ದೇಶಕಾಲ/ ಇಪ್ಪತ್ತೊಂದು : ಮೂವತ್ತೊಂದು : ಒಂದು! – ಆರ್. ಪೂರ್ಣಿಮಾ

ಸರ್ಕಾರದ ಸಂವೈಧಾನಿಕ ಬದ್ಧತೆಯಾದ ‘ಸಾಮಾಜಿಕ ನ್ಯಾಯ’ ಎನ್ನುವುದು ಸಮಾಜದ ಎಲ್ಲ ವಲಯಗಳು, ಸಮೂಹಗಳು, ಸಮುದಾಯಗಳನ್ನು ಒಳಗೊಳ್ಳಬೇಕಲ್ಲವೇ? ಲಿಂಗ ನ್ಯಾಯ ಎನ್ನುವುದು ಸಾಮಾಜಿಕ ನ್ಯಾಯ ಎಂಬುದರ ಮತ್ತೊಂದು ಮುಖವೇ ಅಲ್ಲವೇ? ಆದರೆ ಬೇರೆಯದು ಇರಲಿ, ಸರ್ಕಾರವೇ ರಚಿಸುವ ಸಂಸದೀಯ ಸಮಿತಿಗಳಲ್ಲೂ ಲಿಂಗ ಸಮಾನತೆಯನ್ನು ಕಡೆಗಣಿಸಿದರೆ ಇನ್ನು ಸಾರ್ವಜನಿಕ ಜೀವನದಲ್ಲಿ ಅದರ ಪರಿಪಾಲನೆ ಹೇಗಿರುತ್ತದೆ?

ಆಳುವ ಸರ್ಕಾರ ಇತ್ತೀಚಿನ ದಿನಗಳಲ್ಲಿ ದೇಶದ ಮುಂದಿಟ್ಟ ಚಿಂತನೆಗಳಲ್ಲಿ ಬಾಲ್ಯವಿವಾಹ ನಿಷೇಧ ಕಾಯಿದೆಗೆ ತಿದ್ದುಪಡಿ ತರುವ ಮಸೂದೆ ಅತ್ಯಂತ ಗಮನಾರ್ಹವಾಗಿದೆ. ಹೆಣ್ಣುಮಕ್ಕಳ ಮದುವೆ ವಯಸ್ಸನ್ನು ಈಗಿರುವ 18 ವರ್ಷಗಳಿಂದ 21 ವರ್ಷಗಳಿಗೆ ಕಾನೂನುಬದ್ಧವಾಗಿ ಹೆಚ್ಚಿಸುವ ಸಲಹೆಯೇ ಈ ತಿದ್ದುಪಡಿಯ ಮುಖ್ಯಾಂಶವಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾದ ಈ ಪ್ರಮುಖ ವಿಚಾರದ ಅಗತ್ಯ- ಅನಗತ್ಯಗಳ ಬಗ್ಗೆ, ಸಾಧಕ ಬಾಧಕಗಳ ಬಗ್ಗೆ ಈಗಾಗಲೇ ಹಲವು ವಲಯಗಳಲ್ಲಿ ವಿಶ್ಲೇಷಣೆ ಆರಂಭವಾಗಿರುವುದು ಸಹಜವೇ ಆಗಿದೆ. ಅದರ ಪರ ಮತ್ತು ವಿರೋಧ ಚರ್ಚೆಗಳೂ ದೇಶದಾದ್ಯಂತ ನಡೆಯುತ್ತಿವೆ.

ಅಪಾರವಾದ ಸಾಮಾಜಿಕ, ಆರ್ಥಿಕ ಪರಿಣಾಮಗಳನ್ನು ಬೀರುವ ಇಂಥ ತಿದ್ದುಪಡಿ, ಅಂಗೀಕಾರಕ್ಕೆ ಮುನ್ನ ವ್ಯಾಪಕವಾದ ಚರ್ಚೆಗೆ ಮತ್ತು ವಿವಿಧ ರೀತಿಯ ಪರಿಶೀಲನೆಗೆ ಒಳಪಡುವುದು ಅತ್ಯಂತ ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಬಹಳ ಮುಖ್ಯವಾದ ತಿದ್ದುಪಡಿಯ ಪರಾಮರ್ಶೆ ನಡೆಸಲು ಲೋಕಸಭೆ ಮತ್ತು ರಾಜ್ಯಸಭೆಯಿಂದ ಆಯ್ದ 31 ಸದಸ್ಯರನ್ನು ಒಳಗೊಂಡ ಒಂದು ಸಂಸದೀಯ ಸ್ಥಾಯಿ ಸಮಿತಿಗೆ ಜವಾಬ್ದಾರಿ ವಹಿಸಲಾಗಿದೆ. ಶಿಕ್ಷಣ, ಮಹಿಳೆ, ಮಕ್ಕಳು, ಯುವಜನ ಮತ್ತು ಕ್ರೀಡೆಗೆ ಸಂಬಂಧಿಸಿದ ವಿಷಯಗಳ ಪರಾಮರ್ಶೆ ನಡೆಸುವ ಈ ಸಮಿತಿಯ ಸ್ವರೂಪವೇ ಮಹಿಳೆಯರಿಗೆ, ಸಮಾನತೆಯ ಪ್ರತಿಪಾದಕರಿಗೆ ವಿಪರೀತ ಆಘಾತ ಉಂಟುಮಾಡುವಂತಿದೆ. ಏಕೆಂದರೆ, ಹೆಣ್ಣುಮಕ್ಕಳ ಮದುವೆ ವಯಸ್ಸು ನಿಗದಿ ಮಾಡುವ ಪ್ರಮುಖ ಜವಾಬ್ದಾರಿ ನಿರ್ವಹಿಸಲಿರುವ ಈ ಸಂಸದೀಯ ಸಮಿತಿಯ 31 ಮಂದಿ ಸಂಸತ್ ಸದಸ್ಯರಲ್ಲಿ ಒಬ್ಬಳೇ ಮಹಿಳೆ, ಇನ್ನು ಮೂವತ್ತು ಮಂದಿ ಪುರುಷರು!

ಅಸಮಾನತೆಯ ದ್ಯೋತಕ

ಈ ವಿಕೃತ ವಿಕಲನ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇರುವ ಅಸಮಾನತೆಗೆ ಬೃಹತ್ ದ್ಯೋತಕವೇ ಆಗಿದೆ ಎನ್ನಲಡ್ಡಿಯಿಲ್ಲ. ದೇಶದ ಪ್ರತಿಯೊಬ್ಬ ತರುಣಿಯ ಜೀವನದ ಮೇಲೆ ಒಂದಿಲ್ಲೊಂದು ರೀತಿಯ ಪ್ರಭಾವ ಬೀರುವ ಪ್ರಮುಖ ತಿದ್ದುಪಡಿ ನಿರ್ಧಾರದಲ್ಲಿ ಅವಳ ದನಿಯೇ ಕೇಳದಿದ್ದರೆ ಅದಕ್ಕಿಂತ ಅನ್ಯಾಯ ಬೇರೊಂದಿಲ್ಲ. ಒಂದು ಸಂಸದೀಯ ಸ್ಥಾಯಿ ಸಮಿತಿಯಲ್ಲೇ ಮಹಿಳೆಗೆ ಸಿಗದ ಸೂಕ್ತ ಪ್ರಾತಿನಿಧ್ಯ, ಇನ್ನು ಒಟ್ಟಾರೆ ರಾಜಕೀಯ ರಂಗದಲ್ಲಿ ಸಿಗುವುದು ಕನಸಿನ ಮಾತೇ ಸರಿ! ಏಕೆಂದರೆ ಸಮಾನತೆಯ ಆಲೋಚನೆ ಮತ್ತು ಅದಕ್ಕೆ ಬದ್ಧತೆ ರಾಜಕೀಯ ವ್ಯವಸ್ಥೆಯ ಸಣ್ಣ ಸಣ್ಣ ಕ್ರಿಯೆಗಳು, ನಿರ್ಧಾರಗಳು, ಸಂಗತಿಗಳಲ್ಲೂ ವ್ಯಕ್ತವಾಗಬೇಕು. ಆದರೆ, ಸಮಿತಿಗಳನ್ನು ರಚಿಸುವುದು, ಚುನಾವಣೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸೇರಿ, ಸಕಲೆಂಟು ನಿರ್ಧಾರಗಳನ್ನೂ ಪುರುಷ ರಾಜಕಾರಣಿಗಳೇ ಕೈಗೊಳ್ಳುವುದರಿಂದ ಅಲ್ಲಿ ಲಿಂಗ ಸಮಾನತೆ ಗೈರುಹಾಜರು ಎದ್ದು ಕಾಣುತ್ತದೆ.

ಪ್ರಸ್ತುತ 779 ಬೃಹತ್ ಸಂಖ್ಯೆಯ ನಮ್ಮ ಸಂಸತ್ತಿನಲ್ಲಿ- ಲೋಕಸಭೆಯಲ್ಲಿ 81 ಮತ್ತು ರಾಜ್ಯಸಭೆಯಲ್ಲಿ 29 ಮಹಿಳಾ ಸದಸ್ಯರು ಇದ್ದಾರೆ. ಅಂದರೆ ಅದು ಶೇ. 14 ರ ಕಡಿಮೆ ಪ್ರಮಾಣದಲ್ಲಿಯೇ ಇದೆ. ಮಹಿಳೆಯರಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ರೂಪಿಸುವ ಈ ಸ್ಥಾಯಿ ಸಮಿತಿಯಲ್ಲಿ ಶೇ. 14 ರ ಪ್ರಮಾಣದ ಪ್ರಾತಿನಿಧ್ಯವೂ ಇಲ್ಲವಲ್ಲ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ದಿನಪತ್ರಿಕೆಯ ಸಂಪಾದಕೀಯ ವ್ಯಕ್ತಪಡಿಸಿರುವ ಕಳವಳ, ಸಮಾನ ಚಿಂತನೆಯ ಎಲ್ಲರದೂ ಆಗಿದೆ. ಒಬ್ಬ ಮಹಿಳೆ ಇರುವ ಈ ಸ್ಥಾಯಿ ಸಮಿತಿ, ದೇಶದ ಕೋಟ್ಯಂತರ ಹುಡುಗಿಯರ ಭವಿಷ್ಯ ಮತ್ತು ಬದುಕನ್ನು ನಿರ್ದೇಶಿಸಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆಗೆ ಬಂದು ಹಾಕಿದ ಮತದಾರರಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಶೇ. 0.17 ರಷ್ಟು ಹೆಚ್ಚಾಗಿತ್ತಲ್ಲವೇ, ಇದು ಆಧುನಿಕ ಭಾರತ ಅಲ್ಲವೇ ಎಂದೂ ಅದು ಪ್ರಶ್ನಿಸಿದೆ.

ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಎದ್ದು ಕಾಣುವ ಈ ತಾರತಮ್ಯ ಮತ್ತು ಅಸಮಾನತೆಯನ್ನು ಉಗ್ರವಾಗಿ ಟೀಕಿಸುವ ಮಾತುಗಳು ಕೇಳುತ್ತಿವೆ. ಮೊದಲಿಗೆ, ಸ್ಥಾಯಿ ಸಮಿತಿಯ ಏಕೈಕ ಮಹಿಳೆಯಾಗಿರುವ ತೃಣಮೂಲ ಕಾಂಗ್ರೆಸ್‍ನ ಸಂಸದೆ ಸುಶ್ಮಿತಾ ದೇವ್ ಅವರೇ ಇದನ್ನು ಒಪ್ಪದೆ, ಸಂಸತ್ತಿನಲ್ಲಿರುವ ಪ್ರತಿಯೊಬ್ಬ ಮಹಿಳೆಯೂ ಅಂದರೆ 110 ಸಂಸದೆಯರಿಗೂ ಈ ಸಮಿತಿಯ ಮುಂದೆ ತಮ್ಮ ಚಿಂತನೆ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮಹಿಳೆಯರ ಹಕ್ಕುಗಳನ್ನು ಪುರುಷರೇ ನಿರ್ಧರಿಸುವುದು ಮತ್ತು ಮಹಿಳೆಯರು ಮೂಕರಂತೆ ಅದನ್ನು ಒಪ್ಪಿಕೊಳ್ಳುವಂತೆ ಮಾಡುವುದು ಸರಿಯಲ್ಲ ಎಂದು ಡಿಎಂಕೆ ಸಂಸದೆ ಕನ್ನಿಮೊಳಿ ಹೇಳಿದ್ದಾರೆ. ಶಿವಸೇನೆಯ ಉಪನಾಯಕಿ ಪ್ರಿಯಾಂಕ ಚತುರ್ವೇದಿ ಈ ಮಸೂದೆಯ ಚರ್ಚೆಯಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೊಂದೇ ಅಲ್ಲ!

ಕೌಟುಂಬಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಅಸಮಾನ ಪ್ರಾತಿನಿಧ್ಯ ಯಾವುದರಲ್ಲಿ ನೋಡಿದರೂ ಕಣ್ಣಿಗೆ ರಾಚುತ್ತದೆ. ಸಂಸದೀಯ ಸಮಿತಿ, ಸದನ ಸಮಿತಿ, ವಿಚಾರಣಾ ಸಮಿತಿ, ತನಿಖಾ ಸಮಿತಿ ಮುಂತಾದ ಕಡೆ ಹೇಳುವುದೇ ಬೇಡ. ಟಿವಿ ಚಾನೆಲ್‍ಗಳಲ್ಲಿ ಪ್ರಸಕ್ತ ವಿಷಯಗಳ ಚರ್ಚೆಗೆ ತಜ್ಞರನ್ನು ಕರೆಯುವಾಗ ಗಂಡಸರೇ ಎದ್ದು ಕಾಣುವ ಅಸಮಾನತೆಯನ್ನು, `ಪ್ಯಾನೆಲ್ ಅಲ್ಲ,ಮ್ಯಾನೆಲ್’ ಚರ್ಚೆ ನಡೆಯುತ್ತಿದೆ ಎಂದೇ ಹೇಳಲಾಗುತ್ತದೆ. ರಾಷ್ಟ್ರೀಯ ಮಟ್ಟದ ಆಯೋಗಗಳು, ಸಮಿತಿಗಳು, ಮಂಡಲಿಗಳಲ್ಲಿ ಈ ತಾರತಮ್ಯ ಎದ್ದುಕಾಣುತ್ತದೆ. ಸಾಂಸ್ಕøತಿಕ ವಲಯದ ಅಕಾಡೆಮಿಗಳು, ರಾಷ್ಟ್ರೀಯ ಸಂಸ್ಥೆಗಳು, ವಿಜ್ಞಾನ ಸಂಸ್ಥೆಗಳಲ್ಲಿ ಮಹಿಳೆಯರು ಮುಖ್ಯ ಸ್ಥಾನಗಳಲ್ಲಿ ಕಾಣುವುದು ಅಪರೂಪ. ಇನ್ನು ನ್ಯಾಯಾಂಗ ವ್ಯವಸ್ಥೆಯೇ ಈ ತಾರತಮ್ಯವನ್ನು ನಿವಾರಿಸಿಕೊಂಡಿಲ್ಲ ಎಂದ ಮೇಲೆ ಬೇರೆಯದರ ಬಗ್ಗೆ ಹೇಳುವುದೇ ಬೇಡ. ಎಲ್ಲ ರಾಜ್ಯಗಳ ಸರ್ಕಾರಿ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಪ್ರಮಾಣವನ್ನು ತಿಳಿಯಲು ಒಂದು ಅಭಿಯಾನವೇ ನಡೆಯಬೇಕು. ಎಲ್ಲ ಬಗೆಯ ತಾರತಮ್ಯವನ್ನು ಗುರುತಿಸಿ, ಪ್ರಶ್ನಿಸಬೇಕಾದ ಮಾಧ್ಯಮವೂ ಅದಕ್ಕೆ ಹೊರತಲ್ಲ ಎನ್ನುವುದೇ ಖೇದಕರ. ಇನ್ನು ರಾಜಸ್ತಾನ ರಾಜ್ಯದಲ್ಲಿ ಎಲ್ಲ ಮದುವೆಗಳನ್ನೂ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎನ್ನುವ ಚಿಂತನೆ ಸಾಕಷ್ಟು ವಿವಾದ, ವಿರೋಧಗಳನ್ನು ಎಬ್ಬಿಸಿದೆ.

ಮಹಿಳೆಯರಿಗೆ ಸೂಕ್ತ ಮತ್ತು ಅರ್ಹ ಪ್ರಾತಿನಿಧ್ಯ ಎನ್ನುವುದು ರಾಜಕೀಯ ರಂಗ ಮಾತ್ರವಲ್ಲ, ವ್ಯವಸ್ಥೆಯ ಎಲ್ಲ ಅಂಗಗಳಲ್ಲಿ ದೊರಕುವಂತೆ ಮಾಡಲು ಸಾರ್ವಜನಿಕ ಮತ್ತು ಶೈಕ್ಷಣಿಕ ಸಂಕಥನಗಳನ್ನು ಬೆಳೆಸುವುದು ಅತ್ಯಗತ್ಯ ; ಜೊತೆಗೆ ಕಾಯಿದೆಗಳ ಬೆಂಬಲವೂ ಅನಿವಾರ್ಯ.

-ಆರ್. ಪೂರ್ಣಿಮಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *