ತಾಳೆಯಾಗದ ಲೆಕ್ಕ- -ಆಶಾ ನಾಗರಾಜ್

 

ಅವನ, ಅವಳ ಲೆಕ್ಕ ಬೇರೆ ಏನಲ್ಲ
ಗಣಿತದ ಪಾಠವೋ ಎಂಬ ಉದ್ಗಾರ ಬೇಕಿಲ್ಲ!
ನವಮಾಸಗಳೇ ಎರಡೂ ಲಿಂಗಕ್ಕು ಬೇರೆ ಏನಿಲ್ಲ
ರುಜುವಾತು ಮಾಡಲು ವಿಜ್ಞಾನ ಇದೆಯಲ್ಲ!
ಆದರೂ ಏಕೆ ಲೆಕ್ಕಗಳು ತಾಳೆಯಾಗುತ್ತಿಲ್ಲ?

ಗರ್ಭ ಛೇದಿಸಿ ಹೊರಬಂದ ಯೋನಿಜರೇ ಇಬ್ಬರು
ನೆತ್ತರದ ಮೈಲಿಗೆಯಲ್ಲಿ ಮಿಂದು ಬಂದವರೇನೇ
ಮೊದಲು ತೊದಲು ತಪ್ಪಾಗಿ,ನಂತರ ತಿದ್ದಿಕೊಂಡವರೇನೇ
ಅವನ ನುಡಿ ಮುತ್ತುಗಳಿಗೆ ಎಲ್ಲರದೂ ಲಕ್ಷ್ಯ
ಅವಳ ತೊದಲು ನುಡಿಗಳಿಗೇಕೆ ಈ ಅಲಕ್ಷ್ಷ?
ಅವಳ ಪಾಲಿಗೂ ಬರುವುದೇ ಹರ್ಷ?
ಮುಂದೊಂದು ವರ್ಷ?
ಇಲ್ಲಿಯೂ ಲೆಕ್ಕಗಳು ತಾಳೆಯಾಗುತ್ತಿಲ್ಲ!

ಹೆಂಗೋ ಬದುಕುಳಿಯಿತು ಜೀವ ಭೂಮಿಯ ಮೇಲೆ
ಕುತ್ತಿಗೆಯ ಯಾರೂ ಹಿಂಡುತ್ತಿರಲಿಲ್ಲ
ಆದರೂ ಉಸಿರಾಟ ಸಲೀಸಾಗಿರಲಿಲ್ಲ
ಅವನದು ಜೀವಕ್ಕೆ ಪೂರಕ
ಅವಳದು ಅಭ್ಯಾಸ ಕಾರಕ.
ಉಸಿರಿನ ಲೆಕ್ಕಗಳು ತಾಳೆಯಾಗುತ್ತಿಲ್ಲ

ಬದುಕ ಬಂಡಿಯ ಎಳೆವ ಎತ್ತುಗಳೆರಡಂತೆ
ದೊಡ್ಡ ಎತ್ತನ್ನೇನೋ ಪಳಗಿಸಿ ಬಿಟ್ಟಿರುವರು
ಮೂಗೆತ್ತನ್ನೆಕೋ ಪದೇ ಪದೇ ಪರೀಕ್ಷಿಸುವರು
ಎರಡು ಸಮನಾಗೆ ನಡೆದವು ನೊಗದ ಜೊತೆಯಲ್ಲಿ
ಘಾಸಿ ಎಂದು ಮೂಗೆತ್ತು ಎಂದೂ ಉಸುರಲಿಲ್ಲ!
ವಾಸಿ ಮಾಡಲು ನಾವೆಂದು ಪ್ರಯತ್ನಿಸಲಿಲ್ಲ!
ಎತ್ತುಗಳ ಲೆಕ್ಕಗಳು ತಾಳೆಯಾಗುತ್ತಿಲ್ಲ!

-ಆಶಾ ನಾಗರಾಜ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ತಾಳೆಯಾಗದ ಲೆಕ್ಕ- -ಆಶಾ ನಾಗರಾಜ್

 • May 16, 2019 at 4:34 pm
  Permalink

  ಸರಳವಾದ ಭಾಷೆ, ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಪದ ಬಳಕೆ,ವಿಶೇಷವಾಗಿ ಮೂಡಿಬಂದಿದೆ.
  ಇನ್ನಷ್ಟು ನಿಮ್ಮ ಬರವಣಿಗೆ ಯನ್ನು ನಿರೀಕ್ಷಿಸುತ್ತೇವೆ.
  ಧನ್ಯವಾದಗಳು.

  Reply

Leave a Reply

Your email address will not be published. Required fields are marked *