ದಲಿತ ಚಳುವಳಿಯ ಮಹಿಳಾ ಪ್ರಜ್ಞೆ ಬೇಬಿತಾಯಿ ಕಾಂಬ್ಳೆ – ಎಚ್.ಎಸ್. ಅನುಪಮಾ
೫೦-೬೦ರ ದಶಕದಲ್ಲಿ ದಲಿತ ಚಳುವಳಿಯ ಮಹಿಳಾ ಪ್ರಜ್ಞೆ ಎನಿಸಿಕೊಂಡ ಬೇಬಿತಾಯಿ ಕಾಂಬ್ಳೆ (೧೯೨೯-೨೦೧೨) ಅವರ ಬದುಕು, ವಿಚಾರಗಳ ಬಗೆಗೊಮ್ಮೆ ಅವಲೋಕಿಸುವುದು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಅತಿ ಮೌಲಿಕವಾದುದು.
ಮರಾಠಿ ಸಾಹಿತ್ಯ ಮತ್ತು ಚಳುವಳಿಯ ವಲಯಗಳಲ್ಲಿ ಬಹು ಪರಿಚಿತ ಮತ್ತು ಗೌರವಾನ್ವಿತ ವ್ಯಕ್ತಿಯಾದ ಬೇಬಿತಾಯಿ ಕಾಂಬ್ಳೆ ಜಾತಿ ತಾರತಮ್ಯದಂತೆಯೇ ಲಿಂಗ ತಾರತಮ್ಯವನ್ನು ಪ್ರಶ್ನಿಸಿದವರು.
ಜಾತಿ-ವರ್ಗ-ಲಿಂಗ ಮೂರೂ ನೆಲೆಗಳಿಂದ ಹತ್ತಿಕ್ಕಲ್ಪಟ್ಟವರು.. ಪ್ರಕೃತಿಗೆ ಹತ್ತಿರವಾಗಿದ್ದು ಬದುಕಿ ಮನುಷ್ಯ-ಪ್ರಕೃತಿ ನಡುವಣ ಸಮತೋಲನ ಕಾಯ್ದವರು.. ಶ್ರಮಕ್ಕೆ ತೆತ್ತುಕೊಂಡವರು.. ಎಲ್ಲ ಸೇವಾವಲಯಗಳನ್ನು ಪ್ರಧಾನವಾಗಿ ಆವರಿಸಿ ಪ್ರತಿ ಕುಟುಂಬ, ಸಮಾಜದ ಅಡಿಪಾಯವಾಗಿರುವವರು.. ಮನುಷ್ಯ-ಪ್ರಾಣಿಪಕ್ಷಿಗಳೆಲ್ಲವನ್ನು ಅಸೀಮ ಕ್ಷಮೆ ಮತ್ತು ತಾಯ್ತನದಿಂದ ಪೊರೆದ ಋಣಮುಕ್ತರು.. ದಾಸಿಯರ ದಾಸಿಯಂತೆ ಸಮಾಜ ತಮ್ಮನ್ನು ನಡೆಸಿಕೊಂಡರೂ ಅಖಂಡ ಜೀವನೋತ್ಸಾಹ ಮತ್ತು ಧೈರ್ಯವನ್ನು ಮೈಗೂಡಿಸಿಕೊಂಡವರು.. ಎಲ್ಲ ಮಾನವ ಸಹಜ ದೌರ್ಬಲ್ಯ-ದಮನಗಳನ್ನು ನೇರಾನೇರ ಇದಿರುಗೊಂಡವರು.. ಆ ಕಾರಣವಾಗಿಯೇ ಉಳಿದೆಲ್ಲ ಹೆಣ್ಮನಗಳಿಗಿಂತ ವಸ್ತುನಿಷ್ಠವಾಗಿ, ವಿಮರ್ಶಾತ್ಮಕವಾಗಿ ಯೋಚಿಸಬಲ್ಲವರು..
ಇವರು ಭಾರತದ ದಲಿತ ಮಹಿಳೆಯರು. ಇವತ್ತಿಗೂ ಭಾರತೀಯ ಸಮಾಜದ ಸಾಕ್ಷಿಪ್ರಜ್ಞೆಗಳಂತೆ, ನೈತಿಕ ಅಳತೆಗೋಲಿನಂತೆ ಪರಿಗಣಿಸಬಹುದಾದ ಗುಂಪು ದಲಿತ ಮಹಿಳೆಯರದು. ಭಾರತದ ದಲಿತೇತರ ಹೆಣ್ಣುಮಕ್ಕಳು ಏಕಕಾಲಕ್ಕೆ ದಮನಿತಳು-ದಮನಿಸುವವಳು; ಅವಕಾಶ ಪಡೆದವಳು-ಅವಕಾಶ ವಂಚಿತಳು ಆಗಿದ್ದರೆ; ದಲಿತ ಮಹಿಳೆಯರು ಎಲ್ಲ ನೆಲೆಗಳಿಂದ ವಂಚಿತರೇ ಆಗಿದ್ದಾರೆ.
ಮಹಿಳಾ ಪ್ರಜ್ಞೆ ಎಲ್ಲ ಮಹಿಳೆಯರ ಸಮಾನತೆ-ಸ್ವಾತಂತ್ರ್ಯ-ಸ್ವಾಯತ್ತತೆಯನ್ನು ಪ್ರತಿಪಾದಿಸುತ್ತದೆ. ಎಲ್ಲ ವರ್ಗ-ಜಾತಿ-ಹಿನ್ನೆಲೆ-ಉದ್ಯೋಗದ ಮಹಿಳೆಯರ ಕುರಿತೂ ಮಾತನಾಡುತ್ತದೆ. ಅದುವೇ ಸಬಲೀಕರಣ. ಯಾವುದಾದರೂ ಒಂದು ಗುಂಪು, ವರ್ಗ, ಜಾತಿ, ಉದ್ಯೋಗದ ಮಹಿಳೆಯರಷ್ಟೇ ಸಬಲಗೊಳ್ಳಲು ಸಾಧ್ಯವಿಲ್ಲ. ಮಹಿಳಾ ಸಬಲೀಕರಣ ಒಟ್ಟೊಟ್ಟಿಗೇ ಆಗಬೇಕಾದ ಪ್ರಕ್ರಿಯೆ. ಎಂದರೆ ಪ್ರತಿಯೊಬ್ಬರ ಹಕ್ಕಿಗಾಗಿ ಎಲ್ಲರೂ ಹೋರಾಡಬೇಕು. ಈ ಸಾಮೂಹಿಕ ಪ್ರಜ್ಞೆ ಮಹಿಳಾ ಚಳುವಳಿಗೆ ಅತಿ ಅವಶ್ಯವಾಗಿದೆ. ಸಮಾಜದ ತಳಸ್ತರದ ಮಹಿಳೆಯರ ಪ್ರಜ್ಞೆ ಪ್ರಧಾನವಾಗಿ ಸಮೂಹ ಪ್ರಜ್ಞೆಯೇ ಆಗಿರುವುದರಿಂದ ಅವರ ತಿಳುವಳಿಕೆ ಮಹಿಳಾ ಚಳುವಳಿಯ ತಳಪಾಯವಾಗಬೇಕಿದೆ. ಭಾರತದ ಮಹಿಳಾ ಚಳುವಳಿ ಅಂಬೇಡ್ಕರರ ವಿಚಾರಧಾರೆಯಿಂದ ತನ್ನರಿವನ್ನು ವಿಸ್ತರಿಸಿಕೊಂಡಿದ್ದರೆ, ದಲಿತ ಮಹಿಳೆಯರ ಅರಿವು ಭಾರತದ ಮಹಿಳಾ ಚಳುವಳಿಯ ಮಾರ್ಗದರ್ಶಿ ಪ್ರಜ್ಞೆ ಆಗಬೇಕಾದ ಅನಿವಾರ್ಯತೆಯಿದೆ. ೫೦-೬೦ರ ದಶಕದಲ್ಲಿ ದಲಿತ ಚಳುವಳಿಯ ಮಹಿಳಾ ಪ್ರಜ್ಞೆ ಎನಿಸಿಕೊಂಡ ಬೇಬಿತಾಯಿ ಕಾಂಬ್ಳೆ (೧೯೨೯-೨೦೧೨) ಇಂತಹ ಪ್ರತಿಭೆಗಳಲ್ಲಿ ಒಂದು.
ಬೇಬಿತಾಯಿ ಕಾಂಬ್ಳೆಯವರ ತಂದೆ ಫಂಡರಿನಾಥ ಕಾಕಡೆ ಮುಂಬಯಿಯ ಮುಂಬಾದೇವಿ ದೇವಾಲಯ ಮತ್ತು ಪುಣೆಯ ಹಾಲಿನ ಡೈರಿಗೆ ಕೂಲಿಗಳನ್ನು ಒದಗಿಸುವ ಸೇರೆಗಾರರಾಗಿದ್ದರು. ಅವರ ತವರಿನ ಅಜ್ಜಂದಿರು, ಮಾವಂದಿರು ಬ್ರಿಟಿಷರ ಬಳಿ
ಬಟ್ಲರುಗಳಾಗಿದ್ದರು. ತನ್ನ ಮನೆಯ ಹಿರಿಯರಿಂದಲೇ ಅಂಬೇಡ್ಕರರ ವಿಚಾರಗಳ ಬಗೆಗೆ ತಿಳಿದಿದ್ದ ಬೇಬಿ, ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು. ಬೇಬಿಗಿಂತ ಮುನ್ನ ಅವರ ತಾಯಿಗೆ ಮೂರು ಹೆಂಗೂಸುಗಳು ಹುಟ್ಟಿ ತೀರಿಕೊಂಡಿದ್ದವು. ಎಳೆಗೂಸು ಬೇಬಿ ಸಹ ಹುಟ್ಟಿದ ಕೂಡಲೇ ಅಳದೆ ನಿಶ್ಚೇಷ್ಟಿತವಾಗುಳಿಯಿತೆಂದು ‘ಶವ’ ಹೂಳುವ ತಯಾರಿ ನಡೆದಿತ್ತು. ಆದರೆ ಅವರ ಅವ್ವ ಬೆಳಗಾಗುವ ತನಕ ಯಾರೂ ಕೂಸನ್ನು ಮುಟ್ಟಲು ಬಿಡಲಿಲ್ಲ, ತೊಡೆ ಮೇಲಿಂದ ತೆಗೆಯಲೂ ಇಲ್ಲ. ಏನಾಶ್ಚರ್ಯ, ಅವ್ವನ ಬೆಚ್ಚನೆ ಮಡಿಲಿನಲ್ಲಿ ರಾತ್ರಿಯಿಡೀ ಇದ್ದ ಮಗು ಬೆಳಗಾಗುವ ಹೊತ್ತಿಗೆ ಮೆಲ್ಲನೆ ಉಸಿರಾಡತೊಡಗಿ ಅಳುವ ಸದ್ದು ಕೇಳಿತು. (ಹೀಗೆ ಎಷ್ಟು ಹೆಣ್ಣುಶಿಶುಗಳು ಜೀವಂತ ಗುಂಡಿಯೊಳಗೆ ಹೋಗಿವೆಯೋ ಎಂದು ನಂತರ ಬೇಬಿತಾಯಿ ನೆನೆಸಿಕೊಂಡಿದ್ದಾರೆ.)
ಸಾಕಷ್ಟು ಅನುಕೂಲಸ್ಥರಾಗಿದ್ದ ವೀರಗಾಂವಿನ ಅಜ್ಜನ ಮನೆಯಲ್ಲಿ ಬಾಲ್ಯ ಕಳೆದ ಬೇಬಿ ಒಂಭತ್ತನೇ ವರ್ಷದಲ್ಲಿ ತನ್ನೂರಿಗೆ ಬಂದು ಬ್ರಿಟಿಷರು ನಡೆಸುತ್ತಿದ್ದ ಬಾಲಕಿಯರ ಶಾಲೆಗೆ ಹೋಗಲು ಶುರು ಮಾಡಿದರು. ಅದು ಅಂಬೇಡ್ಕರರ ಹೋರಾಟ ಮತ್ತು ಚಳುವಳಿ
ದೇಶಾದ್ಯಂತ ಬಲಗೊಂಡಿದ್ದ ಕಾಲ. ಅವರದು ಬ್ರಾಹ್ಮಣರೇ ಹೆಚ್ಚು ಸಂಖ್ಯೆಯಲ್ಲಿದ್ದ ಶಾಲೆಯಾಗಿತ್ತು. ದಲಿತ ವಿದ್ಯಾರ್ಥಿಗಳನ್ನು ಕರಿಹಲಗೆ ಮತ್ತು ಮಾಸ್ತರು ಎರಡೂ ಕಾಣದ ದೂರದ ಮೂಲೆಯಲ್ಲಿ ಕೂರಿಸಲಾಗುತ್ತಿತ್ತು. ಶಾಲೆಗೆ ಹೋಗಿಯೂ ಹೋಗದಂತಹ
ಅನುಭವ. ಹೀಗೆ ಅಸ್ಪೃಶ್ಯತೆಯ ಎಲ್ಲ ಸಂಕಟಗಳನ್ನೂ ಅನುಭವಿಸುತ್ತ ಬೇಬಿತಾಯಿ ಸೂಕ್ಷ್ಮವಾಗಿ ಎಲ್ಲವನ್ನೂ ಗ್ರಹಿಸಿ ನೆನಪಿನ ಕೋಶಗಳಲ್ಲಿ ಭದ್ರವಾಗಿಟ್ಟುಕೊಂಡರು.
೧೯೩೦ರಲ್ಲಿ ವೀರಗಾಂವಿಗೆ ಬಂದು ಮಾತನಾಡಿದ ಅಂಬೇಡ್ಕರರ ವ್ಯಕ್ತಿತ್ವ ಅವರ ಮೇಲೆ ಗಾಢ ಪ್ರಭಾವ ಬೀರಿತು. ನಾಲ್ಕನೇ ತರಗತಿ ಪಾಸಾದ ೧೩ ವರ್ಷದ ಬೇಬಿಗೆ ಕೋಂಡಿಬಾ ಕಾಂಬ್ಳೆ ಎಂಬ ವರನ ಜೊತೆ ಮದುವೆಯಾಯಿತು. ಬೇಬಿ ಮತ್ತವರ ಪತಿ ವ್ಯಾಪಾರ ಶುರುಮಾಡಿದರು. ಅಂಗಡಿಯಲ್ಲಿ ಕೂತ ಬೇಬಿತಾಯಿ ಸಾಮಾನು ಕಟ್ಟಲು ತರುತ್ತಿದ್ದ ಹಳೆಯ ಪತ್ರಿಕೆಗಳನ್ನು, ಪುಸ್ತಕಗಳನ್ನು ಓದತೊಡಗಿದರು. ಗ್ರಂಥಾಲಯದ ಸದಸ್ಯೆಯಾಗಿ ಅಲ್ಲಿನ ಪುಸ್ತಕಗಳನ್ನೂ ತಂದು ಓದತೊಡಗಿದರು. ತನ್ನ ಬದುಕಿನ ಅನುಭವಗಳನ್ನು ಬರೆದಿಡತೊಡಗಿದರು. ತನ್ನ ಕುರಿತಾಗಿ ಮಾತ್ರ ಬರೆಯದೇ, ಜಾತಿ ಮತ್ತು ಗಂಡುದರ್ಪದಿಂದ ಬವಣೆ ಅನುಭವಿಸುವ ಎಲ್ಲ ದಲಿತ ಮಹಿಳೆಯರ ಬಗೆಗೆ ಬರೆದರು. ಆದರೆ ೨೦ ವರ್ಷ ಕಾಲ ತನ್ನ ಗಂಡನಿಂದ ಮತ್ತು ಬಂಧುಗಳಿಂದ ಬರೆದಿದ್ದನ್ನು ಮುಚ್ಚಿಟ್ಟರು. ನಂತರ ಅದು ಆತ್ಮಕತೆಯಾಗಿ ‘ಜೀನಾ ಅಮುಚ್ಯಾ’ ಹೆಸರಿನಲ್ಲಿ ಪ್ರಕಟವಾಯಿತು.
ಅದು ಬರೀ ಅವರೊಬ್ಬರ ಬದುಕಿನ ಕತೆಯಲ್ಲ. ಅವರಂತಹ ಹಲವು ಬದುಕುಗಳ ಜೀವನಗಾಥೆ. ಮದುವೆ, ಬಾಲ್ಯವಿವಾಹ, ಹೆಣ್ಣಿನ ದಮನ, ಮೂಢನಂಬಿಕೆಗಳನ್ನು ಹೆಣ್ಣು ಕಣ್ಣೋಟದಿಂದ ಅದರಲ್ಲಿ ಕಾಣಿಸಿದ್ದಾರೆ. ಅದು ಹಲವು ಭಾಷೆಗಳಿಗೆ ಅನುವಾದಗೊಂಡಿದೆ.
ಮಹಾರಾಷ್ಟ್ರದ ದಲಿತ ಚಳುವಳಿಯ ಭಾಗವಾಗಿದ್ದ ಬೇಬಿತಾಯಿ ಫಲ್ಟಣದಲ್ಲಿ ಮಹಿಳಾ ಮಂಡಲ ಶುರು ಮಾಡಿದರು. ನಿಂಬೂರೆಯಲ್ಲಿ ಹಿಂದುಳಿದ ವರ್ಗದ ಬಾಲಕಿಯರಿಗಾಗಿ ವಸತಿ ಶಾಲೆ ಶುರು ಮಾಡಿದರು.
ಎಚ್. ಎಸ್. ಅನುಪಮಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.