ಅಫಿಡವಿಟ್ ಸಲ್ಲಿಸಿತ್ತು. ಹಾಗೇನಾದರೂ ಆದರೆ, ಎನ್‍ಡಿಎ 2022 ರ ಮೇ ತಿಂಗಳಲ್ಲಿ ಪರೀಕ್ಷೆ ಕುರಿತು ಪ್ರಕಟಣೆ ಹೊರಡಿಸಿದರೆ, ಪರೀಕ್ಷೆ 2022 ಸೆಪ್ಟೆಂಬರ್ ತಿಂಗಳಲ್ಲಿ ನಡೆಯುತ್ತದೆ. ಅವರು ಎನ್‍ಡಿಎನಲ್ಲಿ ಪ್ರವೇಶ ಪಡೆಯುವ ಹೊತ್ತಿಗೆ ಜೂನ್ 2023 ಆಗುತ್ತದೆ. ಅದನ್ನು ಒಪ್ಪದ ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್. ಗವಾಯಿ ಅವರು ಆಸಕ್ತ ಯುವತಿಯರು ಈ ವರ್ಷವೇ ಪ್ರವೇಶ ಪರೀಕ್ಷೆ ಬರೆಯಲಿ ಎಂದಿದ್ದಾರೆ. ಪ್ರತಿಯೊಂದು ಸಂದರ್ಭವನ್ನು ತುರ್ತು ಪರಿಸ್ಥಿತಿ ಎಂಬಂತೆ ಭಾವಿಸಿ ಎದುರಿಸುವುದೇ ಸಶಸ್ತ್ರ ಪಡೆಗಳ ಕಾರ್ಯ. ಅಂದಮೇಲೆ ಮಹಿಳೆಯರಿಗೆ ಪ್ರವೇಶ ಪರೀಕ್ಷೆ ನಡೆಸುವ ಮತ್ತು ಅದರಲ್ಲಿ ಅರ್ಹರಾದವರಿಗೆ ಅಕಾಡೆಮಿಯಲ್ಲಿ ತರಬೇತಿಗೆ ಮತ್ತು ವಾಸ್ತವ್ಯಕ್ಕೆ ಮೂಲಸೌಕರ್ಯಗಳ ವ್ಯವಸ್ಥೆ ಕಲ್ಪಿಸುವ ತುರ್ತನ್ನು ಸೇನೆ ನಿರ್ವಹಿಸುವುದು ಅಸಾಧ್ಯವೇನಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರದ ನೆಪವನ್ನು ಒಪ್ಪಿಕೊಳ್ಳುವುದು ಎಂದಿಗೂ ಈಡೇರದ ಭರವಸೆ ಆಗಬಹುದು ಎಂದಿರುವ ನ್ಯಾಯಪೀಠ ಮಹಿಳೆಯರು ಈ ವರ್ಷವೇ ಪ್ರವೇಶ ಪರೀಕ್ಷೆಯನ್ನು ಬರೆಯಲಿ, ಈ ಬಾರಿ ಹೆಚ್ಚು ಮಂದಿ ಮಹಿಳೆಯರು ಪರೀಕ್ಷೆಗೆ ಅರ್ಜಿ ಹಾಕಿ ಬರೆಯಲಾರರು, ಆ ಕಾರಣ ಪ್ರವೇಶ ಪಡೆಯುವ ಕೆಲವೇ ಮಂದಿಗೆ ವ್ಯವಸ್ಥೆ ಕಲ್ಪಿಸುವುದು ಕಷ್ಟವೇನಲ್ಲ ಎಂದು ಹೇಳಿದೆ. ಮೊದಲು ಈ ಕ್ರಮ ಆರಂಭವಾಗಲಿ ಎಂದಿರುವ ಅದು, ಇದೊಂದು ಪರಿವರ್ತನೆಯ ಅವಧಿಯಾದ್ದರಿಂದ ಈ ಬಾರಿ ಅಲ್ಲದಿದ್ದರೂ ಮುಂದಿನ ಬಾರಿಗೆ ಒಳ್ಳೆಯ ವ್ಯವಸ್ಥೆ ಇದ್ದೇ ಇರುತ್ತದೆ ಎಂದಿದೆ. ಎನ್‍ಡಿಎ ನಲ್ಲಿ ಈ ವರ್ಷ ಕೆಲವೇ ಸೀಟುಗಳನ್ನು ಕೊಡುವ ಮೂಲಕ ಪ್ರಕ್ರಿಯೆ ಆರಂಭಿಸಿ, ಮುಂದಿನ ವರ್ಷದಿಂದ ಅದರ ಸಂಖ್ಯೆ ಹೆಚ್ಚಿಸಬಹುದು, ಮೊದಲಿಗೆ ಸಣ್ಣದಾಗಿಯೇ ಆರಂಭಿಸೋಣ ಎಂಬ ಅಭಿಪ್ರಾಯ ತಿಳಿಸಿ, ರಕ್ಷಣಾ ಸಚಿವಾಲಯದ ಕೋರಿಕೆಯನ್ನು ತಳ್ಳಿಹಾಕಿದೆ.

ನ್ಯಾಯಾಲಯ ದೃಢವಾದ ಆದೇಶ ನೀಡಿರುವುದರಿಂದ ಮಹಿಳಾ ಆಕಾಂಕ್ಷಿಗಳು ಈ ವರ್ಷವೇ ಪ್ರವೇಶ ಪರೀಕ್ಷೆ ಬರೆದು ಎನ್‍ಡಿಎ ಸೇರಬಹುದಾಗಿದೆ. ಆ ಮೂಲಕ ಅವರು ಯಶಸ್ಸಿನ ಮತ್ತೊಂದು ಮಜಲಿಗೆ ಹೆಜ್ಜೆ ಹಾಕಲಿದ್ದಾರೆ. ಇದುವರೆಗೆ ತಡೆಹಿಡಿಯಲಾಗಿದ್ದ ಅವಕಾಶವನ್ನು ಶೀಘ್ರವೇ ಪಡೆಯಲಿದ್ದಾರೆ.


-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *