ದಾಖಲಿಸಲಾಗದು! – ಆಶಾ ನಾಗರಾಜ್‌

ಮುಳುಗುವ ಸೂರ್ಯ ದಿಗಿಲು ತಂದಿಟ್ಟ
ಉರಿಯುವ ಸೂರ್ಯ ನೋವು ತಂದಿಟ್ಟ
ಆ ಕೋಲುಗಳು, ಅವಳ ಮೈಯ ಯಾವ ಅಂಗವನ್ನು ತಾಕಿಲ್ಲ?
ಅದು, ಆ ಕೋಮಲ ಹೃದಯವನ್ನೂ ಬಿಟ್ಟಿಲ್ಲ!

ಎಷ್ಟೇ ಬಿಗಿ ಹಿಡಿದರೂ, ಹಿಡಿತ ತಪ್ಪಿ ಮೈ ನಡುಗುತ್ತಿತ್ತು
ಆತ ಬೇಟೆಗಾರನ ವೇಷ ತೊಟ್ಟು ಬಂದಿದ್ದ!
ಅಂಗವೇನೋ ಅವಳದೇ ನಿಜ,
ಆದರೆ… ಅದರ ಹಕ್ಕೆಲ್ಲಾ ಅವನದೇ

ಇದನ್ನೆ ಕರೆಯುವರೆ ಜೀವನದ ಮೂಲ ಹಕ್ಕೆಂದು?
ಹುಟ್ಟಿನಿಂದ ಬರುವುದಲ್ಲವೆ ಅದು?

ಅಮ್ಮಾ ಎಂದರು ಮಕ್ಕಳೆಲ್ಲಾ ಆಕೆಯನ್ನು
ಕೈತುತ್ತಲ್ಲೇ ಕೊಟ್ಟಳು ಮಕ್ಕಳಿಗೆಲ್ಲಾ ಮದ್ದನ್ನು
ಮದ್ದಿನ ಅಮಲು ಆ ಕ್ಷಣದ ನೋವನ್ನು ಮರೆಸಿತ್ತು
ನಂತರದ ಬೇನೆ, ಆ ವೇದನೆ ನೆನೆಯಲಾರದಾಗಿತ್ತು

ಅವಳನ್ನು ಹೇಗೆ ಅನುಭವಿಸಿದ ಅವನು?
ಸಹಕರಿಸದಿರೆ ಉಪವಾಸ ಕೆಡವುವನು
ಹಸಿವ ತಾಳದೆ ಕೈ ಮುಗಿಯಿತು ಎಳೇಜೀವ
ಮುಗಿದಿರುವ ಕೈಯನ್ನು ಹೊಲಸು ಮಾಡಿದನವ

ನೆರೆಹೊರೆಯವರ ಮೌನ ವಿಚಿತ್ರ
ಮಾಧ್ಯಮಗಳ ಸುದ್ದಿ ‘ಘೋರ’ ಭೀಕರ
ಏನೆಂದು “ದಾಖಲಿಸುವಳು” ಆ ವ್ಯಥೆಯ?
ಆ ಎಳೆಯ ಜೀವಕ್ಕಿನ್ನೂ ಹತ್ತರ ಹರೆಯ

ಆಶಾ ನಾಗರಾಜ್‌

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *