ದಾಹ ತೀರಿಸೋ ತತ್ರಾಣಿ – – ಕಿರಸೂರ ಗಿರಿಯಪ್ಪ
ಕುರಿ ಹಿಂಡಿನ ಹೆಜ್ಯಾಗ
ದನಗಳ ತಿರುಗಾಟದ ಗತ್ತಿನ್ಯಾಗ
ಬಿಸಿಲ ಬಲೆಯು ನೆತ್ತಿ ಹೊಕ್ಹಾದೋ
ಗಂಟಲು ಒಣಗಿ
ಚುರು ಚುರು ಪಾದ ನಲುಗ್ಯಾದೋ
ಬತ್ತಿದ ತುಟಿಗಳ
ಬೆನ್ನ ಕಾಯಲು ಹೆಗಲಲಿ
ಬೆವರ ಕಾಯೋ ಕಣ್ಣಾಗಿ
ತತ್ರಾಣಿಯ ಹೆಜ್ಜೆ ಮೂಡ್ಯಾವೋ
ನೆಲದ ನಗೆ ಚಿತ್ರಿಸುವ
ಅವಳುಡಿಯ ಚಿತ್ತದಲಿ
ಮಣ್ಣ ಮಗುವಾಗಿ
ಶ್ರಮದ ತೆಕ್ಕೆಗೆ
ಅನವರಿತ ದಾಹ ತೀರಿಸೊ
ತತ್ರಾಣಿಯ ಜೋಗುಳ ನುಡಿದಾದೊ
ಒಣಗುವ ಮರದ ತೆಕ್ಕೆಗೂ
ನಿಲುಕುವ ತತ್ರಾಣಿಯ ಕರುಣೆಯೊಳಗ
ಕರುಳ ಬೆಸೆವ
ಸೂಪ್ತ ಗುಟ್ಟುಗಳು
ಆಧುನಿಕ ಮಾರಿಗೂ ಕೈಗೆಟುಕದ
ತತ್ರಾಣಿಯ ನಾಡಿಯೊಳಗೆ
ಅವಳ ನಿಟ್ಟುಸಿರಿನ ದಿಂಬಾಗಿ
ಅಲೆಮಾರಿಯ ಕಸುವೊಳಗೆ
ಬೋಳ ಬುಡದ ನೆತ್ತಿಗೂ
ಚಿಗುರಿನ ತೆನೆ ಮೂಡಿಸ್ಯಾದೊ
ಈ ತತ್ರಾಣಿಯ ಮೈಯೊಳಗೆ
ಅವಳ ಕುಸುರಿ ಕಲೆಗಳ ಸಾಕ್ಷ್ಯಗಳಿವೆ
ಮಣ್ಣ ಉಂಡೆ ಮಾಡಿ
ತಿದ್ದಿ ತೀಡಿದ ಕೈಬೆರಳುಗಳ ಸ್ಪರ್ಶಗಳಿವೆ
ಒಮ್ಮೊಮ್ಮೆ ತತ್ರಾಣಿ
ಕಾಲದ ಉಸಿರಾಗಿ ಗೋಚರಿಸಿದ್ದು
ಈಗಲೂ ನಿಬ್ಬೆರಗು!
– ಕಿರಸೂರ ಗಿರಿಯಪ್ಪ
ಬಾಗಲಕೋಟ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.