ದೇಶಕಾಲ/ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಅಸಾಮಾನ್ಯ ಕಾರ್ಯ- ತಿರು ಶ್ರೀಧರ

ಮಹಿಳಾ ಶಿಕ್ಷಣಕ್ಕೆ ಅಪಾರವಾಗಿ ಇಂಬು ನೀಡಿದ ಸಾವಿತ್ರಿಬಾಯಿ ಫುಲೆ ಅವರು ಜನಿಸಿದ ದಿನವಿದು. ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಈ ಧ್ಯೇಯೋದ್ಧೇಶಕ್ಕಾಗಿ ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ನಿರಂತರ ಶ್ರಮಿಸಿದ ಮಹಾನ್ ತಾಯಿ ಈಕೆ. ಸಾಮಾಜಿಕವಾಗಿ ಹೆಣ್ಣುಮಕ್ಕಳು ವಿದ್ಯೆ ಪಡೆಯುವುದೇ ಕಷ್ಟವಿದ್ದ ಕಾಲಘಟ್ಟದಲ್ಲಿ ಈ ದಂಪತಿಗಳು ಹೆಣ್ಣು ಮಕ್ಕಳಲ್ಲಿ ಹತ್ತಿಸಿದ ಶಿಕ್ಷಣದ ಅರಿವಿನ ಕಿಡಿ ಎಂತದ್ದು ಎಂಬುದನ್ನು ನಾವು ಊಹಿಸಬಹುದಾಗಿದೆ. ಇಂದು ದೇಶಾದ್ಯಂತ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ‘ಶಿಕ್ಷಕಿಯರ ದಿನ’ ಎಂದು ಆಚರಿಸಲಾಗುತ್ತದೆ.

“ನಿಜವಾಗಿ ನೋಡಿದರೆ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆ ಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವೆ. ಅದರಿಂದಾಗಿ ಬಂದಂತಹ ಬಹುಪರಿಯ ದುಃಖಗಳನ್ನು ನುಂಗಿಕೊಳ್ಳುತ್ತಾ ಪ್ರತಿಯೊಂದು ಶಾಲೆಗೂ ಹೊಸ ರೂಪ ಮತ್ತು ಚೈತನ್ಯವನ್ನು ತುಂಬಿರುವೆ. ಅದಕ್ಕಾಗಿ ಇದೋ ನನ್ನ ಮನಃಪೂರ್ವಕ ಅಭಿನಂದನೆಗಳು” ಎನ್ನುತ್ತಾ ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ ತಮಗೆ, ಬ್ರಿಟಿಷ್ ಸರ್ಕಾರ ಹೊದಿಸಿ ಗೌರವಿಸಿದ ಶಾಲನ್ನು ಮಹಾತ್ಮ ಜ್ಯೋತಿಬಾ ಫುಲೆ ಅವರು ತಮ್ಮ ಮಡದಿಗೆ ನೀಡಿದಾಗ, ಇಡೀ ಸಭೆಗೆ ಸಭೆಯೇ ಎದ್ದು ನಿಂತು ಕರತಾಡನದೊಂದಿಗೆ ಅವರಿಗೆ ಗೌರವ ಸೂಚಿಸಿತು. ಹೀಗೆ ಪತಿಯಿಂದ ಸಾಮಾಜಿಕವಾಗಿ ಪ್ರಶಂಸೆ ಮತ್ತು ಗೌರವವನ್ನು ಪಡೆದವರು ಸಾವಿತ್ರಿಬಾಯಿ ಫುಲೆ.

ಸಾವಿತ್ರಿಬಾಯಿ ಅವರು ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ 1831 ವರ್ಷದ ಜನವರಿ 3 ರಂದು ತಳಸಮುದಾಯದ ಕುಟುಂಬವೊಂದರಲ್ಲಿ ಜನಿಸಿದರು. ಸಾವಿತ್ರಿಬಾಯಿಗೆ 9 ವರ್ಷವಾಗಿದ್ದಾಗಲೇ ಜ್ಯೋತಿಬಾ ಅವರೊಂದಿಗೆ ವಿವಾಹವಾಯಿತು. ಮದುವೆಯ ನಂತರ ಅವರು ಪುಣೆಗೆ ಬಂದರು. ಹಸುಗೂಸಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ಜ್ಯೋತಿಬಾ ಫುಲೆ ಅವರ ವಿದ್ಯಾಭ್ಯಾಸ ಕುಂಟುತ್ತಾ ಸಾಗಿತ್ತು. ತಾಯಿಯ ದೂರದ ಸಂಬಂಧಿಯಾಗಿದ್ದ ಬಾಲವಿಧವೆ ಸಗುಣಾಬಾಯಿ ಇವರ ಸಾಕುತಾಯಿ.

ಸಗುಣಾ ಅವರಿಗೆ ಶಿಕ್ಷಣದ ಬಗ್ಗೆ ಅಪರಿಮಿತ ಆಸಕ್ತಿ ಇತ್ತು. ಇವರು ಸಂಪ್ರದಾಯ, ಕಟ್ಟುಕಟ್ಟಲೆಗಳ ಕುರಿತು ಆಳದಲ್ಲಿ ಪ್ರತಿಭಟನಾತ್ಮಕ ಮನೋಭಾವ ಹೊಂದಿದ್ದರು. ಹೀಗೆಂದೇ ಸುಗುಣಾ ಅವರು ಸಾವಿತ್ರಿಬಾಯಿ ಮತ್ತು ತಮಗೆ ಪಾಠವನ್ನು ಹೇಳಿಕೊಡಲು ಜ್ಯೋತಿಬಾ ಅವರನ್ನೇ ಒಪ್ಪಿಸಿದರು! ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯೆಯನ್ನು ದಕ್ಕಿಸಿಕೊಂಡ ಈ ಇಬ್ಬರು ಹೆಣ್ಣುಮಕ್ಕಳು ಜ್ಯೋತಿಬಾ ಅವರೊಡಗೂಡಿ, ಬಹುಜನರಿಗೆ ಅಕ್ಷರವನ್ನು ನಿರಾಕರಿಸಿದ್ದ ರೋಗಗ್ರಸ್ತ ಸಮಾಜವನ್ನು ಎದುರು ಹಾಕಿಕೊಂಡು ಹೆಣ್ಣುಮಕ್ಕಳಿಗೆ ಶಿಕ್ಷಣದ ಬಾಗಿಲನ್ನು ತೆರೆದರು!

1847ರಲ್ಲಿ ನಾರ್ಮನ್ ಶಾಲೆಯಲ್ಲಿ ಕೇವಲ 17 ವರ್ಷದೊಳಗೆ ಶಿಕ್ಷಕಿ ತರಬೇತಿಯನ್ನು ಪಡೆದ ಸಾವಿತ್ರಿಬಾಯಿ ಅವರು ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1848ರಲ್ಲಿ ಜ್ಯೋತಿಬಾ ಅವರು ಪುಣೆಯಲ್ಲಿ ತೆರೆದ ಮೊಟ್ಟಮೊದಲ ಹೆಣ್ಣುಮಕ್ಕಳ ಶಾಲೆಯಲ್ಲಿ (ಭಾರತದಲ್ಲಿ ಎರಡನೆಯದು) ಉಪಾಧ್ಯಾಯಿನಿಯಾಗಿ ಈಕೆ ಕೆಲಸ ಪ್ರಾರಂಭಿಸಿದರು. 9 ಜನ ಹೆಣ್ಣುಮಕ್ಕಳಿಂದ ಪ್ರಾರಂಭವಾದ ಶಾಲೆ, ಮುಂದೆ ಅನೇಕ ಬಾಲೆಯರಿಗೆ ವಿದ್ಯಾದಾನದ ಕೇಂದ್ರವಾಯ್ತು.ಇದಕ್ಕಾಗಿ ಸಾವಿತ್ರಿಬಾಯಿ ಅವರು ಸಮಾಜದಲ್ಲಿ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಸಾವಿತ್ರಿಬಾಯಿಯವರು ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಲಾಯಿತು. ಕಲ್ಲು, ಕೆಸರು, ತೊಪ್ಪೆಗಳನ್ನೆಸೆದು ಹೆದರಿಸಿ, ಕೊಲೆ ಬೆದರಿಕೆ ಹಾಕಿದರು. ಯಾವುದಕ್ಕೂ ಬಗ್ಗದಿದ್ದಾಗ, ಇವರ ಶಾಲೆಗೆ ಸೇರಿದ್ದ ಹೆಣ್ಣುಮಕ್ಕಳಿಗೆ ಜಾತಿ ಹಾಗೂ ಸಮಾಜ ಬಹಿಷ್ಕಾರದ ಬೆದರಿಕೆಯನ್ನು ಹಾಕತೊಡಗಿದರು. ಸಾವಿತ್ರಿಬಾಯಿ ಅವರು ಮನೆ ಮನೆಗಳಿಗೆ ಹೋಗಿ ಪೋಷಕರ ಮನವೊಲಿಸಿ, ಶಿಕ್ಷಣದ ಔನ್ನತ್ಯವನ್ನು ತಿಳಿ ಹೇಳಿ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ನೀಡಿದರು.

ಇದೇ ಕಾರಣಕ್ಕೆ ಜ್ಯೋತಿಬಾ ತಮ್ಮ ಸ್ವಂತ ಮನೆ ತೊರೆದು ಹೊರಬೀಳಬೇಕಾದ ಮತ್ತು ಸಾವಿತ್ರಿಬಾಯಿಯವರು ತವರಿನಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾದ ಪ್ರಸಂಗಗಳು ಎದುರಾದವು. ಇದನ್ನೆಲ್ಲಾ ಕೆಲವು ಪ್ರಗತಿಪರ ಸ್ನೇಹಿತರೊಡಗೂಡಿ ದಿಟ್ಟವಾಗಿ ಎದುರಿಸಿದ ದಂಪತಿಗಳು 1848-1852ರವರೆಗೆ ಹದಿನೆಂಟಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ತೆರೆದು ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ದಾಖಲೆಗಳಿವೆ.

ಕ್ರಾಂತಿಕಾರಿ ಕವಿಯಾಗಿ ಹೋರಾಟದ ಹಾಡುಗಳನ್ನೂ ರಚಿಸಿದ ಸಾವಿತ್ರೀ ಬಾಯಿ ಫುಲೆ ಅವರ ತುಡಿತ ಎಂತದ್ದು ಎಂಬುದು ಈ ಕವಿತೆಯಲ್ಲಿ ಕಾಣಸಿಗುತ್ತದೆ:

ನಡೆ!
ಶಿಕ್ಷಣ ಪಡೆ!
ನಿಲ್ಲು! ನಿನ್ನ ಕಾಲ ಮೇಲೆ ನೀನು ನಿಲ್ಲು

ಪಡೆ ವಿವೇಕ! ಪಡೆ ಸಂಪತ್ತು! ಇದಕಾಗಲಿ ನಿನ್ನಯ ದುಡಿಮೆ
ಅರಿವಿಲ್ಲದವರಾಗಿ ನಮಗೆ ಕೈ ಜಾರಿತು ಸಕಲವೂ ಪಶುವಾದೆವು, ಇಲ್ಲದಾಗಿ ವಿವೇಕವೂ
ಸಾಕಿನ್ನು ಈ ಜಡತೆ ಸಾಕು

ನಡೆನಡೆ ಶಿಕ್ಷಣ ಪಡೆ!
ಆಗಲಿ ಕೊನೆ, ದಮನಿತರ ಕಣ್ಣೀರ ಸಂಕಟಕ್ಕೂ ಕೊನೆ
ಇದೊ ಇಲ್ಲಿದೆ! ನಿಮ್ಮ ಕಣ್ಮುಂದೆಯೆ ಬಿದ್ದಿದೆ
ಶಿಕ್ಷಣದ ರೂಪದಲಿ ಚಿನ್ನದ ಗಣಿಯು
ತಡವೇಕೆ? ನಡೆನಡೆ ಶಿಕ್ಷಣ
ಪಡೆ!

ಜಾತಿಯ ಸಂಕೋಲೆ ಕತ್ತರಿಸಿ ನಡೆ.

ವೈದಿಕ ಶಾಸ್ತ್ರದ ಕಾಲ್ತೊಡರ ಕಿತ್ತೆಸೆದು ನಡೆ ನಡೆ!

ಅನೇಕ ಸಾಮಾಜಿಕ ಅನಿಷ್ಟಗಳ ಎದುರಿಗೂ ಫುಲೆ ದಂಪತಿಗಳು ಉಗ್ರ ಹೋರಾಟ ನಡೆಸಿದರು. ವಿಧವೆಯರ ಕೇಶಮುಂಡನವನ್ನು ವಿರೋಧಿಸಿ, ಅವರ ಪುನರ್ ವಿವಾಹಗಳನ್ನು ಏರ್ಪಡಿಸಿದರು.

ಕಾಮುಕ ಪುರುಷರಿಗೆ ಬಲಿಯಾಗಿ ಗರ್ಭಧರಿಸುವ ವಿಧವೆಯರಿಗಾಗಿ, ಅವರಿಗೆ ಹುಟ್ಟುವ ಮಕ್ಕಳಿಗಾಗಿ 1863ರಲ್ಲಿ ‘ಬಾಲಹತ್ಯೆ ಪ್ರತಿಬಂಧಕ ಗೃಹ’ಗಳನ್ನು ತೆರೆದರು. ಅನಾಥ ವಿಧವೆಯರ ಸುರಕ್ಷಿತ ಹೆರಿಗೆಗಾಗಿ ‘ಗುಪ್ತ ಪ್ರಸೂತಿ ಗೃಹ’ಗಳನ್ನು ಸ್ಥಾಪಿಸಿದರು. ಅನೇಕ ಅನಾಥಾಶ್ರಮಗಳೂ ಸ್ಥಾಪನೆಯಾದವು.

ಸ್ವಂತ ಮಕ್ಕಳನ್ನು ಹೊಂದದೆಯೇ ಈ ದಂಪತಿಗಳು ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಬೆಳೆಸಿದರು. ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರು ರೂಪಿಸಿದ ‘ಸತ್ಯಶೋಧಕ ಚಳವಳಿ’ ಸಾಮಾಜಿಕ ಪಿಡುಗುಗಳ ವಿರುದ್ಧದ ಒಂದು ಅಸ್ತ್ರವೇ ಆಗಿತ್ತು. ದೇಶದಲ್ಲೇ ಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಸಾವಿತ್ರಿಬಾಯಿಯವರ ನಾಯಕತ್ವದಲ್ಲಿ ಸ್ಥಾಪಿಸಿದ್ದೂ ಒಂದು ದಾಖಲೆ.

ಜ್ಯೋತಿಬಾ ಫುಲೆಯವರು 1890 ವರ್ಷದಲ್ಲಿ ನಿಧನರಾದ ನಂತರವೂ ಸಾವಿತ್ರಿಬಾಯಿ ಅವರು 1897 ವರ್ಷದ ತಮ್ಮ ಬದುಕಿನ ಕೊನೆಯಗಳಿಗೆಯವರೆಗೆ ತಮ್ಮ ಜನಪರ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.

ವ್ಯಾಪಕವಾಗಿ ಹರಡಿದ್ದ ಪ್ಲೇಗ್ ಕಾಯಿಲೆಗೆ ತುತ್ತಾದ ರೋಗಿಗಳ ಸೇವೆಯಲ್ಲಿ ಅವರು ನಿಸ್ವಾರ್ಥವಾಗಿ ತೊಡಗಿಕೊಂಡು, ನಿರ್ಗತಿಕರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು. ಕ್ಷಾಮದ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೇಹ ಮಾರಿಕೊಳ್ಳುವುದನ್ನು ತಪ್ಪಿಸಿ ಘನತೆಯಿಂದ ಬದುಕಲು ದಾರಿಗಳನ್ನು ಹುಡುಕಿಕೊಟ್ಟರು. ಕೊನೆಗೆ ಈ ತಾಯಿ ಸ್ವಯಂ ತಾವೇ ತೀವ್ರ ಪ್ಲೇಗ್ ಕಾಯಿಲೆಗೆ ತುತ್ತಾಗಿ ತಮ್ಮ 66ನೇ ವಯಸ್ಸಿನಲ್ಲಿ, 1897ವರ್ಷದ ಮಾರ್ಚ್ 10ರಂದು ಈ ಲೋಕಕ್ಕೆ ವಿದಾಯ ಹೇಳಿದರು.

(ಕೃಪೆ: ತಿರು ಶ್ರೀಧರ ಅವರ ಸಂಸ್ಕøತಿ ಸಲ್ಲಾಪ – www.sallapa.com)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *